ದಿ ಟೈಮ್ಸ್ ಆಫ್ ಇಂಡಿಯ ಪತ್ರಿಕೆಯ ದಿನಾಂಕ 2.10.2011ರ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದ ಸಂದರ್ಭದಲ್ಲಿ ಪಂಡಿತರು ಹೀಗೆ ಹೇಳಿದ್ದರು: "ನನಗೆ ಸಾಯುವ ಬಯಕೆಯಿಲ್ಲ. ದೀರ್ಘ ಆಯಸ್ಸಿನ ಸಲವಾಗಿ ಬ್ರಹ್ಮಚಾರಿಗಳಾಗಿರಬೇಕು ಮತ್ತು ಹೊಟ್ಟೆಗೆ ಶ್ರಮವಾಗದಂತೆ ಹಿತವಾಗಿ ಆಹಾರ ಸೇವಿಸಬೇಕು." ಮುಂದುವರೆದು ಅವರು ವಿನೋದವಾಗಿ ಹೇಳಿದ್ದರು: "ಈಗೆಲ್ಲಿ ಬ್ರಹ್ಮಚಾರಿಗಳು ಸಿಗುತ್ತಾರೆ. ಕೇವಲ ಭ್ರಷ್ಠಾಚಾರಿಗಳು ಇದ್ದಾರೆ." ಬ್ರಹ್ಮಚಾರಿ ಎಂದರೆ ಕೇವಲ ಮದುವೆಯಾಗದಿರುವುದು ಎಂದು ಅರ್ಥವಲ್ಲ, ಬ್ರಹ್ಮನಲ್ಲಿ ಚರಿಸುವವನು ಎಂದೂ ಅರ್ಥ. ಬ್ರಹ್ಮಚಾರಿ ಮತ್ತು ಸಸ್ಯಾಹಾರಿಯಾಗಿರುವ ಪಂಡಿತರು ಸರಳ ಮತ್ತು ನಿಯಮಿತ ಜೀವನ ಶೈಲಿಯಿಂದ ಬದುಕನ್ನು ಪ್ರೀತಿಸಿ ಬದುಕುತ್ತಿರುವುದು ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಅವರ ವಿಚಾರಧಾರೆಯ 12ನೆಯ ಕಂತು ಇಲ್ಲಿದೆ.
********************
ಸಂತರು ಮತ್ತು ಮಹಾರಾಜರು
ಈ ಹಿಮಾಲಯ ಪರ್ವತ ಇದೆಯಲ್ಲಾ, ಮೂರು ಸಾಲು ಇದೆ, ಎರಡು ಸಾಲು ನಮ್ಮ ದೇಶಕ್ಕೆ ಸೇರಿದ್ದು, ಇನ್ನೊಂದು ಚೀನಾ ದೇಶಕ್ಕೆ ಸೇರಿದ್ದು. ಮಾನಸ ಸರೋವರಕ್ಕೆ ನಾವು ಹೋಗಬೇಕಾದರೆ ಚೀನಾದವರ ಪರ್ಮಿಶನ್ ಬೇಕು, ಏಕೆಂದರೆ ಅವರ ರಾಷ್ಟ್ರದ ಮೇಲೆ ನಾವು ಹೋಗಬೇಕು. ಇಲ್ಲದೆ ಹೋದರೆ ನಮ್ಮ ದೇಶಕ್ಕೆ ನುಗ್ಗಿ ಬಂದಿದಾರೆ ಎಂದು ಅವರು ಅರೆಸ್ಟ್ ಮಾಡಬಹುದು,. ಇಷ್ಟು ಕಷ್ಟಪಟ್ಟು ಹೋಗಬೇಕು. ನನಗೆ ಚೆನ್ನಾಗಿ ನೆನಪಿದೆ. 1934ನೆ ಇಸವಿ. ನಾಲ್ಮಡಿ ಕೃಷ್ಣರಾಜ ಒಡೆಯರು ಮಾನಸ ಸರೋವರದಲ್ಲಿ ಸ್ನಾನ ಮಾಡಲು ಬಂದಿದ್ದರು. ಸ್ನಾನ ಎಲ್ಲಾ ಮಾಡಿದರು. ಬಹಳ ಉದಾರಾತ್ಮ. ಆಮೇಲೆ ಒಬ್ಬರು ಮಹಾತ್ಮರು ಹರಿದ್ವಾರದಲ್ಲಿದ್ದಾರೆ ಅಂತ ಅವರಿಗೆ ಗೊತ್ತಾಯ್ತು. ಸಂತರ ದರ್ಶನ ಮಾಡಲು ನಿರ್ಧರಿಸಿದ ಅವರು ಒಬ್ಬ ಅಧೀನ ಅಧಿಕಾರಿಯನ್ನು ಸಂತರ ಅನುಮತಿ ಪಡೆಯಲು ಕಳಿಸಿದರು. ಆ ಅಧಿಕಾರಿ ಸಂತರನ್ನು ಕಂಡು, 'ಮಹಾರಾಜರು ಬಂದಿದ್ದಾರೆ. ತಮ್ಮನ್ನು ಕಾಣಲು ಬಯಸಿದ್ದಾರೆ' ಎಂದು ಹೇಳಿದ. ಆ ಸಂತರು ಹೇಳಿದರು:
'ಮಹಾರಾಜ? ಯಾವ ಮಹಾರಾಜ? ನನಗೆ ಗೊತ್ತಿರುವವನು ಒಬ್ಬನೇ ಮಹಾರಾಜ, ಜಗತ್ ಸಾಮ್ರಾಟ್, ಬೇರೆ ಯಾರೂ ಇಲ್ಲ'.
'ಮೈಸೂರ್ ಕಾ ಮಹಾರಾಜ.'
'ಆಯ್ತು, ಬರಕ್ಕೆ ಹೇಳು'.
ಮಹಾರಾಜರು ಒಂದು ತಟ್ಟೆಯಲ್ಲಿ ಬೆಳ್ಳಿ ನಾಣ್ಯಗಳನ್ನು ಇಟ್ಟುಕೊಂಡು ಸಂತರಿಗೆ ಕೊಡಬೇಕೆಂದು ಬಂದರು. ಅವರು ಬಂದಾಗ ಪೇಟ ತೆಗೆದಿಟ್ಟು, ಕಚ್ಚೆ ಪಂಚೆ ಉಟ್ಟುಕೊಂಡು ಬರಿಗಾಲಿನಲ್ಲಿ ಬಂದಿದ್ದರು. ಅವರು ಬಂದಿದ್ದ ರೀತಿಯಿಂದ ಸಂತರಿಗೆ ಸ್ವಲ್ಪ ಸಮಾಧಾನವಾಗಿತ್ತು. ಸಂತರು ನೋಡಿದರು, ಎರಡು ಮಾತು ಕೇಳಿದರು:
'ನೀನು ರಾಜ ಅಂತೆ, ಯಾರಿಗೆ ರಾಜ? ಓಹೋ, ಮೈಸೂರು ದೇಶದ ರಾಜ, ಎಷ್ಟು ಅಗಲ, ಎಷ್ಟು ಉದ್ದ ಇದೆ, ನಿನ್ನ ಮೈಸೂರು?'
ಈರೀತಿ ಕೇಳಲು ಸಂತರಿಗೇ ಸಾಧ್ಯ. ರಾಜರು ಇಟ್ಟಿದ್ದ ತಟ್ಟೆಯ ಮೇಲೆ ಮುಚ್ಚಿದ್ದ ವಸ್ತ್ರ ಸರಿಸಿ ನೋಡಿದ ಸಂತರು ಕೇಳಿದರು:
'ಇದರಲ್ಲಿ ತಿನ್ನೋದಕ್ಕೆ ಏನಿದೆ? ಇದನ್ನು ತಿನ್ನೋಕಾಗಲ್ಲ'.
'ತಮ್ಮ ಖರ್ಚಿಗೆ'.
'ನನಗೇನು ಖರ್ಚಿದೆ? ಭಗವಂತ ಕೊಟ್ಟಿರೋ ಪಾತ್ರೆ ಇದೆ. ಕೈಲಿ ಹಿಡಕೊಂಡು ಭಿಕ್ಷಕ್ಕೆ ಹೋಗ್ತೀನಿ. ಅದರಲ್ಲಿ ಒಂದೋ, ಎರಡೋ ರೊಟ್ಟಿ ಬಿದ್ದರೆ ಆಯಿತು, ನನ್ನ ಊಟ. ನನಗೆ ರೊಟ್ಟಿ ಬೇಕಾಗಿದೆ, ಅನ್ನ ಬೇಕಾಗಿದೆ, ಅದನ್ನು ಬಿಟ್ಟುಬಿಟ್ಟು ನೀವು ಚಿನ್ನದ್ದೋ, ಬೆಳ್ಳಿಯದೋ ನಾಣ್ಯ ಕೊಟ್ಟರೆ ನಾನು ಏನು ಮಾಡಲಿ, ಅದನ್ನು ತೆಗೆದುಕೊಂಡು? ತಿನ್ನಕ್ಕಾಗುತ್ತಾ ಇದು?'
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳ್ತಾನೆ: 'ಮಣ್ಣಿನ ಹೆಂಟೆ, ಕಲ್ಲು, ಚಿನ್ನ ಇವೆಲ್ಲವನ್ನೂ ಯಾವನು ಸಮನಾಗಿ ಭಾವಿಸುತ್ತಾನೋ ಅವನೇ ಯೋಗಿ.' ಇಂತಹ ಎಷ್ಟು ಜನ ಯೋಗಿಗಳು ಸಿಗುತ್ತಾರೆ?
ಐಶ್ವರ್ಯ ಸಂಪಾದನೆ ಏಕೆ?
ಗಳಿಸುವ ಸಂಪತ್ತು ನಮ್ಮನ್ನು ಯಜ್ಞದಿಂದ ದೂರ ತಳ್ಳಬಾರದು. ಯಜ್ಞದ- ಪರೋಪಕಾರದ - ಪವಿತ್ರ ವಿಸ್ತಾರಕ್ಕಾಗಿಯೇ ನಮ್ಮ ಐಶ್ವರ್ಯ ಮೀಸಲಾಗಿರಬೇಕು. ಈ ಮಂತ್ರ ಹೇಳುತ್ತದೆ: ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ | ಕರತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ || (ಅಥರ್ವ. 3.24.5.) ನೂರು ಕೈಗಳಿಂದ ಸಂಪಾದಿಸು, ಸಾವಿರ ಕೈಗಳಿಂದ ಹಂಚಿಬಿಡು. ಹೀಗೆ ಮಾಡಿ ಅಭಿವೃದ್ಧಿ ಸಾಧಿಸಿಕೊಳ್ಳಬೇಕು.
ಧನಂಜಯ
ಓಂ ಪ್ರಜಾಪತೇ ನ ತ್ವದೇತಾನ್ಯನ್ಯೋ ವಿಶ್ವಾ ಜಾತಾನಿ ಪರಿ ತಾ ಬಭೂವ | ಯತ್ ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯಂ ಸ್ಯಾಮ ಪತಯೋ ರಯೀಣಾಮ್ || (ಋಕ್.10.121.10.)
'ಹೇ, ಜಗತ್ಪಾಲಕನಾದ ಪ್ರಭುವೇ, ನಿನ್ನನ್ನು ಬಿಟ್ಟು ಬೇರೆ ಯಾರೂ ಈ ಸಮಸ್ತ ಸೃಷ್ಟಿಯ ಅಧೀಶ್ವರನೂ, ಅಂತರ್ಯಾಮಿಯೂ ಇಲ್ಲ. ಯಾವ ಕಾಮನೆಯಿಂದ ನಿನ್ನ ಉಪಾಸನೆ ಮಾಡುತ್ತೇವೆಯೋ ನಮ್ಮ ಆ ಕಾಮನೆಗಳು ಈಡೇರಲಿ. ನಾವು ಸಂಪತ್ತುಗಳ ಸ್ವಾಮಿಗಳಾಗೋಣ' ಎನ್ನುತ್ತದೆ ಈ ಮಂತ್ರ.
ಧನಂಜಯ ಅಂದರೆ ನೀವು ಏನು ತಿಳಿದುಕೊಳ್ಳುತ್ತೀರಿ? ಹಣ ಸಂಪಾದನೆ ಮಾಡುವವನು ಅಂತ. ಹಾಗಲ್ಲ. ಹಾಗಾದರೆ ನಿಜವಾದ ಧನ ಯಾವುದು? ಯಾವುದು ನಮ್ಮ ಸಹಾಯಕ್ಕೆ ಬರುತ್ತೋ ಅದು ನಿಜವಾದ ಧನ. ಯಾವುದು ಉಪಭೋಗಕ್ಕೆ ಬರುತ್ತೋ ಅದನ್ನು ತೆಗೆದುಕೊಂಡು ಹೋಗಿ ಕೊಡಬೇಕು. ಯಾತಕ್ಕಾಗಿ ನಾವು ಹಣ ಸಂಪಾದಿಸಬೇಕು? ಆ ಧನ ನಮ್ಮನ್ನು ಆಳುವುದಕ್ಕೆ ಅಲ್ಲ, ನಾವು ಧನವನ್ನಾಳಬೇಕು, ಐಶ್ವರ್ಯಗಳಿಗೆ ನಾವು ಸ್ವಾಮಿಗಳಾಗೋಣ, ಐಶ್ವರ್ಯ ನಮ್ಮನ್ನು ಕುಣಿಸಬಾರದು. ನಾವು ಐಶ್ವರ್ಯವನ್ನು ಕುಣಿಸಬೇಕು. ಎಷ್ಟು ಜನಕ್ಕೆ ಆ ಶಕ್ತಿ ಬರುತ್ತೆ?
ಎಲ್ಲೂ ದುಡ್ಡು ಇಲ್ಲದೆ ಇರುವಾಗ., ಅಕಸ್ಮಾತ್ ದುಡ್ಡು ಬಂತೋ, ಖುಷಿ! ಒಬ್ಬ ಸಾಧುವಿನ ವೇಷ ಹಾಕ್ಕೊಂಡಿದಾನೆ, ಯಾರೋ ಭಕ್ತರು ತಂದಿಡ್ತಾರೆ, ಇವನು ಲಕ್ಷಣವಾಗಿ ತಿಂದು ಹಾಕಿಬಿಡುತ್ತಾನೆ, ಅವನೇನು ಕಷ್ಟಪಟ್ಟು ಸಂಪಾದಿಸಿದನಾ? ಯಾರೋ ಸಂಪಾದಿಸಿದ್ದು, ಹೋಟೆಲಿಗೆ ಹೋದ, ಸಿಕ್ಕಾಪಟ್ಟೆ ತಿಂದ. ಸಿನೆಮಾ ನೋಡಿದ, ಅದು ಮಾಡಿದ, ಇದು ಮಾಡಿದ, ಎಲ್ಲಾ ಬಿಟ್ಟಿ, ಏನಾದರೂ ಕಷ್ಟಪಟ್ಟಿದ್ದಾ? ಕಷ್ಟಪಟ್ಟಿದ್ದಲ್ಲ. ಯಾವುದನ್ನು ಕಷ್ಟಪಟ್ಟು ಬೆವರು ಸುರಿಸಿ ಸಂಪಾದನೆ ಮಾಡ್ತಾನೋ, ಅದು ನಿಜವಾದ ಧನ. ಅದಕ್ಕೆ ಮಾತ್ರ ಬೆಲೆ ಇದೆ.
ದಕ್ಷಿಣೆ
ವೇಷ ಹಾಕಿ ಕೂತ್ಕೊಂಡು, 'ನಾನು ಗುರೂಜಿಯಪ್ಪಾ, ನನಗೆ ದಕ್ಷಿಣೆ ಕೊಡಿ' ಅಂತ ದಕ್ಷಿಣೆ ವಸೂಲು ಮಾಡ್ತಾ ಕೂತ್ರೆ, ಅವನು ಗುರೂನೂ ಅಲ್ಲ, ಅವನು ತೆಗೆದುಕೊಳ್ತಾನಲ್ಲಾ ಅದು ದಕ್ಷಿಣೆನೂ ಅಲ್ಲ. ದಕ್ಷ ಅಂದರೆ ಬಲ, ಯಾವುದು ಬಲವನ್ನು ಕೊಡುತ್ತೋ ಅದು ದಕ್ಷಿಣೆ. ನೀವು ಆ ಮೋಸದ ದುಡ್ಡು ತೆಗೆದುಕೊಂಡು, ಅದನ್ನು ದಕ್ಷಿಣೆ ಅಂತ ಕರಿತೀರಾ? ವಿದ್ವಜ್ಜನರು, ಸತ್ಪುರುಷರು, ಸಾಧು-ಸಂತರು, ಯಾವುದನ್ನು ಗೌರವಿಸುತ್ತಾರೋ ಅದು ನಿಜವಾದ ದಕ್ಷಿಣೆ.
ವ್ರತಗಳು
ಈ ವ್ರತಗಳು ಅಂತ ಹೇಳ್ತಾರಲ್ಲಾ, ವ್ರತ ಅಂದರೆ ನಾನು ಇಂತಹ ಕೆಲಸವನ್ನೇ ಮಾಡುತ್ತೇನೆ ಅಂತ ಅಂದುಕೊಳ್ಳುವುದು ಮತ್ತು ಮಾಡುವುದು. ನಾವು ಮಾಡ್ತೀವಲ್ಲಾ ಇವತ್ತು, ಅನಂತ ಪದ್ಮನಾಭ ವ್ರತ, ವಿಷ್ಣು ಸಹಸ್ರನಾಮ ಪೂಜೆ, ಲಲಿತಾ ಸಹಸ್ರನಾಮ ಪೂಜೆ ಮಾಡ್ತೀನಿ, ದುರ್ಗಾಸಪ್ತಶತಿ ಅಂತ ಹೇಳಿ ಅದರ ಹೆಸರಿನಲ್ಲಿ ಪೂಜೆ ಮಾಡಿ ಯಾವ ವ್ರತವನ್ನೂ ಪಾಲಿಸುವುದಿಲ್ಲ. ಯಾವುದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆಯೋ ಅದು ಮಾತ್ರ ವ್ರತ. ನಾವು ಯಾವುದನ್ನೂ ಕೂಡ ಆಲೋಚನೆ ಮಾಡದೆ ವ್ರತವಾಗಿ ತೆಗೆದುಕೊಳ್ಳಲೇಬಾರದು. ಗುರು ಬ್ರಹ್ಮಚಾರಿ ಕೈಲಿ 5 ಸಲ ಹೇಳಿಸ್ತಾರೆ 'ಪಂಚಜ್ಞಾನೇಂದ್ರಿಯಗಳಿಂದ ಯಾವುದರಿಂದಲೂ ಕೂಡ ನಾನು ಸುಳ್ಳು ಹೇಳುವುದಿಲ್ಲ. ಸತ್ಯವನ್ನೆ ಹೇಳುತ್ತೇನೆ' ಅಂತ. ಆದರೆ ಆ ಗುರುವೇ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಸುಳ್ಳು ಹೇಳ್ತಾ ಇದ್ದರೆ. ಆ ಶಿಷ್ಯ ಇನ್ನೇನು ಕಲಿತಾನು? ಏನೂ ಕಲಿಯುವುದೇ ಎಲ್ಲ.
ಸತ್ಯ ಹೇಳುವ ಶಪಥ ಮಾಡಬೇಡ! ಸತ್ಯ ಹೇಳು!
ಒಬ್ಬ ಕೇಳಿದ, "ಅಪ್ಪಾ, ನೀನು ಅಂಗಡಿಯಲ್ಲಿ ಕೂತ್ಕೊಳ್ತೀಯಲ್ಲಾ, ಸರಿಯಾಗಿ ತೂಕ ಮಾಡಿ ಕೊಡ್ತೀಯಾ? ಮತ್ತೆ ಧಾರಣೆ ಹೇಳ್ತೀಯಲ್ಲಾ, ಸರಿಯಾಗಿ ಹೇಳ್ತೀಯಾ?" ಅದಕ್ಕೆ ಅಪ್ಪನ ಉತ್ತರ, 'ಹಾಗೆ ಹೇಳಿದರೆ ಹೊಟ್ಟೆ ತುಂಬೋದಿಲ್ಲ ಮಗನೆ, ನಾವು ಸುಳ್ಳು ಹೇಳದೇ ಹೋದರೆ ನಮ್ಮ ಹೊಟ್ಟೆ ತುಂಬೋದೇ ಇಲ್ಲ'. ಅಂಥಾ ತಂದೆ, ತಕ್ಕ ಮಗ, ಇನ್ನು ಉದ್ಧಾರ ಹೇಗೆ ಆಗಬೇಕು? ಇದೆಲ್ಲಾ ಸೂಕ್ಷ್ಮ ವಿಷಯ. ಮಾತಾಡೋದು ಸುಲಭ. ಕೆಲಸ ಮಾಡೋದು ಕಷ್ಟ. ಆದ್ದರಿಂದ ಸ್ವಾಮಿ ದಯಾನಂದರು ಹೇಳ್ತಾ ಇದ್ದರು. "ನೀನು ಶಪಥ ಮಾಡಬೇಡ, ನಾನು ಸತ್ಯವನ್ನೇ ಹೇಳುತ್ತೇನೆ, ಅಂತ ಶಪಥ ಮಾಡೋದಕ್ಕೆ ಹೋಗಬೇಡ. ಹೇಳು, ಸತ್ಯವನ್ನೇ ಹೇಳು, ಆದರೆ ಶಪಥ ಮಾಡಬೇಡ. ಯಾಕೆ ಅಂತ ಹೇಳಿದರೆ, ಶಪಥ ಮಾಡೋ ಕಾಲಕ್ಕೆ ಸತ್ಯ ಅನ್ನುವುದನ್ನು ನೀನೇ ತಪ್ಪು ತಿಳಿದುಕೊಂಡಿರಬಹುದು, ಯಾವುದನ್ನೋ ಸತ್ಯ ಅಂತ ತಪ್ಪು ತಿಳಿದುಕೊಂಡಿರಬಹುದು. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು." ಬೇರೆಯವರಿಗೆ ಹಾನಿ ಉಂಟುಮಾಡತಕ್ಕಂಥದ್ದು ಸತ್ಯವಲ್ಲ. ತನಗೆ ಮಾತ್ರ ಒಳ್ಳೆಯದಾಗಬೇಕು ಅಂತ ಬಯಸುವುದೂ ಸತ್ಯ ಅಲ್ಲ. ನನ್ನ ಹಾಗೇ ಎಲ್ಲರಿಗೂ ಒಳ್ಳೆಯದಾಗಬೇಕು, ಯಾರಿಗೂ ಕೆಟ್ಟದಾಗಬಾರದು, ಈ ಭಾವನೆ ಬೆಳೆಸಿಕೊಳ್ಳಬೇಕು.
-ಕ.ವೆಂ. ನಾಗರಾಜ್.
******************ದಿನಾಂಕ 8.07.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:
Arunachala Karanam
ಪ್ರತ್ಯುತ್ತರಅಳಿಸಿಸತ್ಯವನ್ನೇ ಹೇಳು, ಆದರೆ ಶಪಥ ಮಾಡಬೇಡ. ಯಾಕೆ ಅಂತ ಹೇಳಿದರೆ, ಶಪಥ ಮಾಡೋ ಕಾಲಕ್ಕೆ ಸತ್ಯ ಅನ್ನುವುದನ್ನು ನೀನೇ ತಪ್ಪು ತಿಳಿದುಕೊಂಡಿರಬಹುದು, ಯಾವುದನ್ನೋ ಸತ್ಯ ಅಂತ ತಪ್ಪು ತಿಳಿದುಕೊಂಡಿರಬಹುದು. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು." ಬೇರೆಯವರಿಗೆ ಹಾನಿ ಉಂಟುಮಾಡತಕ್ಕಂಥದ್ದು ಸತ್ಯವಲ್ಲ. ತನಗೆ ಮಾತ್ರ ಒಳ್ಳೆಯದಾಗಬೇಕು ಅಂತ ಬಯಸುವುದೂ ಸತ್ಯ ಅಲ್ಲ. ನನ್ನ ಹಾಗೇ ಎಲ್ಲರಿಗೂ ಒಳ್ಳೆಯದಾಗಬೇಕು, ಯಾರಿಗೂ ಕೆಟ್ಟದಾಗಬಾರದು, ಈ ಭಾವನೆ ಬೆಳೆಸಿಕೊಳ್ಳಬೇಕು. ತುಂಬಾ ಚೆನ್ನಾಗಿದೆ.
Laxman Khatavate
ಅಳಿಸಿNice
Nagarajmp Mp
Good.