ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 24, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -13: ರಾಮರಾಜ್ಯ - ರಾವಣರಾಜ್ಯ


     'ನೇತ್ರ, ಕರ್ಣ, ನಾಲಿಗೆ, ನಾಸಿಕ, ಚರ್ಮ - ಈ ಪಂಚೇಂದ್ರಿಯಗಳು ಇದಾವಲ್ಲಾ, ಇವುಗಳಿಂದ ಶತ್ರುಗಳಲ್ಲದವರೂ ಶತ್ರುಗಳಾಗುತ್ತಾರೆ. ಆದ್ದರಿಂದ 'ಹೇ, ಜೀವಾತ್ಮ, ಎಲ್ಲರನ್ನೂ ನಿನ್ನ ಮಿತ್ರರೆಂದೇ ತಿಳಿ' - ಇದು ಒಂದು ವೇದ ಮಂತ್ರದ ಅರ್ಥ. ರಾಮಾಯಣ ಓದಿ, ಮಹಾಭಾರತ ಓದಿ, ನಿಮಗೆ ತಿಳಿಯುತ್ತೆ. ಎಲ್ಲಿ ಇಂದ್ರಿಯ ನಿಗ್ರಹ ಇಲ್ಲವೋ, ಆತ್ಮಬಲ ಇಲ್ಲವೋ, ಎಲ್ಲಿ ಇಂದ್ರಿಯಗಳ ರಾಜ್ಯ ಇರುತ್ತದೋ ಅಲ್ಲಿ ಯಾವತ್ತೂ ಯುದ್ಧ, ಸಂಕಟ, ನರಕ ಇರುತ್ತದೆ. ಎಲ್ಲಿ ಆತ್ಮ ಬಲ ಜಾಸ್ತಿ ಇರುತ್ತೋ ಎಲ್ಲಿ ಇಂದ್ರಿಯಗಳು ಆತ್ಮನ ವಶದಲ್ಲಿದ್ದು ಕೆಲಸ ಮಾಡುತ್ತವೋ ಅಲ್ಲಿ ನಮಗೆ ಸ್ವರ್ಗ ಸಿಗುತ್ತದೆ, ರಾಮರಾಜ್ಯ ಅನ್ನಿಸುತ್ತದೆ. ಈ ಕಣ್ಣಿನಿಂದ ಒಬ್ಬ ಕಟುಕ ಕುರಿಯನ್ನು ಕತ್ತರಿಸುವುದನ್ನೂ ನೋಡಬಹುದು, ಗಗನಚುಂಬಿ ಹಿಮಾಲಯವನ್ನೂ ನೋಡಬಹುದು. ಪೆಸಿಫಿಕ್ ಮಹಾಸಾಗರವನ್ನೂ ನೋಡಬಹುದು. ಈ ಕಿವಿಯಿಂದ ಕೆಟ್ಟ ಕೆಟ್ಟ ಹಾಡುಗಳನ್ನೂ ಕೇಳಬಹುದು, ಒಳ್ಳೆಯ ಭಜನೆಗಳನ್ನೂ ಕೇಳಬಹುದು. ಅದರಿಂದ ಒಳ್ಳೆಯದು, ಕೆಟ್ಟದು ಅಂತ ಹೇಳಬಹುದು. ಈಗ ನಾನು ಹೇಳುತ್ತಿರುವುದು ಇದೇ ವಿಷಯ. ಆತ್ಮದ ರಾಜ್ಯ ಇರಬೇಕೋ, ಇಂದ್ರಿಯ ರಾಜ್ಯ ಇರಬೇಕೋ? ಇಂದ್ರಿಯ ರಾಜ್ಯ ಇರಬೇಕು ಅನ್ನುವುದಾದರೆ ರಾವಣ ರಾಜ್ಯ ಆಗುತ್ತೆ, ರಾಮರಾಜ್ಯ ಆಗುವುದಿಲ್ಲ. ರಾಮರಾಜ್ಯ ಆಗಬೇಕೆಂದರೆ ಆತ್ಮ ಬಲ ಗಟ್ಟಿಯಾಗಬೇಕು.  'ಈ ಸಂಯಮ ಬೇಕು' ಅನ್ನುವ ಸಂದೇಶ ರಾಮಾಯಣ, ಮಹಾಭಾರತ ಎಲ್ಲದರಲ್ಲೂ ಇದೆ. ರಾಮನ ಸಂಹಾರ ಆಗಿಹೋಗಿದೆ. ಪತಿ ರಾವಣನ ಶವವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಮಹಾರಾಣಿ ಮಂಡೋದರಿ ಶೋಕಿಸುತ್ತಾ ಹೇಳುತ್ತಾಳೆ: ಇಂದ್ರಿಯಾಣಿ ಪುರಾ ಜಿತ್ವಾ ಜಿತಂ ತ್ರಿಭುವನಂ ತ್ವಯಾ | ಸ್ಮರದ್ಧಿರಿವ ತದ್ವೈರಮಿಂದ್ರಿಯೈರೇವ ನಿರ್ಜಿತ: || (ವಾ.ರಾ.ಯು.ಕಾಂ.೧೧೪.೧೮)  "ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ನೀನು ಮೂಲೋಕಗಳನ್ನೂ ಗೆದ್ದೆ. ಆದರೆ ಇಂದ್ರಿಯಗಳು ತಮ್ಮನ್ನು ತುಳಿದು ನೀನು ಮೇಲಕ್ಕೇರಿದುದನ್ನು ಮರೆತಿರಲಿಲ್ಲ. ತಮ್ಮ ಬಲದಿಂದಲೇ ನೀನು ಮೇಲಕ್ಕೆ ಬಂದೆಯೆಂದು ನಿನ್ನನ್ನು ನಂಬಿಸಿದವು. ಇಂದ್ರಿಯಗಳ ಮಾತು ಕೇಳಿ ನೀನು ನಾಶವಾದೆ". ಇಂದ್ರಿಯಗಳಿಗೆ ದಾಸರಾದರೆ ಕೆಳಗೆ ಬೀಳುತ್ತೇವೆ, ಒಡೆಯರಾದರೆ ಮೇಲೇರುತ್ತೇವೆ. ಆತ್ಮ ಬೇಕೋ, ಇಂದ್ರಿಯ ಬೇಕೋ? ಹಾಗಾದರೆ ಇಂದ್ರಿಯಗಳು ಬೇಡವಾ ಅಂತ ಕೇಳಬೇಡಿ. ಕಣ್ಣು ಬೇಡವಾ, ಕುರುಡರಾಗಬೇಕಾ? ಕಿವಿ ಬೇಡವಾ, ಕಿವುಡರಾಗಬೇಕಾ? ಬೇಕು, ಇಂದ್ರಿಯಗಳು ಬೇಕು, ಅದರೆ ಅವು ನಿಮ್ಮ ಅಧೀನದಲ್ಲಿರಲಿ. ಅವುಗಳ ಅಧೀನದಲ್ಲಿ ನೀವಿರಬೇಡಿ. ಈಮಾತನ್ನು ಹೇಳೋದನ್ನು ಹೇಳ್ತಾ ಇರುತ್ತೇವೆ. ಕೇಳೋದನ್ನು ಕೇಳ್ತಾ ಇರುತ್ತೇವೆ. ಯಥಾ ಪ್ರಕಾರ ನಡೆದುಕೊಳ್ಳುತ್ತೇವೆ.
     ಕಣ್ಣಿದೆ, ಅದರಿಂದ ನೋಡಿ, ಆದರೆ ಕೆಟ್ಟದ್ದೇ ನೋಡಬೇಡಿ, ಒಳ್ಳೆಯದನ್ನು ನೋಡಲು ಪ್ರಯತ್ನ ಪಡಿ. ಕಿವಿಯಿದೆ, ಯಾವಾಗಲೂ ಕೆಟ್ಟ ಕೆಟ್ಟ ಹಾಡುಗಳನ್ನೇ ಕೇಳಲು ಕುಳಿತುಕೊಳ್ಳುತ್ತೇವೆ.. ಒಳ್ಳೆಯ ಭಗವಂತನ ಭಕ್ತಿ, ಭಜನೆ, ಸನ್ಮಾರ್ಗಕ್ಕೆ ಸಂಬಂಧಿಸಿದ್ದನ್ನು ಕೇಳಲು ಕಿವಿ ಇರಲಿ. ಹೀಗೆ ನಮ್ಮ ಪಂಚೇಂದ್ರಿಯಗಳು ಇವೆಯಲ್ಲಾ, ಯಾವ ರೀತಿ ಉಪಯೋಗಿಸಿಕೊಳ್ತೀವೋ ಆ ರೀತಿ ಫಲ ಸಿಗುತ್ತೆ. ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಅದು ಶತ್ರು ಅಲ್ಲದವರನ್ನೂ ಶತ್ರುಗಳನ್ನಾಗಿ ಮಾಡುತ್ತದೆ. 'ನೀನು ಹಿಂದೂ ಅಲ್ಲವಾ? ಮುಸಲ್ಮಾನನಲ್ಲ, ಆದ್ದರಿಂದ ಕಾಫಿರ್, ನಿನಗೆ ಬದುಕೋದಿಕ್ಕೆ ಅಧಿಕಾರವಿಲ್ಲ', 'ನೀನು ಮುಸ್ಲಿಮ್, ಧರ್ಮಭ್ರಷ್ಠ, ನೀನು ಇರಬಾರದು', ಇತ್ಯಾದಿ ಮಾತುಗಳು ಬರುವುದು ಹೀಗೇನೇ! ಇವರಿಬ್ಬರಿಗೂ ಬುದ್ಧಿ ಬರೋದೇ ಇಲ್ಲ. ಕಚ್ಚಾಡಿಕೊಂಡು ಸಾಯೋದು. ನಿಜವಾದ ಪರಮಾತ್ಮ ಯಾವತ್ತೂ ಹಾಗೆ ಮಾಡೋದಿಲ್ಲ. ಒಂದು ಮಾತು, ಭಗವಂತ ಹೊರಗಿನಿಂದ ಮಾತನಾಡುವುದಿಲ್ಲ. ಹೃದಯದಿಂದ, ಒಳಗಿನಿಂದ, ಅಂತರಂಗದಿಂದ ಮಾತನಾಡುತ್ತಾನೆ. ನೀವು ಜಗತ್ತನ್ನು ಮರೆಯಿರಿ, ೨ ನಿಮಿಷ, ೩ ನಿಮಿಷ, ೪ ನಿಮಿಷ ಭಗವಂತನನ್ನು ಮನಸ್ಸಿನಲ್ಲಿಟ್ಟಿರಿ. ಆಗ ನಿಮಗೆ ಆನಂದವೋ ಆನಂದ ಸಿಕ್ಕುತ್ತೆ. ವ್ಯಾಕರಣ ಓದಿದೆ, ವೇದ ಓದಿದೆ, ನನಗೆ ವೇದಗಳ ಅರ್ಥ ಗೊತ್ತಿದೆ ಅಂದರೆ ಸಾಕಾಗುವುದಿಲ್ಲ. ಯಾವನ ಹೃದಯ ಶುದ್ಧವಾಗಿರುತ್ತೋ ಅವನಿಗೆ ಅರ್ಥವಾಗುತ್ತೆ. ಯಾರ ಮನಸ್ಸಿನಲ್ಲಿ ಪರಿಶುದ್ದಿ ಇಲ್ಲವೋ ಅವನಿಗೆ ಯಾವತ್ತೂ ಅರ್ಥವಾಗುವುದಿಲ್ಲ.   ಹೇ ಜೀವಾತ್ಮ, ಯಾರನ್ನೂ ಶತ್ರು ಅಂತ ತಿಳಕೋಬೇಡ. ಎಲ್ಲಾ ನಿನ್ನ ಮಿತ್ರರೇ. ಈ ಜ್ಞಾನ ಬಂದ ಮೇಲೆ ಸುಮ್ಮನೆ ಕುಳಿತಿರಬೇಡ. ಪ್ರಭುವಿನಿಂದ ಕೂಡಿದ ಜಗತ್ತಿನ ಪ್ರಾಪ್ತಿಗಾಗಿ ಹೋರಾಡು. ಹೋರಾಟ ಅಂದ್ರೆ ಕುಸ್ತಿ ಅಲ್ಲ. ಜ್ಞಾನ ಪ್ರಸಾರ ಮಾಡುವುದು. ಪರಮಾತ್ಮ ಅಂದರೆ ೧೪ನೇ ಆಕಾಶದಲ್ಲೋ, ೧೨ನೇ ಆಕಾಶದಲ್ಲೋ ಇರ್ತಾನೆ ಅಂತ ಹೇಳ್ತಾರಲ್ಲಾ, ಆ ಪರಮಾತ್ಮ ಅಲ್ಲ. ಎಲ್ಲಿಂದ ತೆಗೆದುಕೊಂಡು ಬಂದರೋ ಆ ಆಕಾಶಗಳನ್ನ! ೭ನೆಯ ಆಕಾಶ ಅಂತ ಇದೆಯಂತೆ, ಅಲ್ಲಿಗೆ ಹೋದ ಜೀವಾತ್ಮಗಳೆಲ್ಲಾ ಒಂಟೆಗಳಾಗ್ತಾರಂತೆ. ಒಂಟೆ ಆಗುವುದಕ್ಕೆ ಅಲ್ಲಿಗೆ ಹೋಗಬೇಕಾ ನಾವು? ಮನುಷ್ಯರಾಗಿ ಇರೋಕ್ಕೆ ಆಗಲ್ವಾ? ಇವೆಲ್ಲಾ ಮನುಷ್ಯನ ಕೆಟ್ಟ ಕಲ್ಪನೆ. ದೇವರ ಹೆಸರು ಹೇಳೋದು, ಮಾಡೋದೆಲ್ಲಾ ದೆವ್ವದ ಕೆಲಸ. ದೇವರ ಕೆಲಸ ಏನೂ ಮಾಡೋದಿಲ್ಲ.
ಗಾಂಧೀಜಿಯೊಡನೆ ಸರಸ-ವಿರಸ
     ಗಾಂಧೀಜಿಗೂ ನನಗೂ ಈ ವಿಚಾರದಲ್ಲಿ ಕುಸ್ತಿ ಆಗುತ್ತಿತ್ತು. ಸೇವಾಗ್ರಾಮದಲ್ಲಿ 'ರಘುಪತಿ ರಾಘವ ರಾಜಾರಾಮ್. . .' ಕಣ್ಣು ಮುಚ್ಚಿ ಚಪ್ಪಾಳೆ ತಟ್ಟಿ ಭಜನೆ ಮಾಡೋರು. ಜಾಕಿರ್ ಹುಸೇನ್, ಮೌಲಾನಾ ಆಜಾದ್ ಸೇರಿದಂತೆ ಮುಸಲ್ಮಾನರೂ ಕೂಡ ಹೇಳೋರು, ಚಪ್ಪಾಳೆ ಹಾಕೋರು. ನಾನು ಸುಮ್ಮನೇ ಕುಳಿತಿರುತ್ತಿದ್ದೆ. ಗಾಂಧೀಜಿ ಕೇಳ್ತಾ ಇದ್ದರು: "ನೀನು ಯಾಕೆ ಹೇಳಲ್ಲ? ನೀನು ಮುಸಲ್ಮಾನರಿಗಿಂತ ಕಡೆ." ನಾನು ಉತ್ತರಿಸುತ್ತಿದ್ದೆ, "ಪಾಪ, ಅವರನ್ನೇಕೆ ಅನ್ನುತ್ತೀರಿ? ಅವರು ಯಾಕೆ ಹೇಳ್ತಾರೆ ಅಂದರೆ ನಿಮ್ಮನ್ನು ಮೆಚ್ಚಿಸೋಕೆ ಹೇಳ್ತಾರೆ. ನಾನು ನಿಮ್ಮನ್ನು ಮೆಚ್ಚಿಸಬೇಕಾಗಿಲ್ಲ. ನಾನು ನನ್ನ ಆತ್ಮನನ್ನು, ಪರಮಾತ್ಮನನ್ನು ಮೆಚ್ಚಿಸಬೇಕಷ್ಟೆ." ಗಾಂಧೀಜಿ, "ನೀನು ಎಷ್ಟು ಕಾಲದಿಂದ ನನ್ನ ಜೊತೆ ಇದ್ದೀಯಾ, ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲವಾ? ನಿನ್ನ 'ಓಂ' ನನ್ನ ರಾಮ. ನೀನು ಯಾರನ್ನು ಓಂ ಅನ್ನುತ್ತೀಯೋ ಅವನನ್ನು ನಾನು ರಾಮ ಅನ್ನುತ್ತೇನೆ" ಅನ್ನೋರು. ನಾನು, "ರಾಮ ಅಂತ ಕರೆಯಿರಿ, ಏನಂತಲಾದರೂ ಕರೆರಿ, ನಾನು ಒಪ್ಪುತ್ತೇನೆ. ಆದರೆ ಭಗವಂತನನ್ನು ರಘುಪತಿ, ಸೀತೆ ಇವೆಲ್ಲವನ್ನೂ ಸೇರಿಸಿಕೊಂಡು ಹೇಳೋದು ನನಗೆ ಸರಿ ಕಾಣುವುದಿಲ್ಲ. ರಘು ಅಂದರೆ ವೇಗವಾಗಿ ಓಡುವವನು ಎಂದು ಅರ್ಥ, ರಘುಪತಿ ಅಂದರೆ ವೇಗವಾಗಿ ಓಡುವವರ ಒಡೆಯ. ರಾಘವ ಅಂದರೆ ರಘುಕುಲದಲ್ಲಿ ಹುಟ್ಟಿದವನು ಅಂತ. ಅವನನ್ನು ಪರಮಾತ್ಮ ಅಂತ ಹೇಗೆ ಭಾವಿಸಲಿ? ನನ್ನ ದೃಷ್ಟಿಯ ಪರಮಾತ್ಮನೇ ಬೇರೆ. ಆದ್ದರಿಂದ ನನಗೆ ಓಂ ಮಾತ್ರ ಸಾಕು" ಅಂತ ಹೇಳ್ತಾ ಇದ್ದೆ. ಬೆಳಗಿನ ಜಾವದಲ್ಲಿ ಚಳಿಯಲ್ಲಿ ಕುಳಿತು ಭಜನೆ ಮಾಡಿದ್ದೇ ಮಾಡಿದ್ದು, ಸುಮಾರು ಮುಕ್ಕಾಲು ಗಂಟೆ ಹೊತ್ತು. ಸೇವಾಗ್ರಾಮದಲ್ಲಿ ಇದ್ದದ್ದು ಎಲ್ಲಾ ಹರಕಲು ಮುರುಕಲು ಗುಡಿಸಲುಗಳೇ. ಆ ಮುದುಕ ಕಣ್ಣು ಮುಚ್ಚಿಕೊಂಡಿದ್ದನ್ನು ಗಮನಿಸಿ ಜಾಗ ಖಾಲಿ ಮಾಡುತ್ತಿದ್ದೆ. ನಾನು ಒಂದು ಸ್ಟೌ ಇಟ್ಟುಕೊಂಡಿದ್ದೆ. ಹೋಗಿ ಕಾಫಿ ಮಾಡಿಕೊಂಡು ಕುಡಿದು ಬಂದು ಮತ್ತೆ ಕುಳಿತುಕೊಳ್ಳುತ್ತಿದ್ದೆ. ಆ ಘಾಟಿ ಮುದುಕ ಕೇಳದೆ ಇರುತ್ತಿರಲಿಲ್ಲ, "ಎಲ್ಲಿ ಹೋಗಿದ್ದೆ?" ನಾನು, "ಅಗ್ನಿಹೋತ್ರ ಮಾಡೋಕ್ಕೆ ಹೋಗಿದ್ದೆ" ಅನ್ನುತ್ತಿದ್ದೆ. ಸ್ಟೌನಲ್ಲಿ ಅಗ್ನಿ ಇರುತ್ತಿತ್ತಲ್ಲಾ? ಅವರೂ ನಗುತ್ತಾ, "ನಿನ್ನ ಸಹವಾಸ ಸಾಕಪ್ಪಾ" ಅನ್ನುತ್ತಿದ್ದರು. ನನಗೂ, ಗಾಂಧೀಜಿಗೂ ಯಾವತ್ತೂ ಒಪ್ಪಂದ ಆಗಲೇ ಇಲ್ಲ. ಆದರೆ ನಮ್ಮ ಸ್ನೇಹಕ್ಕೆ ಅದು ಧಕ್ಕೆ ತರಲಿಲ್ಲ. ಕೊನೆಗೂ 'ಹೇ ರಾಮ್' ಅಂತಲೇ ಪ್ರಾಣ ಬಿಟ್ಟರು. ಈಗ ಅವರಿಲ್ಲ. ಅವರ ಆತ್ಮಕ್ಕೆ ಯಾಕೆ ಕಷ್ಟ ಕೊಡಬೇಕು? ನಾನು ಸಂಧಿ ಮಾಡಿಕೊಳ್ತೀನಿ. ಅವರ ರಾಮನೇ ನನ್ನ ಓಂ, ಒಪ್ಪಿಕೊಳ್ತೀನಿ, ಇಷ್ಟು ಸಾಕು.
ದೇವರನ್ನು ಒಂದು ಜಾತಿಗೆ/ಕುಲಕ್ಕೆ ಕಟ್ಟಿಹಾಕಬೇಕೆ?
     ಇದೆಲ್ಲಾ ಯಾಕೆ ಹೇಳ್ತಾ ಇದೀನಿ ಅಂದ್ರೆ, ದೇವರು ಯಾವತ್ತೂ ಕಚ್ಚಾಡಿ, ಹೊಡೆದಾಡಿ ಸಾಯಿರಿ ಅಂತ ಹೇಳಲ್ಲ. ಅವನು ಪ್ರೇಮಸ್ವರೂಪ, ಆನಂದಮಯ. ಎಲ್ಲರಿಗೂ ಪ್ರೀತಿ ತೋರಿಸತಕ್ಕವನು. ಎಲ್ಲಾ ಪ್ರಾಣಿಗಳಲ್ಲೂ ಸಮಾನವಾದ ಮಿತ್ರ ದೃಷ್ಟಿ ಇಟ್ಟುಕೊಳ್ಳುವ ಶಕ್ತಿ ಕೊಡು ಭಗವಂತ ಅಂತ ಪ್ರಾರ್ಥನೆ ಮಾಡ್ತೀವಿ. ಪ್ರಾರ್ಥನೆ ಮಾಡೋದು ಹಾಗೆ, ನಡೆಯೋದು ಹೇಗೆ? 'ಥೂ, ಇವನು ಮುಸ್ಲಿಮ್, ಸಾಯಲಿ', 'ಇವನು ಕ್ರಿಶ್ಚಿಯನ್, ಧರ್ಮಭ್ರಷ್ಠ, ಇವನ ಮನೆ ಹಾಳಾಗಲಿ' ಹೀಗೆ ಮನಸ್ಸಿನಲ್ಲಿ ಅಂದುಕೊಂಡು 'ಓಂ' ಅಂದರೆ ಪ್ರಯೋಜನ ಇಲ್ಲ. 'ಇವನು ಹಿಂದೂ, ಕಾಫಿರ್, ಇವನು ಬದುಕಿರಲು ಲಾಯಕ್ಕಿಲ್ಲ' ಅಂತ ಅವರು ಹೇಳಿದರೆ ಅದೂ ದೇವರು ಒಪ್ಪುವ ಮಾತಲ್ಲ. ಸರ್ವಸ್ನೇಹಿ, ಎಲ್ಲರಿಗೂ ಬೇಕಾದ ಆ ಪರಮಾತ್ಮನನ್ನು ಒಂದು ಜಾತಿಗೆ, ಒಂದು ಕುಲಕ್ಕೆ ಕಟ್ಟಿ ಹಾಕೋದು ಸರಿಯಲ್ಲ.
     ಈ ಕಥೆ ನಿಮಗೆ ಈ ಹಿಂದೆಯೇ ಹೇಳಿದ್ದೇನೆ. ಬಿಹಾರದಲ್ಲಿ ಭೂಕಂಪ ಆಯಿತು, ೧೯೩೪ರಲ್ಲಿ. ತುಂಬಾ ಸಾವುಗಳಾದವು. ನಾನೇ ಕಣ್ಣಿಂದ ನೋಡಿದೀನಿ. ಎಲ್ಲಿ ಮುಜಫರ್ ನಗರ ಅನ್ನುವ ಊರಿತ್ತೋ ಅಲ್ಲಿನ ಕ್ಲಾಕ್ ಟವರ್ ಮಾತ್ರ ಉಳಿದುಕೊಂಡಿತ್ತು. ಊರೆಲ್ಲಾ ನಾಶವಾಗಿತ್ತು. ನೋಡಬಾರದ್ದನ್ನೆಲ್ಲಾ ಅಲ್ಲಿ ನೋಡಿದೆ. ಒಂದು ಮುಸಲ್ಮಾನರ ಕೇರಿಗೆ ಹೋಗಿದ್ದೆ. ನಾನೊಬ್ಬ ವಾಲಂಟಿಯರ್ ಆಗಿ ಹೋಗಿದ್ದೆ. ಅಲ್ಲಿ ಒಂದು ಮನೆಯಿಂದ 'ಬಚಾವೋ, ಬಚಾವೋ' ಅಂತ ಯಾರೋ ಕಿರುಚುತ್ತಿದ್ದರು. ನನ್ನ ಜೊತೆಗೆ ಸ್ನೇಹಲತಾ ಅನ್ನುವವರು ಇದ್ದರು. ಅವರು ಜಾಲಂಧರ್ ಆರ್ಯಸಮಾಜದ ಸೆಕ್ರೆಟರಿ.  ಅವರಿಗೆ ಹೇಳಿದೆ, "ನೋಡಮ್ಮಾ, ಯಾರೋ ಹೆಂಗಸರು ಕಿರುಚುತ್ತಾ ಇದ್ದಾರೆ. ನಾನು ಹೋದರೆ ಸರಿಯಾಗುವುದಿಲ್ಲ. ನೀನು ಹೋಗಿ ನೋಡಮ್ಮಾ" ಅಂದೆ. ಆಕೆ ಒಳಗೆ ಹೋದಳು. ಒಂದು ಹೆಂಗಸು ಮತ್ತು ಆಕೆಯ ಮಗುವಿನ ಮೇಲೆ ಮನೆಯ ತೊಲೆ ಬಿದ್ದಿತ್ತು. ಮಗು ಬದುಕಿತ್ತು. ಆಕೆ ಅರೆಜೀವವಾಗಿದ್ದಳು. ಮಗುವನ್ನಾದರೂ ಉಳಿಸೋಣವೆಂದು ಮಗುವನ್ನು ಎತ್ತಿಕೊಂಡು ಸ್ನೇಹಲತಾ ಬಾಗಿಲ ಹತ್ತಿರ ಬಂದಾಗ ಬಾಗಿಲೇ ಅವರ ಮೇಲೆ ಬಿದ್ದು ಸ್ನೇಹಲತಾ ಮತ್ತು ಮಗು ಇಬ್ಬರೂ ಸತ್ತುಹೋದರು. ನಮ್ಮ ಲೀಡರ್, "ನೀನು ಹೋಗದೆ, ಪಾಪ ಆ ಹೆಣ್ಣುಮಗಳನ್ನು ಏಕೆ ಸಾಯಿಸಿದೆ?" ಎಂದು ಸಿಟ್ಟು ಮಾಡಿದರು. "ನೀವು ಆಗಿದ್ರೆ ಹೋಗುತ್ತಿದ್ದರೇನೋ, ನನಗೆ ಧೈರ್ಯ ಬರಲಿಲ್ಲ" ಎಂದು ಸುಳ್ಳು ಹೇಳಿದೆ. ಸತ್ಯ ಏನೆಂದು ನನಗೆ ಗೊತ್ತು. ನಾನೇನು ಆ ಮಗು ಸಾಯಲಿ, ಆ ತಾಯಿ ಸಾಯಲಿ ಎಂದು ಬಯಸಿದ್ದೆನಾ? ಅದು ಆ ಭಗವಂತ ಕೋಪ ಮಾಡಿಕೊಂಡರೆ ಯಾರು ರಕ್ಷಣೆ ಕೊಡುತ್ತಾರೆ? ವಿಜ್ಞಾನಿಗಳು 'ನಾನು ಅಂಥ ಮನೆ ಕಟ್ಟಿಕೊಡ್ತೀನಿ, ಇಂಥ ಮನೆ ಕಟ್ಟಿಕೊಡ್ತೀನಿ, ಭೂಕಂಪ ಆದ್ರೂ ಬಿದ್ದು ಹೋಗಬಾರದು' ಅಂತಾರೆ. ಜಪಾನಿನಲ್ಲಿ ಕಾರ್ಡ್ ಬೋರ್ಡ್ ಮನೆಗಳು, ಬಿದ್ರೂ ಯಾರೂ ಸಾಯಲ್ಲ. ಸದ್ಯಕ್ಕೆ ನಮ್ಮ ದೇಶದಲ್ಲಿ ಆ ಪರಿಸ್ಥಿತಿ ಇಲ್ಲ. ಈ ಭೂಕಂಪ ಬಂತು ಅಂತ ಇಟ್ಕೊಳ್ಳಿ, ನಾಸ್ತಿಕ ಹೇಳ್ತಾನೆ, "ಎಂಥಾ ದೇವರು ನಿಮ್ಮ ದೇವರು. ತಾನೇ ಮಾಡಿದ ರಚನೆ. ತಾನೇ ತನ್ನ ಮಕ್ಕಳನ್ನು ಸಾಯಿಸ್ತಾನೆ. ಅವನೆಂಥಾ ಕರುಣಾಳು? ಕ್ರೂರ, ಮಹಾಕ್ರೂರ" ಅಂತಾನೆ. ದೇವರು ಅಂದರೆ ನಮ್ಮ ಹಾಗೆ ಶರೀರಧಾರಿ ಆಗಿರೋನಲ್ಲ. ದೇವರು ಅವನಲ್ಲ. ಅವನು ವಿಶ್ವರೂಪ ಚೇತನ. ಸಂಪೂರ್ಣ ವಿಶ್ವಕ್ಕೆ ಚೈತನ್ಯ ನೀಡುವ ಅದ್ಭುತ ಶಕ್ತಿ. ಅವನು ಅನುಪಮ, ನಿರುಪಮ. ಅವನನ್ನು ವಿವರಿಸಲು ಸಾಧ್ಯವೇ ಇಲ್ಲ. ದೇವರು ಹೇಗಿದ್ದಾನೆ ಅಂದರೆ  ಹೇಗೆ ಇದ್ದಾನೋ ಹಾಗೆ ಇದ್ದಾನೆ ಅಂತ ಹೇಳಬಹುದೇ ಹೊರತು ಅವನನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಅದನ್ನೇ ಮುಸಲ್ಮಾನರು ಬೇನಜೀರ್ ಅಂತಾರೆ. ಅದರ ಅರ್ಥವೂ ಅದೇ, ಅನುಪಮ, ನಿರುಪಮ ಅಂತಲೇ. ಮುಸಲ್ಮಾನರಿಗೆ ಬೇರೆ ಅಂತ ದೇವರಿಲ್ಲ, ಹಿಂದೂಗಳಿಗೆ ಬೇರೆ ದೇವರಿಲ್ಲ, ಕ್ರಿಶ್ಚಿಯನ್ನರಿಗೆ ಬೇರೆ ಅಂತ ದೇವರಿಲ್ಲ. ಇವೆಲ್ಲಾ ನಮ್ಮ ಕಲ್ಪನೆ ಅಷ್ಟೆ.
-ಕ.ವೆಂ.ನಾಗರಾಜ್.
***************
ದಿನಾಂಕ 15-07-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌: