ನಾವು ಹಿಂದಿದ್ದೇವೆ, ಕೆಳಗೆ ಬಿದ್ದಿದ್ದೇವೆ ಎಂಬ ಭಾವ ಮೂಡಿದಾಗ ಅದನ್ನು ಹಿಮ್ಮೆಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇ ಆದಲ್ಲಿ ಖಂಡಿತಾ ಮೇಲೇರಲು ಮತ್ತು ಇತರರಿಗೆ ಮಾದರಿ ಆಗಲು ಸಾಧ್ಯವಿದೆ ಎಂಬುದನ್ನು ಅನೇಕ ಸಾಧಕರು ತೋರಿಸಿಕೊಟ್ಟಿದ್ದಾರೆ. ಎರಡು ಕಾಲುಗಳನ್ನೂ ದೌರ್ಜನ್ಯದಿಂದಾಗಿ ಕಳೆದುಕೊಳ್ಳಬೇಕಾಗಿ ಬಂದ ಅರುಣಿಮಾ ಸಿನ್ಹಾ ಎವೆರೆಸ್ಟ್ ಶಿಖರ ಏರಲು ಸಾಧ್ಯವಾಯಿತೆಂದರೆ ಎಲ್ಲಾ ಅಂಗಗಳೂ ಸಾಮಾನ್ಯವಾಗಿರುವ ನಮ್ಮಂತಹವರಿಗೆ ಅದು ಪ್ರೇರಣೆ ಕೊಡುವ ಸಂಗತಿ. ಅರುಣಿಮಾ ಸಿನ್ಹಾರಂತೆಯೇ ಅನೇಕ ವಿಶಿಷ್ಟ ಚೇತನರು ಸಾಮಾನ್ಯರೂ ಮಾಡಲಾಗದ ಸಂಗತಿಗಳನ್ನು ಮಾಡಿ ತೋರಿಸಿ ಲಿಮ್ಕಾ, ಗಿನ್ನಿಸ್ ದಾಖಲೆಗಳಲ್ಲಿ ತಮ್ಮ ಹೆಸರು ಛಾಪಿಸಿಕೊಂಡಿದ್ದಾರೆ. ಹಿಂಜರಿಕೆ ಬಿಟ್ಟು, ಕೊರಗುವುದನ್ನು ಬಿಟ್ಟು ನಾವು ಏನು ಸಾಧಿಸಬೇಕೆಂದುಕೊಂಡಿದ್ದೇವೆಯೋ ಅದರ ಕಡೆಗೆ ಮಾತ್ರ ಲಕ್ಷ್ಯ ಹರಿಸಿದರೆ ನಿಜಕ್ಕೂ ಪವಾಡವೇ ಆಗುತ್ತದೆ. ಇಂತಹ ಪ್ರಯತ್ನಕ್ಕೆ ಅನಿರೀಕ್ಷಿತ ಎಡೆಗಳಿಂದಲೂ ಪ್ರೋತ್ಸಾಹ ಸಿಗುತ್ತದೆ. ಈ ವಿಚಾರಕ್ಕೆ ಪುಷ್ಟಿ ಕೊಡುವಂತಹ ಒಂದು ಸಾಮಾನ್ಯ ಘಟನೆಯ ಬಗ್ಗೆ ಪ್ರಸ್ತಾಪಿಸಬೇಕೆನಿಸಿದೆ.
ಅಂದು ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ವಾಕಿಂಗಿಗೆ ಹೊರಟು ಸ್ಟೇಡಿಯಮ್ ತಲುಪಿದೆ. ಒಂದು ಸುತ್ತು ಹಾಕಿರಬಹುದು. ಪಕ್ಕದಲ್ಲಿದ್ದ ಗುಂಡಿಯೊಂದರಿಂದ ನಾಯಿಮರಿಯ ಕುಂಯ್ ಕುಂಯ್ ಆರ್ತ ಸ್ವರ ಕೇಳಿಸಿತು. ಸುಮಾರು ನಾಲ್ಕು ಅಡಿ ಆಳದ ಗುಂಡಿಯಲ್ಲಿ ಬಗ್ಗಿ ನೋಡಿದರೆ ಅಲ್ಲಿ ಪುಟಾಣಿ ನಾಯಿಮರಿಯೊಂದು ಮೇಲೆ ಹತ್ತಲು ಪರದಾಡುತ್ತಿತ್ತು. ಆಟವಾಡುತ್ತಾ ಅಲ್ಲಿ ಬಿದ್ದಿರಬೇಕು. ಅದಕ್ಕೆ ಮೇಲೆ ಹತ್ತಲಾಗುತ್ತಿರಲಿಲ್ಲ. ಅದರ ಜೊತೆಯ ಇನ್ನೊಂದು ಪುಟಾಣಿ ಮರಿ ಗುಂಡಿಯ ಮೇಲ್ಭಾಗದಲ್ಲಿ ನಿಂತು ಗಮನಿಸುತ್ತಾ ಸುತ್ತಲೂ ಪರದಾಡುತ್ತಿತ್ತು. ಅಲ್ಲಿ ಓಡಾಡುತ್ತಿದ್ದವರನ್ನು ನೋಡುತ್ತಾ ಇದ್ದ ಆ ಇನ್ನೊಂದು ಮರಿಯ ನೋಟ ಯಾರಾದರೂ ಸಹಾಯ ಮಾಡಿ ಎಂದು ಕೇಳುವಂತಿತ್ತು. ಯಾಂತ್ರಿಕವಾಗಿ ವಾಕಿಂಗ್ ಮುಂದುವರೆಸಿದ್ದ ನಾನು ಅದಾಗಲೇ ಆ ಗುಂಡಿ ದಾಟಿ ಮೂಂದೆ ಹೋಗಿಬಿಟ್ಟಿದ್ದೆ. ಅದನ್ನು ಮೇಲೆತ್ತಬೇಕಾಗಿತ್ತು ಎಂದು ಮನಸ್ಸು ಹೇಳುತ್ತಿತ್ತು. ಇನ್ನೊಂದು ಸುತ್ತು ಬರುವಾಗ ನೋಡಿದರೆ ಆ ಮರಿ ಅಲ್ಲೇ ಇತ್ತು. ಅದನ್ನು ಮೇಲೆತ್ತಲು ಹೋದಾಗ ಅದು ಮುಂಗಾಲುಗಳನ್ನು ಮುಂದೆ ಚಾಚಿ ನನ್ನನ್ನು ನೋಡುತ್ತಾ ಮೇಲಕ್ಕೆ ಎತ್ತು ಎಂದು ಕೋರುವ ಅದರ ನೋಟ ನನ್ನನ್ನು ಕರಗಿಸಿತು. ಅದರ ಕಾಲು ಹಿಡಿದು ಮೇಲಕ್ಕೆತ್ತಿ ಬಿಟ್ಟು ವಾಕಿಂಗ್ ಮುಂದುವರೆಸಿದರೆ ಆ ಮರಿ ಮತ್ತು ಅದರ ಜೊತೆಯ ಮರಿಗಳೆರಡೂ ಕೃತಜ್ಞತೆ ತೋರಿಸುವಂತೆ ಕುಣಿದು ಕುಪ್ಪಳಿಸಿ ನನ್ನ ಕಾಲುಗಳಿಗೆ ತೊಡರಿಕೊಂಡು ಬರತೊಡಗಿದವು. ಅವನ್ನು ತಪ್ಪಿಸಿಕೊಂಡು ವಾಕಿಂಗ್ ಮುಂದುವರೆಸಿದೆ. ಮುಂದಿನ ಸುತ್ತಿನಲ್ಲಿ ಬರುವಾಗ ಆ ಮರಿಗಳು ತಾಯಿಯ ಜೊತೆ ಚಿನ್ನಾಟವಾಡುತ್ತಾ, ಹಾಲು ಕುಡಿಯುತ್ತಾ ಇದ್ದ ದೃಷ್ಯ ಕಂಡು ಮನಸ್ಸು ಹಗುರವಾಯಿತು.
ಇಂದಿನ ಜೀವನರಂಗದ ಆಟದಲ್ಲಿ ನಾವೂ ಸಹ ಆ ನಾಯಿಮರಿಯಂತೆ ಗುಂಡಿಯಲ್ಲಿ ಬಿದ್ದು ಮೇಲೆ ಹತ್ತಲಾರದೇ ಪರದಾಡುತ್ತಿದ್ದೇವೆ ಎಂಬ ಭಾವ ಮನದಲ್ಲಿ ಸುಳಿದು ವಿಚಾರಕ್ಕೆ ಎಡೆ ಮಾಡಿಕೊಟ್ಟಿತು. ಸ್ವಾಭಿಮಾನ, ದುರಭಿಮಾನಗಳಿಂದ ನಾವೇ ತೋಡಿಕೊಂಡ ಗುಂಡಿಗೆ ನಾವೇ ಆಟವಾಡುತ್ತಾ ಬಿದ್ದುಬಿಟ್ಟಿರುತ್ತೇವೆ. ನಮ್ಮನ್ನು ಆವರಿಸಿದ ಮಾಯೆ/ಭ್ರಮೆ ನಾವು ಗುಂಡಿಯಲ್ಲಿರುವ ವಾಸ್ತವತೆ ಮರೆಮಾಚಿ, ಗುಂಡಿಯಲ್ಲೇ ಇರುವಂತೆ ಮಾಡುತ್ತಿರುತ್ತದೆ. ಮೇಲೆ ಹತ್ತಲು ಮಾಡುವ ಪ್ರಯತ್ನಗಳಿಗೆ ರಾಗ, ದ್ವೇಷಗಳು ಅಡ್ಡಿಯಾಗಿ ಪುನಃ ಕೆಳಗೆ ಜಾರಿಸುತ್ತಿರುತ್ತವೆ. ಯಾವ ದುರಭಿಮಾನದಿಂದ ಬಿದ್ದಿರುತ್ತೇವೆಯೋ, ಅದೇ ದುರಭಿಮಾನ ಇತರರ ಸಹಾಯ ಪಡೆಯದಂತೆ ಪ್ರಚೋದಿಸುತ್ತವೆ. ಒಂದೊಮ್ಮೆ ಗುಂಡಿಯಲ್ಲಿ ಬಿದ್ದ ಅರಿವಾದರೂ, ಮೋಹ, ಮಮಕಾರಗಳು ಮೇಲೆ ಹತ್ತದಂತೆ ಮಾಡುತ್ತಿರುತ್ತವೆ. ಹಲವೊಮ್ಮೆ ಬಿದ್ದಿರುವ ಗುಂಡಿಯೇ ಎಷ್ಟು ಸುಂದರವಾಗಿದೆ ಎಂಬ ಹಿತವಾದ ಸುಳ್ಳು ಹೇಳಿಕೊಂಡು ಸಮಾಧಾನಪಟ್ಟುಕೊಳ್ಳುತ್ತೇವೆ. ನಾವು ಬಿದ್ದಿರುವ ಗುಂಡಿ ಅಷ್ಟೇನೂ ದೊಡ್ಡದಲ್ಲ, ಅವರು ಬಿದ್ದಿರುವ ಗುಂಡಿ ನಮ್ಮ ಗುಂಡಿಗಿಂತ ಆಳವಾಗಿದೆ ಎಂದು ವಿಕೃತ ಸಮಾಧಾನವನ್ನೂ ಹೊಂದುತ್ತೇವೆ. ಗುಂಡಿಯಲ್ಲಿ ಬೀಳಲು ಅವರು ಕಾರಣ, ಇವರು ಕಾರಣ ಎಂದು ಆರೋಪಿಸುತ್ತೇವೆ. ಅವರೋ, ಇವರೋ ಕಾರಣರಾಗುವುದಕ್ಕೆ ಮೂಲ ಕಾರಣ ನಾವೇ ಎಂಬ ಕಟುಸತ್ಯವನ್ನು ಮಾತ್ರ ನಾವು ಒಪ್ಪಿಕೊಳ್ಳುವುದಿಲ್ಲ. ಸಾವಧಾನವಾಗಿ ಯೋಚಿಸಿದರೆ ಅದರಲ್ಲಿ ನಮ್ಮ ಪಾಲೇ ದೊಡ್ಡದಾಗಿರುತ್ತದೆ.
ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು
ಆಸೆ ನಗುವುದು ವಿಚಾರ ಸೋಲುವುದು |
ಜಾರುವುದನರಿತರೂ ನಾಶವಾಗದು ಚಪಲ
ಸಕಲ ಸಂಕಟಕೆ ಮೂಲವಿದು ಮೂಢ ||
ಗುಂಡಿಯಿಂದ ಮೇಲೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಮಾಡುತ್ತಲೇ ಇದ್ದರೆ, ಮೇಲೆ ಹತ್ತಲು ಸಹಾಯ ಮಾಡಲು ದೇವರು ಯಾರನ್ನಾದರೂ ಕಳಿಸಿಯೇ ಕಳಿಸುತ್ತಾನೆ. ಆರೀತಿ ಸಹಾಯ ಮಾಡುವ ಯಾರೋ ಒಬ್ಬರೇ ನಮ್ಮ ಪಾಲಿಗೆ ಮಾರ್ಗದರ್ಶಕರಾಗುತ್ತಾರೆ, ದೇವರಾಗುತ್ತಾರೆ. ನಾಯಿಮರಿ ಕುಂಯ್‌ಗುಡದೇ ಇದ್ದಿದ್ದರೆ ನಾನು ಅದನ್ನು ಮೇಲೆತ್ತುತ್ತಿರಲಿಲ್ಲ. ಹಾಗೆಯೇ ನಾವು ಮೇಲೇರಲು ಮೊರೆಯಿಡದಿದ್ದರೆ ನಮಗೆ ಸಹಾಯ ಸಿಗದೇ ಹೋಗಬಹುದು! ಮಗು ಅತ್ತರೆ ಅದಕ್ಕೆ ಹಸಿವಾಗಿದೆಯೆಂದು ತಾಯಿ ಹಾಲು ಉಣಿಸುತ್ತಾಳೆ. ಇದೇ ತತ್ವ ಕೆಳಗೆ ಬಿದ್ದವರಿಗೂ ಅನ್ವಯವಾಗುತ್ತದೆ. ಗುಂಡಿಯಲ್ಲಿ ಬಿದ್ದು ಪರಿತಪಿಸುವುದಕ್ಕಿಂತ ಬೀಳದೆ ಇರುವಂತೆ ಜಾಗೃತರಾಗಿರುವುದು ಒಳಿತು ಎಂಬ ಜ್ಞಾನಿಗಳ ಮಾತಿನಲ್ಲಿ ಸತ್ವವಿದೆ, ಸತ್ಯವಿದೆ.
ಸರಸರನೆ ಮೇಲೇರಿ ಗಿರಕಿ ತಿರುಗಿ
ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ |
ಬೀಳುವುದು ಗಾಳಿಪಟ ಬಂಧ ತಪ್ಪಿದರೆ
ಸೂತ್ರ ಹರಿದರೆ ಎಚ್ಚರವಿರು ಮೂಢ ||
-ಕ.ವೆಂ. ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ