ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜುಲೈ 1, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -7: ದೇವರೆಲ್ಲಿದ್ದಾನೆ?


     ಪರಮಾತ್ಮ ಸಾಕಾರನೋ, ನಿರಾಕಾರನೋ ಎಂಬ ಚರ್ಚೆ, ವಾದ-ವಿವಾದಗಳು ಇಂದಿನದಲ್ಲ. ಇದು ನಿಲ್ಲುವಂತಹದೂ ಅಲ್ಲ. ಪಂಡಿತರು 'ವೇದೋಕ್ತ ಜೀವನಪಥ' ಪುಸ್ತಕದಲ್ಲಿನ 'ಪರಮಾತ್ಮ ಸ್ವರೂಪ' ಎಂಬ ಅಧ್ಯಾಯದಲ್ಲಿ ಸಾಧಾರವಾಗಿ ಪರಮಾತ್ಮ ನಿರಾಕಾರಿ ಎಂಬ ಕುರಿತು ಸವಿಸ್ತಾರವಾಗಿ ವೇದಮಂತ್ರಗಳ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ. ಅವರು ತಮ್ಮ ವಾದವನ್ನೇ ಎಲ್ಲರೂ ಒಪ್ಪಬೇಕೆಂಬ ಅಭಿಪ್ರಾಯದವರಲ್ಲ. ವಿಚಾರ ಮಾಡಿ, ವಿಮರ್ಶಿಸಿ, ಚರ್ಚಿಸಿ, ನಿಮ್ಮದೇ ಆದ ನಿರ್ಧಾರಕ್ಕೆ ಬನ್ನಿ ಎಂದು ಒತ್ತಿ ಹೇಳುತ್ತಾರೆ. ಸತ್ಸಂಗವೊಂದರಲ್ಲಿ ಚುಟಕಾಗಿ ಈ ವಿಷಯದಲ್ಲಿ ಹೇಳಿದುದನ್ನು ಈ ಕಂತಿನಲ್ಲಿ ದಾಖಲಿಸಿದೆ. ಸತ್ಯ ಕಹಿಯಾಗಿರುತ್ತದೆ, ಸತ್ಯದ ಹಾದಿ ಎಂದೂ ಸುಲಭವಾಗಿರುವುದಿಲ್ಲ. ಜನರ ವೈಚಾರಿಕ ಶಕ್ತಿ ಜಾಗೃತವಾಗಲಿ ಎಂಬುದೇ ಅವರ ಉದ್ದೇಶ.
****************
ಕರ್ತವ್ಯ ಮತ್ತು ಮಾನಾಪಮಾನ
     ಪರಮಾತ್ಮ ಕಂಬದಂತೆ ಈ ಪ್ರಪಂಚ ಮತ್ತು ಆಕಾಶದಾಚೆರುವ ಪ್ರಪಂಚಗಳನ್ನೆಲ್ಲಾ ಆಧರಿಸಿದ್ದಾನೆ. ನಾವು ಸರ್ವಾಧಾರ ಪರಮಾತ್ಮನನ್ನು ಮರೆತುಬಿಡುತ್ತೇವೆ. ನಮಗೆ ಕಷ್ಟ ಬಂದಾಗ 'ಇನ್ನೇನಪ್ಪಾ ಗತಿ, ನಮ್ಮನ್ಯಾರು ಕಾಪಾಡುತ್ತಾರೆ' ಅಂತ ಗೋಳಿಡುತ್ತೇವೆ. ಸರ್ವರಕ್ಷಕ ಅವನಿರುವಾಗ ಹೆದರುವುದು ಏಕೆ? ಹಿಂದೊಮ್ಮೆ ವಿಗ್ರಹಾರಾಧನೆ ವಿಷಯದಲ್ಲಿ ಚರ್ಚೆ ಏರ್ಪಾಡಾಯಿತು. ದಯಾನಂದ ಸರಸ್ವತಿಯವರು ಒಂದು ಕಡೆ, ಕಾಶಿ ಪಂಡಿತರೆಲ್ಲಾ ಒಂದು ಕಡೆ. ಅಲ್ಲಿ ವಿಗ್ರಹಾರಾಧನೆ ವಿಷಯ ಬರಲೇ ಇಲ್ಲ. ವ್ಯಾಕರಣದ ಬಗ್ಗೆ ಕಿತ್ತಾಡಿದರು, ಆ ಸೂತ್ರ ಸರಿಯೋ ಈ ಸೂತ್ರ ಸರಿಯೋ ಅಂತ. ಎಲ್ಲಾ ಛಲ, ಕಪಟ. 'ಪ್ರತಿಮೆ ಇಲ್ಲದಿದ್ದರೆ ಮನಸ್ಸು ನಿಲ್ಲುವುದಿಲ್ಲ. ಪ್ರತಿಮಾರಾಧನೆ ಸಮರ್ಥಿಸುವ ವೇದಮಂತ್ರ ಇದು' ಎಂದು ಕೈಯಲ್ಲಿ ಬರೆದಿದ್ದ ಯಾವುದೋ ಕಾಗದವನ್ನು ಒಬ್ಬರು ದಯಾನಂದರಿಗೆ ಕೊಟ್ಟರು. ಅವರು ಅದು ಯಾವ ವೇದದ ಮಂತ್ರ ಎಂದು ನೋಡುತ್ತಿರುವಾಗ ಕಾಶಿ ಪಂಡಿತರೆಲ್ಲಾ ದಯಾನಂದರಿಗೆ ಉತ್ತರ ಕೊಡಲಾಗಲಿಲ್ಲ ಎಂದು ಎದ್ದುಬಿಟ್ಟರು. ಸಭೆಯಲ್ಲಿ ಗಲಾಟೆಯಾಯಿತು. ಪುಂಡರೂ ಅಲ್ಲಿ ಸೇರಿದ್ದು ದಯಾನಂದರ ಮೇಲೆ ಕಲ್ಲು, ಇಟ್ಟಿಗೆ ಚೂರುಗಳಿಂದ ಪ್ರಹಾರ ಮಾಡಿದರು. ಆ ಮಹಾತ್ಮ ಸಹಿಸಿಕೊಂಡು ಸ್ವಲ್ಪವೂ ಅಲುಗಾಡದೆ ಶಾಂತವಾಗಿದ್ದರು. ಶಾಸ್ತ್ರಾರ್ಥದ ಗತಿ ಹೀಗಾಯಿತು. ಸುಳ್ಳು ಗೆದ್ದಿತು. ಸತ್ಯ ಗೆಲ್ಲಲಿಲ್ಲ. ವಿಷಯ ತಿಳಿದ ಸಂತ ಈಶ್ವರ ಸಿಂಹ ಎಂಬ ಸಿಖ್ಖರ ಗುರು ಒಬ್ಬರು ದಯಾನಂದರನ್ನು ಕಾಣಲು ಬಂದರು. ದಯಾನಂದರ ಹತ್ತಿರ ಗಂಟೆಗಟ್ಟಲೇ ಮಾತನಾಡಿದರೂ ದಯಾನಂದರು ಗಲಾಟೆಯ ವಿಷಯ ಎತ್ತಲೇ ಇಲ್ಲ. ದಯಾನಂದರು ಹೊದ್ದಿದ್ದ ಶಾಲು ಜಾರಿದಾಗ ಅವರ ಎದೆಯ ಮೇಲೆ ಕಲ್ಲಿನ ಹೊಡೆತದಿಂದಾಗಿದ್ದ ಗಾಯ ಕಂಡಿತು. ಸಿಖ್ ಗುರು ಮರುಗಿ, 'ಬಹಳ ಗಲಾಟೆಯಾಗಿದೆ. ಇಂದು ರಾತ್ರಿ ಕಳೆಯುವವವರೆಗಾದರೂ ಎಲ್ಲಾದರೂ ಅಡಗಿಕೊಂಡಿರುವುದು ಒಳ್ಳೆಯದು' ಎಂದು ಸಲಹೆ ಕೊಟ್ಟರು. ದಯಾನಂದರು ಹೇಳಿದರು: 'ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಮಾನ, ಅವಮಾನಗಳಿಗೆ, ಕಷ್ಟ, ನಷ್ಟಗಳಿಗೆ ಅಂಜಿದರೆ ಸನ್ಯಾಸಿಗಳಿಗೆ ಸೇವೆ ಮಾಡಲಾಗುವುದಿಲ್ಲ. ಇಂದು ಕಲ್ಲು, ಇಟ್ಟಿಗೆಗಳಿಂದ ಹೊಡೆದಿದ್ದಾರೆ. ನಾಳೆ ಪುಷ್ಪವೃಷ್ಟಿ ಮಾಡುತ್ತಾರೆ. ಸುಖ-ದುಃಖಗಳೆರಡೂ ಕೂಡ ಆ ಭಗವಂತ ಕೊಟ್ಟ ವರದಾನ. ನಿಷ್ಠೆಯಿಂದ ಸತ್ಯ ಬಿಡದಿರುವುದೇ ನಮ್ಮ ಧರ್ಮ. ಪ್ರಪಂಚವೆಲ್ಲಾ ಎದುರಾಗಲಿ, ರಕ್ಷಿಸುವ ಪರಮಾತ್ಮ ರಕ್ಷಣೆ ಕೊಟ್ಟೇ ಕೊಡುತ್ತಾನೆ'. ಜ್ಞಾಪಕ ಇಟ್ಟುಕೊಳ್ಳಿ, ಸತ್ಯದ ದಾರಿ ಯಾವತ್ತೂ ಸುಲಭವಲ್ಲ.
ದೇವರೆಲ್ಲಿದ್ದಾನೆ?
     ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ, ನನ್ನ ದೇವರು ರಾಮೇಶ್ವರದಲ್ಲಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ, ಆ ವಿಗ್ರಹದಲ್ಲಿದ್ದಾನೆ, ಈ ವಿಗ್ರಹದಲ್ಲಿದ್ದಾನೆ ಎನ್ನುವುದು ಎಷ್ಟು ಸರಿ? ಸೋಮೇಶ್ವರ ದೇವಸ್ಥಾನದ ಮೇಲೆ ಘಜನಿ ಮಹಮದ್ ಬಾರಿ ಬಾರಿ ದಾಳಿ ಮಾಡಿದ. ದೇವಸ್ಥಾನ ಧ್ವಂಸ ಮಾಡಿದ. ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಘಜನಿ ಮಹಮದ್ ಗೆದ್ದ, ಸೋಮೇಶ್ವರ ಸೋತ! ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ. ನಾನು ಹೇಳುತ್ತಾ ಇರುತ್ತೇನೆ, ನನಗೆ ಭಗವಂತನ ಭಯ ಇಲ್ಲ, ಅವನ ಭಕ್ತರ ಭಯ! ನಾನು ಹೀಗೆ ಹೇಳಿದರೆ ಅವರಿಗೆ ಕೋಪ ಬರುತ್ತೆ. ನನ್ನನ್ನು ನಾಸ್ತಿಕ ಎನ್ನುತ್ತಾರೆ. ಗೊಂಬೆಯನ್ನು ದೇವರು ಎಂದು ನಂಬದಿದ್ದರೆ ನಾಸ್ತಿಕ ಎನ್ನುವುದಾದರೆ ನಾನು ನಾಸ್ತಿಕನೇ. ದೇವರಿಲ್ಲದಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ. ಆ ಪರಮಾತ್ಮ ಕರ್ತ-ಧರ್ತ-ಸಂಹರ್ತ. ಪ್ರಪಂಚ ಸೃಷ್ಟಿ ಮಾಡುವವನು, ರಕ್ಷಿಸುವವನು ಮತ್ತು ನಾಶ ಮಾಡುವವನು ಅವನೇ. ಆ ದೇವರು ಕಾಣುವುದಿಲ್ಲ, ಅದಕ್ಕೇ ನಂಬುವುದಿಲ್ಲ ಅಂದರೆ ಬಹಳ ಕಷ್ಟ. ಕಣ್ಣಿಗೆ ಕಾಣುವುದಕ್ಕಿಂತ ಕಾಣಿಸದಿರುವುದೇ ಹೆಚ್ಚು. ವಾಯು ಇದೆ, ಕಣ್ಣಿಗೆ ಕಾಣುತ್ತಾ? ಆಕಾಶ ಇದೆ, ಅದನ್ನು ಕಾಣಲು ಎಷ್ಟು ಮೇಲಕ್ಕೆ ಹೋದರೆ ಅದು ಅಷ್ಟೂ ಮೇಲಕ್ಕೆ ಹೋಗುತ್ತೆ. ಏಕೆಂದರೆ ಅಲ್ಲಿ ಏನೂ ಇಲ್ಲ, ಶೂನ್ಯ. ಆ ಶೂನ್ಯಕ್ಕೆ ಬೇಲಿ ಕಟ್ಟಲು ಸಾಧ್ಯವೇ? ಇಷ್ಟೇ ಉದ್ದ, ಇಷ್ಟೇ ಅಗಲ, ಇಷ್ಟೇ ಎತ್ತರ ಎಂದು ನಿಗದಿ ಪಡಿಸಲು ಸಾಧ್ಯವೇ? ಆ ಪರಮಾತ್ಮ ಇದ್ದಾನೆ, ಅವನು ಶೂನ್ಯ ಅಲ್ಲ. ಅವನಿರುವುದರಿಂದಲೇ ಈ ಸೂರ್ಯ, ಚಂದ್ರ, ಭೂಮಿ, ಬ್ರಹ್ಮಾಂಡ ಎಲ್ಲಾ! ಆ ಭಗವಂತ ಎಷ್ಟು ಪ್ರಕಾಶಮಯವೆಂದರೆ ಅವನೆದುರಿಗೆ ಈ ಸೂರ್ಯ ಯಾವ ಲೆಕ್ಕಕ್ಕೂ ಇಲ್ಲ. ಆ ಸೂರ್ಯನೇ ಲೆಕ್ಕಕ್ಕಿಲ್ಲವೆಂದರೆ ಚಂದ್ರನ ಪಾಡೇನು? ನಕ್ಷತ್ರಗಳೂ ಅಷ್ಟೆ. ಆ ಪರಮಾತ್ಮನ ಜ್ಯೋತಿಯಿಂದಲೇ ಇವೆಲ್ಲಾ ಬೆಳಗುತ್ತಿವೆ. ಅಂತಹ ಜ್ಯೋತಿರ್ಮಯನಾದ ಪರಮಾತ್ಮನನ್ನು ಬಿಟ್ಟು ಯಾವತ್ತು ಕಲ್ಲು, ಮಣ್ಣು, ಮರಗಳಿಂದ ಮಾಡಿದ ಗೊಂಬೆಗಳನ್ನು ಪೂಜಿಸಲು ಪ್ರಾರಂಭಿಸಿದೆವೋ ಅವತ್ತಿನಿಂದಲೇ ನಮ್ಮ ಪತನ ಆರಂಭವಾಯಿತು. 
ನಾವೇನು ಮಾಡಬೇಕು?
     ದೇವರಿಗೆ 45 ಕೋಟಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿಕೊಡುತ್ತಾರೆ. ವಿಗ್ರಹಕ್ಕೆ ಏನು ಗೊತ್ತಾಗುತ್ತೆ? ವಜ್ರದ ಕಿರೀಟ ಇಡಿ, ತೆಗೆದು ಹಾಕಿ, ಮುಳ್ಳಿನ ಕಂತೆ ಇಡಿ, ಏನು ಮಾಡಿದರೂ ಸುಮ್ಮನಿರುತ್ತೆ. ಪೂರ್ಣ ತೃಪ್ತನಿಗೆ ನಾವು ಏನಾದರೂ ಕೊಟ್ಟು ತೃಪ್ತಿ ಕೊಡಲು ಸಾಧ್ಯವೇ? ದೇವರಿಗೆ ನೈವೇದ್ಯ ಅಂತ ಇಡ್ತೀವಿ. ಯಾವುದು ಆ ನೈವೇದ್ಯ? ಎಲ್ಲಿಂದ ಬಂತು? ತೆಂಗಿನಕಾಯಿಯಾಗಲಿ, ಹಣ್ಣು ಹಂಪಲಾಗಲೀ ಎಲ್ಲಿಂದ ಬಂತು? ನಾವು ಮಾಡಿದ್ದಾ? ಅದೂ ಭಗವಂತನದೇ. ಅವನದ್ದನ್ನೇ ಅವನಿಗೆ ಕೊಟ್ಟಂತೆ ಮಾಡಿ, ನಾವು ಹೇಳುತ್ತೇವೆ, ನಾನು ಭಗವದ್ಭಕ್ತ, ಅವನಿಗಾಗಿ ಇಷ್ಟೊಂದು ಖರ್ಚು ಮಾಡಿದ್ದೇನೆ, ಅಂತ. ನಾವು ಹಸಿವಿರುವವರಿಗೆ ಅನ್ನ ಹಾಕುವುದಿಲ್ಲ. ಹೊಟ್ಟೆ ತುಂಬಿದವರಿಗಾಗಿ ಮತ್ತು ಅಗತ್ಯವಿಲ್ಲದವುಗಳಿಗಾಗಿ ಖರ್ಚು ಮಾಡುತ್ತೇವೆ. ಬಡವರನ್ನು ಸಂತಯಿಸಿ, ಹಸಿದವರಿಗೆ ಅನ್ನವಿಡಿ, ದೀನರ ಸೇವೆ ಮಾಡಿ. ಇದು ನಿಜವಾದ ದೇವರ ಸೇವೆ, ಇದು ನಿಜವಾಗಿ ಪರಮಾತ್ಮನ ಮೇಲಿನ ಭಕ್ತಿ. ಪರಮಾತ್ಮನ ಮಕ್ಕಳಿಗೆ ಸಂತೋಷವಾದರೆ ಪರಮಾತ್ಮನಿಗೆ ಸಂತೋಷವಾಗದೆ ಇರುತ್ತದೆಯೇ?
ದೇವರು ಮೆಚ್ಚುವ ಕೆಲಸ ಮಾಡೋಣ
     ದುಡಿಯಬೇಕು, ತಿನ್ನಬೇಕು, ಅದು ನಿಜವಾದ ಊಟ. ತಿನ್ನುವವರೇ ತುಂಬಾ ಇದ್ದು, ದುಡಿಯುವವರು ಇಲ್ಲದಿದ್ದರೆ ಅನ್ನ ಎಲ್ಲಿಂದ ಬರಬೇಕು? ತುಂಬಾ ಕಷ್ಟ. ಸರ್ವಾಧಾರ ಪರಮಾತ್ಮ ಎಲ್ಲರಿಗೂ ಆಧಾರ ಹೌದು, ಆದರೆ ಸೋಮಾರಿಗಳ ಬಂಧು ಅಲ್ಲ. ಪರಮಾತ್ಮ ಎಲ್ಲರಿಗೂ ಕೊಡುತ್ತಾನೆ, ಯಾರಿಗೆ ಕೊಡುತ್ತಾನೆ? ದುಡಿಯುವವರಿಗೆ ಕೊಡುತ್ತಾನೆ. ವೇದ ಹೇಳುತ್ತೆ, ಕಷ್ಟ ಪಡು, ದುಡಿ, ಬೇರೆಯವರ ಶ್ರಮದ ಊಟ ನಮಗೆ ಬೇಡ, ನಮ್ಮ ಅನ್ನವನ್ನು ನಾವು ಸಂಪಾದಿಸೋಣ, ವೇದ ಹೀಗೆ ಹೇಳಿದರೆ ಇಂದು ನಾವು ನೋಡುತ್ತಿರುವುದೇನು? ಮನೆಯಲ್ಲಿ ಸಮಾರಂಭ, ಪೂಜೆ ಮಾಡಿ ಹೊಟ್ಟೆ ತುಂಬಿದವರಿಗೇ ಊಟ ಹಾಕುತ್ತೇವೆ, ಹಸಿದ ಭಿಕ್ಷುಕ ಹೊರಗೆ ಬೇಡಿ ಬಂದರೆ 'ಹೋಗಲೇ' ಅಂತ ಗದರಿಸಿ ಕಳಿಸಿಬಿಡುತ್ತೇವೆ. ಇದು ದಾನ ಮಾಡುವ ರೀತಿಯಾ? ಹಸಿದವರಿಗೆ ಅನ್ನ ಹಾಕಿ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡಿ, ಮನೆಯಿಲ್ಲದವರಿಗೆ ಮನೆ ಕಟ್ಟಿಸಿಕೊಡಿ,  ಇದು ಪುಣ್ಯದ ಕೆಲಸ. ಇದು ನಿಮ್ಮ ಕರ್ತವ್ಯ. ಇದು ಬಿಟ್ಟು ಸ್ವಾರ್ಥಿಗಳಾಗಿ ನಿಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡರೆ ಅದು ದೇವರು ಮೆಚ್ಚುವ ಕೆಲಸವಲ್ಲ. ಯಾವತ್ತೂ ಕೂಡ ಸ್ವಾರ್ಥಿಗೆ ತಾನು ಮಾಡುವುದು ತಪ್ಪು ಅಂತ ಅನ್ನಿಸುವುದೇ ಇಲ್ಲ. ನನ್ನ ಅನ್ನ ಸಂಪಾದಿಸಿ ತಿನ್ನುತ್ತೇನೆ, ಆ ಸಂಪಾದನೆ ಹೇಗಾದರೂ ಸರಿ, ಹತ್ತು ಜನರ ತಲೆ ಒಡೆದಾದರೂ ಸರಿ, ಅನ್ನುವುದು ಅವರ ಮಾತು. ಬೇರೆಯವರ ಶ್ರಮದ ಫಲವನ್ನು ಕಿತ್ತುಕೊಂಡು ಅನ್ಯಾಯವಾಗಿ ಹಣ ಸಂಗ್ರಹಿಸುವವರನ್ನು ಇಂದು ಕಾಣುತ್ತಿದ್ದೇವೆ. 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ಈ ಮಂತ್ರದ ಅರ್ಥ, ನೂರು ಕೈಗಳಿಂದ ದುಡಿ, ಸಾವಿರ ಕೈಗಳಿಂದ ದಾನ ಮಾಡು ಅಂತ. ಇದರ ಅರ್ಥ ನಿಮಗಾಗಿ ಮಾತ್ರ, ನಿಮ್ಮ ಕುಟುಂಬಕ್ಕಾಗಿ ಮಾತ್ರ ನೀವು ದುಡಿಯಬಾರದು. ಸಮಾಜದ ಹಿತವನ್ನೂ ಪರಿಗಣಿಸಬೇಕು ಎಂದು. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ, ಬ್ರಹ್ಮಚಾರಿ, ಗೃಹಸ್ಥ, ಸನ್ಯಾಸಿ, ಎಲ್ಲರಿಗೂ ಅನ್ವಯಿಸುತ್ತೆ. ಎಲ್ಲರ ಸುಖದಲ್ಲಿ ನಮ್ಮ ಸುಖ ಇದೆ. 'ಸರ್ವೇಜನಾಃ ಸುಖಿನೋ ಭವಂತು'. ಎಲ್ಲರೂ ಅನ್ನುವಲ್ಲಿ ನಾವೂ ಸೇರುತ್ತೇವೆ. ಎಲ್ಲರಿಗೂ ಸಿಕ್ಕಿದರೆ ನಮಗೂ ಸಿಗುತ್ತೆ, ಯಾರಿಗೂ ಸಿಗದಿದ್ದರೆ ನಮಗೂ ಇಲ್ಲ ಅಷ್ಟೆ. ಇದು ಈ ವೇದ ಮಂತ್ರದ ಅರ್ಥ. ಅರ್ಥ ಮಾಡಿಕೊಂಡು ಅನುಸರಿಸಿದರೆ ನಮ್ಮದು ಶ್ರೇಷ್ಠ ಜೀವನವಾಗುತ್ತದೆ. 
ನೋಯಿಸದಿರೋಣ
     ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ. ಪಿಪ್ಪಲಾದ ಎಂಬ ಋಷಿಗೆ ಆ ಹೆಸರು ಬಂದದ್ದು ಆತ ಕೆಳಗೆ ಬಿದ್ದಿದ್ದ ಫಲವನ್ನು ಮಾತ್ರ ತಿನ್ನುತ್ತಿದ್ದರಿಂದ. ಗೌತಮನಿಗೆ 'ಅಕ್ಷಪಾದ' -ಅಂದರೆ ಕಾಲಿನಲ್ಲಿ ಕಣ್ಣಿದ್ದವನು- ಎಂಬ ಹೆಸರೂ ಇತ್ತು. ಆತ ನಡೆದಾಡುವಾಗ ಯಾವುದೇ ಕ್ರಿಮಿ, ಕೀಟಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಅವರುಗಳು ಅಷ್ಟರಮಟ್ಟಿಗೆ ಇತರರನ್ನು ನೋಯಿಸಬಾರದೆಂಬ ಮನೋಭಾವ ಹೊಂದಿದ್ದರು. ಮಾತು ಅನ್ನುವುದು ಬಾಣವಿದ್ದಂತೆ. ಆಡಿದ ಮೇಲೆ ಮುಗಿಯಿತು. ಬಾಣ ತನ್ನ ಗುರಿಯನ್ನು ಛೇದಿಸುವಂತೆ ಪಾಪವನ್ನು ದೂರ ಮಾಡುವಂತಿರಬೇಕು, ಇತರರನ್ನು ಚುಚ್ಚುವಂತಿರಬಾರದು. ಮನಸ್ಸಿಗೆ ಹಿತ, ಸಂತೋಷ ತರಬೇಕು. ನಮಗೆ ಕೆಟ್ಟದಾದಾಗ, ತೊಂದರೆಯಾದಾಗ ಪರಮಾತ್ಮನನ್ನು ದೂಷಿಸುವುದು ಸರಿಯಲ್ಲ. ನಮಗೆ ಕೆಟ್ಟದಾಗಲು ಕಾರಣ ನಮ್ಮ ತಪ್ಪೇ ಹೊರತು ಪರಮಾತ್ಮನದಲ್ಲ ಎಂಬುದನ್ನು ಅರಿಯಬೇಕು. ನಮಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕೇ ಹೊರತು ಅವನನ್ನು ಬಯ್ಯಬಾರದು. ನಾವು ಹೊಗಳಿದರೂ ಅಷ್ಟೆ, ತೆಗಳಿದರೂ ಅಷ್ಟೆ, ಪರಮಾತ್ಮ ಪರಮಾತ್ಮನೇ. ಅವನು ನಿರ್ಲಿಪ್ತ. ಹೊಗಳುತ್ತಾರೆಂದು ಒಳ್ಳೆಯದು ಮಾಡುತ್ತಾನೆ, ತೆಗಳುತ್ತಾರೆಂದು ಕೆಟ್ಟದು ಮಾಡುತ್ತಾನೆ ಎಂದು ಭಾವಿಸುವುದು ಮೂರ್ಖತನ. ಎಲ್ಲಿ ನ್ಯಾಯ, ಸತ್ಯ, ಧರ್ಮ ಇರುತ್ತದೋ ಅಲ್ಲಿ ಭಗವಂತನಿರುತ್ತಾನೆ. ಇದರ ಅರಿವಾದರೆ ಪಾಪ ಮಾಡಲು ಧೈರ್ಯ ಬರುವುದಿಲ್ಲ. 
-ಕ.ವೆಂ.ನಾಗರಾಜ್.
*****************
ದಿನಾಂಕ ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌:

  1. Tirumalai Ravi
    ಬಾಯಲ್ಲಿ ಮಾತ್ರ " ಸರ್ವೇ ಸುಖಿನಃ ಸಂತು ಸರ್ವೇ ಸಂತು ನಿರಾಮಯಾಃ ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಮಾಗ್ಭವೇತ್ " ಅಂತ ದಿನಾ ಬಾಯಲ್ಲಿ ಒದರಿದರೆ ಏನು ಪ್ರಯೋಜನ, ಆಲ್ವಾ ? ನುಡಿದಂತೆ ನಡೆದರೆ ಪರಮಾತ್ಮ ಮೆಚ್ಚುತ್ತಾನೆ. ಇಲ್ಲದಿದ್ದರೆ ಚಚ್ಚುತ್ತಾನೆ, ಚುಚ್ಚುತ್ತಾನೆ.

    Kavi Nagaraj
    ಸತ್ಯ, ತಿರುಮಲೈ ರವಿಯವರೇ.

    ಪ್ರತ್ಯುತ್ತರಅಳಿಸಿ