ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಸೆಪ್ಟೆಂಬರ್ 27, 2017

ಆತ್ಮರತಿ


    ನಮ್ಮನ್ನು ನಾವೇ ಹೊಗಳಿಕೊಳ್ಳುವುದಕ್ಕೆ ಕಾರಣವೇನಿರಬಹುದು? ನಾವು ನಿಜವಾಗಿ ಇರುವುದಕ್ಕಿಂತ ಭಿನ್ನವಾಗಿ, ಉತ್ತಮವಾಗಿ ಬಿಂಬಿಸಿಕೊಳ್ಳಲು ಹಾತೊರೆಯುವುದಾದರೂ ಏಕೆ? ಈ ಕುರಿತು ವಿಷಯದ ಆಳಕ್ಕೆ ಹೋದಾಗ ಹೊಳೆಯುವುದೇನೆಂದರೆ, ಪ್ರತಿ ಮಾನವ ಜೀವಿಯ ಅಂತರಾಳದಲ್ಲಿ ಹುದುಗಿರುವ ಉನ್ನತ ಸ್ಥಿತಿಗೆ ಏರುವ ಆಸೆಯೇ ಇದಕ್ಕೆ ಕಾರಣವಾಗಿದೆ. ನಾವು ನಮ್ಮ ಬಗ್ಗೆ ಏನನ್ನು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತೇವೆಯೋ, ಹಾಗೆಯೇ ನೈಜವಾಗಿಯೂ ಇರುವುದಾದರೆ ಎಷ್ಟು ಚೆನ್ನ? ಅದನ್ನು ಉನ್ನತವಾದ ಸ್ಥಿತಿಯೆನ್ನಬಹುದು. ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಆಸೆಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ ಆಸೆ!
     ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯ. ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು. 
     ಈಗ ನಮಗೆ ನಮ್ಮನ್ನು ನಾವೇ ಹೊಗಳಿಕೊಳ್ಳುವುದರ ಕಾರಣ ತೋರುತ್ತಾ ಹೋಗುತ್ತದೆ. ನಾವು ಉತ್ತಮ ಸ್ಥಿತಿಗೆ ಏರುತ್ತೇವೆ, ಏರಬೇಕು ಎಂಬುದು ನಮ್ಮ ಒಳ ಆಸೆ ಎಂಬುದು ತಿಳಿಯಿತಲ್ಲವೇ? ನಾವು ಆ ಸ್ಥಿತಿಗೆ ಪೂರ್ಣವಾಗಿ ತಲುಪಲು ಮಾಡುವ ಪ್ರಯತ್ನಗಳು ಯಾವ ಯಾವುದೋ ಕಾರಣಗಳಿಂದ ಆಗದೇ ಹೋಗಬಹುದು. ಅದು ನಮ್ಮ ದೌರ್ಬಲ್ಯದ ಕಾರಣವಿರಬಹುದು, ಅಡ್ಡಿ-ಅಡಚಣೆಗಳಿರಬಹುದು, ಇನ್ನೇನೇ ಇರಬಹುದು. ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಮಾತ್ರ ಮುಂದೆ ಮುಂದೆ ಓಡುತ್ತಿರುತ್ತದೆ. ನಾವು ಹಿಂದೆಯೇ ಉಳಿದಿರುತ್ತೇವೆ. ನಾವು ಬಯಸಿದ ಸ್ಥಿತಿ ಮತ್ತು ಈಗಿರುವ ಸ್ಥಿತಿಗಳಲ್ಲಿನ ಅಂತರ ಹೆಚ್ಚಾಗುತ್ತಾ ಹೋಗುತ್ತದೆ. ಈ ಅಂತರವನ್ನು ಕಡಿಮೆ ಮಾಡಿಕೊಳ್ಳಬಯಸುವ ಪ್ರಯತ್ನವೇ ಈ ನಮ್ಮನ್ನು ನಾವು ಹೊಗಳಿಕೊಳ್ಳುವುದು! ಉತ್ತರಕುಮಾರನ ಉದಾಹರಣೆ ಕೊಡಬಹುದು. ತಾನು ದೊಡ್ಡ ವೀರನೆನಿಸಿಕೊಳ್ಳಬೇಕೆಂಬುದು ಅವನ ಮನಸ್ಸಿನ ಆಸೆಯಾಗಿದ್ದರೂ, ವಾಸ್ತವಿಕವಾಗಿ ಆತ ಮಹಾಪುಕ್ಕಲ. ಹೆಂಗಳೆಯರ ಮುಂದೆ ತನ್ನ ಪೌರುಷ ಕೊಚ್ಚಿಕೊಳ್ಳುವುದರಲ್ಲಿ ಆತ ನಿರತನಾಗುತ್ತಿದ್ದುದಕ್ಕೆ ಇದೇ ಕಾರಣ. ಉತ್ತರನ ಪೌರುಷ ಒಲೆಯ ಮುಂದೆ ಎಂಬುದು ಪ್ರಸಿದ್ಧ ಗಾದೆಯೇ ಆಗಿದೆ.
     ಹೊಗಳಿಕೊಳ್ಳುವುದು ಒಂದು ರೀತಿಯಲ್ಲಿ ಪ್ರತಿಯೊಬ್ಬರ ಸಹಜ ಗುಣವಾಗಿಬಿಟ್ಟಿದೆ. ಮುಂದೆ ಬರಬೇಕೆಂಬ, ಉನ್ನತಿಯ ಸ್ಥಿತಿ ತಲುಪಬೇಕೆಂಬ ತುಡಿತ ಇದಕ್ಕೆ ಕಾರಣ ಮತ್ತು ಪ್ರೇರಣೆ ಎಂಬುದೂ ತಿಳಿಯಿತು. ಈ ಹೊಗಳಿಕೊಳ್ಳುವುದರ ಸಾಧಕ-ಬಾಧಕಗಳ ಕಡೆಗೂ ಗಮನ ಹರಿಸೋಣ. ಹೇಳಿಕೊಳ್ಳುವ ಸ್ಥಿತಿ ಮತ್ತು ಇರುವ ಸ್ಥಿತಿಗಳಲ್ಲಿ ಅಂತರ ಕಡಿಮೆಯಿದ್ದರೆ ಅದು ಸಹನೀಯವಾಗಿರುತ್ತದೆ. ಅಂತಹವರು ಉನ್ನತ ಸ್ಥಿತಿ ತಲುಪಲು ಶ್ರಮಿಸುತ್ತಿರುತ್ತಾರೆ. ಇರುವುದೇ ಒಂದು ಹೇಳಿಕೊಳ್ಳುವುದೇ ಮತ್ತೊಂದು ಆದಲ್ಲಿ ಅಂತಹವರನ್ನು ಜನರು ನಂಬಲಾರರು. ಇತರರನ್ನು ಮರುಳು ಮಾಡುವ, ಮೋಸ ಮಾಡುವ ಹುನ್ನಾರ ಅದರಲ್ಲಿ ಅಡಗಿರುತ್ತದೆ. ಮರಳಿನ ಮೇಲೆ ಕಟ್ಟುವ ಕಟ್ಟಡ ಒಂದಲ್ಲಾ ಒಂದು ಸಲ ಕುಸಿದೇ ಕುಸಿಯುತ್ತದೆ.
     ಹೊಗಳಿಕೊಳ್ಳುವುದರಲ್ಲೂ ನಾನಾ ರೀತಿಗಳಿವೆ. ಎಲ್ಲದರ ಮೂಲ ಉದ್ದೇಶ ಮಾತ್ರ ಒಂದೇ, ತಮ್ಮನ್ನು ತಾವು ದೊಡ್ಡವರೆಂದು ತೋರಿಸಿಕೊಳ್ಳುವುದು. ಆತ್ಮ ಪ್ರಶಂಸೆ, ಜಂಬ ಕೊಚ್ಚಿಕೊಳ್ಳುವುದು, ಸ್ವಪ್ರಾಮುಖ್ಯತೆ, ಸ್ವಮಹತ್ವ ಕೊಟ್ಟುಕೊಳ್ಳುವುದು, ಸ್ವತಃ ಅಭಿನಂದಿಸಿಕೊಳ್ಳುವುದು, ತನ್ನನ್ನು ತಾನೇ ಮುಂದಕ್ಕೆ ನಿಲ್ಲಿಸಿಕೊಳ್ಳುವುದು, ಸ್ವತೃಪ್ತಿ ಕಾಣುವುದು, ಬೊಗಳೆ ಬಿಡುವುದು, ಆತ್ಮರತಿ, ಅಹಂಕಾರ ಪಡುವುದು, ದುರಭಿಮಾನ ತೋರುವುದು, ಇತರರನ್ನು ನಿಕೃಷ್ಟವಾಗಿ ಕಾಣುವುದು, ಸ್ವಾರ್ಥಿಯಾಗಿರುವುದು, ಸ್ವಕೇಂದ್ರಿತ ಚಟುವಟಿಕೆಗಳಲ್ಲಿ ತೊಡಗುವುದು, ಮುಂತಾದುವೆಲ್ಲಾ ಇದರ ಉತ್ಪನ್ನಗಳೇ ಆಗಿವೆ. ಹೊಗಳಿಕೊಳ್ಳುವವರ ಕಿವಿಗಳಿಗೆ ಅವರದೇ ಮಾತುಗಳು ಸಿಹಿಯಾಗಿ ಕೇಳಿಸುತ್ತವೆ, ಇತರ ಕೇಳುಗರಿಗೆ ಸಿಹಿಯಾಗಿಯಂತೂ ಇರಲಾರದು.
     ವಿಲಿಯಮ್ ಶೇಕ್ಸ್‌ಪಿಯರ್ Sin of self-love possesseth all mine eye’  ಎಂಬ ಸಾಲಿನಿಂದ ಪ್ರಾರಂಭವಾಗುವ ತನ್ನ ಸುನೀತದಲ್ಲಿ(Sonnet)  ಆತ್ಮಪ್ರಶಂಸೆಯ ಬಗ್ಗೆ ಬರೆದಿದ್ದು, ವಿಷಯಕ್ಕೆ ಪ್ರಸ್ತುತವೆನಿಸುವುದರಿಂದ ಅದನ್ನು  ಕನ್ನಡಕ್ಕೆ ಭಾವಾನುವಾದಿಸಿ ಸಹೃದಯರ ಅವಗಾಹನೆಗೆ ಮಂಡಿಸಿರುವೆ:
ಸ್ವಪ್ರೇಮ
ಸ್ವಪ್ರೇಮ ಪಾಪ ಬಂಧಿಯಾಗಿವೆಯೆನ್ನ ನಯನಗಳು,
ನನ್ನಾತ್ಮ ಮತ್ತೆಲ್ಲ ನನ್ನ ಅಂಗ ಅಂಗಗಳು;
ಈ ಪಾಪಕುಂಟೆ ಎಲ್ಲಿಯಾದರೂ ಮದ್ದು,
ಹೃದಯದಾಳದಲಿ ಬೇರೂರಿ ಕುಳಿತಿಹುದು;
ನನಗಿಂತ ಉತ್ತಮರು ಇಲ್ಲವೆಂದೆನಿಸುವುದು,
ಇದಕಿಂತ ಸತ್ಯ, ಇದಕಿಂತ ಮಿಗಿಲು ಇದ್ದೀತೆ;
ನನ್ನ ಬೆಲೆಯದೆಷ್ಟು ಹಿರಿದಾಗಿ ತೋರುವುದು,
ಇತರೆಲ್ಲದರ ಮೊತ್ತವೂ ಆಗಿಹುದು ಕಿರಿದು;
ಕನ್ನಡಿಯು ನನ್ನ ರೂಪವನೆತ್ತಿ ತೋರಿರಲು,
ಸೊರಗಿದ, ಕರಗಿದ, ಬಳಲಿದ ಪೂರ್ವವನು;
ಸ್ವಪ್ರೇಮದ ಭಾವ ವ್ಯತಿರಿಕ್ತ ತೋರಿರಲು.
ಸ್ವಪ್ರೇಮದ ಕೆಡುಕು ಪಿಡುಗಾಗಿ ಕಾಡುವುದು;
ಸ್ವಪ್ರೇಮವೇ, ನಿನ್ನಿಂದ ನನ್ನ ನಾ ಮೆರೆಸಿರುವೆ,
ನಿನ್ನ ಸುಂದರತೆಯಿಂದ ನನ್ನನೇ ಚಿತ್ರಿಸಿರುವೆ.
     ಕೊನೆಯದಾಗಿ ಒಂದು ಮಾತು. ಪ್ರಪಂಚದಲ್ಲಿನ ಯಾವ ಸಂಗತಿಯೇ ಆಗಲಿ, ಹೊಗಳಿಕೊಳ್ಳುವುದೂ ಸೇರಿದಂತೆ, ಒಳ್ಳೆಯದಾಗಲಿ, ಕೆಟ್ಟದ್ದಾಗಲೀ ಆಗಿರದೆ ಸಹಜವಾದದ್ದೇ ಆಗಿದೆ. ಇತಿ-ಮಿತಿಯಲ್ಲಿದ್ದರೆ ಎಲ್ಲವೂ ಹಿತವೇ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ನಾವು ನಿಜವಾಗಿ ಹೇಗಿರುತ್ತೇವೆಯೋ ಅದಕ್ಕಿಂತ ಉತ್ತಮವಾಗಿ ತೋರಿಸಿಕೊಳ್ಳುವುದರ ಹಿನ್ನೆಲೆ ನಾವು ಆ ಉತ್ತಮ ಸ್ಥಿತಿಯಲ್ಲಿ ಇರಬೇಕೆಂದು ಬಯಸುವುದೇ ಆಗಿದೆ. ನಾವು ಬೇರೆಯವರನ್ನು ನಂಬಿಸಬಹುದು. ಆದರೆ ನಮಗೆ ನಾವೇ ಮೋಸ ಮಾಡಿಕೊಳ್ಳಲಾಗುವುದಿಲ್ಲ. ನಮ್ಮ ಬಗ್ಗೆ ನಾವು ಏನು ಕೊಚ್ಚಿಕೊಳ್ಳುತ್ತೇವೆ, ನಿಜವಾಗಿಯೂ ನಾವು ಏನಾಗಿದ್ದೇವೆ ಎಂಬುದು ನಮಗೆ ನಿಜವಾಗಿ ಗೊತ್ತಿರುತ್ತದೆ. ನಾವು ಹೊಗಳಿಕೊಳ್ಳುವ ರೀತಿಯಲ್ಲಿ ನಾವು ಇದ್ದರೆ, ನಮ್ಮ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಇಲ್ಲದಿದ್ದರೆ ಕೊಂಕು ಮಾತುಗಳು ಬಂದೇಬರುತ್ತವೆ. ವಿಶೇಷವಾಗಿ ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ತಮ್ಮ ನಡೆ-ನುಡಿಗಳಲ್ಲಿ ಎಚ್ಚರಿಕೆ ವಹಿಸಬೇಕು. ಸುತ್ತ ಮುತ್ತ ಇರುವವರು ಅವರನ್ನು ಗಮನಿಸುತ್ತಿರುತ್ತಾರೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ನಾವು ಹಾಗೆ, ನಾವು ಹೀಗೆ ಎಂದು ಹೇಳಿಕೊಳ್ಳುವುದಕ್ಕಿಂತ, ಉನ್ನತ ಸ್ಥಿತಿ ತಲುಪಲು ಪ್ರಾಮಾಣಿಕ ಶ್ರಮ ವಹಿಸುವುದೇ ಅತ್ಯುತ್ತಮವಾದುದು. ಈಗ ನಮ್ಮನ್ನೇ ನಾವು ಕೇಳಿಕೊಳ್ಳೋಣ: ನಾವು ಹೇಳಿಕೊಳ್ಳುವಂತೆ ನಾವು ಇದ್ದೇವೆಯೇ? ನಾವು ಎಷ್ಟು ಉತ್ತಮರು?
-ಕ.ವೆಂ.ನಾಗರಾಜ್.

ಸೋಮವಾರ, ಸೆಪ್ಟೆಂಬರ್ 25, 2017

ವೇದಾಧ್ಯಯನವೆಂದರೆ ಜ್ಞಾನಾರ್ಜನೆ


     ಪ್ರಸ್ತುತ ಕಾಲಮಾನ ಮತ್ತು ಪರಿಸ್ಥಿತಿಯಲ್ಲಿ ವೇದಾಧ್ಯಯನದ ಅಗತ್ಯ ಮತ್ತು ಮಹತ್ವ ಕುರಿತು ಪ್ರಾಜ್ಞರು ಚಿಂತಿಸುವ ಅಗತ್ಯವಿದೆ. ಇಂದು ಬಹಳಷ್ಟು ಸಂಪ್ರದಾಯಗಳು, ಪದ್ಧತಿಗಳು ಅಪಮೌಲ್ಯಕ್ಕೊಳಗಾಗಿ ಮೂಲದಲ್ಲಿ ಇದ್ದಂತಹ ಸದ್ವಿಚಾರಗಳು ಕಣ್ಮರೆಯಾಗಿವೆ. ದುರಂತವೆಂದರೆ ಇಂತಹ ಸಂಗತಿಗಳನ್ನು ಪರಿಷ್ಕರಿಸಿ ಮೂಲದ ಒಳ್ಳೆಯ ಅಂಶಗಳನ್ನು ಜಾರಿಗೊಳಿಸುವ ಸಮಾಜ ಸುಧಾರಕರುಗಳದೇ ಪ್ರತ್ಯೇಕ ಸಂಪ್ರದಾಯವೆಂದು ಗುರುತಿಸಿ ಪ್ರತ್ಯೇಕಿಸಿಬಿಡುವ ಪ್ರವೃತ್ತಿ ಬಲವಾಗಿದೆ. ಅನೇಕ ಮತ, ಪಂಥಗಳು, ಪದ್ಧತಿಗಳು, ರೀತಿ-ನೀತಿಗಳು ಜಾರಿಗೆ ಬಂದಿರುವುದೇ ಹೀಗೆ. ಇದರಿಂದ ಒಳಿತೂ ಆಗಿದೆ, ಕೆಡಕೂ ಆಗಿದೆ. ಸಮಾಜವನ್ನು ವಿಘಟಿಸುವ ಬೆಳವಣಿಗೆಗಳೂ ಆಗಿವೆ, ಆಗುತ್ತಿವೆ. ಅಹಿಂದ, ಹಿಂದ ಇತ್ಯಾದಿಗಳು ಇತ್ತೀಚಿನ ಸೇರ್ಪಡೆಗಳು.
     ಮಾನವ ಜೀವನದಲ್ಲಿ 16 ಸಂಸ್ಕಾರಗಳು ಒಬ್ಬ ಆದರ್ಶವ್ಯಕ್ತಿಯಾಗಿ ರೂಪುಗೊಳ್ಳಲು ಅವಶ್ಯಕ. ಅವೆಂದರೆ, 1.ಗರ್ಭಾದಾನ, 2.ಪುಂಸವನ, 3.ಸೀಮಂತೋನ್ನಯನ, 4.ಜಾತಕರ್ಮ, 5.ನಾಮಕರಣ, 6.ನಿಷ್ಕ್ರಮಣ, 7.ಅನ್ನಪ್ರಾಶನ, 8.ಮುಂಡನ, 9.ಕರ್ಣವೇಧ, 10.ಉಪನಯನ, 11.ವೇದಾರಂಭ, 12.ಸಮಾವರ್ತನ, 13.ವಿವಾಹ, 14.ವಾನಪ್ರಸ್ಥ, 15.ಸಂನ್ಯಾಸ, 16..ಅಂತ್ಯೇಷ್ಟಿ. ಇವುಗಳಲ್ಲಿ ಮೊದಲ ಮೂರು ಸಂಸ್ಕಾರಗಳು ಹುಟ್ಟುವ ಮುನ್ನದ ಸಂಸ್ಕಾರಗಳಾಗಿದ್ದು ಉತ್ತಮ ಸಂತಾನವನ್ನು ಪಡೆಯುವ ಸಲುವಾಗಿ ಆಚರಿಸುತ್ತಾರೆ. ವಿವಾಹ, ವಾನಪ್ರಸ್ಥ ಮತ್ತು ಸಂನ್ಯಾಸ ಇವುಗಳು ಎಲ್ಲರಿಗೂ ಕಡ್ಡಾಯವಲ್ಲ, ಅರ್ಹತೆ ಮತ್ತು ಆಸಕ್ತಿಯಿರುವರು ಮಾತ್ರ ಅನುಸರಿಸಬಹುದು. ಅಂತ್ಯೇಷ್ಟಿ ಮೃತರಾದ ನಂತರ ಮಾಡುವ ಸಂಸ್ಕಾರ. ಇವುಗಳನ್ನು ಹೊರತುಪಡಿಸಿ ಉಳಿಯುವ 9 ಸಂಸ್ಕಾರಗಳು ಮಕ್ಕಳಿಗೆ ಸಂಬಂಧಿಸಿದವು. ಮಕ್ಕಳನ್ನು ಸತ್ಪ್ರಜೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಈ ಸಂಸ್ಕಾರಗಳಿಗೆ ಹಿಂದೆ ಎಷ್ಟು ಪ್ರಾಧಾನ್ಯತೆಯಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಇಂದಿನ ಅವಸರದ ಪ್ರಪಂಚದಲ್ಲಿ ಮಕ್ಕಳನ್ನು ಹಣಗಳಿಕೆಯ ಯಂತ್ರಗಳಾಗಿ ರೂಪಿಸಲು ಮಾತ್ರ ಗಮನ ಕೊಡಲಾಗುತ್ತಿದೆ.
     ಹಿಂದಿನ ಕಾಲದಲ್ಲಿ ಹೆರಿಗೆಗಳನ್ನು ಮನೆಗಳಲ್ಲೇ ನಿಪುಣ ಸ್ತ್ರೀಯರೇ ಮಾಡಿಸುತ್ತಿದ್ದರು. ಈಗ ಆಸ್ಪತ್ರೆಗಳಲ್ಲೇ ನುರಿತ ವೈದ್ಯರು, ದಾದಿಯರು ಮಾಡುತ್ತಾರೆ. ಒಳ್ಳೆಯ ತಿಥಿ, ನಕ್ಷತ್ರ, ಇತ್ಯಾದಿ ನೋಡಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿಸಿ ಹೆರಿಗೆ ಮಾಡಿಸುವ ಪದ್ಧತಿಯೂ ಬಂದುಬಿಟ್ಟಿದೆ. ಇದರಿಂದ ಯಾರಿಗೆ ಎಷ್ಟು ಒಳ್ಳೆಯದಾಗುತ್ತೆಂಬುದನ್ನು ಯಾರೂ ಅರಿಯರು. ಮಗುವಿಗೆ ಹೆಸರಿಡುವಾಗ ಒಳ್ಳೆಯ ಅರ್ಥ ಕೊಡುವ ಹೆಸರುಗಳನ್ನು ಇಟ್ಟರೆ ಹೆಸರಿಗೆ ತಕ್ಕಂತೆ ಇರಲು ಪ್ರೇರಿಸಿದಂತಾಗುತ್ತದೆ. ಅರ್ಥವೇ ತಿಳಿಯದ ಹೆಸರುಗಳನ್ನೂ ಈಗ ಇಡುವುದನ್ನು ಕಾಣುತ್ತಿದ್ದೇವೆ. ಮಗುವನ್ನು ಮೊದಲ ಸಲ ಹೊರಗೆ ಕರೆದೊಯ್ಯುವಾಗ ನಿಷ್ಕ್ರಮಣ, ತಾಯಿಯ ಹಾಲಿನ ಜೊತೆಗೆ ಬೇರೆ ಆಹಾರದ ಅಭ್ಯಾಸ ಪ್ರಾರಂಭದ ಸಮಯದಲ್ಲಿ ಅನ್ನಪ್ರಾಶನ (ಸಾಮಾನ್ಯವಾಗಿ ಹಲ್ಲು ಬರುವ ಸಮಯದಲ್ಲಿ), ಸುಮಾರು ಮೂರು ವರ್ಷವಾದಾಗ, ಅಂದರೆ ಮೃದುವಾಗಿದ್ದ ತಲೆಬುರುಡೆ ಸ್ವಲ್ಪ ಗಟ್ಟಿಯಾದಾಗ ಚೂಡಾಕರ್ಮ, ಕಿವಿ ಚುಚ್ಚುವುದು ಮುಂತಾದವು ಮಗುವಿಗೆ ಮಾಡಲಾಗುವ ಪ್ರಾರಂಭಿಕ ಸಂಸ್ಕಾರಗಳು.
     ಮುಂದಿನ ಹಂತ ಮಗುವಿನ ವಿದ್ಯಾಭ್ಯಾಸಕ್ಕೆ ಅನುವು ಮಾಡುವುದು. ಇಲ್ಲೇ ನಾವು ದಾರಿ ತಪ್ಪುತ್ತಿದ್ದೇವೆ. ಬ್ರಿಟಿಷರ ಶಿಕ್ಷಣನೀತಿಯ ಬಲಿಪಶುಗಳಾಗಿ ವಿಷವರ್ತುಲದಿಂದ ಹೊರಬರಲಾರದೆ ಇದ್ದೇವೆ. ಹಿಂದಿನ ಗುರುಕುಲ ಪದ್ಧತಿಯ ವ್ಯವಸ್ಥೆಯಲ್ಲಿ ಮಗುವಿಗೆ ಸಾಮಾನ್ಯವಾಗಿ 7-8 ವರ್ಷಗಳಾದಾಗ ಮಗುವಿಗೆ ಉಪನಯನ ಸಂಸ್ಕಾರ ಮಾಡಿ ಅನುಕೂಲವೆನ್ನಿಸುವ ಗುರುಕುಲಕ್ಕೆ ಮಕ್ಕಳನ್ನು ಬಿಡುತ್ತಿದ್ದರು. ಉಪನಯನದ ಜೊತೆಗೇ ವೇದಾರಂಭ ಸಂಸ್ಕಾರವನ್ನೂ ಮಾಡುತ್ತಿದ್ದರು. (ಉಪ ಎಂದರೆ ಹತ್ತಿರಕ್ಕೆ, ನಯನವೆಂದರೆ ಕರೆದೊಯ್ಯುವುದು.) ಮಗುವನ್ನು ವಿದ್ಯಾಭ್ಯಾಸದ ಸಲುವಾಗಿ ಗುರುಗಳ ಬಳಿಗೆ ಕರೆದೊಯ್ಯುವುದೇ ಉಪನಯನ. ಆಗ ಸಂಕಲ್ಪದ ರೂಪದಲ್ಲಿ ಧರಿಸಲಾಗುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಆಚಾರ್ಯಋಣ, ಪಿತೃಋಣಗಳನ್ನು ಸಂಕೇತಿಸುತ್ತವೆ. ಇದು ಬಹು ಹಿಂದೆ ಜಾತಿಸೂಚಕ ಚಿಹ್ನೆಯಾಗಿರಲಿಲ್ಲ ಮತ್ತು ಹೆಣ್ಣು ಮಕ್ಕಳೂ ಉಪನಯನ ಮಾಡಿಸಿಕೊಳ್ಳಲು, ಶಿಕ್ಷಣ ಪಡೆಯಲು ಅರ್ಹರಿದ್ದರು. ವೇದಾರಂಭವೆಂದರೆ ಕೇವಲ ವೇದಮಂತ್ರಗಳನ್ನು ಕಲಿಯುವುದಲ್ಲ, ಇನ್ನಿತರ ವಿದ್ಯೆಗಳನ್ನೂ-ಗಣಿತ, ವಿಜ್ಞಾನ, ಶಸ್ತ್ರವಿದ್ಯೆ, ತರ್ಕ, ಮುಂತಾದ- ಕಲಿಯುವುದಾಗಿತ್ತು. ವೇದ ಎಂಬ ಪದದ ಅರ್ಥ ಜ್ಞಾನ ಎಂದೇ ಹೊರತು ಬೇರೆಯಲ್ಲ. ಗುರುಕುಲಗಳಲ್ಲಿ ಸಕಲವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು. ಶಿಕ್ಷಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆಯುತ್ತಿದ್ದರು. ವೇದಾರಂಭವೆಂದರೆ ಜ್ಞಾನಾರ್ಜನೆಯ ಆರಂಭ ಎಂಬುದೇ ಸಾಮಾನ್ಯ ಅರ್ಥ ಮತ್ತು ಉದ್ದೇಶ. ರಾಮ, ಕೃಷ್ಣ, ಪಾಂಡವರೇ ಮೊದಲಾದವರು ಗುರುಕುಲಗಳಲ್ಲಿ ಶಸ್ತ್ರ-ಶಾಸ್ತ್ರ ಪ್ರವೀಣರಾದ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಗುರುಕುಲಗಳಲ್ಲಿ ಜಾತಿಭೇದವಿರಲಿಲ್ಲ, ಉಚ್ಛ-ನೀಚ ಭಾವನೆಗಳಿರಲಿಲ್ಲ. ರಾಜರ ಮಕ್ಕಳೂ, ಸಾಮಾನ್ಯರ ಮಕ್ಕಳೂ ಒಟ್ಟಿಗೇ ಗುರುಕುಲಗಳಲ್ಲಿ ವಾಸವಿದ್ದು ಸಮಾನಭಾವದಲ್ಲಿ ವಿದ್ಯೆ ಕಲಿಯಬೇಕಿತ್ತು. ಸಮಾಜದ ಋಣದಲ್ಲಿ ನಡೆಯುತ್ತಿದ್ದ ಗುರುಕುಲಗಳಿಗೆ ಶಿಕ್ಷಾರ್ಥಿಗಳು ಭಿಕ್ಷೆ ಸಂಗ್ರಹಿಸಿ ಆಚಾರ್ಯರಿಗೆ ನೀಡುತ್ತಿದ್ದರು. ಶಿಕ್ಷಾರ್ಥಿಗಳು ಶಕ್ತಿ ಮತ್ತು ಆಸಕ್ತಿಗಳಿಗನುಸಾರವಾಗಿ ಶಿಕ್ಷಣ ಪಡೆದು ಪ್ರವೀಣರೆನಿಸಿದಾಗ ಸಮಾವರ್ತನ (ಬೀಳ್ಕೊಡುಗೆ ಕಾರ್ಯಕ್ರಮ) ಸಂಸ್ಕಾರ ನಡೆಯುತ್ತದೆ. ಆಗ ಗುರು ಶಿಷ್ಯರಿಗೆ ವಿಶೇಷವಾಗಿ ಉಪದೇಶಿಸಿ ಸತ್ಪ್ರಜೆಗಳಾಗಲು ಹರಸಿ ಬೀಳ್ಕೊಡುತ್ತಾರೆ. ಗುರುಕುಲದಲ್ಲಿದ್ದಷ್ಟು ಕಾಲವೂ ಗುರು ನೀಡಿದ್ದು ಉಪದೇಶವೇ ಆಗಿದ್ದರೂ, ಸಮಾವರ್ತನ ಕಾಲದಲ್ಲಿ ಅವೆಲ್ಲವನ್ನೂ ಸಾರರೂಪದಲ್ಲಿ ಸಂಗ್ರಹವಾಗಿ ತಿಳಿಸುತ್ತಾರೆ. ಹಾಗೆ ಸ್ನಾತಕರೆನಿಸಿಕೊಂಡ ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿದಾಗ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ, ಸ್ವಸಾಮರ್ಥ್ಯದಲ್ಲಿ ಬದುಕುವ, ಸಮಾಜಕ್ಕೆ ಒದಗುವ ಯಾವುದೇ ಅಪಾಯದ ವಿರುದ್ಧ ಸೆಟೆದುನಿಲ್ಲುವ, ರಕ್ಷಿಸುವ ಸಾಮರ್ಥ್ಯ ಹೊಂದಿರುತ್ತಾರೆ, ಗುರು-ಹಿರಿಯರಿಗೆ ಗೌರವ ತೋರಿಸುವವರಾಗಿರುತ್ತಾರೆ.
     ಬ್ರಿಟಿಷರ ಆಗಮನದೊಂದಿಗೆ ವ್ಯವಸ್ಥಿತವಾಗಿ ಗುರುಕುಲಗಳು ಮುಚ್ಚಲ್ಪಡತೊಡಗಿದವು ಮತ್ತು ಶಿಕ್ಷಣವನ್ನು ಕೇವಲ ಭೌತಿಕ ಅವಶ್ಯಕತೆಗಳನ್ನು ಪೂರೈಸುವ ಸಾಧನವಾಗಿ ಪರಿಗಣಿಸುವ ಶಾಲೆಗಳು ಆರಂಭವಾದವು. ಇಂದಾದರೋ ಅಂತರರಾಷ್ಟ್ರೀಯ ಮಟ್ಟದ ಹೈಟೆಕ್ ಶಾಲೆಗಳು, ಕಾಲೇಜುಗಳು ಎಂಬ ಹಣೆಪಟ್ಟಿಯೊಂದಿಗೆ ಶಿಕ್ಷಣ ಸಂಸ್ಥೆಗಳು ಹಣಗಳಿಕೆಯ ಉದ್ಯಮವಾಗಿವೆ ಮತ್ತು ವಿದ್ಯಾರ್ಥಿಗಳಿಗೆ ಹಣಗಳಿಕೆಯೇ ಜೀವನದ ಪರಮೋದ್ದೇಶ ಎಂದು ಹೇಳಿಕೊಡಲಾಗುತ್ತಿದೆ. ತಳಪಾಯವೇ ಭದ್ರವಿರದಿದ್ದರೆ ಕಟ್ಟಡ ಹೇಗೆ ಭದ್ರವಿದ್ದೀತು? ನೈತಿಕ ಶಿಕ್ಷಣಕ್ಕೆ ಆದ್ಯತೆಯಿಲ್ಲ, ಮಾತೃಭಾಷೆಗೆ, ಭಾರತೀಯ ಭಾಷೆಗಳಿಗೆ ಪ್ರೋತ್ಸಾಹವಿಲ್ಲ. ಇಂಗ್ಲಿಷ್ ಕಲಿಯದಿದ್ದರೆ ಉಳಿಗಾಲವಿಲ್ಲವೆಂಬ ಭಾವನೆಗೆ ಒತ್ತುಕೊಟ್ಟು ಇಂಗ್ಲಿಷನ್ನು ಮತ್ತಷ್ಟು ಭದ್ರಗೊಳಿಸುತ್ತಿದ್ದೇವೆ. ಸ್ವಂತಿಕೆಗೆ ಬೆಲೆ ಕೊಡದ, ಸ್ವಾಭಿಮಾನಕ್ಕೆ ಬೆಲೆ ಕೊಡದ ಶಿಕ್ಷಣ ಪದ್ಧತಿ ಬೇಕೇ ಎಂಬುದು ವಿಚಾರ ಮಾಡಬೇಕಾದ ಸಂಗತಿ.
     ಎಲ್ಲಾ ವ್ಯವಸ್ಥೆಗಳಲ್ಲೂ ಶಿಥಿಲತೆ ಮೂಡುವಂತೆ ವೇದಕಲಿಕೆಯ ವಿಚಾರದಲ್ಲೂ ತಪ್ಪು ಅಭಿಪ್ರಾಯಗಳು ಮೂಡಿದವು, ಸಂಪ್ರದಾಯಸ್ಥರು ಅದನ್ನು ಬಲಗೊಳಿಸಿ, ಅವೈದಿಕ ವಿಚಾರಗಳನ್ನೂ ವೈದಿಕವೆಂಬಂತೆ ಬಿಂಬಿಸತೊಡಗಿದರು. ವೇದಕಲಿಕೆ ಕೇವಲ ಒಂದು ವರ್ಗಕ್ಕೆ, ಅದರಲ್ಲೂ ಪುರುಷರಿಗೆ ಮಾತ್ರ ಎಂಬ ಅಭಿಪ್ರಾಯಕ್ಕೆ ಪುಷ್ಟಿ ಸಿಗತೊಡಗಿತು. ಆದಿಗುರು ಶಂಕರಾಚಾರ್ಯರು ಸಾಧನಾ ಪಂಚಕದಲ್ಲಿ 'ವೇದೋ ನಿತ್ಯಮಧೀಯತಾಂ ತದುತಿತಂ ಕರ್ಮ ಸ್ವನುಷ್ಠೀಯತಾಂ' (ನಿತ್ಯ ವೇದಾಧ್ಯಯನ ಮಾಡಬೇಕು ಮತ್ತು ವೇದೋಕ್ತ ಕರ್ಮಗಳನ್ನು ಅನುಸರಿಸಬೇಕು) ಎಂದಿರುವುದು ನಿರ್ದಿಷ್ಟ ವರ್ಗದವರು, ನಿರ್ದಿಷ್ಟ ಲಿಂಗಿಗಳು ಮಾತ್ರ ವೇದಾಧ್ಯಯನ ಮಾಡಲಿ ಎಂದಲ್ಲ. ಸಾಧನೆ ಮಾಡಬಯಸುವವರೆಲ್ಲರೂ ಮಾಡಬೇಕಾದ ಕಾರ್ಯವಿದು. ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿ ಜ್ಞಾನ ಎಲ್ಲರ ಸಂಪತ್ತು, ವಿಶ್ವದ ಸಂಪತ್ತು, ಅದು ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ಮಹರ್ಷಿ ದಯಾನಂದ ಸರಸ್ವತಿಯವರೇ ಮೊದಲಾದ ಅನೇಕ ಮಹನೀಯರು ಸ್ತುತ್ಯ ಕಾರ್ಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ನಾಲ್ಕು ವೇದಗಳಿಗೆ ಬರೆದ ಭಾಷ್ಯದ ಕನ್ನಡ ಅವತರಣಿಕೆ 20 ಸಂಪುಟಗಳಲ್ಲಿ ಪಂ. ಸುಧಾಕರ ಚತುರ‍್ವೇದಿಯವರ ಪ್ರಧಾನ ಸಂಪಾದಕತ್ವದಲ್ಲಿ ಹಲವಾರು ವರ್ಷಗಳ ಶ್ರಮದ ಫಲವಾಗಿ ಬಿಡುಗಡೆಯಾಗಿದೆ. ಲಭ್ಯ ಸಾಹಿತ್ಯಗಳಲ್ಲಿ ಅತಿ ಪುರಾತನವಾದ ವೇದ ಸಾಹಿತ್ಯದಲ್ಲಿ ಜೀವನಕ್ಕೆ ಬೇಕಾದ ಅತ್ಯಮೂಲ್ಯ ವಿಚಾರಗಳು, ಸತ್ಯ ಪ್ರತಿಪಾದನೆ, ನಿಖರತೆ ಮತ್ತು ಸರ್ವಹಿತ ಬಯಸುವ ಒಳ್ಳೆಯ ವಿಚಾರಗಳಿಗೆ ನೀಡಲಾಗಿರುವ ಒತ್ತು ಸದಾಕಾಲಕ್ಕೆ ಸ್ವಸ್ಥ ಸಮಾಜಕ್ಕೆ ಬೇಕಾದುದಾಗಿದೆ. ವೇದಾಧ್ಯಯನಕ್ಕೆ ಸೂಕ್ತ ಪ್ರೋತ್ಸಾಹ ದೊರಕಿದರೆ ಸ್ವಸ್ಥ ಸಮಾಜಕ್ಕೆ ಉತ್ತಮ ಕೊಡುಗೆ ಆಗುತ್ತದೆ. ಒಳ್ಳೆಯ ವಿಚಾರಗಳು ಯಾರಿಂದ ಬಂದರೂ, ಎಲ್ಲಿಂದ ಬಂದರೂ ಸ್ವೀಕರಿಸಬೇಕು ಅನ್ನುವುದು ವೇದದ ತಿರುಳಾಗಿದೆ. ಈ ಮನೋಭಾವ ಎಲ್ಲರಿಗೂ ಬರಲಿ ಎಂಬದು ಆಶಯ.
-ಕ.ವೆಂ.ನಾಗರಾಜ್.


ಶುಕ್ರವಾರ, ಸೆಪ್ಟೆಂಬರ್ 22, 2017

ನಾವೇಕೆ ಬದುಕಿದ್ದೇವೆ?


     ಇದೆಂತಹ ಪ್ರಶ್ನೆ? ಏಕೆ ಬದುಕಿದ್ದೇವೆ ಅಂದರೆ ಸಾಯಲು ಇಚ್ಛಿಸುವುದಿಲ್ಲ ಅದಕ್ಕೆ ಎಂದು ಹೇಳುತ್ತೀರಿ ಎಂದು ಗೊತ್ತು. ಸಾಯಲು ಇಚ್ಛಿಸುವವರು ಯಾರಾದರೂ ಇದ್ದಾರೆಯೇ? ಸಾಯಬಯಸುವ ಯಾವುದೇ ಜೀವಿ -ಅದು ಮಾನವನಿರಬಹುದು, ಪ್ರಾಣಿಯಿರಬಹುದು, ಕ್ರಿಮಿ-ಕೀಟವಿರಬಹುದು, ಗಿಡ-ಮರಗಳಿರಬಹುದು- ಇದೆಯೇ? ಆತ್ಮಹತ್ಯೆ ಮಾಡಿಕೊಳ್ಳುವವರು ಇರುತ್ತಾರೆ ಎಂದು ನೀವು ಹೇಳಬಹುದು. ಅವರು ಸಾಯುವುದೂ, ಸಾಯಬಯಸುವುದೂ ತಮ್ಮ ಇಚ್ಛೆಯಂತೆ ಬದುಕಲಿಕ್ಕಾಗಿಯೇ ಎಂದು ನನ್ನ ಉತ್ತರವಿದೆ. ಎಷ್ಟು ದೀರ್ಘಕಾಲದವರೆಗೆ ಬದುಕಲು ಸಾಧ್ಯವೋ ಅಷ್ಟೂ ಕಾಲ ಎಲ್ಲರೂ ಬದುಕಿರಬಯಸುತ್ತಾರೆ. ನಾವಂತೂ ಸಾಯಬಯಸುವುದಿಲ್ಲ. ಆದರೆ ಸಾಯಬಯಸದ ಇತರ ಪ್ರಾಣಿಗಳನ್ನು ಸಾಯಿಸುತ್ತೇವಲ್ಲಾ, ಇದು ಯಾವ ನ್ಯಾಯ? ಹೋಗಲಿ ಬಿಡಿ, ವಿಷಯಾಂತರವಾಗುವುದರಿಂದ ಇದನ್ನು ಇಲ್ಲಿಗೆ ನಿಲ್ಲಿಸಿ ಮೂಲ ವಿಷಯಕ್ಕೆ ಬರುತ್ತೇನೆ. ನಾವು ಏಕೆ ಸಾಯಬಯಸುವುದಿಲ್ಲ? ಬದುಕಬೇಕು, ಅದಕ್ಕೆ ಸಾಯಬಯಸುವುದಿಲ್ಲ ಎಂದು ನೀವು ರೇಗಿದರೂ ನಾನು ಮತ್ತೆ ಕೇಳುತ್ತೇನೆ, ಏಕೆ ಬದುಕಬೇಕು?
     ಏಕೆ ಬದುಕಬೇಕೆಂದರೆ ನಮ್ಮಲ್ಲಿ ಬದುಕಬೇಕೆಂಬ ಆಸೆ ಸುಪ್ತವಾಗಿದೆ. ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಆಸೆಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ ಆಸೆ! ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ಗಮನಿಸಬೇಕು. ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದೇ ಸತ್ಯ. ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಕಷ್ಟ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು.
      'ದೀರ್ಘಾಯುಷ್ಮಾನ್ ಭವ' ಎಂದು ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುತ್ತಾರೆ. ದೇವರೇ, ನನಗೆ (ನಮಗೆ ಎಂದು ನಮ್ಮ ಕುಟುಂಬದವರನ್ನೂ ಸೇರಿಸುತ್ತೇವೆ) ದೀರ್ಘಾಯಸ್ಸು, ಆರೋಗ್ಯ, ಸಂಪತ್ತು ಕೊಡು ಎಂದು ಪ್ರಾರ್ಥನೆ ಮಾಡುತ್ತೇವೆ. ಈ ದೀರ್ಘಾಯಸ್ಸು ಅಂದರೆ ಏನಿರಬಹುದು? ಅದು ಬಹುಷಃ ನಾವು ಭಾವಿಸಿರುವಂತೆ ಈಗ ಹೊಂದಿರುವ ಶರೀರವನ್ನೇ ಧರಿಸಿ ಇರುವ ಬಯಕೆಯಂತೂ ಇರಲಾರದು. ನಾವು ಗೊತ್ತಿಲ್ಲದಂತೆಯೇ, ನಮಗೇ ಅದು ಏನೆಂದು ನಮ್ಮ ಮನಸ್ಸಿಗೇ ಸ್ಪಷ್ಟವಿರದ ಸಂಗತಿಯ ಬಗ್ಗೆ ಪ್ರಾರ್ಥಿಸುತ್ತೇವೆ. ನಾವು ನಮ್ಮ ಕಲ್ಪನೆಗೂ ಮೀರಿದಂತಹ ಅದೇನೋ ಬಯಸುತ್ತೇವೆ. ಈ ದೀರ್ಘಾಯಸ್ಸು ಅಂದರೆ ಈಗಿನ ಶರೀರದಲ್ಲಿಯೇ ಬಹುಕಾಲ ಇರುವುದೇ? ಅದು ಬಾಲ್ಯಕಾಲದ ಶರೀರವೇ, ಯುವಾವಸ್ಥೆಯ ಶರೀರವೇ, ಮಧ್ಯವಯಸ್ಸಿನ ಶರೀರವೇ, ಪ್ರೌಢಾವಸ್ಥೆಯ ಶರೀರವೇ ಅಥವ ವೃದ್ಧಾಪ್ಯದ ಶರೀರವೇ? ಯಾವುದು ಎಂದು ನಾವು ಖಚಿತವಾಗಿ ಹೇಳಲಾರೆವು ಮತ್ತು ಅದೇ ಸ್ಥಿತಿಯಲ್ಲಿ ಬಹುಕಾಲ ಇರಲಾರೆವು ಎಂಬ ಅರಿವೂ ನಮಗೆ ಇರುತ್ತದೆ. ಆದರೂ ನಮಗೆ ದೀರ್ಘಾಯಸ್ಸು ಬೇಕು!
     ನಮ್ಮ ಒಳಾಂತರಂಗದಲ್ಲಿ ಅಡಗಿದ ಬಯಕೆಯೆಂದರೆ ನಮ್ಮ ಅಸ್ತಿತ್ವದ ಮಹತ್ವವನ್ನು ಚಿರವಾಗಿ ಇರುವಂತೆ ಮಾಡುವುದೇ ಆಗಿದೆ! ವಿಚಾರ ಮಾಡಿದರೆ, ಶರೀರದ ಮೂಲಕ ನಾವು ಹೊಂದಿರುವ ಅಸ್ತಿತ್ವವನ್ನೇ ನಮ್ಮ ಅಸ್ತಿತ್ವ ಎಂದು ತಪ್ಪಾಗಿ ಗುರುತಿಸಿಕೊಂಡರೂ, ಶಾರೀರಿಕ ಅಸ್ತಿತ್ವಕ್ಕೂ ಮೀರಿ ಮುಂದುವರೆಯುವ ಸೂಕ್ಷ್ಮ ತುಡಿತ ಇರುವುದನ್ನು ಕಂಡುಕೊಳ್ಳಬಹುದು. ಈ ಕಾರಣದಿಂದಲೇ ನಾವು ಹೆಚ್ಚು ಹೆಚ್ಚು ಬಯಸುತ್ತಾ ಹೋಗುವುದು, ಹೆಚ್ಚು ಹೆಚ್ಚು ಸಂಗ್ರಹಿಸುತ್ತಾ ಹೋಗುವುದು ಮತ್ತು ನಮ್ಮ ಅಸ್ತಿತ್ವವನ್ನು ಬಾಹ್ಯವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುವುದು! ಇದನ್ನು ಅನುಭವಿಸುವ ಸಲುವಾಗಿಯೇ ದೀರ್ಘಾಯಸ್ಸು ಕೋರುವುದು! ನಮ್ಮ ಪ್ರಾಪ್ತಿ(ಸಾಮ್ರಾಜ್ಯ ಅಂದುಕೊಳ್ಳೋಣ)ಯನ್ನು ಮತ್ತು ಸಮಯವನ್ನು ಹೆಚ್ಚಿಸಿಕೊಳ್ಳಬಯಸುವುದೇ ನಮ್ಮ ಆಸೆಯಾಗಿದೆ. ಇದಕ್ಕಾಗಿಯೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇವೆ. ನಾವು ಈಗಿರುವುದಕ್ಕಿಂತಲೂ ಹೆಚ್ಚಿನದನ್ನು ಎಲ್ಲಾ ಸಾಧ್ಯ ಮಾರ್ಗಗಳಿಂದ ಪಡೆಯಬಯಸುತ್ತೇವೆ. ಅದು ಎಷ್ಟರಮಟ್ಟಿಗೆ ಎಂದರೆ, ಈಗಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ನಾಡಿದ್ದು, ಹೀಗೆಯೇ ಮುಂದುವರೆದು ಅನಂತಕಾಲದವರೆಗೆ ಇಡೀ ವಿಶ್ವವೇ ನಮ್ಮದಾಗಬೇಕೆಂಬವರೆಗೆ ಈ ಅಸೆ ಅಪ್ರಜ್ಞಾತ್ಮಕವಾಗಿ ನಮ್ಮಲ್ಲಿ ಸುಪ್ತವಾಗಿರುತ್ತದೆ. ಆದರೆ ತಿಳುವಳಿಕೆಯ ಕೊರತೆಯಿಂದ ಈ ಶರೀರದಲ್ಲಿಯೇ ದೀರ್ಘವಾಗಿ ಇರಬೇಕೆಂಬ ಆಸೆ ನಮ್ಮದು ಎಂದು ಅಂದುಕೊಂಡುಬಿಡುತ್ತೇವೆ. ಚತುರ್ವಿಧ ಪುರುಷಾರ್ಥಗಳಲ್ಲಿ ಈ ಕಾಮ/ಆಸೆಗೂ ಪ್ರಧಾನ ಸ್ಥಾನವಿದೆ. ಸಣ್ಣ ಸಣ್ಣ ಅಸೆಗಳನ್ನು ಬಿಟ್ಟು ಅತ್ಯಂತ ಗರಿಷ್ಠವಾದುದನ್ನು ಪಡೆಯಲು ನೆರವಾಗುವ ದೊಡ್ಡ ಆಸೆಯೇ ಪುರುಷಾರ್ಥ ಸಾಧನೆಗೆ ನೆರವಾಗುವ ಕಾಮವಾಗಿದೆ.
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||
     ಬದುಕುವ ಆಸೆ ಅನ್ನುವುದು ನಮ್ಮ ಅಸ್ತಿತ್ವಕ್ಕೆ ಆಧಾರ ಎಂದು ಮೇಲಿನ ತರ್ಕದಿಂದ ತಿಳಿಯುತ್ತದೆ. ಆದರೆ ಈ ಬದುಕುವುದು ಅಂದರೆ ಏನು, ಬದುಕಿನ ಗುರಿ ಏನು ಎಂಬುದಕ್ಕೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಸ್ವರ್ಗ ಅಥವ ಮೋಕ್ಷ ಪ್ರಾಪ್ತಿಗಾಗಿ ಬದುಕುವುದು ಅನ್ನುತ್ತಾರೆ. ಹುಟ್ಟುವುದು ಆಕಸ್ಮಿಕವಾದರೂ ಸಾಯುವುದು ಖಚಿತ ಎನ್ನುವವರೂ ಇದ್ದಾರೆ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಗುರಿಯಾಗಿರಲಿಕ್ಕಿಲ್ಲ. ಹುಟ್ಟುವುದಕ್ಕಿಂತ ಮುಂಚೆ ಮತ್ತು ಸತ್ತ ನಂತರದಲ್ಲಿ ನಾವು ಈಗ ಹೊಂದಿರುವ ರೂಪದಲ್ಲಿ ಇರುವುದಿಲ್ಲ. ಆದ್ದರಿಂದ ಸಾವು ಅಂತಿಮವಲ್ಲ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಬದುಕಿನ ಗುರಿಯಾಗಿದ್ದರೆ ನಾವು ಹುಟ್ಟುತ್ತಲೇ ಇರುತ್ತಿರಲಿಲ್ಲ. ಹುಟ್ಟಿರುವುದರಿಂದ ನಾವು ಗುರಿಯನ್ನು ತಲುಪಿಲ್ಲವೆಂದು ಹೇಳಬೇಕೆ? ಸ್ವಾಮಿ ದಯಾನಂದರು ಹೇಳುತ್ತಾರೆ: ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ. ಎಷ್ಟು ಸತ್ಯ!
     ಬದುಕುವ ಆಸೆ ನಮ್ಮನ್ನು ಬದುಕಿಸಿದೆ. ಒಂದು ಗುರಿಯನ್ನು ತಲುಪಲು ನಾವು ಬಯಸಿದರೆ ಅದು ಕಷ್ಟಸಾಧ್ಯವೇನಲ್ಲ. ಯಾವುದೇ ಬಯಕೆ ಈಡೇರಲಾರದಂತಹುದೇನೂ ಅಲ್ಲ. ಅದನ್ನು ಸಾಧಿಸಲು ಸತತ ಪ್ರಯತ್ನ ಮಾಡಬೇಕಷ್ಟೆ. ಕೆಳಹಂತದ ಗುರಿಗಳು, ಆಸೆಗಳು, ಬಯಕೆಗಳನ್ನು ಬಿಟ್ಟು ಉನ್ನತವಾದ ಗುರಿಯೆಡೆಗೆ ನಮ್ಮ ಲಕ್ಷ್ಯವಿದ್ದರೆ ನಮ್ಮ ಶಾರೀರಿಕ ಅಸ್ತಿತ್ವವನ್ನು ಮೀರಿ ನಮ್ಮ ನೈಜ ಅಸ್ತಿತ್ವ ಮುನ್ನಡೆಯುತ್ತದೆ. ಇದನ್ನೇ ಬದುಕುವುದು ಅನ್ನಬಹುದು.
ಬಂಡಿಗೊಡೆಯನು ನೀನೆ ಪಯಣಿಗನು ನೀನೆ
ಅವನ ಕರುಣೆಯಿದು ಅಹುದಹುದು ತಾನೆ |
ಗುರಿಯ ಅರಿವಿರಲು ಸಾರ್ಥಕವು ಪಯಣ
ಗುರಿಯಿರದ ಪಯಣ ವ್ಯರ್ಥ ಮೂಢ ||
-ಕ.ವೆಂ.ನಾಗರಾಜ್.

ಶುಕ್ರವಾರ, ಸೆಪ್ಟೆಂಬರ್ 15, 2017

ವಿವೇಚನಾ ಶಕ್ತಿ ಬಳಸೋಣ! (ಪಂ.ಸುಧಾಕರ ಚತುರ್ವೇದಿಯವರ ವಿಚಾರಧಾರೆ)


     ಪಶು-ಪಕ್ಷಿ, ಕ್ರಿಮಿ-ಕೀಟಗಳಿಗೂ ಮಾನವರಿಗೂ ಇರುವ ವ್ಯತ್ಯಾಸವೆಂದರೆ ಆ ಕ್ರಿಮಿ-ಕೀಟ, ಪಶು-ಪಕ್ಷಿಗಳು ತಮ್ಮ ಸ್ವಾಭಾವಿಕ ಪ್ರಕೃತಿ ಅನುಸರಿಸಿ ಬಾಳುತ್ತವೆ. ಒಂದು ನಾಯಿ ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ನಾಯಿಯ ತಲೆಯೊಳಗೆ ಬೆಕ್ಕು ಶತ್ರು ಎಂದು ಇರುವುದಿಲ್ಲ, ಅದು ಅದರ ಪ್ರವೃತ್ತಿ, ಅದಕ್ಕೆ ಆಹಾರ ಬೇಕು, ಯಾವುದಾದರೂ ಆಗಬಹುದು. ಬೆಕ್ಕಿಗೆ ಇಲಿಯ ಮೇಲೆ ಏನಾದರೂ ಕೋಪವಿದೆಯೆ? ಇಲಿಗೂ ಅಷ್ಟೆ, ಬೆಕ್ಕಿನ ಮೇಲೆ ಕೋಪವಿಲ್ಲ. ಅವುಗಳ ಸ್ವಾಭಾವಿಕ ಪ್ರವೃತ್ತಿಯಂತೆ ಅವು ವರ್ತಿಸುತ್ತವೆ. ಅವುಗಳಿಗೆ ಯೋಚನೆ ಮಾಡುವ ಶಕ್ತಿ ಇಲ್ಲ. ಹಸಿವಾದಾಗ ಏನಾದರೂ ತಿನ್ನಬೇಕು, ಬಾಯಾರಿದಾಗ ಏನಾದರೂ ಕುಡಿಯಬೇಕು, ಅಷ್ಟೇ ಅವಕ್ಕೆ ಗೊತ್ತಿರುವುದು. ಒಳ್ಳೆಯದೋ ಕೆಟ್ಟದ್ದೋ ಎಂದು ವಿವೇಚಿಸುವ ಶಕ್ತಿ ಅವಕ್ಕೆ ಇಲ್ಲ.  ಆದರೆ ಮಾನವರಿಗೆ ವಿವೇಚನೆ ಮಾಡುವ ಶಕ್ತಿ ಇದೆ.  ತೆಂಗಿನ ಮರವಿದೆ, ಈಚಲ ಮರವಿದೆ, ಇವೆಲ್ಲಾ ಭಗವಂತನ ಸೃಷ್ಟಿಯೇ. ಪರಮಾತ್ಮ ತೆಂಗಿನ ಮರವನ್ನಾಗಲೀ, ಈಚಲಮರವನ್ನಾಗಲೀ ಸೃಷ್ಟಿಸಿರುವುದು, ಅದರಿಂದ ಹೆಂಡ ಇಳಿಸಿ ಕುಡಿದು ಮತ್ತಿನಿಂದ ಕುಣಿದಾಡಲಿ ಅನ್ನುವ ಉದ್ದೇಶದಿಂದ ಅಲ್ಲ. ಪ್ರಾಣಿಗಳನ್ನು, ಪಕ್ಷಿಗಳನ್ನು ಸೃಷ್ಟಿಸಿರುವುದು ಅವನ್ನು ಮನುಷ್ಯ ತಿಂದು ತೇಗಲಿ ಎಂದಲ್ಲ. ಉಪಯೋಗ ಮಾಡುವಾಗ ನಾವು ತಪ್ಪುತ್ತೇವೆ. ಯಾವ ಕೆಲಸಕ್ಕೆ ಯಾವ ಪದಾರ್ಥ ಉಪಯೋಗಿಸಬೇಕೋ ಅದನ್ನು ಉಪಯೋಗಿಸುವುದಿಲ್ಲ. ಮನುಷ್ಯನ ವಿವೇಚನಾ ಶಕ್ತಿ ಬಳಕೆಗೆ ಬರಬೇಕಾದುದು ಇಲ್ಲಿಯೇ!
     ಭಗವಂತ ಈ ಭೂಮಿ, ಆಕಾಶ, ನೀರು, ಬೆಂಕಿ, ಗಾಳಿ ಯಾವುದನ್ನೂ ನಿರರ್ಥಕವಾಗಿ ಕೊಟ್ಟಿಲ್ಲ. ಪ್ರತಿಯೊಂದಕ್ಕೂ ಒಂದೊಂದು ಉದ್ದೇಶ ಇದ್ದೇ ಇದೆ. ಬೆಂಕಿ ಇದೆ, ಅದನ್ನು ಒಳ್ಳೆಯ ಕೆಲಸಕ್ಕೆ ಅಂದರೆ ಅಡಿಗೆ ಮಾಡುವುದಕ್ಕೆ, ಅಗ್ನಿಹೋತ್ರ ಮಾಡುವುದಕ್ಕೆ, ಇತ್ಯಾದಿಗೆ ಬಳಸಬಹುದು. ಯಾರ ಮೇಲೋ ಕೋಪ ಇದೆ ಎಂದು ಅವನ ಮನೆಯನ್ನು ಸುಡಲೂ ಬಳಸಬಹುದು. ಬೆಂಕಿಗೆ ವಿವೇಕವಿಲ್ಲ, ಅದರ ಕೆಲಸ ಸುಡುವುದು ಅಷ್ಟೆ. ವಾಯುಶುದ್ಧಿ ಬಗ್ಗೆ ಮಾತಾಡ್ತೀವಿ, ಅಗ್ನಿಹೋತ್ರ ಮಾಡ್ತೀವಿ, ಒಂದು ಚಮಚ ತುಪ್ಪ ಒಬ್ಬರು ತಿನ್ನಬಹುದು. ಅದನ್ನೇ ಅಗ್ನಿಗೆ ಹಾಕಿದರೆ ನಾಶವಾಗುವುದಿಲ್ಲ, ಸೂಕ್ಷ್ಮ ಕಣಗಳಾಗಿ ಪರಿವರ್ತಿತವಾಗಿ ವಾಯುವಿನಲ್ಲಿ ಹರಡಿ ಅದನ್ನು ಎಷ್ಟು ಜನ ಉಸಿರಾಡುತ್ತಾರೋ ಅವರಿಗೆಲ್ಲಾ ಉಪಯೋಗವಾಗುತ್ತದೆ. ನಮ್ಮ ಋಷಿಮುನಿಗಳು ಯಾವುದನ್ನೂ ನಿರರ್ಥಕವಾಗಿ ಹೇಳಲಿಲ್ಲ. ಚಿನ್ನದ ಪಾತ್ರೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ, ಮಣ್ಣಿನ ಕುಡಿಕೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ. ಅದಕ್ಕೆ ಬಡವರು, ಶ್ರೀಮಂತರು ಅನ್ನುವ ಭೇದವಿಲ್ಲ. ಇಷ್ಟೇ ಮಾಡ್ತೀವೇನು? ಬೆಂಕಿಯನ್ನು ಬೀಡಿ, ಸಿಗರೇಟು, ಚುಟ್ಟಾ ಸೇದಲೂ ಬಳಸುತ್ತೇವೆ. ಬೆಂಕಿ ಯಾವುದನ್ನು ಕೊಟ್ಟರೂ ಸುಡುತ್ತೆ. ವಾಯುಶುದ್ಧಿ ಆಗಬೇಕು ಅನ್ನುತ್ತಾ ಮಂತ್ರ ಹೇಳಿಕೊಂಡು ಅಗ್ನಿಹೋತ್ರ ಮಾಡೋದು ಏಕೆ? ಮಂತ್ರ ಹೇಳದೇ ಮಾಡಬಹುದಲ್ಲ ಎನ್ನಬಹುದು. ಮಂತ್ರಗಳಲ್ಲಿ ಆಧ್ಯಾತ್ಮವಿದೆ. ಭಗವಂತ, ನನ್ನ ಜೀವನ, ಈ ಆತ್ಮ ನಿನಗೆ ಕಾಷ್ಠ, ಸಮಿತ್ತು ಇದ್ದ ಹಾಗೆ ಎಂದು ಸಮಿತ್ತು ಅಇಸುವಾಗ ಹೇಳುತ್ತೇವೆ. ಭಗವಂತ ಬ್ರಹ್ಮಾಂಡ, ದೊಡ್ಡ ಅಗ್ನಿ, ಆ ಅಗ್ನಿಯಲ್ಲಿ ನಮ್ಮ ಆತ್ಮವನ್ನು ಹಾಕಿದರೆ, ನಮ್ಮ ಆತ್ಮ ಇಲ್ಲದಂತಹ ಅದ್ಭುತ ಜ್ಞಾನ ನಮಗೆ ಬರುತ್ತದೆ. ಅಂತರಂಗದ ಆತ್ಮಾವಲೋಕನದ ದಾರಿ ತೆರೆದುಕೊಳ್ಳುತ್ತದೆ.
     ವೇದಗಳ ಮಾತಿನಲ್ಲಿ ಬುದ್ಧಿಪೂರ್ವಕವಲ್ಲದ ವಿಷಯಗಳಿಲ್ಲ. ನಾವು ಅರ್ಥದ ಕಡೆಗೆ ಗಮನ ಕೊಡುವುದಿಲ್ಲ, ಕೇವಲ ಮಂತ್ರ ಹೇಳಿಬಿಡುತ್ತೇವೆ, ಅರ್ಥವೇ ತಿಳಿಯದೆ, ಹಲವು ವರ್ಷಗಳಿಂದ ಪೂಜೆ-ಪುನಸ್ಕಾರಗಳನ್ನು ಮಾಡುವವರು ಇರುತ್ತಾರೆ. ಪ್ರಯೋಜನವೇನು? ಇದನ್ನು ಗಿಳಿಪಾಠ ಅನ್ನಬಹುದು. ರಾಮ-ರಾಮ ಅಂತ ಗಿಳಿಗೆ ಹೇಳಿಕೊಟ್ಟರೆ ಅದು ರಾಮ-ರಾಮ ಅನ್ನುತ್ತೆ. ಅದಕ್ಕೆ ರಾಮ ಯಾರು, ರಾವಣ ಯಾರು ಗೊತ್ತೇನು? ಅದರ ತಲೆಯಲ್ಲಿ ಆ ವಿಷಯ ಇರುವುದೇ ಇಲ್ಲ. ಅಂತಹ ಪಾಠವನ್ನು ನಾವೂ ಮಾಡಿದರೆ ಏನು ಪ್ರಯೋಜನ? ಅರ್ಥಸಹಿತವಾಗಿ ತಿಳಿದುಕೊಂಡರೆ ಅದನ್ನು ಜೀವನಕ್ಕೆ ತರಬಹುದು, ಅಂತಹವರನ್ನು ಕೇಳಿದರೆ, ಭಗವಂತನಿಗೆ ಅರ್ಥ ಗೊತ್ತಿರುತ್ತೆ.. ನಮಗೆ ಗೊತ್ತಿಲ್ಲದೇ ಹೋದರೂ ಭಗವಂತನಿಗೆ ಗೊತ್ತಾಗಲ್ವಾ? ಅನ್ನುತ್ತಾರೆ. ವೇದದ ಉಪದೇಶಗಳು ಭಗವಂತ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅಲ್ಲ, ಮಾನವಜಾತಿಯ ಬುದ್ಧಿಶಕ್ತಿಯನ್ನು ಎಚ್ಚರಿಸುವ ಸಲುವಾಗಿ! ನಾವು ಕ್ರಿಯಾತ್ಮಕವಾಗಿ ಆಲೋಚನೆ ಮಾಡಬೇಕು. ಋಜು ಮಾರ್ಗದಲ್ಲಿ, ನೇರ ಮಾರ್ಗದಲ್ಲಿ ಯಾರು ನಡೆಯುತ್ತಾರೋ ಅಂತಹ ವಿದ್ವಾಂಸರ ಬುದ್ಧಿ ನಮಗೆ ಬರಲಿ ಎಂದು ಬಯಸಬೇಕು. ಯಾವನು ತಪಸ್ವಿಯಲ್ಲವೋ, ಇಂದ್ರಿಯ ನಿಗ್ರಹ ಮಾಡುವುದಿಲ್ಲವೋ ಕೇವಲ ವೇದಪಾಠ ಮಾಡುತ್ತಾ ಹೋಗುತ್ತಾನೋ ಅವನು ಅವೈದಿಕನೇ ಸರಿ. ಮಾಡಬಾರದ್ದನ್ನು ಮಾಡಿ, ತಿನ್ನಬಾರದ್ದನ್ನು ತಿಂದು, ಆಡಬಾರದ್ದನ್ನು ಆಡಿ ವೇದಮಂತ್ರ ಹೇಳಿದರೆ ಏನೂ ಪ್ರಯೋಜನವಿಲ್ಲ.
     ವಿವಾಹ, ಉಪನಯನ ಮುಂತಾದ ಸಮಾರಂಭಗಳಲ್ಲಿ ಬಹಳ ಜನರು ಸೇರುತ್ತಾರೆ. ಪುರೋಹಿತರು ತಮ್ಮಷ್ಟಕ್ಕೆ ತಾವು ಮಂತ್ರ ಹೇಳ್ತಾ ಇರ್ತಾರೆ, ಆ ಮಂತ್ರದ ಅರ್ಥಗಳನ್ನು ಹೇಳುವುದಕ್ಕೆ, ಕೇಳುವುದಕ್ಕೆ ಯಾರಿಗೂ ವ್ಯವಧಾನವಿರುವುದಿಲ್ಲ. ಮಂತ್ರಗಳನ್ನು ಹೇಳುವ ಎಷ್ಟೋ ಪುರೋಹಿತರಿಗೂ ಅದರ ಅರ್ಥ ತಿಳಿದಿರುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಬಂದಿರೋ ಜನರೆಲ್ಲಾ ಸೇರಿಕೊಂಡು ಹರಟೆ ಹೊಡೆಯುತ್ತಿರುತ್ತಾರೆ. ಇದರಿಂದ ಲಾಭವೇನು? ಇಂತಹ ವಿಚಾರಗಳನ್ನು ಸತ್ಸಂಗಗಳಲ್ಲಿ ಹಂಚಿಕೊಳ್ಳುವ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ಈ ಮಾತು ಮನನೀಯವಾಗಿದೆ: ಪಂಡಿತಜಿ ಸುಮ್ಮನೆ ವೇದ, ವೇದ ಅಂತ ಹೇಳ್ತಾರೆ, ಅವರು ನಾಸ್ತಿಕರು, ದೇವಸ್ಥಾನಕ್ಕೆ ಹೋಗೋದಿಲ್ಲ, ಮಸೀದಿಗೆ ಹೋಗೋದಿಲ್ಲ, ಚರ್ಚಿಗೂ ಹೋಗೋದಿಲ್ಲ. ಹೌದು, ನಾನು ಹೋಗುವುದಿಲ್ಲ. ಆ ಎಲ್ಲವೂ ನನ್ನಲ್ಲೇ ಇದೆ. ದೇವಸ್ಥಾನವೂ ನನ್ನ ಎದೆಯಲ್ಲಿದೆ, ಮಸೀದಿಯೂ ಇದೆ, ಚರ್ಚೂ ಇದೆ. ಪರಮಾತ್ಮ ಇಲ್ಲೇ ಇದ್ದಾನೆ. ನಾನು ಹೊರಗೆ ಇನ್ನೆಲ್ಲಿ ಅವನನ್ನು ಹುಡುಕಲು ಹೋಗಬೇಕು? ಬಲ್ಬು ಇದೆ, ವಿದ್ಯುತ್ ಇದೆ, ಅವನ್ನು ಜೋಡಿಸುವ ಸ್ವಿಚ್ ಹಾಕಿದರೆ ಅದರಲ್ಲಿ ಲೈಟು ಹತ್ತುತ್ತದೆ, ಸ್ವಿಚ್ಚೇ ಇಲ್ಲದಿದ್ದರೆ ಬಲ್ಬು 100 ವೋಲ್ಟಿನದಾಗಿರಲಿ, 1000 ವೋಲ್ಟಿನದಾಗಿರಲಿ, ಹತ್ತುವುದಿಲ್ಲ. ಹಾಗೆಯೇ ಧ್ಯಾನ ಅನ್ನುವುದು ಸ್ವಿಚ್ಚು, ಆ ಸ್ವಿಚ್ಚಿರಬೇಕು, ಆಗ ಪರಮಾತ್ಮನನ್ನು ನೀವು ಕಂಡುಕೊಳ್ಳುತ್ತೀರಿ, ಜ್ಞಾನಕ್ಕೇ ಸೊನ್ನೆ ಬಿದ್ದಿದ್ದರೆ ಪರಮಾತ್ಮನೂ ಇಲ್ಲ, ಜೀವಾತ್ಮನೂ ಇಲ್ಲ.
     ಭಗವಂತನಿಗೆ ಪ್ರಿಯವಾದ ಕೆಲಸ ಯಾವುದು? ಅವನಿಗೆ ತನ್ನ ಉದ್ಧಾರ ಆಗಬೇಕಿದೆಯೇ? ಉದ್ಧಾರ ಆಗಬೇಕಾಗಿರುವುದು ನಮಗೆ! ನಾವು ಅಂದರೆ ನಮ್ಮ ಸಮೂಹದ ಉದ್ಧಾರಕ್ಕಾಗಿ ನಾವು ಕೆಲಸ ಮಾಡಬೇಕಾಗಿದೆ. ನಮ್ಮ ನಿಂದೆ, ಸ್ತುತಿ ಯಾವುದೂ ಭಗವಂತನ ಮೇಲೆ ಪರಿಣಾಮ ಬೀರುವುದಿಲ್ಲ. ಭಗವಂತ ಹೊಗಳುವವರಿಗೆ ಕೇಳಿದ್ದನ್ನೆಲ್ಲಾ ಕೊಟ್ಟುಬಿಡುವುದಿಲ್ಲ, ನಾಸ್ತಿಕರಿಂದ ಅವರ ಆಹಾರವನ್ನು ಕಿತ್ತುಕೊಳ್ಳುವುದಿಲ್ಲ. ಭಗವಂತನ ಮಕ್ಕಳಾದ ನಾವು ಕಷ್ಟ, ಕಾರ್ಪಣ್ಯದಲ್ಲಿರುವವರಿಗೆ, ಬಡವರಿಗೆ, ಬಗ್ಗರಿಗೆ, ದೀನ ದಲಿತರಿಗೆ ಸಹಾಯ ಮಾಡಿದರೆ ನಿಜವಾದ ಭಕ್ತರು ಅನ್ನಬಹುದು. ಭಗವಂತನಿಗೆ ನಮ್ಮ ಹೃದಯಕ್ಕಿಂತ ದೊಡ್ಡ ಮಂದಿರ ಬೇಕೇ? ಅಲ್ಲೂ ಪರಮಾತ್ಮನಿದ್ದಾನೆ. ಅಲ್ಲಿರುವ ಪರಮಾತ್ಮನ ಕುರಿತು ಧ್ಯಾನ ಮಾಡಿದರೆ ನಿಜವಾಗಿ ಆನಂದ ಸಿಕ್ಕೇಸಿಕ್ಕುತ್ತೆ. ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ. ದೇವಸ್ಥಾನಗಳನ್ನು ಕಟ್ಟುವ ಬದಲು ಧರ್ಮಶಾಲೆ ಕಟ್ಟಿಸಿ, ಅನಾಥಾಲಯಗಳನ್ನು ಕಟ್ಟಿಸಿ, ಛತ್ರಗಳನ್ನು ನಿರ್ಮಾಣ ಮಾಡಿದರೆ, ಪಶು-ಪಕ್ಷಿಗಳ ರಕ್ಷಣೆ ಮಾಡಿದರೆ ಭಗವಂತ ಮೆಚ್ಚಿಯೇ ಮೆಚ್ಚುತ್ತಾನೆ. ಇಂತಹ ವಿವೇಚನಾ ಶಕ್ತಿ ಬರಲಿ ಎಂದು ಪ್ರಾರ್ಥಿಸೋಣ.
-ಕ.ವೆಂ.ನಾಗರಾಜ್.

ಗುರುವಾರ, ಸೆಪ್ಟೆಂಬರ್ 14, 2017

ಗುಂಡಿಯಲ್ಲಿ ಬಿದ್ದವರು


     ನಾವು ಹಿಂದಿದ್ದೇವೆ, ಕೆಳಗೆ ಬಿದ್ದಿದ್ದೇವೆ ಎಂಬ ಭಾವ ಮೂಡಿದಾಗ ಅದನ್ನು ಹಿಮ್ಮೆಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇ ಆದಲ್ಲಿ ಖಂಡಿತಾ ಮೇಲೇರಲು ಮತ್ತು ಇತರರಿಗೆ ಮಾದರಿ ಆಗಲು ಸಾಧ್ಯವಿದೆ ಎಂಬುದನ್ನು ಅನೇಕ ಸಾಧಕರು ತೋರಿಸಿಕೊಟ್ಟಿದ್ದಾರೆ. ಎರಡು ಕಾಲುಗಳನ್ನೂ ದೌರ್ಜನ್ಯದಿಂದಾಗಿ ಕಳೆದುಕೊಳ್ಳಬೇಕಾಗಿ ಬಂದ ಅರುಣಿಮಾ ಸಿನ್ಹಾ ಎವೆರೆಸ್ಟ್ ಶಿಖರ ಏರಲು ಸಾಧ್ಯವಾಯಿತೆಂದರೆ ಎಲ್ಲಾ ಅಂಗಗಳೂ ಸಾಮಾನ್ಯವಾಗಿರುವ ನಮ್ಮಂತಹವರಿಗೆ ಅದು ಪ್ರೇರಣೆ ಕೊಡುವ ಸಂಗತಿ. ಅರುಣಿಮಾ ಸಿನ್ಹಾರಂತೆಯೇ ಅನೇಕ ವಿಶಿಷ್ಟ ಚೇತನರು ಸಾಮಾನ್ಯರೂ ಮಾಡಲಾಗದ ಸಂಗತಿಗಳನ್ನು ಮಾಡಿ ತೋರಿಸಿ ಲಿಮ್ಕಾ, ಗಿನ್ನಿಸ್ ದಾಖಲೆಗಳಲ್ಲಿ ತಮ್ಮ ಹೆಸರು ಛಾಪಿಸಿಕೊಂಡಿದ್ದಾರೆ. ಹಿಂಜರಿಕೆ ಬಿಟ್ಟು, ಕೊರಗುವುದನ್ನು ಬಿಟ್ಟು ನಾವು ಏನು ಸಾಧಿಸಬೇಕೆಂದುಕೊಂಡಿದ್ದೇವೆಯೋ ಅದರ ಕಡೆಗೆ ಮಾತ್ರ ಲಕ್ಷ್ಯ ಹರಿಸಿದರೆ ನಿಜಕ್ಕೂ ಪವಾಡವೇ ಆಗುತ್ತದೆ. ಇಂತಹ ಪ್ರಯತ್ನಕ್ಕೆ ಅನಿರೀಕ್ಷಿತ ಎಡೆಗಳಿಂದಲೂ ಪ್ರೋತ್ಸಾಹ ಸಿಗುತ್ತದೆ. ಈ ವಿಚಾರಕ್ಕೆ ಪುಷ್ಟಿ ಕೊಡುವಂತಹ ಒಂದು ಸಾಮಾನ್ಯ ಘಟನೆಯ ಬಗ್ಗೆ ಪ್ರಸ್ತಾಪಿಸಬೇಕೆನಿಸಿದೆ.
     ಅಂದು ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ವಾಕಿಂಗಿಗೆ ಹೊರಟು ಸ್ಟೇಡಿಯಮ್ ತಲುಪಿದೆ. ಒಂದು ಸುತ್ತು ಹಾಕಿರಬಹುದು. ಪಕ್ಕದಲ್ಲಿದ್ದ ಗುಂಡಿಯೊಂದರಿಂದ ನಾಯಿಮರಿಯ ಕುಂಯ್ ಕುಂಯ್ ಆರ್ತ ಸ್ವರ ಕೇಳಿಸಿತು. ಸುಮಾರು ನಾಲ್ಕು ಅಡಿ ಆಳದ ಗುಂಡಿಯಲ್ಲಿ ಬಗ್ಗಿ ನೋಡಿದರೆ ಅಲ್ಲಿ ಪುಟಾಣಿ ನಾಯಿಮರಿಯೊಂದು ಮೇಲೆ ಹತ್ತಲು ಪರದಾಡುತ್ತಿತ್ತು. ಆಟವಾಡುತ್ತಾ ಅಲ್ಲಿ ಬಿದ್ದಿರಬೇಕು. ಅದಕ್ಕೆ ಮೇಲೆ ಹತ್ತಲಾಗುತ್ತಿರಲಿಲ್ಲ. ಅದರ ಜೊತೆಯ ಇನ್ನೊಂದು ಪುಟಾಣಿ ಮರಿ ಗುಂಡಿಯ ಮೇಲ್ಭಾಗದಲ್ಲಿ ನಿಂತು ಗಮನಿಸುತ್ತಾ ಸುತ್ತಲೂ ಪರದಾಡುತ್ತಿತ್ತು. ಅಲ್ಲಿ ಓಡಾಡುತ್ತಿದ್ದವರನ್ನು ನೋಡುತ್ತಾ ಇದ್ದ ಆ ಇನ್ನೊಂದು ಮರಿಯ ನೋಟ ಯಾರಾದರೂ ಸಹಾಯ ಮಾಡಿ ಎಂದು ಕೇಳುವಂತಿತ್ತು. ಯಾಂತ್ರಿಕವಾಗಿ ವಾಕಿಂಗ್ ಮುಂದುವರೆಸಿದ್ದ ನಾನು ಅದಾಗಲೇ ಆ ಗುಂಡಿ ದಾಟಿ ಮೂಂದೆ ಹೋಗಿಬಿಟ್ಟಿದ್ದೆ. ಅದನ್ನು ಮೇಲೆತ್ತಬೇಕಾಗಿತ್ತು ಎಂದು ಮನಸ್ಸು ಹೇಳುತ್ತಿತ್ತು. ಇನ್ನೊಂದು ಸುತ್ತು ಬರುವಾಗ ನೋಡಿದರೆ ಆ ಮರಿ ಅಲ್ಲೇ ಇತ್ತು. ಅದನ್ನು ಮೇಲೆತ್ತಲು ಹೋದಾಗ ಅದು ಮುಂಗಾಲುಗಳನ್ನು ಮುಂದೆ ಚಾಚಿ ನನ್ನನ್ನು ನೋಡುತ್ತಾ ಮೇಲಕ್ಕೆ ಎತ್ತು ಎಂದು ಕೋರುವ ಅದರ ನೋಟ ನನ್ನನ್ನು ಕರಗಿಸಿತು. ಅದರ ಕಾಲು ಹಿಡಿದು ಮೇಲಕ್ಕೆತ್ತಿ ಬಿಟ್ಟು ವಾಕಿಂಗ್ ಮುಂದುವರೆಸಿದರೆ ಆ ಮರಿ ಮತ್ತು ಅದರ ಜೊತೆಯ ಮರಿಗಳೆರಡೂ ಕೃತಜ್ಞತೆ ತೋರಿಸುವಂತೆ ಕುಣಿದು ಕುಪ್ಪಳಿಸಿ ನನ್ನ ಕಾಲುಗಳಿಗೆ ತೊಡರಿಕೊಂಡು ಬರತೊಡಗಿದವು. ಅವನ್ನು ತಪ್ಪಿಸಿಕೊಂಡು ವಾಕಿಂಗ್ ಮುಂದುವರೆಸಿದೆ. ಮುಂದಿನ ಸುತ್ತಿನಲ್ಲಿ ಬರುವಾಗ ಆ ಮರಿಗಳು ತಾಯಿಯ ಜೊತೆ ಚಿನ್ನಾಟವಾಡುತ್ತಾ, ಹಾಲು ಕುಡಿಯುತ್ತಾ ಇದ್ದ ದೃಷ್ಯ ಕಂಡು ಮನಸ್ಸು ಹಗುರವಾಯಿತು.
     ಇಂದಿನ ಜೀವನರಂಗದ ಆಟದಲ್ಲಿ ನಾವೂ ಸಹ ಆ ನಾಯಿಮರಿಯಂತೆ ಗುಂಡಿಯಲ್ಲಿ ಬಿದ್ದು ಮೇಲೆ ಹತ್ತಲಾರದೇ ಪರದಾಡುತ್ತಿದ್ದೇವೆ ಎಂಬ ಭಾವ ಮನದಲ್ಲಿ ಸುಳಿದು ವಿಚಾರಕ್ಕೆ ಎಡೆ ಮಾಡಿಕೊಟ್ಟಿತು. ಸ್ವಾಭಿಮಾನ, ದುರಭಿಮಾನಗಳಿಂದ ನಾವೇ ತೋಡಿಕೊಂಡ ಗುಂಡಿಗೆ ನಾವೇ ಆಟವಾಡುತ್ತಾ ಬಿದ್ದುಬಿಟ್ಟಿರುತ್ತೇವೆ. ನಮ್ಮನ್ನು ಆವರಿಸಿದ ಮಾಯೆ/ಭ್ರಮೆ ನಾವು ಗುಂಡಿಯಲ್ಲಿರುವ ವಾಸ್ತವತೆ ಮರೆಮಾಚಿ, ಗುಂಡಿಯಲ್ಲೇ ಇರುವಂತೆ ಮಾಡುತ್ತಿರುತ್ತದೆ. ಮೇಲೆ ಹತ್ತಲು ಮಾಡುವ ಪ್ರಯತ್ನಗಳಿಗೆ ರಾಗ, ದ್ವೇಷಗಳು ಅಡ್ಡಿಯಾಗಿ ಪುನಃ ಕೆಳಗೆ ಜಾರಿಸುತ್ತಿರುತ್ತವೆ. ಯಾವ ದುರಭಿಮಾನದಿಂದ ಬಿದ್ದಿರುತ್ತೇವೆಯೋ, ಅದೇ ದುರಭಿಮಾನ ಇತರರ ಸಹಾಯ ಪಡೆಯದಂತೆ ಪ್ರಚೋದಿಸುತ್ತವೆ. ಒಂದೊಮ್ಮೆ ಗುಂಡಿಯಲ್ಲಿ ಬಿದ್ದ ಅರಿವಾದರೂ, ಮೋಹ, ಮಮಕಾರಗಳು ಮೇಲೆ ಹತ್ತದಂತೆ ಮಾಡುತ್ತಿರುತ್ತವೆ. ಹಲವೊಮ್ಮೆ ಬಿದ್ದಿರುವ ಗುಂಡಿಯೇ ಎಷ್ಟು ಸುಂದರವಾಗಿದೆ ಎಂಬ ಹಿತವಾದ ಸುಳ್ಳು ಹೇಳಿಕೊಂಡು ಸಮಾಧಾನಪಟ್ಟುಕೊಳ್ಳುತ್ತೇವೆ. ನಾವು ಬಿದ್ದಿರುವ ಗುಂಡಿ ಅಷ್ಟೇನೂ ದೊಡ್ಡದಲ್ಲ, ಅವರು ಬಿದ್ದಿರುವ ಗುಂಡಿ ನಮ್ಮ ಗುಂಡಿಗಿಂತ ಆಳವಾಗಿದೆ ಎಂದು ವಿಕೃತ ಸಮಾಧಾನವನ್ನೂ ಹೊಂದುತ್ತೇವೆ. ಗುಂಡಿಯಲ್ಲಿ ಬೀಳಲು ಅವರು ಕಾರಣ, ಇವರು ಕಾರಣ ಎಂದು ಆರೋಪಿಸುತ್ತೇವೆ. ಅವರೋ, ಇವರೋ ಕಾರಣರಾಗುವುದಕ್ಕೆ ಮೂಲ ಕಾರಣ ನಾವೇ ಎಂಬ ಕಟುಸತ್ಯವನ್ನು ಮಾತ್ರ ನಾವು ಒಪ್ಪಿಕೊಳ್ಳುವುದಿಲ್ಲ. ಸಾವಧಾನವಾಗಿ ಯೋಚಿಸಿದರೆ ಅದರಲ್ಲಿ ನಮ್ಮ ಪಾಲೇ ದೊಡ್ಡದಾಗಿರುತ್ತದೆ.
ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು
ಆಸೆ ನಗುವುದು ವಿಚಾರ ಸೋಲುವುದು |
ಜಾರುವುದನರಿತರೂ ನಾಶವಾಗದು ಚಪಲ
ಸಕಲ ಸಂಕಟಕೆ ಮೂಲವಿದು ಮೂಢ ||
     ಗುಂಡಿಯಿಂದ ಮೇಲೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಮಾಡುತ್ತಲೇ ಇದ್ದರೆ, ಮೇಲೆ ಹತ್ತಲು ಸಹಾಯ ಮಾಡಲು ದೇವರು ಯಾರನ್ನಾದರೂ ಕಳಿಸಿಯೇ ಕಳಿಸುತ್ತಾನೆ. ಆರೀತಿ ಸಹಾಯ ಮಾಡುವ ಯಾರೋ ಒಬ್ಬರೇ ನಮ್ಮ ಪಾಲಿಗೆ ಮಾರ್ಗದರ್ಶಕರಾಗುತ್ತಾರೆ, ದೇವರಾಗುತ್ತಾರೆ.  ನಾಯಿಮರಿ ಕುಂಯ್‌ಗುಡದೇ ಇದ್ದಿದ್ದರೆ ನಾನು ಅದನ್ನು ಮೇಲೆತ್ತುತ್ತಿರಲಿಲ್ಲ. ಹಾಗೆಯೇ ನಾವು ಮೇಲೇರಲು ಮೊರೆಯಿಡದಿದ್ದರೆ ನಮಗೆ ಸಹಾಯ ಸಿಗದೇ ಹೋಗಬಹುದು! ಮಗು ಅತ್ತರೆ ಅದಕ್ಕೆ ಹಸಿವಾಗಿದೆಯೆಂದು ತಾಯಿ ಹಾಲು ಉಣಿಸುತ್ತಾಳೆ. ಇದೇ ತತ್ವ ಕೆಳಗೆ ಬಿದ್ದವರಿಗೂ ಅನ್ವಯವಾಗುತ್ತದೆ. ಗುಂಡಿಯಲ್ಲಿ ಬಿದ್ದು ಪರಿತಪಿಸುವುದಕ್ಕಿಂತ ಬೀಳದೆ ಇರುವಂತೆ ಜಾಗೃತರಾಗಿರುವುದು ಒಳಿತು ಎಂಬ ಜ್ಞಾನಿಗಳ ಮಾತಿನಲ್ಲಿ ಸತ್ವವಿದೆ, ಸತ್ಯವಿದೆ.
ಸರಸರನೆ ಮೇಲೇರಿ ಗಿರಕಿ ತಿರುಗಿ
ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ |
ಬೀಳುವುದು ಗಾಳಿಪಟ ಬಂಧ ತಪ್ಪಿದರೆ
ಸೂತ್ರ ಹರಿದರೆ ಎಚ್ಚರವಿರು ಮೂಢ ||
-ಕ.ವೆಂ. ನಾಗರಾಜ್.

ಸೋಮವಾರ, ಸೆಪ್ಟೆಂಬರ್ 11, 2017

ಮೋಹದ ಮೋಹಕ ಬಲೆ


     ಪ್ರಪಂಚದಲ್ಲಿ ನಾವು ಮೊದಲು ಇಷ್ಟಪಡುವ ವ್ಯಕ್ತಿ ನಾವೇ ಆಗಿರುತ್ತೇವೆ; ನಂತರದಲ್ಲಿ ನಮ್ಮ ಕುಟುಂಬದವರು, ಪರಿವಾರದವರು, ಸಮುದಾಯದವರು, ರಾಜಕಾರಣಿಗಳು, ಜನನಾಯಕರು, ಮುಂತಾದವರು ಬರುತ್ತಾರೆ. ಒಂದೊಮ್ಮೆ ದೇವರು ಅಥವ ನಾನು ಈ ಎರಡರಲ್ಲಿ ಯಾರನ್ನಾದರೂ ಒಬ್ಬರನ್ನು ಆರಿಸಿಕೊಳ್ಳಬೇಕೆಂದಾದಲ್ಲಿ ಆರಿಸಿಕೊಳ್ಳುವುದು ನನ್ನನ್ನೇ ಹೊರತು ದೇವರನ್ನಲ! ದೇವರು ಎಷ್ಟೇ ದೊಡ್ಡವನಾಗಿರಲಿ, ನಾನು ಎಷ್ಟೇ ಅಲ್ಪನಾಗಿರಲಿ, ನನಗೆ ನನ್ನನ್ನು ಕಂಡರೆ ಇಷ್ಟ. ಮೋಹದ ಬೀಜರೂಪ ಇಲ್ಲಿದೆ. ನಾನು, ನನ್ನದು, ನನ್ನವರು ಎಂಬ ಮೋಹಭಾವ ಜಗತ್ತಿನ ಎಲ್ಲಾ ಪರದಾಟ, ತೋಳಲಾಟ ಮತ್ತು ಸಂಕಟಗಳ ಮೂಲವಾಗಿದೆ.
     ಮೋಹ ಅನ್ನುವುದು ಕೆಟ್ಟದ್ದೇ? ಈ ಪ್ರಶ್ನೆ ಹರಿತವಾದ ಚಾಕು ಒಳ್ಳೆಯದೋ, ಕೆಟ್ಟದೋ ಎಂದು ಕೇಳಿದಂತೆ ಇದೆ. ಚಾಕುವನ್ನು ಹಣ್ಣು, ತರಕಾರಿ ಹೆಚ್ಚಲೂ ಬಳಸಬಹುದು, ಯಾರನ್ನೋ ಕೊಲೆ ಮಾಡಲೂ ಬಳಸಬಹುದು. ಇದು ಚಾಕುವಿನ ತಪ್ಪು ಖಂಡಿತಾ ಅಲ್ಲ. ಬಳಸುವ ರೀತಿಯಲ್ಲಿನ ತಪ್ಪು. ಅದೇ ರೀತಿ ಮೋಹವಶನಾದ ವ್ಯಕ್ತಿ ಮೋಹವನ್ನು ಯಾವ ರೀತಿಯಲ್ಲಿ ತೋರ್ಪಡಿಸುತ್ತಾನೆ ಎಂಬುದರ ಮೇಲೆ ಅದು ಒಳ್ಳೆಯದೋ, ಕೆಟ್ಟದೋ ಆಗುತ್ತದೆ. ಈ ಮೋಹವನ್ನು ಆತ್ಮೋದ್ಧಾರಕ್ಕೂ ಬಳಸಬಹುದು, ಕೇವಲ ತನ್ನೊಬ್ಬನ ಉದ್ಧಾರಕ್ಕಾಗಿ ಇತರರನ್ನು ಹಾಳು ಮಾಡಲೂ ಬಳಸಬಹುದು. ತಾನು ಮತ್ತು ತನ್ನೊಬ್ಬನಲ್ಲಿ ಮೋಹವಿರುವವನು ಪರಮಸ್ವಾರ್ಥಿಯಾಗಿರುತ್ತಾನೆ. ಇಂತಹವನು ತನ್ನೊಬ್ಬನ ಹಿತಕ್ಕಾಗಿ ಯಾರಿಗಾದರೂ ಕೇಡು ಬಗೆಯಲು ಹಿಂದೆಗೆಯಲಾರ. ಈ ಭಾವ ಉನ್ಮಾದ ಸ್ಥಿತಿ ತಲುಪಿದಾಗ ಆಸ್ತಿಗಾಗಿ, ಹಣಕ್ಕಾಗಿ ಸ್ವಂತ ತಂದೆ/ತಾಯಿ/ಬಂಧು/ಬಳಗ ಯಾರನ್ನಾದರೂ ಕರುಣೆಯಿಲ್ಲದೆ ಹತ್ಯೆಗೈಯುವುವರನ್ನು ಕಾಣುತ್ತೇವೆ. ಪತ್ನಿಯನ್ನೇ ವೇಶ್ಯಾವಾಟಿಕೆಗೆ ಮಾರುವ ಕಟುಕರೂ ಕಾಣಸಿಗುತ್ತಾರೆ. ಅಧಿಕಾರಕ್ಕಾಗಿ ಸ್ವಂತ ತಂದೆ ಷಹಜಹಾನನನ್ನೇ ಸೆರೆಯಲ್ಲಿರಿಸಿದ, ಸೋದರರ ವಿರುದ್ಧವೇ ಯುದ್ಧ ನಡೆಸಿದ, ಸ್ವಂತ ಸೋದರರಾದ ದಾರಾ ಶಿಕೋ ಮತ್ತು ಮುರಾದ ಬಕ್ಷರನ್ನೇ ಇಸ್ಲಾಮ್ ವಿರೋಧಿಗಳೆಂಬ ಹಣೆಪಟ್ಟಿ ಹಚ್ಚಿ ಸಾಯಿಸಿದ ಔರಂಗಜೇಬನ ಉದಾಹರಣೆಯಿದೆ.
ಮೋಹಪಾಶದ ಬಲೆಯಲ್ಲಿ ಸಿಲುಕಿಹರು ನರರು
ಮಡದಿ ಮಕ್ಕಳ ಮೋಹ ಪರಿಜನರ ಮೋಹ|
ಜಾತಿ-ಧರ್ಮದ ಮೋಹ ಮಾಯಾವಿ ಮೋಹವೇ
ಜಗದ ದುಸ್ಥಿತಿಗೆ ಮೂಲವೋ ಮೂಢ||
     ಮೋಹವೆಂಬ ಮಾಯಾಮಾಹಿನಿಯ ಸೆಳೆತಕ್ಕೆ ಒಳಗಾಗದವರು ಯಾರು? ಮೋಹ ಹೆಚ್ಚಾದಷ್ಟೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಹೆಚ್ಚಾಗುತ್ತಾ ಹೋಗುತ್ತದೆ. ಕೇವಲ ತನ್ನೊಬ್ಬನ ಮೇಲಿನ ಮೋಹದ ನಂತರದ ಬೆಳವಣಿಗೆ ತನ್ನ ಕುಟುಂಬದವರ, ಪರಿವಾರದ ಜನರ ಮೇಲಿನ ಮೋಹ. ಇದು ತನ್ನೊಬ್ಬನ ಮೇಲಿನ ಮೋಹಕ್ಕಿಂತ ಸ್ವಲ್ಪ ಉತ್ತಮ. ಏಕೆಂದರೆ ಇದರಲ್ಲಿ ಕುಟುಂಬದ ಜನರೂ ತನ್ನೊಡನೆ ಸೇರಿರುತ್ತಾರೆ. ಈ ಕುಟುಂಬದ ಮೋಹ ಸಹ ಹಾನಿಕರವೇ. ಧೃತರಾಷ್ಟ್ರನ ಮಕ್ಕಳ ಮೇಲಿನ ಮೋಹ ಮಹಾಭಾರತಕ್ಕೆ ಕಾರಣವಾಯಿತು. ಮೋಹಾಂಧನಾದ ಧೃತರಾಷ್ಟ್ರನ ಪುತ್ರ ವ್ಯಾಮೋಹ ನ್ಯಾಯ, ನೀತಿ, ಧರ್ಮವನ್ನೇ ತಿಂದದ್ದಲ್ಲದೆ ಕೊನೆಗೆ ಅವನ ಮಕ್ಕಳನ್ನೇ ನುಂಗಿ ನೀರು ಕುಡಿಯಿತು. ನಮ್ಮ ಜನನಾಯಕರುಗಳ ಕುಟುಂಬದ ಮೋಹ ದೇಶ, ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸಲ್ಲಬೇಕಾಗಿದ್ದ ಹಣದ ದೊಡ್ಡ ಭಾಗವನ್ನು ಕಮಿಷನ್, ಪರ್ಸೆಂಟೇಜು, ಕಾಣಿಕೆಗಳ ರೂಪದಲ್ಲಿ ನುಂಗಿ ಹಾಕುತ್ತಿದೆ. ಮೊದಲು ಏನೇನೂ ಅಲ್ಲದಿದ್ದವರು ಇಂದು ಎಷ್ಟು ಕೋಟಿಗಳ ಒಡೆಯರೋ ಯಾರಿಗೂ ಲೆಕ್ಕ ಗೊತ್ತಿಲ್ಲ. ಜನಸೇವೆ, ದೀನ-ದಲಿತೋದ್ಧಾರ, ಜಾತ್ಯಾತೀತತೆ, ಮುಂತಾದ ಮರುಳು ಮಾಡುವ ಮುಖವಾಡಗಳೊಂದಿಗೆ ಜನರ ತಲೆಯ ಮೇಲೆ ಟೋಪಿಯಿಟ್ಟು ತಾವು ಕಿರೀಟ ಧರಿಸುತ್ತಾರೆ.
     ಸ್ವಂತದ್ದಾಯಿತು, ಕುಟುಂಬದ್ದಾಯಿತು, ಇನ್ನು ಜಾತಿ, ಮತ, ಧರ್ಮ, ಸಮುದಾಯ ಇತ್ಯಾದಿಗಳ ಮೇಲಿನ ಮೋಹ ಸಹ ಅಪಾಯಕಾರಿಯೇ. ಸ್ವಂತದ ಜಾತಿ, ಮತಗಳನ್ನು ಪ್ರೀತಿಸಲಿ ಪರವಾಗಿಲ್ಲ. ಆದರೆ, ಇದು ಇತರರ ಮೇಲಿನ ದ್ವೇಷವಾಗಿ ರೂಪುಗೊಂಡರೆ ಶಾಂತಿಗೆ ಎಡೆಯೆಲ್ಲಿ? ಅಧಿಕಾರಸ್ಥ ರಾಜಕಾರಣಿಗಳು ಮಾಡುವ ಮೊದಲ ಕೆಲಸವೆಂದರೆ ತಮ್ಮ ಸಿಬ್ಬಂದಿಗಳು, ಸಹಕಾರಿಗಳು, ಹಿತೈಷಿಗಳು, ಸಲಹೆ ಕೊಡುವವರು ಮುಂತಾದವರು ತಮ್ಮ ಜಾತಿಯವರೇ ಆಗಿರುವಂತೆ ನೋಡಿಕೊಳ್ಳುವುದು. ಇವರೇ ಜಾತ್ಯಾತೀತತೆಯ ತುತ್ತೂರಿ ಊದುವವರು. ಈಗಂತೂ ಮತ/ಧರ್ಮದ ಹೆಸರಿನಲ್ಲಿ ಘೋರ ರಕ್ತಪಾತಗಳೇ ಆಗುತ್ತಿವೆ. ಇದು ಸಮುದಾಯ ಮೋಹದ ಪರಾಕಾಷ್ಠೆ. ಭಯೋತ್ಪಾದಕರ, ಉಗ್ರಗಾಮಿಗಳ ಉಪಟಳ ಇಂದು ಕೇವಲ ಒಂದು ದೇಶದ್ದಲ್ಲ, ಇಡೀ ಪ್ರಪಂಚದ ಸಮಸ್ಯೆಯಾಗಿಬಿಟ್ಟಿದೆ. ಇದನ್ನು ತಡೆಯಲು ಎಲ್ಲಾ ರಾಷ್ಟ್ರಗಳೂ ಕೈಜೋಡಿಸಲೇ ಬೇಕಾದ ಸನ್ನಿವೇಶ ದೂರವೇನಿಲ್ಲ.
     ಈ ಜಗತ್ತು ಅದ್ಭುತ ವೈಚಿತ್ರ್ಯಗಳಿಂದ ಕೂಡಿದೆ. ಇಡೀ ಜೀವರಾಶಿಯನ್ನು ಪ್ರೀತಿಸುವ, ಸಕಲರ ಸುಖವನ್ನೂ ಬಯಸುವ ಸಾಧು-ಸಂತರುಗಳು, ದಾರ್ಶನಿಕರನ್ನೂ ಈ ಜಗತ್ತು ಹೊಂದಿದೆ. ಇವರ ಈ ಸುಮೋಹ ಜನರನ್ನು ಸರಿದಾರಿಯೆಡೆಗೆ ನಡೆಯಲು ಸಹಕಾರಿಯಾಗಿದೆ. ಇಂತಹವರನ್ನು ಗುರುತಿಸಿ, ಆದರಿಸಿ ಇವರುಗಳು ತೋರುವ ದಾರಿಯಲ್ಲಿ ಮುನ್ನಡೆದರೆ ಅದು ಶತ್ರುವಾದ ಮೋಹವನ್ನು ನಮ್ಮ ಸ್ನೇಹಿತನನ್ನಾಗಿ ಮಾಡಿಕೊಂಡಂತೆ. ವಸುಧೈವ ಕುಟುಂಬಕಮ್ - ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಅನ್ನುವುದು ಸನಾತನ ಧರ್ಮದ ತಿರುಳು. ಒಂದು ಕುಟುಂಬದಲ್ಲಿ ಹಲವಾರು ವಿಭಿನ್ನ ಗುಣಗಳುಳ್ಳ ಅಣ್ಣ-ತಮ್ಮಂದಿರು ಇರುವಂತೆ ಪ್ರಪಂಚದಲ್ಲೂ ವಿಭಿನ್ನ ಆಚರಣೆಗಳು, ಸಂಪ್ರದಾಯಗಳನ್ನು ಅನುಸರಿಸುವ ಜನರಿದ್ದಾರೆ. ಇಡೀ ಪ್ರಪಂಚವೇ ಒಂದು ರಾಷ್ಟ್ರವಾಗಬೇಕು, ನಮ್ಮ ದೇವರನ್ನೇ ನಾವು ಹೇಳಿದ ರೀತಿಯಲ್ಲೇ ಪೂಜಿಸಬೇಕು, ಹೀಗೆ ಮಾಡದಿದ್ದವರನ್ನು ಬಲವಂತದಿಂದ ಮತಾಂತರಿಸಬೇಕು, ಒಪ್ಪದಿದ್ದವರನ್ನು ಸಂಹರಿಸಬೇಕು ಎಂಬ ಮನೋಭಾವದಿಂದ ಜಗತ್ತನ್ನು ಒಟ್ಟುಗೂಡಿಸಲು ಆ ದೇವರಿಂದಲೂ ಅಸಾಧ್ಯ. ಆದರೂ ಈ ಉದ್ದೇಶದಿಂದ ಭಯೋತ್ಪಾದಕ ಚಟುವಟಿಕೆಗಳು, ರಕ್ತಪಾತಗಳು, ಅತ್ಯಾಚಾರಗಳು, ಯುದ್ಧಗಳು ನಡೆಯುತ್ತಿರುವುದು ದುರ್ದೈವ.
     ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಆಗಲು, ಒಂದು ರಾಷ್ಟ್ರವೆನಿಸಲು ಸಾಧ್ಯವಿದೆ. ಈ ಜಗತ್ತು ಹೀಗಿರಲಿ ಎಂದು ಬದಲಾಯಿಸಲು ಹೋಗದೆ, ಹೇಗಿದೆಯೋ ಹಾಗೆಯೇ ಇರಲಿ ಎಂದು ಸುಮ್ಮನಿದ್ದರೆ, ಕಿತ್ತುಕೊಳ್ಳುವುದಕ್ಕಿಂತ ಕೊಡಲು ಮನಸ್ಸು ಮಾಡಿದರೆ, ಯಾರನ್ನೂ ಪ್ರತ್ಯೇಕಿಸದೆ ಸಮನಾಗಿ ಕಂಡು, ಎಲ್ಲರನ್ನೂ ಸೇರಿಸಿಕೊಂಡರೆ, ಎಲ್ಲಾ ಧರ್ಮಗ್ರಂಥಗಳೂ, ವೇದಗಳು, ಕುರಾನ್, ಬೈಬಲ್ ಇತ್ಯಾದಿ, ನಮ್ಮವೇ ಅಂದುಕೊಂಡು ಅದರಲ್ಲಿನ ನಮಗೆ ಹಿತವಾಗುವ ಎಲ್ಲಾ ಸಂಗತಿಗಳನ್ನು ಅಳವಡಿಸಿಕೊಂಡರೆ ಮಾತ್ರ ಜಗತ್ತು ಒಂದು ಕುಟುಂಬವೆನಿಸೀತು. ಇತರರು ಅನುಸರಿಸಲಿ, ನಮ್ಮದು ಒಣ ಉಪದೇಶ ಮಾತ್ರ ಅನ್ನುವ ಮುಖವಾಡ ಧರಿಸಿದ ಜನನಾಯಕರ, ಸೋಗಿನ ವಿಚಾರವಾದಿಗಳ ನಿಜಬಣ್ಣ ಬಯಲಾಗಬೇಕು. ಈಗ ಅಗತ್ಯವಿರುವುದು ಮಾನವರು ಸಹಮಾನವರನ್ನು ಪ್ರೀತಿಸುವ, ಗೌರವಿಸುವ ಅರ್ಥಪೂರ್ಣ ಧರ್ಮವೇ ಹೊರತು ಮತ್ತೊಂದಲ್ಲ. ವಿಶ್ವಮಾನವತೆಯನ್ನು ಎತ್ತಿ ಹಿಡಿಯಲು ಎಲ್ಲ ಜನರನ್ನೂ ಅವರುಗಳು ಹೇಗಿರುವರೋ ಹಾಗೆ ಒಪ್ಪಿಕೊಳ್ಳುವ, ಪರಸ್ಪರರ ಭಾವನೆಗಳನ್ನು ಗೌರವಿಸುವ ವಿಶ್ವವ್ಯಾಮೋಹ ಬಂದರೆ ಮಾತ್ರ ವಿಶ್ವ ಬದುಕುಳಿದೀತು. ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಪ್ನುಯಾತ್| ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಶ್ಚಾನ್ಯಾನ್ ವಿಮೋಚಯೇತ್|| ಅರ್ಥ: ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ಸಿಗಲಿ, ಶಾಂತರು ಬಂಧನಗಳಿಂದ ವಿಮೋಚಿತರಾಗಲಿ, ಆ ವಿಮುಕ್ತರು ಇತರರನ್ನೂ ಸಹ ಬಂಧನದಿಂದ ಬಿಡಿಸಲಿ.
-ಕ.ವೆಂ.ನಾಗರಾಜ್.

ಶುಕ್ರವಾರ, ಸೆಪ್ಟೆಂಬರ್ 8, 2017

ಅಂತರಂಗದ ಕಲ್ಮಶವೇ ಮತ್ಸರ


     ಶಂಕರ ಮತ್ತು ಶಶಿಧರ ಇಬ್ಬರೂ ಸ್ನೇಹಿತರು. ಶಂಕರನಿಗೆ ಶಶಿಧರ ತನಗಿಂತ ಹೆಚ್ಚು ಮುಂದೆ ಬರುತ್ತಿದ್ದಾನೆ ಎಂಬ ಭಾವನೆ ಬಂದು ಒಂದು ರೀತಿಯ ಅಸಹನೆಯಾಗುತ್ತಿತ್ತು. ಶಶಿಧರನಿಗೂ ಶಂಕರನಿಗೆ ಅನಗತ್ಯ ಪ್ರ್ರಾಧಾನ್ಯತೆ ಸಿಗುತ್ತಿದೆಯೆಂದು ಅನ್ನಿಸಿ ಕಿರಿಕಿರಿಯಾಗುತ್ತಿತ್ತು. ಇಬ್ಬರೂ ಪ್ರತ್ಯೇಕವಾಗಿ ದೇವರಲ್ಲಿ ಪ್ರಾರ್ಥಿಸಿದರು. ದೇವರು ಇವರ ಭಕ್ತಿಗೆ ಮೆಚ್ಚಿ ಅವರ ಇಷ್ಟಾರ್ಥದ ಬಗ್ಗೆ ವಿಚಾರಿಸಿದ. ಶಂಕರ ತಾನು ದೊಡ್ಡ ಶ್ರೀಮಂತ ವ್ಯಕ್ತಿಯಾಗಬೇಕು ಎಂದು ಕೇಳಿಕೊಂಡ. ದೇವರು ತಥಾಸ್ತು ಎಂದು ಶಶಿಧರನನ್ನು ವಿಚಾರಿಸಲು ಹೋದ. ಶಶಿಧರ ಶಂಕರನಿಗೆ ಏನು ವರ ಕೊಟ್ಟಿದ್ದರೂ ಅದರ ಎರಡರಷ್ಟು ನನಗೆ ಸಿಗಬೇಕು ಎಂದು ಕೇಳಿಕೊಂಡ. ದೇವರು ಆಗಲೂ ತಥಾಸ್ತು ಎಂದ. ಶಂಕರನಿಗೆ ದೊಡ್ಡ ಬಂಗಲೆ ಬಂದರೆ ಶಶಿಧರನಿಗೆ ಅಂತಹುದೇ ಎರಡು ಬಂಗಲೆಗಳು ಬಂದವು. ಅವನಿಗೆ ಒಂದು ಐಷಾರಾಮಿ ಕಾರು ಇದ್ದರೆ ಇವನಿಗೆ ಎರಡು ಕಾರುಗಳು ಬಂದವು. ತಾನು ಏನು ಬಯಸಿದರೂ ಅದರ ಎರಡರಷ್ಟು ಶಶಿಧರನಿಗೆ ಸಿಗುತ್ತಿರುವುದು ಕಂಡು ಶಂಕರನ ಮತ್ಸರ ಹೆಚ್ಚಾಯಿತು. ಯೋಚಿಸಿ ತನ್ನ ಒಂದು ಕಣ್ಣು ಹೋಗಲಿ ಎಂದು ಕೇಳಿಕೊಂಡ. ತನ್ನ ಒಂದು ಕಣ್ಣು ಹೋದರೆ, ಶಶಿಧರನ ಎರಡು ಕಣ್ಣುಗಳೂ ಹೋದವು. ತನ್ನ ಒಂದು ಕಾಲು ಹೋಗಲಿ ಎಂದು ಕೇಳಿಕೊಂಡಾಗ ತನ್ನ ಒಂದು ಕಾಲು ಹೋದರೂ ಶಶಿಧರನ ಎರಡು ಕಾಲುಗಳೂ ಹೋದದ್ದನ್ನು ಕಂಡು ಖುಷಿಪಟ್ಟ. ಇದು ಕಲ್ಪನೆಯ ಕಥೆಯಾದರೂ ಇದರಲ್ಲಿ ಮನುಷ್ಯನ ಸ್ವಭಾವದ ಚಿತ್ರಣವಿದೆ, ಮತ್ಸರದ ವಿಕೃತ ರೂಪದ ದರ್ಶನವಿದೆ. ಆತ್ಮೀಯರಿಗೇ ದ್ರೋಹ ಬಗೆಯುವಂತೆ ಮಾಡುವ, ಯಾವುದೇ ರೀತಿಯಲ್ಲಿ ಒಳಿತು ಮಾಡದ, ಕೆಡುಕನ್ನೇ ತರುವ ಮನುಷ್ಯನ ಗುಣ ಯಾವುದಾದರೂ ಇದ್ದರೆ ಅದು ಮತ್ಸರವೇ.
     ಮತ್ಸರ ಅನ್ನುವುದು ಮಾನವ ಸಂಬಂಧಗಳಲ್ಲಿ ಋಣಾತ್ಮಕ ಚಿಂತನೆಗಳಿಂದ, ಅಭದ್ರತೆಯ ಭಾವನೆಯಿಂದ, ಮುಂದೆ ತಮಗೆ ಹಿನ್ನಡೆಯಾಗಬಹುದು ಎಂಬ ಅನಿಸಿಕೆಯಿಂದ ಉಂಟಾಗುವ ಒಂದು ಮನೋಸ್ಥಿತಿ. ಒಂದು ಮಗು ತನ್ನ ಕೈಯಲ್ಲಿನ ಆಟಿಕೆಗಿಂತ ಇನ್ನೊಂದು ಮಗುವಿನ ಕೈಯಲ್ಲಿನ ಆಟಿಕೆಯ ಬಗೆಗೇ ಆಸಕ್ತಿ ವಹಿಸುತ್ತದೆ ಮತ್ತು ಅದೇ ಬೇಕೆಂದು ಹಟ ಮಾಡುತ್ತದೆ. ಈ ಮತ್ಸರದ ಉತ್ಪನ್ನಗಳೇ ಕೋಪ, ಹತಾಶೆ, ಅಸಹಾಯಕತೆ, ಜಿಗುಪ್ಸೆ, ಇತ್ಯಾದಿಗಳು. ತನ್ನ ದೊಡ್ಡಸ್ತಿಕೆಯನ್ನು ಸಾಧಿಸಲು ಪ್ರತಿಸ್ಪರ್ಧಿ ಎಂದು ಭಾವಿಸುವವನನ್ನು ಹೀಗಳೆಯುವುದು, ಅವನನ್ನು ಕುಬ್ಜಗೊಳಿಸುವ ಕುತಂತ್ರಗಳನ್ನು ಮಾಡುವುದು, ಅವನ ಪ್ರಗತಿಗೆ ಅಡ್ಡಗಾಲು ಹಾಕುವುದು, ಮುಂತಾದವು ಮತ್ಸರದ ಪರಿಣಾಮವೇ ಆಗಿದೆ. ವೃತ್ತಿ, ಪ್ರೇಮ, ಮತ, ಧರ್ಮ, ಸಂಸ್ಕೃತಿ, ರೂಪ, ಐಶ್ವರ್ಯ, ದಾರ್ಢ್ಯತೆ, ಇತ್ಯಾದಿಗಳಲ್ಲಿ ಮತ್ಸರ ತನ್ನ ಕರಿನೆರಳು ಚಾಚುತ್ತದೆ.
     ಇಬ್ಬರ ನಡುವೆ ಮೂರನೆಯ ವ್ಯಕ್ತಿಯ ಪ್ರವೇಶ ಪ್ರೇಮ ಮತ್ಸರಕ್ಕೆ ಕಾರಣವಾಗುತ್ತದೆ. ಮೂರನೆಯ ವ್ಯಕ್ತಿಯಿಂದ ತನ್ನ ಪ್ರಾಮುಖ್ಯತೆಗೆ ಧಕ್ಕೆಯಾಗುವ, ನಂಬಿಕೆ ದ್ರೋಹವಾಗುವ ಕಲ್ಪನೆಯೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಅತ್ತೆ, ಸೊಸೆಯರ ನಡುವೆ ವೈಮನಸ್ಯಕ್ಕೆ, ತಮ್ಮನೋ, ತಂಗಿಯೋ ಜನಿಸಿದಾಗ ಮೊದಲ ಮಗುವಿಗೆ ಅದರ ಮೇಲಿನ ಮುನಿಸಿಗೆ, ಗಂಡ-ಹೆಂಡತಿ ಅಥವ ಪ್ರೇಮಿಗಳ ನಡುವಣ ಕಲಹಗಳಿಗೆ ಮತ್ಸರ ಕಾರಣ. ಮತ್ಸರ ಒಮ್ಮೆ ಆವರಿಸಿತೆಂದರೆ ಸದ್ಗುಣಗಳಿಗೆ ಗ್ರಹಣ ಹಿಡಿಯುತ್ತದೆ, ಎಲ್ಲವೂ ತಪ್ಪಾಗಿ ಕಾಣುತ್ತದೆ, ಇನ್ನೊಬ್ಬರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ, ಪರಸ್ಪರರಲ್ಲಿ ದ್ವೇಷ ಭುಗಿಲೇಳುತ್ತದೆ.
     ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಮತ್ಸರ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿಬಿಟ್ಟಿತ್ತು. ನಿಜಜೀವನದಲ್ಲೂ ಇಂತಹ ರಾಮಾಯಣ, ಮಹಾಭಾರತಗಳು, ಇತಿಹಾಸದ ನೆರಳುಗಳು ನೋಡಸಿಗುತ್ತವೆ. ಬಹುತೇಕ ಟಿವಿ ಧಾರಾವಾಹಿಗಳಲ್ಲಿ ಮತ್ಸರವೇ ಪ್ರಧಾನ ವಿಷಯ. ಆಸ್ತಿಗಾಗಿ, ಅಂತಸ್ತಿಗಾಗಿ, ಅಧಿಕಾರಕ್ಕಾಗಿ ಯಾರು ಯಾರನ್ನು ಬೇಕಾದರೂ ಕೊಲ್ಲಲು ಮಸಲತ್ತು ಮಾಡಬಹುದು ಎಂಬ ಸಂದೇಶಗಳನ್ನು ಸಾರಲಾಗುತ್ತಿದೆ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ತಂದೆ-ತಾಯಿಯರನ್ನು, ಮಕ್ಕಳನ್ನು, ಕೊನೆಗೆ ಏನೂ ಅರಿಯದ ಹಸು ಕಂದಮ್ಮಗಳನ್ನು ಕೊಲ್ಲಲು ಮಾಡುವ ಮಸಲತ್ತುಗಳನ್ನು, ಸಂಚುಗಳನ್ನು ತೋರಿಸುವ ರೀತಿ ಮತ್ಸರವನ್ನು ವೈಭವೀಕರಿಸುತ್ತಿದೆ. ಇಂತಹ ಋಣಾತ್ಮಕ ಸಂದೇಶಗಳು ಜನಮಾನಸದಲ್ಲಿ ಕುಭಾವನೆಗಳನ್ನು ಮೂಡಿಸುವುದಲ್ಲದೆ, ಸಮಾಜದ ಅಧಃಪತನಕ್ಕೆ ಅಪರೋಕ್ಷವಾಗಿ ಕಾರಣವಾಗುತ್ತಿವೆ.    
     ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು ಸಹ ಅಪಾಯಕಾರಿಯೇ. ಏಕೆಂದರೆ ಮೇಲೆ ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಒಳಗೊಳಗೇ ಬುಸುಗುಡುತ್ತಿರುತ್ತದೆ.      ಮತ್ಸರ ಕೀಳರಿಮೆಯಿಂದ ನರಳುವವರ ಕಾಯಿಲೆ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಅರಸುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ನಮ್ಮನ್ನು ನಾವೇ ಇಷ್ಟಪಡದಿದ್ದರೆ ಬೇರೆಯವರು ಇಷ್ಟಪಡಬೇಕೆಂದು ಹೇಗೆ ಬಯಸುವುದು? ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಇತರರ ಮೇಲೆ ಪರಿಶೋಧನೆಯ ದೃಷ್ಟಿ ಬೀರುವುದನ್ನು ನಿಲ್ಲಿಸಿ ನಮ್ಮೊಳಗೆ ನಾವು ಕಣ್ಣು ಹಾಯಿಸಿಕೊಳ್ಳಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು, ಕಳೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಮತ್ಸರ ನಮ್ಮ ಬೆಳವಣಿಗೆಯನ್ನು ತಿನ್ನುತ್ತಿತ್ತೆಂಬ ಅರಿವು ಬರುವುದು ಆಗಲೇ. ಒಂದು ಮಾತನ್ನು ನೆನಪಿಡಬೇಕು, ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ. ಮತ್ಸರವೆಂಬುದು ಒಳಗಿನ ಕಲ್ಮಶ. ನಿವಾರಿಸಿಕೊಂಡರೆ ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. ವೇದದ ಈ ಕರೆ ನಮ್ಮನ್ನು ಎಚ್ಚರಿಸಲಿ: ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ| ಸೋಮಾ ಋತಸ್ಯ ಧಾರಯಾ|| (ಋಕ್.೯.೬೩.೪) ಅರ್ಥ: ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ.
-ಕ.ವೆಂ.ನಾಗರಾಜ್.

ಶನಿವಾರ, ಸೆಪ್ಟೆಂಬರ್ 2, 2017

ಮದ ಮತ್ತು ಮೇಲರಿಮೆ


     ಅಪರಿಚಿತರಾದರೂ ಕೆಲವು ವ್ಯಕ್ತಿಗಳನ್ನು ಕಂಡಾಗ ಸ್ನೇಹ ಭಾವನೆ ಮೂಡುತ್ತದೆ, ಇನ್ನು ಕೆಲವರನ್ನು ಕಂಡಾಗ ಅವರು ನಮಗೆ ಏನೂ ಮಾಡಿರದಿದ್ದರೂ ಅವರ ಬಗ್ಗೆ ಸದಭಿಪ್ರಾಯ ಬರುವುದಿಲ್ಲ. ಇದಕ್ಕೆ ಕಾರಣ ಅವರ ಬಾಡಿ ಲಾಂಗ್ವೇಜ್ ಅರ್ಥಾತ್ ಅವರ ನಡವಳಿಕೆಯ ಹೊರರೂಪ! ಮುಖವು ಮನಸ್ಸಿನ ಕನ್ನಡಿ ಎನ್ನುತ್ತಾರಲ್ಲಾ, ಹಾಗೆ ಅವರ ಮುಖಭಾವದಲ್ಲಿ ಅವರ ವ್ಯಕ್ತಿತ್ವ ಹೊರಸೂಸಿ ನಮ್ಮಲ್ಲಿ ಆ ಭಾವ ಬರುವಂತೆ ಮಾಡಬಹುದು. ಮದ ಸೊಕ್ಕಿ ಮೆರೆಯುವವರು, ದರ್ಪಿಷ್ಟರು ಸಹಜವಾಗಿ ಇತರರಿಗೆ ಸಹನೀಯವೆನಿಸಲಾರರು. ಸಾಮಾನ್ಯವಾಗಿ ಗಮನಕ್ಕೆ ಬರುವ ಈ ಉದಾಹರಣೆಯನ್ನು ನೋಡೋಣ. ಬಸ್ಸಿನಲ್ಲಿ, ರೈಲಿನಲ್ಲಿ ಅಕ್ಕಪಕ್ಕ ಕುಳಿತವರಲ್ಲಿ ಯಾರಾದರೊಬ್ಬರ ಕಾಲು ಇನ್ನೊಬ್ಬರಿಗೆ ಸೋಕಿದಾಗ ತಕ್ಷಣ ಕಾಲನ್ನು ಹಿಂದಕ್ಕೆಳೆದುಕೊಂಡು ಅವರನ್ನು ಕಣ್ಣಿಗೆ ಒತ್ತಿಕೊಂಡು ಸಾರಿ ಅಥವ ಕ್ಷಮಿಸಿ ಎನ್ನುತ್ತೇವೆ. ಇನ್ನು ಕೆಲವರು ಇರುತ್ತಾರೆ. ಅವರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾರೆ. ಅವರ ಕಾಲು ಇನ್ನೇನು ಪಕ್ಕದವರ ಅಥವ ಮುಂದೆ ಕುಳಿತಿರುವವರನ್ನು ಸೋಕುವಂತಿರುತ್ತದೆ. ಕಾಲು ಸೋಕಬಾರದೆಂದು ಪಕ್ಕದವರೇ ಮುಜುಗರ ಪಟ್ಟುಕೊಂಡು ಸರಿಸಿ ಕುಳಿತಿರುತ್ತಾರೆ. ಅದರ ಅರಿವಿದ್ದೂ ಅರಿವಿಲ್ಲದಂತೆ ಪಾದ ಕುಣಿಸುವವರನ್ನು ಏನೆನ್ನಬೇಕು? ಅಕಸ್ಮಾತ್ ಕಾಲು ತಗುಲಿದರೂ ತಗುಲಿಸಿದವರು ಯಾವ ಭಾವವನ್ನೂ ವ್ಯಕ್ತಪಡಿಸದಿದ್ದರೆ? ಅವರ ಕಾಲನ್ನು ಕುಣಿಸುತ್ತಿರುವುದು ಅವರಲ್ಲ, ಅವರಲ್ಲಿರುವ ಮದ! ಅರಿಷಡ್ವರ್ಗಗಳಲ್ಲಿ ಒಂದಾದ ಈ ಮದ ಮದೋನ್ಮತ್ತರನ್ನು ಅವನತಿಯೆಡೆಗೆ ಜಾರಿಸುತ್ತಿರುತ್ತದೆ. ಇದು ಅರಿವಿಗೆ ಬರುವ ವೇಳೆಗೆ ಕಾಲ ಮಿಂಚಿರುತ್ತದೆ.
     ಮದಕ್ಕೆ ನಾನಾ ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ, ಇತ್ಯಾದಿ. ಮನೆಯಲ್ಲಿ, ಸುತ್ತಮುತ್ತಲಿನಲ್ಲಿ ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮನೆಗೆ ಯಾವುದೋ ಕಾರ್ಯಾರ್ಥವಾಗಿ ಹಿರಿಯರು ಅಥವ ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸುವ ಸೌಜನ್ಯ ಇಲ್ಲದಿದ್ದಾಗ ಬಂದವರಿಗೆ ಅಲ್ಲಿಗೆ ಏಕಾದರೂ ಹೋದೆವೋ ಅನ್ನಿಸದಿರದು. ಹಿರಿಯರು ಇದ್ದಾಗ ಕಿರಿಯರು ಅವರ ಎದುರಿಗೆ ಕಾಲು ಚಾಚಿ ಕೂಡುವುದು, ಅವರನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತೆ ಅವರಿಗೆ ಘಾಸಿಯಾಗುವಂತೆ ಮಾತನಾಡುವುದು, ಇತ್ಯಾದಿಗಳೂ ಮದದ ಕಾಯಿಲೆಯಿಂದ ನರಳುತ್ತಿರುವರು ಮಾಡುವ ಕೆಲಸವೇ. ಮದವೇರಿದವರು ಏರ್ಪಡಿಸುವ ಕಾರ್ಯಕ್ರಮಗಳಿಗೆ ಆಹ್ವಾನಿತರು ಹೋಗದಿದ್ದರೆ ಆಕ್ಷೇಪಣೆ ಮಾಡುತ್ತಾರೆ, ಹೋದರೆ ಅವರನ್ನು ಸರಿಯಾಗಿ ಮಾತನಾಡಿಸದೆ ನಿರ್ಲಕ್ಷಿಸುತ್ತಾರೆ. ಇಂತಹವರಿಂದ ದೂರವಿರುವುದೇ ಕ್ಷೇಮ.
ಕಣ್ಣೆತ್ತಿ ನೋಡರು ಪರರ ನುಡಿಗಳಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು |
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ ||
     ಮದಸೊಕ್ಕಿ ಮೆರೆದವರು ಒಮ್ಮೆ ತಮ್ಮ ಮದಕ್ಕೆ ಕಾರಣವಾದ ಸಂಗತಿಯಿಂದ ವಂಚಿತರಾದರೆ ಅವರ ಸ್ಥಿತಿ ಅಧೋಗತಿ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತಹ ಸ್ಥಿತಿ ಅವರದಾಗುತ್ತದೆ. ಕೆಲವು ಬರಹಗಾರರಲ್ಲೂ ಈ ಮದ ತಾವೇ ತಿಳಿದವರು, ಇತರರಿಗಿಂತ ಮೇಲಿನವರು, ತಮ್ಮ ಮಾತನ್ನು ಇತರ ಎಲ್ಲರೂ ಗೌರವಿಸಬೇಕು ಎಂದು ಅಪೇಕ್ಷಿಸುವಂತೆ ಮಾಡುತ್ತದೆ. ತುಂಬಿದ ಕೊಡ ತುಳುಕದು ಎಂಬಂತಿರುವ ಸಾಹಿತಿಗಳು ಎಲ್ಲರ ಗೌರವಕ್ಕೆ ಭಾಜನರಾಗುತ್ತಾರೆ. ವಿಪರ್ಯಾಸವೆಂದರೆ ಉತ್ತಮ ಸಾಹಿತ್ಯಕ್ಕಾಗಿ ಕೊಡಮಾಡುವ ಪ್ರಶಸ್ತಿಗಳು ಇತ್ತೀಚೆಗೆ ಲಾಬಿ ಮಾಡುವವರಿಗೆ ಲಭಿಸುವಂತಾಗಿ ಪ್ರಶಸ್ತಿಯ ಮೌಲ್ಯವೇ ನಶಿಸುತ್ತಿದೆಯೇನೋ ಎಂದು ಅನ್ನಿಸುತ್ತದೆ. ಸಾಹಿತಿಯ ರಾಜಕೀಯ ಒಲವು, ನಿಲುವುಗಳನ್ನು ಅವಲಂಬಿಸಿ ಸಹ ಪ್ರಶಸ್ತಿ ನಿರ್ಧರಿಸಲಾಗುತ್ತಿದೆ ಎಂಬ ಭಾವನೆ ಜನರಲ್ಲಿದೆ. ಇರಲಿ ಬಿಡಿ, ಒಟ್ಟಿನಲ್ಲಿ ಹೇಳಬೇಕೆಂದರೆ ಮದದಿಂದ ಸೊಕ್ಕಿ ನಡೆಯುವವರು ಮೇಲರಿಮೆಯಿಂದ ನರಳುತ್ತಿರುತ್ತಾರೆ. ಪ್ರತಿಭೆ ಅನ್ನುವುದು ದೇವರ ಕೊಡುಗೆ. ಗೌರವ ಜನರು ಕೊಡುವುದು. ಗೌರವಿಸಿದರೆ  ಜನರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ಮದಭರಿತರು ತಮಗೆ ತಾವೇ ಕೊಟ್ಟುಕೊಳ್ಳುವುದು!  ಮದ ಮನುಷ್ಯನನ್ನು ಹಾಳು ಮಾಡುತ್ತದೆ. ಸೌಜನ್ಯದ ನಡವಳಿಕೆಗಳು ಗೌರವ ತರುತ್ತವೆ.
     ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯ ರಾತ್ರಿಯಲ್ಲಿ ಕೊಡೆ ಹಿಡಿದರಂತೆ ಎಂಬಂತೆ ಮದ ತಾವೇ ಇಂದ್ರ, ಚಂದ್ರ, ದೇವೇಂದ್ರ ಎಂಬಂತೆ ಮನುಷ್ಯರಲ್ಲಿ ಭ್ರಮೆ ಮೂಡಿಸುತ್ತದೆ. ಅಧಿಕಾರದ ಮದ ಮತ್ತು ಹಣದ ಮದ ಒಟ್ಟಿಗೆ ಸೇರಿಬಿಟ್ಟರೆ ಮುಗಿದೇಹೋಯಿತು. ಅಧಿಕಾರದ ಮದವೇರಿದ ರಾಜಕಾರಣಿಗಳ ವರ್ತನೆಯನ್ನು ನಾವು ನೋಡುತ್ತಲೇ ಇರುತ್ತೇವೆ. ತಾವು ಹೇಳಿದಂತೆಯೇ ಆಗಬೇಕು, ತಮ್ಮ ಮಾತನ್ನು ಎಲ್ಲರೂ ಕೇಳಬೇಕು ಎಂಬಂತಹ ಅವರ ವರ್ತನೆ, ಬಹುಜನರ ಅಭಿಪ್ರಾಯಕ್ಕೆ ಬೆಲೆ ಕೊಡದ ಅವರ ದರ್ಪ, ಇತ್ಯಾದಿಗಳು ಜನಸಾಮಾನ್ಯರಲ್ಲಿ ಆಡಳಿತದ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ.
     ಮದದ ಇನ್ನೊಂದು ರೂಪವಾದ ಜಂಭದಲ್ಲಿ ಎರಡು ವಿಧ ಇರುತ್ತದೆ- ಕೆಟ್ಟದ್ದು ಮತ್ತು ಒಳ್ಳೆಯದು. ಒಳ್ಳೆಯ ಜಂಭ ನಮ್ಮ ಗೌರವ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯುವಂತಹದು. ಕೆಟ್ಟ ಜಂಭವೆಂದರೆ ಮೇಲರಿಮೆಯಿಂದ ಒಡಮೂಡುವ ಅಹಂಕಾರ, ಒಣ ಪ್ರತಿಷ್ಠೆಗಳು ಮತ್ತು ಇತರರ ಕುರಿತ ಅಸಹನೆ - ಇದೇ ಮದ. ತಮ್ಮನ್ನು ಬಿಟ್ಟರಿಲ್ಲ ಎಂಬಂತೆ ಆಡುತ್ತಿದ್ದ ಚಕ್ರವರ್ತಿಗಳು, ಸಾಮ್ರಾಟರು, ಬಾದಶಹರು, ರಾಜ-ಮಹಾರಾಜರು ಇಂದು ಎಲ್ಲಿದ್ದಾರೆ? ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಅವರಲ್ಲಿ ಎಷ್ಟೋ ಜನರ ನೆನಪೂ ನಮಗಿಲ್ಲ. ಹೀಗಿರುವಾಗ ಇರುವ ಅಲ್ಪ ಅವಧಿಯ ಜೀವನ ಮುಗಿಸಿ ಹೋಗುವ ಮುನ್ನ ಕೆಲವರಾದರೂ ಇಂತಹವರೊಬ್ಬರಿದ್ದರು ಎಂದು ನೆನೆಸಿಕೊಳ್ಳುವಂತೆ ಬಾಳುವುದು ಶ್ರೇಷ್ಠ. ಆದರೆ, ವಿಕಟನರ್ತನಗೈಯುವ ಮದ ಇದಕ್ಕೆ ಅವಕಾಶ ಕೊಟ್ಟೀತೇ?
ಬಾರರದು ಜನವು ಧನವು ಕಾಯದು
ಕರೆ ಬಂದಾಗ ಅಡೆತಡೆಯು ನಡೆಯದು |
ಇರುವ ಮೂರು ದಿನ ಜನಕೆ ಬೇಕಾಗಿ
ಜಗಕೆ ಬೆಳಕಾಗಿ ಬಾಳೆಲೋ ಮೂಢ ||
-ಕ.ವೆಂ.ನಾಗರಾಜ್.