ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜೂನ್ 15, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೭

ವೇದಗಳ ದೃಷ್ಟಿಯಲ್ಲಿ ಧಾರ್ಮಿಕರಾದವರನ್ನು ವರ್ಣಿಸುತ್ತಾ ಋಗ್ವೇದ ಹೇಳುತ್ತದೆ:-
ಏತೇ ಅಸೃಗ್ರಮಾಶವೋssತಿ ಹ್ವರಾಂಸಿ ಬಭ್ರವಃ  |
ಸೋಮಾ ಋತಸ್ಯ ಧಾರಯಾ || (ಋಕ್. ೯.೬೩.೪.)

ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ |
ಅಪಘ್ನಂತೋ ಅರಾವ್ಣಃ || (ಋಕ್. ೯.೬೩.೫.)

ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ |
ಇಂದ್ರಂ ಗಚ್ಛಂತ ಇಂದವಃ || (ಋಕ್. ೯.೬೩.೬.)

     [ಏತೇ ಆಶವಃ ಸೋಮಾಃ] ಈ ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, [ಋತಸ್ಯ ಧಾರಯಾ] ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, [ಹ್ವರಾಂಸಿ ಅತಿ] ಕುಟಿಲ ಭಾವನೆಗಳನ್ನು ದಾಟಿ, ಅಸೃಗ್ರಮ್] ಮುಂದೆ ಸಾಗುತ್ತಾರೆ.
     [ಅಪ್ತುರಃ] ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, [ಇಂದ್ರಂ ವರ್ಧಂತಃ] ತಮ್ಮ ಆತ್ಮವಿಶ್ವಾಸ ಮಾಡಿಕೊಳ್ಳುತ್ತಾ, [ವಿಶ್ವಂ ಆರ್ಯಂ ಕೃಣ್ವಂತಃ] ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ.
     [ಸುತಾಃ ಬಭ್ರವಃ ಇಂದವಃ] ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, [ಇಂದ್ರಮ ಗಚ್ಛಂತಃ] ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, [ಸ್ವಂ ರಜಃ ಅನು] ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, [ಆ ಅಭಿ ಅರ್ಷಂತಿ] ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.
     ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಆದುದರಿಂದ, ಮುಂದಿನ ಅಧ್ಯಾಯದಲ್ಲಿ ಈ ಮೂರು ಧರ್ಮಾಂಗಗಳ ನಿಜವಾದ ಸ್ವರೂಪವನ್ನರಿತುಕೊಳ್ಳೋಣ ಬನ್ನಿ.
************

2 ಕಾಮೆಂಟ್‌ಗಳು:

  1. ಈ ಮಂತ್ರವನ್ನು ನಾನು ಹೀಗೆ ಅರ್ಥ ಮಾಡಿಕೊಳ್ಳುತ್ತೇನೆ.....

    ಜೀವನದಲ್ಲಿ ಪ್ರಗತಿ ಹೊಂದುವವರು ಯಾರು? ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಜೀವನದಲ್ಲಿಸೋಮಾರಿಗಳಲ್ಲದವರು,ಪ್ರಮಾದವನ್ನುಮಾಡದವರು,ಆಚಾರವಿಚಾರಗಳು ಶುಬ್ರವಾಗಿರುವವರು, ಶಾಂತಸ್ವಭಾವದವರು, ಧರ್ಮದ ಪ್ರವಾಹದಲ್ಲಿ ನಡೆಯುತ್ತಾ ಎಲ್ಲಾ ಕುಟಿಲಭಾವನೆಗಳನ್ನು ದಾಟಿ ಮುಂದೆ ಹೋಗುತ್ತಾರೆ. ತಮ್ಮನ್ನು ತಾವು ಭಗವಂತನ ಮಕ್ಕಳೆಂದು ತಿಳಿದ ಇವರು ತಮ್ಮ ಚಾರಿತ್ರ್ಯವನ್ನು ನಿರ್ಮಲವಾಗಿಟ್ಟುಕೊಂಡು ನೀರಸವಾಗಿರುವ ಜೀವನದಲ್ಲಿ ಉಲ್ಲಾಸಗೊಳಿಸುತ್ತಾ, ಸರ್ವಶಕ್ತಿವಂತನಾದ ಪರಮಾತ್ಮನೆಡೆಗೆ ಸಾಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ನಿರಂತರವಾಗಿ ಮುಂದೆಸಾಗುತ್ತಾ ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆಯುವರು. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಜೀವನದಲ್ಲಿ ಉದ್ಧಾರವಾಗಬೇಕೆಂಬುವವನಿಗೆ ಇದಕ್ಕಿಂತ ಸೂತ್ರಗಳು ಬೇಕೆ?
    ನಿಮ್ಮ ಬರಹವು ಉತ್ತಮರಾಗಬೇಕೆಂದು ಬಯಸುವವರಿಗೆ ಮಾರ್ಗದರ್ಶಿಯಾಗಿದೆ. ನಿಮಗೆ ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ
  2. ನಿಜ, ಪಂಡಿತರ ಮಾತುಗಳು ನಮಗೆ ಮಾರ್ಗದರ್ಶಿಯಾಗಿವೆ.

    ಪ್ರತ್ಯುತ್ತರಅಳಿಸಿ