ಪಶು-ಪಕ್ಷಿ, ಕ್ರಿಮಿ-ಕೀಟಗಳಿಗೂ ಮಾನವರಿಗೂ ಇರುವ ವ್ಯತ್ಯಾಸವೆಂದರೆ ಆ ಕ್ರಿಮಿ-ಕೀಟ, ಪಶು-ಪಕ್ಷಿಗಳು ತಮ್ಮ ಸ್ವಾಭಾವಿಕ ಪ್ರಕೃತಿ ಅನುಸರಿಸಿ ಬಾಳುತ್ತವೆ. ಒಂದು ನಾಯಿ ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ನಾಯಿಯ ತಲೆಯೊಳಗೆ ಬೆಕ್ಕು ಶತ್ರು ಎಂದು ಇರುವುದಿಲ್ಲ, ಅದು ಅದರ ಪ್ರವೃತ್ತಿ, ಅದಕ್ಕೆ ಆಹಾರ ಬೇಕು, ಯಾವುದಾದರೂ ಆಗಬಹುದು. ಬೆಕ್ಕಿಗೆ ಇಲಿಯ ಮೇಲೆ ಏನಾದರೂ ಕೋಪವಿದೆಯೆ? ಇಲಿಗೂ ಅಷ್ಟೆ, ಬೆಕ್ಕಿನ ಮೇಲೆ ಕೋಪವಿಲ್ಲ. ಅವುಗಳ ಸ್ವಾಭಾವಿಕ ಪ್ರವೃತ್ತಿಯಂತೆ ಅವು ವರ್ತಿಸುತ್ತವೆ. ಅವುಗಳಿಗೆ ಯೋಚನೆ ಮಾಡುವ ಶಕ್ತಿ ಇಲ್ಲ. ಹಸಿವಾದಾಗ ಏನಾದರೂ ತಿನ್ನಬೇಕು, ಬಾಯಾರಿದಾಗ ಏನಾದರೂ ಕುಡಿಯಬೇಕು, ಅಷ್ಟೇ ಅವಕ್ಕೆ ಗೊತ್ತಿರುವುದು. ಒಳ್ಳೆಯದೋ ಕೆಟ್ಟದ್ದೋ ಎಂದು ವಿವೇಚಿಸುವ ಶಕ್ತಿ ಅವಕ್ಕೆ ಇಲ್ಲ. ಆದರೆ ಮಾನವರಿಗೆ ವಿವೇಚನೆ ಮಾಡುವ ಶಕ್ತಿ ಇದೆ. ತೆಂಗಿನ ಮರವಿದೆ, ಈಚಲ ಮರವಿದೆ, ಇವೆಲ್ಲಾ ಭಗವಂತನ ಸೃಷ್ಟಿಯೇ. ಪರಮಾತ್ಮ ತೆಂಗಿನ ಮರವನ್ನಾಗಲೀ, ಈಚಲಮರವನ್ನಾಗಲೀ ಸೃಷ್ಟಿಸಿರುವುದು, ಅದರಿಂದ ಹೆಂಡ ಇಳಿಸಿ ಕುಡಿದು ಮತ್ತಿನಿಂದ ಕುಣಿದಾಡಲಿ ಅನ್ನುವ ಉದ್ದೇಶದಿಂದ ಅಲ್ಲ. ಪ್ರಾಣಿಗಳನ್ನು, ಪಕ್ಷಿಗಳನ್ನು ಸೃಷ್ಟಿಸಿರುವುದು ಅವನ್ನು ಮನುಷ್ಯ ತಿಂದು ತೇಗಲಿ ಎಂದಲ್ಲ. ಉಪಯೋಗ ಮಾಡುವಾಗ ನಾವು ತಪ್ಪುತ್ತೇವೆ. ಯಾವ ಕೆಲಸಕ್ಕೆ ಯಾವ ಪದಾರ್ಥ ಉಪಯೋಗಿಸಬೇಕೋ ಅದನ್ನು ಉಪಯೋಗಿಸುವುದಿಲ್ಲ. ಮನುಷ್ಯನ ವಿವೇಚನಾ ಶಕ್ತಿ ಬಳಕೆಗೆ ಬರಬೇಕಾದುದು ಇಲ್ಲಿಯೇ!
ಭಗವಂತ ಈ ಭೂಮಿ, ಆಕಾಶ, ನೀರು, ಬೆಂಕಿ, ಗಾಳಿ ಯಾವುದನ್ನೂ ನಿರರ್ಥಕವಾಗಿ ಕೊಟ್ಟಿಲ್ಲ. ಪ್ರತಿಯೊಂದಕ್ಕೂ ಒಂದೊಂದು ಉದ್ದೇಶ ಇದ್ದೇ ಇದೆ. ಬೆಂಕಿ ಇದೆ, ಅದನ್ನು ಒಳ್ಳೆಯ ಕೆಲಸಕ್ಕೆ ಅಂದರೆ ಅಡಿಗೆ ಮಾಡುವುದಕ್ಕೆ, ಅಗ್ನಿಹೋತ್ರ ಮಾಡುವುದಕ್ಕೆ, ಇತ್ಯಾದಿಗೆ ಬಳಸಬಹುದು. ಯಾರ ಮೇಲೋ ಕೋಪ ಇದೆ ಎಂದು ಅವನ ಮನೆಯನ್ನು ಸುಡಲೂ ಬಳಸಬಹುದು. ಬೆಂಕಿಗೆ ವಿವೇಕವಿಲ್ಲ, ಅದರ ಕೆಲಸ ಸುಡುವುದು ಅಷ್ಟೆ. ವಾಯುಶುದ್ಧಿ ಬಗ್ಗೆ ಮಾತಾಡ್ತೀವಿ, ಅಗ್ನಿಹೋತ್ರ ಮಾಡ್ತೀವಿ, ಒಂದು ಚಮಚ ತುಪ್ಪ ಒಬ್ಬರು ತಿನ್ನಬಹುದು. ಅದನ್ನೇ ಅಗ್ನಿಗೆ ಹಾಕಿದರೆ ನಾಶವಾಗುವುದಿಲ್ಲ, ಸೂಕ್ಷ್ಮ ಕಣಗಳಾಗಿ ಪರಿವರ್ತಿತವಾಗಿ ವಾಯುವಿನಲ್ಲಿ ಹರಡಿ ಅದನ್ನು ಎಷ್ಟು ಜನ ಉಸಿರಾಡುತ್ತಾರೋ ಅವರಿಗೆಲ್ಲಾ ಉಪಯೋಗವಾಗುತ್ತದೆ. ನಮ್ಮ ಋಷಿಮುನಿಗಳು ಯಾವುದನ್ನೂ ನಿರರ್ಥಕವಾಗಿ ಹೇಳಲಿಲ್ಲ. ಚಿನ್ನದ ಪಾತ್ರೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ, ಮಣ್ಣಿನ ಕುಡಿಕೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ. ಅದಕ್ಕೆ ಬಡವರು, ಶ್ರೀಮಂತರು ಅನ್ನುವ ಭೇದವಿಲ್ಲ. ಇಷ್ಟೇ ಮಾಡ್ತೀವೇನು? ಬೆಂಕಿಯನ್ನು ಬೀಡಿ, ಸಿಗರೇಟು, ಚುಟ್ಟಾ ಸೇದಲೂ ಬಳಸುತ್ತೇವೆ. ಬೆಂಕಿ ಯಾವುದನ್ನು ಕೊಟ್ಟರೂ ಸುಡುತ್ತೆ. ವಾಯುಶುದ್ಧಿ ಆಗಬೇಕು ಅನ್ನುತ್ತಾ ಮಂತ್ರ ಹೇಳಿಕೊಂಡು ಅಗ್ನಿಹೋತ್ರ ಮಾಡೋದು ಏಕೆ? ಮಂತ್ರ ಹೇಳದೇ ಮಾಡಬಹುದಲ್ಲ ಎನ್ನಬಹುದು. ಮಂತ್ರಗಳಲ್ಲಿ ಆಧ್ಯಾತ್ಮವಿದೆ. ಭಗವಂತ, ನನ್ನ ಜೀವನ, ಈ ಆತ್ಮ ನಿನಗೆ ಕಾಷ್ಠ, ಸಮಿತ್ತು ಇದ್ದ ಹಾಗೆ ಎಂದು ಸಮಿತ್ತು ಅಇಸುವಾಗ ಹೇಳುತ್ತೇವೆ. ಭಗವಂತ ಬ್ರಹ್ಮಾಂಡ, ದೊಡ್ಡ ಅಗ್ನಿ, ಆ ಅಗ್ನಿಯಲ್ಲಿ ನಮ್ಮ ಆತ್ಮವನ್ನು ಹಾಕಿದರೆ, ನಮ್ಮ ಆತ್ಮ ಇಲ್ಲದಂತಹ ಅದ್ಭುತ ಜ್ಞಾನ ನಮಗೆ ಬರುತ್ತದೆ. ಅಂತರಂಗದ ಆತ್ಮಾವಲೋಕನದ ದಾರಿ ತೆರೆದುಕೊಳ್ಳುತ್ತದೆ.
ವೇದಗಳ ಮಾತಿನಲ್ಲಿ ಬುದ್ಧಿಪೂರ್ವಕವಲ್ಲದ ವಿಷಯಗಳಿಲ್ಲ. ನಾವು ಅರ್ಥದ ಕಡೆಗೆ ಗಮನ ಕೊಡುವುದಿಲ್ಲ, ಕೇವಲ ಮಂತ್ರ ಹೇಳಿಬಿಡುತ್ತೇವೆ, ಅರ್ಥವೇ ತಿಳಿಯದೆ, ಹಲವು ವರ್ಷಗಳಿಂದ ಪೂಜೆ-ಪುನಸ್ಕಾರಗಳನ್ನು ಮಾಡುವವರು ಇರುತ್ತಾರೆ. ಪ್ರಯೋಜನವೇನು? ಇದನ್ನು ಗಿಳಿಪಾಠ ಅನ್ನಬಹುದು. ರಾಮ-ರಾಮ ಅಂತ ಗಿಳಿಗೆ ಹೇಳಿಕೊಟ್ಟರೆ ಅದು ರಾಮ-ರಾಮ ಅನ್ನುತ್ತೆ. ಅದಕ್ಕೆ ರಾಮ ಯಾರು, ರಾವಣ ಯಾರು ಗೊತ್ತೇನು? ಅದರ ತಲೆಯಲ್ಲಿ ಆ ವಿಷಯ ಇರುವುದೇ ಇಲ್ಲ. ಅಂತಹ ಪಾಠವನ್ನು ನಾವೂ ಮಾಡಿದರೆ ಏನು ಪ್ರಯೋಜನ? ಅರ್ಥಸಹಿತವಾಗಿ ತಿಳಿದುಕೊಂಡರೆ ಅದನ್ನು ಜೀವನಕ್ಕೆ ತರಬಹುದು, ಅಂತಹವರನ್ನು ಕೇಳಿದರೆ, ಭಗವಂತನಿಗೆ ಅರ್ಥ ಗೊತ್ತಿರುತ್ತೆ.. ನಮಗೆ ಗೊತ್ತಿಲ್ಲದೇ ಹೋದರೂ ಭಗವಂತನಿಗೆ ಗೊತ್ತಾಗಲ್ವಾ? ಅನ್ನುತ್ತಾರೆ. ವೇದದ ಉಪದೇಶಗಳು ಭಗವಂತ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅಲ್ಲ, ಮಾನವಜಾತಿಯ ಬುದ್ಧಿಶಕ್ತಿಯನ್ನು ಎಚ್ಚರಿಸುವ ಸಲುವಾಗಿ! ನಾವು ಕ್ರಿಯಾತ್ಮಕವಾಗಿ ಆಲೋಚನೆ ಮಾಡಬೇಕು. ಋಜು ಮಾರ್ಗದಲ್ಲಿ, ನೇರ ಮಾರ್ಗದಲ್ಲಿ ಯಾರು ನಡೆಯುತ್ತಾರೋ ಅಂತಹ ವಿದ್ವಾಂಸರ ಬುದ್ಧಿ ನಮಗೆ ಬರಲಿ ಎಂದು ಬಯಸಬೇಕು. ಯಾವನು ತಪಸ್ವಿಯಲ್ಲವೋ, ಇಂದ್ರಿಯ ನಿಗ್ರಹ ಮಾಡುವುದಿಲ್ಲವೋ ಕೇವಲ ವೇದಪಾಠ ಮಾಡುತ್ತಾ ಹೋಗುತ್ತಾನೋ ಅವನು ಅವೈದಿಕನೇ ಸರಿ. ಮಾಡಬಾರದ್ದನ್ನು ಮಾಡಿ, ತಿನ್ನಬಾರದ್ದನ್ನು ತಿಂದು, ಆಡಬಾರದ್ದನ್ನು ಆಡಿ ವೇದಮಂತ್ರ ಹೇಳಿದರೆ ಏನೂ ಪ್ರಯೋಜನವಿಲ್ಲ.
ವಿವಾಹ, ಉಪನಯನ ಮುಂತಾದ ಸಮಾರಂಭಗಳಲ್ಲಿ ಬಹಳ ಜನರು ಸೇರುತ್ತಾರೆ. ಪುರೋಹಿತರು ತಮ್ಮಷ್ಟಕ್ಕೆ ತಾವು ಮಂತ್ರ ಹೇಳ್ತಾ ಇರ್ತಾರೆ, ಆ ಮಂತ್ರದ ಅರ್ಥಗಳನ್ನು ಹೇಳುವುದಕ್ಕೆ, ಕೇಳುವುದಕ್ಕೆ ಯಾರಿಗೂ ವ್ಯವಧಾನವಿರುವುದಿಲ್ಲ. ಮಂತ್ರಗಳನ್ನು ಹೇಳುವ ಎಷ್ಟೋ ಪುರೋಹಿತರಿಗೂ ಅದರ ಅರ್ಥ ತಿಳಿದಿರುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಬಂದಿರೋ ಜನರೆಲ್ಲಾ ಸೇರಿಕೊಂಡು ಹರಟೆ ಹೊಡೆಯುತ್ತಿರುತ್ತಾರೆ. ಇದರಿಂದ ಲಾಭವೇನು? ಇಂತಹ ವಿಚಾರಗಳನ್ನು ಸತ್ಸಂಗಗಳಲ್ಲಿ ಹಂಚಿಕೊಳ್ಳುವ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ಈ ಮಾತು ಮನನೀಯವಾಗಿದೆ: ಪಂಡಿತಜಿ ಸುಮ್ಮನೆ ವೇದ, ವೇದ ಅಂತ ಹೇಳ್ತಾರೆ, ಅವರು ನಾಸ್ತಿಕರು, ದೇವಸ್ಥಾನಕ್ಕೆ ಹೋಗೋದಿಲ್ಲ, ಮಸೀದಿಗೆ ಹೋಗೋದಿಲ್ಲ, ಚರ್ಚಿಗೂ ಹೋಗೋದಿಲ್ಲ. ಹೌದು, ನಾನು ಹೋಗುವುದಿಲ್ಲ. ಆ ಎಲ್ಲವೂ ನನ್ನಲ್ಲೇ ಇದೆ. ದೇವಸ್ಥಾನವೂ ನನ್ನ ಎದೆಯಲ್ಲಿದೆ, ಮಸೀದಿಯೂ ಇದೆ, ಚರ್ಚೂ ಇದೆ. ಪರಮಾತ್ಮ ಇಲ್ಲೇ ಇದ್ದಾನೆ. ನಾನು ಹೊರಗೆ ಇನ್ನೆಲ್ಲಿ ಅವನನ್ನು ಹುಡುಕಲು ಹೋಗಬೇಕು? ಬಲ್ಬು ಇದೆ, ವಿದ್ಯುತ್ ಇದೆ, ಅವನ್ನು ಜೋಡಿಸುವ ಸ್ವಿಚ್ ಹಾಕಿದರೆ ಅದರಲ್ಲಿ ಲೈಟು ಹತ್ತುತ್ತದೆ, ಸ್ವಿಚ್ಚೇ ಇಲ್ಲದಿದ್ದರೆ ಬಲ್ಬು 100 ವೋಲ್ಟಿನದಾಗಿರಲಿ, 1000 ವೋಲ್ಟಿನದಾಗಿರಲಿ, ಹತ್ತುವುದಿಲ್ಲ. ಹಾಗೆಯೇ ಧ್ಯಾನ ಅನ್ನುವುದು ಸ್ವಿಚ್ಚು, ಆ ಸ್ವಿಚ್ಚಿರಬೇಕು, ಆಗ ಪರಮಾತ್ಮನನ್ನು ನೀವು ಕಂಡುಕೊಳ್ಳುತ್ತೀರಿ, ಜ್ಞಾನಕ್ಕೇ ಸೊನ್ನೆ ಬಿದ್ದಿದ್ದರೆ ಪರಮಾತ್ಮನೂ ಇಲ್ಲ, ಜೀವಾತ್ಮನೂ ಇಲ್ಲ.
ಭಗವಂತನಿಗೆ ಪ್ರಿಯವಾದ ಕೆಲಸ ಯಾವುದು? ಅವನಿಗೆ ತನ್ನ ಉದ್ಧಾರ ಆಗಬೇಕಿದೆಯೇ? ಉದ್ಧಾರ ಆಗಬೇಕಾಗಿರುವುದು ನಮಗೆ! ನಾವು ಅಂದರೆ ನಮ್ಮ ಸಮೂಹದ ಉದ್ಧಾರಕ್ಕಾಗಿ ನಾವು ಕೆಲಸ ಮಾಡಬೇಕಾಗಿದೆ. ನಮ್ಮ ನಿಂದೆ, ಸ್ತುತಿ ಯಾವುದೂ ಭಗವಂತನ ಮೇಲೆ ಪರಿಣಾಮ ಬೀರುವುದಿಲ್ಲ. ಭಗವಂತ ಹೊಗಳುವವರಿಗೆ ಕೇಳಿದ್ದನ್ನೆಲ್ಲಾ ಕೊಟ್ಟುಬಿಡುವುದಿಲ್ಲ, ನಾಸ್ತಿಕರಿಂದ ಅವರ ಆಹಾರವನ್ನು ಕಿತ್ತುಕೊಳ್ಳುವುದಿಲ್ಲ. ಭಗವಂತನ ಮಕ್ಕಳಾದ ನಾವು ಕಷ್ಟ, ಕಾರ್ಪಣ್ಯದಲ್ಲಿರುವವರಿಗೆ, ಬಡವರಿಗೆ, ಬಗ್ಗರಿಗೆ, ದೀನ ದಲಿತರಿಗೆ ಸಹಾಯ ಮಾಡಿದರೆ ನಿಜವಾದ ಭಕ್ತರು ಅನ್ನಬಹುದು. ಭಗವಂತನಿಗೆ ನಮ್ಮ ಹೃದಯಕ್ಕಿಂತ ದೊಡ್ಡ ಮಂದಿರ ಬೇಕೇ? ಅಲ್ಲೂ ಪರಮಾತ್ಮನಿದ್ದಾನೆ. ಅಲ್ಲಿರುವ ಪರಮಾತ್ಮನ ಕುರಿತು ಧ್ಯಾನ ಮಾಡಿದರೆ ನಿಜವಾಗಿ ಆನಂದ ಸಿಕ್ಕೇಸಿಕ್ಕುತ್ತೆ. ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ. ದೇವಸ್ಥಾನಗಳನ್ನು ಕಟ್ಟುವ ಬದಲು ಧರ್ಮಶಾಲೆ ಕಟ್ಟಿಸಿ, ಅನಾಥಾಲಯಗಳನ್ನು ಕಟ್ಟಿಸಿ, ಛತ್ರಗಳನ್ನು ನಿರ್ಮಾಣ ಮಾಡಿದರೆ, ಪಶು-ಪಕ್ಷಿಗಳ ರಕ್ಷಣೆ ಮಾಡಿದರೆ ಭಗವಂತ ಮೆಚ್ಚಿಯೇ ಮೆಚ್ಚುತ್ತಾನೆ. ಇಂತಹ ವಿವೇಚನಾ ಶಕ್ತಿ ಬರಲಿ ಎಂದು ಪ್ರಾರ್ಥಿಸೋಣ.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ