ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಜುಲೈ 14, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -11: ಮಾಡುವ ಕ್ರಿಯೆಗಳಿಗೆ ಅರ್ಥವಿರಲಿ


ಪ್ರಯತ್ನವಿಲ್ಲದೆ ಫಲವಿಲ್ಲ
     ಈ ಭೂಮಾತೆಯ ಗರ್ಭದಲ್ಲಿ ಏನೇನು ಅಡಗಿದೆ ಅನ್ನುವುದು ಆ ದೇವರೊಬ್ಬನಿಗೇ ಗೊತ್ತು. ಸಮಸ್ತ ಸಂಪತ್ತು ಅಲ್ಲಿದೆ, ಇದನ್ನು ವಸುಂಧರಾ ಅಂತ ಕರೀತಾರೆ. ವಸು ಅಂದರೆ ಐಶ್ವರ್ಯ. ಐಶ್ವರ್ಯವನ್ನು ಧರಿಸಿರುವ ತಾಯಿ ಅಂತ ಇಟ್ಕೊಳ್ಳಿ, ಈ ಭೂಮಿ ಒಂದು ಸುಂದರವಾದ ವಸುಂಧರಾ, ಇಲ್ಲಿ ಇಲ್ಲದ್ದು ಎಲ್ಲೂ ಇಲ್ಲ, ಎಲ್ಲವೂ ಈ ಭೂಮಿಯ ಒಳಗೇ ಇದೆ. ಮತ್ತೆ ಈ 'ಪರಮಾತ್ಮ,-ಆನಂದ' ಇದೆಯಲ್ಲಾ. ಅದು ಎಲ್ಲಾ ಕಡೆಯೂ ಹರಡಿಕೊಂಡಿದೆ. ಆದರೆ, ನಮ್ಮ ಅನುಭವಕ್ಕೆ ಬರುತ್ತಾ ಇಲ್ಲ, ಕಾರಣ  ಏನು? ಗಂಗೆಯನ್ನು ಎದುರಿಗೆ ಇಟ್ಟುಕೊಂಡು 'ಗಂಗಾ ಮಾತೆ, ನನಗೆ ಬಾಯಾರಿಕೆ ಆಗಿದೆ, ನನ್ನ ಬಾಯಾರಿಕೆ ನೀಗಿಸು' ಅಂದರೆ ಅವಳು ಬಾಯಾರಿಕೆ ಹೋಗಿಸುವುದಿಲ್ಲ. ನೀವು ಕೈಯಲ್ಲಿ ತೆಗೆದುಕೊಳ್ಳಬೇಕು, ಕುಡಿಯಬೇಕು, ಆಗ ಮಾತ್ರ ನಿಮ್ಮ ಬಾಯಾರಿಕೆ ಹೋಗೋದು. ಹಾಗಿಲ್ಲದೆ ಬರಿಯ ಮಾತಿನಿಂದ ಗಂಗೆ ಬಾಯಾರಿಕೆ ಹೋಗಿಸುವುದಿಲ್ಲ. ಸಾಧ್ಯವೇ ಇಲ್ಲ. ಪರಮಾತ್ಮನ ವಿಷಯದಲ್ಲೂ ಅಷ್ಟೆ, ಬಹಳ ಮಾತಾಡ್ತೀವಿ, ಆನಂದಸ್ವರೂಪ - ಹೌದು, ಅವನು ಆನಂದಸ್ವರೂಪ. ಆದರೆ ಅದು ಯಾಕೆ ನಮ್ಮ ತಲೆಗೆ ಹೋಗುವುದಿಲ್ಲ? ಅನುಭವವಿಲ್ಲ. ಆ ಆನಂದದ ಅನುಭವ ನಮಗಿಲ್ಲ.
ಸುಖ-ದುಃಖ
     ಸುಖ ಗೊತ್ತು, ದುಃಖ ಗೊತ್ತು. ಇವೆರಡೂ ಕೂಡ ಭೌತಿಕ, ಆಧ್ಯಾತ್ಮಿಕವಲ್ಲ. ಖ ಅಂದರೆ ಇಂದ್ರಿಯ, ಸು-ಖ: ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ. ದುಃ-ಖ: ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ನನಗೆ ಚೆನ್ನಾಗಿ ನೆನಪಿದೆ, ಇಷ್ಟು ವರ್ಷವಾದರೂ ಮರೆತಿಲ್ಲ, ಒಬ್ಬ ಶಿಷ್ಯರತ್ನ ನನಗೆ ಸಿಕ್ಕಿದ್ದ. ಅವನಿಗೆ ನಾನು ಹೇಳುವೆ, 'ನೋಡಪ್ಪಾ, ಬ್ರಾಹ್ಮಿ ಮುಹೂರ್ತ ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆಯವರೆಗೆ, ಆಗ ಎದ್ದು ಒಂದು ಸಲ ಮಂತ್ರ ಹೇಳಿಕೋ ಸಾಕು, ಅದು ನೆನಪಿನಲ್ಲಿ ಉಳಿಯುತ್ತೆ' ಅಂತ. 'ಆಗಲಿ ಗುರೂಜಿ' ಅನ್ನೋನು, ಬೆಳಿಗ್ಗೆ ಏಳಿಸಲು ಹೋದರೆ, 'ಇನ್ನೊಂದು ಐದು ನಿಮಿಷ ಗುರೂಜಿ' ಅಂತ ಹೇಳೋನು, ಸೂರ್ಯೋದಯ ಆದ ಮೇಲೇ ಏಳೋನು!
ದಶಪ್ರಾಣಗಳು
     'ಯಾವನು ಕಳ್ಳನಲ್ಲದ ನನ್ನನ್ನು ಕಳ್ಳ ಅಂತ ಹೇಳ್ತಾನೋ ಅವನ ಹತ್ತು ಪ್ರಾಣಗಳೂ ನಾಶವಾಗಲಿ' - ಇದು ಒಂದು ಮಂತ್ರದ ಅರ್ಥ. ಪಂಚ ಪ್ರಾಣಗಳು -ಪ್ರಾಣ, ಅಪಾನ, ಉದಾನ, ಸಮಾನ, ವ್ಯಾನ- ಇವು ನಿಮಗೆ ಗೊತ್ತು. ಇನ್ನು, ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ - ಇವು 5 ಉಪಪ್ರಾಣಗಳು. ತುಂಬಾ ಜನಕ್ಕೆ ಗೊತ್ತಿಲ್ಲ, ನಾಗ - ಕಾಲಿನ ಹೆಬ್ಬೆಟ್ಟಿನ ಹತ್ತಿರ ಇದೆ, ಕೂರ್ಮ - ಅದರಿಂದ ಸ್ವಲ್ಪ ಮೇಲಕ್ಕೆ, ಹಾಗೇ ಮೇಲಕ್ಕೆ, ಮೇಲಕ್ಕೆ ಹೋಗುತ್ತಾ ಕೃಕಲ, ದೇವದತ್ತ, ಧನಂಜಯ. ಶ್ರೀಕೃಷ್ಣನ ಸಾವು ಹೇಗಾಯ್ತು ಗೊತ್ತಾ? ದ್ವಾರಕಾ ನಗರದಲ್ಲಿ ಯಾದವರು ತಮ್ಮಲ್ಲೇ ಕೊಚ್ಚಾಡಿ ನಾಶವಾದರು. ಕೂತ್ಕೊಂಡಿದ್ದ ಒಂದು ಕಡೆ, ಕೂತ್ಕೊಂಡು ಯೋಚನೆ ಮಾಡ್ತಾ ಇದ್ದ, ನಾನು ಜಗಕ್ಕೆಲ್ಲಾ ಉಪದೇಶ ಮಾಡಿದೀನಿ, ನನ್ನ ಎದುರಿಗೇ ಹೀಗೆಲ್ಲಾ ಆಯ್ತಲ್ಲಾ ಅಂತ ಬಹಳ ದುಃಖದಿಂದ ಕೂತಿದ್ದಾಗ, ನಾಗ ಅನ್ನುವ ಉಪಪ್ರಾಣ ಅವನನ್ನು ಬಿಟ್ಟುಹೋಯಿತು. ಉಪಪ್ರಾಣ ಹೋಯಿತು, ದೊಡ್ಡ ಪ್ರಾಣ ಹೋಗಿರಲಿಲ್ಲ, ಅದೇ ಸಾಕಾಯ್ತು, ಕೃಷ್ಣನ ಸಾವಿಗೆ. ಉಪಪ್ರಾಣಕ್ಕೂ ಕೂಡ ಅಷ್ಟೇ ಶಕ್ತಿ ಇದೆ, ನಿಜವಾದ ದೊಡ್ಡ ಪ್ರಾಣಕ್ಕೆ ಎಷ್ಟು ಇದೆಯೋ ಅಷ್ಟು. ಇದನ್ನು ಯೋಗವಿದ್ಯೆ ಇಲ್ಲದೆ ಅರ್ಥ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಕೃಷ್ಣನನ್ನು ನಾಗರಹಾವು ಕಚ್ಚಿತು, ಅವನು ಸತ್ತು ಹೋದ ಅಂತ ಹೇಳ್ತಾರೆ, ನಾಗರಹಾವಲ್ಲ, ನಾಗ ಅನ್ನುವ ಉಪಪ್ರಾಣ ಅವನ ವಶದಿಂದ ಹೊರಟುಹೋಯಿತು, ಈ ಪ್ರಾಣ ಬಹಳ ಸೂಕ್ಷ್ಮ. ತಲೆಯಲ್ಲೇ ಹೋಗಬೇಕು ಅಂತ ಇಲ್ಲ, ನಿಮ್ಮ ಮೈಮೇಲೆ ಎಷ್ಟು ರೋಮಕೂಪಗಳಿವೆ, ಅಷ್ಟು ರಂಧ್ರಗಳಿವೆ, ಆ ಯಾವ ರಂಧ್ರದಿಂದಲಾದರೂ ಪ್ರಾಣ ಹೊರಟುಹೋಗಬಹುದು. ಗೊತ್ತಾಯ್ತಲ್ಲಾ? ದಶಪ್ರಾಣಗಳು ಅಂತ ಹೇಳಿದೆನಲ್ಲಾ, ಅವು ಈ ಯಾವುದರ ಮುಖಾಂತರವಾಗಿಯೂ ಹೊರಟುಹೋಗಬಹುದು. ಪ್ರಾಣ ಅಂದರೆ ಒಳಕ್ಕೆ ತೆಗೆದುಕೊಳ್ಳುವುದು, ಅಪಾನ ಅಂದರೆ ಹೊರಗೆ ಬಿಡುವುದು. ಇಷ್ಟನ್ನು ನೀವು ಅರ್ಥ ಮಾಡಿಕೊಳ್ತೀರಿ. ಆದರೆ ಅದರಲ್ಲಿ ಮೆಟ್ಟಲು, ಮೆಟ್ಟಲುಗಳಿವೆ.
     'ಹತ್ತು ಪ್ರಾಣಗಳಿವೆ, ಅದೆಲ್ಲಾ ನಾಶವಾಗಲಿ' ಅಂದರೆ ಅದೆಲ್ಲಾ ನಿನ್ನ ವಶದಲ್ಲಿ ಇಲ್ಲದೇ ಇರಲಿ, ಈ ಪ್ರಾಣ, ಅಪಾನ, ಉದಾನ, ಸಮಾನ, ವ್ಯಾನ, ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ ಇವೆಲ್ಲಾ ನಿನ್ನ ಕೈತಪ್ಪಿ ಹೋಗಲಿ, ನೀನು ಪ್ರಾಣಸಹಿತನಾಗಿದ್ದರೂ ಕೂಡ ಪ್ರಾಣರಹಿತನಾಗಿ ಇರುತ್ತೀಯ. ತಿದಿ ಇದೆ, ಅದು ಪುಸ್, ಪುಸ್ ಅನ್ನುತ್ತೆ, ಆದರೂ ಕೂಡ ನೀನು ಪ್ರಾಣರಹಿತನಾಗೇ ಇರ್ತೀಯ. ತಿದಿಗೆ ಗೊತ್ತಾ, ನಾನು ಉಸಿರಾಡ್ತಾ ಇದೀನಿ, ಅಂತ? ನಿಜವಾಗಿ ನಿಮ್ಮ ಹೃದಯ, ಶ್ವಾಸಕೋಶ, ಎಲ್ಲಾ ನಿಮ್ಮ ಕೆಲಸಕ್ಕೆ ಬರೋ ಹಾಗೆ ಇರಬೇಕು. ಇದನ್ನು ಅರ್ಥ ಮಾಡಿಕೊಳ್ಳೋದಿಲ್ಲ, ಪರಮಾತ್ಮ ಎರಡು ಕಣ್ಣು ಕೊಟ್ಟ, ಒಂದು ನಾಲಿಗೆ ಕೊಟ್ಟ. ಎರಡು ಕಣ್ಣಿನಿಂದ ಎಷ್ಟು ನೋಡಿದರೂ, ಆಡಲು ಒಂದೇ ನಾಲಿಗೆ. ಅರ್ಧ ಮಾತ್ರ ಹೇಳು ಅಂತ. ಮತ್ತೆ ಎರಡು ಕಿವಿ ಕೊಟ್ಟ, ನಾಲಿಗೆ ಒಂದೇ ಕೊಟ್ಟ. ಕಿವಿಯಿಂದ ಏನೇನೋ ಕೇಳ್ತೀಯ. ಕೇಳಿದ್ದನ್ನೆಲ್ಲಾ ನಿಜ ಅಂದುಕೊಂಡು ಎಲ್ಲಾ ಹೇಳ್ತಾ ಹೋಗಬೇಡ. ನಾಲಿಗೆ ಮೇಲೆ ಹಿಡಿತ ಇರಬೇಕು, ಅಂತ. ನೀನು ಏನು ಕೇಳಿದಿ, ಸರಿಯೋ, ಅಲ್ಲವೋ, ಈರೀತಿ ಆಲೋಚನೆ ಮಾಡಿ ಮಾತನಾಡಬೇಕು. ಪ್ರಾಣಗಳ ಉಪಯೋಗ ಇದೆಯಲ್ಲಾ, ಬದುಕಿದ್ದಾಗ ಇದರ ಬೆಲೆ ಗೊತ್ತಾಗಲ್ಲ, ಹೃದಯದಲ್ಲೋ, ಶ್ವಾಸಕೋಶದಲ್ಲೋ ದೋಷ ಉಂಟಾಗಿ, ಉಸಿರಾಡಕ್ಕೆ ಕಷ್ಟ ಆದರೆ, ಆವಾಗ ಗೊತ್ತಾಗುತ್ತೆ.
     ಕುರುಡನಿಗೆ, ಹುಟ್ಟು ಕುರುಡನಿಗೆ ಕಣ್ಣಿನಿಂದ ಸುಖವೂ ಇಲ್ಲ, ದುಃಖವೂ ಇಲ್ಲ. ಅತಿ ಸುಂದರವಾದ ವಸ್ತುವನ್ನು ಅವನ ಎದುರಿಗೆ ಇಡಿ, ಅಥವ ಅತಿ ತುಚ್ಛವಾದ ವಸ್ತುವನ್ನು ಅವನ ಮುಂದಿಡಿ, ಅವುಗಳಿಂದ ಅವನ ಮೇಲೆ ಯಾವ ಪ್ರಭಾವವೂ ಆಗುವುದಿಲ್ಲ. ಮತ್ತೆ, ಇವನ್ನೆಲ್ಲಾ ಗಾಂಧೀಜಿ ಪರೀಕ್ಷೆ ಮಾಡಿ ನೋಡಿದಾರೆ. ತೊನ್ನು ರೋಗ ಅಂತ ಬರುತ್ತೆ, ಶ್ವೇತ ಕುಷ್ಟ. ಚರ್ಮ ಎಲ್ಲಾ ಬಿಳಿ ಆಗುತ್ತೆ. ನಾನು ಒಬ್ಬರನ್ನು ಕೇಳಿದೆ, ಮೊದಲು ಒಂದು ಕಡೆ ಆಗಿತ್ತು, ಆಮೇಲೆ ಮೈಮೇಲೆಲ್ಲಾ ಆಯಿತು. 'ಬಿಸಿನೀರು, ತಣ್ಣೀರು ಮುಟ್ಟಿದರೆ ಗೊತ್ತಾಗುತ್ತಾ?' 'ತುಂಬಾ ಬಿಸಿ ಆಗಿದ್ದರೆ, ಸುಟ್ಟು ಹೋಗುವ ಹಾಗೆ ಬಿಸಿ ಇದ್ದರೆ ಗೊತ್ತಾಗುತ್ತೆ, ಸಾಧಾರಣ ಬಿಸಿ ನನಗೆ ಗೊತ್ತಾಗುವುದಿಲ್ಲ'. ಚರ್ಮ ಇದೆಯಲ್ಲಾ, ಅದರ ಪೊರೆ ಸತ್ತುಹೋಗಿದೆ. ಇದೆಲ್ಲಾ ಯಾವಾಗ ಗೊತ್ತಾಗುತ್ತೆ? ಕಾಲು ಮುರಿದ ಮೇಲೆ ಕುಂಟುತನ ಏನು ಅನ್ನುವುದು ಗೊತ್ತಾಗುತ್ತೆ. ಅದೇನು ಮಹಾ, ಎಷ್ಟು ಜನ ಕುಂಟರು ಇದ್ದಾರೆ, ಬದುಕಿಲ್ವಾ ಅವರು? ಅಂತೆಲ್ಲಾ ಅಂದುಕೊಳ್ಳೋರಿಗೆ, ಅವರಿಗೇ ಆ ಕಷ್ಟ ಬಂದಾಗ ಗೊತ್ತಾಗುತ್ತೆ.
ಯೋಗ, ಹಠಯೋಗ
     ಮೂಗಿಗೆ ಒಂದು ಕ್ರಿಯೆ ಇದೆ, ಬಸ್ತಿ. ಮೊಸರಿನಿಂದಲಾಗಲೀ, ಜೇನಿನಿಂದಾಗಲೀ ಬತ್ತಿಯನ್ನು ನೆನೆಸಿ ಮೂಗಿನ ಒಂದು ಹೊಳ್ಳೆಯಿಂದ ಇನ್ನೊಂದು ಹೊಳ್ಳೆಯ ಮೂಲಕ ಹಾಯಿಸಿ ಮೂಗನ್ನು ಶುದ್ಧ ಮಾಡಿಕೊಳ್ಳುವುದು. ಸ್ವಲ್ಪ ದಾರಿ ತಪ್ಪಿತೋ, ವಾಸನಾಗ್ರಹಣಶಕ್ತಿಯೇ ಹೊರಟುಹೋಗುತ್ತದೆ. ನನಗೆ ಗೊತ್ತಿರುವ ಒಬ್ಬ ದೊಡ್ಡ ಯೋಗಾಚಾರ್ಯರು ಹೇಳೋರು, 'ಪಂಡಿತಜಿ, ಅದೇನು ವಾಸನೆ, ವಾಸನೆ ಅಂತೀರಲ್ಲಾ, ನನಗೆ ಏನೂ ವಾಸನೆಯೇ ಬರೋದಿಲ್ಲ'. ಇದಕ್ಕಾ ಬಸ್ತಿ ಕ್ರಿಯೆ ಮಾಡೋದು? ಆಮೇಲೆ ಇನ್ನೊಂದು ಸಲ ಹೇಳಿದರು, 'ನಾನು ಬಸ್ತಿಕ್ರಿಯೆ ಮಾಡಿಕೊಳ್ಳದೇ ಕಕ್ಕಸಕ್ಕೇ ಹೋಗುವುದಿಲ್ಲ'. ಯೋಗ ನಾವು ಮಾಡೋದು, ಪಾಕೃತಿಕ ಕ್ರಿಯೆಗಳಿಗೆ ಸಹಾಯ ಮಾಡೋಕೆ ಹೊರತು ಅದನ್ನು ಕೊಲ್ಲುವುದಕ್ಕೆ ಅಲ್ಲ. ಅದನ್ನು ಕೊಂದರೆ ನಮಗೆ ನಷ್ಟವೇ ಆಯಿತು, ನಮಗೆ ಲಾಭವಿಲ್ಲ. ಈ ಹಠಯೋಗದವರು ಕೆಲವರು ಜನಕ್ಕೆ ಮೋಸ ಮಾಡ್ತಾರೆ. ನನ್ನ ಹತ್ತಿರ ಒಬ್ಬ ಹಠಯೋಗಿ ಬಂದ. ಕೇಳಿದೆ: 'ನೀನು ಏನೇನು ಮಾಡ್ತೀಯಪ್ಪಾ?' ಹಠಯೋಗಿ ಹೇಳ್ತಾನೆ, 'ನಾನು ಒಂದು ಗುಂಡಿ ತೋಡಿ ಅದರಲ್ಲಿ ನನ್ನ ತಲೆಯಿಟ್ಟು ತಲೆಕೆಳಗಾಗಿ ನನ್ನ ಕಾಲು ಮೇಲೆ ಇಟ್ಟುಕೊಂಡು ನಿಲ್ತೀನಿ'. 'ಎಷ್ಟು ಹೊತ್ತು ನಿಲ್ತೀಯ?' 'ಐದು ನಿಮಿಷ ಇರ್‍ತೀನಿ'. 'ಆಮೇಲೆ?' 'ಇಲ್ಲ'. ಮತ್ತೆ ನಾನು ಹೇಳಿದೆ 'ಇದು ಯಾತಕ್ಕೆ ಕಷ್ಟ. ಶೀರ್ಷಾಸನ ಮಾಡು. ಎರಡೂ ಕೈಗಳ ಆಧಾರದಲ್ಲಿ ತಲೆ ಕೆಳಗಾಗಿ ಇದ್ದಂತೆಯೆ ನಡೆದುಕೊಂಡು ಹೋಗು'. ಹೀಗೆ ನಾನೂ ಮಾಡ್ತಾ ಇದ್ದೆ. ಕಾಲಿಗೆ ತೊಂದರೆ ಆದ ನಂತರ ಮಾಡಕ್ಕೆ ಆಗಲಿಲ್ಲ. ಅದಕ್ಕೆ ಮೊದಲು ಮಾಡ್ತಾ ಇದ್ದೆ. ಒಂದು ಸಲ ಬಿದ್ದುಬಿಟ್ಟೆ. ಆಗ ಅನ್ನಿಸಿತು. 'ಎಂಥಾ ಕೆಲಸ ಮಾಡ್ತಾ ಇದೀನಿ ನಾನು? ಕಾಲು ಓಡಾಡಕ್ಕೆ ಅಂತ ಭಗವಂತ ಕೊಟ್ಟಿದಾನೆ. ಅದನ್ನು ಬಿಟ್ಟು ಕೈಮೇಲೆ ಓಡಾಡಕ್ಕೆ ಹೋಗ್ತಾ ಇದ್ದೆನಲ್ಲಾ! ತಲೆ ಕೆಳಗಾಗಿ ನಡೆಯುವುದಾಗಿದ್ದರೆ ಭಗವಂತ ತಲೆಯ ಮೇಲೇ ಕಾಲು ಕೊಡ್ತಾ ಇದ್ದ.' ಇದೆಲ್ಲಾ ಹಾಸ್ಯಾಸ್ಪದ ವಿಚಾರ ಅಲ್ಲ. ವಿಚಾರ ಮಾಡಿ, ನಿಮಗೇ ತಿಳಿದೀತು!
-ಕ.ವೆಂ.ನಾಗರಾಜ್.
**************
ಅಡಕ ಫೋಟೋ: 
ಪಂಡಿತಜಿಯವರ 113ನೆಯ ಜನ್ಮದಿನದ ಸಂದರ್ಭದಲ್ಲಿ ಕೇಕು ಕತ್ತರಿಸಲು ಅಂದಿನ ಲೋಕಾಯುಕ್ತ ಜಸ್ಟಿಸ್ ಸಂತೋಷ ಹೆಗ್ಡೆಯವರು ಪಂಡಿತರಿಗೆ ಸಹಕರಿಸುತ್ತಿರುವುದು.
**************
ದಿನಾಂಕ 01.07.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

2 ಕಾಮೆಂಟ್‌ಗಳು:

  1. ಬಹಳ ಸುಂದರ ಮತ್ತು ಜ್ಞಾನದಾಯೀ ಲೇಖನ. ಓದಿ ಮತ್ತೊಮ್ಮೆ ಮಗದೊಮ್ಮೆ ಒದಬೇಕೆಂದೆನಿಸುತ್ತದೆ. ಹಂಚಿಕೊಂಡದ್ದಕ್ಕೆ ಧನ್ಯವಾದಗಳು, ನಾಗರಾಜ್ ಅವರೇ ನಮಸ್ಕಾರ.

    ಪ್ರತ್ಯುತ್ತರಅಳಿಸಿ