ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಏಪ್ರಿಲ್ 8, 2017

ಪಂ. ಸುಧಾಕರ ಚತುರ್ವೇದಿಯವರಿಗೆ 120 ವರ್ಷಗಳು


     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಜನಿಸಿದ ಪ್ರಖರ ಸತ್ಯವಾದಿ, ಟೀಕೆ, ಟಿಪ್ಪಣಿಗಳಿಗೆ ಅಂಜದೆ, ಅಳುಕದೆ ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ ಪಂಡಿತ ಸುಧಾಕರ ಚತುರ್ವೇದಿಯವರಿಗೆ ಈ ರಾಮನವಮಿಗೆ(5.04.2017) 120 ವರ್ಷಗಳಾದ ಸಂದರ್ಭದಲ್ಲಿ ಸಾಷ್ಟಾಂಗ ಪ್ರಣಾಮಗಳು. ಪಂಡಿತರು 13ನೆಯ ವಯಸ್ಸಿನಲ್ಲಿಯೇ ಹರಿದ್ವಾರದ ಸಮೀಪದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾದವರು, ಸ್ವಾಮಿ  ಶ್ರದ್ಧಾನಂದರ ಶಿಷ್ಯರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಕೊಂಡು 15 ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸ ಕಂಡಿದ್ದವರು. ಮಹಾತ್ಮ ಗಾಂಧಿಯವರ ಒಡನಾಡಿ. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದವರು. ನಾಲ್ಕೂ ವೇದಗಳಲ್ಲಿ ಪಾರಂಗತರಾಗಿ ಚತುರ್ವೇದಿ ಎಂಬ ಹೆಸರು ಪಡೆದವರು. ಗತ ಇತಿಹಾಸದ ಜೀವಂತ ಕೊಂಡಿಯಾಗಿರುವವರು. ಪಂಡಿತರು ದೀರ್ಘ ಕಾಲ ಬಾಳಲಿ, ಹೀಗೆಯೇ ಮಾರ್ಗದರ್ಶನ ಮಾಡುತ್ತಿರಲಿ ಎಂಬುದು ಸಜ್ಜನರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕಾಣಬೇಕೆಂಬ ಉತ್ಕಟತೆಯಿಂದ 1.04.2017ರ ಶನಿವಾರ ಬೆಂಗಳೂರಿನ ಜಯನಗರದಲ್ಲಿನ ಅವರ ಮನೆಗೆ ಸತ್ಸಂಗ ನಡೆಯುವ ಸಮಯಕ್ಕೆ ಹೋಗಿದ್ದೆ. ಪ್ರತಿ ಶನಿವಾರ ಸಂಜೆ 5.30ಕ್ಕೆ ಸರಿಯಾಗಿ ಅವರ ಮನೆಯಲ್ಲಿ ಅಗ್ನಿಹೋತ್ರ ಮತ್ತು ವೈದಿಕ ಭಜನೆ ನಡೆಯತ್ತದೆ. ನಂತರ ಸುಮಾರು 30 ರಿಂದ 45 ನಿಮಿಷಗಳು ಪಂಡಿತರು ಮಾತನಾಡುತ್ತಾರೆ. ಅಂದು ಇದ್ದವರು ನಾವು ಐದು ಜನರು. ಕೇಳುಗರು ಒಬ್ಬರೇ ಇರಲಿ, ಬಹಳ ಜನರಿರಲಿ, ಹೇಳಬೇಕಾದ ಸಂಗತಿಗಳಲ್ಲಿ ಹೆಚ್ಚು-ಕಡಿಮೆ ಮಾಡದಿರುವುದು ಪಂಡಿತರ ಹಿರಿಮೆಯಾಗಿದೆ. ಅವರು ಅಂದು ಮಾತನಾಡಿದ ವಿಷಯದ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸಿದೆ. 
ಎಲ್ಲೆಲ್ಲೂ ಅಭಯವಿರಲಿ
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ|
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ಯನಶ್ನನ್ನನ್ಯೋ ಅಭಿ ಚಾಕಶೀತಿ|| (ಋಕ್.1.164.20)
     ಜೀವಾತ್ಮ ಮತ್ತು ಪರಮಾತ್ಮರ ಸಂಬಂಧವನ್ನು ಇಲ್ಲಿ ಸುಂದರವಾಗಿ ಅಭಿವ್ಯಕ್ತಿಸಲಾಗಿದೆ. ಸದಾ ಜೊತೆಯಲ್ಲಿರುವ, ಸ್ನೇಹಿತರಾಗಿರುವ ಎರಡು ಸುಂದರವಾದ ಪಕ್ಷಿಗಳು ಒಂದೇ ಮರವನ್ನು ಆಶ್ರಯಿಸಿ ಕುಳಿತಿವೆ. ಒಂದು ಮಧುರವಾದ ಹಣ್ಣನ್ನು ಸವಿಯುತ್ತಿದ್ದರೆ, ಇನ್ನೊಂದು ಸವಿಯದೆ ಸಾಕ್ಷಿರೂಪವಾಗಿ ಕುಳಿತಿದೆ ಎಂಬುದರಲ್ಲಿ ಜೀವಾತ್ಮ, ಪರಮಾತ್ಮರ ನಡುವೆ ಸದಾ ಬೇರ್ಪಡದ ಸಂಬಂಧ ಇರುವುದರ ಆಕರ್ಷಕ ಚಿತ್ರಣವಿದೆ. ಶರೀರ ರೂಪ ಹೊಂದಿ ಜಗತ್ತಿನ ಸುಖ-ದುಃಖಗಳನ್ನು ಅನುಭವಿಸುತ್ತಿರುವ ಜೀವಾತ್ಮರು - ಮನುಷ್ಯ, ಪ್ರಾಣಿ, ಪಕ್ಷಿ, ಕ್ರಿಮಿ-ಕೀಟ, ಇತ್ಯಾದಿ ಜೀವಜಂತುಗಳು - ಒಂದೆಡೆಯಾದರೆ, ನಿರಾಕಾರನಾದ, ಸರ್ವವ್ಯಾಪಿಯಾದ, ಸರ್ವಶಕ್ತನಾದ, ಸರ್ವದ್ರಷ್ಟನಾದ ಪರಮಾತ್ಮ ಮತ್ತೊಂದೆಡೆ ಇರುವ ಬಗ್ಗೆ ಇಲ್ಲಿ ಹೇಳಲಾಗಿದೆ. ಜೀವಾತ್ಮ ಮತ್ತು ಪರಮಾತ್ಮರಿಗೆ ಇರುವ ವ್ಯತ್ಯಾಸ ಇದೇ ಆಗಿದೆ. ಪರಮಾತ್ಮನ ಸ್ವರೂಪ ಎಂದಿಗೂ ಬದಲಾಗುವುದೇ ಇಲ್ಲ. ಅವನಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಅವನು ಇಲ್ಲದ ಸ್ಥಳವೇ ಇಲ್ಲ. ಜೀವಾತ್ಮನೂ ಆದಿ, ಅಂತ್ಯಗಳಿಲ್ಲದಿದ್ದರೂ ಶರೀರ ರೂಪಿಯಾಗಿ ಜಗತ್ತಿನಲ್ಲಿ ಕಾಣಿಸಿಕೊಳ್ಳುವ, ಅನುಭವಿಸುವ ಅವಕಾಶವಿದೆ. ಶರೀರಕ್ಕೆ ಹುಟ್ಟು, ಸಾವುಗಳಿವೆ; ಆದರೆ ಅದಕ್ಕೆ ಕಾರಣವಾದ ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ. ಆ ಜೀವಾತ್ಮಕ್ಕೆ ಲಿಂಗಭೇದವಿಲ್ಲ. ಅದು ಶರೀರವನ್ನು ತ್ಯಜಿಸಿ ಹೋದಮೇಲೆ ನಂತರದಲ್ಲಿ ಹೊಸ ಯಾವುದೇ ಜೀವಿಯ ರೂಪದಲ್ಲಿ ಪ್ರಕಟವಾಗಬಹುದು.
     ಶ್ರೀರಾಮ, ಶ್ರೀಕೃಷ್ಣ ಮೊದಲಾದವರೆಲ್ಲಾ ದೇವಮಾನವರು ಅಷ್ಟೆ. ದೇವರು ಪ್ರತ್ಯಕ್ಷನಾದ, ದರ್ಶನ ನೀಡಿದ, ಸಾಕ್ಷಾತ್ಕಾರವಾಯಿತು ಇಂತಹವೆಲ್ಲಾ ಕಲ್ಪನೆಗಳಷ್ಟೇ ಹೊರತು ನಿಜವಲ್ಲ. ನಿರಾಕಾರಿ ದೇವರು ಕಾಣಿಸಿಕೊಳ್ಳುವುದಾದರೂ ಹೇಗೆ? ಅಸೀಮಿತನನ್ನು ಸೀಮಿತಗೊಳಿಸುವುದು ಸರಿಯಲ್ಲ.
     ಹುಟ್ಟಿದಾಗ ಸಂಭ್ರಮಿಸುತ್ತಾರೆ; ಸತ್ತಾಗ ಅಳುತ್ತಾರೆ. ಈ ಹುಟ್ಟು, ಸಾವುಗಳೆಲ್ಲಾ ಶರೀರಕ್ಕೆ ಸಂಬಂಧಿಸಿದ್ದಷ್ಟೆ. ತಂದೆ, ತಾಯಿ, ಅಣ್ಣ, ತಮ್ಮ, ಗಂಡ, ಹೆಂಡತಿ ಇತ್ಯಾದಿ ಸಂಬಂಧಗಳೆಲ್ಲಾ ಬದುಕಿರುವವರೆಗೆ ಮಾತ್ರ. ಹುಟ್ಟಿದಾಗ ಪೂರ್ವಾರ್ಜಿತ ಕರ್ಮಫಲ ಜೊತೆಗಿರುತ್ತದೆ, ಅದು ಸಂಭ್ರಮಿಸುವ ಸಮಯವೇ? ಸತ್ತಾಗ ಹೊಂದಿದ್ದ ಶರೀರದಿಂದ ಮುಕ್ತಿಯಾಗಿದ್ದುದಕ್ಕೆ ಶೋಕಿಸಬೇಕೇ? ಸಂತೆಗೆ ವ್ಯಾಪಾರಕ್ಕಾಗಿ ಬಂದವರು ವ್ಯಾಪಾರ ಮಾಡಿ ಮುಗಿಸಿದ ನಂತರವೂ, ಸಂತೆ ಮುಗಿದುಹೋದರೂ ಸಂತೆಯಲ್ಲೇ ಇರುತ್ತೇನೆ, ಮರಳಿ ಹೋಗುವುದಿಲ್ಲವೆಂದರೆ ಏನು ಹೇಳೋಣ?
     ಮನುಷ್ಯರಲ್ಲಿ ಜ್ಞಾನಿಗಳಿರುತ್ತಾತೆ, ಅಜ್ಞಾನಿಗಳಿರುತ್ತಾರೆ, ಅರೆಜ್ಞಾನಿಗಳಿರುತ್ತಾರೆ. ಅಜ್ಞಾನಿಗಳದ್ದು ಸಮಸ್ಯೆಯಲ್ಲ. ಅರೆಜ್ಞಾನಿಗಳದ್ದೇ ಸಮಸ್ಯೆ. ಅವರು ಪೂರ್ತಿ ತಿಳಿದಿರದಿದ್ದರೂ ತಿಳಿದವರಂತೆ ಆಡುತ್ತಾರೆ. ಸರ್ವಜ್ಞ ಅನ್ನುವವರು ಯಾರಾದರೂ ಇದ್ದರೆ ಅದು ಪರಮಾತ್ಮ ಮಾತ್ರ. ಸ್ವಾಮಿ ದಯಾನಂದರು ಹೀಗೆ ಹೇಳಿದಾಗ ಒಬ್ಬ ವ್ಯಕ್ತಿ ದಯಾನಂದರ ಬಾಯಿಯಲ್ಲಿಯೇ ತಾವು ಸರ್ವಜ್ಞರಲ್ಲ ಎಂದು ಹೇಳಿಸಬೇಕೆಂದುಕೊಂಡು ಕೇಳಿದ್ದನಂತೆ: ಸ್ವಾಮಿ, ಪರಮಾತ್ಮ ಮಾತ್ರ ಸರ್ವಜ್ಞ ಅನ್ನುವುದಾದರೆ ತಾವು? ದಯಾನಂದರು ನಗುತ್ತಾ ಹೇಳಿದ್ದರು: ನೀವು ಈ ಶರೀರವನ್ನು ದಯಾನಂದ ಎಂದು ತಿಳಿದಿದ್ದೀರಿ. ಶರೀರದೊಳಗಿನ ದಯಾನಂದ ನಿಮಗೆ ಕಾಣುವುದಿಲ್ಲ. ದೇವರೇ ಇಲ್ಲ ಎಂದು ವಾದಿಸುವವರೂ ಇರುತ್ತಾರೆ. ಯಾರು ಏನು ಹೇಳಿದರೂ ಸ್ಥಿತಿಯಲ್ಲಿ ಬದಲಾವಣೆ ಆಗದು. ಜಗತ್ತನ್ನು ನಿರ್ವಹಿಸುವ ಸರ್ವಾಧಾರ, ಸರ್ವಶಕ್ತ, ಸರ್ವಜ್ಞ ಪರಮಾತ್ಮನಿಗೆ ಏನೂ ಬಾಧಕವಿಲ್ಲ. 
     ಪುಟ್ಟ ಪುಟ್ಟ ಇರುವೆಗಳು ಮಳೆಗಾಲ ಆರಂಭವಾಗುವ ಮುನ್ನ ಆಹಾರ ಧಾನ್ಯಗಳ ಕಣಗಳನ್ನು ಹೊತ್ತು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಮಳೆಗಾಲದಲ್ಲಿ ಉಪಯೋಗವಾಗುತ್ತದೆ, ಸಂಗ್ರಹಿಸಿಡಬೇಕು ಎಂದು ಅದಕ್ಕೆ ಹೇಳಿಕೊಟ್ಟವರು ಯಾರು? ಆ ಸಣ್ಣ ಇರುವೆಯ ತಲೆ ಎಷ್ಟಿದ್ದೀತು? ಆ ಪುಟ್ಟ ತಲೆಯ ಒಳಗಿನ ಮೆದುಳು ಎಷ್ಟು ಗಾತ್ರವಿದ್ದೀತು? ಮೇಯಲು ಹೋದ ದನಕರುಗಳು ಆಕಾಶದಲ್ಲಿ ಮೋಡಗಳು ಸೇರುತ್ತಿದ್ದ ಹಾಗೆ ಓಡೋಡಿ ಮನೆಗಳ ಕೊಟ್ಟಿಗೆ ಸೇರಲು ಬುದ್ಧಿ ಕೊಟ್ಟವರು ಯಾರು? ಮಳೆ ಬರುತ್ತದೆ, ರಕ್ಷಣೆ ಪಡೆಯಬೇಕು ಎಂಬುದು ಅವುಗಳಿಗೆ ತಿಳಿಯುವ ಶಕ್ತಿ ಬಂದಿದ್ದು ಹೇಗೆ? ಅಸಂಖ್ಯ ಮಾನವ, ಪಶು, ಪಕ್ಷಿ, ಕ್ರಿಮಿ-ಕೀಟಗಳಿಗೆ ಅವುಗಳದೇ ಆದ ಗುಣ ಸ್ವಭಾವ ಕೊಟ್ಟ ಪರಮಾತ್ಮನ ಶಕ್ತಿ ಸಾಮರ್ಥ್ಯದ ಕಲ್ಪನೆ ಊಹಾತೀತ. ಮರಳಿನಲ್ಲಿ ಸಕ್ಕರೆ ಬೆರೆಸಿ ಬೇರ್ಪಡಿಸಲು ಇರುವೆ ಮತ್ತು ಆನೆಯನ್ನು ಬಿಟ್ಟರೆ, ಯಾರಿಗೆ ಆ ಕೆಲಸ ಮಾಡಲು ಸಾಧ್ಯವಿದೆ? ದೊಡ್ಡ ಆನೆಗೆ ಅದು ಕಷ್ಟ, ಪುಟ್ಟ ಇರುವೆ ಸರಾಗವಾಗಿ ಸಕ್ಕರೆಯನ್ನು ತೆಗೆದುಕೊಳ್ಳಬಲ್ಲದು.
     ಶರೀರಕ್ಕೆ ಬಾಲ್ಯವಿದೆ, ಯೌವನವಿದೆ, ಮುಪ್ಪು ಇದೆ, ಕಾಯಿಲೆ-ಕಸಾಲೆಗಳು ಬರುತ್ತವೆ. ಆದರೆ ಆತ್ಮಕ್ಕೆ ಇವು ಯಾವುವೂ ಇಲ್ಲ. ಶರೀರವನ್ನು ಕೊಚ್ಚಿಹಾಕಬಹುದು, ಆತ್ಮವನ್ನು ಏನೂ ಮಾಡಲಾಗುವುದಿಲ್ಲ. ಅದು ಅವಿಚ್ಛಿನ್ನ, ಭಿನ್ನವಾಗುವುದೇ ಇಲ್ಲ. ಅದಕ್ಕಾಗಿಯೇ ಸಾಧಕರು, ಸ್ಥಿತಪ್ರಜ್ಞರು ಸಾವಿಗೆ ಅಂಜುವುದಿಲ್ಲ. ವೇದಗಳೂ ಅಭಯವನ್ನೇ ಬೋಧಿಸುತ್ತಿವೆ:
ಅಭಯಂ ಮಿತ್ರಾದಭಯಮಮಿತ್ರಾದಭಯಂ ಜ್ಞಾತಾದಭಯಂ ಪುರೋಕ್ಷಾತ್| ಅಭಯಂ ನಕ್ತಮಭಯಂ ದಿವಾ ನಃ ಸರ್ವಾ ಆಶಾ ಮಮ ಮಿತ್ರಂ ಭವಂತು|| (ಅಥರ್ವ.೧೯.೧೫.೬.)
     ನಮಗೆ ಮಿತ್ರನಿಂದ ಅಭಯವಿರಲಿ, ಮಿತ್ರರಲ್ಲದವರಿಂದಲೂ ಅಭಯವಿರಲಿ. ಪರಿಚಿತರಿಂದ ಅಭಯವಿರಲಿ, ಅಪರಿಚಿತರಿಂದ ಅಭಯವಿರಲಿ. ರಾತ್ರಿಯಲ್ಲಿ ಅಭಯವಿರಲಿ, ಹಗಲಿನಲ್ಲಿ ಅಭಯವಿರಲಿ. ಎಲ್ಲಾ ದಿಕ್ಕುಗಳೂ ನಮಗೆ ಸ್ನೇಹಭರಿತವಾಗಿರಲಿ.
ಓಂ ಶಾಂತಿಃ ಶಾಂತಿಃ ಶಾಂತಿಃ|| - ಸರ್ವತ್ರ ಶಾಂತಿ ನೆಲೆಸಲಿ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ