ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಸೆಪ್ಟೆಂಬರ್ 2, 2017

ಮದ ಮತ್ತು ಮೇಲರಿಮೆ


     ಅಪರಿಚಿತರಾದರೂ ಕೆಲವು ವ್ಯಕ್ತಿಗಳನ್ನು ಕಂಡಾಗ ಸ್ನೇಹ ಭಾವನೆ ಮೂಡುತ್ತದೆ, ಇನ್ನು ಕೆಲವರನ್ನು ಕಂಡಾಗ ಅವರು ನಮಗೆ ಏನೂ ಮಾಡಿರದಿದ್ದರೂ ಅವರ ಬಗ್ಗೆ ಸದಭಿಪ್ರಾಯ ಬರುವುದಿಲ್ಲ. ಇದಕ್ಕೆ ಕಾರಣ ಅವರ ಬಾಡಿ ಲಾಂಗ್ವೇಜ್ ಅರ್ಥಾತ್ ಅವರ ನಡವಳಿಕೆಯ ಹೊರರೂಪ! ಮುಖವು ಮನಸ್ಸಿನ ಕನ್ನಡಿ ಎನ್ನುತ್ತಾರಲ್ಲಾ, ಹಾಗೆ ಅವರ ಮುಖಭಾವದಲ್ಲಿ ಅವರ ವ್ಯಕ್ತಿತ್ವ ಹೊರಸೂಸಿ ನಮ್ಮಲ್ಲಿ ಆ ಭಾವ ಬರುವಂತೆ ಮಾಡಬಹುದು. ಮದ ಸೊಕ್ಕಿ ಮೆರೆಯುವವರು, ದರ್ಪಿಷ್ಟರು ಸಹಜವಾಗಿ ಇತರರಿಗೆ ಸಹನೀಯವೆನಿಸಲಾರರು. ಸಾಮಾನ್ಯವಾಗಿ ಗಮನಕ್ಕೆ ಬರುವ ಈ ಉದಾಹರಣೆಯನ್ನು ನೋಡೋಣ. ಬಸ್ಸಿನಲ್ಲಿ, ರೈಲಿನಲ್ಲಿ ಅಕ್ಕಪಕ್ಕ ಕುಳಿತವರಲ್ಲಿ ಯಾರಾದರೊಬ್ಬರ ಕಾಲು ಇನ್ನೊಬ್ಬರಿಗೆ ಸೋಕಿದಾಗ ತಕ್ಷಣ ಕಾಲನ್ನು ಹಿಂದಕ್ಕೆಳೆದುಕೊಂಡು ಅವರನ್ನು ಕಣ್ಣಿಗೆ ಒತ್ತಿಕೊಂಡು ಸಾರಿ ಅಥವ ಕ್ಷಮಿಸಿ ಎನ್ನುತ್ತೇವೆ. ಇನ್ನು ಕೆಲವರು ಇರುತ್ತಾರೆ. ಅವರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾರೆ. ಅವರ ಕಾಲು ಇನ್ನೇನು ಪಕ್ಕದವರ ಅಥವ ಮುಂದೆ ಕುಳಿತಿರುವವರನ್ನು ಸೋಕುವಂತಿರುತ್ತದೆ. ಕಾಲು ಸೋಕಬಾರದೆಂದು ಪಕ್ಕದವರೇ ಮುಜುಗರ ಪಟ್ಟುಕೊಂಡು ಸರಿಸಿ ಕುಳಿತಿರುತ್ತಾರೆ. ಅದರ ಅರಿವಿದ್ದೂ ಅರಿವಿಲ್ಲದಂತೆ ಪಾದ ಕುಣಿಸುವವರನ್ನು ಏನೆನ್ನಬೇಕು? ಅಕಸ್ಮಾತ್ ಕಾಲು ತಗುಲಿದರೂ ತಗುಲಿಸಿದವರು ಯಾವ ಭಾವವನ್ನೂ ವ್ಯಕ್ತಪಡಿಸದಿದ್ದರೆ? ಅವರ ಕಾಲನ್ನು ಕುಣಿಸುತ್ತಿರುವುದು ಅವರಲ್ಲ, ಅವರಲ್ಲಿರುವ ಮದ! ಅರಿಷಡ್ವರ್ಗಗಳಲ್ಲಿ ಒಂದಾದ ಈ ಮದ ಮದೋನ್ಮತ್ತರನ್ನು ಅವನತಿಯೆಡೆಗೆ ಜಾರಿಸುತ್ತಿರುತ್ತದೆ. ಇದು ಅರಿವಿಗೆ ಬರುವ ವೇಳೆಗೆ ಕಾಲ ಮಿಂಚಿರುತ್ತದೆ.
     ಮದಕ್ಕೆ ನಾನಾ ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ, ಇತ್ಯಾದಿ. ಮನೆಯಲ್ಲಿ, ಸುತ್ತಮುತ್ತಲಿನಲ್ಲಿ ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮನೆಗೆ ಯಾವುದೋ ಕಾರ್ಯಾರ್ಥವಾಗಿ ಹಿರಿಯರು ಅಥವ ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸುವ ಸೌಜನ್ಯ ಇಲ್ಲದಿದ್ದಾಗ ಬಂದವರಿಗೆ ಅಲ್ಲಿಗೆ ಏಕಾದರೂ ಹೋದೆವೋ ಅನ್ನಿಸದಿರದು. ಹಿರಿಯರು ಇದ್ದಾಗ ಕಿರಿಯರು ಅವರ ಎದುರಿಗೆ ಕಾಲು ಚಾಚಿ ಕೂಡುವುದು, ಅವರನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತೆ ಅವರಿಗೆ ಘಾಸಿಯಾಗುವಂತೆ ಮಾತನಾಡುವುದು, ಇತ್ಯಾದಿಗಳೂ ಮದದ ಕಾಯಿಲೆಯಿಂದ ನರಳುತ್ತಿರುವರು ಮಾಡುವ ಕೆಲಸವೇ. ಮದವೇರಿದವರು ಏರ್ಪಡಿಸುವ ಕಾರ್ಯಕ್ರಮಗಳಿಗೆ ಆಹ್ವಾನಿತರು ಹೋಗದಿದ್ದರೆ ಆಕ್ಷೇಪಣೆ ಮಾಡುತ್ತಾರೆ, ಹೋದರೆ ಅವರನ್ನು ಸರಿಯಾಗಿ ಮಾತನಾಡಿಸದೆ ನಿರ್ಲಕ್ಷಿಸುತ್ತಾರೆ. ಇಂತಹವರಿಂದ ದೂರವಿರುವುದೇ ಕ್ಷೇಮ.
ಕಣ್ಣೆತ್ತಿ ನೋಡರು ಪರರ ನುಡಿಗಳಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು |
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ ||
     ಮದಸೊಕ್ಕಿ ಮೆರೆದವರು ಒಮ್ಮೆ ತಮ್ಮ ಮದಕ್ಕೆ ಕಾರಣವಾದ ಸಂಗತಿಯಿಂದ ವಂಚಿತರಾದರೆ ಅವರ ಸ್ಥಿತಿ ಅಧೋಗತಿ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತಹ ಸ್ಥಿತಿ ಅವರದಾಗುತ್ತದೆ. ಕೆಲವು ಬರಹಗಾರರಲ್ಲೂ ಈ ಮದ ತಾವೇ ತಿಳಿದವರು, ಇತರರಿಗಿಂತ ಮೇಲಿನವರು, ತಮ್ಮ ಮಾತನ್ನು ಇತರ ಎಲ್ಲರೂ ಗೌರವಿಸಬೇಕು ಎಂದು ಅಪೇಕ್ಷಿಸುವಂತೆ ಮಾಡುತ್ತದೆ. ತುಂಬಿದ ಕೊಡ ತುಳುಕದು ಎಂಬಂತಿರುವ ಸಾಹಿತಿಗಳು ಎಲ್ಲರ ಗೌರವಕ್ಕೆ ಭಾಜನರಾಗುತ್ತಾರೆ. ವಿಪರ್ಯಾಸವೆಂದರೆ ಉತ್ತಮ ಸಾಹಿತ್ಯಕ್ಕಾಗಿ ಕೊಡಮಾಡುವ ಪ್ರಶಸ್ತಿಗಳು ಇತ್ತೀಚೆಗೆ ಲಾಬಿ ಮಾಡುವವರಿಗೆ ಲಭಿಸುವಂತಾಗಿ ಪ್ರಶಸ್ತಿಯ ಮೌಲ್ಯವೇ ನಶಿಸುತ್ತಿದೆಯೇನೋ ಎಂದು ಅನ್ನಿಸುತ್ತದೆ. ಸಾಹಿತಿಯ ರಾಜಕೀಯ ಒಲವು, ನಿಲುವುಗಳನ್ನು ಅವಲಂಬಿಸಿ ಸಹ ಪ್ರಶಸ್ತಿ ನಿರ್ಧರಿಸಲಾಗುತ್ತಿದೆ ಎಂಬ ಭಾವನೆ ಜನರಲ್ಲಿದೆ. ಇರಲಿ ಬಿಡಿ, ಒಟ್ಟಿನಲ್ಲಿ ಹೇಳಬೇಕೆಂದರೆ ಮದದಿಂದ ಸೊಕ್ಕಿ ನಡೆಯುವವರು ಮೇಲರಿಮೆಯಿಂದ ನರಳುತ್ತಿರುತ್ತಾರೆ. ಪ್ರತಿಭೆ ಅನ್ನುವುದು ದೇವರ ಕೊಡುಗೆ. ಗೌರವ ಜನರು ಕೊಡುವುದು. ಗೌರವಿಸಿದರೆ  ಜನರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ಮದಭರಿತರು ತಮಗೆ ತಾವೇ ಕೊಟ್ಟುಕೊಳ್ಳುವುದು!  ಮದ ಮನುಷ್ಯನನ್ನು ಹಾಳು ಮಾಡುತ್ತದೆ. ಸೌಜನ್ಯದ ನಡವಳಿಕೆಗಳು ಗೌರವ ತರುತ್ತವೆ.
     ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯ ರಾತ್ರಿಯಲ್ಲಿ ಕೊಡೆ ಹಿಡಿದರಂತೆ ಎಂಬಂತೆ ಮದ ತಾವೇ ಇಂದ್ರ, ಚಂದ್ರ, ದೇವೇಂದ್ರ ಎಂಬಂತೆ ಮನುಷ್ಯರಲ್ಲಿ ಭ್ರಮೆ ಮೂಡಿಸುತ್ತದೆ. ಅಧಿಕಾರದ ಮದ ಮತ್ತು ಹಣದ ಮದ ಒಟ್ಟಿಗೆ ಸೇರಿಬಿಟ್ಟರೆ ಮುಗಿದೇಹೋಯಿತು. ಅಧಿಕಾರದ ಮದವೇರಿದ ರಾಜಕಾರಣಿಗಳ ವರ್ತನೆಯನ್ನು ನಾವು ನೋಡುತ್ತಲೇ ಇರುತ್ತೇವೆ. ತಾವು ಹೇಳಿದಂತೆಯೇ ಆಗಬೇಕು, ತಮ್ಮ ಮಾತನ್ನು ಎಲ್ಲರೂ ಕೇಳಬೇಕು ಎಂಬಂತಹ ಅವರ ವರ್ತನೆ, ಬಹುಜನರ ಅಭಿಪ್ರಾಯಕ್ಕೆ ಬೆಲೆ ಕೊಡದ ಅವರ ದರ್ಪ, ಇತ್ಯಾದಿಗಳು ಜನಸಾಮಾನ್ಯರಲ್ಲಿ ಆಡಳಿತದ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ.
     ಮದದ ಇನ್ನೊಂದು ರೂಪವಾದ ಜಂಭದಲ್ಲಿ ಎರಡು ವಿಧ ಇರುತ್ತದೆ- ಕೆಟ್ಟದ್ದು ಮತ್ತು ಒಳ್ಳೆಯದು. ಒಳ್ಳೆಯ ಜಂಭ ನಮ್ಮ ಗೌರವ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯುವಂತಹದು. ಕೆಟ್ಟ ಜಂಭವೆಂದರೆ ಮೇಲರಿಮೆಯಿಂದ ಒಡಮೂಡುವ ಅಹಂಕಾರ, ಒಣ ಪ್ರತಿಷ್ಠೆಗಳು ಮತ್ತು ಇತರರ ಕುರಿತ ಅಸಹನೆ - ಇದೇ ಮದ. ತಮ್ಮನ್ನು ಬಿಟ್ಟರಿಲ್ಲ ಎಂಬಂತೆ ಆಡುತ್ತಿದ್ದ ಚಕ್ರವರ್ತಿಗಳು, ಸಾಮ್ರಾಟರು, ಬಾದಶಹರು, ರಾಜ-ಮಹಾರಾಜರು ಇಂದು ಎಲ್ಲಿದ್ದಾರೆ? ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಅವರಲ್ಲಿ ಎಷ್ಟೋ ಜನರ ನೆನಪೂ ನಮಗಿಲ್ಲ. ಹೀಗಿರುವಾಗ ಇರುವ ಅಲ್ಪ ಅವಧಿಯ ಜೀವನ ಮುಗಿಸಿ ಹೋಗುವ ಮುನ್ನ ಕೆಲವರಾದರೂ ಇಂತಹವರೊಬ್ಬರಿದ್ದರು ಎಂದು ನೆನೆಸಿಕೊಳ್ಳುವಂತೆ ಬಾಳುವುದು ಶ್ರೇಷ್ಠ. ಆದರೆ, ವಿಕಟನರ್ತನಗೈಯುವ ಮದ ಇದಕ್ಕೆ ಅವಕಾಶ ಕೊಟ್ಟೀತೇ?
ಬಾರರದು ಜನವು ಧನವು ಕಾಯದು
ಕರೆ ಬಂದಾಗ ಅಡೆತಡೆಯು ನಡೆಯದು |
ಇರುವ ಮೂರು ದಿನ ಜನಕೆ ಬೇಕಾಗಿ
ಜಗಕೆ ಬೆಳಕಾಗಿ ಬಾಳೆಲೋ ಮೂಢ ||
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ