ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಆಗಸ್ಟ್ 30, 2017

ಸತ್ಸಂಗದ ಮಹತ್ವ


     ಮೂರು ಮಂಗಗಳ ಕೆಟ್ಟದ್ದನ್ನು ನೋಡುವುದಿಲ್ಲ, ಕೆಟ್ಟದ್ದನ್ನು ಕೇಳುವುದಿಲ್ಲ ಮತ್ತು ಕೆಟ್ಟದ್ದನ್ನು ಆಡುವುದಿಲ್ಲ ಎಂಬ ಸಂದೇಶ ಸಾರುವ ಚಿತ್ರವನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ ಇಂದು ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು ನೋಡಿದರೆ, ಕೆಟ್ಟದ್ದನ್ನೇ ತೋರಿಸುತ್ತೇವೆ, ಕೆಟ್ಟದ್ದನ್ನೇ ಕೇಳಿಸುತ್ತೇವೆ ಮತ್ತು ಕೆಟ್ಟದ್ದನ್ನೇ ಪ್ರಸಾರ ಮಾಡುತ್ತೇವೆ ಎಂದು ಹಲವು ಚಾನೆಲ್ಲುಗಳವರು ಸ್ಪರ್ಧೆಗೆ ಇಳಿದಂತೆ ತೋರುತ್ತದೆ. ಪ್ರಸಾರವಾಗುವ ಯಾವುದೇ ಧಾರಾವಾಹಿಯಲ್ಲಿ ಸಂಸಾರ, ಸಮಾಜಗಳನ್ನು ಒಡೆಯುವ, ಹೀನಕೃತ್ಯಗಳನ್ನು ವೈಭವೀಕರಿಸುವ, ದುಷ್ಟ ಶಕ್ತಿಗಳದೇ ಮೇಲುಗೈ ಎಂಬಂತೆ ಬಿಂಬಿಸುವ ಕತೆಗಳೇ ನೂರಕ್ಕೆ ತೊಂಬತ್ತೊಂಬತ್ತರಷ್ಟು ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ಜನರಿಗೂ ಇವತ್ತಲ್ಲಾ ನಾಳೆ ದುಷ್ಟರಿಗೆ ಶಿಕ್ಷೆಯಾಗುತ್ತದೆ ಎಂಬ ನಿರೀಕ್ಷೆಯಲ್ಲೇ ದಿನವೂ ಆ ಧಾರಾವಾಹಿಗಳನ್ನು ನೋಡಿದ್ದೂ ನೋಡಿದ್ದೇ ಅವರಿಗೆ ಬಂದ ಲಾಭ. ಸತಾಯಿಸಿ ಸತಾಯಿಸಿ ನೋಡುಗರಿಗೆ ಹಿಂಸೆ ನೀಡಿ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ತವಕ ಟಿವಿ ಮಾಧ್ಯಮಗಳಿಗೆ! ಬೀದಿಯಲ್ಲಿ ಯಾರೋ ಯಾವಾಗಲೋ ಹಾದರ ಮಾಡಿದರೆ, ಇವರು ದಿನವಿಡೀ, ವಾರವಿಡೀ ಟಿವಿ ಪರದೆಯ ಮೇಲೆ ಹಾದರ ಮಾಡುತ್ತಿರುತ್ತಾರೆ. ಇತ್ತೀಚೆಗೆ ಒಬ್ಬ ಮಂತ್ರಿಯ ಚಪಲ ತೀರಿಕೆಯ ದೃಷ್ಯವನ್ನು ಹೇಸಿಗೆ ಬರುವಷ್ಟು ಕಾಲ, ಗಂಟೆಗಟ್ಟಲೆ, ದಿನಗಟ್ಟಲೆ, ವಾರಗಟ್ಟಲೆ ತೋರಿಸಿದ್ದು ಒಂದು ಸಣ್ಣ ಉದಾಹರಣೆಯಷ್ಟೆ. ಸಂಸಾರದ, ವೈಯಕ್ತಿಕ ವಿಷಯಗಳನ್ನು ಹಾದಿ ರಂಪ, ಬೀದಿ ರಂಪ ಆಗುವಂತೆ ಮಾಡುವ, ವ್ಯಕ್ತಿಗಳ ತೇಜೋವಧೆ ಮಾಡುವ, ನ್ಯಾಯಾಧೀಶರಂತೆಯೇ ವರ್ತಿಸುವ ಇವರ ನಡವಳಿಕೆಗಳಿಗೆ ಅಂಕುಶ ಬೀಳದಿದ್ದರೆ ಸಮಾಜಕ್ಕೆ ಮತ್ತು ದೇಶಕ್ಕೆ ದೊಡ್ಡ ಹಾನಿಯಾಗುವುದರಲ್ಲಿ ಅನುಮಾನವಿಲ್ಲ. ಯಾವುದೇ ಆಗಲಿ, ಅತಿರೇಕವಾದರೆ ಅನಿಷ್ಟ ತಪ್ಪಿದ್ದಲ್ಲ. ನಿಜ ಹೇಳಬೇಕೆಂದರೆ, ಸಮಾಜದಲ್ಲಿ ವಿಕೃತ್ಯಗಳು ಹೆಚ್ಚಲು, ಸಂಸಾರಗಳು ಮತ್ತೆ ಒಂದಾಗಲು ಸಾಧ್ಯವಾಗದಂತೆ ಒಡೆದುಹೋಗಲು ಇವುಗಳೂ ಕಾರಣವಾಗಿವೆ.
     ಮೇಲಿನ ಸಂಗತಿಯನ್ನು ಉಲ್ಲೇಖಿಸಿದ ಕಾರಣ ಕೆಟ್ಟ ಸಂಗತಿಗಳನ್ನು ನೋಡುವುದರಿಂದ, ಕೇಳುವುದರಿಂದ ಮತ್ತು ಆಡುವುದರಿಂದ ಋಣಾತ್ಮಕ ಶಕ್ತಿಗೆ ಪ್ರಚೋದನೆ ಸಿಗುತ್ತದೆ ಮತ್ತು ಇದರಿಂದ ಹಾನಿಯಾಗುವದೇ ಹೊರತು ಒಳಿತಾಗದು ಎಂಬುದನ್ನು ಒತ್ತಿ ಹೇಳುವ ಸಲುವಾಗಿ. ಇದರ ಪ್ರತಿಯಾಗಿ ಒಳ್ಳೆಯ ಸಂಗತಿಗಳನ್ನು ನೋಡುವುದರಿಂದ, ಕೇಳುವುದರಿಂದ ಮತ್ತು ಅಡುವುದರಿಂದ ಧನಾತ್ಮಕ ಶಕ್ತಿಗೆ ಪ್ರಚೋದನೆ ಸಿಗುತ್ತದೆ ಮತ್ತಿ ಇದರಿಂದ ವೈಯಕ್ತಿಕವಾಗಿ, ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಒಳ್ಳೆಯ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ. ಸತ್ಸಂಗಗಳು, ಒಳ್ಳೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ನಡವಳಿಕೆಗಳನ್ನು ಗಮನಿಸಿದರೆ ಅವರಿಗೂ, ಬೇರೆಯವರಿಗೂ ಇರುವ ವ್ಯತ್ಯಾಸ ಗುರುತಿಸುವುದು ಕಷ್ಟವಾಗದು. ಯಾವುದೇ ಕಾರಣದಿಂದ, ಟೈಮ್ ಪಾಸ್ ಮಾಡುವ ಉದ್ದೇಶದ ಕಾರಣವೂ ಸೇರಿದಂತೆ, ಸತ್ಸಂಗ ಅಥವ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ ಅದರಿಂದ ಲಾಭವಾಗಬಹುದೇ ಹೊರತು ಹಾನಿಯಾಗದು. ಸತ್ಸಂಗದ ಮಹತ್ವ ಇರುವುದು ಇಲ್ಲಿಯೇ!
     ಸತ್ಸಂಗ ಎಂಬದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಸತ್ಯದೊಡನೆ ಇರುವುದು, ಸತ್ಯಕ್ಕಾಗಿ ಒಗ್ಗೂಡುವುದು ಅರ್ಥಾತ್ ಸತ್ಯದ ಸಂಗ ಮಾಡುವುದು ಎಂದಾಗುತ್ತದೆ. ವ್ಯಾವಹಾರಿಕ ಬಳಕೆಯಲ್ಲಿ ಸದ್ವಿಚಾರಗಳನ್ನು ಪ್ರೇರಿಸುವ, ಪ್ರಸರಿಸುವ ಸಜ್ಜನರ ಕೂಟವೇ ಸತ್ಸಂಗ. ಅದು ಒಟ್ಟಿಗೆ ಭಜನೆ ಮಾಡುವುದಿರಬಹುದು, ಉಪನ್ಯಾಸಗಳನ್ನು ಕೇಳುವುದಿರಬಹುದು, ವಿಚಾರ ಕಮ್ಮಟವಿರಬಹುದು, ಧಾರ್ಮಿಕ/ಸಾಂಸ್ಕೃತಿಕ/ಸಾಹಿತ್ಯಿಕ ವಿಷಯಗಳ ಕಾರ್ಯಕ್ರಮಗಳಿರಬಹುದು, ಒಟ್ಟಾರೆಯಾಗಿ ಧನಾತ್ಮಕ ಅಂಶಗಳಿಗೆ ಒತ್ತು ಕೊಡುವ ಯಾವುದೇ ಚಟುವಟಿಕೆಗಳನ್ನು ಸತ್ಸಂಗದ ವ್ಯಾಪ್ತಿಯಲ್ಲಿ ತರಬಹುದು.
     ಸತ್ಸಂಗದ ಪೂರ್ಣ ಲಾಭ ಸಿಗಬೇಕೆಂದರೆ ಬಾಗಿಲ ಬಳಿಯಲ್ಲಿಯೇ ನಮ್ಮ ದಿನನಿತ್ಯದ ಚಿಂತೆಗಳು, ಮನದಲ್ಲಿ ಮೂಡುವ ವಿಚಾರಗಳು, ಹಳೆಯ ಎಲ್ಲಾ ಸಂಗತಿಗಳನ್ನು ಮರೆತು ಒಬ್ಬ ಹೊಸ ವಿದ್ಯಾರ್ಥಿಯಂತೆ, ಏನೂ ಗೊತ್ತಿಲ್ಲದವರಂತೆ, ಹೊಸದಾಗಿ ತಿಳಿಯಲು ಉತ್ಸುಕನಾಗಿ ಒಳಪ್ರವೇಶಿಸುವುದು ಉತ್ತಮ. ಯಾವಾಗಲೂ ಹೊಸಬರಂತೆ ಮತ್ತು ಹೊಸಬರಂತೆಯೇ ಇರಲು ಅಭ್ಯಾಸ ಮಾಡಿಕೊಂಡರೆ ಉತ್ತಮ ಅನುಭವ ನಮ್ಮದಾಗುವುದು. ಸತ್ಸಂಗದಲ್ಲಿ ಸಮಾನ ಮನಸ್ಕರು ಒಂದು ಸಮಾನ ಧನಾತ್ಮಕ ವಿಷಯದ ಸಲುವಾಗಿ ಒಟ್ಟುಗೂಡುತ್ತಾರೆ. ಈ ರೀತಿಯ ಒಟ್ಟುಗೂಡುವಿಕೆಯೇ ಪರಿಣಾಮಕಾರಿಯಾಗಿರುತ್ತದೆ. ಸುಮ್ಮನೆ ಸಮಯ ಕಳೆಯಲು ಬರುವವರಿಂದಲೂ ಉಪಯೋಗವಿದೆ. ಕನಿಷ್ಠ ಸತ್ಸಂಗ ನಡೆಯುವ ಒಂದು, ಒಂದೂವರೆ ಗಂಟೆಯವರೆಗಾದರೂ ಅವರು ಋಣಾತ್ಮಕ ವಿಷಯಗಳಿಂದ ದೂರವಿರುತ್ತಾರಲ್ಲಾ! ಅಲ್ಲಿ ನಡೆಯುವ ಪ್ರವಚನ, ಕಾರ್ಯಕ್ರಮ, ಭಜನೆ, ಇತ್ಯಾದಿಗಳಿಂದ ಒಂದು ಅಲೌಕಿಕ, ಸಂತಸಕರ, ಹಿತಕರ ತರಂಗಗಳು ಉಂಟಾಗುತ್ತವೆ. ಈ ತರಂಗಗಳು ಅಲ್ಲಿ ಸೇರಿದವರ ಮೇಲೆ ಒಳ್ಳೆಯ ಪ್ರಭಾವ ಬೀರಿ ಆನಂದವನ್ನುಂಟುಮಾಡುತ್ತವೆ. ಒಳ್ಳೆಯ ವಿಚಾರಗಳ ಕುರಿತು ಯೋಚಿಸುವಂತೆ, ಒಳ್ಳೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಅಲ್ಲಿ ಪ್ರೇರೇಪಣೆ ಸಿಗುತ್ತದೆ. ಸತ್ಸಂಗದ ಯಶಸ್ಸು ಇರುವುದು ಇಲ್ಲಿಯೇ!
     ಆದಿ ಶಂಕರಾಚಾರ್ಯರ ಭಜಗೋವಿಂದಮ್ ಸ್ತೋತ್ರದ ಒಂಬತ್ತನೆಯ ಶ್ಲೋಕ ಹೀಗಿದೆ:
ಸತ್ಸಂಗತ್ವೇ ನಿಸ್ಸಂಗತ್ವಮ್ ನಿಸ್ಸಂಗತ್ವೇ ನಿರ್ಮೋಹತ್ವಮ್
ನಿರ್ಮೋಹತ್ವೇ ನಿಶ್ಚಲತತ್ತ್ವಮ್ ನಿಶ್ಚಲತತ್ವೇ ಜೀವನ್ಮುಕ್ತಿಃ||
     ಉತ್ತಮರಾದ ವಿದ್ವಜ್ಜನರ ಸಹವಾಸದಿಂದ ಒಬ್ಬ ವ್ಯಕ್ತಿ ಎಲ್ಲಾ ರೀತಿಯ ಬಂಧನಗಳಿಂದ ಮುಕ್ತನಾಗುತ್ತಾನೆ, ಈ ರೀತಿಯಾಗಿ ಭ್ರಮೆಗಳಿಂದ ಹೊರಬಂದವನು ತಪ್ಪುದಾರಿಯಲ್ಲಿ ಹೋಗುವದಿಲ್ಲ, ಸರಿದಾರಿಯಲ್ಲೇ ನಡೆಯುತ್ತಾನೆ. ಈ ನಿರ್ಮೋಹತ್ವದಿಂದ ಮನಸ್ಸು ಚಂಚಲವಾಗುವುದಿಲ್ಲ, ಪ್ರಾಪಂಚಿಕ ಆಕರ್ಷಣೆಗಳಿಂದ ವಿಚಲಿತಗೊಳ್ಳುವುದಿಲ್ಲ. ಈ ಗುಣದಿಂದಾಗಿ ಮುಕ್ತಿಯನ್ನು ಸಾಧಿಸುತ್ತಾನೆ ಎಂಬುದು ಈ ಶ್ಲೋಕದ ಅರ್ಥ. ಸತ್ಸಂಗದ ಉದ್ದೇಶ ಅರ್ಥಪೂರ್ಣವಾಗಿ, ಸಮರ್ಥವಾಗಿ ಈ ಶ್ಲೋಕದಲ್ಲಿ ಚುಟುಕಾಗಿ ಬಿಂಬಿತಗೊಂಡಿದೆ.
     ಈ ವೇದಮ್ರಂತ್ರದ ಆಶಯವೂ ಇದೇ ಆಗಿದೆ: ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ಂ ಶೃಣುಯಾಮ ಶರದಃ ಶತಂ ಪ್ರಬ್ರವಾಮ ಶರದಃ ಶತಮದೀನಾಃ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್|| (ಯಜು.೩೬.೨೪.) ಅರ್ಥ: ಆ ಪರಮಾತ್ಮನ ಕೃಪೆಯಿಂದ ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ನೋಡುತ್ತಿರೋಣ, ನೂರು ವರ್ಷಗಳ ಕಾಲ (ಒಳ್ಳೆಯ ರೀತಿಯಲ್ಲಿ) ಜೀವಿಸೋಣ, ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ಕೇಳುತ್ತಿರೋಣ, ನೂರು ವರ್ಷಗಳ ಕಾಲ ದಾಸ್ಯತನಕ್ಕೆ ಒಳಪಡದೆ ಸ್ವತಂತ್ರರಾಗಿ, ಸ್ವಾಭಿಮಾನಿಗಳಾಗಿ ಬಾಳೋಣ ಮತ್ತು ಈ ರೀತಿಯಾಗಿ ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸೋಣ.
     ಮನುಷ್ಯ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳ ಮಿಶ್ರಣವಾಗಿದ್ದಾನೆ. ನಾವು ಸೇವಿಸುವ ಆಹಾರಕ್ಕೆ ತಕ್ಕಂತೆ ನಮ್ಮ ಸ್ವಬಾವ ರೂಪಿತವಾಗುತ್ತದೆ. ಇಲ್ಲಿ ಆಹಾರವೆಂದರೆ ಕೇವಲ ತಿನ್ನುವುದು ಮಾತ್ರವಲ್ಲ, ನೋಡುವುದು, ಕೇಳುವುದು, ಆಡುವುದು, ಸ್ಪರ್ಷಿಸುವುದು, ಇತ್ಯಾದಿಗಳೂ ಸೇರುತ್ತವೆ. ನಾವು ಒಳ್ಳೆಯವರಾಗುವುದು ಅಥವ ಕೆಟ್ಟವರಾಗುವುದು, ಅರ್ಥಾತ್ ಸಮಾಜಕ್ಕೆ ಕಂಟಕರಾಗುವುದು ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ ಮತ್ತು ಅದು ನಮ್ಮ ಕೈಯಲ್ಲೇ ಇದೆ. ವಿಚಾರ ಮಾಡೋಣ.
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ