ಶಂಕರ ಮತ್ತು ಶಶಿಧರ ಇಬ್ಬರೂ ಸ್ನೇಹಿತರು. ಶಂಕರನಿಗೆ ಶಶಿಧರ ತನಗಿಂತ ಹೆಚ್ಚು ಮುಂದೆ ಬರುತ್ತಿದ್ದಾನೆ ಎಂಬ ಭಾವನೆ ಬಂದು ಒಂದು ರೀತಿಯ ಅಸಹನೆಯಾಗುತ್ತಿತ್ತು. ಶಶಿಧರನಿಗೂ ಶಂಕರನಿಗೆ ಅನಗತ್ಯ ಪ್ರ್ರಾಧಾನ್ಯತೆ ಸಿಗುತ್ತಿದೆಯೆಂದು ಅನ್ನಿಸಿ ಕಿರಿಕಿರಿಯಾಗುತ್ತಿತ್ತು. ಇಬ್ಬರೂ ಪ್ರತ್ಯೇಕವಾಗಿ ದೇವರಲ್ಲಿ ಪ್ರಾರ್ಥಿಸಿದರು. ದೇವರು ಇವರ ಭಕ್ತಿಗೆ ಮೆಚ್ಚಿ ಅವರ ಇಷ್ಟಾರ್ಥದ ಬಗ್ಗೆ ವಿಚಾರಿಸಿದ. ಶಂಕರ ತಾನು ದೊಡ್ಡ ಶ್ರೀಮಂತ ವ್ಯಕ್ತಿಯಾಗಬೇಕು ಎಂದು ಕೇಳಿಕೊಂಡ. ದೇವರು ತಥಾಸ್ತು ಎಂದು ಶಶಿಧರನನ್ನು ವಿಚಾರಿಸಲು ಹೋದ. ಶಶಿಧರ ಶಂಕರನಿಗೆ ಏನು ವರ ಕೊಟ್ಟಿದ್ದರೂ ಅದರ ಎರಡರಷ್ಟು ನನಗೆ ಸಿಗಬೇಕು ಎಂದು ಕೇಳಿಕೊಂಡ. ದೇವರು ಆಗಲೂ ತಥಾಸ್ತು ಎಂದ. ಶಂಕರನಿಗೆ ದೊಡ್ಡ ಬಂಗಲೆ ಬಂದರೆ ಶಶಿಧರನಿಗೆ ಅಂತಹುದೇ ಎರಡು ಬಂಗಲೆಗಳು ಬಂದವು. ಅವನಿಗೆ ಒಂದು ಐಷಾರಾಮಿ ಕಾರು ಇದ್ದರೆ ಇವನಿಗೆ ಎರಡು ಕಾರುಗಳು ಬಂದವು. ತಾನು ಏನು ಬಯಸಿದರೂ ಅದರ ಎರಡರಷ್ಟು ಶಶಿಧರನಿಗೆ ಸಿಗುತ್ತಿರುವುದು ಕಂಡು ಶಂಕರನ ಮತ್ಸರ ಹೆಚ್ಚಾಯಿತು. ಯೋಚಿಸಿ ತನ್ನ ಒಂದು ಕಣ್ಣು ಹೋಗಲಿ ಎಂದು ಕೇಳಿಕೊಂಡ. ತನ್ನ ಒಂದು ಕಣ್ಣು ಹೋದರೆ, ಶಶಿಧರನ ಎರಡು ಕಣ್ಣುಗಳೂ ಹೋದವು. ತನ್ನ ಒಂದು ಕಾಲು ಹೋಗಲಿ ಎಂದು ಕೇಳಿಕೊಂಡಾಗ ತನ್ನ ಒಂದು ಕಾಲು ಹೋದರೂ ಶಶಿಧರನ ಎರಡು ಕಾಲುಗಳೂ ಹೋದದ್ದನ್ನು ಕಂಡು ಖುಷಿಪಟ್ಟ. ಇದು ಕಲ್ಪನೆಯ ಕಥೆಯಾದರೂ ಇದರಲ್ಲಿ ಮನುಷ್ಯನ ಸ್ವಭಾವದ ಚಿತ್ರಣವಿದೆ, ಮತ್ಸರದ ವಿಕೃತ ರೂಪದ ದರ್ಶನವಿದೆ. ಆತ್ಮೀಯರಿಗೇ ದ್ರೋಹ ಬಗೆಯುವಂತೆ ಮಾಡುವ, ಯಾವುದೇ ರೀತಿಯಲ್ಲಿ ಒಳಿತು ಮಾಡದ, ಕೆಡುಕನ್ನೇ ತರುವ ಮನುಷ್ಯನ ಗುಣ ಯಾವುದಾದರೂ ಇದ್ದರೆ ಅದು ಮತ್ಸರವೇ.
ಮತ್ಸರ ಅನ್ನುವುದು ಮಾನವ ಸಂಬಂಧಗಳಲ್ಲಿ ಋಣಾತ್ಮಕ ಚಿಂತನೆಗಳಿಂದ, ಅಭದ್ರತೆಯ ಭಾವನೆಯಿಂದ, ಮುಂದೆ ತಮಗೆ ಹಿನ್ನಡೆಯಾಗಬಹುದು ಎಂಬ ಅನಿಸಿಕೆಯಿಂದ ಉಂಟಾಗುವ ಒಂದು ಮನೋಸ್ಥಿತಿ. ಒಂದು ಮಗು ತನ್ನ ಕೈಯಲ್ಲಿನ ಆಟಿಕೆಗಿಂತ ಇನ್ನೊಂದು ಮಗುವಿನ ಕೈಯಲ್ಲಿನ ಆಟಿಕೆಯ ಬಗೆಗೇ ಆಸಕ್ತಿ ವಹಿಸುತ್ತದೆ ಮತ್ತು ಅದೇ ಬೇಕೆಂದು ಹಟ ಮಾಡುತ್ತದೆ. ಈ ಮತ್ಸರದ ಉತ್ಪನ್ನಗಳೇ ಕೋಪ, ಹತಾಶೆ, ಅಸಹಾಯಕತೆ, ಜಿಗುಪ್ಸೆ, ಇತ್ಯಾದಿಗಳು. ತನ್ನ ದೊಡ್ಡಸ್ತಿಕೆಯನ್ನು ಸಾಧಿಸಲು ಪ್ರತಿಸ್ಪರ್ಧಿ ಎಂದು ಭಾವಿಸುವವನನ್ನು ಹೀಗಳೆಯುವುದು, ಅವನನ್ನು ಕುಬ್ಜಗೊಳಿಸುವ ಕುತಂತ್ರಗಳನ್ನು ಮಾಡುವುದು, ಅವನ ಪ್ರಗತಿಗೆ ಅಡ್ಡಗಾಲು ಹಾಕುವುದು, ಮುಂತಾದವು ಮತ್ಸರದ ಪರಿಣಾಮವೇ ಆಗಿದೆ. ವೃತ್ತಿ, ಪ್ರೇಮ, ಮತ, ಧರ್ಮ, ಸಂಸ್ಕೃತಿ, ರೂಪ, ಐಶ್ವರ್ಯ, ದಾರ್ಢ್ಯತೆ, ಇತ್ಯಾದಿಗಳಲ್ಲಿ ಮತ್ಸರ ತನ್ನ ಕರಿನೆರಳು ಚಾಚುತ್ತದೆ.
ಇಬ್ಬರ ನಡುವೆ ಮೂರನೆಯ ವ್ಯಕ್ತಿಯ ಪ್ರವೇಶ ಪ್ರೇಮ ಮತ್ಸರಕ್ಕೆ ಕಾರಣವಾಗುತ್ತದೆ. ಮೂರನೆಯ ವ್ಯಕ್ತಿಯಿಂದ ತನ್ನ ಪ್ರಾಮುಖ್ಯತೆಗೆ ಧಕ್ಕೆಯಾಗುವ, ನಂಬಿಕೆ ದ್ರೋಹವಾಗುವ ಕಲ್ಪನೆಯೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಅತ್ತೆ, ಸೊಸೆಯರ ನಡುವೆ ವೈಮನಸ್ಯಕ್ಕೆ, ತಮ್ಮನೋ, ತಂಗಿಯೋ ಜನಿಸಿದಾಗ ಮೊದಲ ಮಗುವಿಗೆ ಅದರ ಮೇಲಿನ ಮುನಿಸಿಗೆ, ಗಂಡ-ಹೆಂಡತಿ ಅಥವ ಪ್ರೇಮಿಗಳ ನಡುವಣ ಕಲಹಗಳಿಗೆ ಮತ್ಸರ ಕಾರಣ. ಮತ್ಸರ ಒಮ್ಮೆ ಆವರಿಸಿತೆಂದರೆ ಸದ್ಗುಣಗಳಿಗೆ ಗ್ರಹಣ ಹಿಡಿಯುತ್ತದೆ, ಎಲ್ಲವೂ ತಪ್ಪಾಗಿ ಕಾಣುತ್ತದೆ, ಇನ್ನೊಬ್ಬರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ, ಪರಸ್ಪರರಲ್ಲಿ ದ್ವೇಷ ಭುಗಿಲೇಳುತ್ತದೆ.
ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಮತ್ಸರ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿಬಿಟ್ಟಿತ್ತು. ನಿಜಜೀವನದಲ್ಲೂ ಇಂತಹ ರಾಮಾಯಣ, ಮಹಾಭಾರತಗಳು, ಇತಿಹಾಸದ ನೆರಳುಗಳು ನೋಡಸಿಗುತ್ತವೆ. ಬಹುತೇಕ ಟಿವಿ ಧಾರಾವಾಹಿಗಳಲ್ಲಿ ಮತ್ಸರವೇ ಪ್ರಧಾನ ವಿಷಯ. ಆಸ್ತಿಗಾಗಿ, ಅಂತಸ್ತಿಗಾಗಿ, ಅಧಿಕಾರಕ್ಕಾಗಿ ಯಾರು ಯಾರನ್ನು ಬೇಕಾದರೂ ಕೊಲ್ಲಲು ಮಸಲತ್ತು ಮಾಡಬಹುದು ಎಂಬ ಸಂದೇಶಗಳನ್ನು ಸಾರಲಾಗುತ್ತಿದೆ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ತಂದೆ-ತಾಯಿಯರನ್ನು, ಮಕ್ಕಳನ್ನು, ಕೊನೆಗೆ ಏನೂ ಅರಿಯದ ಹಸು ಕಂದಮ್ಮಗಳನ್ನು ಕೊಲ್ಲಲು ಮಾಡುವ ಮಸಲತ್ತುಗಳನ್ನು, ಸಂಚುಗಳನ್ನು ತೋರಿಸುವ ರೀತಿ ಮತ್ಸರವನ್ನು ವೈಭವೀಕರಿಸುತ್ತಿದೆ. ಇಂತಹ ಋಣಾತ್ಮಕ ಸಂದೇಶಗಳು ಜನಮಾನಸದಲ್ಲಿ ಕುಭಾವನೆಗಳನ್ನು ಮೂಡಿಸುವುದಲ್ಲದೆ, ಸಮಾಜದ ಅಧಃಪತನಕ್ಕೆ ಅಪರೋಕ್ಷವಾಗಿ ಕಾರಣವಾಗುತ್ತಿವೆ.
ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು ಸಹ ಅಪಾಯಕಾರಿಯೇ. ಏಕೆಂದರೆ ಮೇಲೆ ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಒಳಗೊಳಗೇ ಬುಸುಗುಡುತ್ತಿರುತ್ತದೆ. ಮತ್ಸರ ಕೀಳರಿಮೆಯಿಂದ ನರಳುವವರ ಕಾಯಿಲೆ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಅರಸುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ನಮ್ಮನ್ನು ನಾವೇ ಇಷ್ಟಪಡದಿದ್ದರೆ ಬೇರೆಯವರು ಇಷ್ಟಪಡಬೇಕೆಂದು ಹೇಗೆ ಬಯಸುವುದು? ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಇತರರ ಮೇಲೆ ಪರಿಶೋಧನೆಯ ದೃಷ್ಟಿ ಬೀರುವುದನ್ನು ನಿಲ್ಲಿಸಿ ನಮ್ಮೊಳಗೆ ನಾವು ಕಣ್ಣು ಹಾಯಿಸಿಕೊಳ್ಳಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು, ಕಳೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಮತ್ಸರ ನಮ್ಮ ಬೆಳವಣಿಗೆಯನ್ನು ತಿನ್ನುತ್ತಿತ್ತೆಂಬ ಅರಿವು ಬರುವುದು ಆಗಲೇ. ಒಂದು ಮಾತನ್ನು ನೆನಪಿಡಬೇಕು, ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ. ಮತ್ಸರವೆಂಬುದು ಒಳಗಿನ ಕಲ್ಮಶ. ನಿವಾರಿಸಿಕೊಂಡರೆ ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. ವೇದದ ಈ ಕರೆ ನಮ್ಮನ್ನು ಎಚ್ಚರಿಸಲಿ: ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ| ಸೋಮಾ ಋತಸ್ಯ ಧಾರಯಾ|| (ಋಕ್.೯.೬೩.೪) ಅರ್ಥ: ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ