ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಜುಲೈ 9, 2017

ಭಾಷೆ - ಉನ್ನತಿಯ ಸಾಧನವಾಗಬಲ್ಲದು!


    120 ವರ್ಷಗಳ ಪಂ. ಸುಧಾಕರ ಚತುರ್ವೇದಿಯವರು ಅನುಪಮ ಸಾಧಕರು, ಜ್ಞಾನಿಗಳು. ಪ್ರತಿ ಶನಿವಾರ ಅವರ ಮನೆಯಲ್ಲಿ ನಡೆಯುವ ಸತ್ಸಂಗದಲ್ಲಿ ಒಂದು ವೇದಮಂತ್ರದ ಅರ್ಥವಿಸ್ತಾರವನ್ನು ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ತಿಳಿಸುತ್ತಿದ್ದರೆ ಆಸಕ್ತಿಯಿರುವವರಿಗೆ ಸತ್ಯದರ್ಶನವಾಗುತ್ತಿರುತ್ತದೆ. ಕಳೆದ ವಾರದ ಸತ್ಸಂಗದಲ್ಲಿ ಅವರು ಆರಿಸಿಕೊಂಡಿದ್ದ ಮಂತ್ರವಿದು:
    ಉತ್ಕ್ರಾಮಾತಃ ಪುರುಷ ಮಾವ ಪತ್ಥಾಃ ಮೃತ್ಯೋಃ ಪಡ್ವೀಶಮವಮುಂಚಮಾನಃ| ಮಾ ಚ್ಛಿತ್ಥಾ ಅಸ್ಮಾಲ್ಲೋಕಾದಗ್ನೇಃ ಸೂರ್ಯಸ್ಯ ಸಂದೃಶಃ|| (ಅಥರ್ವ.8.14.)
ಅರ್ಥ:  ಹೇ ಶರೀರವಾಸೀ ಜೀವ! ಸಾವಿನ ಬಂಧವನ್ನು ಕೆಳಕ್ಕೆ ಸರಿಸಿ ಹಾಕುತ್ತಾ, ಇಲ್ಲಿಂದ ಮೇಲಕ್ಕೆದ್ದು ನಡೆ. ಕೆಳಗೆ ಬೀಳಬೇಡ. ಈ ಲೋಕದಿಂದ, ಕಡಿದು ಹೋಗಬೇಡ. ರಾತ್ರಿಯಲ್ಲಿ ಅಗ್ನಿಯ, ಹಗಲಿನಲ್ಲಿ ಸೂರ್ಯನ ಸಮಾನವಾಗಿ ಪ್ರಕಾಶಿಸು. ಸಾವಿನ ಭಯವನ್ನು ದೂರ ಸರಿಸಿ, ಮೇಲಕ್ಕೇರಬೇಕು, ಕೆಳಕ್ಕೆ ಬೀಳಬಾರದು. ಆಧ್ಯಾತ್ಮಿಕ ಜೀವನದ ಗುಂಗಿನಲ್ಲಿ ಈ ಲೋಕದಿಂದ, ಲೌಕಿಕ ಕರ್ತವ್ಯಗಳಿಂದ ದೂರ ಓಡಬಾರದು, ಜೀವನದ ರಾತ್ರಿಯಲ್ಲಿ ಅಂದರೆ ದುಃಖಮಯ ಸ್ಥಿತಿಯಲ್ಲಿ, ಬೆಂಕಿಯಂತೆ ಉರಿದು ದುಃಖವನ್ನು ದಹಿಸಬೇಕು. ಜೀವನದ ಹಗಲಿನಲ್ಲಿ, ಅಂದರೆ ಸುಖಮಯ ಸ್ಥಿತಿಯಲ್ಲಿ ಸೂರ್ಯನಂತೆ ಬೆಳಗಿ, ಎಲ್ಲರಿಗೂ ಆ ಸುಖವನ್ನು ಹಂಚಿಕೊಡಬೇಕು ಎಂಬ ಆಕರ್ಷಕವಾದ ಆಶಯ ಇಲ್ಲಿದೆ.
     ಅಂದು ಉತ್ತರ ಭಾರತದ ಹಲವರು ಸತ್ಸಂಗದಲ್ಲಿ ಭಾಗವಹಿಸಿದ್ದು ಅವರುಗಳಿಗೆ ಕನ್ನಡ ಬರುತ್ತಿರಲಿಲ್ಲ. ಬಂದಿದ್ದ ಇತರರಲ್ಲಿ ಸಹ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಿತ್ತು. ಹಿಂದಿಯಲ್ಲಿ ಮಾತನಾಡಬೇಕೆಂಬ ಕೋರಿಕೆ ಬಂದಾಗ ನಗುತ್ತಲೇ ಅವರು ಹಿಂದಿಯಲ್ಲಿ ಮಾತನಾಡಿದ್ದಲ್ಲದೆ, ಅವರು ಮಾತನಾಡಿದ ವಿಷಯ ಭಾಷೆಯನ್ನೇ ಕುರಿತದ್ದಾಗಿತ್ತು. ಭಾಷೆಯ ಮಹತ್ವವನ್ನು ಮೇಲಿನ ಮಂತ್ರದೊಂದಿಗೆ ಸಮೀಕರಿಸಿ ವಿವರಿಸಿದ್ದು, ಅವರ ಸಾಮಯಿಕ ಪ್ರಜ್ಞೆ ಮತ್ತು ಪ್ರತಿಯೊಂದರಲ್ಲೂ ಉನ್ನತಿಯ ಹಾದಿಯನ್ನು ತೋರಿಸಬಲ್ಲ ಸಾಧಕತ್ವಕ್ಕೆ ಸಾಕ್ಷಿಯಾಯಿತು. ಯಾವಾಗಲೂ ಕನ್ನಡದಲ್ಲಿಯೇ ಮಾತನಾಡುವ ಅವರಿಗೆ ಅಂದಿನ ದಿನವಾದರೂ ಹಿಂದಿಯಲ್ಲಿ ಮಾತನಾಡುವ ಅವಕಾಶ ಸಿಕ್ಕಿತೆಂದು ತಮಾಷೆ ಮಾಡಿ ಮಾತನಾಡಿದ ಅವರು ಹೇಳಿದ ಕೆಲವು ಅಂಶಗಳನ್ನು ನಾನು ಅರ್ಥೈಸಿಕೊಂಡಂತೆ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.
     ನನ್ನ ಮಾತೃಭಾಷೆ ಕನ್ನಡ. ಕನ್ನಡಕ್ಕೇ ನನ್ನ ಮೊದಲ ಆದ್ಯತೆ. ನಂತರದ ಆದ್ಯತೆ ಹಿಂದಿಗೆ. ಅದರ ನಂತರದ ಆದ್ಯತೆ ಸಂಸ್ಕೃತಕ್ಕೆ. ಹಿಂದಿ ಭಾರತಮಾತೆಯ ಪುತ್ರಿ, ಇತರ ಹಲವು ಭಾಷೆಗಳಂತೆ. ಅದನ್ನು ರಾಷ್ಟ್ರಭಾಷೆ ಅನ್ನಿ, ಸಂಪರ್ಕ ಭಾಷೆ ಅನ್ನಿ, ಏನಾದರೂ ಅನ್ನಿರಿ. ಹಿಂದಿಯಲ್ಲೂ ಎರಡು ವಿಧ - ಉರ್ದು ಮಿಶ್ರಿತ, ಸಂಸ್ಕೃತ ಮಿಶ್ರಿತ. ಉರ್ದು, ಪಾರ್ಸಿ, ಬಿಹಾರಿ, ಇತ್ಯಾದಿ ಹಲವು ಭಾಷೆಗಳ ಕಲಸು ಮೇಲೋಗರದ ಹಿಂದಿ ಭಾಷೆಯೂ ಚಾಲ್ತಿಯಲ್ಲಿದೆ. ಅದನ್ನು ಹಿಂದೂಸ್ಥಾನೀ ಅನ್ನುತ್ತಾರೆ. ನಾನು ದಕ್ಷಿಣ ಭಾರತೀಯ, ಕನ್ನಡಿಗ, ನಾನು ಆಡುವ ಹಿಂದಿಯಲ್ಲಿ ಕನ್ನಡದ ಪ್ರಭಾವವೂ ಇರುತ್ತದೆ. ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಜಾಸ್ತಿ ಇದೆ. ಹಿಂದಿಯಲ್ಲಿ ಮಾತನಾಡುವುದು ಕನ್ನಡಕ್ಕೆ ಮಾಡುವ ಅಪಮಾನವಲ್ಲ. ಭಾಷೆಯ ಕೆಲಸವಾದರೂ ಏನು? ನಮ್ಮ ಭಾವನೆಗಳನ್ನು ಇತರರಿಗೆ ತಲುಪಿಸುವ, ಪ್ರಸರಿಸುವ ಸಾಧನ. ಭಾಷೆಯ ಹೆಸರಿನಲ್ಲಿ ಗುದ್ದಾಡುವುದು ಹಾಸ್ಯಾಸ್ಪದ.  
     ಆನೋ ಭದ್ರಾಃ ಕ್ರತವೋ ಯಂತು ವಿಶ್ವತೋ ದಬ್ಧಾಸೋ ಅಪರೀತಾಸ ಉದ್ಭಿದಃ| ದೇವಾ ನೋ ಯದಾ ಸದಮಿದ್ ವೃಧೇ ಅಸನ್ನಪ್ರಾಯುವೋ ರಕ್ಷತಾರೋ ದಿವೇ ದಿವೇ|| (ಯಜು.25.14.) ಒಳ್ಳೆಯ ಭಾವನೆಗಳು, ಮಂಗಳಕರ ವಿಚಾರಗಳು ಸದಾಕಾಲ ಎಲ್ಲೆಡೆಯಿಂದಲೂ ಲಭಿಸಲಿ, ಜ್ಞಾನಿಗಳು ನಮ್ಮೆಲ್ಲರ ಒಳಿತಿಗಾಗಿ ಒದಗಿಬರಲಿ ಎಂಬ ಮಂತ್ರ ಹೇಳುವುದೂ ಇದನ್ನೇ. ಮಂಗಳಕರ ವಿಚಾರಗಳನ್ನು ಎಲ್ಲೆಡೆಗೆ ಪಸರಿಸಲು ಭಾಷೆಯೇ ಸಾಧನ. ನನ್ನ ಭಾಷೆ ಕನ್ನಡ. ನನ್ನ ಮಾತೃಭಾಷೆಯನ್ನು ಗೌರವಿಸುತ್ತೇನೆ. ಹಿಂದಿ ಸಹ ಅದನ್ನು ಮಾತನಾಡುವವರ ಮಾತೃಭಾಷೆ ಎಂದು ತಿಳಿಯಿರಿ. (ಹಾಗೆಯೇ ತಮಿಳು, ತೆಲುಗು ಇತ್ಯಾದಿಗಳು ಆಯಾ ಭಾಷಿಕರ ಮಾತೃಭಾಷೆ). ಇನ್ನೊಬ್ಬರ ಮಾತೃಭಾಷೆಯನ್ನು ಅಪಮಾನಿಸುವುದು ನನ್ನ ಮಾತೃಭಾಷೆಯನ್ನೂ ಅಪಮಾನಿಸಿದಂತೆ. (ಇನ್ನೊಬ್ಬರ ತಾಯಿಯನ್ನು ಅಗೌರವಿಸುವುದು ನಮ್ಮ ಸಂಸ್ಕೃತಿಗೆ ತರವಲ್ಲ.) ಇಡೀ ಪ್ರಪಂಚದ ಉದ್ಧಾರದ ದಿನ ಎಂದು ಬರುತ್ತದೆ? ನೀನು ಯಾರು? ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಬರುವ ಉತ್ತರ, ನಾನು ಕನ್ನಡಿಗ, ನಾನು ಆಂಧ್ರದವನು, ನಾನು ತಮಿಳಿಗ ಇತ್ಯಾದಿ. ಇಂತಹ ಉತ್ತರಗಳ ಬದಲಿಗೆ ನಾನು ಮಾನವ ಎಂದು ಉತ್ತರ ಬಂದ ದಿನ ಪ್ರಪಂಚದ ಉದ್ಧಾರವಾಗುತ್ತದೆ. ಆಗ ನಮ್ಮ ದೇಶವೂ ಉದ್ಧಾರವಾಗುತ್ತದೆ, ನಮ್ಮ ಉದ್ಧಾರವೂ ಆಗುತ್ತದೆ. 
     ಉತ್ಕ್ರಾಮಾತಃ ಪುರುಷಃ ಮಾ ಅವಪತ್ಥಾ -ಹೇ, ಶರೀರವಾಸಿ ಪುರುಷ (ಜೀವಾತ್ಮ), ನೀನು ಯಾವ ಸ್ಥಿತಿಯಲ್ಲಿದೆಯೋ ಅಲ್ಲಿಂದ ಮೇಲಕ್ಕೇರು, ಬೀಳಬೇಡ. ಜಾರುವುದು, ಬೀಳುವುದು   ಸುಲಭ, ಏರುವುದು ಕಷ್ಟ. ಒಳ್ಳೆಯ ಭಾವನೆಗಳನ್ನು ಎಲ್ಲೆಲ್ಲೂ ಪ್ರಸರಿಸಿರಿ. ನಗಬಲ್ಲವನು ಮನುಷ್ಯ, ಅಳಬಲ್ಲವನು ಪಶು; ಪಶುಗಳಾಗಬೇಡಿ, ಮನುಷ್ಯರಾಗಿ. ಆತ್ಮದ ಭಾಷೆ ಯಾವುದು? ಆತ್ಮಕ್ಕೇ ಗೊತ್ತು! ನಮ್ಮ ಎಲ್ಲಾ ಶಾಸ್ತ್ರಗಳು ಸಂಸ್ಕೃತದಲ್ಲಿವೆ, ಅದಕ್ಕೇ ಅದನ್ನು ದೇವಭಾಷೆ ಎನ್ನುತ್ತಾರೆ. ಸಂಸ್ಕೃತವನ್ನು ಆದರಿಸುತ್ತೇನೆ, ಲೋಕಭಾಷೆಯಲ್ಲಿ ಮಾತನಾಡುತ್ತೇನೆ, ಏಕೆಂದರೆ ನನ್ನ ಭಾವನೆಗಳನ್ನು ಜನರಿಗೆ ತಲುಪಿಸಬೇಕು, ಅದು ಮುಖ್ಯ. ಭಾಷೆಯ ವಿಷಯದಲ್ಲಿ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದವರಿಂದ ಹಿಂದೆ ನನಗೆ ತೊಂದರೆಯೂ ಆಗಿದೆ. ನಾವು ಯಾವ ಪ್ರಾಂತದಲ್ಲಿ ಹುಟ್ಟುತ್ತೇವೆ, ಅಲ್ಲಿನ ಅನ್ನ ತಿನ್ನುತ್ತೇವೆ, ನೀರು ಕುಡಿಯುತ್ತೇವೆ, ಅಲ್ಲಿನ ಭಾಷೆ ಆಡುತ್ತೇವೆ. ನನಗೆ ತೆಲುಗು, ತಮಿಳು ಭಾಷೆಯ ಬಗ್ಗೆ ದ್ವೇಷವಿಲ್ಲ, ಅದು ನನ್ನ ಭಾಷೆಯಲ್ಲದಿರಬಹುದು, ಆದರೆ ಅವೂ ನಮ್ಮವೇ! ಆ ಭಾಷೆಗಳು ನನ್ನ ಸಹೋದರ, ಸಹೋದರಿಯರ ಭಾಷೆಗಳು! ಭಾಷೆಯ ಹೆಸರಿನಲ್ಲಿ ಗುದ್ದಾಡಬಾರದು. ಭಾಷೆ ಒಂದು ಸಾಧನ ಮಾತ್ರ.  ಕನ್ನಡದಲ್ಲಿ ಮಾತನಾಡುವುದು ನಮ್ಮ ಕರ್ತವ್ಯವಾಗುತ್ತದೆ. ಯಾವ ಭಾಷೆ ತಿಳಿದಿದೆಯೋ ಅದರಲ್ಲಿ ಜನರು ಮಾತನಾಡುತ್ತಾರೆ. ಆ ವಿಷಯದಲ್ಲಿ  ದುರಾಗ್ರಹ ಸಲ್ಲದು.  ನನಗೆ ನಾಲ್ಕು-ಐದು ಭಾಷೆಗಳು ಬರುತ್ತವೆ. ನನ್ನ ಪ್ರಥಮ ಆದ್ಯತೆ ಮಾತ್ರ ಕನ್ನಡಕ್ಕೆ. ಎಲ್ಲಾ ಭಾಷೆಗಳನ್ನು ಆದರದಿಂದ ಕಾಣಬೇಕು. ನಮ್ಮ ಮಾತೃಭಾಷೆಯ ಮೇಲೆ ಸ್ವಾಭಾವಿಕ ಪ್ರೇಮ ಇದ್ದೇ ಇರುತ್ತದೆ, ಇರಬೇಕು, ಅದು ತಪ್ಪಲ್ಲ. ಮಾತೃಭಾಷೆಯಿರಲಿ, ರಾಷ್ಟ್ರಭಾಷೆಯಿರಲಿ, ಗೌರವಿಸಬೇಕು.  ಮೂಕರಿಗೆ ಯಾವ ಭಾಷೆ? ಭಾಷೆಯ ಕಾರಣದಿಂದ ಗುದ್ದಾಡುವ ಬದಲು ಮೂಗರಾಗುವುದು ಒಳ್ಳೆಯದು. 
     ಮಾತಾಡುವುದಾದರೆ ಸತ್ಯವನ್ನೇ ಆಡು, ಆಡುವುದಾದರೆ ಪ್ರೇಮ ಹೆಚ್ಚಿಸುವ ಮಾತನಾಡು, ದ್ವೇಷ ಉಂಟುಮಾಡುವ ಕಹಿ ಮಾತುಗಳನ್ನು ಆಡಬಾರದು. ಯಾವ ಪವಿತ್ರ ನಾಲಿಗೆಯನ್ನು ಪರಮಾತ್ಮ ಕೊಟ್ಟಿದ್ದಾನೋ ಅದನ್ನು ಕೊಳಕು ಮಾತನಾಡಿ ಅಪವಿತ್ರಗೊಳಿಸಬಾರದು. ಒಳ್ಳೆಯದನ್ನು ಆಡು, ಸುಂದರವಾಗಿ ಆಡು. ಭಾಷೆ ಆತ್ಮವನ್ನು ಆತ್ಮದೊಂದಿಗೆ ಜೋಡಿಸಬೇಕು, ಆತ್ಮದೊಂದಿಗೆ ಆತ್ಮವನ್ನು ಎಚ್ಚರಿಸಬೇಕು. ಭಾಷೆಯೂ ನಮ್ಮನ್ನು ಉನ್ನತಿಗೇರಿಸುವ, ಮೇಲಕ್ಕೇರುವ ಸಾಧನವಾಗಬಲ್ಲದು.  ಯಾರು ಎಲ್ಲಿ ಹುಟ್ಟುತ್ತಾರೆ ಎಂದು ಯಾರಿಗೆ ಗೊತ್ತು? ಸದಾ ಹಿತ, ಮಿತ, ಸತ್ಯದ ಮಾತುಗಳಾಡಬೇಕು. ಸಾಂದರ್ಭಿಕವಾಗಿಯೂ ಇರಬೇಕು. ಸತ್ಯದ ಮಾತು ಎಂದು ಕುರುಡನೊಬ್ಬನನ್ನು, ಏಯ್ ಕುರುಡಾ, ಬಾ ಇಲ್ಲಿ ಎಂದು ಕರೆದರೆ ಅದು ಹಿತವಾದ ಮಾತಾಗುವುದಿಲ್ಲ. ಇಂತಹ ಸೂಕ್ಷ್ಮವನ್ನು ತಿಳಿಯಬೇಕು. ಯಾವಾಗ ಮೌನವಾಗಿರಬೇಕು, ಯಾವಾಗ ಮೌನವಾಗಿರಬಾರದು ಎಂಬ ಅರಿವು ಇರಬೇಕು. ಅನ್ಯಾಯ ಕಂಡಾಗ ಸುಮ್ಮನಿರಬಾರದು. ಹಾಗೆಯೇ ಯಾರದಾದರೂ ಸಾವು ಸಂಭವಿಸಿದ ಸಂದರ್ಭದಲ್ಲಿ ಅನುಚಿತವಾದ ಮಾತನಾಡದೆ, ಸಂಬಂದಿಗಳ ಬೆನ್ನು ತಟ್ಟಿ ಮೌನವಾಗಿ ಸಂತೈಸಲೂ ಸಾಧ್ಯವಿದೆ. ಕೆಲವೊಮ್ಮೆ ಕಟುವಾಗಿಯೂ ಮಾತಾಡಬೇಕಾಗುತ್ತದೆ. ತಂದೆ, ತಾಯಿ ಮಕ್ಕಳನ್ನು, ಶಿಕ್ಷಕ ವಿದ್ಯಾರ್ಥಿಯನ್ನು ಕೆಲವೊಮ್ಮೆ ಬಯ್ಯಬೇಕಾಗುತ್ತದೆ. ಅದರ ಉದ್ದೇಶ ಅವರನ್ನು ಸುಧಾರಿಸಿ ಉತ್ತಮವಾಗಿಸಬೇಕೆಂಬುದಾಗಿರುತ್ತದೆ. ಬಯ್ಯುವುದು ನಮ್ಮ  ಹಕ್ಕು ಎಂಬಂತೆ ಅವರು ಹಾಗೆ ಮಾಡಲಾಗುವುದೇ? ಅದೂ ಸರಿಯಲ್ಲ. ನೀನು ಯಾರು? ನಾನು ಮಾನವ. ನಿನ್ನ ಕರ್ತವ್ಯ ಏನು? ಇರುವಷ್ಟು ದಿನ ನಗುವುದು, ನಗಿಸುವುದು! ಎಲ್ಲರ ಹಿತವನ್ನೇ ಬಯಸುವುದು! ನೀನೂ ನಗು, ಎಲ್ಲರನ್ನೂ ನಗಿಸು! ಇದೇ ಉನ್ನತಿಗೇರುವ ಸಾಧನ! ಮೇಲಕ್ಕೇರುವ ದಾರಿಯಲ್ಲಿ ಸಾಗಿ, ಕೆಳಕ್ಕೆ ಬೀಳಬೇಡಿ! 
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ