ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಜುಲೈ 23, 2017

ಸಾಯದಿರೋಣ!


ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ ||
     ಒಮ್ಮೆ ಪ್ರಾಸಂಗಿಕವಾಗಿ ಲೇಖನವೊಂದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದ ಸಂದಿಗ್ಧ ಸಂದರ್ಭದಲ್ಲಿ ಧ್ಯಾನದ ಮೊರೆ ಹೋಗಿ ಸಾಂತ್ವನ ಕಂಡುಕೊಂಡ ಬಗ್ಗೆ ಬರೆದಿದ್ದೆ. ಅದಕ್ಕೆ ಮಿತ್ರರೊಬ್ಬರು ಧ್ಯಾನದ ಅಗತ್ಯವೇ ಇಲ್ಲ, ಬೇರೆ ವಿಷಯದಲ್ಲಿ ಆಸಕ್ತರಾದಾಗ ಆತ್ಮಹತ್ಯೆ ಯೋಚನೆ ತಾನೇ ದೂರವಾಗುತ್ತದೆ ಎಂದಿದ್ದರು. ಆ ಪ್ರತಿಕ್ರಿಯೆ ಈ ಲೇಖನಕ್ಕೆ ಪ್ರೇರಣೆಯಾಗಿದೆ. ನೀರಿನಲ್ಲಿ ಮುಳುಗುತ್ತಿರುವ ಈಜು ಬಾರದ ವ್ಯಕ್ತಿಯೊಬ್ಬ ಬದುಕಿ ಉಳಿಯಲು ಕೈಲಾದ ಎಲ್ಲಾ ಪ್ರಯತ್ನ ಮಾಡುತ್ತಾನೆ, ಕೈಗೆ ಸಿಕ್ಕುವ ಎಂತಹದನ್ನಾದರೂ ಹಿಡಿದು ಮೇಲೆ ಬರಲು ಪ್ರಯತ್ನಿಸುತ್ತಾನೆ. ಸಹಾಯಕ್ಕಾಗಿ ಆರ್ತನಾದ ಮಾಡುತ್ತಾನೆ. ಯಾವುದೇ ಸಹಾಯ ಸಿಗದಿದ್ದಾಗ ಅನಿವಾರ್ಯವಾಗಿ ಸಾವಿಗೆ ಶರಣಾಗುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳುವವನ ಸ್ಥಿತಿ ಸಹ ಒಂದು ರೀತಿಯಲ್ಲಿ ಹಾಗೆಯೇ ಇರುತ್ತದೆ. ಸಮಸ್ಯೆಯ ಸುಳಿಯಿಂದ ಪಾರಾಗಲು ಇನ್ನಿಲ್ಲದ ಪ್ರಯತ್ನ ಮಾಡುವ ಅವನಿಗೆ ಸಹಾಯದ ಎಲ್ಲಾ ದಾರಿಗಳೂ ಮುಚ್ಚಲ್ಪಟ್ಟಾಗ ಉಳಿಯುವುದು ದೇವರ ಮೊರೆ ಹೋಗುವುದು ಅರ್ಥಾತ್ ಧ್ಯಾನಿಸುವುದು ಮತ್ತು ಅವ್ಯಕ್ತ ಸಹಾಯಕ್ಕಾಗಿ ಹಂಬಲಿಸುವುದು ಮಾತ್ರ. ಅಲ್ಲೂ ಅವನಿಗೆ ನಿರಾಶೆಯಾದರೆ . . . .? ಆಗ ಮನಸ್ಸು ಬೇರೆ ವಿಚಾರಗಳ ಕುರಿತು ಯೋಚಿಸುವ ವ್ಯವಧಾನ ಕಳೆದುಕೊಂಡಿರುತ್ತದೆ. ಪರಿಸ್ಥಿತಿಯ ಅರಿವಿರುವ ಸ್ನೇಹಿತರು, ಬಂಧುಗಳು ದೇವರ ರೂಪದಲ್ಲಿ ಅವನಿಗೆ ಸಹಾಯಕ್ಕೆ ಒದಗಿದರೆ ಮಾತ್ರ ಅವನನ್ನು ಉಳಿಸಬಹುದು.
     ಆತ್ಮಹತ್ಯೆ ಹತಾಶೆಯ ನಡವಳಿಕೆ. ಖಿನ್ನತೆ, ಮಾನಸಿಕ ಕಾಯಿಲೆಗಳು, ದೈಹಿಕ ಅನಾರೋಗ್ಯ, ಮಾದಕ ದ್ರವ್ಯಗಳ ಸೇವನೆ, ಒತ್ತಡಗಳು, ಆರ್ಥಿಕ ಹಿನ್ನಡೆ, ಧಾರ್ಮಿಕ/ಸಾಮಾಜಿಕ ಸಂಗತಿಗಳು, ವಿಫಲತೆ, ಅವಮಾನ ಮುಂತಾದವು ಆತ್ಮಹತ್ಯೆಯನ್ನು ಪ್ರೇರಿಸುವಂತಹವು. ನೇಣು ಹಾಕಿಕೊಳ್ಳುವುದು, ವಿಷ ಸೇವನೆ, ನೀರಿನಲ್ಲಿ ಮುಳುಗುವುದು, ಇತ್ಯಾದಿಗಳು ಆತ್ಮಹತ್ಯೆ ಮಾಡಿಕೊಳ್ಳುವವರು ಆರಿಸಿಕೊಳ್ಳುವ ರೀತಿಗಳು. ಆತ್ಮಹತ್ಯೆ ಮಾಡಕೊಳ್ಳುವವರಲ್ಲಿ ಹೆಚ್ಚಿನವರು ಮಧ್ಯ ವಯಸ್ಕರು ಮತ್ತು ವೃದ್ಧರು ಎಂದು ಅಂಕಿ-ಅಂಶಗಳು ಹೇಳುತ್ತವೆ. ಅವರುಗಳಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಅಧಿಕವಾಗಿರುವುದು ಕುತೂಹಲಕಾರಿಯಾಗಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರು ಚೀನೀಯರು. ವರ್ಷದಲ್ಲಿ ಸುಮಾರು 2.5 ಲಕ್ಷದಿಂದ 3 ಲಕ್ಷ ಜನರು ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ.  ಸಿಗ್ಮಂಡ್ ಫ್ರಾಯ್ಡ್, ಕ್ಲಿಯೋಪಾತ್ರ, ಮಾರ್ಕ್ ಅಂಟೊನಿ, ಬ್ರೂಟಸ್, ಅಡಾಲ್ಫ್ ಹಿಟ್ಲರ್, ಅರ್ನೆಸ್ಟ್ ಹೆಮಿಂಗ್ ವೇ, ಸೋಕ್ರೆಟಿಸ್, ಮರ್ಲಿನ್ ಮನ್ರೋ, ಮುಂತಾದ ಖ್ಯಾತನಾಮರು ಜೀವನ ಕೊನೆಗೊಳಿಸಿಕೊಂಡದ್ದು ಆತ್ಮಹತ್ಯೆಯಿಂದಲೇ. ಕನ್ನಡದ ಚಲನಚಿತ್ರ ನಟಿಯರಾದ ಕಲ್ಪನಾ, ಮಂಜುಳಾರವರ ಅಂತ್ಯವೂ ಆತ್ಮಹತ್ಯೆಯಿಂದಲೇ ಆದದ್ದು. ಹಿಂದೆ ಶತ್ರುಗಳಿಂದ ಬಂಧನಕ್ಕೊಳಗಾಗಿ ಚಿತ್ರಹಿಂಸೆ ಅನುಭವಿಸುವುದಕ್ಕಿಂತ ಸಾಯುವುದೆ ಮೇಲು ಎಂದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದವರೂ ಇದ್ದರು. ಮುಸ್ಲಿಮ್ ದಾಳಿಕೋರರಿಂದ ಅವಮಾನಿತರಾಗುವುದನ್ನು ತಪ್ಪಿಸಿಕೊಳ್ಳಲು ರಜಪೂತ ಸ್ತ್ರೀಯರು ಸ್ವತಃ ಚಿತೆಗೆ ಹಾರಿ (ಜೌಹರ್) ಪ್ರಾಣ ಬಿಟ್ಟ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲೆಗಳಿವೆ. ಸಮೂಹ ಸನ್ನಿಯಂತೆ ಮೆಚ್ಚಿನ ನಾಯಕರು ನಿಧನರಾದಾಗ ಶೋಕ ತಡೆಯಲಾರದೆ ಹಲವಾರು ಜನ ಪ್ರಾಣ ಕಳೆದುಕೊಂಡದ್ದೂ ಇದೆ.
     ಆತ್ಮಹತ್ಯೆ ಬಯಸಿ ಮಾಡಿಕೊಳ್ಳುವ ಸಂಗತಿಯಾಗಿರದೆ ಎಲ್ಲಾ ಮಾರ್ಗಗಳೂ ವಿಫಲವಾಗಿ ನೋವು ಅಸಹನೀಯವೆನಿಸಿದಾಗ ನಡೆಯುವ ಸಂಗತಿ. ಇದನ್ನು ತಡೆಯುವುದು ಹೇಗೆ? ಎರಡು ಅವಕಾಶಗಳಿವೆ: ಒಂದು- ನೋವನ್ನು ಕಡಿಮೆ ಮಾಡಿಕೊಳ್ಳಲು ದಾರಿ ಹುಡುಕುವುದು; ಎರಡು: ಹೊಸ ಮಾರ್ಗೋಪಾಯಗಳನ್ನು ಅರಸುವುದು. ನಿಜವಾಗಿ ಯಾರೂ ಸಾಯಬಯಸುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡವರಿಗೆ ಮರಳಿ ಜೀವ ಬರಿಸಿ, ಅವರು ಸಾಯಬಯಸುತ್ತಾರೋ ಅಥವ ಬದುಕಬಯಸುತ್ತಾರೋ ಎಂದು ಕೇಳಿದರೆ ಅವರುಗಳು ಬದುಕುವುದನ್ನೇ ಆರಿಸಿಕೊಳ್ಳುತ್ತಾರೆ. ಏಕೆಂದರೆ ದುಡುಕಿನ ವಿಷಘಳಿಗೆ ಅದಾಗಲೇ ಕಳೆದುಹೋಗಿರುತ್ತದೆ. ಉತ್ಕಟ ಸನ್ನಿವೇಶದಲ್ಲಿ ದುಡುಕಿ ಕೈಗೊಳ್ಳುವ ಆತ್ಮಹತ್ಯೆಯತ್ನದಲ್ಲಿ ತಕ್ಷಣಕ್ಕೆ ಸಾವು ಸಂಭವಿಸದೇ ಇದ್ದಾಗ ಜೀವ ಮರಳಿ ಬದುಕಲು ಚಡಪಡಿಸುತ್ತಿರುತ್ತದೆ. ಕೆಲವು ಪ್ರಸಂಗಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿ ಸಾಯದೇ ಬದುಕುಳಿದವರು ಜೀವಚ್ಛವಗಳಂತೆ ಆಗಿ ಇನ್ನೊಬ್ಬರ ಆಶ್ರಯದಲ್ಲಿ ಇರಬೇಕಾಗಿ ಬಂದುದನ್ನೂ ಕಂಡಿದ್ದೇವೆ. ಕೆಲವು ದಶಕಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದ ಕತೆಗಾರ್ತಿಯೊಬ್ಬರು ಅದೃಷ್ಟವಶಾತ್ ಮನೆಯವರ ಸಕಾಲಿಕ ಕ್ರಮ ಮತ್ತು ಚಿಕಿತ್ಸೆಯಿಂದ ಬದುಕಿ ಉಳಿದರು. ನಂತರದಲ್ಲಿ ಆಕೆ ಇತರರಿಗೆ ಆತ್ಮಹತ್ಯೆ ಮಾಡಿಕೊಳ್ಳದಿರಲು ಪ್ರೇರಣೆ ಕೊಡುವ ಲೇಖನ ಬರೆದಿದ್ದರು. ತಾಲ್ಲೂಕು ದಂಡಾಧಿಕಾರಿಯಾಗಿದ್ದಾಗ ನೂರಾರು ಶವಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆ. ಸಂಬಂಧಿಕರ ವಿಚಾರಣೆ, ಹೇಳಿಕೆಗಳನ್ನೂ ದಾಖಲಿಸಿದ್ದೆ. ಬಹುತೇಕ ಸಂದರ್ಭಗಳಲ್ಲಿ ಕಂಡುಬಂದಿದ್ದೇನೆಂದರೆ ಸಂಬಂಧಿಕರು ಸಕಾಲದಲ್ಲಿ ಮೃತರ ಸಹಾಯಕ್ಕೆ ಒದಗಿದ್ದಿದ್ದರೆ ಅವರುಗಳು ಬದುಕಿ ಉಳಿಯುವ ಅವಕಾಶಗಳಿದ್ದವು ಎಂಬುದು!
     ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ತಾನಾಗಿ ಬಂದಾಗ ಸಂತೋಷದಿಂದ ಮಿತ್ರನಂತೆ ಬರಮಾಡಿಕೊಳ್ಳೋಣ. ವಿರಳವಾದ ಮಾನವಜನ್ಮ ಹೊಂದುವುದು ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮಕ್ಕೆ ಹುಟ್ಟು-ಸಾವುಗಳಿಲ್ಲ, ಆದಿ-ಅಂತ್ಯಗಳಿಲ್ಲ. ಆದರೆ, ಒಂದು ವಿಶೇಷವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ.
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.12.3.48.)
     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶವಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಬೇಕೆ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನ ಉದಾಹರಣೆಯಾಗಿದ್ದಾನೆ. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ, ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಕೊನೆಯವರೆಗೂ ಇತ್ತು. ಆಶಾವಾದವೇ ಜೀವನ, ನಿರಾಶಾವಾದವೇ ಮರಣ. ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ.
     ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಗೆ ತಲುಪಿದವರಲ್ಲಿ ಹಲವರು ಕೊನೆಯ ಬಾರಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಬಯಸುತ್ತಾರೆ, ಸುಖವಾಗಿರಲೆಂದು ಹಾರೈಸುತ್ತಾರೆ. ಆ ಹತ್ತಿರದವರು ಸೂಕ್ಷ್ಮಮತಿಗಳಾಗಿದ್ದರೆ ನೆರವಿಗೆ ಬರುತ್ತಾರೆ ಮತ್ತು ಜೀವ ಉಳಿಯುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ತಿಳಿದರೆ ಅವರನ್ನು ಒಲಿಸಿ, ಓಲೈಸಿ ಮನ ಪರಿವರ್ತನೆ ಮಾಡಲು ಕೆಲವು ಸಮಾಜಸೇವಾಸಕ್ತ ಸಂಸ್ಥೆಗಳು ನಗರಗಳಲ್ಲಿ ಕಾರ್ಯಪ್ರವೃತ್ತವಾಗಿರುತ್ತವೆ. ಆದರೆ, ತುರ್ತು ಮತ್ತು ಸಕಾಲಿಕ ನೆರವು ಒದಗಿಸುವವರು ಕುಟುಂಬದ ಸದಸ್ಯರೇ ಆದರೆ ಪರಿಣಾಮಕಾರಿ. ಸೂಕ್ಷ್ಮ ಮನಸ್ಸಿನವರು ಒಂದು ವಿಷಯ ಮನದಟ್ಟು ಮಾಡಿಕೊಳ್ಳಬೇಕು. ಅದೆಂದರೆ, ಆಗಿಹೋಗಿರುವ ಸಂಗತಿಗಳನ್ನು ಅಳಿಸಿ ಬೇರೆಯದನ್ನು ಬರೆಯಲು ಅವಕಾಶವಿಲ್ಲ. ಆದರೆ, ಶೇಷ ಜೀವನವನ್ನು ಸೂಕ್ತ ರೀತಿಯಲ್ಲಿ ಮಾರ್ಪಡಿಸಿ ಬಾಳಲು ಅವಕಾಶವಿದೆ. ಈ ಜಗತ್ತಿನಲ್ಲಿ ಬಲಿಷ್ಠರಿಗೆ ಅವಕಾಶವಿದೆ. ಆದ್ದರಿಂದ ಮಾನಸಿಕವಾಗಿ ಗಟ್ಟಿಗೊಳ್ಳುವುದು ಅತಿ ಅವಶ್ಯಕವಾಗಿದೆ. ನಾವು ಒಂಟಿ, ಏನೂ ಮಾಡಲಾಗುವುದಿಲ್ಲವೆಂದು ಅಸಹಾಯಕತೆಯಿಂದ ಕುಗ್ಗಿದರೆ ಹಾನಿ ನಿಶ್ಚಿತ. ಏನೇ ಬರಲಿ, ಒಂದು ಕೈ ನೋಡೇಬಿಡೋಣ ಎಂದು ಮುನ್ನಡೆದರೆ ಯಶಸ್ಸಿನ ಬಾಗಿಲು ತೆರೆದುಕೊಳ್ಳುತ್ತದೆ. ಪರಿಹಾರವಿಲ್ಲದ ಸಮಸ್ಯೆಗಳಿಲ್ಲ ಎಂಬುದನ್ನು ಮನಗಂಡು ಮುನ್ನಡೆದರೆ ವಿಹ್ವಲಗೊಳ್ಳುವ ಸಂಭವ ಕಡಿಮೆ. ಬದುಕೋಣ, ಸಾಯುವವರೆಗೂ ಬದುಕೋಣ, ಸಾಯದಿರೋಣ, ಬದುಕಿ ಸಾಯೋಣ.
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ