ಸುಮಾರು ಮೂರು ವರ್ಷಗಳ ಹಿಂದಿನ ಸಂಗತಿಯಿದು. ಬೆಂಗಳೂರಿನಲ್ಲಿ ವಾಸವಾಗಿದ್ದ ವಿಜಯಲಕ್ಷ್ಮಿ ಎಂಬ ವೃದ್ಧೆ ಕ್ಯಾನ್ಸರ್ ಪೀಡಿತರಾಗಿ ನರಳುತ್ತಿದ್ದರು. ವೈಶ್ಯ ಸಮುದಾಯಕ್ಕೆ ಸೇರಿದ ಅವರು ಮೂಲತಃ ಬೆಂಗಳೂರಿನವರಲ್ಲವಾದರೂ, ಮಕ್ಕಳೆಲ್ಲರೂ ಬೆಂಗಳೂರಿನಲ್ಲಿದ್ದುದರಿಂದ ಅಲ್ಲಿ ನೆಲೆಸಿದ್ದರು. ಅವರಿಗೆ ಇದ್ದವರು ನಾಲ್ವರೂ ಹೆಣ್ಣುಮಕ್ಕಳೇ. ನಾಲ್ವರಿಗೂ ವಿವಾಹವಾಗಿ ಅವರವರ ಕುಟುಂಬದೊಂದಿಗೆ ಸುಖವಾಗಿದ್ದರು. ಮರಣಶಯ್ಯೆಯಲ್ಲಿದ್ದ ವಿಜಯಲಕ್ಷ್ಮಿಯವರಿಗೆ ಒಂದು ಚಿಂತೆ ಹತ್ತಿತು. ತಾನು ಸತ್ತ ಮೇಲೆ ತನ್ನ ಅಂತ್ಯ ಸಂಸ್ಕಾರ ಹೇಗೆ, ತನಗೆ ಮುಕ್ತಿ ದೊರೆಯುವುದೇ ಎಂಬುದೇ ಆ ಚಿಂತೆಯಾಗಿತ್ತು. ಚಂದನ ಟಿವಿಯಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರ ಹೊಸಬೆಳಕು ಕಾರ್ಯಕ್ರಮ ವೀಕ್ಷಿಸಿ, ವೇದಗಳಲ್ಲಿ ಎಂದೂ ಸ್ತ್ರೀ-ಪುರುಷ ತಾರತಮ್ಯದ ಅಂಶಗಳಿಲ್ಲವೆಂಬುದನ್ನು ಶರ್ಮರು ವಿವರಿಸಿದ್ದುದನ್ನು ಕೇಳಿದ್ದ ಅವರು, ಶರ್ಮರವರೊಂದಿಗೆ ಮಾತನಾಡಬಯಸಿದರು. ತಾಯಿಯ ಬಲವಂತದಿಂದಾಗಿ ಮಕ್ಕಳು ಶರ್ಮರವರನ್ನು ಮನೆಗೆ ಕರೆಸಿದರು. ಪಕ್ಕದಲ್ಲಿ ಕುಳಿತಿದ್ದ ಶರ್ಮರವರೊಂದಿಗೆ ಅತಿ ಕ್ಷೀಣದನಿಯಲ್ಲಿ ಮಾತನಾಡುತ್ತಿದ್ದ ವಿಜಯಲಕ್ಷ್ಮಿಯವರು ತಮ್ಮ ಸಂದೇಹಗಳು ಮತ್ತು ಅದಕ್ಕಿರುವ ಪರಿಹಾರದ ಬಗ್ಗೆ ವಿಚಾರಿಸಿದರು. ಜನನ - ಮರಣಗಳು ಸಹಜಕ್ರಿಯೆಗಳು, ಅನಾದಿ-ಅನಂತವಾದ ಜೀವಾತ್ಮ ಜೀವಿತಕಾಲದಲ್ಲಿ ಮಾಡಿದ ಕರ್ಮಗಳಿಗನುಸಾರವಾಗಿ ಮತ್ತೊಂದು ದೇಹದಲ್ಲಿ ಪ್ರಕಟಗೊಳ್ಳುತ್ತದೆ, ಅಂತ್ಯ ಸಂಸ್ಕಾರವನ್ನು ಗಂಡು ಮಕ್ಕಳು ಮಾತ್ರ ಮಾಡಬೇಕೆಂದಿಲ್ಲ, ಹೆಣ್ಣು ಮಕ್ಕಳೂ ಮಾಡಬಹುದೆಂಬುದನ್ನು ಸ್ವತಃ ಶರ್ಮರವರಿಂದ ಕೇಳಿದ ಅವರು, ತಾವು ಸತ್ತ ಮೇಲೆ ಶರ್ಮರವರೇ ಮುಂದೆ ನಿಂತು ತಮ್ಮ ಮಕ್ಕಳ ಮೂಲಕ ಅಂತ್ಯ ಸಂಸ್ಕಾರ ಮಾಡಿಸಬೇಕೆಂದು ಕೋರಿಕೆಯಿಟ್ಟಿದ್ದರು. ಆ ರೀತಿ ಮಾತನಾಡಿದ್ದ ಮೂರು ದಿನಗಳಲ್ಲೇ ಅವರು ನಿಧನರಾಗಿದ್ದರು. ಮಾತು ಕೊಟ್ಟಿದ್ದಂತೆ ಶರ್ಮರವರು ಮುಂದೆ ನಿಂತು ಅವರ ಹೆಣ್ಣುಮಕ್ಕಳಿಂದಲೇ ಅಂತ್ಯಸಂಸ್ಕಾರದ ಕ್ರಿಯೆಗಳನ್ನು ನೆರವೇರಿಸಿದ್ದರು.
ವಿಜಯಲಕ್ಷ್ಮಿಯವರು ಕೆಲವು ಅನಿಷ್ಟ ಸಂಪ್ರದಾಯಗಳ ಕುರಿತು ದಿಟ್ಟ ನಿಲುವು ಹೊಂದಿದವರಾಗಿದ್ದರು. ಅವರ ಸಂಬಂಧಿಯೊಬ್ಬರು ನಿಧನರಾಗಿದ್ದಾಗಿನ ಸಂದರ್ಭವನ್ನು ಅವರ ಮಕ್ಕಳು ನೆನೆಸಿಕೊಳ್ಳುತ್ತಾರೆ. ಗಂಡ ಸತ್ತಾಗ ಪತ್ನಿಗೆ ಅರಿಶಿನ, ಕುಂಕುಮ ಹಚ್ಚಿ, ತಲೆ ತುಂಬಾ ಹೂವು ಮುಡಿಸಿ, ಕೈಬಳೆಗಳನ್ನು ತೊಡಿಸಿ ಅವನ್ನು ತೆಗೆದುಹಾಕುವ ಸಂಪ್ರದಾಯವನ್ನು ಹಲವರು ಈಗಲೂ ಮಾಡುತ್ತಾರೆ. ಇದೇ ಕೊನೆಯ ಸಲ, ಮತ್ತೆಂದೂ ಇವನ್ನು ಧರಿಸಬಾರದೆಂಬ ಸೂಚನೆಯೂ ಅದರಲ್ಲಿರುತ್ತದೆ. ಮೊದಲೇ ದುಃಖದಿಂದ ಮುದುಡಿದವರನ್ನು ಮತ್ತಷ್ಟು ದುಃಖಕ್ಕೆ ಈಡು ಮಾಡುವ ಕ್ರಿಯೆಯಿದು. ವಿಜಯಲಕ್ಷ್ಮಿಯವರು ಅಂತಹ ಸಂಪ್ರದಾಯ ಮಾಡಿಸಲು ಬಂದಿದ್ದವರನ್ನು ಬಾಗಿಲಿಗೆ ಅಡ್ಡನಿಂತು ವಾಪಸು ಕಳುಹಿಸಿದ್ದರು. ಇಂತಹ ಮನೋಭಾವ ಮೆಚ್ಚುವಂತಹುದಾಗಿದೆ. ಸ್ತ್ರೀ-ಪುರುಷ ತಾರತಮ್ಯ ಬೋಧಿಸದ ವೇದಗಳ ಆಶಯಕ್ಕೆ ವಿರುದ್ಧವಾಗಿ ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀಯರನ್ನು ಕೆಲವು ಸಂಸ್ಕಾರಗಳು, ಆಚರಣೆಗಳಿಂದ ದೂರವಿರಿಸಿರುವುದರ ಕುರಿತು ಸ್ತ್ರೀಯರೇ ಪ್ರಶ್ನಿಸಬೇಕಿದೆ.
ಅಂತ್ಯ ಸಂಸ್ಕಾರ ಮಾನವ ಜೀವನದ ಅಂತಿಮ ಸಂಸ್ಕಾರವಾಗಿದೆ. ಸ್ತ್ರೀಯರು ಈ ಕಾರ್ಯ ಮಾಡಬಾರದೆಂಬುದು ಪ್ರಚಲಿತ ನಂಬಿಕೆ. ಸ್ತ್ರೀಯರ ಕುರಿತ ಕೆಲವು ಕಟ್ಟುಪಾಡುಗಳು, ಸಂಪ್ರದಾಯಗಳು ಅವರನ್ನು ಹಲವು ರಂಗಗಳಲ್ಲಿ ಹಿಂದುಳಿಯುವಂತೆ ಮಾಡಿವೆ. ಹಿಂದೂ ಧರ್ಮದಲ್ಲಿ ಅನೇಕ ರೀತಿಯ ಸಂಪ್ರದಾಯಗಳಿದ್ದು ಸಮಾಜವು ಕಾಲಕಾಲಕ್ಕೆ ತಕ್ಕಂತೆ ಹಲವು ಸಂಪ್ರದಾಯಗಳನ್ನು ಕೈಬಿಟ್ಟಿದೆ, ಕೆಲವು ಹೊಸ ಸಂಪ್ರದಾಯಗಳನ್ನು ರೂಢಿಸಿಕೊಳ್ಳುತ್ತಿದೆ. ಸಂಪ್ರದಾಯವಾದಿಗಳು, ಸುಧಾರಣಾವಾದಿಗಳು, ವಿರೋಧಿಗಳು, ನಾಸ್ತಿಕರು, ಹೀಗೆ ಹಲವು ವಿಚಾರಗಳನ್ನು ಹೊಂದಿದವರು ಇದ್ದು ಎಲ್ಲರನ್ನೂ ಹೊಂದಿಕೊಂಡು, ಒಪ್ಪಿಕೊಂಡು (ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ) ಸಾಗುತ್ತಿರುವ ಧರ್ಮ ಬಹುಷಃ ಇದೊಂದೇ! ಮುಕ್ತ ವಿಮರ್ಶೆಗೆ ತೆರೆದುಕೊಂಡಿರುವ ಇದು ಮನನ, ಮಥನಗಳಿಂದ ಬದಲಾಗುತ್ತಾ ಹೋಗುತ್ತಿರುವ ಜೀವಂತಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀಯರಿಗೆ ಕಟ್ಟುಪಾಡುಗಳ ಹೆಸರಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ನಿರ್ಬಂಧಿಸದಿರುವುದು ಇಂದಿನ ಅಗತ್ಯವಾಗಿದೆ. ಇಂದು ಬಹುತೇಕರಿಗೆ ಒಬ್ಬನೇ ಮಗ ಅಥವ ಮಗಳು ಇರುವುದು ಸಾಮಾನ್ಯ. ಮೃತರಿಗೆ ಅಣ್ಣ-ತಮ್ಮಂದಿರು, ಪುರುಷ ಸಂಬಂಧಿಗಳು ಇದ್ದು, ಅವರೂ ವೈಮನಸ್ಯದಿಂದ ಸಹಕರಿಸದಿದ್ದರೆ ಏನು ಮಾಡಬೇಕು?
ತಂದೆ/ತಾಯಿಯ ಮೇಲಿನ ಪ್ರೀತಿಯ ಕಾರಣದಿಂದ ಸಮಾಜ ವಿರೋಧಿಸಿದರೂ ಅವರ ಅಂತ್ಯಕ್ರಿಯೆ ನಡೆಸಿದ ಧೀಮಂತ ಹೆಣ್ಣು ಮಕ್ಕಳೂ ಇದ್ದಾರೆ. ಕೆಲವು ಸಂದರ್ಭಗಳಲ್ಲಿ ಅವರಿಗೆ ಸಂಪೂರ್ಣ ಸಹಕಾರ ನೀಡಿರುವ ನಿದರ್ಶನಗಳು ಇರುವಂತೆ ವಿರೋಧಿಸಿರುವ ಪ್ರಸಂಗಗಳೂ ಇವೆ. ಸ್ತ್ರೀಯರು ಅಂತ್ಯ ಸಂಸ್ಕಾರ ಮಾಡಬಾರದೆಂಬ ವಾದದ ಹಿನ್ನೆಲೆ ಏನಿರಬಹುದು? ಕೆಲವು ನಿರ್ಬಂಧಗಳಲ್ಲಿ ಅರ್ಥವಿರಲೂಬಹುದು ಮತ್ತು ಕೆಲವುದರಲ್ಲಿ ಮಹಿಳೆಯರನ್ನು ಹಿಂದೆ ಸರಿಸುವ ಉದ್ದೇಶವೂ ಇರಬಹುದು. ದಂಪತಿಗಳಿಗೆ ಹೆಣ್ಣು ಮಗು ಮಾತ್ರ ಇದ್ದ ಸಂದರ್ಭದಲ್ಲಿ ಕುಟುಂಬದ ಹತ್ತಿರದ ಗಂಡು ಸಂಬಂಧಿ ಅಂತ್ಯ ಸಂಸ್ಕಾರ ಮಾಡಬೇಕೆನ್ನುತ್ತಾರೆ. ಇದು ಹೆಣ್ಣು ಮಕ್ಕಳಿಗೆ ಹಿಂದೆ ಪಿತ್ರಾರ್ಜಿತ ಸ್ವತ್ತಿನಿಂದ ವಂಚಿತರಾಗಲು ಕಾರಣವಾಗುತ್ತಿತ್ತು. ಅಂತ್ಯ ಸಂಸ್ಕಾರ ನಡೆಸಿದ ಕಾರಣದಿಂದ ಆಸ್ತಿ ಹಕ್ಕು ಸ್ಥಾಪಿಸುವುದು ಹಿಂದಿನಿಂದಲೂ ಇರುವುದೇ ಆಗಿದೆ. ಈಗ ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಕೊಡುವ ಕಾನೂನು ಬಂದಿರುವುದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಹೆಣ್ಣು ಮಕ್ಕಳು ಮೃದು ಹೃದಯಿಗಳು, ಧಿಡೀರ್ ಸ್ಪಂದನಶೀಲರು, ದುಃಖಾವೇಶದಿಂದ ಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಷ್ಟವೆಂಬ ಭಾವನಾತ್ಮಕ ಕಾರಣ, ಗರ್ಭಿಣಿಯಾಗಿರುವುದು, ಮಾಸಿಕ ಋತುಚಕ್ರಕ್ಕೊಳಪಡುವುದು ಅಂತ್ಯ ಸಂಸ್ಕಾರ ಕ್ರಿಯೆಗೆ ಅಡ್ಡಿಯಾಗುವ ಕಾರಣಗಳೆನ್ನುತ್ತಾರೆ. ಆರೋಗ್ಯದ ಕಾರಣ ಹೊರತುಪಡಿಸಿ ಉಳಿದ ಕಾರಣಗಳು ಸಮರ್ಥನೀಯವೆಂದು ಹೇಳಲಾಗದು. ಸ್ತ್ರೀ ವಿವಾಹದ ನಂತರ ಗಂಡನ ಕುಟುಂಬಕ್ಕೆ ಸೇರಿದವಳಾಗುತ್ತಾಳೆ ಎಂಬ ಕಾರಣವನ್ನೂ ಕೊಡುತ್ತಾರೆ. ಮದುವೆಯಾಗದ ಹೆಣ್ಣು ಮಗಳು ಕ್ರಿಯೆಗಳನ್ನು ನಡೆಸಲು ಅಡ್ಡಿಯಿಲ್ಲವೆಂಬ ವಾದವೂ ಇದೆ.
ಗರುಡ ಪುರಾಣದ 11ನೆಯ ಅಧ್ಯಾಯದ 12-17ರ ಶ್ಲೋಕಗಳಲ್ಲಿ ಮೃತನ ಅಂತ್ಯ ಸಂಸ್ಕಾರವನ್ನು ಮಗ ಮಾಡಬೇಕು, ಮಗ ಇಲ್ಲದಿದ್ದಲ್ಲಿ ಹೆಂಡತಿ, ಹೆಂಡತಿ ಇಲ್ಲದಿದ್ದಲ್ಲಿ ಸೋದರ ಅಥವ ಒಬ್ಬ ಬ್ರಾಹ್ಮಣ ಅಥವ ಅರ್ಹ ಸಂಬಂಧಿ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದೆ. ಮಗಳ ಕುರಿತು ಇಲ್ಲಿ ಉಲ್ಲೇಖಿಸಿಲ್ಲ. ೧೮ನೆಯ ಶ್ಲೋಕದಲ್ಲಿ ಒಬ್ಬ ಪುರುಷ ಅಥವ ಸ್ತ್ರೀ ಅಂತ್ಯ ಸಂಸ್ಕಾರ ನಡೆಸಿದರೆ ಸಿಗುವ ಫಲದ ಬಗ್ಗೆ ಹೇಳಿದೆ. ಇದರ ಅರ್ಥ ಸ್ಪಷ್ಟ -ಸ್ತ್ರೀ ಸಹ ಅಂತ್ಯ ಸಂಸ್ಕಾರ ಮಾಡಲು ಅರ್ಹಳು!
ಹಿಂದೂಗಳಿಗೆ ವೇದಗಳೇ ಪರಮ ಪ್ರಮಾಣ. ವೇದಗಳಲ್ಲಿ ಸಂಪ್ರದಾಯಗಳ ಬಗ್ಗೆ ಏನೂ ಹೇಳಿಲ್ಲ. ಸಂಪ್ರದಾಯಗಳನ್ನು ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಸಮಾಜದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದು, ತುರ್ತು ಸನ್ನಿವೇಶಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಕೆಲವು ವಿನಾಯಿತಿಗಳಿಗೂ ಅವಕಾಶವಿತ್ತು. ಆದರೆ ಸಂದಿಗ್ಧ ಸಂದರ್ಭಗಳಲ್ಲಿ ನಿರ್ಧಾರಗಳನ್ನು ವೇದಗಳನ್ನು ಆಧರಿಸಿಯೇ ಮಾಡಬೇಕು. ವೇದಗಳ ಉದಾತ್ತತೆ ಎಷ್ಟೆಂದರೆ ಅವು ಎಲ್ಲಿಯೂ ಹೀಗೆ ಮಾಡು, ಹಾಗೆ ಮಾಡಬೇಡ ಎಂದು ಹೇಳುವುದಿಲ್ಲ. ಅವು ಸರಿಯಾದ ಮಾರ್ಗವನ್ನು ಮಾತ್ರ ತೋರಿಸುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುವುದನ್ನು ನಮಗೇ ಬಿಡುತ್ತದೆ. ವೇದವು ಭಸ್ಮಾಂತಂ ಶರೀರಮ್(ಯಜು.40.15) ಎಂದು ಹೇಳುತ್ತದೆ. ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ, ಮೃತರಾದ ನಂತರ ಶರೀರವನ್ನು ಅಗ್ನಿಗೆ ಅರ್ಪಿಸಬೇಕು ಎಂದು ಇದರ ಅರ್ಥ. ನಂತರದ ಕ್ರಿಯೆಗಳ ಬಗ್ಗೆ ವೇದಮಂತ್ರಗಳಲ್ಲಿ ಯಾವುದೇ ಉಲ್ಲೇಖಗಳಿಲ್ಲ. ರೂಢಿಗತವಾದ ಸಂಪ್ರದಾಯಗಳು ಸಮಾಜದ ಹಿತದ ಸಲುವಾಗಿ ಹೊರತು ಮತ್ತೇನಲ್ಲ. ಹೀಗಾಗಿ ಕುರುಡಾಗಿ ಅನುಸರಿಸುವುದಕ್ಕಿಂತ ಒಟ್ಟು ಹಿತ ಮತ್ತು ಅಗತ್ಯ ಅನುಸರಿಸಿ, ಕಾಲಕ್ಕೆ ಅನುಗುಣವಾದ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಬಹುದು. ಹಿಂದೆ ಸಾಂದರ್ಭಿಕವಾಗಿ ಅಗತ್ಯವೆಂದು ಕಂಡು ಅನುಸರಿಸಲಾಗುತ್ತಿದ್ದ ಬಾಲ್ಯವಿವಾಹ, ಸತಿಪದ್ಧತಿ, ವಿಧವೆಯರ ಕೇಶಮುಂಡನ, ದೇವದಾಸಿ ಪದ್ಧತಿ ಮುಂತಾದುವುಗಳು ಇಂದು ಮರೆಯಾಗಿವೆ. ಅಂತ್ಯಸಂಸ್ಕಾರದ ವಿಷಯದಲ್ಲೂ ಇಂದಿಗೆ ಅಗತ್ಯವಾದ ಕ್ರಮ ಅನುಸರಿಸಿದರೆ ತಪ್ಪೇನಿಲ್ಲ.
ಅಂತ್ಯಸಂಸ್ಕಾರ ಮಾಡುವುದು ಕರ್ತವ್ಯವೇ ಹೊರತು ಸವಲತ್ತು ಅಲ್ಲ. ವೇದವು ಯಾವುದೇ ರೀತಿಯ ಅಸಮಾನತೆಗೆ ವಿರೋಧವಾಗಿದೆ. ಯಾವುದೇ ಕ್ರಿಯೆಯ ಅರ್ಥ ತಿಳಿದು ಮಾಡುವುದರಿಂದ ಮಾನಸಿಕ ತೃಪ್ತಿ, ಸಾರ್ಥಕತೆ ಇರುತ್ತದೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರನ್ನು ಕೆಲವು ಕ್ರಿಯೆಗಳಿಂದ ದೂರವಿಡುವ ವಿಚಾರದಲ್ಲಿ ಮಹಿಳೆಯರ ಪಾಲೂ ಇದೆ. ಏಕೆಂದರೆ ಸಂಪ್ರದಾಯಗಳ ಪಾಲನೆ, ಬೆಳವಣಿಗೆಗಳಲ್ಲಿ ಅವರ ಪಾತ್ರವೇ ಮಹತ್ವದ್ದಾಗಿದೆ. ವೈಚಾರಿಕತೆ ಬೆಳೆಸಿಕೊಳ್ಳೋಣವೆಂಬ ವೇದದ ಈ ಕರೆ ನಮಗೆ ಕೇಳಿಸಲಿ: ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷಃ|| (ಋಕ್.1.86.9) ಅರ್ಥ: ಸತ್ಯವನ್ನೇ ಶಕ್ತಿಯಾಗಿ ಹೊಂದಿರುವವರೇ, ಸ್ವಂತ ವಿವೇಚನೆಯಿಂದಲೇ ಸತ್ಯವನ್ನು ಆವಿಷ್ಕರಿಸಿರಿ, ತಿಳಿಯಿರಿ. ಕೆಟ್ಟ ವಿಚಾರಗಳನ್ನು ಜ್ಞಾನಜ್ಯೋತಿಯಿಂದ ಸೀಳಿಹಾಕಿರಿ (ಕಿತ್ತೆಸೆಯಿರಿ). ವೈಚಾರಿಕತೆಗೆ ಇಷ್ಟು ಮುಕ್ತ ಅವಕಾಶ ಕೊಟ್ಟಿರುವ ವೇದಗಳು ನಮ್ಮ ಹಲವಾರು ಸಂದಿಗ್ಧತೆಗಳ ನಿವಾರಣೆಗೆ ಮಾರ್ಗದರ್ಶಿಯಾಗಿವೆ. ದಾರಿ ಹೀಗಿದೆ, ಹೇಗೆ ಸಾಗಬೇಕು ಅನ್ನುವುದು ಸಾಗುವವರಿಗೆ ಬಿಟ್ಟದ್ದು.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ