ಋತದ, ಅಂದರೆ, ಈಶ್ವರೀಯ ವಿಧಾನವಾದ ಧರ್ಮದ ರಕ್ಷಕನು ತನ್ನ ಹೃದಯದಲ್ಲಿ ಮೂರು ಪವಿತ್ರ ತತ್ತ್ವಗಳನ್ನು ರೂಢಿಸಿಕೊಳ್ಳುತ್ತಾನೆ, ಜ್ಞಾನ, ಕರ್ಮ, ಉಪಾಸನೆಗಳೇ ಆ ಮೂರು ತತ್ತ್ವಗಳು ಎಂದು ಹೇಳಿದ್ದೇವಷ್ಟೇ? ಅವು ಮೂರೂ ಧರ್ಮದ ಕೇವಲ ಅಂಗಗಳಲ್ಲ, ಧರ್ಮದ ಅಭಿನ್ನವಾದ, ಅವಿಚ್ಛಿನ್ನವಾದ ಅಂಗಗಳು. ಆ ಮೂರರಲ್ಲಿ ಯಾವುದೊಂದು ನಷ್ಟವಾದರೂ, ಧರ್ಮ ಪರಿಪೂರ್ಣವಾಗಿ ಉಳಿಯುವುದಿಲ್ಲ. ವೇದ ಎಂಬ ಶಬ್ದದ ಅರ್ಥ, ಜ್ಞಾನ ಎಂದು. ಋಗ್ವೇದ - ಅಥರ್ವವೇದಗಳಲ್ಲಿ ಮುಖ್ಯತಃ ಆಧ್ಯಾತ್ಮಿಕ, ಭೌತಿಕ ಜ್ಞಾನ-ವಿಜ್ಞಾನಗಳೂ, ಯಜುರ್ವೇದದಲ್ಲಿ ಮುಖ್ಯತಃ ಕರ್ಮವಿಧಾನವೂ, ಸಾಮವೇದದಲ್ಲಿ ಮುಖ್ಯತಃ ಉಪಾಸನಾ ಸಂವಿಧಾನವೂ ಉಪದೇಶಿಸಲ್ಪಟ್ಟಿವೆ. ಇದೇ ಕಾರಣದಿಂದ, ಈಶ್ವರೋಕ್ತ ವೇದಗಳು ಸಂಖ್ಯೆಯಲ್ಲಿ ನಾಲ್ಕು ಇದ್ದರೂ, ಚತುರ್ವೇದವೇತ್ತರನ್ನು ತ್ರೈವಿದ್ಯರು ಎಂದು ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ.
ಧರ್ಮದ ಪ್ರಥಮ ಅಂಗವಾದ ಜ್ಞಾನವನ್ನು ತೆಗೆದುಕೊಳ್ಳೋಣ. ಜ್ಞಾನವು ಧರ್ಮದ ಶಿರಸ್ಸಿದ್ದಂತೆ. ವೇದವು ಹೇಳುತ್ತಲಿದೆ:-
ಜ್ಯೋತಿರ್ವೃಣೀತ ತಮಸೋ ವಿಜಾನನ್ನಾರೇ ಸ್ಯಾಮ ದುರಿತಾದಭೀಕೇ |
ಇಮಾ ಗಿರಃ ಸೋಮಪಾಃ ಸೋಮವೃದ್ಧ ಜುಷಸ್ವೇಂದ್ರ ಪುರುತಮಸ್ಯ ಕಾರೋಃ ||
(ಋಕ್. ೩.೩೯.೭.)
ಮಾನವನು, [ತಮಸಃ] ಅಂಧಕಾರದಿಂದ ಸರಿದು, [ವಿಜಾನನ್] ಜ್ಞಾನವನ್ನು ಗಳಿಸಿ, [ಜ್ಯೋತಿರ್ವೃಣೀತ] ಜ್ಯೋತಿಯನ್ನು ಪಡೆದುಕೊಳ್ಳಬೇಕು. ಹೀಗೆ ಮಾಡಿದಾಗಲೇ, ದುರಿತಾತ್ ಅರೇ] ದುರ್ಗತಿಯಿಂದ ದೂರಸರಿದು, [ಅಭೀಕೇ ಸ್ಯಾಮ] ನಿರ್ಭಯನಾದ ಸ್ಥಿತಿಯಲ್ಲಿ ಇರಬಲ್ಲೆವು. ಆದಕಾರಣ, [ಸೋಮಪಾಃ] ವಿವೇಚನೆಯನ್ನು ಕಾಪಾಡಿಕೊಳ್ಳುವ, [ಸೋಮವೃದ್ಧ] ವಿವೇಕದಿಂದಲೇ ವರ್ಧಿತನಾಗುವ [ಇಂದ್ರ] ದೇಹಾಧೀಶನಾದ ಇಂದ್ರಿಯವಂತನಾದ ಜೀವನೇ! [ಪುರುತಮಸ್ಯ] ಪೂರ್ಣತಮನಾದ [ಕಾರೋಃ] ಜಗತ್ಕರ್ತೃವಿನ, [ಇಮಾ ಗಿರಃ] ಈ ಮಾತುಗಳನ್ನು [ಜುಷಸ್ವ] ಪ್ರೀತಿಯಿಂದ ಆಲಿಸು.
ಈ ಮಂತ್ರದಲ್ಲಿ ಉಕ್ತವಾಗಿರುವ ಅಂಧಕಾರ, ಭೌತಿಕ ಪ್ರಕಾಶದ ಅಭಾವವಲ್ಲ, ಆಧ್ಯಾತ್ಮಿಕವಾದ ಅಂಧಕಾರ, ಎಂದರೆ ಅಜ್ಞಾನ. ಇಲ್ಲಿ ಹೇಳಿರುವ ಜ್ಯೀತಿಯೂ ಭೌತಿಕ ಪ್ರಕಾಶವಲ್ಲ, ಆಧ್ಯಾತ್ಮಿಕ ಪ್ರಕಾಶ, ಎಂದರೆ ಜ್ಞಾನ. ದುರಿತದಿಂದ, ದುರ್ವೃತ್ತಿಯಿಂದ, ದುರಾಚಾರದಿಂದ ಸರಿದು ಅಭಯದ ಸ್ಥಿತಿಯನ್ನು ಮುಟ್ಟುವ ಉಪದೇಶವಿರುವುದರಿಂದ, ಈ ನಮ್ಮ ಕಥನದ ಔಚಿತ್ಯ ಸ್ಪಷ್ಟವಾಗುವುದು. ಈ ಬಗೆಯ ನಿರ್ಮಲಜ್ಞಾನ ಪಡೆಯಲಾರದ ಮಾನವ, ಆಕಾರದಿಂದ ಮಾತ್ರ ಮಾನವನಾಗಿ ಕಂಡರೂ, ವಸ್ತುತಃ ಪಶುವಿಗಿಂತ ನೀಚ ಮಟ್ಟದಲ್ಲಿರುತ್ತಾನೆ. ಕಾರಣವೇನೆಂದರೆ, ಕೇವಲ ಸ್ವಾಭಾವಿಕ ಪ್ರವೃತ್ತಿಯಿಂದ ಜೀವನ ನಡೆಯಿಸುವ ಪಶುಗಳು ಮತ್ತು ಪಕ್ಷಿಗಳೂ ಕೂಡ, ಮಾರ್ಗ ತಪ್ಪಿ ನಡೆಯುವ ಸಂಭವವಿಲ್ಲ. ಆದರೆ ಜ್ಞಾನವಿಹೀನನಾದ ಮಾನವ, ಕರ್ತವ್ಯಾಕರ್ತವ್ಯಗಳ ನಿರ್ಣಯ ಮಾಡಲಾರದೆ, ಪಾಪಮಾರ್ಗದಲ್ಲಿ ಕಾಲಿಡುತ್ತಾನೆ. ನಿಜವಾಗಿ ಅಜ್ಞಾನದೆಶೆಯಲ್ಲಿ ನಡೆಯುವುದೆಂದರೆ, ಕತ್ತಲಿನಲ್ಲಿ ಎಡವಿದಂತೆಯೇ ಸರಿ. ಅಜ್ಞಾನವೆಂದರೆ ಆಧ್ಯಾತ್ಮಿಕ ಕತ್ತಲೆಯೆಂದು ಹೇಳಿಯೇ ಇದ್ದೇವೆ.
************
-ಪಂ.ಸುಧಾಕರ ಚತುರ್ವೇದಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ