ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಸೆಪ್ಟೆಂಬರ್ 25, 2017

ವೇದಾಧ್ಯಯನವೆಂದರೆ ಜ್ಞಾನಾರ್ಜನೆ


     ಪ್ರಸ್ತುತ ಕಾಲಮಾನ ಮತ್ತು ಪರಿಸ್ಥಿತಿಯಲ್ಲಿ ವೇದಾಧ್ಯಯನದ ಅಗತ್ಯ ಮತ್ತು ಮಹತ್ವ ಕುರಿತು ಪ್ರಾಜ್ಞರು ಚಿಂತಿಸುವ ಅಗತ್ಯವಿದೆ. ಇಂದು ಬಹಳಷ್ಟು ಸಂಪ್ರದಾಯಗಳು, ಪದ್ಧತಿಗಳು ಅಪಮೌಲ್ಯಕ್ಕೊಳಗಾಗಿ ಮೂಲದಲ್ಲಿ ಇದ್ದಂತಹ ಸದ್ವಿಚಾರಗಳು ಕಣ್ಮರೆಯಾಗಿವೆ. ದುರಂತವೆಂದರೆ ಇಂತಹ ಸಂಗತಿಗಳನ್ನು ಪರಿಷ್ಕರಿಸಿ ಮೂಲದ ಒಳ್ಳೆಯ ಅಂಶಗಳನ್ನು ಜಾರಿಗೊಳಿಸುವ ಸಮಾಜ ಸುಧಾರಕರುಗಳದೇ ಪ್ರತ್ಯೇಕ ಸಂಪ್ರದಾಯವೆಂದು ಗುರುತಿಸಿ ಪ್ರತ್ಯೇಕಿಸಿಬಿಡುವ ಪ್ರವೃತ್ತಿ ಬಲವಾಗಿದೆ. ಅನೇಕ ಮತ, ಪಂಥಗಳು, ಪದ್ಧತಿಗಳು, ರೀತಿ-ನೀತಿಗಳು ಜಾರಿಗೆ ಬಂದಿರುವುದೇ ಹೀಗೆ. ಇದರಿಂದ ಒಳಿತೂ ಆಗಿದೆ, ಕೆಡಕೂ ಆಗಿದೆ. ಸಮಾಜವನ್ನು ವಿಘಟಿಸುವ ಬೆಳವಣಿಗೆಗಳೂ ಆಗಿವೆ, ಆಗುತ್ತಿವೆ. ಅಹಿಂದ, ಹಿಂದ ಇತ್ಯಾದಿಗಳು ಇತ್ತೀಚಿನ ಸೇರ್ಪಡೆಗಳು.
     ಮಾನವ ಜೀವನದಲ್ಲಿ 16 ಸಂಸ್ಕಾರಗಳು ಒಬ್ಬ ಆದರ್ಶವ್ಯಕ್ತಿಯಾಗಿ ರೂಪುಗೊಳ್ಳಲು ಅವಶ್ಯಕ. ಅವೆಂದರೆ, 1.ಗರ್ಭಾದಾನ, 2.ಪುಂಸವನ, 3.ಸೀಮಂತೋನ್ನಯನ, 4.ಜಾತಕರ್ಮ, 5.ನಾಮಕರಣ, 6.ನಿಷ್ಕ್ರಮಣ, 7.ಅನ್ನಪ್ರಾಶನ, 8.ಮುಂಡನ, 9.ಕರ್ಣವೇಧ, 10.ಉಪನಯನ, 11.ವೇದಾರಂಭ, 12.ಸಮಾವರ್ತನ, 13.ವಿವಾಹ, 14.ವಾನಪ್ರಸ್ಥ, 15.ಸಂನ್ಯಾಸ, 16..ಅಂತ್ಯೇಷ್ಟಿ. ಇವುಗಳಲ್ಲಿ ಮೊದಲ ಮೂರು ಸಂಸ್ಕಾರಗಳು ಹುಟ್ಟುವ ಮುನ್ನದ ಸಂಸ್ಕಾರಗಳಾಗಿದ್ದು ಉತ್ತಮ ಸಂತಾನವನ್ನು ಪಡೆಯುವ ಸಲುವಾಗಿ ಆಚರಿಸುತ್ತಾರೆ. ವಿವಾಹ, ವಾನಪ್ರಸ್ಥ ಮತ್ತು ಸಂನ್ಯಾಸ ಇವುಗಳು ಎಲ್ಲರಿಗೂ ಕಡ್ಡಾಯವಲ್ಲ, ಅರ್ಹತೆ ಮತ್ತು ಆಸಕ್ತಿಯಿರುವರು ಮಾತ್ರ ಅನುಸರಿಸಬಹುದು. ಅಂತ್ಯೇಷ್ಟಿ ಮೃತರಾದ ನಂತರ ಮಾಡುವ ಸಂಸ್ಕಾರ. ಇವುಗಳನ್ನು ಹೊರತುಪಡಿಸಿ ಉಳಿಯುವ 9 ಸಂಸ್ಕಾರಗಳು ಮಕ್ಕಳಿಗೆ ಸಂಬಂಧಿಸಿದವು. ಮಕ್ಕಳನ್ನು ಸತ್ಪ್ರಜೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಈ ಸಂಸ್ಕಾರಗಳಿಗೆ ಹಿಂದೆ ಎಷ್ಟು ಪ್ರಾಧಾನ್ಯತೆಯಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಇಂದಿನ ಅವಸರದ ಪ್ರಪಂಚದಲ್ಲಿ ಮಕ್ಕಳನ್ನು ಹಣಗಳಿಕೆಯ ಯಂತ್ರಗಳಾಗಿ ರೂಪಿಸಲು ಮಾತ್ರ ಗಮನ ಕೊಡಲಾಗುತ್ತಿದೆ.
     ಹಿಂದಿನ ಕಾಲದಲ್ಲಿ ಹೆರಿಗೆಗಳನ್ನು ಮನೆಗಳಲ್ಲೇ ನಿಪುಣ ಸ್ತ್ರೀಯರೇ ಮಾಡಿಸುತ್ತಿದ್ದರು. ಈಗ ಆಸ್ಪತ್ರೆಗಳಲ್ಲೇ ನುರಿತ ವೈದ್ಯರು, ದಾದಿಯರು ಮಾಡುತ್ತಾರೆ. ಒಳ್ಳೆಯ ತಿಥಿ, ನಕ್ಷತ್ರ, ಇತ್ಯಾದಿ ನೋಡಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿಸಿ ಹೆರಿಗೆ ಮಾಡಿಸುವ ಪದ್ಧತಿಯೂ ಬಂದುಬಿಟ್ಟಿದೆ. ಇದರಿಂದ ಯಾರಿಗೆ ಎಷ್ಟು ಒಳ್ಳೆಯದಾಗುತ್ತೆಂಬುದನ್ನು ಯಾರೂ ಅರಿಯರು. ಮಗುವಿಗೆ ಹೆಸರಿಡುವಾಗ ಒಳ್ಳೆಯ ಅರ್ಥ ಕೊಡುವ ಹೆಸರುಗಳನ್ನು ಇಟ್ಟರೆ ಹೆಸರಿಗೆ ತಕ್ಕಂತೆ ಇರಲು ಪ್ರೇರಿಸಿದಂತಾಗುತ್ತದೆ. ಅರ್ಥವೇ ತಿಳಿಯದ ಹೆಸರುಗಳನ್ನೂ ಈಗ ಇಡುವುದನ್ನು ಕಾಣುತ್ತಿದ್ದೇವೆ. ಮಗುವನ್ನು ಮೊದಲ ಸಲ ಹೊರಗೆ ಕರೆದೊಯ್ಯುವಾಗ ನಿಷ್ಕ್ರಮಣ, ತಾಯಿಯ ಹಾಲಿನ ಜೊತೆಗೆ ಬೇರೆ ಆಹಾರದ ಅಭ್ಯಾಸ ಪ್ರಾರಂಭದ ಸಮಯದಲ್ಲಿ ಅನ್ನಪ್ರಾಶನ (ಸಾಮಾನ್ಯವಾಗಿ ಹಲ್ಲು ಬರುವ ಸಮಯದಲ್ಲಿ), ಸುಮಾರು ಮೂರು ವರ್ಷವಾದಾಗ, ಅಂದರೆ ಮೃದುವಾಗಿದ್ದ ತಲೆಬುರುಡೆ ಸ್ವಲ್ಪ ಗಟ್ಟಿಯಾದಾಗ ಚೂಡಾಕರ್ಮ, ಕಿವಿ ಚುಚ್ಚುವುದು ಮುಂತಾದವು ಮಗುವಿಗೆ ಮಾಡಲಾಗುವ ಪ್ರಾರಂಭಿಕ ಸಂಸ್ಕಾರಗಳು.
     ಮುಂದಿನ ಹಂತ ಮಗುವಿನ ವಿದ್ಯಾಭ್ಯಾಸಕ್ಕೆ ಅನುವು ಮಾಡುವುದು. ಇಲ್ಲೇ ನಾವು ದಾರಿ ತಪ್ಪುತ್ತಿದ್ದೇವೆ. ಬ್ರಿಟಿಷರ ಶಿಕ್ಷಣನೀತಿಯ ಬಲಿಪಶುಗಳಾಗಿ ವಿಷವರ್ತುಲದಿಂದ ಹೊರಬರಲಾರದೆ ಇದ್ದೇವೆ. ಹಿಂದಿನ ಗುರುಕುಲ ಪದ್ಧತಿಯ ವ್ಯವಸ್ಥೆಯಲ್ಲಿ ಮಗುವಿಗೆ ಸಾಮಾನ್ಯವಾಗಿ 7-8 ವರ್ಷಗಳಾದಾಗ ಮಗುವಿಗೆ ಉಪನಯನ ಸಂಸ್ಕಾರ ಮಾಡಿ ಅನುಕೂಲವೆನ್ನಿಸುವ ಗುರುಕುಲಕ್ಕೆ ಮಕ್ಕಳನ್ನು ಬಿಡುತ್ತಿದ್ದರು. ಉಪನಯನದ ಜೊತೆಗೇ ವೇದಾರಂಭ ಸಂಸ್ಕಾರವನ್ನೂ ಮಾಡುತ್ತಿದ್ದರು. (ಉಪ ಎಂದರೆ ಹತ್ತಿರಕ್ಕೆ, ನಯನವೆಂದರೆ ಕರೆದೊಯ್ಯುವುದು.) ಮಗುವನ್ನು ವಿದ್ಯಾಭ್ಯಾಸದ ಸಲುವಾಗಿ ಗುರುಗಳ ಬಳಿಗೆ ಕರೆದೊಯ್ಯುವುದೇ ಉಪನಯನ. ಆಗ ಸಂಕಲ್ಪದ ರೂಪದಲ್ಲಿ ಧರಿಸಲಾಗುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಆಚಾರ್ಯಋಣ, ಪಿತೃಋಣಗಳನ್ನು ಸಂಕೇತಿಸುತ್ತವೆ. ಇದು ಬಹು ಹಿಂದೆ ಜಾತಿಸೂಚಕ ಚಿಹ್ನೆಯಾಗಿರಲಿಲ್ಲ ಮತ್ತು ಹೆಣ್ಣು ಮಕ್ಕಳೂ ಉಪನಯನ ಮಾಡಿಸಿಕೊಳ್ಳಲು, ಶಿಕ್ಷಣ ಪಡೆಯಲು ಅರ್ಹರಿದ್ದರು. ವೇದಾರಂಭವೆಂದರೆ ಕೇವಲ ವೇದಮಂತ್ರಗಳನ್ನು ಕಲಿಯುವುದಲ್ಲ, ಇನ್ನಿತರ ವಿದ್ಯೆಗಳನ್ನೂ-ಗಣಿತ, ವಿಜ್ಞಾನ, ಶಸ್ತ್ರವಿದ್ಯೆ, ತರ್ಕ, ಮುಂತಾದ- ಕಲಿಯುವುದಾಗಿತ್ತು. ವೇದ ಎಂಬ ಪದದ ಅರ್ಥ ಜ್ಞಾನ ಎಂದೇ ಹೊರತು ಬೇರೆಯಲ್ಲ. ಗುರುಕುಲಗಳಲ್ಲಿ ಸಕಲವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು. ಶಿಕ್ಷಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆಯುತ್ತಿದ್ದರು. ವೇದಾರಂಭವೆಂದರೆ ಜ್ಞಾನಾರ್ಜನೆಯ ಆರಂಭ ಎಂಬುದೇ ಸಾಮಾನ್ಯ ಅರ್ಥ ಮತ್ತು ಉದ್ದೇಶ. ರಾಮ, ಕೃಷ್ಣ, ಪಾಂಡವರೇ ಮೊದಲಾದವರು ಗುರುಕುಲಗಳಲ್ಲಿ ಶಸ್ತ್ರ-ಶಾಸ್ತ್ರ ಪ್ರವೀಣರಾದ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಗುರುಕುಲಗಳಲ್ಲಿ ಜಾತಿಭೇದವಿರಲಿಲ್ಲ, ಉಚ್ಛ-ನೀಚ ಭಾವನೆಗಳಿರಲಿಲ್ಲ. ರಾಜರ ಮಕ್ಕಳೂ, ಸಾಮಾನ್ಯರ ಮಕ್ಕಳೂ ಒಟ್ಟಿಗೇ ಗುರುಕುಲಗಳಲ್ಲಿ ವಾಸವಿದ್ದು ಸಮಾನಭಾವದಲ್ಲಿ ವಿದ್ಯೆ ಕಲಿಯಬೇಕಿತ್ತು. ಸಮಾಜದ ಋಣದಲ್ಲಿ ನಡೆಯುತ್ತಿದ್ದ ಗುರುಕುಲಗಳಿಗೆ ಶಿಕ್ಷಾರ್ಥಿಗಳು ಭಿಕ್ಷೆ ಸಂಗ್ರಹಿಸಿ ಆಚಾರ್ಯರಿಗೆ ನೀಡುತ್ತಿದ್ದರು. ಶಿಕ್ಷಾರ್ಥಿಗಳು ಶಕ್ತಿ ಮತ್ತು ಆಸಕ್ತಿಗಳಿಗನುಸಾರವಾಗಿ ಶಿಕ್ಷಣ ಪಡೆದು ಪ್ರವೀಣರೆನಿಸಿದಾಗ ಸಮಾವರ್ತನ (ಬೀಳ್ಕೊಡುಗೆ ಕಾರ್ಯಕ್ರಮ) ಸಂಸ್ಕಾರ ನಡೆಯುತ್ತದೆ. ಆಗ ಗುರು ಶಿಷ್ಯರಿಗೆ ವಿಶೇಷವಾಗಿ ಉಪದೇಶಿಸಿ ಸತ್ಪ್ರಜೆಗಳಾಗಲು ಹರಸಿ ಬೀಳ್ಕೊಡುತ್ತಾರೆ. ಗುರುಕುಲದಲ್ಲಿದ್ದಷ್ಟು ಕಾಲವೂ ಗುರು ನೀಡಿದ್ದು ಉಪದೇಶವೇ ಆಗಿದ್ದರೂ, ಸಮಾವರ್ತನ ಕಾಲದಲ್ಲಿ ಅವೆಲ್ಲವನ್ನೂ ಸಾರರೂಪದಲ್ಲಿ ಸಂಗ್ರಹವಾಗಿ ತಿಳಿಸುತ್ತಾರೆ. ಹಾಗೆ ಸ್ನಾತಕರೆನಿಸಿಕೊಂಡ ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿದಾಗ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ, ಸ್ವಸಾಮರ್ಥ್ಯದಲ್ಲಿ ಬದುಕುವ, ಸಮಾಜಕ್ಕೆ ಒದಗುವ ಯಾವುದೇ ಅಪಾಯದ ವಿರುದ್ಧ ಸೆಟೆದುನಿಲ್ಲುವ, ರಕ್ಷಿಸುವ ಸಾಮರ್ಥ್ಯ ಹೊಂದಿರುತ್ತಾರೆ, ಗುರು-ಹಿರಿಯರಿಗೆ ಗೌರವ ತೋರಿಸುವವರಾಗಿರುತ್ತಾರೆ.
     ಬ್ರಿಟಿಷರ ಆಗಮನದೊಂದಿಗೆ ವ್ಯವಸ್ಥಿತವಾಗಿ ಗುರುಕುಲಗಳು ಮುಚ್ಚಲ್ಪಡತೊಡಗಿದವು ಮತ್ತು ಶಿಕ್ಷಣವನ್ನು ಕೇವಲ ಭೌತಿಕ ಅವಶ್ಯಕತೆಗಳನ್ನು ಪೂರೈಸುವ ಸಾಧನವಾಗಿ ಪರಿಗಣಿಸುವ ಶಾಲೆಗಳು ಆರಂಭವಾದವು. ಇಂದಾದರೋ ಅಂತರರಾಷ್ಟ್ರೀಯ ಮಟ್ಟದ ಹೈಟೆಕ್ ಶಾಲೆಗಳು, ಕಾಲೇಜುಗಳು ಎಂಬ ಹಣೆಪಟ್ಟಿಯೊಂದಿಗೆ ಶಿಕ್ಷಣ ಸಂಸ್ಥೆಗಳು ಹಣಗಳಿಕೆಯ ಉದ್ಯಮವಾಗಿವೆ ಮತ್ತು ವಿದ್ಯಾರ್ಥಿಗಳಿಗೆ ಹಣಗಳಿಕೆಯೇ ಜೀವನದ ಪರಮೋದ್ದೇಶ ಎಂದು ಹೇಳಿಕೊಡಲಾಗುತ್ತಿದೆ. ತಳಪಾಯವೇ ಭದ್ರವಿರದಿದ್ದರೆ ಕಟ್ಟಡ ಹೇಗೆ ಭದ್ರವಿದ್ದೀತು? ನೈತಿಕ ಶಿಕ್ಷಣಕ್ಕೆ ಆದ್ಯತೆಯಿಲ್ಲ, ಮಾತೃಭಾಷೆಗೆ, ಭಾರತೀಯ ಭಾಷೆಗಳಿಗೆ ಪ್ರೋತ್ಸಾಹವಿಲ್ಲ. ಇಂಗ್ಲಿಷ್ ಕಲಿಯದಿದ್ದರೆ ಉಳಿಗಾಲವಿಲ್ಲವೆಂಬ ಭಾವನೆಗೆ ಒತ್ತುಕೊಟ್ಟು ಇಂಗ್ಲಿಷನ್ನು ಮತ್ತಷ್ಟು ಭದ್ರಗೊಳಿಸುತ್ತಿದ್ದೇವೆ. ಸ್ವಂತಿಕೆಗೆ ಬೆಲೆ ಕೊಡದ, ಸ್ವಾಭಿಮಾನಕ್ಕೆ ಬೆಲೆ ಕೊಡದ ಶಿಕ್ಷಣ ಪದ್ಧತಿ ಬೇಕೇ ಎಂಬುದು ವಿಚಾರ ಮಾಡಬೇಕಾದ ಸಂಗತಿ.
     ಎಲ್ಲಾ ವ್ಯವಸ್ಥೆಗಳಲ್ಲೂ ಶಿಥಿಲತೆ ಮೂಡುವಂತೆ ವೇದಕಲಿಕೆಯ ವಿಚಾರದಲ್ಲೂ ತಪ್ಪು ಅಭಿಪ್ರಾಯಗಳು ಮೂಡಿದವು, ಸಂಪ್ರದಾಯಸ್ಥರು ಅದನ್ನು ಬಲಗೊಳಿಸಿ, ಅವೈದಿಕ ವಿಚಾರಗಳನ್ನೂ ವೈದಿಕವೆಂಬಂತೆ ಬಿಂಬಿಸತೊಡಗಿದರು. ವೇದಕಲಿಕೆ ಕೇವಲ ಒಂದು ವರ್ಗಕ್ಕೆ, ಅದರಲ್ಲೂ ಪುರುಷರಿಗೆ ಮಾತ್ರ ಎಂಬ ಅಭಿಪ್ರಾಯಕ್ಕೆ ಪುಷ್ಟಿ ಸಿಗತೊಡಗಿತು. ಆದಿಗುರು ಶಂಕರಾಚಾರ್ಯರು ಸಾಧನಾ ಪಂಚಕದಲ್ಲಿ 'ವೇದೋ ನಿತ್ಯಮಧೀಯತಾಂ ತದುತಿತಂ ಕರ್ಮ ಸ್ವನುಷ್ಠೀಯತಾಂ' (ನಿತ್ಯ ವೇದಾಧ್ಯಯನ ಮಾಡಬೇಕು ಮತ್ತು ವೇದೋಕ್ತ ಕರ್ಮಗಳನ್ನು ಅನುಸರಿಸಬೇಕು) ಎಂದಿರುವುದು ನಿರ್ದಿಷ್ಟ ವರ್ಗದವರು, ನಿರ್ದಿಷ್ಟ ಲಿಂಗಿಗಳು ಮಾತ್ರ ವೇದಾಧ್ಯಯನ ಮಾಡಲಿ ಎಂದಲ್ಲ. ಸಾಧನೆ ಮಾಡಬಯಸುವವರೆಲ್ಲರೂ ಮಾಡಬೇಕಾದ ಕಾರ್ಯವಿದು. ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿ ಜ್ಞಾನ ಎಲ್ಲರ ಸಂಪತ್ತು, ವಿಶ್ವದ ಸಂಪತ್ತು, ಅದು ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ಮಹರ್ಷಿ ದಯಾನಂದ ಸರಸ್ವತಿಯವರೇ ಮೊದಲಾದ ಅನೇಕ ಮಹನೀಯರು ಸ್ತುತ್ಯ ಕಾರ್ಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ನಾಲ್ಕು ವೇದಗಳಿಗೆ ಬರೆದ ಭಾಷ್ಯದ ಕನ್ನಡ ಅವತರಣಿಕೆ 20 ಸಂಪುಟಗಳಲ್ಲಿ ಪಂ. ಸುಧಾಕರ ಚತುರ‍್ವೇದಿಯವರ ಪ್ರಧಾನ ಸಂಪಾದಕತ್ವದಲ್ಲಿ ಹಲವಾರು ವರ್ಷಗಳ ಶ್ರಮದ ಫಲವಾಗಿ ಬಿಡುಗಡೆಯಾಗಿದೆ. ಲಭ್ಯ ಸಾಹಿತ್ಯಗಳಲ್ಲಿ ಅತಿ ಪುರಾತನವಾದ ವೇದ ಸಾಹಿತ್ಯದಲ್ಲಿ ಜೀವನಕ್ಕೆ ಬೇಕಾದ ಅತ್ಯಮೂಲ್ಯ ವಿಚಾರಗಳು, ಸತ್ಯ ಪ್ರತಿಪಾದನೆ, ನಿಖರತೆ ಮತ್ತು ಸರ್ವಹಿತ ಬಯಸುವ ಒಳ್ಳೆಯ ವಿಚಾರಗಳಿಗೆ ನೀಡಲಾಗಿರುವ ಒತ್ತು ಸದಾಕಾಲಕ್ಕೆ ಸ್ವಸ್ಥ ಸಮಾಜಕ್ಕೆ ಬೇಕಾದುದಾಗಿದೆ. ವೇದಾಧ್ಯಯನಕ್ಕೆ ಸೂಕ್ತ ಪ್ರೋತ್ಸಾಹ ದೊರಕಿದರೆ ಸ್ವಸ್ಥ ಸಮಾಜಕ್ಕೆ ಉತ್ತಮ ಕೊಡುಗೆ ಆಗುತ್ತದೆ. ಒಳ್ಳೆಯ ವಿಚಾರಗಳು ಯಾರಿಂದ ಬಂದರೂ, ಎಲ್ಲಿಂದ ಬಂದರೂ ಸ್ವೀಕರಿಸಬೇಕು ಅನ್ನುವುದು ವೇದದ ತಿರುಳಾಗಿದೆ. ಈ ಮನೋಭಾವ ಎಲ್ಲರಿಗೂ ಬರಲಿ ಎಂಬದು ಆಶಯ.
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ