ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಸಾಧಿಸುವುದೇ ವೈದಿಕ ಧರ್ಮದ ದೃಷ್ಟಿಯಲ್ಲಿ ಮಾನವಜೀವನದ ಉದ್ದೇಶವಾಗಿದೆ. ಆತ್ಮ ಮತ್ತು ಪರಮಾತ್ಮಜ್ಞಾನವನ್ನು ಸತ್ಕರ್ಮಗಳು, ಸತ್ಯನುಷ್ಠಾನಗಳು, ಸಚ್ಚಿಂತನೆಗಳಿಂದ ಸಂಪಾದಿಸಬಹುದಾಗಿದೆ. ಸಮಾಧಿ, ಸುಷುಪ್ತಿ ಮತ್ತು ಮೋಕ್ಷಗಳು ಜೀವಾತ್ಮನ ಸ್ಥಿತಿಗಳಾಗಿದ್ದು, ಜ್ಞಾನ-ಕರ್ಮ-ಉಪಾಸನೆಗಳು ಈ ಸ್ಥಿತಿಗಳನ್ನು ಹೊಂದಲು ಸಹಕಾರಿಯಾಗಿವೆ. ಇವುಗಳ ಕುರಿತು ಪಂಡಿತರು ಸತ್ಸಂಗದಲ್ಲಿ ವಿವರಿಸಿದ್ದನ್ನು ಈ ಕಂತಿನಲ್ಲಿ ಮಂಡಿಸಿದೆ.
*************
ಸಮಾಧಿ
'ಸಮಾಧಿ, ಸುಷುಪ್ತಿ, ಮೋಕ್ಷೇಶು ಬ್ರಹ್ಮರೂಪಪ' - ಸಾಂಖ್ಯ ದರ್ಶನದಲ್ಲಿ ಕಪಿಲಾಚಾರ್ಯರು ಹೀಗೆ ಹೇಳುತ್ತಾರೆ. ಕಪಿಲಾಚಾರ್ಯರನ್ನು ಅನೇಕರು ನಾಸ್ತಿಕರು ಎನ್ನುತ್ತಾರೆ. ಅವರು ನಾಸ್ತಿಕರಲ್ಲ, ಅವರನ್ನು ನಾಸ್ತಿಕರು ಅನ್ನುವವರೇ ನಾಸ್ತಿಕರು. ಪರಮಾತ್ಮ ಸರ್ವಜ್ಞ, ಎಲ್ಲವನ್ನೂ ಮಾಡುವವನು, ಅವನನ್ನು ನಾವು ಈಶ್ವರ ಅಂತ ಭಾವಿಸುತ್ತೇವೆ. ಭಗವಂತ ಈ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಪ್ರಕೃತಿ ಇಲ್ಲದಿದ್ದರೆ ಭಗವಂತ ಏನೂ ಮಾಡಲಾಗುತ್ತಿರಲಿಲ್ಲ. ಒಳ್ಳೆಯ ನಿಪುಣ ಟೈಲರ್ ಹತ್ತಿರ ಹೋಗಿ ಬಟ್ಟೆಯನ್ನು ಕೊಡದೆ 'ನನಗೊಂದು ಅಂಗಿ ಹೊಲೆದುಕೊಡು' ಅಂದರೆ ಅವನು ಹೇಗೆ ಹೊಲಿಯುತ್ತಾನೆ? ಹೊಲೆಯಲು ಅವನಿಗೆ ಬಟ್ಟೆ ಕೊಡಬೇಕು. ಹಾಗೆಯೇ ಈ ಪ್ರಕೃತಿ ಇಲ್ಲದಿದ್ದರೆ, ಈ ಜಡ ಪ್ರಕೃತಿ ಇಲ್ಲದಿರುತ್ತಿದ್ದರೆ, ಭಗವಂತನಿಗೆ ಈ ಜಗತ್ತನ್ನು ಸ್ಥಾಪನೆ ಮಾಡಲು, ಸೃಷ್ಟಿ ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಇದನ್ನು ಅರಿತುಕೊಂಡು ನಾವು ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಯಾವಾಗ ನಾವು ಕೆಳಕ್ಕೆ ಬೀಳುತ್ತೇವೆ, ಅಂದರೆ ಆ ಪ್ರಕೃತಿಗೆ ವಶವಾದಂತೆ, ನಾವು ಪರಮಾತ್ಮನನ್ನು ಮರೆತುಬಿಡ್ತೇವೆ, ಪ್ರಕೃತಿಗೆ ವಾಲುತ್ತೇವೆ, ಪರಮಾತ್ಮ ಇಲ್ಲದಿದ್ದರೆ ಪ್ರಕೃತಿ ತನ್ನಿಂದ ತಾನೇ ಏನೂ ಮಾಡುವಂತಿಲ್ಲ. ವಾಯು ಬೀಸುತ್ತದೆ, ತನ್ನಷ್ಟಕ್ಕೆ ತಾನೇ ಬೀಸುತ್ತದೇನು? ಸಾಧ್ಯವಿಲ್ಲ. ಆ ಬೀಸುವ ಹಾಗೆ ಮಾಡುವವನು ಪರಮಾತ್ಮ. ಬೆಂಕಿ ಸುಡುತ್ತೆ, ಅದಕ್ಕೆ ಸುಡುವ ಶಕ್ತಿ ಕೊಟ್ಟವರಾರು? ಪಂಚಭೂತಗಳೂ ಅಷ್ಟೆ. ಹೀಗೆ ಯೋಚನೆ ಮಾಡುತ್ತಾ ಹೋಗಿ. ಎಲ್ಲಕ್ಕೂ ಮೂಲಶಕ್ತಿ ಆ ಭಗವಂತನೇ. ಜಡ ಪ್ರಕೃತಿ ತನ್ನಷ್ಟಕ್ಕೆ ತಾನೇ ಏನೂ ಮಾಡಲಾರದು. ಇದನ್ನೇ ಕಪಿಲ ಮಹರ್ಷಿಗಳೂ ಹೇಳುತ್ತಾರೆ, ಅವರನ್ನು ನಾಸ್ತಿಕರು ಅಂತ ಹೇಗೆ ಹೇಳುವುದು? ಅವರು ಹೇಳುತ್ತಾರೆ: ಸಮಾಧಿ, ಸುಷುಪ್ತಿ, ಮೋಕ್ಷ - ಈ ಮೂರು ಸ್ಥಿತಿಯಲ್ಲಿ ಜೀವಾತ್ಮನಿಗೆ ಬ್ರಹ್ಮ ರೂಪ ಬರುತ್ತೆ ಅಂತ. ಸಮಾಧಿ ಅಂದರೆ ಎಲ್ಲವನ್ನೂ ಮರೆತು ಮನಸ್ಸು ಸ್ಥಿರವಾಗಿ ನಿಂತು ಪರಮಾತ್ಮನನ್ನು ಧ್ಯಾನಿಸಿದಾಗ, ಜೀವಾತ್ಮ ಇದ್ದೂ ಕೂಡ ಇಲ್ಲದ ಹಾಗೆ ಆದಾಗ, ಜೀವಾತ್ಮ ತನ್ನ ಇರವನ್ನು ತಾನೇ ಮರೆತು ಭಗವಂತನಲ್ಲಿ ಮನಸ್ಸನ್ನು ಸ್ಥಿರಗೊಳಿಸಿದಾಗ ಭಗವಂತ ಬಿಟ್ಟು ಬೇರೇನೂ ಕಾಣದಿದ್ದಾಗ ಉಂಟಾಗುವ ಸ್ಥಿತಿ ಇದೆಯಲ್ಲಾ ಅದನ್ನು ಸಮಾಧಿ ಅನ್ನುತ್ತಾರೆ. ಈಗ ಹೇಳುತ್ತಾರಲ್ಲಾ, ಸತ್ತ ಮೇಲೆ ಹೂಳಿದ ನಂತರ ಅಥವ ಸುಟ್ಟ ನಂತರ ಕಟ್ಟುವ ಕಟ್ಟೆ ಇದೆಯಲ್ಲಾ, ಅದು ಸಮಾಧಿ ಅಲ್ಲ. ಒಳ್ಳೆಯ ವಿಚಾರದಲ್ಲಿ ಎಲ್ಲಿ ಮನಸ್ಸು ಮತ್ತು ಆತ್ಮ ಸ್ಥಿರವಾಗಿ ನಿಲ್ಲುತ್ತೋ ಅದು ಸಮಾಧಿ. ಅದು ಒಂದು ಅವಸ್ಥೆ. ಈ ಸ್ಥಿತಿಯಲ್ಲಿ ಜೀವಾತ್ಮ ತಾನು ಅಲ್ಪಜ್ಞ, ಅಲ್ಪಶಕ್ತ ಎಂಬ ಎಲ್ಲಾ ಭಾವನೆಯನ್ನೂ ಮರೆತುಬಿಡುತ್ತಾನೆ, ಪರಮಾತ್ಮನಲ್ಲಿ ನೆಲೆ ನಿಲ್ಲುತ್ತಾನೆ.
ಸುಷುಪ್ತಿ
ಸುಷುಪ್ತಿ - ನಿದ್ದೆ, ಒಳ್ಳೆಯ ನಿದ್ದೆ! ಶ್ರೀಮಂತನೂ ನಿದ್ದೆ ಮಾಡ್ತಾನೆ, ಬಡವನೂ ನಿದ್ದೆ ಮಾಡ್ತಾನೆ. ಶ್ರೀಮಂತನ ನಿದ್ದೆ ಚಂಚಲವಾಗಬಹುದು, ಎಲ್ಲಿ ತನ್ನ ಶ್ರೀಮಂತಿಕೆಯನ್ನು ಯಾರು ಕೊಳ್ಳೆ ಹೊಡೀತಾರೋ ಅಂತ ಯೋಚನೆಯಲ್ಲಿ ಹಣದ ಮೇಲೆ ಮನಸ್ಸು ನಿಂತಿರುತ್ತದೆ. ಬಡವನಿಗೆ ಹಾಗಲ್ಲ, ಚಾಪೆ ಇದ್ದರೆ ಚಾಪೆ, ನೆಲ ಇದ್ದರೆ ನೆಲ, ಮಲಗುತ್ತಾನೆ, ಚೆನ್ನಾಗಿ ನಿದ್ದೆ ಹೋಗುತ್ತಾನೆ. ಕಾರಣವೇನೆಂದರೆ ಕಳೆದುಕೊಳ್ಳುವುದಕ್ಕೆ ಅವನ ಹತ್ತಿರ ಜಾಸ್ತಿ ಇಲ್ಲ. ಯಾವನ ಹತ್ತಿರ ಕಳೆದುಕೊಳ್ಳುವುದಕ್ಕೆ ಬಹಳ ಕಡಿಮೆ ಇರುತ್ತೋ ಅವನೇ ಸುಖಿ. ನನ್ನ ಹತ್ತಿರ ಒಂದು ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಕಳೆದುಹೋಯಿತು. ಪರವಾಗಿಲ್ಲ, ಮತ್ತೆ ಗಳಿಸಬಹುದು. ಅದೇ ಒಂದು ಕೋಟಿ ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಅದು ಕಳೆದುಹೋಯಿತು ಅಂದರೆ ಅಷ್ಟು ಸುಲಭವಾಗಿ ಸಹಿಸಿಕೊಳ್ಳಲು ಆಗುವುದಿಲ್ಲ. ಈ ಮಾತನ್ನು ಒತ್ತಿ ಒತ್ತಿ ಶಂಕರಾಚಾರ್ಯರೂ ಹೇಳ್ತಾರೆ, ಮಧ್ವಾಚಾರ್ಯರೂ ಹೇಳ್ತಾರೆ, ರಾಮಾನುಜಾಚಾರ್ಯರೂ ಹೇಳ್ತಾರೆ, ಭಾಷೆ/ರೀತಿ ಬೇರೆ ಅಷ್ಟೆ. ಶಂಕರಾಚಾರ್ಯರು 'ಜ್ಞಾನವಿಲ್ಲದೆ ಮುಕ್ತಿಯಿಲ್ಲ' ಅಂತ ಹೇಳ್ತಾರೆ, ರಾಮಾನುಜರು 'ಭಗವಂತನಲ್ಲಿ ಸಂಪೂರ್ಣ ಆತ್ಮಸಮರ್ಪಣೆ ಮಾಡಿಕೊಂಡರೆ ಮುಕ್ತಿ ಸಿಗುತ್ತೆ' ಅಂತಾರೆ, ಮಧ್ವಾಚಾರ್ಯರೂ 'ನಿನ್ನನ್ನು ನೀನು ಮರೆ' ಅಂತ ಹೇಳ್ತಾರೆ. ಪರಮಾತ್ಮನನ್ನು ನಾರಾಯಣ ಅಂತ ಕರೀತಾರೆ. ಅವನನ್ನು ಶಂಕರ ಅಂತಲಾದರೂ ಕರೆಯಿರಿ, ಶಿವ ಅಂತಲಾದರೂ ಕರೆಯಿರಿ, ಯಾವ ಹೆಸರಿನಿಂದಾದರೂ ಕರೆಯಿರಿ, ಏನೂ ಬಾಧಕವಿಲ್ಲ. ನಾವು ಅರ್ಥ ಮಾಡಿಕೊಳ್ಳುವದಕ್ಕೆ ಹೋಗುವುದಿಲ್ಲ. ಪದಗಳನ್ನು ತೆಗೆದುಕೊಂಡು ಬಿಡುತ್ತೇವೆ! ಅವನಿಗೊಂದು ಜಾಗ ಕಲ್ಪಿಸಬೇಕಲ್ಲಾ, ಸರಿ ವೈಕುಂಠ ಆಯ್ತು. ನಾವು ದೇವರಿಗೆ ಬೇರೆ ಬೇರೆ ಲೋಕ ಕಟ್ಟಿಸಿಕೊಟ್ಟುಬಿಡುತ್ತೇವೆ. ವೈಕುಂಠದಲ್ಲಿ ನಾರಾಯಣ ಇರುತ್ತಾನೆ, ಕೈಲಾಸದಲ್ಲಿ ಶಿವ ಇರುತ್ತಾನೆ, ಹೀಗೆ. ಇದೆಲ್ಲಾ ನಮ್ಮ ಕಲ್ಪನೆ. ಪೌರಾಣಿಕರ ಪ್ರಕಾರ ದೇವರು ಈ ಲೋಕಕ್ಕೆ ಸಂಬಂಧಿಸಿದವನಲ್ಲ. ಬೇರೆ ಲೋಕದಲ್ಲಿರೋ ಭಗವಂತನಾದರೋ ನಮಗೇಕೆ ಬೇಕು? ಸುಷುಪ್ತಿ - ಅಂದರೆ ಒಳ್ಳೆಯ ಸ್ವಾಭಾವಿಕವಾದ ನಿದ್ದೆ. ಆ ಸ್ಥಿತಿಯಲ್ಲಿ ಕೂಡ ನಾವು ಆನಂದ ಪಡೆಯುತ್ತೇವೆ. ಅಲ್ಲಿ ಬಾಹ್ಯ ಪ್ರಪಂಚ ಇರುವುದಿಲ್ಲ.
ಮೋಕ್ಷ
ಮೋಕ್ಷ ಇದ್ದೇ ಇದೆ. ಅಲ್ಲಿ ಪ್ರಕೃತಿಯ ಬಂಧನವೇ ಇಲ್ಲ, ಆ ಭಗವಂತನ ಸಾನ್ನಿಧ್ಯದಲ್ಲಿ ಆನಂದವನ್ನು ನೇರವಾಗೇ ಪಡೆಯುತ್ತೇವೆ. 'ಬ್ರಹ್ಮರೂಪಪ' ಅಂತ ಹೇಳ್ತಾರೆ, ಜ್ಞಾಪಕವಿಟ್ಟುಕೊಳ್ಳಿ. ಮೋಕ್ಷದಲ್ಲಿ ಇವನೇ ಬ್ರಹ್ಮ ಆಗಿಬಿಡ್ತಾನೆ ಅಂತ ಅಲ್ಲ. ಜೀವಾತ್ಮ ಯಾವಾಗಲೂ ಜೀವಾತ್ಮನೇ, ಹಿಂದೆಯೂ ಜೀವಾತ್ಮ, ಮುಂದೆಯೂ ಜೀವಾತ್ಮನೇ, ಅನಂತಕಾಲದವರೆಗೂ ಜೀವಾತ್ಮನೇ. ಅದು ಎಂದೂ ಪರಮಾತ್ಮ ಆಗುವುದಿಲ್ಲ. ನಮ್ಮಲ್ಲಿ ಒಂದು ಕಲ್ಪನೆ ಇದೆ, ಸತ್ತ ಮೇಲೆ ಭಗವಂತನಲ್ಲಿ ಸೇರಿ ಹೋಗಿಬಿಡ್ತಾರೆ ಅಂತ. ಹಾಗೆ ಸೇರುತ್ತಾ ಹೋದರೆ ಪರಮಾತ್ಮ ಬೆಳೆಯುತ್ತಾ ಹೋಗಬೇಕಲ್ಲಾ! ಎಲ್ಲರೂ ಸತ್ತು ಸತ್ತು ಸೇರುತ್ತಾ ಹೋದರೆ ದೊಡ್ಡ ಪರಮಾತ್ಮ ಆಗಬೇಕಲ್ಲಾ! ಇದು ಪರಮಾತ್ಮನ ಭಕ್ತರು ಆಡುವ ಮಾತೇ ಇದು? ಪರಮಾತ್ಮನನ್ನು ಹಾಸ್ಯ ಮಾಡಿದಂತೆ.
ಮೋಕ್ಷ ಅನ್ನುವುದು ಯಾವ ನಿಶ್ಚ್ಚಿತವಾದ ಸ್ಥಳ ಅಥವ ಲೋಕವಲ್ಲ. ಅದು ಜೀವಾತ್ಮನ ಒಂದು ಸ್ಥಿತಿ ಮಾತ್ರ. ಆ ಸ್ಥಿತಿಯಲ್ಲಿ ಅವನ ಇಂದ್ರಿಯಗಳು, ಮನಸ್ಸು, ಬುದ್ಧಿಗಳ ಹಿಡಿತದಿಂದ, ದೇಹಬಂಧನದಿಂದ ಬಿಡುಗಡೆ ಹೊಂದಿ ಅಶರೀರನಾಗಿರುತ್ತಾನೆ. ಆಧಿದೈವಿಕ, ಆಧಿಭೌತಿಕ ಮತ್ತು ಆಧ್ಯಾತ್ಮಿಕ ಎಂದರೆ, ಪ್ರಾಕೃತಿಕ ಪ್ರಕೋಪಗಳಿಂದ, ಬೇರೆ ಪ್ರಾಣಿಗಳಿಂದ ಮತ್ತು ತನ್ನ ಸ್ವಂತ ಅಜ್ಞಾನದಿಂದ ಉಂಟಾಗುವ ತಾಪಗಳಿಂದ ಬಿಡುಗಡೆ ಹೊಂದಿ, ಕೇವಲ ಬ್ರಹ್ಮಾನಂದವನ್ನು ಅನುಭವಿಸುತ್ತಾ ಇರುತ್ತಾನೆ. ಈ ಸ್ಥಿತಿಯಲ್ಲಿ ಎಲ್ಲಿ ಬೇಕಾದರೂ ಹೋಗಬಲ್ಲವನಾದ ಅವನಿಗೆ ಭೌತಿಕಜಗತ್ತಿನ ಸಂಪರ್ಕ ಮಾತ್ರ ಇರುವುದಿಲ್ಲ. ಈ ಸ್ಥಿತಿ ಮುಟ್ಟಬೇಕಾದರೆ ಜ್ಞಾನ-ಕರ್ಮ-ಉಪಾಸನಾಯುಕ್ತವಾದ ಧಾರ್ಮಿಕಜೀವನವನ್ನು ಪೂರ್ಣತಃ ಪಾಲಿಸಬೇಕು. ಕೊನೆಗೆ ಆಧ್ಯಾತ್ಮಿಕ ಸಾಧನಾಪಥದಲ್ಲಿ ನಡೆದು ಪರಮಾತ್ಮನ ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬೇಕು. ನಾವು ಮಾಡುವ ಸತ್ಕರ್ಮಗಳು ಮತ್ತು ಉಪಾಸನೆ ಪರಮಾತ್ಮನ ಜ್ಞಾನದಲ್ಲಿ ಸಮಾಪ್ತವಾದಾಗಲೇ ಮೋಕ್ಷ.
ವೇದಾಹಮೇತಂ ಪುರುಷಂ ಮಹಾಂತಮಾದಿತ್ಯವರ್ಣಂ ತಮಸಃ ಪರಸ್ತಾತ್ | ತ್ವಮೇವ ವಿದಿತ್ಯಾತಿ ಮೃತ್ಯುಮೇವ ನಾನ್ಯಃ ಪಂಥಾ ವಿದ್ಯತೇಯನಾಯ || (ಯಜು.೩೧.೧೮.)
'ನಾನು ಅಜ್ಞಾನಾಂಧಕಾರದಿಂದ ಮೇಲೆದ್ದು, ಅಖಂಡ ತೇಜಸ್ವಿಯಾದ ಬ್ರಹ್ಮಾಂಡವೆಂಬ ಪುರದಲ್ಲಿ ವ್ಯಾಪಕನಾಗಿರುವ ಪರಮಾತ್ಮನನ್ನು ತಿಳಿದಿದ್ದೇನೆ. ಅವನನ್ನೇ ಅರಿತು, ಮಾನವನು ಸಾವನ್ನು ಅಥವ ಮರ್ತ್ಯಲೋಕವನ್ನು ದಾಟಿ ಹೋಗುತ್ತಾನೆ. ಆತ್ಮನ ಸದ್ಗತಿಗೆ ಬೇರೆ ಮಾರ್ಗ ಇರುವುದೇ ಇಲ್ಲ' ಎಂಬುದು ಇದರ ಅರ್ಥ.
ಈ ಮೋಕ್ಷ ಅನ್ನುವುದು ಅನಂತ ಸ್ಥಿತಿಯಲ್ಲ. ಸಾಂತ ಸಾಧನೆಯಿಂದ ಅನಂತ ಮೋಕ್ಷವೆಲ್ಲಿ ಸಿಕ್ಕೀತು? ಜೀವಾತ್ಮ ಅನಂತವಾಗಿದ್ದು ಸಾಯುವಂತಿಲ್ಲ, ಹೊಸ ಜೀವಾತ್ಮ ಹುಟ್ಟುವಂತೆಯೂ ಇಲ್ಲ. ಇರುವ ಜೀವಾತ್ಮವೇ ಅನಾದಿ, ಅನಂತವಾಗಿರುವುದರಿಂದ ಅತಿ ಸುದೀರ್ಘ ಕಾಲಾನಂತರದಲ್ಲಿ ಎಲ್ಲಾ ಜೀವಾತ್ಮರೂ ಮೋಕ್ಷ ಪಡೆಯುತ್ತಾರೆ ಮತ್ತು ಕಲ್ಷನೆಗೂ ಮೀರಿದ ಅವಧಿಯ ಅತಿ ದೀರ್ಘವಾದ ಮೋಕ್ಷಾವಸ್ಥೆ ಕಳೆದ ನಂತರ ಪುನಃ ಜೀವಿಗಳಾಗಿ ಜನಿಸುತ್ತಾರೆ. ಇಲ್ಲದಿದ್ದರೆ ಪರಮಾತ್ಮನ ಸೃಷ್ಟಿ-ಸ್ಥಿತಿ-ಲಯಗಳಿಗೆ ಅರ್ಥ ಉಳಿಯುವುದಿಲ್ಲ. ಮೋಕ್ಷಾವಸ್ಥೆ ಎಷ್ಟು ದೀರ್ಘವಾದುದೆಂದರೆ ಜನನ-ಮರಣಗಳಿಂದ ದೂರವಾದ ಸ್ಥಿತಿ ಎನ್ನಬಹುದಾದಷ್ಟು ದೀರ್ಘ ಅವಧಿಯದಾಗಿರುತ್ತದೆ.
ಪರಮಾತ್ಮನನ್ನು ಕಾಣುವುದು!
ಸತ್ತ್ವಗುಣ ಹೆಚ್ಚಾಗಿ, ರಜೋಗುಣ ಕಡಿಮೆಯಾಗಿ, ತಮೋಗುಣ ಶೂನ್ಯವಾದಾಗ ನಮಗೆ ಸ್ವಲ್ಪ ಸ್ವಲ್ಪ ಪರಮಾತ್ಮನ ಅನುಭವವಾಗುವುದಕ್ಕೆ ಪ್ರಾರಂಭವಾಗುತ್ತದೆ. ಇದನ್ನು ಅನುಭವಿಸಿ ತಿಳಿಯಬೇಕೇ ಹೊರತು ಪದಗಳಲ್ಲಿ ವಿವರಿಸುವುದು ಕಷ್ಟ. ಜೀವಾತ್ಮ - ಪರಮಾತ್ಮ ಒಟ್ಟು ಸೇರಿದಾಗ ಆಗುವ ಅನುಭೂತಿ, ಆನಂದ ವರ್ಣಿಸಲಸದಳ. ಸಕ್ಕರೆಯ ರುಚಿಯೇ ಗೊತ್ತಿಲ್ಲದೆ ಇರುವವರಿಗೆ ಸಕ್ಕರೆ ಸಿಹಿ ಎಂದು ಇಪ್ಪತ್ತೈದು ಸಲ ಒತ್ತಿ ಒತ್ತಿ ಹೇಳಿದರೂ ಅರ್ಥವಾಗದೆ ಹೋಗಬಹುದು. ಆದರೆ ಸಕ್ಕರೆಯನ್ನು ಆತ ನಾಲಗೆಯ ಮೇಲಿರಿಸಿಕೊಂಡಾಗ ಅವನಿಗೆ ಅದರ ಸಿಹಿ ಅನುಭವಕ್ಕೆ ಬರುತ್ತದೆ. ಹಾಗೆಯೇ ಪರಮಾತ್ಮನನ್ನು ಅನುಭವಿಸಿಯೇ ತಿಳಿಯಬೇಕು. ಸಾಕ್ಷಾತ್ಕಾರ ಅನ್ನುವುದು ಸುಳ್ಳು. ಪರಮಾತ್ಮನನ್ನು ಕಾಣಲು ಬೇಕಾಗಿರುವುದು ಜ್ಞಾನದ ಕಣ್ಣು, ಒಳಗಣ್ಣು, ಅಂತಃಚಕ್ಷು, ಆ ಕಣ್ಣುಗಳಿಂದ ನಾವು ಭಗವಂತನನ್ನು ಕಾಣಬಹುದು.
ಸೂರದಾಸರು ಹುಟ್ಟುಕುರುಡರು. ಅವರು ಕೃಷ್ಣನನ್ನು ವರ್ಣಿಸಿದ ರೀತಿ ನೋಡಿದರೆ ಕೃಷ್ಣ, ದೇವಕಿ, ಯಶೋದೆ, ಎಲ್ಲಾ ಎದುರಿಗೆ ಬಂದಂತೆ ಭಾಸವಾಗುತ್ತದೆ. ಹೇಗೆ ಸಾಧ್ಯವಾಯಿತು ಇದು? ಜನ್ಮಾಂತರದ ಸಂಸ್ಕಾರ, ಅಂತಃಚಕ್ಷುವಿನಿಂದ ನೋಡಿದರು. ಈಗಲೂ ಪರೀಕ್ಷೆ ಮಾಡಿ ನೋಡಿ, ದೇವರಿಗೆ ಆಕಾರ ಇಲ್ಲ, ಕಲ್ಪಿಸಿಕೊಳ್ಳಿ, ಯಾವ ಆಕಾರ ಬೇಕಾದರೂ ಕಲ್ಪಿಸಿಕೊಳ್ಳಿ. ನಾರಾಯಣ - ಶಂಖ, ಚಕ್ರ, ಗದಾಪದ್ಮಧಾರಿ, ಕಿರೀಟ ಹಾಕಿಕೊಂಡಿದ್ದಾನೆ, ತುಳಸಿಮಾಲೆ, ಪೀತಾಂಬರ ವಸ್ತ್ರ, ಏನೇನೋ ಕಲ್ಪಿಸಿಕೊಳ್ಳಿ, ಕಾಣಿ, ಆ ಚಿತ್ರ ಮನಸ್ಸಿಗೆ ಬರುತ್ತೆ, ನಿಜವಾಗಿಯೂ ಹಾಗೆ ಇದೆಯಾ? ನಿಜವಾಗಿ ಹಾಗಿಲ್ಲ. ನಿಮ್ಮ ಕಲ್ಪನೆಯಂತೆ ನಿಮಗೆ ಕಾಣುತ್ತೆ, ಅಷ್ಟೆ. ಹಾಗೆಯೇ ಶಿವ! ಪರಮಾತ್ಮನ ವಿಷಯ ಮಾತನಾಡುವಾಗ ಬಹಳ ಗಂಭೀರವಾಗಿ ಆಲೋಚಿಸಬೇಕು. ಪರಮಾತ್ಮ ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಅವನಿಲ್ಲದ ಜಾಗವೇ ಇಲ್ಲ. ಅಗ್ನಿಹೋತ್ರ ಮಾಡುವಾಗ, ಸಂಧ್ಯಾವಂದನೆ ಮಾಡುವಾಗ ಈ ಮಂತ್ರ ಹೇಳ್ತೇವೆ: ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ | ನಮಃ ಶಿವಾಯ ಚ ಶಿವತರಾಯ ಚ || (ಯಜು.೧೬.೪೧.) ಇದರ ಅರ್ಥ ಶಾಂತಿಸ್ವರೂಪನಿಗೆ ನಮಸ್ಕಾರ ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ ಎಂದು.
-ಕ.ವೆಂ.ನಾಗರಾಜ್.
***************
ದಿನಾಂಕ 10.06.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:
ಎರಡು ವಿರೋಧಗಳು..
ಪ್ರತ್ಯುತ್ತರಅಳಿಸಿ೧) ಸಾಕ್ಷಾತ್ಕಾರ ಎನ್ನುವುದೇ ಸುಳ್ಳು
-- ತಮೋಗುಣ ನಾಶವಾದ ಮೇಲೆ ಪರಮಾತ್ಮನ ಅನುಭೂತಿಯಾಗುತ್ತದೆ ಎಂದಿದೆಯಲ್ಲಾ, ಈ ಪರಮಾತ್ಮನ ಅನುಭೂತಿಗಿಂತ ಭಿನ್ನವಾದ ಸಾಕ್ಷಾತ್ಕಾರವನ್ನು ಯಾರಾದರೂ ಹೇಳಿದ್ದಾರೆಯೇ.?
ನನಗನ್ನಿಸುವಂತೆ ಇಲ್ಲ. ಪರಮಾತ್ಮನ ಅನುಭೂತಿಯನ್ನೇ ಸಾಕ್ಷಾತ್ಕಾರ ಎಂದು ಇನ್ನೊಂದು ಹೆಸರಿನಿಂದ ಹೇಳಿದ್ದಾರಷ್ಟೇ. ಸಾಕ್ಷಾತ್ಕಾರ ಸುಳ್ಳಾದರೆ, ಪರಮಾತ್ಮನ ಅನುಭೂತಿಯೇ ಸುಳ್ಳಾಗಬೇಕು.
ಅಥ್ವಾ, ನೀವು ಬೇರೊಂದು ಅರ್ಥವನ್ನು "ಸಾಕ್ಷಾತ್ಕಾರ"ಪದಕ್ಕೆ ಅಂದುಕೊಂಡಿದ್ದರೆ, ಅದರ ಪರಿಷ್ಕಾರವನ್ನು ತಿಳಿಸಿ. ಅದು ಶಾಸ್ತ್ರದಲ್ಲಿ ಹೇಳಿದ್ದೋ ಅಲ್ಲವೋ, ಎಂಬುದನ್ನು ವಿಮರ್ಶಿಸಿ ಹೇಳುವೆ.
೨) "ಮೋಕ್ಷ" ಅನಂತವಲ್ಲ.
-- ಅನಂತವಲ್ಲದ ಮೋಕ್ಷ, ಹೇಗೆ ಫಲವಾಗುತ್ತದೆ ?
ಎಷ್ಟೋ ಕಾಲ, ಮೊಕ್ಷದಲ್ಲಿದ್ದು, ಮತ್ತೆ ಜೀವಿ ಯಥಾ ಪ್ರಕಾರ ಹುಟ್ಟು-ಸಾವಿನ ಸುಳಿಗೆ ಬರುತ್ತಾನೆ ಅನ್ನೋದಾದ್ರೆ, ಅಂಥಾ ಮೋಕ್ಷ ಬಂದರೆಷ್ಟು ಬಿಟ್ಟರೆಷ್ಟು.? ಯಾವುದನ್ನು ಪಡೆದ ಮೇಲೆ, ಮತ್ತೆ ಎಂದಿಗೂ ಪ್ರಕೃತಿಯ ಬಂಧ ಬರುವುದೇ ಇಲ್ಲವೋ ಅಂತಹ ಮೋಕ್ಷ ಒಂದಿದ್ದರೆ ಅದು ಫಲವಾದೀತು. ಇಲ್ಲದಿದ್ದರೆ ನಿದ್ದೆ ಮಾತ್ರೆ ತೆಗೆದುಕೊಂಡು ನಿದ್ದೆ ಮಾಡಿದ ಹಾಗಷ್ಟೇ. ಮತ್ತೆ ಎದ್ದ ಮೇಲೆ ಎಲ್ಲಾ ಕಷ್ಟಗಳೂ ಬರುತ್ತವೆ ಅಂತಾಗುತ್ತದಲ್ಲಾ..
ಇಷ್ಟಕ್ಕೂ, ಜೀವಿಗಳ ಸಂಖ್ಯೆಯೇ ಅನಂತ. ಅದು ಪರಿಮಿತವಾಗಿ ಇಲ್ಲ. ಹೀಗಾಗಿ, ಪರಮಾತ್ಮನ ಸೃಷ್ಟಿ-ಸ್ಥಿತಿಯ ಪ್ರಕ್ರಿಯೆಗೆ ನಿಲುಗಡೆ ಬಂದೀತು ಎಂಬ ಅಂಶ ಕೂಡುವುದೇ ಇಲ್ಲ. ಅಸಂಖ್ಯಾತ ಜೀವಿಗಳು ಮೋಕ್ಷ ಹೊಂದಿದಂತೆ, ಇನ್ನೂ ಹಿಂದೆ ಅನಂತ ಅಸಂಖ್ಯಾತ ಜೀವಿಗಳು ಇದ್ದೆ ಇದ್ದಾರೆ, ಮತ್ತು ಅನಂತ ಕಾಲದವರೆಗೂ ಇರುತ್ತಾರೆ..
ನಮಸ್ತೆ, ಭೀಮಸೇನರೇ. ನಾನು ಇಂತಹ ವಿಷಯಗಳಲ್ಲಿ ಆಸಕ್ತಿ ಇರುವ ಒಬ್ಬ ವಿದ್ಯಾರ್ಥಿ. ವಿಮರ್ಶೆ ಮಾಡುವಷ್ಟು ದೊಡ್ಡವನಾಗಿಲ್ಲ. ನಮ್ಮ ಸ್ವಂತ ಅನುಭವ ಮತ್ತು ಅರಿವುಗಳೇ ನಮ್ಮ ಗುರುವಾಗಿ ಇಂತಹ ವಿಷಯಗಳಲ್ಲಿ ಸಹಕಾರ ಕೊಡುತ್ತವೆ. ಇಂತಹ ವಿಷಯಗಳನ್ನು ಯಾರೇ ಹೇಳಲಿ, ಕೇಳಲು ಕಾತುರನಾಗಿರುವನಷ್ಟೆ. ನನಗೆ ಏನು ಅನ್ನಿಸಿತು ಎಂಬದನ್ನೂ ಹೇಳಲು ನನಗೆ ಇನ್ನೂ ಸಾಧನೆ ಅಗತ್ಯವಿದೆ. ಮೋಕ್ಷದ ಕುರಿತು ಹೇಳಬೇಕೆಂದರೆ ಅದು ಅನಂತವಲ್ಲ ಎಂಬ ವಿಚಾರ ನನ್ನ ಮಟ್ಟಿಗೆ ಒಪ್ಪಬಹುದಾದ ಸಂಗತಿಯಾಗಿದೆ. ಸಾಂತ ಸಾಧನೆ ಅನಂತತೆಗೆ ಒಯ್ಯಲಾರದು. ಪಂಡಿತರ 'ವೇದೋಕ್ತ ಜೀವನ ಪಥ' ಆಧರಿಸಿ ಬರೆದ ಈ ಲೇಖನದಲ್ಲಿ ಮೋಕ್ಷದ ಬಗ್ಗೆ ಬರೆದಿರುವುದು ಹೀಗೆ: ಲಿಂಕ್: http://vedajeevana.blogspot.in/2013/08/blog-post_26.html
ಅಳಿಸಿನಮಸ್ತೆ.
ಅಳಿಸಿನಾನೂ ನಿಮ್ಮ ತರಹ ಆಸಕ್ತ ವಿದ್ಯಾರ್ಥಿಯಷ್ಟೇ ನಾಗರಾಜರೆ..
ಹೀಗಾಗಿಯೇ, ನಿಮ್ಮ ಎಲ್ಲ ಲೇಖನಗಳನ್ನೂ ತಪ್ಪದೆ ಓದುತ್ತೇನೆ, ಮತ್ತು ನಾನು ಅಭ್ಯಾಸ ಮಾಡುವಾಗ ತಿಳಿದ ವಿಚಾರಗಳಿಗೂ ಇಲ್ಲಿಗೂ ವೈರುಧ್ಯ ಬಂದರೆ, ಇಲ್ಲಿ ಆ ಪ್ರಶ್ನೆಗಳನ್ನು ಹಾಕುತ್ತೆನಷ್ಟೇ.
ಇಲ್ಲಿ ಯಾವ ಆಗ್ರಹವೂ ಇಲ್ಲ.
ಮೋಕ್ಷ ಅನಂತವಲ್ಲ ಎಂಬುದು ಕೇವಲ ನಿಮ್ಮ ಮನಸ್ಸಿಗೆ ಅನ್ನಿಸಿದ ಅಭಿಪ್ರಾಯವಾದರೆ, ಅದು ನಿಮಗೆ ಬಿಟ್ಟಿದ್ದು. ನಿಮ್ಮ ಅಭಿಪ್ರಾಯಕ್ಕೆ ಖಂಡಿತ ಗೌರವವಿದೆ. ಆದರೆ, ಅದು ಪ್ರಮಾಣಗಲಿಲ್ಲದೆ ಸಿದ್ಧಾಂತವಾಗುವುದಿಲ್ಲ ಅನ್ನೋದೂ ಅಷ್ಟೇ ಸ್ಪಷ್ಟ.
ಮೋಕ್ಷ ಎಂದರೆ, ಮತ್ತೆ ಎಂದೂ ಪುನಃ ಆವೃತ್ತಿಯಿಲ್ಲದ ಸ್ಥಿತಿಯೇ ಆಗಿದೆ.
"ಸ ಖಲ್ವೇವಂ ವರ್ತಯನ್ ಯಾವದಾಯುಷಂ ಬ್ರಹ್ಮಲೋಕಮಭಿಸಂಪದ್ಯತೆ |
ನ ಚ ಪುನರಾವರ್ತತೆ ನ ಚ ಪುನರಾವರ್ತತೆ .||" ಛಾನ್ದೊಗ್ಯ ೮-೧೫-೧
ಮುಕ್ತನಿಗೆ ಪುನಃ ಆವೃತ್ತಿ ಇಲ್ಲ ಎಂಬುದನ್ನು, ವೇದವು ಎರಡು ಬಾರಿ ಹೇಳುವುದರ ಮೂಲಕ ಸ್ಪಷ್ಟ ಪಡಿಸಿದೆ.
ಇದನ್ನೇ ವೇದವ್ಯಾಸರು ತಮ್ಮ ಬ್ರಹ್ಮಸೂತ್ರಗಳಲ್ಲಿ ಕೊನೆಯ ಸೂತ್ರವನ್ನಾಗಿ ಹೇಳಿದ್ದರೆ
"ಓಂ ಅನಾವೃತ್ತಿಃ ಶಬ್ದಾತ್ ಅನಾವೃತ್ತಿಃ ಶಬ್ದಾತ್ ಓಂ" - ಬ್ರಹ್ಮಸೂತ್ರ - ೪-೪-೨೩
"ಇಮಂ ಮಾನವಮಾವರ್ತಂ ನಾವರ್ತಂತೆ" -- ಛಾನ್ದೊಗ್ಯ ೪-೧೫-೬
ಮುಕ್ತ ಜೀವಿಗಳು, ಮಾನವ ಸಂಬಂಧಿಯಾದ ಜನ್ಮ-ಮೃತ್ಯುಸಹಿತವಾದ ಸಂಸಾರವನ್ನು ಮತ್ತೆ ಹೊಂದುವುದೇ ಇಲ್ಲ..
ಇದನ್ನೇ ಮತ್ತೆ ಬ್ರಹ್ಮಸೂತವೂ ಹೇಳುತ್ತದೆ.,
"ಓಂ ವಿಕಾರವರ್ತಿ ಚ ತಥಾ ಹಿ ದರ್ಶಯತಿ ಓಂ" ಬ್ರ.ಸೂ -- ೪-೪-೨೦
ಮಾಹಿತಿಗೆ ಧನ್ಯವಾದಗಳು, ಭೀಮಸೇನರೇ. ಈ ವಿಚಾರದಲ್ಲಿ ಒಂದು ಲೇಖನ ಪ್ರಕಟಿಸಿ. ನಮಗೆ ಹೆಚ್ಚು ತಿಳಿಯಲು ಕುತೂಹಲವಿದೆ.
ಅಳಿಸಿಮೋಕ್ಷ ಪಡೆದ ಆತ್ಮ ಬಹುಶಃ.. ಜೀವಿಯಾಗಿ ಹುಟ್ಟದೇ ಇಚ್ಛಾ ಶಕ್ತಿಯಿಂದಲೇ ಲೋಕ ಕಲ್ಯಾಣಕ್ಕಾಗಿ ಮಾನವ ಶರೀರ ರೂಪಿಸಿಕೊಂಡು ಈ ಭೂ ಲೋಕಕ್ಕೆ ಬಂದು ಜ್ನಾನಾರ್ಜನೆ ಮಾಡುತ್ತವೆ ಕೂಡ ಎಂಬ ಸಿದ್ಧಾಂತವನ್ನು ನಂಬಿದ್ದೇನೆ.. ಅದಕ್ಕೆ ಉದಾಹರಣೆ "ಮಹಾವತಾರ್ ಬಾಬಾಜಿ" ಮತ್ತು ಶ್ರೀ ಪರಮಹಂಸಯೋಗಾನಂದರ ಗುರುಗಳಾದ ಶ್ರಿ ಯುಕ್ತೇಶ್ವರ್ ಗುರುಗಳು.. ಯೋಗಿಯ ಆತ್ಮಕಥೆ ಎಂಬ ಪುಸ್ತಕದ ಯುಕ್ತೇಶ್ವರರ ಪುನರುತ್ಥಾನ ಎಂಬ ಅಧ್ಯಾಯದಲ್ಲಿ ಈ ಅಂಶವನ್ನು ಓದಬಹುದಾಗಿದೆ.
ಪ್ರತ್ಯುತ್ತರಅಳಿಸಿ