ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಆಗಸ್ಟ್ 4, 2017

ನೈಜ ಸನ್ಯಾಸಿಗಳು ಬೇಕಾಗಿದ್ದಾರೆ!


     ಕಾವಿ ತೊಟ್ಟವರೆಲ್ಲಾ ಸಂನ್ಯಾಸಿಗಳಾಗಲಾರರು. ಕಾವಿ ತೊಟ್ಟು ಮಾಡಬಾರದ ಕೆಲಸ ಮಾಡುವವರಿಂದ ನೈಜ ಸನ್ಯಾಸಿಗಳನ್ನೂ ಅನುಮಾನದಿಂದ ನೋಡುವಂತಾಗಿದೆ. ಜೀವನದ ನಾಲ್ಕು ಘಟ್ಟಗಳೆಂದರೆ, ಬಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಮನುಷ್ಯನ ಆಯುವನ್ನು ನೂರು ವರ್ಷಗಳು ಎಂದಿಟ್ಟುಕೊಂಡರೆ, ಪ್ರಥಮ 25 ವರ್ಷಗಳನ್ನು ಬ್ರಹ್ಮಚರ್ಯದಲ್ಲೂ, ನಂತರದ 25 ವರ್ಷಗಳನ್ನು ಗೃಹಸ್ಥಾಶ್ರಮದಲ್ಲೂ, ಮುಂದಿನ 25 ವರ್ಷಗಳಲ್ಲಿ ವಾನಪ್ರಸ್ಥಾಶ್ರಮವನ್ನೂ, ಕೊನೆಯ 25 ವರ್ಷಗಳನ್ನು ಸಂನ್ಯಾಸಾಶ್ರಮದಲ್ಲಿ ವಿನಿಯೋಗಿಸಬಹುದು. ಬ್ರಹ್ಮಚರ್ಯದ 25 ವರ್ಷಗಳು ಬೌದ್ಧಿಕ, ಮಾನಸಿಕ, ಶಾರೀರಕ ಶಕ್ತಿಗಳನ್ನು ಸಂಚಯಿಸುವ ಕಾಲ. ಸಮರ್ಪಕವಾಗಿ ಬಳಸಿಕೊಳ್ಳುವವರು ಉತ್ತಮ ನಾಗರಿಕರಾಗುತ್ತಾರೆ, ಯಶಸ್ವಿಗಳಾಗುತ್ತಾರೆ. ಉಪಯೋಗಿಸಿಕೊಳ್ಳಲಾಗದವರು ಸಹಜವಾಗಿ ಹಿಂದುಳಿಯುತ್ತಾರೆ. ಈ ಅವಧಿಯಲ್ಲಿ ಇಂದ್ರಿಯ ಕಾಮನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡವರು ಅಗ್ರಗಣ್ಯರಾಗುವರು. ಸ್ತ್ರೀಯರು ಬೇಗ ಯೌವನಸ್ಥರಾಗುವುದರಿಂದ ಅವರ ಬ್ರಹ್ಮಚರ್ಯಾವಧಿ ಕನಿಷ್ಠ 16 ವರ್ಷಗಳೆಂದು ಹೇಳುತ್ತಾರೆ. ಸ್ತ್ರೀಯರಾಗಲಿ, ಪುರುಷರಾಗಲಿ, ಬ್ರಹ್ಮಚರ್ಯದ ಅವಧಿ ಮುಗಿದ ಕೂಡಲೇ ವಿವಾಹಿತರಾಗಬೇಕೆಂದೇನಿಲ್ಲ. ಮನೋನಿಗ್ರಹಶಕ್ತಿ ಅನುಸರಿಸಿ, ಇಟ್ಟುಕೊಂಡ ಗುರಿ ಸಾಧನೆಗಾಗಿ ಸೂಕ್ತ ಕಾಲದವರೆಗೆ ಅಥವ ಜೀವನಪೂರ್ತಿ ಬ್ರಹ್ಮಚಾರಿಗಳಾಗಿಯೇ ಇರಬಹುದು. ಇದು ಎಲ್ಲರಿಗೂ ಸಾಧ್ಯವಿಲ್ಲ.
     ಗೃಹಸ್ಥಾಶ್ರಮವು ಇತರ ಮೂರು ಆಶ್ರಮಗಳವರಿಗೆ ಆಧಾರ ಮತ್ತು ಆಶ್ರಯಸ್ಥಾನವಾಗಿದೆ. ಸಮಾಜ ನಡೆಯುತ್ತಿರುವುದು ಗೃಹಸ್ಥರಿಂದಲೇ! ಉತ್ತಮ ಗೃಹಸ್ಥರು ಕುಟುಂಬದ ಬಗ್ಗೆ ಮಾತ್ರ ಚಿಂತಿಸದೆ ಸಮಾಜದ ಏಳಿಗೆಗೂ ಹೆಗಲು ಕೊಡುತ್ತಾರೆ. ಗೃಹಸ್ಥಾಶ್ರಮದಲ್ಲಿ ಕರ್ತವ್ಯಗಳನ್ನು ನಿರ್ವಹಿಸಿದ ನಂತರ ಆತ್ಮೋನ್ನತಿಗಾಗಿ ವಾನಪ್ರಸ್ಥಕ್ಕೆ ತೆರಳುವ ಕಾಲ ಬರುತ್ತದೆ. ಇಂದಿನ ಪರಿಸ್ಥಿತಿಗನುಗುಣವಾಗಿ ವಾನಪ್ರಸ್ಥದ ಪರಿಕಲ್ಪನೆಯನ್ನು ಸೂಕ್ತವಾಗಿ ಬದಲಾಯಿಸಿಕೊಳ್ಳಬಹುದು. ಪ್ರಾಪಂಚಿಕ ಆಕರ್ಷಣೆಗಳಿಂದ ಮುಕ್ತರಾಗಿ ಸರಳ ಜೀವನಪದ್ಧತಿ ಅಳವಡಿಸಿಕೊಂಡು, ಮನೆಯ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ, ಸದ್ವಿಚಾರಗಳ ಪ್ರಚಾರ, ಪ್ರಸಾರಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ತಮ್ಮ ವೃತ್ತಿಯ ನೈಪುಣ್ಯ, ಪ್ರವೃತ್ತಿ, ಹವ್ಯಾಸಗಳನ್ನು ಇತರರ ಉಪಕಾರಕ್ಕಾಗಿ ಹಣದ ಆಸೆಯಿಲ್ಲದೆ ಬಳಸಬಹುದಾಗಿದೆ. ಈರೀತಿ ನಿವೃತ್ತ ಜೀವನ ನಡೆಸುವುದರಿಂದ ಯುವಕ-ಯುವತಿಯರಿಗೆ ಸಹಜವಾಗಿ ಜವಾಬ್ದಾರಿ ಲಭಿಸುತ್ತದೆ.
      ಶಿಖರಪ್ರಾಯವಾದ ಸಂನ್ಯಾಸಾಶ್ರಮದ ಅವಧಿಯೇ ಇಂದು ವಿಚಾರ ಮಾಡತಕ್ಕದ್ದಾಗಿದೆ. ಜೀವನ ಶೈಲಿಯ ಬದಲಾವಣೆ, ಯೋಗ್ಯ ರೀತಿಯಲ್ಲಿ ಜೀವನ ನಡೆಸದಿರುವುದರಿಂದ 75 ವರ್ಷಗಳ ನಂತರದಲ್ಲಿ ಬದುಕಿರುವುದೇ ದುಸ್ಸಾಹಸವೆನಿಸಿದೆ. ಬದುಕಿದ್ದರೂ ನೂರೆಂಟು ರೀತಿಯ ಕಾಯಿಲೆ-ಕಸಾಲೆಗಳಿಂದ ಜರ್ಜರಿತಾಗಿ ಇನ್ನೊಬ್ಬರ ಮೇಲೆ ಅವಲಂಬಿತರಾಗಿರುವ ಪರಿಸ್ಥಿತಿಯಿದೆ. ಗುಣಕ್ಕೆ ಪ್ರಾಧಾನ್ಯವಿರದ, ಹಣಕ್ಕೆ ಮಾತ್ರ ಬೆಲೆಯಿರುವ ಶಿಕ್ಷಣ ಪದ್ಧತಿಯ ಕೊಡುಗೆಯಿದು. ಸಂನ್ಯಾಸಿಗಳಾಗಿ ತಮ್ಮ ಕಾರ್ಯಗಳ ಛಾಪು ಒತ್ತಿದವರು, ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ನೆರವಾದವ ಅನೇಕರು ಬ್ರಹ್ಮಚಾರಿಗಳಾಗಿದ್ದವರು. ಚಿಕ್ಕ ವಯಸ್ಸಿನಲ್ಲೇ ಪ್ರಾಪಂಚಿಕ ವಿಷಯಗಳ ಬಗ್ಗೆ ನಿರಾಸಕ್ತರಾಗಿ ಪರಿವ್ರಾಜಕರಾಗಿ ದೇಶ ಸುತ್ತಿ ಇಂದಿಗೂ ಜನಮಾನ್ಯರಾಗಿರುವ ವಿವೇಕಾನಂದ, ಶಂಕರಾಚಾರ್ಯ, ರಮಣಮಹರ್ಷಿ ಮುಂತಾದವರ ಸಾಲೇ ಕಣ್ಣೆದುರಿಗಿದೆ.
     ಸಂನ್ಯಾಸಿ ಹೇಗಿರಬೇಕು? 'ಋತಂ ವದನೃತದ್ಯುಮ್ನ ಸತ್ಯಂ ವದನ್ ಸತ್ಯಕರ್ಮನ್| ಶ್ರದ್ಧಾಂ ವದನ್ ತ್ಸೋಮ ರಾಜನ್ ಧಾತ್ರಾ ಸೋಮ ಪರಿಷ್ಕೃತ ಇಂದ್ರಾಯೇಂದೋ ಪರಿ ಸ್ರವ||' (ಋಕ್.9.113.4.) ಧರ್ಮವೇ ಶಕ್ತಿಯಾದವನೇ, ಸತ್ಯಕರ್ಮಿಯೇ, ಪ್ರಶಾಂತನೇ, ವೇದ, ಧರ್ಮಗಳನ್ನೂ ಬೋಧಿಸುತ್ತಾ, ಸತ್ಯವನ್ನು ಉಪದೇಶಿಸುತ್ತಾ, ಶ್ರದ್ಧೆ ಪಸರಿಸುತ್ತಾ, ಜೀವಾತ್ಮನ ಹಿತಕ್ಕಾಗಿ, ಮೋಕ್ಷಪ್ರಾಪ್ತಿಗಾಗಿ ಪರ್ಯಟನ ಮಾಡು ಎನ್ನುವ ಮಂತ್ರ ಸಂನ್ಯಾಸಿಯ ಕರ್ತವ್ಯದ ಬಗ್ಗೆ ಹೇಳುತ್ತದೆ. ಸಂನ್ಯಾಸಿಯಾದವನು ಜಾತಿ, ಭಾಷೆ, ದೇಶಗಳಿಗೆ ಸೀಮಿತನಾಗಿರದೆ ಸಕಲರಿಗೆ ಸೇರಿದವನಾಗಿರುತ್ತಾನೆ. ನಿರ್ಮೋಹಿಯಾಗಿ, ಪ್ರಾಪಂಚಿಕ ವಿಷಯಗಳಲ್ಲಿ ನಿರಾಸಕ್ತನಾಗಿ ಆತ್ಮಸಾಧನೆ ಮುಂದುವರೆಸುತ್ತಾ ಹಳ್ಳಿಯಿಂದ ಹಳ್ಳಿಗೆ, ನಗರಗಳಿಗೆ, ದೇಶಗಳಿಗೆ ಸಂಚರಿಸುತ್ತಾ ಮನುಕುಲಕ್ಕೆ ಅಗತ್ಯವಾದ ಸತ್ಯಜ್ಞಾನ, ಸತ್ಯಕರ್ಮ, ಸತ್ಯೋಪಾಸನೆಗಳ ಬಗ್ಗೆ ತಿಳುವಳಿಕೆ ಕೊಡುತ್ತಾ ಸಂಚರಿಸಬೇಕು. ಕೇವಲ ಮಾತಿನಿಂದಲ್ಲ, ಕೃತಿಯಿಂದಲೂ ಇದನ್ನು ಸಾಧಿಸುತ್ತಾ ಸಂಚರಿಸುವ ಪರಿವ್ರಾಜಕರೇ ನೈಜ ಸಂನ್ಯಾಸಿಗಳು. ಚಲಿಸುವ ದೇವರಂತೆ ಸಾವು ಬರುವವರೆಗೂ ಜಗತ್ತಿನ ಒಳಿತಿಗೆ, ಹಿತಕ್ಕೆ ಪೂರಕವಾದ ಜ್ಞಾನಪ್ರಸಾರ ಮಾಡುತ್ತಾ ಸುತ್ತಾಡುವವರವರು! ಸದಾ ಪರ್ಯಟನೆ ಮಾಡುತ್ತಿರಬೇಕಾದುದರಿಂದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಾಶ್ರಮಗಳಲ್ಲಿಯಂತೆ ನಿತ್ಯಕರ್ಮಾನಿಷ್ಠಾನಗಳು ಅವರಿಗೆ ಕಡ್ಡಾಯವಲ್ಲ. ಶಾಸ್ತ್ರಜ್ಞಾನವಿಲ್ಲದವರು, ಬ್ರಹ್ಮಜ್ಞಾನದ ಅರಿವಿಲ್ಲದವರು, ನಿರ್ಲಿಪ್ತರಲ್ಲದವರು, ವಿಷಯವಾಸನೆಯಿಂದ ಮುಕ್ತರಾಗದವರು, ಆರೋಗ್ಯವಿಲ್ಲದವರು, ಧೃಢಕಾಯರಲ್ಲದವರು ಸಂನ್ಯಾಸಿಗಳಾಗಲಾರರು.
     ಪರಿವ್ರಾಜಕನ ಕೆಲಸ ಮಾಡುತ್ತಿರುವ ಒಬ್ಬ ಸಾಧಕರ ಪರಿಚಯ ಮಾಡಬೇಕೆನಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸಾಲ್ಮರದ ಸೀತಾರಾಮಕೆದಿಲಾಯರೇ ಅವರು. ಚಿಕ್ಕಂದಿನಲ್ಲೇ ರಾಷ್ಟ್ರೀಯ ಸ್ವಯಂಸೇವಕಸಂಘದ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಬ್ರಹ್ಮಚಾರಿಯಾಗಿ ಉಳಿದು ಸಂಘದ ಪ್ರಚಾರಕರಾಗಿ ಗ್ರಾಮೋತ್ಥಾನ, ಗ್ರಾಮವಿಕಾಸ, ಗೋತಳಿ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಜನಜಾಗೃತಿ ಮಾಡಿದವರು. ಅಖಿಲಭಾರತ ಸೇವಾಪ್ರಮುಖರಾಗಿ ಕಾರ್ಯ ನಿರ್ವಹಿಸಿದವರು. 2009ರಲ್ಲಿ ಭಾರತದಾದ್ಯಂತ ನಡೆದ ವಿಶ್ವಮಂಗಳ ಗೋಯಾತ್ರೆಯ ಶಿಲ್ಪಿ ಅವರು. ವಾಮನಮೂರ್ತಿ, ಕೃಷದೇಹಿ ಕೆದಿಲಾಯರಿಗೆ ಈಗ 68 ವರ್ಷಗಳು. ಇವರು 2012ರ ಆಗಸ್ಟ್ 9ರಂದು ಭಾರತದ ಅಖಂಡತೆ ಮತ್ತು ಗ್ರಾಮಜೀವನದ ಪುನರುತ್ಥಾನದ ಸಲುವಾಗಿ ಇಡೀ ಭಾರತದ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಲುನಡಿಗೆಯಲ್ಲೇ ಪ್ರಾರಂಭಿಸಿದ್ದು, 5 ವರ್ಷಗಳ ಪಾದಯಾತ್ರೆಯನ್ನು 9.7.2017ರ ಗುರುಪೂರ್ಣಿಮೆಯಂದು ಮರಳಿ ಕನ್ಯಾಕುಮಾರಿಗೆ ಪ್ರವೇಶಿಸುವುದರೊಂದಿಗೆ ಮುಗಿಸಿದ್ದಾರೆ. ಈ ಅವಧಿಯಲ್ಲಿ ದೇಶದ 23 ರಾಜ್ಯಗಳ 2350 ಹಳ್ಳಿಗಳ 23100ಕಿ.ಮೀ.ಗೂ ಹೆಚ್ಚಿನ ಕಾಲುನಡಿಗೆ ಮಾಡಿದ್ದಾರೆ. ಬೆಳಗಿನ ಜಾವ ಮೂರು ಗಂಟೆಗೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಪ್ರಾರ್ಥನೆ, ಗೋಪೂಜೆ ಮಾಡಿ ಪಾದಯಾತ್ರೆ ಆರಂಭಿಸುತ್ತಾರೆ. ಸುಮಾರು 10-15 ಕಿ.ಮೀ. ನಡೆದು 12.30ಕ್ಕೆ ಭಿಕ್ಷಾನ್ನ ಸ್ವೀಕಾರ, ವಿಶ್ರಾಂತಿ. ಸಂಜೆ ಊರಿನ ಶಾಲೆಗೆ ಹೋಗಿ ಮಕ್ಕಳಿಂದ ವೃಕ್ಷಾರೋಪಣ, ಗ್ರಾಮದ ವಿವಿಧ ಮುಖಂಡರ ಭೇಟಿ, ದೇಗುಲ, ಚರ್ಚು, ಮಸೀದಿ, ಮಂದಿರಗಳಿಗೆ ಭೇಟಿ, ಜಾತಿ-ಮತಭೇದವಿಲ್ಲದೆ ಎಲ್ಲರೊಡನೆ ಮಾತುಕತೆ, ಮುಕ್ತ ಸಂವಾದ ನಡೆಸುತ್ತಾರೆ. ಒಂದು ರಾಜ್ಯದ ಪ್ರವಾಸ ಮುಗಿದ ನಂತರ ಆಯಾ ರಾಜ್ಯದ ಅಭಿವೃದ್ಧಿ, ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸೆಳೆಯುತ್ತಾರೆ. ಹೋದೆಡೆಯಲ್ಲೆಲ್ಲಾ ಅವರಿಗೆ ಅಪೂರ್ವ ಸ್ವಾಗತ ಸಿಕ್ಕಿದೆ. ಅವರ ಪರ್ಯಟನೆಯ ಉದ್ದೇಶ, ಒಂದು: ವಿದೇಶೀಯರು ಭಾರತ ಬಿಟ್ಟರೂ ಅವರ ಸಂಸ್ಕೃತಿ, ದಿರಿಸು, ಭಾಷೆ, ಇತ್ಯಾದಿ ನಮ್ಮನ್ನು ಬಿಟ್ಟಿಲ್ಲ. ಇದು ತಪ್ಪಿ ನಮ್ಮ ಭಾರತೀಯತೆಯ ಛಾಪು ಮೂಡಬೇಕು. ಎರಡು: ಹೆಚ್ಚುತ್ತಿರುವ ನಗರೀಕರಣದ ಬದಲಾಗಿ ಹಳ್ಳಿಜೀವನ ಪುನರುಜ್ಜೀವನಗೊಳ್ಳಬೇಕು. ಈ ಕೆಲಸ ಮಾಡುವುದರಿಂದ ಈ ವ್ಯಕ್ತಿಗೆ ಏನು ಲಾಭ? ಲಾಭದ ಅಪೇಕ್ಷೆಯಿಲ್ಲದೆ ಮಾಡುತ್ತಿರುವ ಈ ಕೆಲಸ ಒಬ್ಬ ಶ್ರೇಷ್ಠ ಪರಿವ್ರಾಜಕನದೇ ಅಲ್ಲವೇ? ಇದಲ್ಲವೇ ನೈಜ ಸಂನ್ಯಾಸ!
     ಮಠಗಳು, ಆಶ್ರಮಗಳನ್ನು ಸ್ಥಾಪಿಸಿಕೊಂಡು ವೈಭವೋಪೇತವಾಗಿ ಜೀವಿಸುವ, ರಾಜಕೀಯದಲ್ಲಿ ತೊಡಗುವ ಸಂತರುಗಳೂ ಇರುತ್ತಾರೆ. ಅವರನ್ನು ಮಠಾಧೀಶರು, ಪೀಠಾಧೀಶರು, ಮುಖ್ಯಸ್ಥರು, ಇತ್ಯಾದಿ ಅನ್ನಬಹುದೇ ಹೊರತು ಸಂನ್ಯಾಸಿಗಳು ಎನ್ನಲಾಗದು. ಜಾತಿಗೊಬ್ಬರು ಗುರು ಅನ್ನುವುದು ಸಂನ್ಯಾಸತ್ವದ ಮೂಲತತ್ತ್ವಕ್ಕೇ ವಿರುದ್ಧವಾದುದು. ಜಗತ್ತಿನ ವೈಭವಗಳು, ಅನುಕೂಲಗಳನ್ನು ತ್ಯಜಿಸಿದ್ದೇವೆಂದು ಹೇಳುತ್ತಾ ಅದಕ್ಕೇ ಅಂಟಿಕೊಂಡವರು ಸಂನ್ಯಾಸಿ ಹೇಗಾದಾರು? ಅವರು ಉತ್ತಮ ಕೆಲಸಗಳನ್ನು ಮಾಡುತ್ತಿರಬಹುದು, ಸಮಾಜಮುಖಿಯಾಗಿ ಜ್ಞಾನಪ್ರಸಾರ, ಆಧ್ಯಾತ್ಮಿಕ ವಿಚಾರಗಳ ಪ್ರಸಾರದಲ್ಲಿ ತೊಡಗಿರಬಹುದು. ಆದರೆ, ನೈಜ ಸಂನ್ಯಾಸಿ ಪ್ರಾಪಂಚಿಕ ಬಂಧನಗಳಿಂದ ಮುಕ್ತನಾಗಿ, ಯಾವುದೇ ಜನಾಂಗ, ಧರ್ಮ, ಜಾತಿ, ಪಂಥಗಳಲ್ಲಿ ಗುರುತಿಸಿಕೊಳ್ಳದೆ, ಯಾವುದೇ ದೇಶಕ್ಕೆ ಕಟ್ಟು ಬೀಳದೆ ಪರ್ಯಟನೆ ಮಾಡುತ್ತಾ ವಿಶ್ವಮಾನವ ಸಂದೇಶ ಸಾರುವವನಾಗಿರುತ್ತಾನೆ. ಇಂತಹ ಸಂನ್ಯಾಸಿಗಳ ಅಗತ್ಯತೆ ಇಂದು ದೇಶಕ್ಕಿದೆ. ಪುಣ್ಯಭೂಮಿ ಭಾರತದಲ್ಲಿ ಇಂತಹವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದೇ ಒಂದು ಆಶಾಕಿರಣ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ