'ವಿಪ್ರವಾಹಿನಿ' ನಾಗರಾಜರ ಮನೆಯಲ್ಲಿ ಪ್ರತಿತಿಂಗಳ ಕೊನೆಯ ಭಾನುವಾರ ವೇದಪಾಠ ನಡೆಸಲಾಗುತ್ತಿತ್ತು. ಬೇಲೂರಿನ ಶ್ರೀ ವಿಶ್ವನಾಥಶರ್ಮರವರು ಪಾಠ ಹೇಳಿಕೊಡುತ್ತಿದ್ದರು. ತಿಂಗಳಿಗೆ ಒಮ್ಮೆ ಮಾತ್ರ ನಡೆದರೆ ಸಾಕಾಗಲಾರದು, ವಾರಕ್ಕೊಮ್ಮೆಯಾದರೂ ನಡೆದರೆ ಒಳ್ಳೆಯದೆಂಬ ಸಲಹೆ ಮೂಡಿಬಂದಿತು. ಮುಂದಿನ ಭಾನುವಾರ ನಮ್ಮ ಮನೆಯಲ್ಲಿ ನಡೆಸಬಹುದೆಂಬ ನನ್ನ ಕೋರಿಕೆಯನ್ನು ಶ್ರೀ ವಿಶ್ವನಾಥಶರ್ಮ ಮತ್ತು ಅಭ್ಯಾಸಿಗಳು ಒಪ್ಪಿದರು.
ಸರ್ಕಾರಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿಯಾದ ನಂತರ ಹಾಸನದ ಸ್ವಂತದ ಮನೆಯ ಮೇಲೆ ಒಂದು ಕೊಠಡಿಯನ್ನು ಕಟ್ಟಿಸಿದ್ದೆ. ಕೊಠಡಿ ಪೂರ್ಣವಾದ ನಂತರ ಆ ನಿಮಿತ್ತ ಪ್ರತ್ಯೇಕ ಕಾರ್ಯಕ್ರಮ - ಗೃಹಪ್ರವೇಶ, ಸತ್ಯನಾರಾಯಣಪೂಜೆ, ಇತ್ಯಾದಿ - ಮಾಡಿರಲಿಲ್ಲ, ಮಾಡುವ ಇರಾದೆಯೂ ಇರಲಿಲ್ಲ. ವೇದಪಾಠವನ್ನು ಆ ಕೊಠಡಿಯಲ್ಲೇ ನಡೆಸಲು ಮತ್ತು ಆ ಸಂದರ್ಭದಲ್ಲಿ ಪ್ರಾರಂಭದಲ್ಲಿ ಅಗ್ನಿಹೋತ್ರ ಮಾಡಲು ಮತ್ತು ಅದನ್ನೇ ಕೊಠಡಿಯ ಗೃಹಪ್ರವೇಶ ಎಂದು ಭಾವಿಸಲು ನಿರ್ಧರಿಸಿದೆವು. ಶರ್ಮರಿಗೆ ದೂರವಾಣಿ ಮೂಲಕ ಪಾಠಾಭ್ಯಾಸದ ಮುನ್ನ ಅಗ್ನಿಹೋತ್ರ ಕಾರ್ಯ ನಡೆಸಲು ಕೇಳಿದಾಗ ಅವರ ಒಪ್ಪಿಗೆಯೂ ಸಿಕ್ಕಿತು. ಆ ಭಾನುವಾರ ಬೆಳಿಗ್ಗೆ ೧೦-೩೦ರ ವೇಳೆಗೆ ಹರಿಹರಪುರ ಶ್ರೀಧರ ತಮ್ಮ ಪತ್ನಿಯೊಂದಿಗೆ ಬಂದರು. ವಿಪ್ರವಾಹಿನಿ ನಾಗರಾಜ್-ಗಿರಿಜಾಂಬಾರವರೂ ಆಗಮಿಸಿದರು. ಶ್ರೀಧರರು ತಮ್ಮೊಂದಿಗೆ ಅಗ್ನಿಹೋತ್ರ ಮಾಡಲು ಹೋಮಕುಂಡ, ಸಮಿತ್ತು ಮತ್ತು ಅಗತ್ಯ ಸಾಮಗ್ರಿ ತಂದಿದ್ದರು. 'ಹಾಸನವಾಣಿ' ಸಂಪಾದಕಿ ಶ್ರೀಮತಿ ಲೀಲಾವತಿ, ನಿವೃತ್ತ ಕಾರ್ಯಪಾಲಕ ಇಂಜನಿಯರ್ ಜಯರಾಮ್ ಮತ್ತು ಕೆಲವರು ವೇಧಾಭ್ಯಾಸಿಗಳೂ ಹಾಜರಾದರು. ಪಾಠದ ಮುನ್ನ ಅಗ್ನಿಹೋತ್ರ ನಡೆಯಿತು. ಕೊಠಡಿಯ ವಿದ್ಯುಕ್ತ ಪ್ರವೇಶ ಆಯಿತು ಅಂದುಕೊಂಡೆವು. ಕಾರ್ಯಕ್ರಮದ ನಂತರ ಮನೆಯಲ್ಲಿ ಎಲ್ಲರಿಗೂ ಊಟವಾಯಿತು. ಅಂದಹಾಗೆ ಕಾರ್ಯಕ್ರಮ ನಡೆದ ಭಾನುವಾರ ಈ ವರ್ಷದ ಯುಗಾದಿಯ ಹಿಂದಿನ ದಿನವಾದ ೦೩-೦೪-೨೦೧೧ರ ಅಮಾವಾಸ್ಯೆಯಂದು. ಅಂದು ತೆಗೆದಿದ್ದ ಕೆಲವು ಫೋಟೋಗಳು ಇಲ್ಲಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ