ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜೂನ್ 8, 2011

ದೇಹದಾನ: 'ಮೇಲಕ್ಕೇರಿದ ಮೈಲಾರ ಶರ್ಮ' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನನ್ನ ಉತ್ತರ:

     ನನ್ನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನನ್ನ ಮರುಪ್ರತಿಕ್ರಿಯೆ ದೀರ್ಘವಾದುದರಿಂದ ಈ ಪ್ರತ್ಯೇಕ ಲೇಖನ. ಮೊದಲು ಈ ಸುದ್ದಿಯನ್ನು ನೋಡಿ:
ಮೆರೆದ ಮಾನವೀಯತೆ:
     (08-06-2011ರಂದು) ಮೈಸೂರಿನಲ್ಲಿ ಕಾಡಾನೆಯ ತುಳಿತಕ್ಕೆ ಸಿಕ್ಕು ಮೃತರಾದ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎ.ಟಿ.ಎಮ್.ನ ಸೆಕ್ಯೂರಿಟಿ ಗಾರ್ಡ್ 55 ವರ್ಷದ ಶ್ರೀ ರೇಣುಕಾಪ್ರಸಾದ್ ರವರ ಕಣ್ಣುಗಳನ್ನು ಅವರ ಬಂಧುಗಳು ದಾನ ಮಾಡಿದ ಕುರಿತು ದೂರದರ್ಶನದಲ್ಲಿ ವರದಿ ಬಂದಿತ್ತು. ಕಣ್ಣೆದುರೇ ಜರುಗಿದ ಕುಟುಂಬದ ಆಧಾರಸ್ಥಂಭವಾಗಿದ್ದ ರೇಣುಕಾಪ್ರಸಾದರ ದಾರುಣ ಸಾವಿನ ನೋವಿನ ನಡುವೆಯೂ ಬಡಕುಟುಂಬದ ಬಂಧುಗಳು ಮಾನವೀಯತೆ, ಸಮಾಜದ ಕಾಳಜಿ ಮೆರೆದಿದ್ದು ಅವರು ಅಭಿನಂದನಾರ್ಹರಾಗಿದ್ದಾರೆ.
********************
     ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದಿಸುವೆ. ಚಿಂತನೆ, ಜಿಜ್ಞಾಸೆಗಳಿಗೆ ಅವಕಾಶವಾದ ಲೇಖನ ಸಾರ್ಥಕವೆಂದು ಅನ್ನಿಸಿದೆ. ಪ್ರಾರಂಭದಲ್ಲೇ ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಪೂರ್ವಾಗ್ರಹ ಪೀಡಿತನಾಗಿ ನನ್ನದೇ ಅಭಿಪ್ರಾಯ ಸರಿಯೆಂದು ವಾದಿಸಲು ಹೋಗುವುದಿಲ್ಲ, ಆದರೆ ನಾನು ಹೊಂದಿರುವ ಅಭಿಪ್ರಾಯ ಸರಿಯಲ್ಲವೆಂದು ನನಗೆ ಮನವರಿಕೆಯಾಗುವವರೆಗೂ ಅದನ್ನು ಬದಲಾಯಿಸಿಕೊಳ್ಳುವ ಮನೋಭಾವ ನನ್ನದಲ್ಲ. ನಡೆದುಕೊಂಡು ಬಂದಿರುವ ನಡವಳಿಕೆಗಳು/ ಸಂಪ್ರದಾಯಗಳು/ ವಸ್ತುಸ್ಥಿತಿಯೊಂದಿಗೆ ರಾಜಿ/ಹೊಂದಾಣಿಕೆ ಮಾಡಿಕೊಳ್ಳುವೆನಷ್ಟೆ. ನನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿರುವವರ ಅಭಿಪ್ರಾಯಗಳಿಗೆ ನಾನು ವಿರೋಧಿಯಲ್ಲ. ಅದು ಅವರ ಹಕ್ಕು, ಅದನ್ನು ಗೌರವಿಸುವೆ. ಅಂತಹವರ ಅಭಿಪ್ರಾಯಗಳಿಂದ ನಾನು ನೊಂದುಕೊಳ್ಳುವುದಾಗಲೀ, ಬೇಸರಪಟ್ಟುಕೊಳ್ಳುವುದಾಗಲೀ ಮಾಡುವುದಿಲ್ಲ. ವೈಚಾರಿಕ ಭಿನ್ನತೆಯೂ ಸಹ ಚಿಂತನೆ, ಜಿಜ್ಞಾಸೆಗಳಿಗೆ ಸಹಕಾರಿ.ಎಲ್ಲರಿಗೂ ಒಟ್ಟಿಗೆ ಪ್ರತಿಕ್ರಿಯಿಸಿದರೆ ದೊಡ್ಡದಾಗುವ ಕಾರಣದಿಂದ ಇದನ್ನು ಪ್ರತ್ಯೇಕವಾಗಿ ಪ್ರಕಟಿಸಿರುವೆ. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ವಂದನೆಗಳು. 
     ಮಿತ್ರ ಶ್ರೀಧರರು ಭಾವನಾತ್ಮಕವಾಗಿ ಪತಿ-ಪತ್ನಿಯರ ಮತ್ತು ಇತರ ಸಂಬಂಧಿಕರ ಭಾವನೆಗಳ ಬಗ್ಗೆ ಹೇಳುತ್ತಾರೆ. ಸಂಬಂಧಗಳು ಮಧುರವಾಗಿರಲೇಬೇಕು, ಅದಕ್ಕಾಗಿ ಪತಿ-ಪತ್ನಿಯರು ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಎಂಬುದು ಸರಿ. ನಿಜ, ಮೃತರಾದ ನಂತರ ಅಂತ್ಯ ಸಂಸ್ಕಾರವಾಗುವವರೆಗೂ ಜಡವಾದ ಶರೀರವನ್ನು ನೋಡಲು, ಕಡೆಯ ಸಲವಾದರೂ ಕಣ್ತುಂಬಿಕೊಳ್ಳಲು ಬಯಸುವುದು ಮಾನವ ಸಹಜ ಗುಣ. ಮೃತರೊಡನೆ ನಾವು ಹೊಂದಿದ್ದ ಆತ್ಮೀಯತೆ ಅನುಸರಿಸಿ ಅವರನ್ನು ದೀರ್ಘಕಾಲದವರೆಗೂ ನೆನಪಿಸಿಕೊಳ್ಳುತ್ತಿರುತ್ತೇವೆ. ಸಾಂಸಾರಿಕ ಜೀವನಕ್ಕೂ, ಮೃತರಾದ ನಂತರದ ಉತ್ತರಕ್ರಿಯೆಗಳಿಗೂ ತಳುಕು ಹಾಕುವುದು ತರವಲ್ಲ. 'ಎಲ್ಲರೂ ದೇಹದಾನ ಮಾಡಲು ತೊಡಗಿದರೆ ಮುಂದೊಂದು ದಿನ ದೇಹ ಪಡೆಯಲು ಆಸ್ಪತ್ರೆಯವರೂ ಮುಂದೆ ಬರಲಾರರು' ಎಂಬ ಮಾತಿಗೆ ನಾನು ಪ್ರತಿಕ್ರಿಯಿಸುವುದೇನೆಂದರೆ ಅಂತಹ ಸ್ಥಿತಿ ಬರಲಿ ಎಂದು. ಅಗತ್ಯವಿರುವ ವಸ್ತುಗಳನ್ನು ಕೊಟ್ಟರೆ ಅದು ದಾನ, ಅದು ಅಗತ್ಯ. ಒಂದು ವೇಳೆ ಅಂತಹ ಅಗತ್ಯವಿಲ್ಲದಿದ್ದರೆ ದೇಹವನ್ನು ಸುಡುವುದು ಒಳ್ಳೆಯ ಕೆಲಸ. ಶರೀರದ ಮಾರಾಟ ಒಂದು ದಂಧೆಯಾದರೂ, ನೆಗಡಿಯೆಂದು ಮೂಗನ್ನೇ ಕತ್ತರಿಸುವುದಿಲ್ಲವಲ್ಲವೇ? ಬದುಕಿರುವಾಗಲೇ ತಮ್ಮ ಆತ್ಮೀಯರಿಗಾಗಿ ತಮ್ಮ ಒಂದು ಕಿಡ್ನಿಯನ್ನು ಕೊಟ್ಟ ಪುಣ್ಯಾತ್ಮರು ಇರುವ ಭೂಮಿಯಿದು. ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ, ನರಕಯಾತನೆ ಪಡುತ್ತಿರುವವರನ್ನು ನೋಡಿದವರಿಗೆ, ಸತ್ತ ಮೇಲಾದರೂ ನಮ್ಮ ಶರೀರದ ಕಿಡ್ನಿ ಅವರ ಬದುಕಿಗೆ ಬೆಳಕಾಗುವುದಾದರೆ ಸಾರ್ಥಕವೆಂದು ಅನ್ನಿಸುವುದಿಲ್ಲವೇ? ಅನಾಥರ, ಚಿಕಿತ್ಸೆಗೆ ಬಂದವರ ಕಿಡ್ನಿಗಳನ್ನು ಚಿಕಿತ್ಸೆಯ ನೆಪದಲ್ಲಿ ಕಳ್ಳತನದಿಂದ ಶಸ್ತ್ರಚಿಕಿತ್ಸೆ ಮಾಡಿ ಅಪಹರಿಸುವವರ ಕುಕೃತ್ಯಕ್ಕೆ ಸಹ ಇಂತಹ ದೇಹದಾನದಿಂದ ಕಡಿವಾಣ ಬೀಳುವುದು. ಭಾರತದ ಜನಸಂಖ್ಯೆ ೧೧೦ ಕೋಟಿ. ಪ್ರತಿನಿತ್ಯದ ಸರಾಸರಿ ಅಂದಾಜು ಸಾವು ೬೨೩೮೯. ಸರಾಸರಿ ಅಂದಾಜು ಜನನ ೮೬೮೫೩. ಭಾರತದಲ್ಲಿನ ಅಂಧರ ಸಂಖ್ಯೆ ೬೮೨೪೯೭. ಸಾಯಲಿರುವ ಪ್ರತಿ ವ್ಯಕ್ತಿ ತನ್ನ ಕಣ್ಣುಗಳನ್ನು ದಾನ ಮಾಡಿದರೆ ಹತ್ತೇ ದಿನಗಳಲ್ಲಿ ಎಲ್ಲಾ ಅಂಧರಿಗೆ ಸಾಲುವಷ್ಟು ಕಣ್ಣುಗಳು ದೊರೆಯುತ್ತವೆ. ಭಾರತ ಸಾಧಿಸಬಹುದು. ಆದರೂ ಸಾಧಿಸಿಲ್ಲ. ಬೇರೆಯವರ ವಿಷಯ ಬೇಡ, ನಮ್ಮ ಕಣ್ಣುಗಳನ್ನು ದಾನ ಮಾಡಲು ನಾವು ನಿರ್ಧರಿಸಬಹುದಲ್ಲವೇ? 'ಶರೀರದಾನ ಮಾಡಿದರೆ ನಾವು ಜಡವಸ್ತುವಿನಂತೆ, ನಾವು ಭಾವನೆಗಳಿಲ್ಲದವರು' ಎಂಬುದು ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಸುಟ್ಟರೆ ಪೂರ್ಣ ಶರೀರ ನಾಶಗೊಳ್ಳುತ್ತದೆ. ದಾನ ಮಾಡಿದರೆ ಕನಿಷ್ಠ ಪಕ್ಷ ಮೃತರ ಕೆಲವು ಅಂಗಗಳಾದರೂ - ಕಿಡ್ನಿ, ಕಣ್ಣು, ಇತ್ಯಾದಿ - ಬೇರೆಯವರ ಶರೀರಗಳಲ್ಲಿ ಬದುಕಿರುತ್ತವೆ, ಅದರಿಂದ ಅವರುಗಳ ಬಾಳೂ ಬೆಳಕಾಗಿದೆ ಎಂಬುದನ್ನು ಜ್ಞಾಪಿಸಿಕೊಂಡರೆ ಧನ್ಯತೆಯ ಭಾವನೆ ಮೂಡಬಹುದು. ದೇಹದಾನ ಮಾಡಬಯಸುವವರು ಮತ್ತು ಸಹಕರಿಸುವ ಕುಟುಂಬದವರಿಗೆ ಸಹ ದೇಹ ಸುಡುವವರಿಗೆ/ಹೂಳುವವರಿಗೆ ಭಾವನೆಗಳು, ಕಳಕಳಿಯಿಲ್ಲವೆಂದು ಅನ್ನಿಸಬಹುದಲ್ಲವೇ? 
     'ಬದುಕು ಮತ್ತು ಭಾವನೆಗಳಿಗೆ ಅವಿನಾಭಾವ ಸಂಬಂಧವಿದೆ. ಭಾವನಾರಹಿತ ಜೀವನವು ಬದುಕೇ ಅಲ್ಲ. ಒಮ್ಮೆ ಭಾವನೆಗಳು ನಾಶವಾಗುತ್ತಾ ಬಂದರೆ ಬದುಕು ಯಾಂತ್ರಿಕ. ಇಂತಹ ಬದುಕು ಬೇಕೆ? ಅಥವಾ ಭಾವನೆಗಳ ಜೊತೆಗೆ ಪ್ರೀತಿವಾತ್ಸಲ್ಯ ಮಮಕಾರಗಳಿಂದ ಕೂಡಿದ ಜೀವನ ಬೇಕೆ?' ಎಂಬ ಶ್ರೀಧರರ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ದೇಹವನ್ನು ಸುಟ್ಟರೆ ಮಾತ್ರ ಪ್ರೀತಿ, ವಿಶ್ವಾಸಗಳಿವೆ, ದಾನ ಮಾಡಿದರೆ ಇಲ್ಲ ಎಂಬಲ್ಲಿ ಮಾತ್ರ ನಾನು ಭಿನ್ನನೆನಿಸಿಕೊಳ್ಳುವೆ. 'ಭಾವನಾರಹಿತವಾದ ಪತಿ/ಪತ್ನಿ/ಮಕ್ಕಳು ಮಾತ್ರ ದೇಹದಾನ ಮಾಡಲು ಒಪ್ಪ ಬಲ್ಲರು ಅಥವಾ ಆ ಮಟ್ಟಕ್ಕೆ [ಅದು ಅತ್ಯುನ್ನತ ಸ್ಥಿತಿ ಎಂದು ನಾನು ತಿಳಿಯುವೆ] ಕುಟುಂಬದವರೆಲ್ಲಾ ಬೆಳೆದಿರಬೇಕು' ಎಂಬ ಅವರ ಮಾತಿನಲ್ಲೇ ವಿರೋಧಾಭಾಸ ನನಗೆ ಕಂಡಿದೆ. ಒಂದೆಡೆ ಭಾವನಾರಹಿತರಾದವರು ಇನ್ನೊಂದೆಡೆ ಅತ್ಯುನ್ನತ ಸ್ಥಿತಿ ತಲುಪಿದವರು ಎಂದು ಅನ್ನಿಸಿಕೊಳ್ಳುವುದು ಸಾಧ್ಯವೇ? ಸಾವಿನ ವಿಷಯ ಬಂದಾಗ ಆತ್ಮೀಯರು ಆ ವಿಷಯ ಮಾತನಾಡಲು ಬಯಸುವುದಿಲ್ಲ. ಅಂತಹ ವಿಷಯ ಮಾತನಾಡಬೇಡ ಎಂದು ಬಾಯಿ ಮುಚ್ಚಿಸುವುದು ಸಾಮಾನ್ಯ. ನನ್ನ ಬರಹದ ಬಗ್ಗೆ ಮಿತ್ರ ಶ್ರೀಧರರ ಪ್ರತಿಕ್ರಿಯೆಯೂ ಸಹ ಇದಕ್ಕೆ ಒಂದು ಉದಾಹರಣೆ. ಅಂತಹುದರಲ್ಲಿ ಸಾವಿನ ನಂತರ ದೇಹದಾನ ಮಾಡುವ ವಿಚಾರದಲ್ಲಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸುವುದು ಕಷ್ಟ ಮತ್ತು ಸೂಕ್ಷ್ಮವಾದ ವಿಚಾರ. ಭಾವನೆ ಅರ್ಥವಾಗುವಂತೆ ಮತ್ತು ಒಪ್ಪಿಕೊಳ್ಳುವಂತೆ ಪರೋಕ್ಷವಾಗಿ ಹೇಳಬೇಕಾಗುತ್ತದೆ. ಆಗ ದೇಹದಾನ ಮಾಡಿದ ಮೈಲಾರಶರ್ಮರಂತಹವರು ನೆರವಿಗೆ ಬರುತ್ತಾರೆ. 
     ಶ್ರೀಯುತ ಜಗದೀಶರು ಉಲ್ಲೇಖಿಸಿದ 'ಶರೀರಮಾತ್ರಮ್ ಖಲುಧರ್ಮಸಾಧನಂ' ಎಂಬ ಉಕ್ತಿಗೆ ನನ್ನ ಸಹಮತವಿದೆ. ಧೃಢ ಮನಸ್ಸು ಮತ್ತು ಶರೀರಗಳಿಂದ ಅದ್ಭುತಗಳನ್ನು ಸಾಧಿಸಬಹುದು. ಆದರೆ ಈ ಮಾತು ಜೀವಂತ ಶರೀರಕ್ಕೆ ಅನ್ವಯಿಸುತ್ತದೆ. ಅವರಂತೆ ನನಗೂ ಸಹ 'ಪುನರಪಿ ಜನನಂ ಪುನರಪಿ ಮರಣಂ' ಎಂಬ ವಿಚಾರದಲ್ಲಿ ನಂಬಿಕೆಯಿದೆ. ದೇವನ ಅತ್ಯದ್ಭುತ ನಿರ್ಮಾಣವಾದ ನವರಸದರಮನೆಯಾದ ಈ ದೇಹ ಪಡೆಯುವಲ್ಲಿ ದೇವನ ಕರುಣೆಯೊಂದಿಗೆ ಜೀವಿಯ ಕರ್ಮಫಲವೂ ಸೇರುತ್ತದೆ. ಇಂತಹ ದೇಹದ ಒಡೆತನವನ್ನು ದೇವನನ್ನು ಹೊರತುಪಡಿಸಿ ಸ್ವತಃ ದೇಹದೊಡೆಯನೂ ಸೇರಿದಂತೆ ಯಾರಾದರೂ ಸಾಧಿಸಲು ಸಾಧ್ಯವೇ ಎಂಬುದೇ 'ತಾಯಿಯ ಸ್ವತ್ತಲ್ಲ, ತಂದೆಯ ಸ್ವತ್ತಲ್ಲ, ಪತ್ನಿಯ ಸ್ವತ್ತಲ್ಲ, ಮಕ್ಕಳ ಸ್ವತ್ತಲ್ಲ' ಎಂಬ ಮೂಢನ ಉದ್ಗಾರದ ಒಳಾರ್ಥ. ಭಗವದ್ಗೀತೆ ಬೋಧಿಸಿದಂತೆ ಪ್ರತಿ ಜೀವಿಯೂ ತನ್ನ ಕರ್ಮಕ್ಕೆ ತಕ್ಕಂತೆ ಫಲ ಪಡೆಯುತ್ತಾನೆ. ಎಲ್ಲರೂ ತಾವೇ ಬೇಯಿಸಿದ ಪದಾರ್ಥವನ್ನು ತಿನ್ನಲೇಬೇಕು. ಮೃತ ಶರೀರವನ್ನು ಸುಡಲಿ, ಬಿಡಲಿ, (ಕೇವಲ ಸುಡುವುದಕ್ಕೆ ಮಾತ್ರವಲ್ಲ, ಸಂಪ್ರದಾಯಕ್ಕನುಸಾರವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಿ, ಬಿಡಲಿ) ಅದು ಜೀವಿಯ ಪುನರ್ಜನ್ಮದ ಮೇಲೆ ಪರಿಣಾಮ ಬೀರಲಾರದು. ಜೀವಿತಾವಧಿಯಲ್ಲಿನ ಕರ್ಮಕ್ಕನುಗುಣವಾಗಿ ಮುಂದಿನ ಜನ್ಮವಿರುತ್ತದೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿದೆ. ಜಗದೀಶರು ಕೊಟ್ಟ 'ಕೇವಲ ಫೋಟೋದಲ್ಲಿನ ತಂದೆಯ ಚಿತ್ರದ ಕಣ್ಣಿಗೆ ಚುಚ್ಚಿದರೆ ಸಹಿಸುತ್ತಾರೆಯೇ' ಎಂಬ ಉದಾಹರಣೆ ಈ ವಿಷಯಕ್ಕೆ ಅಷ್ಟೊಂದು ಸೂಕ್ತವೆನಿಸದು. ಮೃತ ದೇಹಕ್ಕೆ ನೋವಾಗುತ್ತದೆ ಅಥವಾ ಸಂಬಂಧಿಕರ ಮನಸ್ಸಿಗೆ ನೋವಾಗುತ್ತದೆ ಅದನ್ನು ಸುಡದೆ/ಹೂಳದೆ ಇರುತ್ತಾರೆಯೇ? ಅವರಂತೆ ನಾನೂ ಸಹ ಯಾರ ಮನಸ್ಸನ್ನೂ ನೋಯಿಸಲು ಉದ್ದೇಶಿಸಿಲ್ಲ. ನನ್ನ ಅಭಿಪ್ರಾಯವನ್ನು ಎಲ್ಲರೂ - ನನ್ನ ಕುಟುಂಬದ ಸದಸ್ಯರುಗಳೂ ಸೇರಿ - ಒಪ್ಪಬೇಕೆಂದು ನನ್ನ ಆಗ್ರಹವಿಲ್ಲ. ಗಲ್ಲು ಶಿಕ್ಷೆಗೆ ಒಳಗಾದವರನ್ನೂ ಅವರ ಅಂತಿಮ ಇಚ್ಛೆ ಏನೆಂದು ಕೇಳಿ ಸಾಧ್ಯವಿದ್ದರೆ ನೆರವೇರಿಸುತ್ತಾರೆ. ಅದೇ ರೀತಿ ದೇಹದಾನ ಮಾಡಬಯಸುವವರು ಮೃತರಾದ ನಂತರ ಅವರ ಇಚ್ಛೆಯನ್ನು ನೆರವೇರಿಸುವುದು, ಬಿಡುವುದು ಸಂಬಂಧಿಕರಿಗೆ ಸೇರಿದ್ದು. ಕೆಲವು ಜಾತಿಗಳಲ್ಲಿ ಸತ್ತವರಿಗೆ ಇಷ್ಟವೆಂದು ಮಾಂಸ, ಮದ್ಯ, ಸಿಗರೇಟು, ಇತ್ಯಾದಿಗಳನ್ನೂ ಎಡೆ ಇಡುವುದನ್ನು ಕಂಡಿದ್ದೇನೆ. ಅಂತಹುದರಲ್ಲಿ ದೇಹದಾನ ಮಾಡಬಯಸಿದಲ್ಲಿ ಆ ಆಸೆಯನ್ನು ನೆರವೇರಿಸಲು ಸಂಬಂಧಿಕರು ಮನಸ್ಸು ಮಾಡಬಹುದು. ಇದನ್ನು ಬಾಲಿಶ ಹೇಳಿಕೆ ಎಂದು ಪರಿಗಣಿಸಿದರೆ ನನ್ನ ಅಭ್ಯಂತರವಿಲ್ಲ. ಸತ್ತ ನಂತರ ದೇಹದಾನ ಮಾಡುವೆನೆಂದು ಘೋಷಿಸುವವರಿಗಿಂತ ಆತನ ಇಚ್ಛೆಯಂತೆ ದೇಹದಾನ ಮಾಡುವ, ಮೃತನ ಆಸೆ ಈಡೇರಿಸುವ ಅವನ ಸಂಬಂಧಿಕರು ಶ್ರೇಷ್ಠರು! 
     ಮಿತ್ರ ಮಹೇಶ ಪ್ರಸಾದ ನೀರ್ಕಜೆಯವರ ಅಭಿಪ್ರಾಯಗಳು ನನ್ನ ಬರಹಕ್ಕೆ ಪೂರಕವಾಗಿದೆ. ನಡೆದ ಚರ್ಚೆಗಳು ಉಪಯುಕ್ತವಾಗಿದೆ. ಸಂಪದದಲ್ಲಿ ಮಿತ್ರ ಗಣೇಶರು ಬರೆದ ದೇಹದಾನ ಕುರಿತ ಲೇಖನ ಸಹ ಇದಕ್ಕೆ ಪೂರಕವಾಗಿದ್ದು ಅದನ್ನೂ ಓದಲು ವಿನಂತಿಸುವೆ. ಶ್ರೀಯುತ ಜಗದೀಶರೇ ಉಲ್ಲೇಖಿಸಿದ ಮುತ್ತಿನಂತಹ ಮಾತುಗಳಿಂದ ಮುಗಿಸುವೆ: “The most difficult requirement of becoming knowledgable is that you must give up certainty!” ಪೂರ್ವಾಗ್ರಹವಿಲ್ಲದೆ ನಮ್ಮದೇ ಸರಿಯೆಂಬ ವಿಚಾರಕ್ಕೆ ಅಂಟಿಕೊಳ್ಳದೆ ವಿಚಾರ ಮಾಡೋಣ, ವಿಮರ್ಶಿಸೋಣ, ನಿಜವ ತಿಳಿಯೋಣ!
ನಮಸ್ಕಾರಗಳು.
-ಕ.ವೆಂ.ನಾಗರಾಜ್. 
********************

ಹರಿಹರಪುರ ಶ್ರೀಧರ್ ರವರ ಅಭಿಪ್ರಾಯ:
[ಭಾವನಾರಹಿತವಾದ ಪತಿ/ಪತ್ನಿ/ಮಕ್ಕಳು ಮಾತ್ರ ದೇಹದಾನ ಮಾಡಲು ಒಪ್ಪ ಬಲ್ಲರು ಅಥವಾ ಆ ಮಟ್ಟಕ್ಕೆ [ಅದು ಅತ್ಯುನ್ನತ ಸ್ಥಿತಿ ಎಂದು ನಾನು ತಿಳಿಯುವೆ] ಕುಟುಂಬದವರೆಲ್ಲಾ ಬೆಳೆದಿರಬೇಕು' ಎಂಬ ಅವರ ಮಾತಿನಲ್ಲೇ ವಿರೋಧಾಭಾಸ ನನಗೆ ಕಂಡಿದೆ]
ನಿಮ್ಮ ಎಲ್ಲಾ ವಿವರಣೆಗಳೂ ಒಪ್ಪಬಲ್ಲಂತ ಮಾತುಗಳಾಗಿವೆ. ಆದರೆ ನನ್ನ ಈ ಮಾತು ಇದೆಯಲ್ಲಾ ಇಲ್ಲಿ ನೀವು ವಿರೋಧಾಭಾಸ ಕಾಣುತ್ತಿದ್ದೀರಿ. ಆದರೆ ನನಗೆ ಹಾಗೆನಿಸುವುದಿಲ್ಲ. ಹೌದು ದೇಹದಾನವನ್ನು ಅದರ ಹಿಂದಿರುವ ಮಹತ್ವವನ್ನು ಅರ್ಥಮಾಡಿಕೊಂಡು ಮಾಡಿದಾಗ ಅತ್ಯುನ್ನತ ಸ್ಥಿತಿ. ಸತ್ತವರ ಬಗ್ಗೆ ಪ್ರೀತಿಇಲ್ಲದೆ ದೇಹ ವಿಲೇವಾರಿಯಾದರೆಸಾಕೆಂದು ಮಾಡುವುದು ಭಾವನಾರಹಿತವಾದ ನಿರ್ಧಾರ. ಈ ದೃಷ್ಟಿಯಿಂದ ಹೇಳಿದೆ ಅಷ್ಟೆ. ನೀವು ಕೊಟ್ಟಿರುವ ವಿವರಣೆಯು ಶ್ರೇಷ್ಠವಾಗಿದೆ. ಮುಂದೆ ಒಂದುದಿನ ನನ್ನ ಮನಸ್ಸು ಬದಲಾಗಬಾರದೆಂದೇನೂ ಇಲ್ಲವಲ್ಲಾ! 
*******************
bkjagadish ರವರ ಅಭಿಪ್ರಾಯ:
Respected Nagaraj , 
Thank you for your learned comments and I hope to elaborate my point of views when I meet you & ಶ್ರೀಧರ್ ಜಿ some time in future .Surprisingly ಶ್ರೀಧರ್ ಜಿ did not touch my views which normally he does , but stressed his point in regard to ಭಾವನೆ only .While on the topic I wish to add what Sir Laurens Jan Van der post , an Afrikaner authour and inter alia Godfather of Prince William said :-
" HUMAN BEINGS ARE PERHAPS NEVER MORE FRIGHTENING THAN WHEN THEY ARE CONVINCED BEYOND DOUBT THAT THEY ARE RIGHT !! "
In fact I will be too pleased to inlude ಮಿತ್ರ ಮಹೇಶ ಪ್ರಸಾದ ನೀರ್ಕಜೆ also , but he refused to have any more discussion with me ( see his last comment ! ) and hence I am addressing this to you and ಶ್ರೀಧರ್ ಜಿ !. Let me now conclude with a quote by Andre Gide:-
" Everything has been said before, but since nobody listens we have to keep going back and beginning all over again." !!!
************** 
     ಶ್ರೀ ಜಗದೀಶರೇ, ನಿಮ್ಮ ಅಭಿಪ್ರಾಯದಲ್ಲಿ ಕೆಲವು ವಿದ್ವಜ್ಜನರ ಹೇಳಿಕೆಗಳನ್ನು ನೀಡಿದ್ದೀರಿ. ಅವು ಚೇತೋಹಾರಿ ಹೇಳಿಕೆಗಳು, ನಿಜ. ಆದರೆ ದೇಹದಾನಕ್ಕೆ ಸಂಬಂಧಿಸಿದ ಹೇಳಿಕೆಗಳಲ್ಲ, ದೇಹದಾನ ಮಾಡಬಾರದೆಂಬ ಹೇಳಿಕೆ ಪುಷ್ಟೀಕರಿಸುವಂತಹದಲ್ಲವೆಂದು ನಮ್ರನಾಗಿ ತಿಳಿಸಬಯಸುವೆ. ದೇಹದಾನ ಮಾಡುವುದರಿಂದ ಆಗುವ ಲಾಭ/ನಷ್ಟ,ಸರಿ/ತಪ್ಪುಗಳು ಹಾಗೂ ಸಾಂಪ್ರದಾಯಿಕ ಅಂತ್ಯ ಸಂಸ್ಕಾರದಿಂದ ಆಗುವ ಲಾಭ/ನಷ್ಟ, ಸರಿ/ತಪ್ಪುಗಳು ಇಲ್ಲಿ ಪರಿಗಣಿಸಬೇಕಿದೆ. ಈ ವಿಚಾರದಲ್ಲಿ ನನ್ನದು ಮುಕ್ತಮನ. ನನ್ನ ವಿಚಾರ ಸರಿಯಲ್ಲವೆಂದು ಸಾಧಾರ ಅಂಶಗಳಿದ್ದಲ್ಲಿ ಒಪ್ಪುವೆ. ಅಲ್ಲಿಯವರೆಗೆ . . . !
-ಕ.ವೆಂ.ನಾಗರಾಜ್.
******************

     ನನಗೆ ಮುದ ನೀಡಿದ ಸಂಗತಿಯನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಬಯಸುವೆ. ಕಳೆದ ವಾರ ಬೆಂಗಳೂರಿನಲ್ಲಿ ನಾನು, ನನ್ನ ಪತ್ನಿ, ಮಗ ಮತ್ತು ಮಗಳು ಒಟ್ಟಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ನನ್ನ ಪತ್ನಿ ತಾನು ಸತ್ತ ನಂತರ ತನ್ನ ದೇಹವನ್ನು ದಾನ ಮಾಡಬೇಕೆಂದು, ಯಾವುದೇ ತಿಥಿ-ಮತಿ ಮಾಡಬಾರದೆಂದು ತಿಳಿಸಿದಳು. ನನ್ನ ಪತ್ನಿ ನನ್ನ ಲೇಖನವನ್ನು ಓದಿರಲಿಲ್ಲ, ಈ ಕುರಿತು ನಾನು ಆಕೆಯೊಂದಿಗೆ ಚರ್ಚಿಸಿರಲೂ ಇಲ್ಲ. ಇದನ್ನು ಲಘುವಾಗಿ ಪರಿಗಣಿಸಿದ ನನ್ನ ಮಗ ಆಕೆಗೆ "ನೀನು ಬ್ರಹ್ಮಾಂಡದ ನರೇಂದ್ರ ಶರ್ಮ ಹಾಗೆ ಹೇಳಿದರು, ಹೀಗೆ ಹೇಳಿದರು, ನೀನು ಹೀಗೆ ಮಾಡು ಅಂತೀಯ, ಸಂತೋಷ ಗುರೂಜಿ ಬಗ್ಗೆ ಮಾತಾಡ್ತೀಯ, ಈಗ ಸುಧಾಕರ ಶರ್ಮ, ಚತುರ್ವೇದಿ ಅಂತಿದ್ದೀಯ, ಮುಂದೆ ಯಾವ ಸ್ವಾಮಿ, ಬಾಬಾನೋ" ಅಂತ ತಮಾಷೆ ಮಾಡಿದ. ನನ್ನ ಪತ್ನಿ "ನಾನು ಎಲ್ಲರ ಮಾತೂ ಕೇಳ್ತೀನಿ, ನನಗೆ ಸರಿ ಅನ್ನಿಸಿದ್ದನ್ನು ಮಾಡ್ತೀನಿ" ಅಂದಳು. ಪತ್ನಿ ಮತ್ತು ಮಕ್ಕಳೊಂದಿಗೆ ಯಾವ ವಿಷಯ ಚರ್ಚಿಸಲು ಹೇಗೆ ಹೇಳಬೇಕೆಂದು ತಿಳಿಯದೆ ನಾನು ಹಿಂದೇಟು ಹಾಕುತ್ತಿದ್ದೆನೋ ಅದನ್ನು ನನ್ನ ಪತ್ನಿ ಸಲೀಸಾಗಿ ಹೇಳಿದ ರೀತಿ ಮೆಚ್ಚುವಂತಹುದು. ಆಗ ನಾನು ಪ್ರತಿಕ್ರಿಯಿಸದೆ ನನ್ನ ಪತ್ನಿಯನ್ನು ಒಬ್ಬಳೇ ಇದ್ದಾಗ ಆಕೆ ತಿಳಿಸಿದ ವಿಷಯ ಗಂಭೀರವಾಗಿ ಹೇಳಿದ್ದೇ ಅಥವಾ ಸುಮ್ಮನೇ ಹೇಳಿದ್ದೇ ಎಂದು ವಿಚಾರಿಸಿದೆ. ಆಕೆ ಆ ವಿಷಯದಲ್ಲಿ ಗಂಭೀರವಾಗಿ ಹೇಳಿದ್ದೆಂದು ತಿಳಿದಾಗ ನನಗೆ ಬಹಳ ಆನಂದವಾಯಿತು. ನಾನು ಸತ್ತ ನಂತರ ನನ್ನ ದೇಹ ಸುಡದೆ ದೇಹದಾನ ಮತ್ತು ಉಪಯೋಗಕ್ಕೆ ಬರುವ ಅಂಗಾಂಗ ದಾನ ಮಾಡಲು ಆ ಸಂದರ್ಭದಲ್ಲಿ ಹತ್ತಿರವಿರುವ ನನ್ನ ಮಕ್ಕಳು ಮತ್ತು ಸಂಬಂಧಿಗಳಲ್ಲಿ ಈ ಮೂಲಕ ತುಂಬಿದ ವಿಶ್ವಾಸದಿಂದ ಮಾಡುತ್ತಿರುವ ನನ್ನ ವಿನಂತಿಯಿದೆ. ಮರಣೋತ್ತರ ಕ್ರಿಯಾಕರ್ಮಗಳನ್ನೂ ಮಾಡುವ ವಿಚಾರದಲ್ಲಿ ನನಗೆ ನಂಬಿಕೆಯಿಲ್ಲ. ಅದನ್ನೂ ಮಾಡುವ ಅಗತ್ಯವಿಲ್ಲ. ಕ್ರಿಯಾಕರ್ಮಗಳನ್ನು ಮಾಡುವ ವಿಚಾರದಲ್ಲಿ ನನ್ನ ಮಕ್ಕಳಿಗೆ ಯಾವ ರೀತಿ ಮಾಡಬೇಕೆನ್ನಿಸುವುದೋ ಆ ರೀತಿ ಮಾಡಲು ಸ್ವತಂತ್ರರಿದ್ದಾರೆ. ಬದುಕು ಸಾವಿಗೆ ಅಂಜುವುದಿಲ್ಲ, ಸಾವು ಬದುಕಿಗೆ ಅಂಜುತ್ತದೆ.  ಬದುಕೋಣ, ಸಾಯುವವರೆಗೂ ಬದುಕೋಣ, ಸತ್ತ ಮೇಲೂ ಬದುಕೋಣ!
-ಕ.ವೆಂ.ನಾಗರಾಜ್. 

************

2 ಕಾಮೆಂಟ್‌ಗಳು:

  1. ಅದ್ಯಾಕೆ ಈಗ ನನಗೆ ಈ ನಿಮ್ಮ ಬರಹ ಕಣ್ಣಿಗೆ ಬಿತ್ತೋ ಗೊತ್ತಿಲ್ಲ. ಅಂತೂ ನನಗೆ ದೇಹದಾನ ಒಪ್ಪಿಗೆ ಇಲ್ಲ. ಯಾರೇ ಆಗಲೀ ಕುರುಡರೋ, ಕುಂಟರೋ ಮೂಕರೋ ಆಗಿ ಹುಟ್ಟ ಬೇಕಾದರೆ ಅದರ ಹಿಂದೆ ಕರ್ಮಫಲ ಇರುತ್ತದೆಂದು ಕೇಳಿದ್ದೇನೆ. ಅದರಲ್ಲೂ ನನಗೆ ನಂಬಿಕೆ ಇಲ್ಲ.ಈಗ ನಾವು ಏನು ಬದುಕುತ್ತಿದ್ದೇವೋ ಅದರಲ್ಲಿ ನನಗೆ ನಂಬಿಕೆ. ಇನ್ನೊಬ್ಬರಿಗೆ ನೋವು ಮಾಡದೆ ಸಾಧ್ಯವಾದಷ್ಟು ಪರೋಪಕಾರಿಯಾಗಿ ಬದುಕಿದರೆ ಇಂದಿನ ಬದುಕಿನಲ್ಲಿ ನೆಮ್ಮದಿಯಾಗಿರ ಬಹುದೆಂಬ ನಂಬಿಕೆ. ನನ್ನ ಜೀವನದಲ್ಲಿ ಇಲ್ಲಿಯವರಗೆ ನನಗಾಗಿರುವ ಅನುಭವದಲ್ಲಿ ಹೇಳಬೇಕೆಂದರೆ ಮಾಡಿರುವ ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟ ಕೆಲಸಕ್ಕೆ ಕೆಟ್ಟ ಫಲ ಕಂಡಿರುವೆ. ನನಗೆ ಇದಕ್ಕಿಂತ ಹೆಚ್ಚು ಯೋಚಿಸುವಷ್ಟು ಬುದ್ಧಿ ಇಲ್ಲ. ದೇಹದಾನ ಸರಿಯಲ್ಲವೆಂದು ನನ್ನ ಅಂತರಾಳ ನನಗೆ ಹೇಳುತ್ತಿದೆ. ಅದನ್ನು ಪುಷ್ಟೀಕರಿಸುವ ಸಾಮರ್ಥ್ಯ ನನಗಿಲ್ಲ.


    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪ್ರಿಯ ಶ್ರೀಧರ, ಇದೂ ನಿಮ್ಮದೇ ಅನಿಸಿಕೆ:
      "ನಿಮ್ಮ ಎಲ್ಲಾ ವಿವರಣೆಗಳೂ ಒಪ್ಪಬಲ್ಲಂತ ಮಾತುಗಳಾಗಿವೆ. ಆದರೆ ನನ್ನ ಈ ಮಾತು ಇದೆಯಲ್ಲಾ ಇಲ್ಲಿ ನೀವು ವಿರೋಧಾಭಾಸ ಕಾಣುತ್ತಿದ್ದೀರಿ. ಆದರೆ ನನಗೆ ಹಾಗೆನಿಸುವುದಿಲ್ಲ. ಹೌದು ದೇಹದಾನವನ್ನು ಅದರ ಹಿಂದಿರುವ ಮಹತ್ವವನ್ನು ಅರ್ಥಮಾಡಿಕೊಂಡು ಮಾಡಿದಾಗ ಅತ್ಯುನ್ನತ ಸ್ಥಿತಿ. ಸತ್ತವರ ಬಗ್ಗೆ ಪ್ರೀತಿಇಲ್ಲದೆ ದೇಹ ವಿಲೇವಾರಿಯಾದರೆಸಾಕೆಂದು ಮಾಡುವುದು ಭಾವನಾರಹಿತವಾದ ನಿರ್ಧಾರ. ಈ ದೃಷ್ಟಿಯಿಂದ ಹೇಳಿದೆ ಅಷ್ಟೆ. ನೀವು ಕೊಟ್ಟಿರುವ ವಿವರಣೆಯು ಶ್ರೇಷ್ಠವಾಗಿದೆ. ಮುಂದೆ ಒಂದುದಿನ ನನ್ನ ಮನಸ್ಸು ಬದಲಾಗಬಾರದೆಂದೇನೂ ಇಲ್ಲವಲ್ಲಾ! " ಇದು ಲೇಖನದ ಭಾಗವೂ ಆಗಿದೆ. ಯಾರನ್ನೂ ಒಪ್ಪಿಸುವುದು, ಬಿಡುವುದು ನನ್ನ ಉದ್ದೇಶವಲ್ಲ. ದೇಹದಾನವೂ ಪರೋಪಕಾರದ ಕೆಲಸವೇ! ಒಂದು ಸತ್ತ ಮಗುವಿನ ಅಂಗ ಎರಡು ಮಕ್ಕಳಿಗೆ ಜೀವದಾನ ಮಾಡಿದ, ಅ ಮೂಲಕ ಆ ಮಕ್ಕಳ ಕುಟುಂಬಗಳವರಿಗೆ ಜೀವಚೈತನ್ಯ ನೀಡಿದ ಪ್ರಸಂಗಕ್ಕೆ ಏನೆನ್ನೋಣ? ಸತ್ತ ಮಗುವನ್ನು ಸುಟ್ಟೋ, ಹೂಳಿಯೋ ಸಂಸ್ಕಾರ ಮಾಡಿದ್ದಿದ್ದರೆ ಅದು ಮತ್ತೆರಡು ಜೀವಗಳನ್ನು ಉಳಿಸಲಾಗುತ್ತಿರಲಿಲ್ಲ!!

      ಅಳಿಸಿ