ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಸೆಪ್ಟೆಂಬರ್ 27, 2017

ಆತ್ಮರತಿ


    ನಮ್ಮನ್ನು ನಾವೇ ಹೊಗಳಿಕೊಳ್ಳುವುದಕ್ಕೆ ಕಾರಣವೇನಿರಬಹುದು? ನಾವು ನಿಜವಾಗಿ ಇರುವುದಕ್ಕಿಂತ ಭಿನ್ನವಾಗಿ, ಉತ್ತಮವಾಗಿ ಬಿಂಬಿಸಿಕೊಳ್ಳಲು ಹಾತೊರೆಯುವುದಾದರೂ ಏಕೆ? ಈ ಕುರಿತು ವಿಷಯದ ಆಳಕ್ಕೆ ಹೋದಾಗ ಹೊಳೆಯುವುದೇನೆಂದರೆ, ಪ್ರತಿ ಮಾನವ ಜೀವಿಯ ಅಂತರಾಳದಲ್ಲಿ ಹುದುಗಿರುವ ಉನ್ನತ ಸ್ಥಿತಿಗೆ ಏರುವ ಆಸೆಯೇ ಇದಕ್ಕೆ ಕಾರಣವಾಗಿದೆ. ನಾವು ನಮ್ಮ ಬಗ್ಗೆ ಏನನ್ನು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತೇವೆಯೋ, ಹಾಗೆಯೇ ನೈಜವಾಗಿಯೂ ಇರುವುದಾದರೆ ಎಷ್ಟು ಚೆನ್ನ? ಅದನ್ನು ಉನ್ನತವಾದ ಸ್ಥಿತಿಯೆನ್ನಬಹುದು. ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಆಸೆಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ ಆಸೆ!
     ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯ. ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು. 
     ಈಗ ನಮಗೆ ನಮ್ಮನ್ನು ನಾವೇ ಹೊಗಳಿಕೊಳ್ಳುವುದರ ಕಾರಣ ತೋರುತ್ತಾ ಹೋಗುತ್ತದೆ. ನಾವು ಉತ್ತಮ ಸ್ಥಿತಿಗೆ ಏರುತ್ತೇವೆ, ಏರಬೇಕು ಎಂಬುದು ನಮ್ಮ ಒಳ ಆಸೆ ಎಂಬುದು ತಿಳಿಯಿತಲ್ಲವೇ? ನಾವು ಆ ಸ್ಥಿತಿಗೆ ಪೂರ್ಣವಾಗಿ ತಲುಪಲು ಮಾಡುವ ಪ್ರಯತ್ನಗಳು ಯಾವ ಯಾವುದೋ ಕಾರಣಗಳಿಂದ ಆಗದೇ ಹೋಗಬಹುದು. ಅದು ನಮ್ಮ ದೌರ್ಬಲ್ಯದ ಕಾರಣವಿರಬಹುದು, ಅಡ್ಡಿ-ಅಡಚಣೆಗಳಿರಬಹುದು, ಇನ್ನೇನೇ ಇರಬಹುದು. ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಮಾತ್ರ ಮುಂದೆ ಮುಂದೆ ಓಡುತ್ತಿರುತ್ತದೆ. ನಾವು ಹಿಂದೆಯೇ ಉಳಿದಿರುತ್ತೇವೆ. ನಾವು ಬಯಸಿದ ಸ್ಥಿತಿ ಮತ್ತು ಈಗಿರುವ ಸ್ಥಿತಿಗಳಲ್ಲಿನ ಅಂತರ ಹೆಚ್ಚಾಗುತ್ತಾ ಹೋಗುತ್ತದೆ. ಈ ಅಂತರವನ್ನು ಕಡಿಮೆ ಮಾಡಿಕೊಳ್ಳಬಯಸುವ ಪ್ರಯತ್ನವೇ ಈ ನಮ್ಮನ್ನು ನಾವು ಹೊಗಳಿಕೊಳ್ಳುವುದು! ಉತ್ತರಕುಮಾರನ ಉದಾಹರಣೆ ಕೊಡಬಹುದು. ತಾನು ದೊಡ್ಡ ವೀರನೆನಿಸಿಕೊಳ್ಳಬೇಕೆಂಬುದು ಅವನ ಮನಸ್ಸಿನ ಆಸೆಯಾಗಿದ್ದರೂ, ವಾಸ್ತವಿಕವಾಗಿ ಆತ ಮಹಾಪುಕ್ಕಲ. ಹೆಂಗಳೆಯರ ಮುಂದೆ ತನ್ನ ಪೌರುಷ ಕೊಚ್ಚಿಕೊಳ್ಳುವುದರಲ್ಲಿ ಆತ ನಿರತನಾಗುತ್ತಿದ್ದುದಕ್ಕೆ ಇದೇ ಕಾರಣ. ಉತ್ತರನ ಪೌರುಷ ಒಲೆಯ ಮುಂದೆ ಎಂಬುದು ಪ್ರಸಿದ್ಧ ಗಾದೆಯೇ ಆಗಿದೆ.
     ಹೊಗಳಿಕೊಳ್ಳುವುದು ಒಂದು ರೀತಿಯಲ್ಲಿ ಪ್ರತಿಯೊಬ್ಬರ ಸಹಜ ಗುಣವಾಗಿಬಿಟ್ಟಿದೆ. ಮುಂದೆ ಬರಬೇಕೆಂಬ, ಉನ್ನತಿಯ ಸ್ಥಿತಿ ತಲುಪಬೇಕೆಂಬ ತುಡಿತ ಇದಕ್ಕೆ ಕಾರಣ ಮತ್ತು ಪ್ರೇರಣೆ ಎಂಬುದೂ ತಿಳಿಯಿತು. ಈ ಹೊಗಳಿಕೊಳ್ಳುವುದರ ಸಾಧಕ-ಬಾಧಕಗಳ ಕಡೆಗೂ ಗಮನ ಹರಿಸೋಣ. ಹೇಳಿಕೊಳ್ಳುವ ಸ್ಥಿತಿ ಮತ್ತು ಇರುವ ಸ್ಥಿತಿಗಳಲ್ಲಿ ಅಂತರ ಕಡಿಮೆಯಿದ್ದರೆ ಅದು ಸಹನೀಯವಾಗಿರುತ್ತದೆ. ಅಂತಹವರು ಉನ್ನತ ಸ್ಥಿತಿ ತಲುಪಲು ಶ್ರಮಿಸುತ್ತಿರುತ್ತಾರೆ. ಇರುವುದೇ ಒಂದು ಹೇಳಿಕೊಳ್ಳುವುದೇ ಮತ್ತೊಂದು ಆದಲ್ಲಿ ಅಂತಹವರನ್ನು ಜನರು ನಂಬಲಾರರು. ಇತರರನ್ನು ಮರುಳು ಮಾಡುವ, ಮೋಸ ಮಾಡುವ ಹುನ್ನಾರ ಅದರಲ್ಲಿ ಅಡಗಿರುತ್ತದೆ. ಮರಳಿನ ಮೇಲೆ ಕಟ್ಟುವ ಕಟ್ಟಡ ಒಂದಲ್ಲಾ ಒಂದು ಸಲ ಕುಸಿದೇ ಕುಸಿಯುತ್ತದೆ.
     ಹೊಗಳಿಕೊಳ್ಳುವುದರಲ್ಲೂ ನಾನಾ ರೀತಿಗಳಿವೆ. ಎಲ್ಲದರ ಮೂಲ ಉದ್ದೇಶ ಮಾತ್ರ ಒಂದೇ, ತಮ್ಮನ್ನು ತಾವು ದೊಡ್ಡವರೆಂದು ತೋರಿಸಿಕೊಳ್ಳುವುದು. ಆತ್ಮ ಪ್ರಶಂಸೆ, ಜಂಬ ಕೊಚ್ಚಿಕೊಳ್ಳುವುದು, ಸ್ವಪ್ರಾಮುಖ್ಯತೆ, ಸ್ವಮಹತ್ವ ಕೊಟ್ಟುಕೊಳ್ಳುವುದು, ಸ್ವತಃ ಅಭಿನಂದಿಸಿಕೊಳ್ಳುವುದು, ತನ್ನನ್ನು ತಾನೇ ಮುಂದಕ್ಕೆ ನಿಲ್ಲಿಸಿಕೊಳ್ಳುವುದು, ಸ್ವತೃಪ್ತಿ ಕಾಣುವುದು, ಬೊಗಳೆ ಬಿಡುವುದು, ಆತ್ಮರತಿ, ಅಹಂಕಾರ ಪಡುವುದು, ದುರಭಿಮಾನ ತೋರುವುದು, ಇತರರನ್ನು ನಿಕೃಷ್ಟವಾಗಿ ಕಾಣುವುದು, ಸ್ವಾರ್ಥಿಯಾಗಿರುವುದು, ಸ್ವಕೇಂದ್ರಿತ ಚಟುವಟಿಕೆಗಳಲ್ಲಿ ತೊಡಗುವುದು, ಮುಂತಾದುವೆಲ್ಲಾ ಇದರ ಉತ್ಪನ್ನಗಳೇ ಆಗಿವೆ. ಹೊಗಳಿಕೊಳ್ಳುವವರ ಕಿವಿಗಳಿಗೆ ಅವರದೇ ಮಾತುಗಳು ಸಿಹಿಯಾಗಿ ಕೇಳಿಸುತ್ತವೆ, ಇತರ ಕೇಳುಗರಿಗೆ ಸಿಹಿಯಾಗಿಯಂತೂ ಇರಲಾರದು.
     ವಿಲಿಯಮ್ ಶೇಕ್ಸ್‌ಪಿಯರ್ Sin of self-love possesseth all mine eye’  ಎಂಬ ಸಾಲಿನಿಂದ ಪ್ರಾರಂಭವಾಗುವ ತನ್ನ ಸುನೀತದಲ್ಲಿ(Sonnet)  ಆತ್ಮಪ್ರಶಂಸೆಯ ಬಗ್ಗೆ ಬರೆದಿದ್ದು, ವಿಷಯಕ್ಕೆ ಪ್ರಸ್ತುತವೆನಿಸುವುದರಿಂದ ಅದನ್ನು  ಕನ್ನಡಕ್ಕೆ ಭಾವಾನುವಾದಿಸಿ ಸಹೃದಯರ ಅವಗಾಹನೆಗೆ ಮಂಡಿಸಿರುವೆ:
ಸ್ವಪ್ರೇಮ
ಸ್ವಪ್ರೇಮ ಪಾಪ ಬಂಧಿಯಾಗಿವೆಯೆನ್ನ ನಯನಗಳು,
ನನ್ನಾತ್ಮ ಮತ್ತೆಲ್ಲ ನನ್ನ ಅಂಗ ಅಂಗಗಳು;
ಈ ಪಾಪಕುಂಟೆ ಎಲ್ಲಿಯಾದರೂ ಮದ್ದು,
ಹೃದಯದಾಳದಲಿ ಬೇರೂರಿ ಕುಳಿತಿಹುದು;
ನನಗಿಂತ ಉತ್ತಮರು ಇಲ್ಲವೆಂದೆನಿಸುವುದು,
ಇದಕಿಂತ ಸತ್ಯ, ಇದಕಿಂತ ಮಿಗಿಲು ಇದ್ದೀತೆ;
ನನ್ನ ಬೆಲೆಯದೆಷ್ಟು ಹಿರಿದಾಗಿ ತೋರುವುದು,
ಇತರೆಲ್ಲದರ ಮೊತ್ತವೂ ಆಗಿಹುದು ಕಿರಿದು;
ಕನ್ನಡಿಯು ನನ್ನ ರೂಪವನೆತ್ತಿ ತೋರಿರಲು,
ಸೊರಗಿದ, ಕರಗಿದ, ಬಳಲಿದ ಪೂರ್ವವನು;
ಸ್ವಪ್ರೇಮದ ಭಾವ ವ್ಯತಿರಿಕ್ತ ತೋರಿರಲು.
ಸ್ವಪ್ರೇಮದ ಕೆಡುಕು ಪಿಡುಗಾಗಿ ಕಾಡುವುದು;
ಸ್ವಪ್ರೇಮವೇ, ನಿನ್ನಿಂದ ನನ್ನ ನಾ ಮೆರೆಸಿರುವೆ,
ನಿನ್ನ ಸುಂದರತೆಯಿಂದ ನನ್ನನೇ ಚಿತ್ರಿಸಿರುವೆ.
     ಕೊನೆಯದಾಗಿ ಒಂದು ಮಾತು. ಪ್ರಪಂಚದಲ್ಲಿನ ಯಾವ ಸಂಗತಿಯೇ ಆಗಲಿ, ಹೊಗಳಿಕೊಳ್ಳುವುದೂ ಸೇರಿದಂತೆ, ಒಳ್ಳೆಯದಾಗಲಿ, ಕೆಟ್ಟದ್ದಾಗಲೀ ಆಗಿರದೆ ಸಹಜವಾದದ್ದೇ ಆಗಿದೆ. ಇತಿ-ಮಿತಿಯಲ್ಲಿದ್ದರೆ ಎಲ್ಲವೂ ಹಿತವೇ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ನಾವು ನಿಜವಾಗಿ ಹೇಗಿರುತ್ತೇವೆಯೋ ಅದಕ್ಕಿಂತ ಉತ್ತಮವಾಗಿ ತೋರಿಸಿಕೊಳ್ಳುವುದರ ಹಿನ್ನೆಲೆ ನಾವು ಆ ಉತ್ತಮ ಸ್ಥಿತಿಯಲ್ಲಿ ಇರಬೇಕೆಂದು ಬಯಸುವುದೇ ಆಗಿದೆ. ನಾವು ಬೇರೆಯವರನ್ನು ನಂಬಿಸಬಹುದು. ಆದರೆ ನಮಗೆ ನಾವೇ ಮೋಸ ಮಾಡಿಕೊಳ್ಳಲಾಗುವುದಿಲ್ಲ. ನಮ್ಮ ಬಗ್ಗೆ ನಾವು ಏನು ಕೊಚ್ಚಿಕೊಳ್ಳುತ್ತೇವೆ, ನಿಜವಾಗಿಯೂ ನಾವು ಏನಾಗಿದ್ದೇವೆ ಎಂಬುದು ನಮಗೆ ನಿಜವಾಗಿ ಗೊತ್ತಿರುತ್ತದೆ. ನಾವು ಹೊಗಳಿಕೊಳ್ಳುವ ರೀತಿಯಲ್ಲಿ ನಾವು ಇದ್ದರೆ, ನಮ್ಮ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಇಲ್ಲದಿದ್ದರೆ ಕೊಂಕು ಮಾತುಗಳು ಬಂದೇಬರುತ್ತವೆ. ವಿಶೇಷವಾಗಿ ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ತಮ್ಮ ನಡೆ-ನುಡಿಗಳಲ್ಲಿ ಎಚ್ಚರಿಕೆ ವಹಿಸಬೇಕು. ಸುತ್ತ ಮುತ್ತ ಇರುವವರು ಅವರನ್ನು ಗಮನಿಸುತ್ತಿರುತ್ತಾರೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ನಾವು ಹಾಗೆ, ನಾವು ಹೀಗೆ ಎಂದು ಹೇಳಿಕೊಳ್ಳುವುದಕ್ಕಿಂತ, ಉನ್ನತ ಸ್ಥಿತಿ ತಲುಪಲು ಪ್ರಾಮಾಣಿಕ ಶ್ರಮ ವಹಿಸುವುದೇ ಅತ್ಯುತ್ತಮವಾದುದು. ಈಗ ನಮ್ಮನ್ನೇ ನಾವು ಕೇಳಿಕೊಳ್ಳೋಣ: ನಾವು ಹೇಳಿಕೊಳ್ಳುವಂತೆ ನಾವು ಇದ್ದೇವೆಯೇ? ನಾವು ಎಷ್ಟು ಉತ್ತಮರು?
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ