ಜ್ಞಾನವಿಹೀನನಾದ ಮಾನವ, ಕರ್ತವ್ಯಾಕರ್ತವ್ಯಗಳ ನಿರ್ಣಯ ಮಾಡಲಾರದೆ, ಪಾಪಮಾರ್ಗದಲ್ಲಿ ಕಾಲಿಡುತ್ತಾನೆ. ನಿಜವಾಗಿ ಅಜ್ಞಾನದೆಶೆಯಲ್ಲಿ ನಡೆಯುವುದೆಂದರೆ, ಕತ್ತಲಿನಲ್ಲಿ ಎಡವಿದಂತೆಯೇ ಸರಿ. ಅಜ್ಞಾನವೆಂದರೆ ಆಧ್ಯಾತ್ಮಿಕ ಕತ್ತಲೆಯೆಂದು ಹೇಳಿಯೇ ಇದ್ದೇವೆ. ಅದೇ ಕಾರಣದಿಂದ, ವಿವಿಧ ಜ್ಞಾನಸಂಪನ್ನರಾದ ವಿದ್ವಾಂಸರಲ್ಲಿ ಜಿಜ್ಞಾಸುವಾದ ಜೀವನು ಈ ರೀತಿ ಮೊರೆಯಿಡುತ್ತಾನೆ:-
ಅದಿತೇ ಮಿತ್ರ ವರುಣೋತ ಮೃಳ ಯದ್ ವೋ ವಯಂ ಚಕ್ರುಮಾ ಕಚ್ಚಿದಾಗಃ |ಉರ್ವಶ್ಯಾಮಭಯಂ ಜ್ಯೋತಿರಿಂದ್ರ ಮಾ ನೋ ದೀರ್ಘಾ ಅಭಿ ನಶನ್ತಮಿಸ್ರಾಃ || (ಋಕ್. ೨.೨೭.೧೪.)
[ಅದಿತೇ] ಓ, ಪ್ರಾಮಾಣಿಕನಾದ ವಿದ್ವಾಂಸನೇ, [ವಯಮ್] ನಾವು [ಯತ್ಕಚ್ಚಿದಾಗಃ] ಏನೊಂದು ಪಾಪವನ್ನೂ, [ವಃ] ನಿನ್ನಂತಹ ಜ್ಞಾನಿಗಳ ಬಗೆಗೆ [ಚಕೃಮಾ] ಮಾಡುತ್ತೇವೋ, ಅದನ್ನು [ಮೃಳ] ಸುಧಾರಿಸು. [ಮಿತ್ರ] ಸ್ನೇಹಪರ ವಿದ್ವಾಂಸನೇ, ನೀನೂ ಸುಧಾರಿಸು. [ಉತ] ಹಾಗೆಯೇ [ವರುಣ] ದುಃಖನಿವಾರಕನಾದ ಜ್ಞಾನಿಯೇ, [ಮೃಳ] ನೀನೂ ಸುಧಾರಿಸು. [ಇಂದ್ರ] ಓ, ಜಿತೇಂದ್ರಿಯನಾದ ವಿದ್ವಾಂಸನೇ, [ಉರು ಅಭಯಂ ಜ್ಯೋತಿಃ] ಮಹತ್ತಾದ, ಅಭಯಪ್ರದವಾದ, ಜ್ಞಾನಜ್ಯೋತಿಯನ್ನು, [ಅಶ್ಯಾಮ್] ಅನುಭವಿಸುವೆ. ದೀರ್ಘಾಃ ತಮಿಸ್ರಾಃ] ದೀರ್ಘವಾದ ಅಜ್ಞಾನಾಂಧಕಾರಗಳು, [ನಃ ಮಾನಶನ್] ನನ್ನನ್ನು ಆವರಿಸದಿರಲಿ.
ಈ ಜ್ಯೋತಿಯ ಕಾಮನೆ ಮತ್ತು ಜ್ಯೋತಿರ್ಧಾರಣೆ ಆದರ್ಶ ಜೀವನ ಮಾರ್ಗದ ವೈಶಿಷ್ಟ್ಯವೇ ಆಗಿದೆ. ಪ್ರಜ್ಞಾನ ಸ್ವರೂಪನಾದ ಪರಮಾತ್ಮನಲ್ಲಿಯೂ ವೇದಾನುಯಾಯಿಗಳ ಮೊರೆಯೂ ಇದೇ ಆಗಿದೆ.
*****************
-ಪಂ. ಸುಧಾಕರ ಚತುರ್ವೇದಿ.
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2011/04/blog-post_26.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ