ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಆಗಸ್ಟ್ 16, 2017

ನಮ್ಮ ದೇವಸ್ಥಾನ


     ದೇವಸ್ಥಾನ, ಮಠ, ಚರ್ಚು, ಮಸೀದಿ ಇತ್ಯಾದಿಗಳ ಮೂಲ ಉದ್ದೇಶವಾದರೂ ಏನಿರಬಹುದು? ದೇವಸ್ಥಾನವೆಂದರೆ ದೇವರು ಇರುವ ಸ್ಥಳ ಎಂಬ ಕಲ್ಪನೆಗೆ ಹೆಚ್ಚು ಒತ್ತು ಬಂದಿರುವುದು ಎಷ್ಟು ಸರಿ? ವೇದಕಾಲ ಎಂದು ಪರಿಗಣಿಸುವ ಸಮಯದ ಆರಂಭದಲ್ಲಿ ದೇವಸ್ಥಾನಗಳಿರಲಿಲ್ಲ. ಆಗ ದೇವರಿಗೆ ಯಜ್ಞ, ಹೋಮ, ಹವನಗಳನ್ನು ಮಾಡುತ್ತಾ ಅಗ್ನಿಯ ಮೂಲಕವಾಗಿ ಹವಿಸ್ಸು ಅರ್ಪಿಸುವುದು ಸಾಮಾನ್ಯವಾದ ಕ್ರಮವಾಗಿತ್ತು. ಈಗಲೂ ಈ ಕ್ರಿಯೆಗಳು ನಡೆಯುತ್ತಿವೆ. ಬೌದ್ಧಧರ್ಮದ ಉಗಮದ ಸಂದರ್ಭದಲ್ಲಿ ದೇವಸ್ಥಾನಗಳ ನಿರ್ಮಾಣ, ವಿಗ್ರಹಪೂಜೆಗಳಿಗೆ ಆದ್ಯತೆ ಸಿಕ್ಕಿತು. ಅದು ಈಗ ಉಚ್ಛ್ರಾಯ ಸ್ಥಿತಿಯಲ್ಲಿದೆ. ವಿಗ್ರಹಾರಾಧನೆಯನ್ನು ಒಪ್ಪದ ಮುಸ್ಲಿಮರೂ ಮಸೀದಿಗಳನ್ನು ಕಟ್ಟುತ್ತಾರೆ. ಏಕದೇವಾರಾಧನೆ ಮಾಡುವ ಕ್ರಿಶ್ಚಿಯನರೂ ಚರ್ಚುಗಳನ್ನು ನಿರ್ಮಿಸುತ್ತಾರೆ. ಬಹುದೈವಾರಾಧಕರಾದ ಹಿಂದೂಗಳೂ ಮಂದಿರಗಳ ನಿರ್ಮಾಣ ಮಾಡುತ್ತಾರೆ. ಅವರು ಬಹುದೇವಾರಾಧಕರಾದರೂ ದೇವರು ಒಬ್ಬನೇ, ಅವನನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ ಎಂಬುದನ್ನು ಒಪ್ಪುವುದು ವಿಶೇಷವಾಗಿದೆ. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನರು ನಿರ್ಮಿಸುವ ಮಂದಿರ, ಮಸೀದಿ, ಚರ್ಚುಗಳಲ್ಲಿ  ಒಂದು ಸಮಾನವಾದ ಅಂಶವಿದೆ. ಅದೆಂದರೆ ಇವೆಲ್ಲವೂ ದೇವರನ್ನು ಆರಾಧಿಸುವ ಸ್ಥಳಗಳಾಗಿರುವುದು.
     ದೇವಾಲಯಗಳೆಂದರೆ ದೇವರು ವಾಸಿಸುವ ಸ್ಥಳ ಎಂಬುದು ತಪ್ಪು ಗ್ರಹಿಕೆ. ದೇವರು ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತ ಎಂದಿರುವಾಗ ಅವನು ಒಂದು ಪುಟ್ಟ ಸ್ಥಳದಲ್ಲಿ ಮಾತ್ರ ಇರುತ್ತಾನೆ ಎಂಬುದು ಸರಿಯಲ್ಲ. ವಾಸ್ತವವಾಗಿ ದೇವಾಲಯಗಳು ಸರ್ವಶಕ್ತ ದೇವರನ್ನು ಕುರಿತು ಧ್ಯಾನಿಸುವ, ಪೂಜಿಸುವ, ಗೌರವಿಸುವ ಸ್ಥಳಗಳಷ್ಟೇ ಆಗಿವೆ. ಹಿಂದೂಗಳು ತಮ್ಮ ಮನೆಗಳಲ್ಲಿಯೂ ದೇವರನ್ನು ಆರಾಧಿಸಲು ಒಂದು ಸ್ಥಳವನ್ನು ನಿಗದಿಸಿ ಭಕ್ತಿಭಾವನೆಗಳಿಂದ ನಡೆದುಕೊಳ್ಳುತ್ತಾರೆ. ದೇವರ ವಿಗ್ರಹ, ಫೋಟೋಗಳನ್ನಿಟ್ಟು ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುತ್ತಾರೆ. ಪೂಜೆ ಮಾಡುತ್ತಾರೆ. ಮುಸ್ಲಿಮರು ಮತ್ತು ಕ್ರಿಶ್ಚಿಯನರು ನಿಗದಿತ ಅವಧಿ, ದಿನಗಳಲ್ಲಿ ಮಸೀದಿ, ಚರ್ಚುಗಳಿಗೆ ಭೇಟಿ ಕೊಡುವುದು ಕಡ್ಡಾಯವಾಗಿರುವಂತೆ, ಹಿಂದೂಗಳಿಗೆ ಅಂತಹ ಕಡ್ಡಾಯ ಸಂಪ್ರದಾಯಗಳಿಲ್ಲ. ಅವರು ಮನೆಯಲ್ಲೇ ಪೂಜೆ, ಪುನಸ್ಕಾರಗಳನ್ನು ಸಲ್ಲಿಸುತ್ತಾರೆ ಮತ್ತು ವಿಶೇಷ ಹಬ್ಬ, ಹರಿದಿನ, ಶುಭ ಸಂದರ್ಭಗಳಲ್ಲಿ ದೇವಸ್ಥಾನಗಳಿಗೆ ಹೋಗುತ್ತಾರೆ. ನಿಯಮಿತವಾಗಿ ದೇವಸ್ಥಾನಗಳಿಗೆ ಜನರು ಬರಲೆಂಬ ಕಾರಣದಿಂದ ದೇವಸ್ಥಾನಗಳಲ್ಲಿ ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ ಇತ್ಯಾದಿ ಏರ್ಪಡಿಸುವುದು ಈಗ ರೂಢಿಯಾಗಿ, ಸಂಪ್ರದಾಯವಾಗಿ ಬೆಳೆದುಬರುತ್ತಿದೆ.
     ದೇವಸ್ಥಾನಗಳು ಜನರು ಒಂದೆಡೆ ಸೇರುವ, ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳುವ ಕೇಂದ್ರಗಳಾಗಿ ರೂಪುಗೊಳ್ಳುತ್ತಾ ಹೋದವು. ಪ್ರಾರಂಭದಲ್ಲಿ ಸಾಮಾನ್ಯವಾಗಿ ಊರಿನ ಪ್ರಧಾನ ಸ್ಥಳಗಳಲ್ಲಿ, ವಿಶೇಷವಾಗಿ ನದಿತಟಗಳಲ್ಲಿ, ಬೆಟ್ಟ-ಗಡ್ಡಗಳ ಮೇಲ್ಭಾಗದಲ್ಲಿ, ಸಮುದ್ರದ ದಡದ ಹತ್ತಿರದಲ್ಲಿ ನಿರ್ಮಿಸಲ್ಪಟ್ಟಿರುವುದನ್ನು ಗಮನಿಸಬಹುದು. ಈಗಂತೂ ಎಲ್ಲೆಂದರೆ ಅಲ್ಲಿ ಮಂದಿರ, ಮಸೀದಿ, ಚರ್ಚುಗಳು ತಲೆಯೆತ್ತುತ್ತಿವೆ. ರಸ್ತೆ ಬದಿಗಳಲ್ಲಿ, ಗಿಡಮರಗಳ ಕೆಳಗೆ, ಹೊಸ ಬಡಾವಣೆಗಳಲ್ಲಿ, ಪ್ರತಿ ಬಡಾವಣೆ, ಮೊಹಲ್ಲಾಗಳಲ್ಲಿ ಈ ಕಟ್ಟಡಗಳಿವೆ. ಜನರಿಗೆ ದೇವರ ಮೇಲಿನ ಭಕ್ತಿ ಜಾಸ್ತಿಯಾಯಿತೋ ಎಂಬಂತೆ ಪೈಪೋಟಿಯಲ್ಲಿ ಮಂದಿರ, ಮಸೀದಿ, ಚರ್ಚುಗಳು ನಿರ್ಮಾಣವಾಗುತ್ತಿವೆ. ಹಲವು ಸಲ ಇವು ಶಾಂತಿ, ಸೌಹಾರ್ದಗಳ ಕದಡುವಿಕೆಗೂ ಕಾರಣವಾಗಿವೆ.
     ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಮುಖವಾಗಿ ೬ ಭಾಗಗಳನ್ನು ಗುರುತಿಸಬಹುದು. ಗೋಪುರ, ಗರ್ಭಗೃಹ, ಪ್ರಾಂಗಣ, ಮುಂಭಾಗ, ಪ್ರದಕ್ಷಿಣೆ ಬರುವ ಸ್ಥಳ ಮತ್ತು ಕಲ್ಯಾಣಿ - ಇವೇ ಆ ಆರು ಭಾಗಗಳು. ಗೋಪುರಗಳು ಸಾಮಾನ್ಯವಾಗಿ ದೇವಸ್ಥಾನದ ವಿಸ್ತೀರ್ಣವನ್ನು ಅವಲಂಬಿಸಿ ಕೆತ್ತನೆಯ ಶಿಲ್ಪಗಳನ್ನು ಒಳಗೊಂಡಂತೆ ಎತ್ತರವಾಗಿರುತ್ತವೆ. ಗರ್ಭಗೃಹಗಳಲ್ಲಿ ದೇವರ ವಿಗ್ರಹ, ಮೂರ್ತಿಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಇಲ್ಲಿಗೆ ಸಾಮಾನ್ಯವಾಗಿ ಅರ್ಚಕರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶವಿರುವುದಿಲ್ಲ. ಗರ್ಭಗೃಹದ ಮುಂದಿನ ಸಭಾಂಗಣದಲ್ಲಿ ಜನರು ದೇವರಿಗೆ ಸಲ್ಲುವ ಪೂಜೆ, ಇತ್ಯಾದಿಗಳನ್ನು ವೀಕ್ಷಿಸಬಹುದಾಗಿರುತ್ತದೆ. ಗರ್ಭಗುಡಿಯ ಸುತ್ತಲೂ ಮತ್ತು ದೇವಸ್ಥಾನದ ಹೊರಭಾಗದಲ್ಲೂ ಅವಕಾಶವಿದ್ದರೆ ಭಕ್ತರು ಪ್ರದಕ್ಷಿಣೆ ಮಾಡುವ ಮಾರ್ಗವಿರುತ್ತದೆ. ಸಮೀಪದಲ್ಲಿ ಒಂದು ನೀರಿನ ಕೊಳ(ಕಲ್ಯಾಣಿ) ಇರುತ್ತದೆ. ಅಲ್ಲಿಯ ನೀರನ್ನು ದೇವಸ್ಥಾನದಲ್ಲಿ ಪೂಜೆಗೆ ಮತ್ತು ಸ್ವಚ್ಛತೆಯ ಸಲುವಾಗಿ ಬಳಸಿಕೊಳ್ಳುತ್ತಾರೆ. ಈಗ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನಿರ್ಮಾಣವಾಗುತ್ತಿರುವ ಮಂದಿರಗಳಲ್ಲಿ ಇವೆಲ್ಲವೂ ಇರುತ್ತದೆ ಎನ್ನಲಾಗುವದಿಲ್ಲ.
     ಮಾನವನ ಉತ್ಕರ್ಷದಲ್ಲಿ ಜ್ಞಾನ, ಕರ್ಮ, ಉಪಾಸನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಉಪಾಸನೆ ಅರ್ಥಾತ್ ದೇವರ ಕುರಿತ ಅರಿವು, ಚಿಂತನೆ, ಧ್ಯಾನಗಳಿಗಾಗಿ ದೇವಸ್ಥಾನಗಳು ಆಶ್ರಯತಾಣಗಳಾಗಬೇಕು. ಏಕಾಂತದ ಸ್ಥಳಗಳು, ಪ್ರಶಾಂತವಾದ ಪರಿಸರ ಉಪಾಸನೆಗೆ ಸೂಕ್ತ. ಮನೆಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಇಂತಹ ವಾತಾವರಣ ಸಿಗಲಾರದಾಗಿದ್ದು ದೇವಸ್ಥಾನಗಳಲ್ಲಾದರೂ ಇದಕ್ಕೆ ಅವಕಾಶವಿರಬೇಕು. ಇಂದು ದೇವಸ್ಥಾನಗಳು ವ್ಯಾವಹಾರಿಕ ಕೇಂದ್ರಗಳಂತೆ ಆಗಿವೆ. ಪ್ರವೇಶಕ್ಕೆ ಹಣ, ಹಣ್ಣು-ಕಾಯಿ ನೈವೇದ್ಯಕ್ಕೆ ಹಣ, ವಿವಿಧ ರೀತಿಯ ಪೂಜೆಗಳಿಗೆ ವಿವಿಧ ರೀತಿಯ ಶುಲ್ಕಗಳನ್ನು ನಿಗದಿಸಿ ಫಲಕಗಳನ್ನು ಪ್ರದರ್ಶಿಸಿರುತ್ತಾರೆ. ದೇವಸ್ಥಾನಗಳ ನಿರ್ವಹಣೆಗೆ. ಅರ್ಚಕರ ಮತ್ತು ಇತರ ಪರಿಚಾರಕರ ಸಂಬಳ, ಇತ್ಯಾದಿಗಳಿಗಾಗಿ ಇದು ಅಗತ್ಯವಿರಬಹುದು. ಕೋಟಿಗಟ್ಟಲೆ ಆದಾಯವಿರುವ ಶ್ರೀಮಂತ ದೇವಸ್ಥಾನಗಳು ಇರುವಂತೆ, ದೇವರಿಗೆ ದೀಪ ಹಚ್ಚಲು ಎಣ್ಣೆಗೂ ಕಷ್ಟವಿರುವ ದೇವಸ್ಥಾನಗಳೂ ಇವೆ. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಜನರು ಶ್ರೀಮಂತ ದೇವಸ್ಥಾನಗಳನ್ನೇ ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ. ಅಲ್ಲಿ ಸೇರುವ ಜನರ ಗಿಜಿ ಗಿಜಿ, ನೂಕುನುಗ್ಗಲುಗಳನ್ನು ನೋಡಿದರೆ ವ್ಯವಧಾನದಿಂದ ದೇವರಿಗೆ ಕೈಮುಗಿಯುವುದೂ ಕಷ್ಟವಾಗಿರುತ್ತದೆ. ಆದರೂ ಜನರು ಅಂತಹ ದೇವಸ್ಥಾನಗಳಿಗೆ ಹೋಗಿ ಧನ್ಯರಾದೆವೆಂದುಕೊಳ್ಳುತ್ತಾರೆ.
     ಉಪಾಸನೆಗೆ ನೆರವಾಗಬೇಕಾದ ಹೆಚ್ಚಿನ ದೇವಾಲಯಗಳು ಜನರನ್ನು ಆಧ್ಯಾತ್ಮಿಕತೆಗೆ ಪ್ರೇರಿಸುವ ಬದಲಿಗೆ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದರೆ ಸಾಕು, ಒಳ್ಳೆಯದಾಗುತ್ತದೆ ಎಂಬುದಕ್ಕೆ ಒತ್ತು ಕೊಡುತ್ತಿವೆ. ಕರ್ಮ ಸಿದ್ಧಾಂತಕ್ಕೆ, ವೇದದ ಆಶಯಗಳಿಗೆ ಇದು ವಿರುದ್ಧವಾಗಿದೆ. 'ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ| ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ||'  (ಅಥರ್ವ.೧೨.೩.೪೮) ದೇವರ ನ್ಯಾಯವಿಧಾನದಲ್ಲಿ ಯಾವ ದೋಷವೂ ಇಲ್ಲ. ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ಒಡಕಿಲ್ಲದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ಮಾಡಿದ್ದುಣ್ಣೋ ಮಹರಾಯ! ನಮಗೆ ಒಳ್ಳೆಯದಾಗಬೇಕೆಂದರೆ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕಷ್ಟೆ! ಹಲವರ ತಲೆ ಒಡೆದು ಅನ್ಯಾಯ ಮಾರ್ಗದಲ್ಲಿ ಹಣ ಸಂಪಾದಿಸಿ ದೇವರ ವಿಗ್ರಹಕ್ಕೆ ಚಿನ್ನದ ಆಭರಣಗಳನ್ನು ಮಾಡಿಸಿಕೊಟ್ಟರೆ ಪಾಪ ಪರಿಹಾರವಾಗುವುದಾದರೆ ಎಲ್ಲರೂ ಈ ಮಾರ್ಗವನ್ನೇ ಆರಿಸಿಕೊಂಡಾರು!
     ಭಕ್ತಿ, ಪೂಜೆ ಇತ್ಯಾದಿ ಹೆಸರುಗಳಿರುವ ಉಪಾಸನೆಯ ಉದ್ದೇಶವೆಂದರೆ ಮಾನವ ತನ್ನ ಚಿತ್ತವನ್ನು ಬಾಹ್ಯ ವಿಷಯಗಳಿಂದ ಹೊರತಂದು, ಏಕಾಗ್ರಗೊಳಿಸಿ ದೇವರ ಸಾಮೀಪ್ಯವನ್ನು ಅನುಭವಿಸಿ ಸಿಗುವ ಆನಂದವನ್ನು ಪಡೆಯುವ ಕ್ರಿಯೆಯಾಗಿದೆ. ಇದಕ್ಕೆ ತಕ್ಕಂತೆ ದೇವಾಲಯಗಳಲ್ಲಿ ಧ್ಯಾನ ಮಾಡಲು ಅವಕಾಶವಿರುವ ಧ್ಯಾನಮಂದಿರಗಳು, ಕುಟೀರಗಳ ಅಗತ್ಯವಿರುತ್ತದೆ. ಗೌಜು, ಗದ್ದಲಗಳಿಗಿಂತ ಶಾಂತತೆ, ನಿಶ್ಶಬ್ದತೆಗಳಿಗೆ ಆದ್ಯತೆ ಇರಬೇಕು. ವೇದಮಂತ್ರಗಳು, ಧಾರ್ಮಿಕ ಗ್ರಂಥಗಳ ಅಧ್ಯಯನ, ಕಲಿಕೆ, ಚಿಂತನ, ಮಂಥನಗಳಿಗೆ ಅವಕಾಶ ಮಾಡಿಕೊಡಬೇಕಿರುತ್ತದೆ. ಈ ತತ್ವ ಚರ್ಚು, ಮಸೀದಿಗಳಿಗೂ ಅನ್ವಯವಾಗುತ್ತದೆ. ಬೈಬಲ್ಲು, ಕುರಾನುಗಳ ಅಧ್ಯಯನಕ್ಕೆ ಅಲ್ಲಿ ಆದ್ಯತೆ ಸಿಗಬೇಕಿರುತ್ತದೆ. ನಾವು ತಿರುಳನ್ನು ಅವಗಣಿಸಿ, ಸಿಪ್ಪೆಗೆ ಮಹತ್ವ ಕೊಡುತ್ತಿದ್ದೇವೆ. ತಿರುಳಿನ ರಕ್ಷಣೆಗೆ ಸಿಪ್ಪೆ ಇರಬೇಕು, ಆದರೆ ಸಿಪ್ಪೆಯೇ ಪ್ರಧಾನವಾಗಬಾರದು. ದೇವಾಲಯಗಳು ಸಾಧನಾಪಥದ ಮೆಟ್ಟಲುಗಳೇ ಹೊರತು ಅವೇ ಗಮ್ಯವಲ್ಲ. ಬಸವಣ್ಣನವರು ಹೇಳಿದಂತೆ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ ಎಂಬುದರ ಒಳಾರ್ಥವೂ ಇದೇ ಆಗಿದೆ. ಪರಮಾತ್ಮನ ನಿರ್ಮಿತಿಯಾದ ಜೀವಿಯ ಶರೀರವೆಂಬ ನವರಸಗಳ ದೇಗುಲವನ್ನು ಸ್ವಚ್ಛ, ಸುಂದರವಾಗಿರಿಸಿಕೊಂಡರೆ ಅಲ್ಲಿ ಸ್ವತಃ ಪರಮಾತ್ಮನೇ ಬಂದು ನೆಲೆಸುತ್ತಾನೆ. ಹೀಗಾದಾಗ ಹೊರಗಿನ ದೇವಾಲಯಗಳ ಅವಶ್ಯಕತೆ ಬರುವುದಿಲ್ಲ.
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ