ಏನನ್ನೂ ಕೊಡದೇ ಎಲ್ಲವೂ ಬೇಕೆನ್ನುವ ಮನುಷ್ಯನ ಸ್ವಭಾವವನ್ನು ಲೋಭವೆನ್ನೋಣವೇ, ದುರಾಸೆಯೆನ್ನೋಣವೇ? ಕೋಟ್ಯಾಧೀಶ್ವರರಾಗುವುದು ಹೇಗೆ? ಎಂಬ ಪುಸ್ತಕ ಬಿಡುಗಡೆಯಾದರೆ ಬೇಗನೇ ಮಾರಾಟವಾಗಿ ಮರುಮುದ್ರಣ ಕಾಣುತ್ತದೆ. ಪ್ರಕಾಶಕರು ಹಣ ಮಾಡಿಕೊಳ್ಳುತ್ತಾರೆ. ಲಾಟರಿ, ಕುದುರೆ ರೇಸು, ಬೆಟ್ಟಿಂಗ್, ಕಾಳಸಂತೆ, ಕಲಬೆರಕೆ, ಮಾದಕ ದ್ರವ್ಯಗಳು/ವಸ್ತುಗಳ ದಂಧೆ, ದರೋಡೆ, ಕಳ್ಳತನ, ವೇಶ್ಯಾವಾಟಿಕೆ, ದೇಶದ್ರೋಹ, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಇತ್ಯಾದಿಗಳಲ್ಲಿ ಹಲವರು ಆಸಕ್ತಿ ತಾಳುವುದೂ ಧಿಡೀರ್ ಶ್ರೀಮಂತಿಕೆಯ ಕನಸಿನಿಂದಲೇ. ಇವುಗಳಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿಯಾದರೂ ಶ್ರಮ ಪಡದೆ ಸಂಪತ್ತಿಗೆ ಒಡೆಯರಾಗಬಯಸುವವರೇ ಎಲ್ಲರೂ! ಈ ದುರಾಸೆ ವ್ಯಕ್ತಿಯನ್ನಲ್ಲದೆ ಸಮಾಜವನ್ನೂ ಅಧಃಪತನಕ್ಕೆ ತಳ್ಳುತ್ತದೆ. ಎಲ್ಲಿ ಅಕ್ರಮವಿರುವುದೋ ಅಲ್ಲಿ ಅನ್ಯಾಯವಿರುತ್ತದೆ, ಶೋಷಿತರಿರುತ್ತಾರೆ, ನೋವಿರುತ್ತದೆ, ಕ್ಷೋಭೆಯಿರುತ್ತದೆ.
ಮನುಷ್ಯನ ಈ ಗುಣವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿರುವ ಖದೀಮರು ಎಲ್ಲೆಲ್ಲೂ ಕಾಣಸಿಗುತ್ತಾರೆ. ಮನಿ ಸರ‍್ಕ್ಯುಲೇಟಿಂಗ್ ಸ್ಕೀಮ್, ಹಣ ದ್ವಿಗುಣಗೊಳಿಸುವ ಪ್ರಲೋಭನೆ, ಚಿಟ್‌ಫಂಡ್ ಸಂಸ್ಥೆಗಳು, ಖೋಟಾನೋಟು ಚಲಾವಣೆ, ಹೀಗೆ ಹಲವಾರು ಬಗೆಯಲ್ಲಿ ಮಕ್ಮಲ್ ಟೋಪಿ ಹಾಕುತ್ತಾರೆ. ಮೊಬೈಲುಗಳಲ್ಲಿ ಲಾಟರಿ ಬಂದಿದೆಯೆಂತಲೋ, ಮತ್ತೇನೋ ಇದೇ ರೀತಿಯ ಸಂದೇಶಗಳನ್ನು ಕಂಡು ಮೋಸ ಹೋಗಿ ಹಣ ಕಳೆದುಕೊಳ್ಳುವವರಿದ್ದಾರೆ. ಜೀವಮಾನವೆಲ್ಲಾ ದುಡಿದು ಕಷ್ಟಪಟ್ಟು ಕೂಡಿಟ್ಟ ಹಣವನ್ನು, ಮಕ್ಕಳ ಮದುವೆ, ವಿದ್ಯಾಭ್ಯಾಸ, ಮುಂತಾದುವಕ್ಕೆ ತೆಗೆದಿಟ್ಟ ಹಣ, ಆಭರಣಗಳನ್ನು ಕಳವು/ದರೋಡೆ ಮಾಡುವವರಿದ್ದಾರೆ. ಎಟಿಎಮ್ಮುಗಳಲ್ಲಿ ಹಣ ಬಿಡಿಸಿಕೊಳ್ಳಲು ಹೋದವರನ್ನೇ ಹೆದರಿಸಿ ಹಣ ಕಿತ್ತು ಪ್ರಾಣಾಂತಿಕ ಹಲ್ಲೆ ಮಾಡಿರುವವರನ್ನೂ ಕಂಡಿದ್ದೇವೆ. ಸರ್ಕಾರದ ಖಜಾನೆಗೇ ಕನ್ನ ಹಾಕುವ ಅಧಿಕಾರಿಗಳು, ರಾಜಕಾರಣಿಗಳು ಇದ್ದಾರೆ. ಎಲ್ಲರದೂ ಒಂದೇ ಗುರಿ, ಕಡಿಮೆ ಶ್ರಮದಲ್ಲಿ ಹೆಚ್ಚು ಸಂಪಾದನೆ!
ಶ್ರಮರಹಿತ ಸಂಪತ್ತು ಪಾಪದ ಗಳಿಕೆಯೆಂಬುದನ್ನು ಒಂದೆಡೆ ಇಟ್ಟುಬಿಡೋಣ. ಕೆಲವರು ಬಡವರ ಮನೆಯಲ್ಲಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ. ಹಿಂದಿನ ತಲೆಮಾರಿನವರು ಸಂಪತ್ತು ಕೂಡಿಟ್ಟಿದ್ದನ್ನು ಅವರ ಮಕ್ಕಳು ಶ್ರಮವಿಲ್ಲದೆ ಅನುಭವಿಸುವ ಸ್ಥಿತಿಯಲ್ಲಿರುತ್ತಾರೆ. ಬಡವರಾದರೋ ತುತ್ತಿಗಾಗಿ ಶ್ರಮ ಪಡಲೇಬೇಕು. ಕಷ್ಟಪಟ್ಟು ಗಳಿಸಿದ ಶ್ರೀಮಂತರಿಗೆ ಬಡತನದ ಅರಿವಿರುತ್ತದೆ. ಆದರೆ ಪಿತ್ರಾರ್ಜಿತವಾಗಿ ಬಂದ ಶ್ರೀಮಂತಿಕೆಗೆ ಬಡತನದ ಕಷ್ಟ, ನೋವುಗಳು ಅರ್ಥವಾಗಲಾರವು. ಮೇಲು-ಕೀಳುಗಳ ಅಂತಸ್ತಿನ ತಾರತಮ್ಯ ಉದ್ಭವವಾಗುವುದು ಇಲ್ಲಿಯೇ. ಅಂತಹವರು ಶ್ರಮಜೀವಿಗಳನ್ನು ಕೀಳಾಗಿ ನೋಡುತ್ತಾರೆ. ಹೊಟ್ಟೆಪಾಡಿಗೆ ಮನೆಗೆಲಸ ಮಾಡುವವರು, ಕೂಲಿಗಳು ಮುಂತಾದವರೊಂದಿಗೆ ಅವರು ವರ್ತಿಸುವ ರೀತಿಯಲ್ಲೇ ವ್ಯತ್ಯಾಸ ಗುರುತಿಸಬಹುದು. ಹಣದ ಮೋಹವೇ ಎಲ್ಲಾ ಕೆಡಕುಗಳ ಮೂಲ ಎಂದು ಬೈಬಲ್ ಹೇಳುತ್ತದೆ. ಗಮನಿಸಿ, ಹಣ ಕೆಡುಕಿನ ಮೂಲವಲ್ಲ, ಹಣದ ಮೋಹ ಕೆಡುಕುಗಳಿಗೆ ಕಾರಣ!
ಸಂಪತ್ತು ಎಂದರೆ ಹಣ ಮಾತ್ರವಲ್ಲ, ಯಾವುದೇ ಆಗಲಿ ಹೇರಳವಾಗಿದ್ದರೆ ಅದನ್ನು ಸಂಪತ್ತು ಎನ್ನಬಹುದು. ಅದು ಅನುಭವ ಆಗಬಹುದು, ಜ್ಞಾನ ಆಗಬಹುದು. ಇಂತಹ ಸಂಪತ್ತು ಹೆಚ್ಚಾದಷ್ಟೂ ಒಳ್ಳೆಯದೇ. ಏಕೆಂದರೆ ಅನುಭವಗಳಾಗಲೀ, ಜ್ಞಾನವಾಗಲೀ ಶ್ರಮಪಡದೇ ಸಿಗುವಂತಹುದಲ್ಲ. ಇಂದು ಶ್ರಮಪಡದೇ ಡಿಗ್ರಿ/ಡಾಕ್ಟರೇಟ್ ಗಳಿಸುವುದು, ಪ್ರಶಸ್ತಿ, ಸಮ್ಮಾನಗಳನ್ನು ಪಡೆಯುವುದು ಸಾಧ್ಯವಿದೆಯೆಂಬುದು ಪರಿಸ್ಥಿತಿಯ ವ್ಯಂಗ್ಯವಾಗಿದೆ. ನೈಜ ಜ್ಞಾನಿಗಳಿಗೂ, ನಕಲಿ ಜ್ಞಾನಿಗಳಿಗೂ ಇರುವ ವ್ಯತ್ಯಾಸ ಅಸಲಿ ಬಂಗಾರ ಮತ್ತು ಕಾಗೆ ಬಂಗಾರಕ್ಕೆ ಇರುವಷ್ಟೇ ಆಗಿರುತ್ತದೆ. ಹುಳುಕು ಒಂದಲ್ಲಾ ಒಂದು ರೀತಿಯಲ್ಲಿ ಗೊತ್ತಾಗಿಬಿಡುತ್ತದೆ. ಕಷ್ಟಪಡದೆ ಶ್ರೀಮಂತಿಕೆಯಲ್ಲಿ ತೇಲಾಡುವ ಯುವಕ, ಯುವತಿಯರು ಹೇಗೆ ವರ್ತಿಸುತ್ತಿದ್ದಾರೆ, ಹೇಗೆ ಸಮಾಜದ ಕಾನೂನು-ಕಟ್ಟಳೆಗಳನ್ನು ಮೀರಿ ನಡೆಯುತ್ತಿದ್ದಾರೆ, ಸಮಾಜಕ್ಕೆ ಶತ್ರುಗಳಾಗಿದ್ದಾರೆ ಎಂಬುದು ದಿನಬೆಳಗಾದರೆ ನೋಡುವ, ಕೇಳುವ ಸುದ್ದಿಗಳೇ ಹೇಳುತ್ತವೆ. ಅಪರಾಧಗಳನ್ನು ಮಾಡಿಯೂ ಸಮರ್ಥಿಸಿಕೊಳ್ಳುವ ಅವರ ನಿರ್ಲಜ್ಜತೆ ಹೇವರಿಕೆ ತರಿಸುತ್ತವೆ.
ಸಾಮಾನ್ಯವಾಗಿ ಶ್ರಮವಿರದ ಸಂಪತ್ತು ಅಕ್ರಮ ಸಂಪತ್ತೇ ಆಗಿದ್ದು,. ಅದರ ತಾಳಿಕೆ, ಬಾಳಿಕೆ ಕಡಿಮೆ. ಇದಕ್ಕೆ ಬಹಳ ಉದಾಹರಣೆಗಳು ಸಿಗುತ್ತವೆ. ಅದು ನೆಮ್ಮದಿಯನ್ನು ಹಾಳುಗೆಡವಿಬಿಡುತ್ತದೆ. ಅಕ್ರಮ ಸಂಪತ್ತು ಉಳಿಸಿಕೊಳ್ಳುವ ಯತ್ನದಲ್ಲಿಯೇ ಶೀಘ್ರವಾಗಿ ಕರಗಿಹೋಗುತ್ತದೆ ಮತ್ತು ಕೆಟ್ಟ ಕಾರ್ಯಗಳಿಗಾಗಿಯೇ ವಿನಿಯೋಗವಾಗುತ್ತದೆ. ಕಷ್ಟಪಟ್ಟು ಮಾಡುವ ಸಂಪಾದನೆ ಬೆಳೆಯುತ್ತಾ ಹೋಗುತ್ತದೆ ಮತ್ತು ಉತ್ತಮ ಮೌಲ್ಯ ಬಿಂಬಿಸುತ್ತದೆ. ಭೋಗವಾದ ಅಥವ ಕೊಳ್ಳುಬಾಕತನ ಶ್ರೀಮಂತರಾಗಿರುವ ಅನಿವಾರ್ಯತೆ ಸೃಷ್ಟಿಸಿ ಶ್ರಮವಿರದ ಸಂಪತ್ತನ್ನು ಗಳಿಸಲು ಪ್ರೇರಿಸುತ್ತದೆ. ಧರ್ಮಮಾರ್ಗದಲ್ಲಿ ಸಂಪಾದಿಸಬೇಕು, ಸುಲಭವಾಗಿ ಹಣ ರಾಶಿಹಾಕುವ ಪ್ರಲೋಭನಕ್ಕೆ ಸಿಕ್ಕಿಕೊಳ್ಳಬಾರದು ಎಂದು ಬೋಧಿಸುವ ವೇದಮಂತ್ರಗಳಿವು:
ಅಕ್ಷೈರ್ಮಾ ದೀವ್ಯಃ ಕೃಷಿಮಿತ್ ಕೃಷಸ್ಯ ವಿತ್ತೇ ರಮಸ್ವ ಬಹು ಮನ್ಯಮಾನಃ|
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿ ಚಷ್ಟೇ ಸವಿತಾಯಮರ್ಯಃ|| (ಋಕ್.10.34.13.)
ದಾಳಗಳಿಂದ ಜೂಜಾಡಬೇಡ. ಕೃಷಿಯನ್ನೇ ಮಾಡು, ಕಷ್ಟಪಟ್ಟು ದುಡಿ. ನಿಜವಾದ ದುಡಿಮೆಯಿಂದ ಲಭಿಸುವುದೇ ಸಾಕು ಎಂದು ಸಂತುಷ್ಟನಾಗಿರು. ಕಷ್ಟದ ದುಡಿಮೆಯಲ್ಲೇ ಗೋಸಂಪತ್ತಿದೆ. ದಾಂಪತ್ಯಸುಖವೂ ಇದೆಯೆಂಬುದು ಅರ್ಥ. ದಾಳ ಎಂಬುದು ಸಾಂಕೇತಿಕವಾಗಿದ್ದು ಕುದುರೆ ಜೂಜು, ಲಾಟರಿ, ಮುಂತಾದವು ಸಹ ಈ ಗುಂಪಿಗೇ ಸೇರಿದ ಪಾಪವೃತ್ತಿಗಳು.
ಪರಿ ಚಿನ್ಮರ್ತೋ ದ್ರವಿಣಂ ಮಮನ್ಯಾದೃತಸ್ಯ ಪಥಾ ನಮಸಾ ವಿವಾಸೇತ್|
ಉತ ಸ್ವೇನ ಕ್ರತುನಾ ಸಂ ವದೇಶ ಶ್ರೇಯಾಂಸಂ ದಕ್ಷಂ ಮನಸಾ ಜಗೃಬ್ಯಾತ್|| (ಋಕ್.10.31.2.)
ಹಣವು ಎಲ್ಲೆಡೆಯೂ ಇದೆ, ನ್ಯಾಯ ಹಾಗೂ ಸತ್ಯದ ಮಾರ್ಗದಿಂದ ನಮ್ರತೆಯಿಂದ ನಡೆದು, ಸದ್ವಿಚಾರ, ಸದಾಚಾರಗಳಿಂದ ಮಾತನಾಡಬೇಕು. ಶ್ರೇಯಸ್ಕರವಾದ ಶಕ್ತಿಯನ್ನು ಗ್ರಹಿಸಬೇಕು. ಈ ಮಾರ್ಗದಲ್ಲಿ ಸಂಪತ್ತು ಗಳಿಸುವುದೇ ಶ್ರೇಯಸ್ಕರವೆನ್ನುವ ಈ ಮಂತ್ರ ಸ್ವಚ್ಛ ಸಮಾಜಕ್ಕೆ ಆದರ್ಶವಾಗುತ್ತದೆ. ದೈನಂದಿನ ಅಗತ್ಯತೆಗಳಿಗೆ, ನೆಮ್ಮದಿಯ ಜೀವನಕ್ಕೆ ಮತ್ತು ಇತರರ ಸಲುವಾಗಿ ಸಹ ಹಣಗಳಿಕೆ ಅನಿವಾರ್ಯವಾಗಿದೆ. ನಾವು ಸಂಪತ್ತಿನ ಒಡೆಯರಾಗಬೇಕೇ ಹೊರತು ಸಂಪತ್ತು ನಮ್ಮ ಒಡೆಯರಾಗಬಾರದು.
ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ|| (ಅಥರ್ವ.3.24.5.)
ನೂರು ಕೈಗಳಿಂದ ಸಂಪಾದಿಸಿ, ಸಾವಿರ ಕೈಗಳಿಂದ ಹಂಚು. ಈ ಲೋಕದಲ್ಲಿ ನಿನ್ನ ಕಾರ್ಯವಿಸ್ತಾರವನ್ನು ಹೀಗೆ ಸಾಧಿಸಿಕೋ ಎಂಬುದು ಇದರ ಅರ್ಥ. ಸಂಪತ್ತಿನ ಸಂಚಯ ಒಳಿತಲ್ಲವಾದರೂ, ಸಂಪಾದಿಸುವುದೇ ಬೇಡವೆನ್ನಲಾಗದು. ಕಷ್ಟಪಟ್ಟು ನೂರು ರೀತಿಯಲ್ಲಿ ಸಂಪಾದಿಸಿ, ಸ್ವಂತಕ್ಕೆ ಮಾತ್ರವಲ್ಲದೆ, ದೀನ-ದುಃಖಿಗಳಿಗೆ, ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಾವಿರ ರೀತಿಗಳಲ್ಲಿ ವಿನಿಯೋಗಿಸಬೇಕೆಂಬ ಈ ಮಾತು ಮನನೀಯ. ನಮ್ಮ ಉಳಿವಿಗೆ ಸಮಾಜ ಬೇಕು, ಆದರೆ ಸಮಾಜಕ್ಕೆ ನಮ್ಮಿಂದ ಏನೂ ಇಲ್ಲವೆಂದಾದರೆ ಅದು ಕೃತಘ್ನತೆಯಾಗುತ್ತದೆ. ಯಾವುದೇ ವ್ಯಕ್ತಿ ತಾನು ಏನು ಹೊಂದಿದ್ದಾನೆಯೋ ಅದೆಲ್ಲವನ್ನೂ ಹೊರಗಿನಿಂದ ಪಡೆದದ್ದೇ ಹೊರತು ತಾನು ತಂದಿದ್ದಲ್ಲ ಮತ್ತು ಅವನು ಅವೆಲ್ಲಕ್ಕೆ ಒಡೆಯನೂ ಅಲ್ಲ. ಈ ಪರಿಜ್ಞಾನ ಬಂದಾಗ ಇರುವುದರಲ್ಲಿ ತೃಪ್ತಿ ಹೊಂದಿ ಸಂತೋಷದಿಂದಿರುವ ಮನೋಭಾವ ನಮ್ಮದಾಗುತ್ತದೆ.
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನನ್ನು?|
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ