ದೇವರು ಪಕ್ಷಪಾತಿಯೇ?
ಇದೇ ಸಂದರ್ಭದಲ್ಲಿ ನೆನಪಾಗ್ತಾ ಇದೆ. ಬಿಹಾರದಲ್ಲಿ ಭೂಕಂಪ ಆದಾಗ ಒಬ್ಬ ಮೌಲ್ವಿ ನನ್ನ ಜೊತೆಯಲ್ಲಿದ್ದ. ಅವನೇ ಶುರು ಮಾಡಿದ,"ನೋಡಿ, ಇಲ್ಲಿ ಹಿಂದೂಗಳು ಜಾಸ್ತಿ. ಅದಕ್ಕೇ ಭೂಕಂಪ ಆಯ್ತು.. ಇರಾನಿನಲ್ಲಿ, ಪರ್ಷಿಯಾದಲ್ಲಿ ಆಗಲಿಲ್ಲ. ಟರ್ಕಿಸ್ತಾನದಲ್ಲಿ ಆಗಲಿಲ್ಲ." ಬಿಹಾರದ ಭೂಕಂಪದಲ್ಲಿ 50,000 ಜನ ಸತ್ತರು. ಮರು ದಿನ ಪೇಪರ್‌ನಲ್ಲಿ ಸುದ್ದಿ ಬಂತು, ಟರ್ಕಿಸ್ತಾನದಲ್ಲಿ ಭೂಕಂಪ ಆಗಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಸತ್ತರು ಅಂತ. ನಾನು ಕೇಳಿದೆ, "ಏನಪ್ಪಾ, ಅಲ್ಲಿ ಖುದಾ ಇಲ್ಲವಾ? ಅಲ್ಲೂ ಸಾವು ಆಯ್ತಲ್ಲಾ?" ಈ ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ ಇವೆಲ್ಲಾ ಮನುಷ್ಯರ ಕೈಯಲ್ಲಿಲ್ಲ. ಆ ನಿಯಾಮಕ ಇದ್ದಾನೆ. ಎಲ್ಲಾ ಅವನ ನಿಯಮದಂತೆ ಆಗುತ್ತೆ. ನಾವು ಎಷ್ಟು ಜಂಬ ಮಾಡಿದ್ರೂ ಕೂಡ, ಭೂಮಿ ನಡುಗಿದಾಗ, "ಏಯ್, ನಿಲ್ಲು" ಅಂತ ಹೇಳೋಕ್ಕಾಗಲ್ಲ. ಏನಾಗಬೇಕೋ ಅದು ಆಗೇ ಅಗುತ್ತೆ.
ಪರಮಾತ್ಮನನ್ನು ಗೌರವಿಸಿ
ಇದೆಲ್ಲಾ ನಾವುಮನುಷ್ಯರು ಮಾಡಿಕೊಳ್ಳೋದು. ನಾವು. ದೇವರಿಗೆ ಗೌರವ ಕೊಡ್ತೀವಿ ಅನ್ನೋದು, ನೋಡಿದ್ರೆ ಹೀಗೆ. ನಾವು ಕುಣಿಸಿದ ಹಾಗೆ ಕುಣೀಬೇಕು ಅವನು. ದಾಸರೂ ಅದನ್ನೇ ಹೇಳ್ತಾರೆ. ಭಕ್ತ ಮಲಗಿ ಭಜನೆ ಮಾಡಿದರೆ ದೇವರು ಕುಳಿತು ಕೇಳ್ತಾನೆ. ಕುಳಿತು ಭಜನೆ ಮಾಡಿದರೆ ನಿಂತು ಕೇಳ್ತಾನೆ. ನಿಂತು ಹೇಳಿದರೆ ಕುಣ್ಕೊಂಡು ಕೇಳ್ತಾನೆ. ಇದಾ ದೇವರಿಗೆ ಕೊಡುವ ಗೌರವ? ಅದನ್ನು ಎಷ್ಟು ಭಕ್ತಿಯಿಂದ ಕೇಳ್ತಾರೆ ಗೊತ್ತಾ? ರುಕ್ಮಿಣೀ ಪರಿಣಯ, ಪದ್ಮಾವತೀ ಪರಿಣಯ, ಶ್ರೀನಿವಾಸ ಕಲ್ಯಾಣ,..ಮಾಡಿದ್ದೂ ಮಾಡಿದ್ದೇ. ದೇವರಿಗೇ ಮದುವೆ ಮಾಡೋರು ದೇವರ ಭಕ್ತರೋ, ಅಪ್ಪಂದಿರೋ ಅನ್ನುವ ಪ್ರಶ್ನೆ ಬರುತ್ತೆ. ಎಲ್ಲಿಯವರೆಗೆ ದೇವರು ಬರ್ತಾನೆ, ಹೋಗ್ತಾನೆ ಅಂತಾ ಅನ್ನುವವರೆಗೆ ದೇವರು ಯಾವತ್ತೂ ಸಿಗುವುದಿಲ್ಲ. ವೇದ ಹೇಳುತ್ತೆ:
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ || (ಯಜು.೪೦.೫.)
ಆ ಪರಮಾತ್ಮ ಜಗತ್ತನ್ನೆಲ್ಲಾ ಓಡಾಡಿಸುತ್ತಾನೆ. ತಾನು ಅಲ್ಲಾಡುವುದಿಲ್ಲ. ನಾನು ಅನೇಕ ಸಲ ಹೇಳ್ತಾ ಇರ್ತೀನಿ. ರೈಲು ಕಂಬಿ ಧೃಢವಾಗಿದ್ದರೆ ರೈಲು ಅದರ ಮೇಲೆ ಹೋಗುತ್ತೆ. ಕಂಬಿಯೇ ಧೃಢವಾಗಿಲ್ಲದಿದ್ದರೆ ರೈಲಿನ ಗತಿಯೇನು? ಪರಮಾತ್ಮ ಬರ್ತಾನೆ, ಹೋಗ್ತಾನೆ ಇವೆಲ್ಲಾ ಮಾನಸಿಕ ವ್ಯಾಪಾರ. ನಿಜವಾಗಿ ಪರಮಾತ್ಮನನ್ನು ನೆನೆದರೆ ನಮ್ಮ ಮನಸ್ಸಿನಲ್ಲೇ ಇದಾನೆ. ಪರಮಾತ್ಮ ಎಲ್ಲೋ ಮೆಕ್ಕಾದಲ್ಲೋ, ಮದೀನಾದಲ್ಲೋ, ಜೆರೂಸಲೇಮಿನಲ್ಲೋ, ಕಾಶಿಯಲ್ಲೋ, ರಾಮೇಶ್ವರದಲ್ಲೋ ಇದಾನೆ ಅಂದ್ರೆ ಅರ್ಥ ಇದೆಯಾ? ಬೆಂಗಳೂರು ಏನು ಪಾಪಿ ಊರಾ? ಇಲ್ಲಿ ಇಲ್ಲವಾ ದೇವರು? ತೀರ್ಥಯಾತ್ರೆ ಹೋಗ್ತಾರಲ್ಲಾ ಅವರಿಗೆ ಅದಕ್ಕೇ ಹೇಳೋದು. ಯಾಕೆ ಬೆಂಗಳೂರು ಪವಿತ್ರ ಅಲ್ಲವಾ? ಇಲ್ಲಿ ಭಗವಂತ ಇಲ್ಲವಾ? ಇಲ್ಲಿ ಭಗವಂತನ ಸ್ಮರಣೆ ಮಾಡಕ್ಕೆ ಆಗಲ್ವಾ?
ಗಂಗಾಜಲ
ಕಾಶಿಯಲ್ಲಿ ಹಕ್ಕಿಬೈಲಿ ಅಂತ ಸ್ಥಳ ಇದೆ. ಪ್ರಜಾಪತಿ ಬ್ರಹ್ಮ ಅಲ್ಲಿ ಯಜ್ಞ ಮಾಡಿದ್ದನಂತೆ. ಅವಾಗಿನಿಂದ ಇದು ಪವಿತ್ರವಾದ ಸ್ಥಾನವಂತೆ. ಯಾರಿಗೆ ಮೋಕ್ಷ ಬೇಕೋ ಅವರು ಇಲ್ಲಿ ಸ್ನಾನ ಮಾಡಬೇಕಂತೆ. ನಾನು ಹೋದೆ. ನಾನು ಒಳ್ಳೆ ಮಾರ್ವಾಡಿ ಸೇಠ್ ಇದ್ದ ಹಾಗಿದ್ದೆ. ಕಚ್ಚೆ ಪಂಚೆ, ಲಾಂಗ್ ಕೋಟು, ತಲೆ ಮೇಲೆ ಪಗಡಿ ಇವೆಲ್ಲಾ ಹಾಕಿಕೊಂಡು ಸೇಠಜಿ ಇದ್ದ ಹಾಗಿದ್ದೆ. ಅಲ್ಲಿ ಪಂಡಾಗಳು. 'ಸೇಠಜಿ, ಸ್ನಾನ್ ಕರೋ', ಅಂದರು. 'ಇಲ್ಲಪ್ಪಾ, ನಾನು ಇಲ್ಲಿ ಸ್ನಾನ ಮಾಡೋದಿಲ್ಲ. ಅಲ್ಲಿ ಗೋಮುಖ-ಗಂಗಾನದಿ ಹಿಮಾಲಯದಿಂದ ಕರಗಿ ನೀರಾಗಿ ಹರಿದು ಬರುತ್ತಲ್ಲಾ, ಅಲ್ಲಿ ಸ್ನಾನ ಮಾಡ್ತೀನಿ' ಅಂದೆ. ಹಿಮಾಲಯ ಪರ್ವತದಲ್ಲಿ ಹಾದು ಬರುವ ಆ ನೀರಿಗೆ ಔಷಧೀಯ ಗುಣಗಳಿವೆ. ನಿಮಗೂ ಗೊತ್ತಿರಬಹುದು. ಎಲ್ಲರ ಮನೆಯಲ್ಲೂ ಕಾಶಿಯಿಂದ ತಂದ ಗಂಗಾನದಿಯ ನೀರನ್ನು ಥಾಲಿಯ ಒಳಗೆ ಇಟ್ಟುಕೊಂಡಿರ್ತಾರೆ. ಒಂದು ಸತ್ಯವಾದ ಸತ್ವ, ಆ ಗಂಗಾಜಲ ಇದೆಯಲ್ಲಾ ಅದು ಎಷ್ಟು ಕಾಲ ಇಟ್ಟರೂ ಹಾಳಾಗುವುದಿಲ್ಲ. ಬೇರೆ ನೀರು ಮಾರನೇ ದಿನಕ್ಕೇ ಕೆಟ್ಟು ಹೋಗಿರುತ್ತೆ. ಅದು ಗೊತ್ತಾಗಲು ಎಲ್ಲರೂ ತಿಳಕೊಂಡ ಹಾಗೆ ಮೂಢನಂಬಿಕೆ ಬೇಕಾಗಿಲ್ಲ. ಹಿಮಾಲಯದ ತಪ್ಪಲಿನಲ್ಲಿ ಇರುವ ಔಷಧೀಯ ಗುಣಗಳುಳ್ಳ ಮಣ್ಣಿನ ಮೇಲೆ ಹಾಯ್ದು ಬರುವ ಆ ನೀರಿನಲ್ಲಿ ಔಷಧೀಯ ಗುಣಗಳಿವೆ. ಅದರ ಫಲ ಇದು.
ಚತುರ್ವರ್ಣ
ಕಾಲಿಗೆ ಮುಳ್ಳು ಚುಚ್ಚಿಕೊಂಡರೆ 'ಹಾ' ಅಂತ ಬ್ರಾಹ್ಮಣ (ಮುಖ) ಕಿರುಚಿಕೊಳ್ಳುತ್ತಾನೆ, ಕ್ಷತ್ರಿಯ (ಕೈ) ಮುಳ್ಳನ್ನು ಕೀಳಲು ಬರುತ್ತಾನೆ, ವೈಶ್ಯ(ಮುಂಡ) ಅವನಿಗೆ ಬೇಕಾದ ಸಹಾಯ ಒದಗಿಸುತ್ತಾನೆ. ಹೀಗೆ ಈ ಶರೀರದಲ್ಲೇ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ನಾಲ್ವರೂ ಇದ್ದಾರೆ. ಪಾದ ನೀಚ, ತಲೆ ಉತ್ಕೃಷ್ಟ ಅಂತ ಹೇಳೋ ಪಕ್ಷದಲ್ಲಿ ಒಂದು ದೊಡ್ಡ ಪ್ರಶ್ನೆ ಬರುತ್ತೆ, ನಾನು ಗುರು, ಯಾರದೋ ಮನೆಗೆ ಹೋಗ್ತೀನಿ, ಆಗ ನನ್ನ ಕಾಲಿಗೆ ನೀರು ಕೊಡ್ತಾರೆಯೇ ಹೊರತು ತಲೆಗೆ ನೀರು ಹಾಕಲ್ಲ. ತಲೆಗೆ ನೀರು ಹಾಕಿದರೆ ನನ್ನ ಪರಿಸ್ಥಿತಿ ಕೇಳೋರು ಯಾರು? ಕಾಲಿಗೇ ಬೇಕಾಗಿರೋದು ನೀರು, ತಲೆಗೆ ಬೇಕಾಗಿಲ್ಲ, ಈ ತರಹ ಆಲೋಚನೆ ಮಾಡಿ. ಈ ಚತುರ್ವರ್ಣ ವ್ಯವಸ್ಥೆ ಇದೆಯಲ್ಲಾ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಅಂತ, ಇವು ಸರಿ ಹೋಗದಿದ್ದರೆ, ಇಂಟಲೆಕ್ಚುಯಲ್, ಮಾರ್ಶಿಯಲ್, ಕಮರ್ಶಿಯಲ್ ಮತ್ತು ಮಾನ್ಯುಯಲ್ ಎಂಬ ಈ ನಾಲ್ಕು ಶಬ್ದಗಳನ್ನು ಇಟ್ಟುಕೊಳ್ಳಿ. ನನ್ನ ಕಾಲು ಹಾಳಾದರೆ ಹಾಳಾಗಲಿ, ನನ್ನ ತಲೆ ಮಾತ್ರ ಚೆನ್ನಾಗಿದ್ದರೆ ಸಾಕು ಅಂತ ಹೇಳಿದರೆ ನಾನು ಮೂರ್ಖ ಅಲ್ಲವಾ? ಕಾಲೂ ಚೆನ್ನಾಗಿರಬೇಕು, ತಲೆಯೂ ಚೆನ್ನಾಗಿರಬೇಕು, ಶರೀರದ ಪ್ರತಿಯೊಂದು ಅಂಗಾಂಗವೂ ಚೆನ್ನಾಗಿರಬೇಕು. ಹಾಗಿರುವವನೇ ನಿಜವಾದ ಪುರುಷ. ಕುರುಡ, ಕುಂಟ, ಕಿವುಡ ಇಂತಹವರೆಲ್ಲಾ ಪೂರ್ಣ ಪುರುಷರಲ್ಲ, ಅವರ ಕೆಲವು ಅಂಗಗಳು ಊನವಾಗಿವೆ. ಪೂರ್ತಿ ಇಂದ್ರಿಯ ಸರಿಯಾಗಿರಬೇಕು.
ಸಮಾನತೆ ವೇದೋಪದೇಶದ ಒಂದು ಆಧಾರ ಶಿಲೆ. ಈ ಮಂತ್ರ ಹೇಳುತ್ತದೆ:
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ |
ಯುವಾ ವಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || (ಋಕ್.5.60.5.)
ಮಾನವರಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಚಿಕ್ಕವರೂ ಅಲ್ಲ. ಇವರು ಪರಸ್ಪರ ಸಹೋದರರು. ಸೌಭಾಗ್ಯಪ್ರಾಪ್ತಿಗಾಗಿ ಮುಂದುವರೆಯುತ್ತಾರೆ. ಪರಮಾತ್ಮ ಇವರೆಲ್ಲರ ತಂದೆ. ಭೂಮಾತೆ, ಈ ಮರ್ತ್ಯರಿಗೆಲ್ಲಾ ಉತ್ತಮ ಶಕ್ತಿಯನ್ನೆರೆಯುವವಳೂ ಉತ್ತಮ ದಿನಗಳನ್ನು ತೋರಿಸುವವಳೂ ಆಗಿದ್ದಾಳೆ. ಈ ಮಂತ್ರ ಹೇಳುತ್ತದೆ:
ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹ ಚಿತ್ತಮೇಷಾಮ್ |
ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || (ಅಥರ್ವ.6.64.2.)
ಈ ಮಾನವರೆಲ್ಲರ ಮಂತ್ರ ಸಮಾನವಾಗಿರಲಿ. ಸಮಿತಿ ಸಮಾನವಾಗಿರಲಿ. ವ್ರತವೂ ಸಮಾನವಾಗಿರಲಿ. ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ. ನಿಮ್ಮೆಲ್ಲರಿಗೂ, ಸಮಾನವಾದ ಖಾದ್ಯ, ಪೇಯಗಳನ್ನೇ ದಾನ ಮಾಡುತ್ತೇನೆ. ಸಮಾನವಾದ ಚೈತನ್ಯದಲ್ಲಿಯೇ ಎಲ್ಲೆಡೆಯಿಂದಲೂ ಪ್ರವೇಶಿಸಿರಿ ಎಂಬುದು ಇದರ ಅರ್ಥ. ಸಮಾನತೆಯ ಸಂದೇಶ ಸ್ಪಷ್ಟವಾಗಿದೆ. ನಿಮ್ಮೆಲ್ಲರ ಜಲಾಶಯಗಳೂ ಒಂದಾಗಿರಲಿ. ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ ಎನ್ನುತ್ತಿದೆ. ಇಂತಹ ಅದೆಷ್ಟೋ ಮಂತ್ರಗಳನ್ನುದ್ಧರಿಸಬಹುದು. ಅದರೆ ವೇದಗಳ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಇಷ್ಟು ಸಾಕು.
ಮಾನವರೆಲ್ಲರನ್ನೂ ಸಮಾನ ದೃಷ್ಟಿಯಿಂದಲೇ ನೋಡಬೇಕೆಂಬುದು ಸತ್ಯ ಸಿದ್ಧಾಂತ. ಆದರೆ ಮಾನವರು ಯಾಂತ್ರೀಕೃತರಲ್ಲ, ಎಲ್ಲಾ ವಿಷಯಗಳಲ್ಲಿಯೂ ಸರ್ವಥಾ ಸಮಾನವಾಗಿರುವುದಕ್ಕೆ. ಒಂದು ಯಂತ್ರಾಗಾರದಿಂದ ಒಂದೇ ರೂಪದ, ಒಂದೇ ತೂಕದ, ಒಂದೇ ಬಣ್ಣದ, ಒಂದೇ ಶಕ್ತಿಯ ಸಹಸ್ರಾರು ಮೋಟಾರುಗಳನ್ನು ನಿರ್ಮಿಸಬಹುದು. ಆದರೆ ಅತ್ಯಂತ ಸಮರ್ಥನಾದ ಆಚಾರ್ಯನೂ ಕೂಡ ಒಂದೇ ಶಕ್ತಿಯ, ಒಂದೇ ಅಭಿರುಚಿಯ, ಒಂದೇ ಭಾವನೆಯ ಸಾವಿರ, ಏಕೆ, ನೂರು ಶಿಷ್ಯರನ್ನೂ ತಯಾರು ಮಾಡಲಾರನು. ಅದಕ್ಕೆ ಕಾರಣವೂ ಇದೆ. ಪ್ರತಿಯೊಬ್ಬ ಜೀವಾತ್ಮನೂ ತನ್ನದೇ ಆದ ಸಂಸ್ಕಾರಗಳನ್ನು ಹೊತ್ತು, ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಬರುತ್ತಾನೆ.
ಆದಹ ಸ್ವಧಾಮನು ಪುನರ್ಗರ್ಭತ್ವಮೇರಿರೇ | ದಧಾನಾ ನಾಮ ಯಜ್ಞಿಯಮ್ || (ಋಕ್. ೧.೬.೪.)
ಜೀವಿಗಳು ಪೂರ್ವಾರ್ಜಿತ ಕರ್ಮಕ್ಕೆ ತಕ್ಕಂತೆ, ಅಂದರೆ ಸಂಸ್ಕಾರಗಳ ದೃಷ್ಟಿಯಿಂದ ಯೋಗ್ಯತೆಗೆ ಅನುಸಾರವಾಗಿ ಹೊಸ ಹೊಸ ಜನ್ಮ ಧರಿಸುತ್ತಾರೆ.. ಮಾನವಯೋನಿ ಏನೋ ಒಂದೇ, ಮಾನವತ್ವ ಸಾಮಾನ್ಯ ಧರ್ಮವೂ ಅಹುದು. ಈ ದೃಷ್ಟಿಯಿಂದ ಮಾನವರೆಲ್ಲಾ ಸಮಾನರೇ ಸರಿ. ಆದರೆ ಪ್ರತಿಯೊಬ್ಬರಲ್ಲೂ ಸಾಮರ್ಥ್ಯಗಳಲ್ಲಿ ಮತ್ತು ಒಲವುಗಳಲ್ಲಿ ಸಹಜವಾದ ಭೇದವಿರುತ್ತದೆ. ಅದಕ್ಕೆ ತಕ್ಕಂತೆ ಪ್ರತಿಯೊಬ್ಬನಿಗೂ ತನ್ನದೇ ಆದ ರೀತಿಯಲ್ಲಿ ಏಳಿಗೆ ಸಾಧಿಸುವ ಅನುಕೂಲವನ್ನು ಕಲ್ಪಿಸಿಕೊಡುವುದೇ ಮನೋವಿಜ್ಞಾನಕ್ಕನುಗುಣವಾದ ಸರಿಯಾದ ಕ್ರಮ.
ಬೌದ್ಧಿಕ ಪರಿಶ್ರಮ, ಬಾಹುಬಲ ಸಂಯೋಜನ, ವ್ಯಾಪಾರೋದ್ಯಮ, ಕೃಷಿಸಾಧನ ಹಾಗೂ ಶಾರೀರಿಕ ಪರಿಶ್ರಮ - ಈ ನಾಲ್ಕು ಸೇವಾಸಾಧನಗಳಿವೆ. ಇವನ್ನು 'ವರ್ಣಗಳು' ಎನ್ನುತ್ತಾರೆ. ವರ್ಣ ಎಂಬ ಶಬ್ದದ ಅರ್ಥ 'ಆರಿಸಿಕೊಳ್ಳುವ ತತ್ತ್ವ' ಎಂದು. ವರ್ಣ, ಜಾತಿಯಂತೆ ಹುಟ್ಟಿ ಬರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರ, ತನ್ನ ವರ್ಣವನ್ನು ಆರಿಸಿಕೊಳ್ಳುತ್ತಾನೆ. ಹುಟ್ಟಿದ ಕುಲ, ಈ ಬಗೆಯ ಆರಿಸುವಿಕೆಗೆ ನೆರವಾಗಬಹುದು. ಅಂದರೆ, ಬ್ರಾಹ್ಮಣನ ಮಗ ಬ್ರಾಹ್ಮಣನಾಗಬಹುದು, ಆಗದೆಯೂ ಇರಬಹುದು. ವರ್ಣದಲ್ಲಿ ವ್ಯಕ್ತಿಗತ ಸಾಮರ್ಥ್ಯಾಭಿರುಚಿಗಳಿಗೆ ಪ್ರಾಧಾನ್ಯವೇ ಹೊರತು ಕುಲ ಅಥವಾ ಪರಂಪರೆಗಲ್ಲ. ಕೆಲವರಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಶಬ್ದಗಳು ರುಚಿಸದಿರಬಹುದು. ನಾನು ಮೊದಲೇ ಹೇಳಿದಂತೆ, ಇವು ಸರಿ ಹೋಗದಿದ್ದರೆ, ಇಂಟಲೆಕ್ಚುಯಲ್, ಮಾರ್ಶಿಯಲ್, ಕಮರ್ಶಿಯಲ್ ಮತ್ತು ಮಾನ್ಯುಯಲ್ ಎಂಬ ಈ ನಾಲ್ಕು ಶಬ್ದಗಳನ್ನು ಇಟ್ಟುಕೊಳ್ಳಿ. ಆದರೆ, ರಾಷ್ಟ್ರ ಆಸ್ತಿಕವೇ ಆಗಿರಲಿ, ನಾಸ್ತಿಕವೇ ಆಗಿರಲಿ, ಬುದ್ಧಿಜೀವಿ, ಶಕ್ತಿಜೀವಿ, ವ್ಯಾಪಾರೋದ್ಯಮಜೀವಿ, ಶ್ರಮಜೀವಿ ಇದ್ದೇ ಇರುತ್ತಾರೆ. ಈ ನೈಸರ್ಗಿಕ ವಿಭಾಗಗಳಿಗೆ ಸೊನ್ನೆ ಸುತ್ತಿ, ಎಲ್ಲರ ತಲೆಗೂ ಒಂದೇ ವೃತ್ತಿಯನ್ನು ಸುತ್ತುವ ಪ್ರಯತ್ನ ಎಂದಿಗೂ ಸಫಲವಾಗದು. ಎಲ್ಲರೂ ಬುದ್ಧಿಜೀವಿಗಳು, ಎಲ್ಲರೂ ಶ್ರಮಿಕರು, ಎಲ್ಲರೂ ವ್ಯಾಪಾರಿಗಳು, ಎಲ್ಲರೂ ಆಡಳಿತಗಾರರು ಆಗಬೇಕೆಂದರೆ ವ್ಯಾವಹಾರಿಕವಾಗಿ ಸಾಧ್ಯವೇ?
ನಾನಾನಂ ವಾ ನೋ ಧಿಯೋ ವಿ ವ್ರತಾನಿ ಜನಾನಾಮ್| (ಋಕ್.9.112.1) ಮನುಷ್ಯರ ಬುದ್ಧಿಗಳು ನಾನಾ ತರನಾಗಿರುತ್ತವೆ, ಮತ್ತು ಅದೇ ರೀತಿ, ಸಂಕಲ್ಪಗಳೂ, ವಿಚಾರಗಳೂ ಕೂಡ ವಿವಿಧವಾಗಿರುತ್ತವೆ. ಈ ಮೌಲಿಕ ಸತ್ಯವನ್ನು ಗುರುತಿಸಿ, ಪ್ರತಿಯೊಬ್ಬನೂ ತನ್ನದೇ ಆದ ಮಾರ್ಗ ಹಿಡಿದು, ಮಾನವಸಮಾಜಕ್ಕೂ ಸೇವೆ ಸಲ್ಲಿಸುತ್ತಾ, ತನ್ನ ವೈಯಕ್ತಿಕ ಅಭಿವೃದ್ಧಿಯನ್ನೂ ಸಾಧಿಸಿಕೊಳ್ಳುವುದಕ್ಕಾಗಿ ಸೌಲಭ್ಯ ನೀಡುವ ಉದ್ದೇಶದಿಂದ, ವೇದಗಳು ಪರಮ ವೈಜ್ಞಾನಿಕವಾದ ವರ್ಣವ್ಯವಸ್ಥೆಯ ನಿರೂಪಣವನ್ನು ಮಾಡುತ್ತವೆ. ಒಂದು ಅಂಶವನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿ ಅಂಕಿತಗೊಳಿಸಿಕೊಳ್ಳಬೇಕು. ಹುಟ್ಟಿನಿಂದ ಬರುವುದೆಂದು ಭಾವಿಸಲ್ಪಡುವ, ಯಾವುದೋ ಅತ್ಯಂತ ಹಿಂದಿನ ಕಾಲಘಟ್ಟದಲ್ಲಿ ವರ್ಣವ್ಯವಸ್ಥೆಗೆ ಕುರೂಪವನ್ನಿತ್ತು ಸ್ವಾರ್ಥವನ್ನೇ ಸರ್ವಸ್ವವೆಂದು ಭಾವಿಸಿ, ಪ್ರತಿಯೊಬ್ಬ ವ್ಯಕ್ತಿಯ ಘನತೆ ಗಾಂಭೀರ್ಯಗಳಿಗೆ ಗಮನ ನೀಡದೆ, ಮೇಲು-ಕೀಳೆಂಬ ಹೊಲಸು ಭಾವನೆಗೆ ಆಶ್ರಯ ಕೊಟ್ಟು ಆಚರಿಸಲ್ಪಡುವ ಇಂದಿನ ಜಾತಿಪದ್ಧತಿಗೂ, ಪರಮ ವೈಜ್ಞಾನಿಕವೂ, ಸರ್ವಥಾ ಬುದ್ಧಿಸಂಗತವೂ, ಸರ್ವೋತ್ಕರ್ಷಸಾಧಕವೂ ಆದ ಪವಿತ್ರ ವರ್ಣವ್ಯವಸ್ಥೆಗೂ ಯಾವ ಸಂಬಂಧವೂ ಇಲ್ಲ. ಇದನ್ನು ಮನಗಾಣಿಸುವ ಕೆಲಸ ಎಲ್ಲರಿಂದ ಆಗಬೇಕಿದೆ.
-ಕ.ವೆಂ.ನಾಗರಾಜ್.
**************
ಜನಹಿತ ಪತ್ರಿಕೆಯ ದಿನಾಂಕ 22.07.2015ರ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:
Tanuja Shivaram
ಪ್ರತ್ಯುತ್ತರಅಳಿಸಿಹೌದು ಭೂಮಿ ಮೇಲೆ ಮನು ಕುಲ ಉಳಿಯ ಬೇಕಾದರೆ ,ಸರಾಗವಾಗಿ ಸಾಗಬೇಕಾದರೆ ಇಂಟಲೆಕ್ಚುಯಕ್, ಮಾರ್ಶಿಯಲ್, ಕಮರ್ಶಯಲ್, ಮಾನ್ಯುಯಲ್ ಎಲ್ಲ ವರ್ಗದವರ ಸೇವೆ ಅತ್ಯಗತ್ಯ.