ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 21, 2017

ವಿಧಿ ಲಿಖಿತವೋ, ಸ್ವಯಂಕೃತವೋ?


     'ಎಲ್ಲಾ ವಿಧಿಲಿಖಿತ, ನಾವೇನು ಮಾಡೋಕಾಗುತ್ತೆ?', 'ಹಣೆ ಬರಹಕ್ಕೆ ಹೊಣೆ ಯಾರು? ಬಂದದ್ದನ್ನು ಅನುಭವಿಸಲೇಬೇಕು' - ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಯಾವುದೇ ವ್ಯಕ್ತಿ ಅನಿವಾರ್ಯವಾಗಿ ಎದುರಿಸಲೇಬೇಕು, ಅನುಭವಿಸಲೇಬೇಕು ಎನ್ನುವ ಸಂಗತಿಗಳು ನಮ್ಮ ಜೀವನವನ್ನು ನಿರ್ದೇಶಿಸುತ್ತವೆ. ನಾವು ಹೇಗೆ ಜೀವಿಸಬೇಕೆಂಬುದನ್ನು ನಿರ್ಧರಿಸಬಲ್ಲೆವು, ಆದರೆ ಎಂದು ಹುಟ್ಟಬೇಕು, ಎಲ್ಲಿ ಹುಟ್ಟಬೇಕು ಎಂಬುದನ್ನು ನಿರ್ಧರಿಸಲಾರೆವು. ಅಪ್ಪ-ಅಮ್ಮ ಯಾರಾಗಬೇಕು ಎಂಬುದೂ ನಮ್ಮ ಕೈಯಲ್ಲಿಲ್ಲ. ಕುಟುಂಬದವರನ್ನು ನಾವು ಪ್ರೀತಿಸಬಹುದು ಅಥವ ದ್ವೇಷಿಸಬಹುದು, ಆದರೆ ನಮ್ಮ ಕುಟುಂಬವನ್ನು ಆರಿಸಿಕೊಳ್ಳಲಾರೆವು. ಎಂತಹ ವಿಚಿತ್ರ! ಎಂತಹ ಚಿಕಿತ್ಸೆ ಬೇಕೆಂದು ಆರಿಸಿಕೊಳ್ಳಬಹುದು, ಎಂತಹ ಕಾಯಿಲೆ ಬೇಕೆಂದು ಆರಿಸಿಕೊಳ್ಳಬಹುದೇ? ಎಲ್ಲಾ ಗೊಂದಲವೇ! ಎಂದೂ ಸಾಯಬಾರದು ಎಂದುಕೊಂಡರೆ ಸಾಧ್ಯವೇ? ಅದೃಷ್ಟವಂತ ಒಂದೇ ಪ್ರಯತ್ನದಲ್ಲಿ ಅಸಾಧ್ಯವಾದುದನ್ನು ಸಾಧಿಸಿಬಿಡಬಹುದು; ಆದರೆ ದುರದೃಷ್ಟವಂತ ಅದೇ ಕೆಲಸವನ್ನು ನೂರು ಸಲ ನೂರು ವಿಧದಲ್ಲಿ ಮಾಡಲು ಪ್ರಯತ್ನಿಸಿ ವಿಫಲನಾಗಿಬಿಡಬಹುದು. ಇದನ್ನು ಹಣೆಬರಹವೆನ್ನಬಹುದೇ? ಇಂತಹ ನೂರಾರು ಸಂದಿಗ್ಧಗಳು, ಸನ್ನಿವೇಶಗಳು ಗೊಂದಲಕ್ಕೆ ಈಡು ಮಾಡುತ್ತವೆ.
     ಹಣೆಬರಹ, ವಿಧಿಲಿಖಿತ ಮುಂತಾದುವಕ್ಕೆ ಅರ್ಥ ಬರಬೇಕೆಂದರೆ ಸನಾತನ ಧರ್ಮೀಯರು ನಂಬುವಂತೆ ಪುನರ್ಜನ್ಮ ಮತ್ತು ಕರ್ಮಫಲವಿರಬೇಕು ಅನ್ನಿಸುತ್ತದೆ. ಇಲ್ಲದಿದ್ದರೆ ಯಾವುದೇ ಒಂದು ಜೀವಿ ಬಡತನದ ಮನೆಯಲ್ಲಿ ಏಕೆ ಜನಿಸಬೇಕು, ಹದ್ದು, ಗೂಬೆಯಾಗಿ ಏಕೆ ಹುಟ್ಟಬೇಕು, ತನ್ನ ಯಾವುದೇ ತಪ್ಪಿಲ್ಲದೆ ಅಂಗವಿಕಲವಾಗಿ ಹುಟ್ಟಬೇಕು ಅಥವ ಶ್ರೀಮಂತರ ಮನೆಯಲ್ಲಿ ಬಾಳುವಂತಾಗಬೇಕು? ಕ್ರೈಸ್ತರು, ಮಹಮದೀಯರು ಪುನರ್ಜನ್ಮ ನಂಬುವುದಿಲ್ಲ. ಹಾಗಾದರೆ ಹುಟ್ಟುವಾಗಲೇ ಬರುವ ಇಂತಹ ವೈಪರೀತ್ಯಗಳಿಗೆ ಏನು ಕಾರಣ ಕೊಡಬೇಕು? ಸತ್ತ ಮೇಲೆ ತನ್ನ ಪಾಪ/ಪುಣ್ಯಗಳಿಗೆ ತಕ್ಕಂತೆ ಫಲ ಅನುಭವಿಸುವುದಾದರೆ, ಪುನರ್ಜನ್ಮವಿಲ್ಲವೆಂದಾದರೆ, ಹುಟ್ಟುತ್ತಲೇ ಈ ರೀತಿಯ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿಗೆ ವಿವರಣೆ ಕೊಡುವುದು ಕಷ್ಟವಾಗುತ್ತದೆ. ಯಾವುದೇ ಕಾರಣವಿಲ್ಲದೆ, ತಮ್ಮ ಯಾವುದೇ ತಪ್ಪಿಲ್ಲದೆ ಕೆಲವರನ್ನು ಸುಖಿಗಳನ್ನಾಗಿ, ಕೆಲವರನ್ನು ದುಃಖಿಗಳನ್ನಾಗಿ ಹುಟ್ಟಿಸಿದರೆ ದೇವರು ನಿಷ್ಕರುಣಿ ಅಥವ ಪಕ್ಷಪಾತಿ ಎನ್ನಬೇಕಾಗುತ್ತದೆ. ಅಲ್ಲದೆ ಅಂತಹ ಸಂದರ್ಭದಲ್ಲಿ ಜೀವಿಗಳು ಮಾಡುವ ಕೆಟ್ಟ ಮತ್ತು ಒಳ್ಳೆಯ ಕೆಲಸಗಳಿಗೆ ದೇವರೇ ಹೊಣೆಗಾರನಾಗಬೇಕಾಗುತ್ತದೆ. ಹಾಗೆ ಇರಲಾರದು! ಅಲ್ಲದಿದ್ದರೆ ಈ ಸ್ಥಿತಿಗೆ ಕೊಡಬಹುದಾದ ಮತ್ತು ಒಪ್ಪಬಹುದಾದ ವಿವರಣೆಯೆಂದರೆ ಜೀವಿಯು ಮಾಡಿದ ಕರ್ಮಫಲವಾಗಿ ಹೀಗೆ ಆಗುತ್ತದೆಂಬುದು! ಒಬ್ಬರೇ ತಂದೆ-ತಾಯಿಗಳಿಗೆ ಹುಟ್ಟಿದ ಮಕ್ಕಳೆಲ್ಲರೂ ಒಂದೇ ಗುಣ, ಸ್ವಭಾವದವರು, ಸಾಮರ್ಥ್ಯ, ಅಭಿರುಚಿಯುಳ್ಳವರಾಗಿರುವುದಿಲ್ಲ.  ಹಿಂದಿನ ಸಂಸ್ಕಾರಗಳ ಫಲವಿರುವುದಿಲ್ಲ, ಪುನರ್ಜನ್ಮವಿಲ್ಲ ಎಂದಾಗಿದ್ದರೆ ಎಲ್ಲರೂ ಸಮಾನ ವ್ಯಕ್ತಿತ್ವದವರಾಗಿರುತ್ತಿದ್ದರು. ಪ್ರತಿ ಜೀವಿಯೂ ಹಿಂದೆ ಮಾಡಿದ ಒಳ್ಳೆಯ, ಕೆಟ್ಟ ಕೆಲಸಗಳಿಗನುಗುಣವಾಗಿ ಕಟ್ಟಿಕೊಂಡು ಬಂದ ಬುತ್ತಿಯ ಗಂಟನ್ನು ಹೊತ್ತುಕೊಂಡೇ ಬರುತಾನೆ ಎಂಬುದನ್ನು ಒಪ್ಪಿಕೊಂಡರೆ ಮಾತ್ರ ದೇವರು ಕ್ರೂರಿಯಲ್ಲ, ಪಕ್ಷಪಾತಿಯಲ್ಲ್ಲ ಎನ್ನಬಹುದು. ಅಥರ್ವವೇದದ ಒಂದು ಮಂತ್ರ ಹೀಗೆ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.12.3.48)
     ಈ ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ, ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಸಹಕಾರಿಗಳ ಸಹಾಯದಿಂದ ಮೋಕ್ಷಕ್ಕೆ ಸೇರುತ್ತೇನೆಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ/ಕರ್ಮಫಲವಿಪಾಕ ಪಾಕ ಮಾಡಿದವನನ್ನು ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಈ ಮಂತ್ರದ ಅರ್ಥ. 'ಮಾಡಿದ್ದುಣ್ಣೋ ಮಹರಾಯ!' ತಾನು ಮಾಡಿದ ಪಾಪವನ್ನು ಇತರರ ಹೆಗಲಿಗೆ ಹೊರಿಸಿ ಪಾರಾಗಬಹುದೆಂದಾಗಲೀ, ಯಾವುದೇ ಪೂಜಾರಿ, ಪಾದ್ರಿ, ಮೌಲ್ವಿಗಳ ಮಧ್ಯಸ್ತಿಕೆಯಿಂದ ಪುಣ್ಯ ಗಳಿಸಬಹುದೆಂದಾಗಲೀ, ಮುಕ್ತಿ ಹೊಂದಬಹುದೆಂಬುದಾಗಲೀ, ತಪ್ಪುಕಾಣಿಕೆ ಒಪ್ಪಿಸಿ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಬಹುದೆಂದಾಗಲೀ ಇಲ್ಲವೇ ಇಲ್ಲ. ಮಾಡಿದ್ದನ್ನು ಅನುಭವಿಸಲೇಬೇಕು. ನಮ್ಮ ಹಣೆಬರಹಕ್ಕೆ ಹೊಣೆಗಾರರು ನಾವೇ!
     ಭಗವದ್ಗೀತೆಯ ಒಂದು ಅಧ್ಯಾಯವೇ ಕರ್ಮಯೋಗಕ್ಕೆ ಮೀಸಲಾಗಿದೆ. ಯಾರೂ ಕರ್ಮ ಮಾಡದೇ ಇರಲಾರರು, ಸದ್ವಿಚಾರಗಳಿಂದ ಒಡಗೂಡಿದ ಕರ್ಮವೇ ಮೋಕ್ಷಕ್ಕೊಯ್ಯಬಲ್ಲದು ಎಂಬುದು ಇದರ ಸಾರ. ಒಳ್ಳೆಯ ಕೆಲಸಗಳಿಂದ ಒಳ್ಳೆಯದಾಗುತ್ತದೆ ಎಂಬುದು ಇದರ ನೀತಿ. ನಾವು ಬದುಕಬೇಕೆಂದರೆ ಅದಕ್ಕಾಗಿ ಪ್ರತಿ ಕ್ಷಣವೂ ಸಾಯಬೇಕು. ನಾವು ಬಿಡುವ ಪ್ರತಿ ಉಸಿರೂ ನಮ್ಮನ್ನು ಸಾವಿನ ಸಮೀಪಕ್ಕೆ ಒಯ್ಯುತ್ತಿರುತ್ತದೆ. ಬದುಕು ಮತ್ತು ಸಾವು ಎನ್ನುವುದು ಒಂದೇ ವಸ್ತುವಿನ ಬೇರೆ ಬೇರೆ ಮುಖಗಳಷ್ಟೆ. ಸಮುದ್ರದ ಅಲೆಗಳಂತೆ ಒಮ್ಮೆ ಮೇಲೆ ಏಳುತ್ತದೆ, ಒಮ್ಮೆ ಕೆಳಗೆ ಬೀಳುತ್ತದೆ. ಬದುಕು ಮತ್ತು ಸಾವು ಎರಡೂ ಸೇರಿದರೆ ಮಾತ್ರ ಒಂದು ಪೂರ್ಣವಾದ ಸಂಗತಿ, ಇಲ್ಲದಿದ್ದರೆ ಅದು ಅಪೂರ್ಣ.
ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ ||
     ನಾವು ಈಗ ಏನಾಗಿದ್ದೇವೋ ಅದಕ್ಕೆ ನಾವೇ ಕಾರಣರು ಎಂದಾದಾಗ ದೇವರನ್ನಾಗಲೀ, ಇತರರನ್ನಾಗಲೀ ಏಕೆ ದೂಷಿಸಬೇಕು? ಸಾವಧಾನದಿಂದ, ಪೂರ್ವಾಗ್ರಹ ಪೀಡಿತರಾಗದೆ ಯೋಚಿಸಿದರೆ ಈ ಸತ್ಯದ ಅರಿವಾಗುತ್ತದೆ. ನಮ್ಮ ತಪ್ಪುಗಳಿಗೆ ಹೊಣೆಗಾರರು ನಾವೇ ಎಂಬುದು ಕಲಿಯಬೇಕಾದ ಮೊದಲ ಪಾಠ. ಯಾರನ್ನೂ ಹೊಗಳುವಂತಿಲ್ಲ, ತೆಗಳುವಂತಿಲ್ಲ. ಕೆಲವೊಮ್ಮೆ ನಮ್ಮ ದುರದೃಷ್ಟ ಮತ್ತು ಸೋಲುಗಳೇ ನಾವು ಉನ್ನತವಾದುದನ್ನು ಸಾಧಿಸಬೇಕೆಂಬ ಛಲ ಮೂಡಿಸುತ್ತದೆ. ಹಿಂದೆ ಮಾಡಿದ ಕೆಲಸಗಳ ಫಲವೇ ಇಂದು ನಾವು ಏನಾಗಿದ್ದೇವೆಯೋ ಅದು ಎನ್ನುವುದಾದರೆ, ಮುಂದೆ ನಾವು ಏನಾಗಬೇಕು ಎಂದು ನಿರ್ಧರಿಸಿ ಅದರಂತೆ ನಮ್ಮ ಈಗಿನ ಕೆಲಸಗಳಿಂದ ಸಾಧಿಸಬಹುದು ಎಂಬುದನ್ನೂ ಒಪ್ಪಬೇಕು. ಮಾಡಬೇಕಿರುವುದೆಂದರೆ ಅದನ್ನು ಹೇಗೆ ಸಾಧಿಸಬೇಕು ಎಂಬುದನ್ನು ಅರಿತು ಮುಂದುವರೆಯುವುದಷ್ಟೆ. ನಮ್ಮ ಭವಿಷ್ಯದ ಶಿಲ್ಪಿಗಳು ನಾವೇ ಆಗಿದ್ದು, ಯಶಸ್ಸಿಗೆ ಬೇಕಾದ ಎಲ್ಲಾ ಸಲಕರಣೆಗಳೂ ನಮ್ಮೊಳಗೇ ಇವೆ. ಇದು ನನ್ನ ಹಣೆಯ ಬರಹ ಎಂದು ಹೇಳುವವನು ಹೇಡಿ ಮತ್ತು ಮೂರ್ಖ ಎಂಬುದು ಸಂಸ್ಕೃತದ ಒಂದು ಗಾದೆ. ಬಲಶಾಲಿ ವ್ಯಕ್ತಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುತ್ತಾನೆ. ಸಾಮಾನ್ಯವಾಗಿ ದುರ್ಬಲ ಮನಸ್ಕರು, ಅಶಕ್ತರು ಮಾತ್ರ ತಮ್ಮ ಹಣೆಯಬರಹದ ಬಗ್ಗೆ ಚಿಂತಿಸಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಅಂತಹವರು ತಮ್ಮ ಹಣೆಬರಹವನ್ನು ಇತರರಿಂದ ಬರೆಸಿಕೊಳ್ಳುವ ಬಲಿಪಶುಗಳೆಂದರೆ ತಪ್ಪಲ್ಲ. ಹಣೆಬರಹವೆಂಬುದು ಪ್ರತಿಯೊಂದು ಸಂಗತಿಯ ಜರುಗುವಿಕೆಗೆ ತಾವೇ ಕಾರಣರೆಂಬುದನ್ನು ಅರಗಿಸಿಕೊಳ್ಳಲಾಗದವರ ಮಾತು! ಏನನ್ನು ಬಿತ್ತುತ್ತೇವೋ ಅದನ್ನೇ ಬೆಳೆಯುತ್ತೇವೆ, ಇದೇ ಸತ್ಯ. ಇದನ್ನು ಅರಿತಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತೇವೆ. ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾರಣವಿರುತ್ತದೆ. ಅದರಲ್ಲಿನ ಸತ್ಯ, ವಾಸ್ತವತೆ ಅರಿತು ತಪ್ಪು ತಿದ್ದಿಕೊಂಡು ಮುನ್ನಡೆದರೆ ಹಣೆಬರಹವನ್ನು ಬದಲಾಯಿಸಬಹುದು. ತಮಾಷೆಯೆಂದರೆ ಗೆದ್ದವರು ಗೆಲುವಿಗೆ ಹಣೆಬರಹ ಕಾರಣವೆನ್ನುವುದಿಲ್ಲ, ಸೋತವರು ಮಾತ್ರ ಸೋಲಿಗೆ ನೆಪವಾಗಿ ಹಣೆಬರಹವೆಂದುಬಿಡುತ್ತಾರೆ. ಬಲಶಾಲಿಗಳನ್ನು ಹಣೆಬರಹ ಇಷ್ಟಪಡುತ್ತದೆ.
-ಕ.ವೆಂ.ನಾಗರಾಜ್.

1 ಕಾಮೆಂಟ್‌: