ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜುಲೈ 30, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -14: ಚತುರ್ವರ್ಣ ಮತ್ತು ಜಾತಿಪದ್ಧತಿ


ದೇವರು ಪಕ್ಷಪಾತಿಯೇ?
     ಇದೇ ಸಂದರ್ಭದಲ್ಲಿ ನೆನಪಾಗ್ತಾ ಇದೆ. ಬಿಹಾರದಲ್ಲಿ ಭೂಕಂಪ ಆದಾಗ ಒಬ್ಬ ಮೌಲ್ವಿ ನನ್ನ ಜೊತೆಯಲ್ಲಿದ್ದ. ಅವನೇ ಶುರು ಮಾಡಿದ,"ನೋಡಿ, ಇಲ್ಲಿ ಹಿಂದೂಗಳು ಜಾಸ್ತಿ. ಅದಕ್ಕೇ ಭೂಕಂಪ ಆಯ್ತು.. ಇರಾನಿನಲ್ಲಿ, ಪರ್ಷಿಯಾದಲ್ಲಿ ಆಗಲಿಲ್ಲ. ಟರ್ಕಿಸ್ತಾನದಲ್ಲಿ ಆಗಲಿಲ್ಲ." ಬಿಹಾರದ ಭೂಕಂಪದಲ್ಲಿ 50,000 ಜನ ಸತ್ತರು. ಮರು ದಿನ ಪೇಪರ್‌ನಲ್ಲಿ ಸುದ್ದಿ ಬಂತು, ಟರ್ಕಿಸ್ತಾನದಲ್ಲಿ ಭೂಕಂಪ ಆಗಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಸತ್ತರು ಅಂತ. ನಾನು ಕೇಳಿದೆ, "ಏನಪ್ಪಾ, ಅಲ್ಲಿ ಖುದಾ ಇಲ್ಲವಾ? ಅಲ್ಲೂ ಸಾವು ಆಯ್ತಲ್ಲಾ?" ಈ ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ ಇವೆಲ್ಲಾ ಮನುಷ್ಯರ ಕೈಯಲ್ಲಿಲ್ಲ. ಆ ನಿಯಾಮಕ ಇದ್ದಾನೆ. ಎಲ್ಲಾ ಅವನ ನಿಯಮದಂತೆ ಆಗುತ್ತೆ. ನಾವು ಎಷ್ಟು ಜಂಬ ಮಾಡಿದ್ರೂ ಕೂಡ, ಭೂಮಿ ನಡುಗಿದಾಗ, "ಏಯ್, ನಿಲ್ಲು" ಅಂತ ಹೇಳೋಕ್ಕಾಗಲ್ಲ. ಏನಾಗಬೇಕೋ ಅದು ಆಗೇ ಅಗುತ್ತೆ.
ಪರಮಾತ್ಮನನ್ನು ಗೌರವಿಸಿ
     ಇದೆಲ್ಲಾ ನಾವುಮನುಷ್ಯರು ಮಾಡಿಕೊಳ್ಳೋದು. ನಾವು. ದೇವರಿಗೆ ಗೌರವ ಕೊಡ್ತೀವಿ ಅನ್ನೋದು, ನೋಡಿದ್ರೆ ಹೀಗೆ. ನಾವು ಕುಣಿಸಿದ ಹಾಗೆ ಕುಣೀಬೇಕು ಅವನು. ದಾಸರೂ ಅದನ್ನೇ ಹೇಳ್ತಾರೆ. ಭಕ್ತ ಮಲಗಿ ಭಜನೆ ಮಾಡಿದರೆ ದೇವರು ಕುಳಿತು ಕೇಳ್ತಾನೆ. ಕುಳಿತು ಭಜನೆ ಮಾಡಿದರೆ ನಿಂತು ಕೇಳ್ತಾನೆ. ನಿಂತು ಹೇಳಿದರೆ ಕುಣ್ಕೊಂಡು ಕೇಳ್ತಾನೆ. ಇದಾ ದೇವರಿಗೆ ಕೊಡುವ ಗೌರವ? ಅದನ್ನು ಎಷ್ಟು ಭಕ್ತಿಯಿಂದ ಕೇಳ್ತಾರೆ ಗೊತ್ತಾ? ರುಕ್ಮಿಣೀ ಪರಿಣಯ, ಪದ್ಮಾವತೀ ಪರಿಣಯ, ಶ್ರೀನಿವಾಸ ಕಲ್ಯಾಣ,..ಮಾಡಿದ್ದೂ ಮಾಡಿದ್ದೇ. ದೇವರಿಗೇ ಮದುವೆ ಮಾಡೋರು ದೇವರ ಭಕ್ತರೋ, ಅಪ್ಪಂದಿರೋ ಅನ್ನುವ ಪ್ರಶ್ನೆ ಬರುತ್ತೆ. ಎಲ್ಲಿಯವರೆಗೆ ದೇವರು ಬರ್ತಾನೆ, ಹೋಗ್ತಾನೆ ಅಂತಾ ಅನ್ನುವವರೆಗೆ ದೇವರು ಯಾವತ್ತೂ ಸಿಗುವುದಿಲ್ಲ. ವೇದ ಹೇಳುತ್ತೆ:
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ || (ಯಜು.೪೦.೫.)
ಆ ಪರಮಾತ್ಮ ಜಗತ್ತನ್ನೆಲ್ಲಾ ಓಡಾಡಿಸುತ್ತಾನೆ. ತಾನು ಅಲ್ಲಾಡುವುದಿಲ್ಲ. ನಾನು ಅನೇಕ ಸಲ ಹೇಳ್ತಾ ಇರ್ತೀನಿ. ರೈಲು ಕಂಬಿ ಧೃಢವಾಗಿದ್ದರೆ ರೈಲು ಅದರ ಮೇಲೆ ಹೋಗುತ್ತೆ. ಕಂಬಿಯೇ ಧೃಢವಾಗಿಲ್ಲದಿದ್ದರೆ ರೈಲಿನ ಗತಿಯೇನು? ಪರಮಾತ್ಮ ಬರ್ತಾನೆ, ಹೋಗ್ತಾನೆ ಇವೆಲ್ಲಾ ಮಾನಸಿಕ ವ್ಯಾಪಾರ. ನಿಜವಾಗಿ ಪರಮಾತ್ಮನನ್ನು ನೆನೆದರೆ ನಮ್ಮ ಮನಸ್ಸಿನಲ್ಲೇ ಇದಾನೆ. ಪರಮಾತ್ಮ ಎಲ್ಲೋ ಮೆಕ್ಕಾದಲ್ಲೋ, ಮದೀನಾದಲ್ಲೋ, ಜೆರೂಸಲೇಮಿನಲ್ಲೋ, ಕಾಶಿಯಲ್ಲೋ, ರಾಮೇಶ್ವರದಲ್ಲೋ ಇದಾನೆ ಅಂದ್ರೆ ಅರ್ಥ ಇದೆಯಾ? ಬೆಂಗಳೂರು ಏನು ಪಾಪಿ ಊರಾ? ಇಲ್ಲಿ ಇಲ್ಲವಾ ದೇವರು? ತೀರ್ಥಯಾತ್ರೆ ಹೋಗ್ತಾರಲ್ಲಾ ಅವರಿಗೆ ಅದಕ್ಕೇ ಹೇಳೋದು. ಯಾಕೆ ಬೆಂಗಳೂರು ಪವಿತ್ರ ಅಲ್ಲವಾ? ಇಲ್ಲಿ ಭಗವಂತ ಇಲ್ಲವಾ? ಇಲ್ಲಿ ಭಗವಂತನ ಸ್ಮರಣೆ ಮಾಡಕ್ಕೆ ಆಗಲ್ವಾ?
ಗಂಗಾಜಲ
      ಕಾಶಿಯಲ್ಲಿ ಹಕ್ಕಿಬೈಲಿ ಅಂತ ಸ್ಥಳ ಇದೆ. ಪ್ರಜಾಪತಿ ಬ್ರಹ್ಮ ಅಲ್ಲಿ ಯಜ್ಞ ಮಾಡಿದ್ದನಂತೆ. ಅವಾಗಿನಿಂದ ಇದು ಪವಿತ್ರವಾದ ಸ್ಥಾನವಂತೆ. ಯಾರಿಗೆ ಮೋಕ್ಷ ಬೇಕೋ ಅವರು ಇಲ್ಲಿ ಸ್ನಾನ ಮಾಡಬೇಕಂತೆ. ನಾನು ಹೋದೆ. ನಾನು ಒಳ್ಳೆ ಮಾರ್ವಾಡಿ ಸೇಠ್ ಇದ್ದ ಹಾಗಿದ್ದೆ. ಕಚ್ಚೆ ಪಂಚೆ, ಲಾಂಗ್ ಕೋಟು, ತಲೆ ಮೇಲೆ ಪಗಡಿ ಇವೆಲ್ಲಾ ಹಾಕಿಕೊಂಡು ಸೇಠಜಿ ಇದ್ದ ಹಾಗಿದ್ದೆ. ಅಲ್ಲಿ ಪಂಡಾಗಳು. 'ಸೇಠಜಿ, ಸ್ನಾನ್ ಕರೋ', ಅಂದರು. 'ಇಲ್ಲಪ್ಪಾ, ನಾನು ಇಲ್ಲಿ ಸ್ನಾನ ಮಾಡೋದಿಲ್ಲ. ಅಲ್ಲಿ ಗೋಮುಖ-ಗಂಗಾನದಿ ಹಿಮಾಲಯದಿಂದ ಕರಗಿ ನೀರಾಗಿ ಹರಿದು ಬರುತ್ತಲ್ಲಾ, ಅಲ್ಲಿ ಸ್ನಾನ ಮಾಡ್ತೀನಿ' ಅಂದೆ. ಹಿಮಾಲಯ ಪರ್ವತದಲ್ಲಿ ಹಾದು ಬರುವ ಆ ನೀರಿಗೆ ಔಷಧೀಯ ಗುಣಗಳಿವೆ. ನಿಮಗೂ ಗೊತ್ತಿರಬಹುದು. ಎಲ್ಲರ ಮನೆಯಲ್ಲೂ ಕಾಶಿಯಿಂದ ತಂದ ಗಂಗಾನದಿಯ ನೀರನ್ನು ಥಾಲಿಯ ಒಳಗೆ ಇಟ್ಟುಕೊಂಡಿರ್ತಾರೆ. ಒಂದು ಸತ್ಯವಾದ ಸತ್ವ, ಆ ಗಂಗಾಜಲ ಇದೆಯಲ್ಲಾ ಅದು ಎಷ್ಟು ಕಾಲ ಇಟ್ಟರೂ ಹಾಳಾಗುವುದಿಲ್ಲ. ಬೇರೆ ನೀರು ಮಾರನೇ ದಿನಕ್ಕೇ ಕೆಟ್ಟು ಹೋಗಿರುತ್ತೆ. ಅದು ಗೊತ್ತಾಗಲು ಎಲ್ಲರೂ ತಿಳಕೊಂಡ ಹಾಗೆ ಮೂಢನಂಬಿಕೆ ಬೇಕಾಗಿಲ್ಲ. ಹಿಮಾಲಯದ ತಪ್ಪಲಿನಲ್ಲಿ ಇರುವ ಔಷಧೀಯ ಗುಣಗಳುಳ್ಳ ಮಣ್ಣಿನ ಮೇಲೆ ಹಾಯ್ದು ಬರುವ ಆ ನೀರಿನಲ್ಲಿ ಔಷಧೀಯ ಗುಣಗಳಿವೆ. ಅದರ ಫಲ ಇದು.
ಚತುರ್ವರ್ಣ
      ಕಾಲಿಗೆ ಮುಳ್ಳು ಚುಚ್ಚಿಕೊಂಡರೆ 'ಹಾ' ಅಂತ ಬ್ರಾಹ್ಮಣ (ಮುಖ) ಕಿರುಚಿಕೊಳ್ಳುತ್ತಾನೆ, ಕ್ಷತ್ರಿಯ (ಕೈ) ಮುಳ್ಳನ್ನು ಕೀಳಲು ಬರುತ್ತಾನೆ, ವೈಶ್ಯ(ಮುಂಡ) ಅವನಿಗೆ ಬೇಕಾದ ಸಹಾಯ ಒದಗಿಸುತ್ತಾನೆ. ಹೀಗೆ ಈ ಶರೀರದಲ್ಲೇ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ನಾಲ್ವರೂ ಇದ್ದಾರೆ. ಪಾದ ನೀಚ, ತಲೆ ಉತ್ಕೃಷ್ಟ ಅಂತ ಹೇಳೋ ಪಕ್ಷದಲ್ಲಿ ಒಂದು ದೊಡ್ಡ ಪ್ರಶ್ನೆ ಬರುತ್ತೆ, ನಾನು ಗುರು, ಯಾರದೋ ಮನೆಗೆ ಹೋಗ್ತೀನಿ, ಆಗ ನನ್ನ ಕಾಲಿಗೆ ನೀರು ಕೊಡ್ತಾರೆಯೇ ಹೊರತು ತಲೆಗೆ ನೀರು ಹಾಕಲ್ಲ. ತಲೆಗೆ ನೀರು ಹಾಕಿದರೆ ನನ್ನ ಪರಿಸ್ಥಿತಿ ಕೇಳೋರು ಯಾರು? ಕಾಲಿಗೇ ಬೇಕಾಗಿರೋದು ನೀರು, ತಲೆಗೆ ಬೇಕಾಗಿಲ್ಲ, ಈ ತರಹ ಆಲೋಚನೆ ಮಾಡಿ. ಈ ಚತುರ್ವರ್ಣ ವ್ಯವಸ್ಥೆ ಇದೆಯಲ್ಲಾ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಅಂತ, ಇವು ಸರಿ ಹೋಗದಿದ್ದರೆ,  ಇಂಟಲೆಕ್ಚುಯಲ್, ಮಾರ್ಶಿಯಲ್, ಕಮರ್ಶಿಯಲ್ ಮತ್ತು ಮಾನ್ಯುಯಲ್ ಎಂಬ ಈ ನಾಲ್ಕು ಶಬ್ದಗಳನ್ನು ಇಟ್ಟುಕೊಳ್ಳಿ. ನನ್ನ ಕಾಲು ಹಾಳಾದರೆ ಹಾಳಾಗಲಿ, ನನ್ನ ತಲೆ ಮಾತ್ರ ಚೆನ್ನಾಗಿದ್ದರೆ ಸಾಕು ಅಂತ ಹೇಳಿದರೆ ನಾನು ಮೂರ್ಖ ಅಲ್ಲವಾ? ಕಾಲೂ ಚೆನ್ನಾಗಿರಬೇಕು, ತಲೆಯೂ ಚೆನ್ನಾಗಿರಬೇಕು, ಶರೀರದ ಪ್ರತಿಯೊಂದು ಅಂಗಾಂಗವೂ ಚೆನ್ನಾಗಿರಬೇಕು. ಹಾಗಿರುವವನೇ ನಿಜವಾದ ಪುರುಷ. ಕುರುಡ, ಕುಂಟ, ಕಿವುಡ ಇಂತಹವರೆಲ್ಲಾ ಪೂರ್ಣ ಪುರುಷರಲ್ಲ, ಅವರ ಕೆಲವು ಅಂಗಗಳು ಊನವಾಗಿವೆ. ಪೂರ್ತಿ ಇಂದ್ರಿಯ ಸರಿಯಾಗಿರಬೇಕು.
     ಸಮಾನತೆ ವೇದೋಪದೇಶದ ಒಂದು ಆಧಾರ ಶಿಲೆ. ಈ ಮಂತ್ರ ಹೇಳುತ್ತದೆ:
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ |
ಯುವಾ ವಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || (ಋಕ್.5.60.5.)
     ಮಾನವರಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಚಿಕ್ಕವರೂ ಅಲ್ಲ. ಇವರು ಪರಸ್ಪರ ಸಹೋದರರು. ಸೌಭಾಗ್ಯಪ್ರಾಪ್ತಿಗಾಗಿ ಮುಂದುವರೆಯುತ್ತಾರೆ. ಪರಮಾತ್ಮ ಇವರೆಲ್ಲರ ತಂದೆ. ಭೂಮಾತೆ, ಈ ಮರ್ತ್ಯರಿಗೆಲ್ಲಾ ಉತ್ತಮ ಶಕ್ತಿಯನ್ನೆರೆಯುವವಳೂ ಉತ್ತಮ ದಿನಗಳನ್ನು ತೋರಿಸುವವಳೂ ಆಗಿದ್ದಾಳೆ. ಈ ಮಂತ್ರ ಹೇಳುತ್ತದೆ:
     ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹ ಚಿತ್ತಮೇಷಾಮ್ |
ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || (ಅಥರ್ವ.6.64.2.)
     ಈ ಮಾನವರೆಲ್ಲರ ಮಂತ್ರ ಸಮಾನವಾಗಿರಲಿ. ಸಮಿತಿ ಸಮಾನವಾಗಿರಲಿ. ವ್ರತವೂ ಸಮಾನವಾಗಿರಲಿ. ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ. ನಿಮ್ಮೆಲ್ಲರಿಗೂ, ಸಮಾನವಾದ ಖಾದ್ಯ, ಪೇಯಗಳನ್ನೇ ದಾನ ಮಾಡುತ್ತೇನೆ. ಸಮಾನವಾದ ಚೈತನ್ಯದಲ್ಲಿಯೇ ಎಲ್ಲೆಡೆಯಿಂದಲೂ ಪ್ರವೇಶಿಸಿರಿ ಎಂಬುದು ಇದರ ಅರ್ಥ.      ಸಮಾನತೆಯ ಸಂದೇಶ ಸ್ಪಷ್ಟವಾಗಿದೆ. ನಿಮ್ಮೆಲ್ಲರ ಜಲಾಶಯಗಳೂ ಒಂದಾಗಿರಲಿ. ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ ಎನ್ನುತ್ತಿದೆ. ಇಂತಹ ಅದೆಷ್ಟೋ ಮಂತ್ರಗಳನ್ನುದ್ಧರಿಸಬಹುದು. ಅದರೆ ವೇದಗಳ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಇಷ್ಟು ಸಾಕು.
     ಮಾನವರೆಲ್ಲರನ್ನೂ ಸಮಾನ ದೃಷ್ಟಿಯಿಂದಲೇ ನೋಡಬೇಕೆಂಬುದು ಸತ್ಯ ಸಿದ್ಧಾಂತ. ಆದರೆ ಮಾನವರು ಯಾಂತ್ರೀಕೃತರಲ್ಲ, ಎಲ್ಲಾ ವಿಷಯಗಳಲ್ಲಿಯೂ ಸರ್ವಥಾ ಸಮಾನವಾಗಿರುವುದಕ್ಕೆ. ಒಂದು ಯಂತ್ರಾಗಾರದಿಂದ ಒಂದೇ ರೂಪದ, ಒಂದೇ ತೂಕದ, ಒಂದೇ ಬಣ್ಣದ, ಒಂದೇ ಶಕ್ತಿಯ ಸಹಸ್ರಾರು ಮೋಟಾರುಗಳನ್ನು ನಿರ್ಮಿಸಬಹುದು. ಆದರೆ ಅತ್ಯಂತ ಸಮರ್ಥನಾದ ಆಚಾರ್ಯನೂ ಕೂಡ ಒಂದೇ ಶಕ್ತಿಯ, ಒಂದೇ ಅಭಿರುಚಿಯ, ಒಂದೇ ಭಾವನೆಯ ಸಾವಿರ, ಏಕೆ, ನೂರು ಶಿಷ್ಯರನ್ನೂ ತಯಾರು ಮಾಡಲಾರನು. ಅದಕ್ಕೆ ಕಾರಣವೂ ಇದೆ. ಪ್ರತಿಯೊಬ್ಬ ಜೀವಾತ್ಮನೂ ತನ್ನದೇ ಆದ ಸಂಸ್ಕಾರಗಳನ್ನು ಹೊತ್ತು, ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಬರುತ್ತಾನೆ.
ಆದಹ ಸ್ವಧಾಮನು ಪುನರ್ಗರ್ಭತ್ವಮೇರಿರೇ | ದಧಾನಾ ನಾಮ ಯಜ್ಞಿಯಮ್ || (ಋಕ್. ೧.೬.೪.)
    ಜೀವಿಗಳು ಪೂರ್ವಾರ್ಜಿತ ಕರ್ಮಕ್ಕೆ ತಕ್ಕಂತೆ, ಅಂದರೆ ಸಂಸ್ಕಾರಗಳ ದೃಷ್ಟಿಯಿಂದ ಯೋಗ್ಯತೆಗೆ ಅನುಸಾರವಾಗಿ ಹೊಸ ಹೊಸ ಜನ್ಮ ಧರಿಸುತ್ತಾರೆ.. ಮಾನವಯೋನಿ ಏನೋ ಒಂದೇ, ಮಾನವತ್ವ ಸಾಮಾನ್ಯ ಧರ್ಮವೂ ಅಹುದು. ಈ ದೃಷ್ಟಿಯಿಂದ ಮಾನವರೆಲ್ಲಾ ಸಮಾನರೇ ಸರಿ. ಆದರೆ ಪ್ರತಿಯೊಬ್ಬರಲ್ಲೂ ಸಾಮರ್ಥ್ಯಗಳಲ್ಲಿ ಮತ್ತು ಒಲವುಗಳಲ್ಲಿ ಸಹಜವಾದ ಭೇದವಿರುತ್ತದೆ. ಅದಕ್ಕೆ ತಕ್ಕಂತೆ ಪ್ರತಿಯೊಬ್ಬನಿಗೂ ತನ್ನದೇ ಆದ ರೀತಿಯಲ್ಲಿ ಏಳಿಗೆ ಸಾಧಿಸುವ ಅನುಕೂಲವನ್ನು ಕಲ್ಪಿಸಿಕೊಡುವುದೇ ಮನೋವಿಜ್ಞಾನಕ್ಕನುಗುಣವಾದ ಸರಿಯಾದ ಕ್ರಮ.
     ಬೌದ್ಧಿಕ ಪರಿಶ್ರಮ, ಬಾಹುಬಲ ಸಂಯೋಜನ, ವ್ಯಾಪಾರೋದ್ಯಮ, ಕೃಷಿಸಾಧನ ಹಾಗೂ ಶಾರೀರಿಕ ಪರಿಶ್ರಮ -  ಈ ನಾಲ್ಕು ಸೇವಾಸಾಧನಗಳಿವೆ. ಇವನ್ನು 'ವರ್ಣಗಳು' ಎನ್ನುತ್ತಾರೆ. ವರ್ಣ ಎಂಬ ಶಬ್ದದ ಅರ್ಥ 'ಆರಿಸಿಕೊಳ್ಳುವ ತತ್ತ್ವ' ಎಂದು. ವರ್ಣ, ಜಾತಿಯಂತೆ ಹುಟ್ಟಿ ಬರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರ, ತನ್ನ ವರ್ಣವನ್ನು ಆರಿಸಿಕೊಳ್ಳುತ್ತಾನೆ. ಹುಟ್ಟಿದ ಕುಲ, ಈ ಬಗೆಯ ಆರಿಸುವಿಕೆಗೆ ನೆರವಾಗಬಹುದು. ಅಂದರೆ, ಬ್ರಾಹ್ಮಣನ ಮಗ ಬ್ರಾಹ್ಮಣನಾಗಬಹುದು, ಆಗದೆಯೂ ಇರಬಹುದು. ವರ್ಣದಲ್ಲಿ ವ್ಯಕ್ತಿಗತ ಸಾಮರ್ಥ್ಯಾಭಿರುಚಿಗಳಿಗೆ ಪ್ರಾಧಾನ್ಯವೇ ಹೊರತು ಕುಲ ಅಥವಾ ಪರಂಪರೆಗಲ್ಲ. ಕೆಲವರಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಶಬ್ದಗಳು ರುಚಿಸದಿರಬಹುದು. ನಾನು ಮೊದಲೇ ಹೇಳಿದಂತೆ,  ಇವು ಸರಿ ಹೋಗದಿದ್ದರೆ,  ಇಂಟಲೆಕ್ಚುಯಲ್, ಮಾರ್ಶಿಯಲ್, ಕಮರ್ಶಿಯಲ್ ಮತ್ತು ಮಾನ್ಯುಯಲ್ ಎಂಬ ಈ ನಾಲ್ಕು ಶಬ್ದಗಳನ್ನು ಇಟ್ಟುಕೊಳ್ಳಿ. ಆದರೆ, ರಾಷ್ಟ್ರ ಆಸ್ತಿಕವೇ ಆಗಿರಲಿ, ನಾಸ್ತಿಕವೇ ಆಗಿರಲಿ, ಬುದ್ಧಿಜೀವಿ, ಶಕ್ತಿಜೀವಿ, ವ್ಯಾಪಾರೋದ್ಯಮಜೀವಿ, ಶ್ರಮಜೀವಿ ಇದ್ದೇ ಇರುತ್ತಾರೆ. ಈ ನೈಸರ್ಗಿಕ ವಿಭಾಗಗಳಿಗೆ ಸೊನ್ನೆ ಸುತ್ತಿ, ಎಲ್ಲರ ತಲೆಗೂ ಒಂದೇ ವೃತ್ತಿಯನ್ನು ಸುತ್ತುವ ಪ್ರಯತ್ನ ಎಂದಿಗೂ ಸಫಲವಾಗದು. ಎಲ್ಲರೂ ಬುದ್ಧಿಜೀವಿಗಳು, ಎಲ್ಲರೂ ಶ್ರಮಿಕರು, ಎಲ್ಲರೂ ವ್ಯಾಪಾರಿಗಳು, ಎಲ್ಲರೂ ಆಡಳಿತಗಾರರು ಆಗಬೇಕೆಂದರೆ ವ್ಯಾವಹಾರಿಕವಾಗಿ ಸಾಧ್ಯವೇ?
     ನಾನಾನಂ ವಾ ನೋ ಧಿಯೋ ವಿ ವ್ರತಾನಿ ಜನಾನಾಮ್| (ಋಕ್.9.112.1) ಮನುಷ್ಯರ ಬುದ್ಧಿಗಳು ನಾನಾ ತರನಾಗಿರುತ್ತವೆ, ಮತ್ತು ಅದೇ ರೀತಿ, ಸಂಕಲ್ಪಗಳೂ, ವಿಚಾರಗಳೂ ಕೂಡ ವಿವಿಧವಾಗಿರುತ್ತವೆ. ಈ ಮೌಲಿಕ ಸತ್ಯವನ್ನು ಗುರುತಿಸಿ, ಪ್ರತಿಯೊಬ್ಬನೂ ತನ್ನದೇ ಆದ ಮಾರ್ಗ ಹಿಡಿದು, ಮಾನವಸಮಾಜಕ್ಕೂ ಸೇವೆ ಸಲ್ಲಿಸುತ್ತಾ, ತನ್ನ ವೈಯಕ್ತಿಕ ಅಭಿವೃದ್ಧಿಯನ್ನೂ ಸಾಧಿಸಿಕೊಳ್ಳುವುದಕ್ಕಾಗಿ ಸೌಲಭ್ಯ ನೀಡುವ ಉದ್ದೇಶದಿಂದ, ವೇದಗಳು ಪರಮ ವೈಜ್ಞಾನಿಕವಾದ ವರ್ಣವ್ಯವಸ್ಥೆಯ ನಿರೂಪಣವನ್ನು ಮಾಡುತ್ತವೆ. ಒಂದು ಅಂಶವನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿ ಅಂಕಿತಗೊಳಿಸಿಕೊಳ್ಳಬೇಕು. ಹುಟ್ಟಿನಿಂದ ಬರುವುದೆಂದು ಭಾವಿಸಲ್ಪಡುವ, ಯಾವುದೋ ಅತ್ಯಂತ ಹಿಂದಿನ ಕಾಲಘಟ್ಟದಲ್ಲಿ ವರ್ಣವ್ಯವಸ್ಥೆಗೆ ಕುರೂಪವನ್ನಿತ್ತು ಸ್ವಾರ್ಥವನ್ನೇ ಸರ್ವಸ್ವವೆಂದು ಭಾವಿಸಿ, ಪ್ರತಿಯೊಬ್ಬ ವ್ಯಕ್ತಿಯ ಘನತೆ ಗಾಂಭೀರ್ಯಗಳಿಗೆ ಗಮನ ನೀಡದೆ, ಮೇಲು-ಕೀಳೆಂಬ ಹೊಲಸು ಭಾವನೆಗೆ ಆಶ್ರಯ ಕೊಟ್ಟು ಆಚರಿಸಲ್ಪಡುವ ಇಂದಿನ ಜಾತಿಪದ್ಧತಿಗೂ, ಪರಮ ವೈಜ್ಞಾನಿಕವೂ, ಸರ್ವಥಾ ಬುದ್ಧಿಸಂಗತವೂ, ಸರ್ವೋತ್ಕರ್ಷಸಾಧಕವೂ ಆದ ಪವಿತ್ರ ವರ್ಣವ್ಯವಸ್ಥೆಗೂ ಯಾವ ಸಂಬಂಧವೂ ಇಲ್ಲ. ಇದನ್ನು ಮನಗಾಣಿಸುವ ಕೆಲಸ ಎಲ್ಲರಿಂದ ಆಗಬೇಕಿದೆ.
-ಕ.ವೆಂ.ನಾಗರಾಜ್.
**************
ಜನಹಿತ ಪತ್ರಿಕೆಯ ದಿನಾಂಕ 22.07.2015ರ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಜುಲೈ 29, 2015

ಹಾಸನದಲ್ಲಿ ಯೋಗ-ವೇದ-ಸಂಸ್ಕೃತ ಸಂಗಮ


     ಹಾಸನದ ವೇದಭಾರತಿ ಮೂರು ವರ್ಷಗಳನ್ನು ಪೂರ್ಣಗೊಳಿಸಿ ನಾಲ್ಕನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. 5.08.2015ರಿಂದ 9.08.2015ರವರೆಗೆ 5 ದಿನಗಳ ಕಾಲ "ಯೋಗ-ವೇದ-ಸಂಸ್ಕೃತ ಸಂಗಮ" ಎಂಬ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮದ ವಿವರ ಹೀಗಿದೆ:
ಪ್ರತಿನಿತ್ಯ ಬೆ. 5.15ರಿಂದ6.30 ಮತ್ತು ಸಾ. 5.30ರಿಂದ 6.30ರವರೆಗೆ ಯೋಗ, ಪ್ರಾಣಾಯಾಮದ ಅಭ್ಯಾಸ - ನುರಿತ ಯೋಗಪಟುಗಳು ಮಾರ್ಗದರ್ಶನ ಮಾಡುವರು.
ಪ್ರತಿನಿತ್ಯ ಬೆ. 6.30ರಿಂದ 7.00 ಮತ್ತು ಸಾ.6.30ರಿಂದ 7.00 -  ಅಗ್ನಿಹೋತ್ರ
ಪ್ರತಿನಿತ್ಯ ಬೆ. 7.00ರಿಂದ 8.30 ಮತ್ತು ಸಾ. 7.00ರಿಂದ 8.30 - ಪೂಜ್ಯ ಸ್ವಾಮಿರಾಮರ ಶಿಷ್ಯರಾದ ಗುರೂಜಿ ಪಟ್ಟಾಭಿರಾಮರಿಂದ ಗಾಯತ್ರಿ ಮಹಾಮಂತ್ರದ ಅನುಷ್ಠಾನ, ಮಹತ್ವ, ಪರಿಣಾಮ, ಇತ್ಯಾದಿಗಳ ಕುರಿತು ಉಪನ್ಯಾಸಗಳು.
ಪ್ರತಿನಿತ್ಯ ಬೆ. 8.30ಕ್ಕೆ ಉಪಹಾರದ ವ್ಯವಸ್ಥೆ ಮಾಡಿದೆ.
ಪ್ರತಿದಿನ ಬೆ.11.00ರಿಂದ ಮ.1.00 ಮತ್ತು ಮ.3.00ರಿಂದ 5.00 -  ಸಂಸ್ಕೃತ ಸಂಭಾಷಣಾ ಕಲಿಕಾ ಶಿಬಿರವಿರುತ್ತದೆ.
9.08.2015ರ ಸಾ. 5.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಾ. 6.00ಕ್ಕೆ ಬೆಂಗಳೂರಿನ ಸಂಗೀತ ವಿದುಷಿ ವಿನಯ ವಿ.ಪ್ರಭು ಮತ್ತು ಬಳಗದವರಿಂದ 'ಭಕ್ತಿ ಸಂಗೀತ' ಕಛೇರಿ ಏರ್ಪಡಿಸಿದೆ.
ಆಸಕ್ತರು ಸದುಪಯೋಗ ಪಡೆಯಬಹುದಾಗಿದೆ. ಎಲ್ಲರಿಗೂ ಆದರದ ಸ್ವಾಗತವಿದೆ.


ಶುಕ್ರವಾರ, ಜುಲೈ 24, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -13: ರಾಮರಾಜ್ಯ - ರಾವಣರಾಜ್ಯ


     'ನೇತ್ರ, ಕರ್ಣ, ನಾಲಿಗೆ, ನಾಸಿಕ, ಚರ್ಮ - ಈ ಪಂಚೇಂದ್ರಿಯಗಳು ಇದಾವಲ್ಲಾ, ಇವುಗಳಿಂದ ಶತ್ರುಗಳಲ್ಲದವರೂ ಶತ್ರುಗಳಾಗುತ್ತಾರೆ. ಆದ್ದರಿಂದ 'ಹೇ, ಜೀವಾತ್ಮ, ಎಲ್ಲರನ್ನೂ ನಿನ್ನ ಮಿತ್ರರೆಂದೇ ತಿಳಿ' - ಇದು ಒಂದು ವೇದ ಮಂತ್ರದ ಅರ್ಥ. ರಾಮಾಯಣ ಓದಿ, ಮಹಾಭಾರತ ಓದಿ, ನಿಮಗೆ ತಿಳಿಯುತ್ತೆ. ಎಲ್ಲಿ ಇಂದ್ರಿಯ ನಿಗ್ರಹ ಇಲ್ಲವೋ, ಆತ್ಮಬಲ ಇಲ್ಲವೋ, ಎಲ್ಲಿ ಇಂದ್ರಿಯಗಳ ರಾಜ್ಯ ಇರುತ್ತದೋ ಅಲ್ಲಿ ಯಾವತ್ತೂ ಯುದ್ಧ, ಸಂಕಟ, ನರಕ ಇರುತ್ತದೆ. ಎಲ್ಲಿ ಆತ್ಮ ಬಲ ಜಾಸ್ತಿ ಇರುತ್ತೋ ಎಲ್ಲಿ ಇಂದ್ರಿಯಗಳು ಆತ್ಮನ ವಶದಲ್ಲಿದ್ದು ಕೆಲಸ ಮಾಡುತ್ತವೋ ಅಲ್ಲಿ ನಮಗೆ ಸ್ವರ್ಗ ಸಿಗುತ್ತದೆ, ರಾಮರಾಜ್ಯ ಅನ್ನಿಸುತ್ತದೆ. ಈ ಕಣ್ಣಿನಿಂದ ಒಬ್ಬ ಕಟುಕ ಕುರಿಯನ್ನು ಕತ್ತರಿಸುವುದನ್ನೂ ನೋಡಬಹುದು, ಗಗನಚುಂಬಿ ಹಿಮಾಲಯವನ್ನೂ ನೋಡಬಹುದು. ಪೆಸಿಫಿಕ್ ಮಹಾಸಾಗರವನ್ನೂ ನೋಡಬಹುದು. ಈ ಕಿವಿಯಿಂದ ಕೆಟ್ಟ ಕೆಟ್ಟ ಹಾಡುಗಳನ್ನೂ ಕೇಳಬಹುದು, ಒಳ್ಳೆಯ ಭಜನೆಗಳನ್ನೂ ಕೇಳಬಹುದು. ಅದರಿಂದ ಒಳ್ಳೆಯದು, ಕೆಟ್ಟದು ಅಂತ ಹೇಳಬಹುದು. ಈಗ ನಾನು ಹೇಳುತ್ತಿರುವುದು ಇದೇ ವಿಷಯ. ಆತ್ಮದ ರಾಜ್ಯ ಇರಬೇಕೋ, ಇಂದ್ರಿಯ ರಾಜ್ಯ ಇರಬೇಕೋ? ಇಂದ್ರಿಯ ರಾಜ್ಯ ಇರಬೇಕು ಅನ್ನುವುದಾದರೆ ರಾವಣ ರಾಜ್ಯ ಆಗುತ್ತೆ, ರಾಮರಾಜ್ಯ ಆಗುವುದಿಲ್ಲ. ರಾಮರಾಜ್ಯ ಆಗಬೇಕೆಂದರೆ ಆತ್ಮ ಬಲ ಗಟ್ಟಿಯಾಗಬೇಕು.  'ಈ ಸಂಯಮ ಬೇಕು' ಅನ್ನುವ ಸಂದೇಶ ರಾಮಾಯಣ, ಮಹಾಭಾರತ ಎಲ್ಲದರಲ್ಲೂ ಇದೆ. ರಾಮನ ಸಂಹಾರ ಆಗಿಹೋಗಿದೆ. ಪತಿ ರಾವಣನ ಶವವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಮಹಾರಾಣಿ ಮಂಡೋದರಿ ಶೋಕಿಸುತ್ತಾ ಹೇಳುತ್ತಾಳೆ: ಇಂದ್ರಿಯಾಣಿ ಪುರಾ ಜಿತ್ವಾ ಜಿತಂ ತ್ರಿಭುವನಂ ತ್ವಯಾ | ಸ್ಮರದ್ಧಿರಿವ ತದ್ವೈರಮಿಂದ್ರಿಯೈರೇವ ನಿರ್ಜಿತ: || (ವಾ.ರಾ.ಯು.ಕಾಂ.೧೧೪.೧೮)  "ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ನೀನು ಮೂಲೋಕಗಳನ್ನೂ ಗೆದ್ದೆ. ಆದರೆ ಇಂದ್ರಿಯಗಳು ತಮ್ಮನ್ನು ತುಳಿದು ನೀನು ಮೇಲಕ್ಕೇರಿದುದನ್ನು ಮರೆತಿರಲಿಲ್ಲ. ತಮ್ಮ ಬಲದಿಂದಲೇ ನೀನು ಮೇಲಕ್ಕೆ ಬಂದೆಯೆಂದು ನಿನ್ನನ್ನು ನಂಬಿಸಿದವು. ಇಂದ್ರಿಯಗಳ ಮಾತು ಕೇಳಿ ನೀನು ನಾಶವಾದೆ". ಇಂದ್ರಿಯಗಳಿಗೆ ದಾಸರಾದರೆ ಕೆಳಗೆ ಬೀಳುತ್ತೇವೆ, ಒಡೆಯರಾದರೆ ಮೇಲೇರುತ್ತೇವೆ. ಆತ್ಮ ಬೇಕೋ, ಇಂದ್ರಿಯ ಬೇಕೋ? ಹಾಗಾದರೆ ಇಂದ್ರಿಯಗಳು ಬೇಡವಾ ಅಂತ ಕೇಳಬೇಡಿ. ಕಣ್ಣು ಬೇಡವಾ, ಕುರುಡರಾಗಬೇಕಾ? ಕಿವಿ ಬೇಡವಾ, ಕಿವುಡರಾಗಬೇಕಾ? ಬೇಕು, ಇಂದ್ರಿಯಗಳು ಬೇಕು, ಅದರೆ ಅವು ನಿಮ್ಮ ಅಧೀನದಲ್ಲಿರಲಿ. ಅವುಗಳ ಅಧೀನದಲ್ಲಿ ನೀವಿರಬೇಡಿ. ಈಮಾತನ್ನು ಹೇಳೋದನ್ನು ಹೇಳ್ತಾ ಇರುತ್ತೇವೆ. ಕೇಳೋದನ್ನು ಕೇಳ್ತಾ ಇರುತ್ತೇವೆ. ಯಥಾ ಪ್ರಕಾರ ನಡೆದುಕೊಳ್ಳುತ್ತೇವೆ.
     ಕಣ್ಣಿದೆ, ಅದರಿಂದ ನೋಡಿ, ಆದರೆ ಕೆಟ್ಟದ್ದೇ ನೋಡಬೇಡಿ, ಒಳ್ಳೆಯದನ್ನು ನೋಡಲು ಪ್ರಯತ್ನ ಪಡಿ. ಕಿವಿಯಿದೆ, ಯಾವಾಗಲೂ ಕೆಟ್ಟ ಕೆಟ್ಟ ಹಾಡುಗಳನ್ನೇ ಕೇಳಲು ಕುಳಿತುಕೊಳ್ಳುತ್ತೇವೆ.. ಒಳ್ಳೆಯ ಭಗವಂತನ ಭಕ್ತಿ, ಭಜನೆ, ಸನ್ಮಾರ್ಗಕ್ಕೆ ಸಂಬಂಧಿಸಿದ್ದನ್ನು ಕೇಳಲು ಕಿವಿ ಇರಲಿ. ಹೀಗೆ ನಮ್ಮ ಪಂಚೇಂದ್ರಿಯಗಳು ಇವೆಯಲ್ಲಾ, ಯಾವ ರೀತಿ ಉಪಯೋಗಿಸಿಕೊಳ್ತೀವೋ ಆ ರೀತಿ ಫಲ ಸಿಗುತ್ತೆ. ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಅದು ಶತ್ರು ಅಲ್ಲದವರನ್ನೂ ಶತ್ರುಗಳನ್ನಾಗಿ ಮಾಡುತ್ತದೆ. 'ನೀನು ಹಿಂದೂ ಅಲ್ಲವಾ? ಮುಸಲ್ಮಾನನಲ್ಲ, ಆದ್ದರಿಂದ ಕಾಫಿರ್, ನಿನಗೆ ಬದುಕೋದಿಕ್ಕೆ ಅಧಿಕಾರವಿಲ್ಲ', 'ನೀನು ಮುಸ್ಲಿಮ್, ಧರ್ಮಭ್ರಷ್ಠ, ನೀನು ಇರಬಾರದು', ಇತ್ಯಾದಿ ಮಾತುಗಳು ಬರುವುದು ಹೀಗೇನೇ! ಇವರಿಬ್ಬರಿಗೂ ಬುದ್ಧಿ ಬರೋದೇ ಇಲ್ಲ. ಕಚ್ಚಾಡಿಕೊಂಡು ಸಾಯೋದು. ನಿಜವಾದ ಪರಮಾತ್ಮ ಯಾವತ್ತೂ ಹಾಗೆ ಮಾಡೋದಿಲ್ಲ. ಒಂದು ಮಾತು, ಭಗವಂತ ಹೊರಗಿನಿಂದ ಮಾತನಾಡುವುದಿಲ್ಲ. ಹೃದಯದಿಂದ, ಒಳಗಿನಿಂದ, ಅಂತರಂಗದಿಂದ ಮಾತನಾಡುತ್ತಾನೆ. ನೀವು ಜಗತ್ತನ್ನು ಮರೆಯಿರಿ, ೨ ನಿಮಿಷ, ೩ ನಿಮಿಷ, ೪ ನಿಮಿಷ ಭಗವಂತನನ್ನು ಮನಸ್ಸಿನಲ್ಲಿಟ್ಟಿರಿ. ಆಗ ನಿಮಗೆ ಆನಂದವೋ ಆನಂದ ಸಿಕ್ಕುತ್ತೆ. ವ್ಯಾಕರಣ ಓದಿದೆ, ವೇದ ಓದಿದೆ, ನನಗೆ ವೇದಗಳ ಅರ್ಥ ಗೊತ್ತಿದೆ ಅಂದರೆ ಸಾಕಾಗುವುದಿಲ್ಲ. ಯಾವನ ಹೃದಯ ಶುದ್ಧವಾಗಿರುತ್ತೋ ಅವನಿಗೆ ಅರ್ಥವಾಗುತ್ತೆ. ಯಾರ ಮನಸ್ಸಿನಲ್ಲಿ ಪರಿಶುದ್ದಿ ಇಲ್ಲವೋ ಅವನಿಗೆ ಯಾವತ್ತೂ ಅರ್ಥವಾಗುವುದಿಲ್ಲ.   ಹೇ ಜೀವಾತ್ಮ, ಯಾರನ್ನೂ ಶತ್ರು ಅಂತ ತಿಳಕೋಬೇಡ. ಎಲ್ಲಾ ನಿನ್ನ ಮಿತ್ರರೇ. ಈ ಜ್ಞಾನ ಬಂದ ಮೇಲೆ ಸುಮ್ಮನೆ ಕುಳಿತಿರಬೇಡ. ಪ್ರಭುವಿನಿಂದ ಕೂಡಿದ ಜಗತ್ತಿನ ಪ್ರಾಪ್ತಿಗಾಗಿ ಹೋರಾಡು. ಹೋರಾಟ ಅಂದ್ರೆ ಕುಸ್ತಿ ಅಲ್ಲ. ಜ್ಞಾನ ಪ್ರಸಾರ ಮಾಡುವುದು. ಪರಮಾತ್ಮ ಅಂದರೆ ೧೪ನೇ ಆಕಾಶದಲ್ಲೋ, ೧೨ನೇ ಆಕಾಶದಲ್ಲೋ ಇರ್ತಾನೆ ಅಂತ ಹೇಳ್ತಾರಲ್ಲಾ, ಆ ಪರಮಾತ್ಮ ಅಲ್ಲ. ಎಲ್ಲಿಂದ ತೆಗೆದುಕೊಂಡು ಬಂದರೋ ಆ ಆಕಾಶಗಳನ್ನ! ೭ನೆಯ ಆಕಾಶ ಅಂತ ಇದೆಯಂತೆ, ಅಲ್ಲಿಗೆ ಹೋದ ಜೀವಾತ್ಮಗಳೆಲ್ಲಾ ಒಂಟೆಗಳಾಗ್ತಾರಂತೆ. ಒಂಟೆ ಆಗುವುದಕ್ಕೆ ಅಲ್ಲಿಗೆ ಹೋಗಬೇಕಾ ನಾವು? ಮನುಷ್ಯರಾಗಿ ಇರೋಕ್ಕೆ ಆಗಲ್ವಾ? ಇವೆಲ್ಲಾ ಮನುಷ್ಯನ ಕೆಟ್ಟ ಕಲ್ಪನೆ. ದೇವರ ಹೆಸರು ಹೇಳೋದು, ಮಾಡೋದೆಲ್ಲಾ ದೆವ್ವದ ಕೆಲಸ. ದೇವರ ಕೆಲಸ ಏನೂ ಮಾಡೋದಿಲ್ಲ.
ಗಾಂಧೀಜಿಯೊಡನೆ ಸರಸ-ವಿರಸ
     ಗಾಂಧೀಜಿಗೂ ನನಗೂ ಈ ವಿಚಾರದಲ್ಲಿ ಕುಸ್ತಿ ಆಗುತ್ತಿತ್ತು. ಸೇವಾಗ್ರಾಮದಲ್ಲಿ 'ರಘುಪತಿ ರಾಘವ ರಾಜಾರಾಮ್. . .' ಕಣ್ಣು ಮುಚ್ಚಿ ಚಪ್ಪಾಳೆ ತಟ್ಟಿ ಭಜನೆ ಮಾಡೋರು. ಜಾಕಿರ್ ಹುಸೇನ್, ಮೌಲಾನಾ ಆಜಾದ್ ಸೇರಿದಂತೆ ಮುಸಲ್ಮಾನರೂ ಕೂಡ ಹೇಳೋರು, ಚಪ್ಪಾಳೆ ಹಾಕೋರು. ನಾನು ಸುಮ್ಮನೇ ಕುಳಿತಿರುತ್ತಿದ್ದೆ. ಗಾಂಧೀಜಿ ಕೇಳ್ತಾ ಇದ್ದರು: "ನೀನು ಯಾಕೆ ಹೇಳಲ್ಲ? ನೀನು ಮುಸಲ್ಮಾನರಿಗಿಂತ ಕಡೆ." ನಾನು ಉತ್ತರಿಸುತ್ತಿದ್ದೆ, "ಪಾಪ, ಅವರನ್ನೇಕೆ ಅನ್ನುತ್ತೀರಿ? ಅವರು ಯಾಕೆ ಹೇಳ್ತಾರೆ ಅಂದರೆ ನಿಮ್ಮನ್ನು ಮೆಚ್ಚಿಸೋಕೆ ಹೇಳ್ತಾರೆ. ನಾನು ನಿಮ್ಮನ್ನು ಮೆಚ್ಚಿಸಬೇಕಾಗಿಲ್ಲ. ನಾನು ನನ್ನ ಆತ್ಮನನ್ನು, ಪರಮಾತ್ಮನನ್ನು ಮೆಚ್ಚಿಸಬೇಕಷ್ಟೆ." ಗಾಂಧೀಜಿ, "ನೀನು ಎಷ್ಟು ಕಾಲದಿಂದ ನನ್ನ ಜೊತೆ ಇದ್ದೀಯಾ, ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲವಾ? ನಿನ್ನ 'ಓಂ' ನನ್ನ ರಾಮ. ನೀನು ಯಾರನ್ನು ಓಂ ಅನ್ನುತ್ತೀಯೋ ಅವನನ್ನು ನಾನು ರಾಮ ಅನ್ನುತ್ತೇನೆ" ಅನ್ನೋರು. ನಾನು, "ರಾಮ ಅಂತ ಕರೆಯಿರಿ, ಏನಂತಲಾದರೂ ಕರೆರಿ, ನಾನು ಒಪ್ಪುತ್ತೇನೆ. ಆದರೆ ಭಗವಂತನನ್ನು ರಘುಪತಿ, ಸೀತೆ ಇವೆಲ್ಲವನ್ನೂ ಸೇರಿಸಿಕೊಂಡು ಹೇಳೋದು ನನಗೆ ಸರಿ ಕಾಣುವುದಿಲ್ಲ. ರಘು ಅಂದರೆ ವೇಗವಾಗಿ ಓಡುವವನು ಎಂದು ಅರ್ಥ, ರಘುಪತಿ ಅಂದರೆ ವೇಗವಾಗಿ ಓಡುವವರ ಒಡೆಯ. ರಾಘವ ಅಂದರೆ ರಘುಕುಲದಲ್ಲಿ ಹುಟ್ಟಿದವನು ಅಂತ. ಅವನನ್ನು ಪರಮಾತ್ಮ ಅಂತ ಹೇಗೆ ಭಾವಿಸಲಿ? ನನ್ನ ದೃಷ್ಟಿಯ ಪರಮಾತ್ಮನೇ ಬೇರೆ. ಆದ್ದರಿಂದ ನನಗೆ ಓಂ ಮಾತ್ರ ಸಾಕು" ಅಂತ ಹೇಳ್ತಾ ಇದ್ದೆ. ಬೆಳಗಿನ ಜಾವದಲ್ಲಿ ಚಳಿಯಲ್ಲಿ ಕುಳಿತು ಭಜನೆ ಮಾಡಿದ್ದೇ ಮಾಡಿದ್ದು, ಸುಮಾರು ಮುಕ್ಕಾಲು ಗಂಟೆ ಹೊತ್ತು. ಸೇವಾಗ್ರಾಮದಲ್ಲಿ ಇದ್ದದ್ದು ಎಲ್ಲಾ ಹರಕಲು ಮುರುಕಲು ಗುಡಿಸಲುಗಳೇ. ಆ ಮುದುಕ ಕಣ್ಣು ಮುಚ್ಚಿಕೊಂಡಿದ್ದನ್ನು ಗಮನಿಸಿ ಜಾಗ ಖಾಲಿ ಮಾಡುತ್ತಿದ್ದೆ. ನಾನು ಒಂದು ಸ್ಟೌ ಇಟ್ಟುಕೊಂಡಿದ್ದೆ. ಹೋಗಿ ಕಾಫಿ ಮಾಡಿಕೊಂಡು ಕುಡಿದು ಬಂದು ಮತ್ತೆ ಕುಳಿತುಕೊಳ್ಳುತ್ತಿದ್ದೆ. ಆ ಘಾಟಿ ಮುದುಕ ಕೇಳದೆ ಇರುತ್ತಿರಲಿಲ್ಲ, "ಎಲ್ಲಿ ಹೋಗಿದ್ದೆ?" ನಾನು, "ಅಗ್ನಿಹೋತ್ರ ಮಾಡೋಕ್ಕೆ ಹೋಗಿದ್ದೆ" ಅನ್ನುತ್ತಿದ್ದೆ. ಸ್ಟೌನಲ್ಲಿ ಅಗ್ನಿ ಇರುತ್ತಿತ್ತಲ್ಲಾ? ಅವರೂ ನಗುತ್ತಾ, "ನಿನ್ನ ಸಹವಾಸ ಸಾಕಪ್ಪಾ" ಅನ್ನುತ್ತಿದ್ದರು. ನನಗೂ, ಗಾಂಧೀಜಿಗೂ ಯಾವತ್ತೂ ಒಪ್ಪಂದ ಆಗಲೇ ಇಲ್ಲ. ಆದರೆ ನಮ್ಮ ಸ್ನೇಹಕ್ಕೆ ಅದು ಧಕ್ಕೆ ತರಲಿಲ್ಲ. ಕೊನೆಗೂ 'ಹೇ ರಾಮ್' ಅಂತಲೇ ಪ್ರಾಣ ಬಿಟ್ಟರು. ಈಗ ಅವರಿಲ್ಲ. ಅವರ ಆತ್ಮಕ್ಕೆ ಯಾಕೆ ಕಷ್ಟ ಕೊಡಬೇಕು? ನಾನು ಸಂಧಿ ಮಾಡಿಕೊಳ್ತೀನಿ. ಅವರ ರಾಮನೇ ನನ್ನ ಓಂ, ಒಪ್ಪಿಕೊಳ್ತೀನಿ, ಇಷ್ಟು ಸಾಕು.
ದೇವರನ್ನು ಒಂದು ಜಾತಿಗೆ/ಕುಲಕ್ಕೆ ಕಟ್ಟಿಹಾಕಬೇಕೆ?
     ಇದೆಲ್ಲಾ ಯಾಕೆ ಹೇಳ್ತಾ ಇದೀನಿ ಅಂದ್ರೆ, ದೇವರು ಯಾವತ್ತೂ ಕಚ್ಚಾಡಿ, ಹೊಡೆದಾಡಿ ಸಾಯಿರಿ ಅಂತ ಹೇಳಲ್ಲ. ಅವನು ಪ್ರೇಮಸ್ವರೂಪ, ಆನಂದಮಯ. ಎಲ್ಲರಿಗೂ ಪ್ರೀತಿ ತೋರಿಸತಕ್ಕವನು. ಎಲ್ಲಾ ಪ್ರಾಣಿಗಳಲ್ಲೂ ಸಮಾನವಾದ ಮಿತ್ರ ದೃಷ್ಟಿ ಇಟ್ಟುಕೊಳ್ಳುವ ಶಕ್ತಿ ಕೊಡು ಭಗವಂತ ಅಂತ ಪ್ರಾರ್ಥನೆ ಮಾಡ್ತೀವಿ. ಪ್ರಾರ್ಥನೆ ಮಾಡೋದು ಹಾಗೆ, ನಡೆಯೋದು ಹೇಗೆ? 'ಥೂ, ಇವನು ಮುಸ್ಲಿಮ್, ಸಾಯಲಿ', 'ಇವನು ಕ್ರಿಶ್ಚಿಯನ್, ಧರ್ಮಭ್ರಷ್ಠ, ಇವನ ಮನೆ ಹಾಳಾಗಲಿ' ಹೀಗೆ ಮನಸ್ಸಿನಲ್ಲಿ ಅಂದುಕೊಂಡು 'ಓಂ' ಅಂದರೆ ಪ್ರಯೋಜನ ಇಲ್ಲ. 'ಇವನು ಹಿಂದೂ, ಕಾಫಿರ್, ಇವನು ಬದುಕಿರಲು ಲಾಯಕ್ಕಿಲ್ಲ' ಅಂತ ಅವರು ಹೇಳಿದರೆ ಅದೂ ದೇವರು ಒಪ್ಪುವ ಮಾತಲ್ಲ. ಸರ್ವಸ್ನೇಹಿ, ಎಲ್ಲರಿಗೂ ಬೇಕಾದ ಆ ಪರಮಾತ್ಮನನ್ನು ಒಂದು ಜಾತಿಗೆ, ಒಂದು ಕುಲಕ್ಕೆ ಕಟ್ಟಿ ಹಾಕೋದು ಸರಿಯಲ್ಲ.
     ಈ ಕಥೆ ನಿಮಗೆ ಈ ಹಿಂದೆಯೇ ಹೇಳಿದ್ದೇನೆ. ಬಿಹಾರದಲ್ಲಿ ಭೂಕಂಪ ಆಯಿತು, ೧೯೩೪ರಲ್ಲಿ. ತುಂಬಾ ಸಾವುಗಳಾದವು. ನಾನೇ ಕಣ್ಣಿಂದ ನೋಡಿದೀನಿ. ಎಲ್ಲಿ ಮುಜಫರ್ ನಗರ ಅನ್ನುವ ಊರಿತ್ತೋ ಅಲ್ಲಿನ ಕ್ಲಾಕ್ ಟವರ್ ಮಾತ್ರ ಉಳಿದುಕೊಂಡಿತ್ತು. ಊರೆಲ್ಲಾ ನಾಶವಾಗಿತ್ತು. ನೋಡಬಾರದ್ದನ್ನೆಲ್ಲಾ ಅಲ್ಲಿ ನೋಡಿದೆ. ಒಂದು ಮುಸಲ್ಮಾನರ ಕೇರಿಗೆ ಹೋಗಿದ್ದೆ. ನಾನೊಬ್ಬ ವಾಲಂಟಿಯರ್ ಆಗಿ ಹೋಗಿದ್ದೆ. ಅಲ್ಲಿ ಒಂದು ಮನೆಯಿಂದ 'ಬಚಾವೋ, ಬಚಾವೋ' ಅಂತ ಯಾರೋ ಕಿರುಚುತ್ತಿದ್ದರು. ನನ್ನ ಜೊತೆಗೆ ಸ್ನೇಹಲತಾ ಅನ್ನುವವರು ಇದ್ದರು. ಅವರು ಜಾಲಂಧರ್ ಆರ್ಯಸಮಾಜದ ಸೆಕ್ರೆಟರಿ.  ಅವರಿಗೆ ಹೇಳಿದೆ, "ನೋಡಮ್ಮಾ, ಯಾರೋ ಹೆಂಗಸರು ಕಿರುಚುತ್ತಾ ಇದ್ದಾರೆ. ನಾನು ಹೋದರೆ ಸರಿಯಾಗುವುದಿಲ್ಲ. ನೀನು ಹೋಗಿ ನೋಡಮ್ಮಾ" ಅಂದೆ. ಆಕೆ ಒಳಗೆ ಹೋದಳು. ಒಂದು ಹೆಂಗಸು ಮತ್ತು ಆಕೆಯ ಮಗುವಿನ ಮೇಲೆ ಮನೆಯ ತೊಲೆ ಬಿದ್ದಿತ್ತು. ಮಗು ಬದುಕಿತ್ತು. ಆಕೆ ಅರೆಜೀವವಾಗಿದ್ದಳು. ಮಗುವನ್ನಾದರೂ ಉಳಿಸೋಣವೆಂದು ಮಗುವನ್ನು ಎತ್ತಿಕೊಂಡು ಸ್ನೇಹಲತಾ ಬಾಗಿಲ ಹತ್ತಿರ ಬಂದಾಗ ಬಾಗಿಲೇ ಅವರ ಮೇಲೆ ಬಿದ್ದು ಸ್ನೇಹಲತಾ ಮತ್ತು ಮಗು ಇಬ್ಬರೂ ಸತ್ತುಹೋದರು. ನಮ್ಮ ಲೀಡರ್, "ನೀನು ಹೋಗದೆ, ಪಾಪ ಆ ಹೆಣ್ಣುಮಗಳನ್ನು ಏಕೆ ಸಾಯಿಸಿದೆ?" ಎಂದು ಸಿಟ್ಟು ಮಾಡಿದರು. "ನೀವು ಆಗಿದ್ರೆ ಹೋಗುತ್ತಿದ್ದರೇನೋ, ನನಗೆ ಧೈರ್ಯ ಬರಲಿಲ್ಲ" ಎಂದು ಸುಳ್ಳು ಹೇಳಿದೆ. ಸತ್ಯ ಏನೆಂದು ನನಗೆ ಗೊತ್ತು. ನಾನೇನು ಆ ಮಗು ಸಾಯಲಿ, ಆ ತಾಯಿ ಸಾಯಲಿ ಎಂದು ಬಯಸಿದ್ದೆನಾ? ಅದು ಆ ಭಗವಂತ ಕೋಪ ಮಾಡಿಕೊಂಡರೆ ಯಾರು ರಕ್ಷಣೆ ಕೊಡುತ್ತಾರೆ? ವಿಜ್ಞಾನಿಗಳು 'ನಾನು ಅಂಥ ಮನೆ ಕಟ್ಟಿಕೊಡ್ತೀನಿ, ಇಂಥ ಮನೆ ಕಟ್ಟಿಕೊಡ್ತೀನಿ, ಭೂಕಂಪ ಆದ್ರೂ ಬಿದ್ದು ಹೋಗಬಾರದು' ಅಂತಾರೆ. ಜಪಾನಿನಲ್ಲಿ ಕಾರ್ಡ್ ಬೋರ್ಡ್ ಮನೆಗಳು, ಬಿದ್ರೂ ಯಾರೂ ಸಾಯಲ್ಲ. ಸದ್ಯಕ್ಕೆ ನಮ್ಮ ದೇಶದಲ್ಲಿ ಆ ಪರಿಸ್ಥಿತಿ ಇಲ್ಲ. ಈ ಭೂಕಂಪ ಬಂತು ಅಂತ ಇಟ್ಕೊಳ್ಳಿ, ನಾಸ್ತಿಕ ಹೇಳ್ತಾನೆ, "ಎಂಥಾ ದೇವರು ನಿಮ್ಮ ದೇವರು. ತಾನೇ ಮಾಡಿದ ರಚನೆ. ತಾನೇ ತನ್ನ ಮಕ್ಕಳನ್ನು ಸಾಯಿಸ್ತಾನೆ. ಅವನೆಂಥಾ ಕರುಣಾಳು? ಕ್ರೂರ, ಮಹಾಕ್ರೂರ" ಅಂತಾನೆ. ದೇವರು ಅಂದರೆ ನಮ್ಮ ಹಾಗೆ ಶರೀರಧಾರಿ ಆಗಿರೋನಲ್ಲ. ದೇವರು ಅವನಲ್ಲ. ಅವನು ವಿಶ್ವರೂಪ ಚೇತನ. ಸಂಪೂರ್ಣ ವಿಶ್ವಕ್ಕೆ ಚೈತನ್ಯ ನೀಡುವ ಅದ್ಭುತ ಶಕ್ತಿ. ಅವನು ಅನುಪಮ, ನಿರುಪಮ. ಅವನನ್ನು ವಿವರಿಸಲು ಸಾಧ್ಯವೇ ಇಲ್ಲ. ದೇವರು ಹೇಗಿದ್ದಾನೆ ಅಂದರೆ  ಹೇಗೆ ಇದ್ದಾನೋ ಹಾಗೆ ಇದ್ದಾನೆ ಅಂತ ಹೇಳಬಹುದೇ ಹೊರತು ಅವನನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಅದನ್ನೇ ಮುಸಲ್ಮಾನರು ಬೇನಜೀರ್ ಅಂತಾರೆ. ಅದರ ಅರ್ಥವೂ ಅದೇ, ಅನುಪಮ, ನಿರುಪಮ ಅಂತಲೇ. ಮುಸಲ್ಮಾನರಿಗೆ ಬೇರೆ ಅಂತ ದೇವರಿಲ್ಲ, ಹಿಂದೂಗಳಿಗೆ ಬೇರೆ ದೇವರಿಲ್ಲ, ಕ್ರಿಶ್ಚಿಯನ್ನರಿಗೆ ಬೇರೆ ಅಂತ ದೇವರಿಲ್ಲ. ಇವೆಲ್ಲಾ ನಮ್ಮ ಕಲ್ಪನೆ ಅಷ್ಟೆ.
-ಕ.ವೆಂ.ನಾಗರಾಜ್.
***************
ದಿನಾಂಕ 15-07-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಜುಲೈ 22, 2015

ಹಾಸನದಲ್ಲಿ "ಯೋಗ-ವೇದ-ಸಂಸ್ಕೃತ ಸಂಗಮ"

ವೇದಭಾರತಿಯ ವಾರ್ಷಿಕೋತ್ಸವದ ನಿಮಿತ್ತ 5.08.2015ರಿಂದ 9.08.2015ರವರೆಗೆ ಹಾಸನದಲ್ಲಿ "ಯೋಗ-ವೇದ-ಸಂಸ್ಕೃತ ಸಂಗಮ"
ಯೋಗ-ಪ್ರಾಣಾಯಾಮದ ಅಭ್ಯಾಸ
ಅಗ್ನಿಹೋತ್ರ
ಗಾಯತ್ರಿ ಮಹಾಮಂತ್ರಯಜ್ಞ - ಮಂತ್ರದ ಮಹತ್ವದ ಕುರಿತು ವಿದ್ವತ್ ಪೂರ್ಣ ಉಪನ್ಯಾಸಗಳು
ಸಂಸ್ಕೃತ ಸಂಭಾಷಣಾ ಶಿಬಿರ
ಸಮಾರೋಪ ಸಮಾರಂಭದಲ್ಲಿ ಭಕ್ತಿ ಸಂಗೀತ ಕಛೇರಿ
ಆಸಕ್ತರಿಗೆ ಭಾಗವಹಿಸಲು ಸದವಕಾಶವಿದು; ಬನ್ನಿ, ಭಾಗವಹಿಸಿ.


ಸೋಮವಾರ, ಜುಲೈ 20, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -12: ಸಂಪತ್ತಿಗೆ ಒಡೆಯರಾಗೋಣ


     ದಿ ಟೈಮ್ಸ್ ಆಫ್ ಇಂಡಿಯ ಪತ್ರಿಕೆಯ ದಿನಾಂಕ 2.10.2011ರ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದ ಸಂದರ್ಭದಲ್ಲಿ ಪಂಡಿತರು ಹೀಗೆ ಹೇಳಿದ್ದರು: "ನನಗೆ ಸಾಯುವ ಬಯಕೆಯಿಲ್ಲ. ದೀರ್ಘ ಆಯಸ್ಸಿನ ಸಲವಾಗಿ ಬ್ರಹ್ಮಚಾರಿಗಳಾಗಿರಬೇಕು ಮತ್ತು ಹೊಟ್ಟೆಗೆ ಶ್ರಮವಾಗದಂತೆ ಹಿತವಾಗಿ ಆಹಾರ ಸೇವಿಸಬೇಕು." ಮುಂದುವರೆದು ಅವರು ವಿನೋದವಾಗಿ ಹೇಳಿದ್ದರು: "ಈಗೆಲ್ಲಿ ಬ್ರಹ್ಮಚಾರಿಗಳು ಸಿಗುತ್ತಾರೆ. ಕೇವಲ ಭ್ರಷ್ಠಾಚಾರಿಗಳು ಇದ್ದಾರೆ." ಬ್ರಹ್ಮಚಾರಿ ಎಂದರೆ ಕೇವಲ ಮದುವೆಯಾಗದಿರುವುದು ಎಂದು ಅರ್ಥವಲ್ಲ, ಬ್ರಹ್ಮನಲ್ಲಿ ಚರಿಸುವವನು ಎಂದೂ ಅರ್ಥ. ಬ್ರಹ್ಮಚಾರಿ ಮತ್ತು ಸಸ್ಯಾಹಾರಿಯಾಗಿರುವ ಪಂಡಿತರು ಸರಳ ಮತ್ತು ನಿಯಮಿತ ಜೀವನ ಶೈಲಿಯಿಂದ ಬದುಕನ್ನು ಪ್ರೀತಿಸಿ ಬದುಕುತ್ತಿರುವುದು ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಅವರ ವಿಚಾರಧಾರೆಯ 12ನೆಯ ಕಂತು ಇಲ್ಲಿದೆ.
 ********************
ಸಂತರು ಮತ್ತು ಮಹಾರಾಜರು
     ಈ ಹಿಮಾಲಯ ಪರ್ವತ ಇದೆಯಲ್ಲಾ, ಮೂರು ಸಾಲು ಇದೆ, ಎರಡು ಸಾಲು ನಮ್ಮ ದೇಶಕ್ಕೆ ಸೇರಿದ್ದು, ಇನ್ನೊಂದು ಚೀನಾ ದೇಶಕ್ಕೆ ಸೇರಿದ್ದು. ಮಾನಸ ಸರೋವರಕ್ಕೆ ನಾವು ಹೋಗಬೇಕಾದರೆ ಚೀನಾದವರ ಪರ್ಮಿಶನ್ ಬೇಕು, ಏಕೆಂದರೆ ಅವರ ರಾಷ್ಟ್ರದ ಮೇಲೆ ನಾವು ಹೋಗಬೇಕು. ಇಲ್ಲದೆ ಹೋದರೆ ನಮ್ಮ ದೇಶಕ್ಕೆ ನುಗ್ಗಿ ಬಂದಿದಾರೆ ಎಂದು ಅವರು ಅರೆಸ್ಟ್ ಮಾಡಬಹುದು,. ಇಷ್ಟು ಕಷ್ಟಪಟ್ಟು ಹೋಗಬೇಕು. ನನಗೆ ಚೆನ್ನಾಗಿ ನೆನಪಿದೆ. 1934ನೆ ಇಸವಿ. ನಾಲ್ಮಡಿ ಕೃಷ್ಣರಾಜ ಒಡೆಯರು ಮಾನಸ ಸರೋವರದಲ್ಲಿ ಸ್ನಾನ ಮಾಡಲು ಬಂದಿದ್ದರು. ಸ್ನಾನ ಎಲ್ಲಾ ಮಾಡಿದರು. ಬಹಳ ಉದಾರಾತ್ಮ. ಆಮೇಲೆ ಒಬ್ಬರು ಮಹಾತ್ಮರು ಹರಿದ್ವಾರದಲ್ಲಿದ್ದಾರೆ ಅಂತ ಅವರಿಗೆ ಗೊತ್ತಾಯ್ತು. ಸಂತರ ದರ್ಶನ ಮಾಡಲು ನಿರ್ಧರಿಸಿದ ಅವರು ಒಬ್ಬ ಅಧೀನ ಅಧಿಕಾರಿಯನ್ನು ಸಂತರ ಅನುಮತಿ ಪಡೆಯಲು ಕಳಿಸಿದರು. ಆ ಅಧಿಕಾರಿ ಸಂತರನ್ನು ಕಂಡು, 'ಮಹಾರಾಜರು ಬಂದಿದ್ದಾರೆ. ತಮ್ಮನ್ನು ಕಾಣಲು ಬಯಸಿದ್ದಾರೆ' ಎಂದು ಹೇಳಿದ. ಆ ಸಂತರು ಹೇಳಿದರು:
'ಮಹಾರಾಜ? ಯಾವ ಮಹಾರಾಜ? ನನಗೆ ಗೊತ್ತಿರುವವನು ಒಬ್ಬನೇ ಮಹಾರಾಜ, ಜಗತ್ ಸಾಮ್ರಾಟ್, ಬೇರೆ ಯಾರೂ ಇಲ್ಲ'. 
'ಮೈಸೂರ್ ಕಾ ಮಹಾರಾಜ.' 
'ಆಯ್ತು, ಬರಕ್ಕೆ ಹೇಳು'. 
     ಮಹಾರಾಜರು ಒಂದು ತಟ್ಟೆಯಲ್ಲಿ ಬೆಳ್ಳಿ ನಾಣ್ಯಗಳನ್ನು ಇಟ್ಟುಕೊಂಡು ಸಂತರಿಗೆ ಕೊಡಬೇಕೆಂದು ಬಂದರು. ಅವರು ಬಂದಾಗ ಪೇಟ ತೆಗೆದಿಟ್ಟು, ಕಚ್ಚೆ ಪಂಚೆ ಉಟ್ಟುಕೊಂಡು ಬರಿಗಾಲಿನಲ್ಲಿ ಬಂದಿದ್ದರು. ಅವರು ಬಂದಿದ್ದ ರೀತಿಯಿಂದ ಸಂತರಿಗೆ ಸ್ವಲ್ಪ ಸಮಾಧಾನವಾಗಿತ್ತು. ಸಂತರು ನೋಡಿದರು,  ಎರಡು ಮಾತು ಕೇಳಿದರು: 
'ನೀನು ರಾಜ ಅಂತೆ, ಯಾರಿಗೆ ರಾಜ? ಓಹೋ, ಮೈಸೂರು ದೇಶದ ರಾಜ, ಎಷ್ಟು ಅಗಲ, ಎಷ್ಟು ಉದ್ದ ಇದೆ, ನಿನ್ನ ಮೈಸೂರು?'
     ಈರೀತಿ ಕೇಳಲು ಸಂತರಿಗೇ ಸಾಧ್ಯ. ರಾಜರು ಇಟ್ಟಿದ್ದ ತಟ್ಟೆಯ ಮೇಲೆ ಮುಚ್ಚಿದ್ದ ವಸ್ತ್ರ ಸರಿಸಿ ನೋಡಿದ ಸಂತರು ಕೇಳಿದರು:
'ಇದರಲ್ಲಿ ತಿನ್ನೋದಕ್ಕೆ ಏನಿದೆ? ಇದನ್ನು ತಿನ್ನೋಕಾಗಲ್ಲ'.
'ತಮ್ಮ ಖರ್ಚಿಗೆ'. 
'ನನಗೇನು ಖರ್ಚಿದೆ? ಭಗವಂತ ಕೊಟ್ಟಿರೋ ಪಾತ್ರೆ ಇದೆ. ಕೈಲಿ ಹಿಡಕೊಂಡು ಭಿಕ್ಷಕ್ಕೆ ಹೋಗ್ತೀನಿ. ಅದರಲ್ಲಿ ಒಂದೋ, ಎರಡೋ ರೊಟ್ಟಿ ಬಿದ್ದರೆ ಆಯಿತು, ನನ್ನ ಊಟ. ನನಗೆ ರೊಟ್ಟಿ ಬೇಕಾಗಿದೆ, ಅನ್ನ ಬೇಕಾಗಿದೆ, ಅದನ್ನು ಬಿಟ್ಟುಬಿಟ್ಟು ನೀವು ಚಿನ್ನದ್ದೋ, ಬೆಳ್ಳಿಯದೋ ನಾಣ್ಯ ಕೊಟ್ಟರೆ ನಾನು ಏನು ಮಾಡಲಿ, ಅದನ್ನು ತೆಗೆದುಕೊಂಡು? ತಿನ್ನಕ್ಕಾಗುತ್ತಾ ಇದು?'
     ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳ್ತಾನೆ: 'ಮಣ್ಣಿನ ಹೆಂಟೆ, ಕಲ್ಲು, ಚಿನ್ನ ಇವೆಲ್ಲವನ್ನೂ ಯಾವನು ಸಮನಾಗಿ ಭಾವಿಸುತ್ತಾನೋ ಅವನೇ ಯೋಗಿ.' ಇಂತಹ ಎಷ್ಟು ಜನ ಯೋಗಿಗಳು ಸಿಗುತ್ತಾರೆ?
ಐಶ್ವರ್ಯ ಸಂಪಾದನೆ ಏಕೆ?
     ಗಳಿಸುವ ಸಂಪತ್ತು ನಮ್ಮನ್ನು ಯಜ್ಞದಿಂದ ದೂರ ತಳ್ಳಬಾರದು. ಯಜ್ಞದ- ಪರೋಪಕಾರದ - ಪವಿತ್ರ ವಿಸ್ತಾರಕ್ಕಾಗಿಯೇ ನಮ್ಮ ಐಶ್ವರ್ಯ ಮೀಸಲಾಗಿರಬೇಕು. ಈ ಮಂತ್ರ ಹೇಳುತ್ತದೆ: ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ | ಕರತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ || (ಅಥರ್ವ. 3.24.5.) ನೂರು ಕೈಗಳಿಂದ ಸಂಪಾದಿಸು, ಸಾವಿರ ಕೈಗಳಿಂದ ಹಂಚಿಬಿಡು. ಹೀಗೆ ಮಾಡಿ ಅಭಿವೃದ್ಧಿ ಸಾಧಿಸಿಕೊಳ್ಳಬೇಕು.  
ಧನಂಜಯ
ಓಂ ಪ್ರಜಾಪತೇ ನ ತ್ವದೇತಾನ್ಯನ್ಯೋ ವಿಶ್ವಾ ಜಾತಾನಿ ಪರಿ ತಾ ಬಭೂವ | ಯತ್ ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯಂ ಸ್ಯಾಮ ಪತಯೋ ರಯೀಣಾಮ್ || (ಋಕ್.10.121.10.)
     'ಹೇ, ಜಗತ್ಪಾಲಕನಾದ ಪ್ರಭುವೇ, ನಿನ್ನನ್ನು ಬಿಟ್ಟು ಬೇರೆ ಯಾರೂ ಈ ಸಮಸ್ತ ಸೃಷ್ಟಿಯ ಅಧೀಶ್ವರನೂ, ಅಂತರ್ಯಾಮಿಯೂ ಇಲ್ಲ. ಯಾವ ಕಾಮನೆಯಿಂದ ನಿನ್ನ ಉಪಾಸನೆ ಮಾಡುತ್ತೇವೆಯೋ ನಮ್ಮ ಆ ಕಾಮನೆಗಳು ಈಡೇರಲಿ. ನಾವು ಸಂಪತ್ತುಗಳ ಸ್ವಾಮಿಗಳಾಗೋಣ' ಎನ್ನುತ್ತದೆ ಈ ಮಂತ್ರ.
     ಧನಂಜಯ ಅಂದರೆ ನೀವು ಏನು ತಿಳಿದುಕೊಳ್ಳುತ್ತೀರಿ? ಹಣ ಸಂಪಾದನೆ ಮಾಡುವವನು ಅಂತ.  ಹಾಗಲ್ಲ.  ಹಾಗಾದರೆ ನಿಜವಾದ ಧನ ಯಾವುದು? ಯಾವುದು ನಮ್ಮ ಸಹಾಯಕ್ಕೆ ಬರುತ್ತೋ ಅದು ನಿಜವಾದ ಧನ.  ಯಾವುದು ಉಪಭೋಗಕ್ಕೆ ಬರುತ್ತೋ ಅದನ್ನು ತೆಗೆದುಕೊಂಡು ಹೋಗಿ ಕೊಡಬೇಕು. ಯಾತಕ್ಕಾಗಿ ನಾವು ಹಣ ಸಂಪಾದಿಸಬೇಕು? ಆ ಧನ ನಮ್ಮನ್ನು ಆಳುವುದಕ್ಕೆ ಅಲ್ಲ, ನಾವು ಧನವನ್ನಾಳಬೇಕು, ಐಶ್ವರ್ಯಗಳಿಗೆ ನಾವು ಸ್ವಾಮಿಗಳಾಗೋಣ, ಐಶ್ವರ್ಯ ನಮ್ಮನ್ನು ಕುಣಿಸಬಾರದು. ನಾವು ಐಶ್ವರ್ಯವನ್ನು ಕುಣಿಸಬೇಕು. ಎಷ್ಟು ಜನಕ್ಕೆ ಆ ಶಕ್ತಿ ಬರುತ್ತೆ?
     ಎಲ್ಲೂ ದುಡ್ಡು ಇಲ್ಲದೆ ಇರುವಾಗ., ಅಕಸ್ಮಾತ್ ದುಡ್ಡು ಬಂತೋ, ಖುಷಿ! ಒಬ್ಬ ಸಾಧುವಿನ ವೇಷ ಹಾಕ್ಕೊಂಡಿದಾನೆ, ಯಾರೋ ಭಕ್ತರು ತಂದಿಡ್ತಾರೆ, ಇವನು ಲಕ್ಷಣವಾಗಿ ತಿಂದು ಹಾಕಿಬಿಡುತ್ತಾನೆ, ಅವನೇನು ಕಷ್ಟಪಟ್ಟು ಸಂಪಾದಿಸಿದನಾ? ಯಾರೋ ಸಂಪಾದಿಸಿದ್ದು, ಹೋಟೆಲಿಗೆ ಹೋದ, ಸಿಕ್ಕಾಪಟ್ಟೆ ತಿಂದ. ಸಿನೆಮಾ ನೋಡಿದ, ಅದು ಮಾಡಿದ, ಇದು ಮಾಡಿದ, ಎಲ್ಲಾ ಬಿಟ್ಟಿ, ಏನಾದರೂ ಕಷ್ಟಪಟ್ಟಿದ್ದಾ? ಕಷ್ಟಪಟ್ಟಿದ್ದಲ್ಲ. ಯಾವುದನ್ನು ಕಷ್ಟಪಟ್ಟು ಬೆವರು ಸುರಿಸಿ ಸಂಪಾದನೆ ಮಾಡ್ತಾನೋ, ಅದು ನಿಜವಾದ ಧನ. ಅದಕ್ಕೆ ಮಾತ್ರ ಬೆಲೆ ಇದೆ.
ದಕ್ಷಿಣೆ
     ವೇಷ ಹಾಕಿ ಕೂತ್ಕೊಂಡು, 'ನಾನು ಗುರೂಜಿಯಪ್ಪಾ, ನನಗೆ ದಕ್ಷಿಣೆ ಕೊಡಿ' ಅಂತ ದಕ್ಷಿಣೆ ವಸೂಲು ಮಾಡ್ತಾ ಕೂತ್ರೆ, ಅವನು ಗುರೂನೂ ಅಲ್ಲ, ಅವನು ತೆಗೆದುಕೊಳ್ತಾನಲ್ಲಾ ಅದು ದಕ್ಷಿಣೆನೂ ಅಲ್ಲ. ದಕ್ಷ ಅಂದರೆ ಬಲ, ಯಾವುದು ಬಲವನ್ನು ಕೊಡುತ್ತೋ ಅದು ದಕ್ಷಿಣೆ. ನೀವು ಆ ಮೋಸದ ದುಡ್ಡು ತೆಗೆದುಕೊಂಡು, ಅದನ್ನು ದಕ್ಷಿಣೆ ಅಂತ ಕರಿತೀರಾ? ವಿದ್ವಜ್ಜನರು, ಸತ್ಪುರುಷರು, ಸಾಧು-ಸಂತರು, ಯಾವುದನ್ನು ಗೌರವಿಸುತ್ತಾರೋ ಅದು ನಿಜವಾದ ದಕ್ಷಿಣೆ. 
ವ್ರತಗಳು
     ಈ ವ್ರತಗಳು ಅಂತ ಹೇಳ್ತಾರಲ್ಲಾ, ವ್ರತ ಅಂದರೆ ನಾನು ಇಂತಹ ಕೆಲಸವನ್ನೇ ಮಾಡುತ್ತೇನೆ ಅಂತ ಅಂದುಕೊಳ್ಳುವುದು ಮತ್ತು ಮಾಡುವುದು. ನಾವು ಮಾಡ್ತೀವಲ್ಲಾ ಇವತ್ತು, ಅನಂತ ಪದ್ಮನಾಭ ವ್ರತ, ವಿಷ್ಣು ಸಹಸ್ರನಾಮ ಪೂಜೆ, ಲಲಿತಾ ಸಹಸ್ರನಾಮ ಪೂಜೆ ಮಾಡ್ತೀನಿ, ದುರ್ಗಾಸಪ್ತಶತಿ ಅಂತ ಹೇಳಿ ಅದರ ಹೆಸರಿನಲ್ಲಿ ಪೂಜೆ ಮಾಡಿ ಯಾವ ವ್ರತವನ್ನೂ ಪಾಲಿಸುವುದಿಲ್ಲ. ಯಾವುದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆಯೋ ಅದು ಮಾತ್ರ ವ್ರತ. ನಾವು ಯಾವುದನ್ನೂ ಕೂಡ ಆಲೋಚನೆ ಮಾಡದೆ ವ್ರತವಾಗಿ ತೆಗೆದುಕೊಳ್ಳಲೇಬಾರದು. ಗುರು ಬ್ರಹ್ಮಚಾರಿ ಕೈಲಿ 5 ಸಲ ಹೇಳಿಸ್ತಾರೆ 'ಪಂಚಜ್ಞಾನೇಂದ್ರಿಯಗಳಿಂದ ಯಾವುದರಿಂದಲೂ ಕೂಡ ನಾನು ಸುಳ್ಳು ಹೇಳುವುದಿಲ್ಲ. ಸತ್ಯವನ್ನೆ ಹೇಳುತ್ತೇನೆ' ಅಂತ. ಆದರೆ ಆ ಗುರುವೇ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಸುಳ್ಳು ಹೇಳ್ತಾ ಇದ್ದರೆ. ಆ ಶಿಷ್ಯ ಇನ್ನೇನು ಕಲಿತಾನು? ಏನೂ ಕಲಿಯುವುದೇ ಎಲ್ಲ. 
ಸತ್ಯ ಹೇಳುವ ಶಪಥ ಮಾಡಬೇಡ! ಸತ್ಯ ಹೇಳು!
     ಒಬ್ಬ ಕೇಳಿದ, "ಅಪ್ಪಾ, ನೀನು ಅಂಗಡಿಯಲ್ಲಿ ಕೂತ್ಕೊಳ್ತೀಯಲ್ಲಾ, ಸರಿಯಾಗಿ ತೂಕ ಮಾಡಿ ಕೊಡ್ತೀಯಾ? ಮತ್ತೆ ಧಾರಣೆ ಹೇಳ್ತೀಯಲ್ಲಾ, ಸರಿಯಾಗಿ ಹೇಳ್ತೀಯಾ?" ಅದಕ್ಕೆ ಅಪ್ಪನ ಉತ್ತರ,  'ಹಾಗೆ ಹೇಳಿದರೆ ಹೊಟ್ಟೆ ತುಂಬೋದಿಲ್ಲ ಮಗನೆ, ನಾವು ಸುಳ್ಳು ಹೇಳದೇ ಹೋದರೆ ನಮ್ಮ ಹೊಟ್ಟೆ ತುಂಬೋದೇ ಇಲ್ಲ'. ಅಂಥಾ ತಂದೆ, ತಕ್ಕ ಮಗ, ಇನ್ನು ಉದ್ಧಾರ ಹೇಗೆ ಆಗಬೇಕು? ಇದೆಲ್ಲಾ ಸೂಕ್ಷ್ಮ ವಿಷಯ. ಮಾತಾಡೋದು ಸುಲಭ. ಕೆಲಸ ಮಾಡೋದು ಕಷ್ಟ. ಆದ್ದರಿಂದ  ಸ್ವಾಮಿ ದಯಾನಂದರು ಹೇಳ್ತಾ ಇದ್ದರು. "ನೀನು ಶಪಥ ಮಾಡಬೇಡ, ನಾನು ಸತ್ಯವನ್ನೇ ಹೇಳುತ್ತೇನೆ, ಅಂತ ಶಪಥ ಮಾಡೋದಕ್ಕೆ ಹೋಗಬೇಡ. ಹೇಳು, ಸತ್ಯವನ್ನೇ ಹೇಳು, ಆದರೆ ಶಪಥ ಮಾಡಬೇಡ. ಯಾಕೆ ಅಂತ ಹೇಳಿದರೆ, ಶಪಥ ಮಾಡೋ ಕಾಲಕ್ಕೆ ಸತ್ಯ ಅನ್ನುವುದನ್ನು ನೀನೇ ತಪ್ಪು ತಿಳಿದುಕೊಂಡಿರಬಹುದು, ಯಾವುದನ್ನೋ ಸತ್ಯ ಅಂತ ತಪ್ಪು ತಿಳಿದುಕೊಂಡಿರಬಹುದು. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು." ಬೇರೆಯವರಿಗೆ ಹಾನಿ ಉಂಟುಮಾಡತಕ್ಕಂಥದ್ದು ಸತ್ಯವಲ್ಲ. ತನಗೆ ಮಾತ್ರ ಒಳ್ಳೆಯದಾಗಬೇಕು ಅಂತ ಬಯಸುವುದೂ ಸತ್ಯ ಅಲ್ಲ. ನನ್ನ ಹಾಗೇ ಎಲ್ಲರಿಗೂ ಒಳ್ಳೆಯದಾಗಬೇಕು, ಯಾರಿಗೂ ಕೆಟ್ಟದಾಗಬಾರದು, ಈ ಭಾವನೆ ಬೆಳೆಸಿಕೊಳ್ಳಬೇಕು.
-ಕ.ವೆಂ. ನಾಗರಾಜ್.
******************
ದಿನಾಂಕ 8.07.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಜುಲೈ 14, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -11: ಮಾಡುವ ಕ್ರಿಯೆಗಳಿಗೆ ಅರ್ಥವಿರಲಿ


ಪ್ರಯತ್ನವಿಲ್ಲದೆ ಫಲವಿಲ್ಲ
     ಈ ಭೂಮಾತೆಯ ಗರ್ಭದಲ್ಲಿ ಏನೇನು ಅಡಗಿದೆ ಅನ್ನುವುದು ಆ ದೇವರೊಬ್ಬನಿಗೇ ಗೊತ್ತು. ಸಮಸ್ತ ಸಂಪತ್ತು ಅಲ್ಲಿದೆ, ಇದನ್ನು ವಸುಂಧರಾ ಅಂತ ಕರೀತಾರೆ. ವಸು ಅಂದರೆ ಐಶ್ವರ್ಯ. ಐಶ್ವರ್ಯವನ್ನು ಧರಿಸಿರುವ ತಾಯಿ ಅಂತ ಇಟ್ಕೊಳ್ಳಿ, ಈ ಭೂಮಿ ಒಂದು ಸುಂದರವಾದ ವಸುಂಧರಾ, ಇಲ್ಲಿ ಇಲ್ಲದ್ದು ಎಲ್ಲೂ ಇಲ್ಲ, ಎಲ್ಲವೂ ಈ ಭೂಮಿಯ ಒಳಗೇ ಇದೆ. ಮತ್ತೆ ಈ 'ಪರಮಾತ್ಮ,-ಆನಂದ' ಇದೆಯಲ್ಲಾ. ಅದು ಎಲ್ಲಾ ಕಡೆಯೂ ಹರಡಿಕೊಂಡಿದೆ. ಆದರೆ, ನಮ್ಮ ಅನುಭವಕ್ಕೆ ಬರುತ್ತಾ ಇಲ್ಲ, ಕಾರಣ  ಏನು? ಗಂಗೆಯನ್ನು ಎದುರಿಗೆ ಇಟ್ಟುಕೊಂಡು 'ಗಂಗಾ ಮಾತೆ, ನನಗೆ ಬಾಯಾರಿಕೆ ಆಗಿದೆ, ನನ್ನ ಬಾಯಾರಿಕೆ ನೀಗಿಸು' ಅಂದರೆ ಅವಳು ಬಾಯಾರಿಕೆ ಹೋಗಿಸುವುದಿಲ್ಲ. ನೀವು ಕೈಯಲ್ಲಿ ತೆಗೆದುಕೊಳ್ಳಬೇಕು, ಕುಡಿಯಬೇಕು, ಆಗ ಮಾತ್ರ ನಿಮ್ಮ ಬಾಯಾರಿಕೆ ಹೋಗೋದು. ಹಾಗಿಲ್ಲದೆ ಬರಿಯ ಮಾತಿನಿಂದ ಗಂಗೆ ಬಾಯಾರಿಕೆ ಹೋಗಿಸುವುದಿಲ್ಲ. ಸಾಧ್ಯವೇ ಇಲ್ಲ. ಪರಮಾತ್ಮನ ವಿಷಯದಲ್ಲೂ ಅಷ್ಟೆ, ಬಹಳ ಮಾತಾಡ್ತೀವಿ, ಆನಂದಸ್ವರೂಪ - ಹೌದು, ಅವನು ಆನಂದಸ್ವರೂಪ. ಆದರೆ ಅದು ಯಾಕೆ ನಮ್ಮ ತಲೆಗೆ ಹೋಗುವುದಿಲ್ಲ? ಅನುಭವವಿಲ್ಲ. ಆ ಆನಂದದ ಅನುಭವ ನಮಗಿಲ್ಲ.
ಸುಖ-ದುಃಖ
     ಸುಖ ಗೊತ್ತು, ದುಃಖ ಗೊತ್ತು. ಇವೆರಡೂ ಕೂಡ ಭೌತಿಕ, ಆಧ್ಯಾತ್ಮಿಕವಲ್ಲ. ಖ ಅಂದರೆ ಇಂದ್ರಿಯ, ಸು-ಖ: ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ. ದುಃ-ಖ: ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ನನಗೆ ಚೆನ್ನಾಗಿ ನೆನಪಿದೆ, ಇಷ್ಟು ವರ್ಷವಾದರೂ ಮರೆತಿಲ್ಲ, ಒಬ್ಬ ಶಿಷ್ಯರತ್ನ ನನಗೆ ಸಿಕ್ಕಿದ್ದ. ಅವನಿಗೆ ನಾನು ಹೇಳುವೆ, 'ನೋಡಪ್ಪಾ, ಬ್ರಾಹ್ಮಿ ಮುಹೂರ್ತ ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆಯವರೆಗೆ, ಆಗ ಎದ್ದು ಒಂದು ಸಲ ಮಂತ್ರ ಹೇಳಿಕೋ ಸಾಕು, ಅದು ನೆನಪಿನಲ್ಲಿ ಉಳಿಯುತ್ತೆ' ಅಂತ. 'ಆಗಲಿ ಗುರೂಜಿ' ಅನ್ನೋನು, ಬೆಳಿಗ್ಗೆ ಏಳಿಸಲು ಹೋದರೆ, 'ಇನ್ನೊಂದು ಐದು ನಿಮಿಷ ಗುರೂಜಿ' ಅಂತ ಹೇಳೋನು, ಸೂರ್ಯೋದಯ ಆದ ಮೇಲೇ ಏಳೋನು!
ದಶಪ್ರಾಣಗಳು
     'ಯಾವನು ಕಳ್ಳನಲ್ಲದ ನನ್ನನ್ನು ಕಳ್ಳ ಅಂತ ಹೇಳ್ತಾನೋ ಅವನ ಹತ್ತು ಪ್ರಾಣಗಳೂ ನಾಶವಾಗಲಿ' - ಇದು ಒಂದು ಮಂತ್ರದ ಅರ್ಥ. ಪಂಚ ಪ್ರಾಣಗಳು -ಪ್ರಾಣ, ಅಪಾನ, ಉದಾನ, ಸಮಾನ, ವ್ಯಾನ- ಇವು ನಿಮಗೆ ಗೊತ್ತು. ಇನ್ನು, ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ - ಇವು 5 ಉಪಪ್ರಾಣಗಳು. ತುಂಬಾ ಜನಕ್ಕೆ ಗೊತ್ತಿಲ್ಲ, ನಾಗ - ಕಾಲಿನ ಹೆಬ್ಬೆಟ್ಟಿನ ಹತ್ತಿರ ಇದೆ, ಕೂರ್ಮ - ಅದರಿಂದ ಸ್ವಲ್ಪ ಮೇಲಕ್ಕೆ, ಹಾಗೇ ಮೇಲಕ್ಕೆ, ಮೇಲಕ್ಕೆ ಹೋಗುತ್ತಾ ಕೃಕಲ, ದೇವದತ್ತ, ಧನಂಜಯ. ಶ್ರೀಕೃಷ್ಣನ ಸಾವು ಹೇಗಾಯ್ತು ಗೊತ್ತಾ? ದ್ವಾರಕಾ ನಗರದಲ್ಲಿ ಯಾದವರು ತಮ್ಮಲ್ಲೇ ಕೊಚ್ಚಾಡಿ ನಾಶವಾದರು. ಕೂತ್ಕೊಂಡಿದ್ದ ಒಂದು ಕಡೆ, ಕೂತ್ಕೊಂಡು ಯೋಚನೆ ಮಾಡ್ತಾ ಇದ್ದ, ನಾನು ಜಗಕ್ಕೆಲ್ಲಾ ಉಪದೇಶ ಮಾಡಿದೀನಿ, ನನ್ನ ಎದುರಿಗೇ ಹೀಗೆಲ್ಲಾ ಆಯ್ತಲ್ಲಾ ಅಂತ ಬಹಳ ದುಃಖದಿಂದ ಕೂತಿದ್ದಾಗ, ನಾಗ ಅನ್ನುವ ಉಪಪ್ರಾಣ ಅವನನ್ನು ಬಿಟ್ಟುಹೋಯಿತು. ಉಪಪ್ರಾಣ ಹೋಯಿತು, ದೊಡ್ಡ ಪ್ರಾಣ ಹೋಗಿರಲಿಲ್ಲ, ಅದೇ ಸಾಕಾಯ್ತು, ಕೃಷ್ಣನ ಸಾವಿಗೆ. ಉಪಪ್ರಾಣಕ್ಕೂ ಕೂಡ ಅಷ್ಟೇ ಶಕ್ತಿ ಇದೆ, ನಿಜವಾದ ದೊಡ್ಡ ಪ್ರಾಣಕ್ಕೆ ಎಷ್ಟು ಇದೆಯೋ ಅಷ್ಟು. ಇದನ್ನು ಯೋಗವಿದ್ಯೆ ಇಲ್ಲದೆ ಅರ್ಥ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಕೃಷ್ಣನನ್ನು ನಾಗರಹಾವು ಕಚ್ಚಿತು, ಅವನು ಸತ್ತು ಹೋದ ಅಂತ ಹೇಳ್ತಾರೆ, ನಾಗರಹಾವಲ್ಲ, ನಾಗ ಅನ್ನುವ ಉಪಪ್ರಾಣ ಅವನ ವಶದಿಂದ ಹೊರಟುಹೋಯಿತು, ಈ ಪ್ರಾಣ ಬಹಳ ಸೂಕ್ಷ್ಮ. ತಲೆಯಲ್ಲೇ ಹೋಗಬೇಕು ಅಂತ ಇಲ್ಲ, ನಿಮ್ಮ ಮೈಮೇಲೆ ಎಷ್ಟು ರೋಮಕೂಪಗಳಿವೆ, ಅಷ್ಟು ರಂಧ್ರಗಳಿವೆ, ಆ ಯಾವ ರಂಧ್ರದಿಂದಲಾದರೂ ಪ್ರಾಣ ಹೊರಟುಹೋಗಬಹುದು. ಗೊತ್ತಾಯ್ತಲ್ಲಾ? ದಶಪ್ರಾಣಗಳು ಅಂತ ಹೇಳಿದೆನಲ್ಲಾ, ಅವು ಈ ಯಾವುದರ ಮುಖಾಂತರವಾಗಿಯೂ ಹೊರಟುಹೋಗಬಹುದು. ಪ್ರಾಣ ಅಂದರೆ ಒಳಕ್ಕೆ ತೆಗೆದುಕೊಳ್ಳುವುದು, ಅಪಾನ ಅಂದರೆ ಹೊರಗೆ ಬಿಡುವುದು. ಇಷ್ಟನ್ನು ನೀವು ಅರ್ಥ ಮಾಡಿಕೊಳ್ತೀರಿ. ಆದರೆ ಅದರಲ್ಲಿ ಮೆಟ್ಟಲು, ಮೆಟ್ಟಲುಗಳಿವೆ.
     'ಹತ್ತು ಪ್ರಾಣಗಳಿವೆ, ಅದೆಲ್ಲಾ ನಾಶವಾಗಲಿ' ಅಂದರೆ ಅದೆಲ್ಲಾ ನಿನ್ನ ವಶದಲ್ಲಿ ಇಲ್ಲದೇ ಇರಲಿ, ಈ ಪ್ರಾಣ, ಅಪಾನ, ಉದಾನ, ಸಮಾನ, ವ್ಯಾನ, ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ ಇವೆಲ್ಲಾ ನಿನ್ನ ಕೈತಪ್ಪಿ ಹೋಗಲಿ, ನೀನು ಪ್ರಾಣಸಹಿತನಾಗಿದ್ದರೂ ಕೂಡ ಪ್ರಾಣರಹಿತನಾಗಿ ಇರುತ್ತೀಯ. ತಿದಿ ಇದೆ, ಅದು ಪುಸ್, ಪುಸ್ ಅನ್ನುತ್ತೆ, ಆದರೂ ಕೂಡ ನೀನು ಪ್ರಾಣರಹಿತನಾಗೇ ಇರ್ತೀಯ. ತಿದಿಗೆ ಗೊತ್ತಾ, ನಾನು ಉಸಿರಾಡ್ತಾ ಇದೀನಿ, ಅಂತ? ನಿಜವಾಗಿ ನಿಮ್ಮ ಹೃದಯ, ಶ್ವಾಸಕೋಶ, ಎಲ್ಲಾ ನಿಮ್ಮ ಕೆಲಸಕ್ಕೆ ಬರೋ ಹಾಗೆ ಇರಬೇಕು. ಇದನ್ನು ಅರ್ಥ ಮಾಡಿಕೊಳ್ಳೋದಿಲ್ಲ, ಪರಮಾತ್ಮ ಎರಡು ಕಣ್ಣು ಕೊಟ್ಟ, ಒಂದು ನಾಲಿಗೆ ಕೊಟ್ಟ. ಎರಡು ಕಣ್ಣಿನಿಂದ ಎಷ್ಟು ನೋಡಿದರೂ, ಆಡಲು ಒಂದೇ ನಾಲಿಗೆ. ಅರ್ಧ ಮಾತ್ರ ಹೇಳು ಅಂತ. ಮತ್ತೆ ಎರಡು ಕಿವಿ ಕೊಟ್ಟ, ನಾಲಿಗೆ ಒಂದೇ ಕೊಟ್ಟ. ಕಿವಿಯಿಂದ ಏನೇನೋ ಕೇಳ್ತೀಯ. ಕೇಳಿದ್ದನ್ನೆಲ್ಲಾ ನಿಜ ಅಂದುಕೊಂಡು ಎಲ್ಲಾ ಹೇಳ್ತಾ ಹೋಗಬೇಡ. ನಾಲಿಗೆ ಮೇಲೆ ಹಿಡಿತ ಇರಬೇಕು, ಅಂತ. ನೀನು ಏನು ಕೇಳಿದಿ, ಸರಿಯೋ, ಅಲ್ಲವೋ, ಈರೀತಿ ಆಲೋಚನೆ ಮಾಡಿ ಮಾತನಾಡಬೇಕು. ಪ್ರಾಣಗಳ ಉಪಯೋಗ ಇದೆಯಲ್ಲಾ, ಬದುಕಿದ್ದಾಗ ಇದರ ಬೆಲೆ ಗೊತ್ತಾಗಲ್ಲ, ಹೃದಯದಲ್ಲೋ, ಶ್ವಾಸಕೋಶದಲ್ಲೋ ದೋಷ ಉಂಟಾಗಿ, ಉಸಿರಾಡಕ್ಕೆ ಕಷ್ಟ ಆದರೆ, ಆವಾಗ ಗೊತ್ತಾಗುತ್ತೆ.
     ಕುರುಡನಿಗೆ, ಹುಟ್ಟು ಕುರುಡನಿಗೆ ಕಣ್ಣಿನಿಂದ ಸುಖವೂ ಇಲ್ಲ, ದುಃಖವೂ ಇಲ್ಲ. ಅತಿ ಸುಂದರವಾದ ವಸ್ತುವನ್ನು ಅವನ ಎದುರಿಗೆ ಇಡಿ, ಅಥವ ಅತಿ ತುಚ್ಛವಾದ ವಸ್ತುವನ್ನು ಅವನ ಮುಂದಿಡಿ, ಅವುಗಳಿಂದ ಅವನ ಮೇಲೆ ಯಾವ ಪ್ರಭಾವವೂ ಆಗುವುದಿಲ್ಲ. ಮತ್ತೆ, ಇವನ್ನೆಲ್ಲಾ ಗಾಂಧೀಜಿ ಪರೀಕ್ಷೆ ಮಾಡಿ ನೋಡಿದಾರೆ. ತೊನ್ನು ರೋಗ ಅಂತ ಬರುತ್ತೆ, ಶ್ವೇತ ಕುಷ್ಟ. ಚರ್ಮ ಎಲ್ಲಾ ಬಿಳಿ ಆಗುತ್ತೆ. ನಾನು ಒಬ್ಬರನ್ನು ಕೇಳಿದೆ, ಮೊದಲು ಒಂದು ಕಡೆ ಆಗಿತ್ತು, ಆಮೇಲೆ ಮೈಮೇಲೆಲ್ಲಾ ಆಯಿತು. 'ಬಿಸಿನೀರು, ತಣ್ಣೀರು ಮುಟ್ಟಿದರೆ ಗೊತ್ತಾಗುತ್ತಾ?' 'ತುಂಬಾ ಬಿಸಿ ಆಗಿದ್ದರೆ, ಸುಟ್ಟು ಹೋಗುವ ಹಾಗೆ ಬಿಸಿ ಇದ್ದರೆ ಗೊತ್ತಾಗುತ್ತೆ, ಸಾಧಾರಣ ಬಿಸಿ ನನಗೆ ಗೊತ್ತಾಗುವುದಿಲ್ಲ'. ಚರ್ಮ ಇದೆಯಲ್ಲಾ, ಅದರ ಪೊರೆ ಸತ್ತುಹೋಗಿದೆ. ಇದೆಲ್ಲಾ ಯಾವಾಗ ಗೊತ್ತಾಗುತ್ತೆ? ಕಾಲು ಮುರಿದ ಮೇಲೆ ಕುಂಟುತನ ಏನು ಅನ್ನುವುದು ಗೊತ್ತಾಗುತ್ತೆ. ಅದೇನು ಮಹಾ, ಎಷ್ಟು ಜನ ಕುಂಟರು ಇದ್ದಾರೆ, ಬದುಕಿಲ್ವಾ ಅವರು? ಅಂತೆಲ್ಲಾ ಅಂದುಕೊಳ್ಳೋರಿಗೆ, ಅವರಿಗೇ ಆ ಕಷ್ಟ ಬಂದಾಗ ಗೊತ್ತಾಗುತ್ತೆ.
ಯೋಗ, ಹಠಯೋಗ
     ಮೂಗಿಗೆ ಒಂದು ಕ್ರಿಯೆ ಇದೆ, ಬಸ್ತಿ. ಮೊಸರಿನಿಂದಲಾಗಲೀ, ಜೇನಿನಿಂದಾಗಲೀ ಬತ್ತಿಯನ್ನು ನೆನೆಸಿ ಮೂಗಿನ ಒಂದು ಹೊಳ್ಳೆಯಿಂದ ಇನ್ನೊಂದು ಹೊಳ್ಳೆಯ ಮೂಲಕ ಹಾಯಿಸಿ ಮೂಗನ್ನು ಶುದ್ಧ ಮಾಡಿಕೊಳ್ಳುವುದು. ಸ್ವಲ್ಪ ದಾರಿ ತಪ್ಪಿತೋ, ವಾಸನಾಗ್ರಹಣಶಕ್ತಿಯೇ ಹೊರಟುಹೋಗುತ್ತದೆ. ನನಗೆ ಗೊತ್ತಿರುವ ಒಬ್ಬ ದೊಡ್ಡ ಯೋಗಾಚಾರ್ಯರು ಹೇಳೋರು, 'ಪಂಡಿತಜಿ, ಅದೇನು ವಾಸನೆ, ವಾಸನೆ ಅಂತೀರಲ್ಲಾ, ನನಗೆ ಏನೂ ವಾಸನೆಯೇ ಬರೋದಿಲ್ಲ'. ಇದಕ್ಕಾ ಬಸ್ತಿ ಕ್ರಿಯೆ ಮಾಡೋದು? ಆಮೇಲೆ ಇನ್ನೊಂದು ಸಲ ಹೇಳಿದರು, 'ನಾನು ಬಸ್ತಿಕ್ರಿಯೆ ಮಾಡಿಕೊಳ್ಳದೇ ಕಕ್ಕಸಕ್ಕೇ ಹೋಗುವುದಿಲ್ಲ'. ಯೋಗ ನಾವು ಮಾಡೋದು, ಪಾಕೃತಿಕ ಕ್ರಿಯೆಗಳಿಗೆ ಸಹಾಯ ಮಾಡೋಕೆ ಹೊರತು ಅದನ್ನು ಕೊಲ್ಲುವುದಕ್ಕೆ ಅಲ್ಲ. ಅದನ್ನು ಕೊಂದರೆ ನಮಗೆ ನಷ್ಟವೇ ಆಯಿತು, ನಮಗೆ ಲಾಭವಿಲ್ಲ. ಈ ಹಠಯೋಗದವರು ಕೆಲವರು ಜನಕ್ಕೆ ಮೋಸ ಮಾಡ್ತಾರೆ. ನನ್ನ ಹತ್ತಿರ ಒಬ್ಬ ಹಠಯೋಗಿ ಬಂದ. ಕೇಳಿದೆ: 'ನೀನು ಏನೇನು ಮಾಡ್ತೀಯಪ್ಪಾ?' ಹಠಯೋಗಿ ಹೇಳ್ತಾನೆ, 'ನಾನು ಒಂದು ಗುಂಡಿ ತೋಡಿ ಅದರಲ್ಲಿ ನನ್ನ ತಲೆಯಿಟ್ಟು ತಲೆಕೆಳಗಾಗಿ ನನ್ನ ಕಾಲು ಮೇಲೆ ಇಟ್ಟುಕೊಂಡು ನಿಲ್ತೀನಿ'. 'ಎಷ್ಟು ಹೊತ್ತು ನಿಲ್ತೀಯ?' 'ಐದು ನಿಮಿಷ ಇರ್‍ತೀನಿ'. 'ಆಮೇಲೆ?' 'ಇಲ್ಲ'. ಮತ್ತೆ ನಾನು ಹೇಳಿದೆ 'ಇದು ಯಾತಕ್ಕೆ ಕಷ್ಟ. ಶೀರ್ಷಾಸನ ಮಾಡು. ಎರಡೂ ಕೈಗಳ ಆಧಾರದಲ್ಲಿ ತಲೆ ಕೆಳಗಾಗಿ ಇದ್ದಂತೆಯೆ ನಡೆದುಕೊಂಡು ಹೋಗು'. ಹೀಗೆ ನಾನೂ ಮಾಡ್ತಾ ಇದ್ದೆ. ಕಾಲಿಗೆ ತೊಂದರೆ ಆದ ನಂತರ ಮಾಡಕ್ಕೆ ಆಗಲಿಲ್ಲ. ಅದಕ್ಕೆ ಮೊದಲು ಮಾಡ್ತಾ ಇದ್ದೆ. ಒಂದು ಸಲ ಬಿದ್ದುಬಿಟ್ಟೆ. ಆಗ ಅನ್ನಿಸಿತು. 'ಎಂಥಾ ಕೆಲಸ ಮಾಡ್ತಾ ಇದೀನಿ ನಾನು? ಕಾಲು ಓಡಾಡಕ್ಕೆ ಅಂತ ಭಗವಂತ ಕೊಟ್ಟಿದಾನೆ. ಅದನ್ನು ಬಿಟ್ಟು ಕೈಮೇಲೆ ಓಡಾಡಕ್ಕೆ ಹೋಗ್ತಾ ಇದ್ದೆನಲ್ಲಾ! ತಲೆ ಕೆಳಗಾಗಿ ನಡೆಯುವುದಾಗಿದ್ದರೆ ಭಗವಂತ ತಲೆಯ ಮೇಲೇ ಕಾಲು ಕೊಡ್ತಾ ಇದ್ದ.' ಇದೆಲ್ಲಾ ಹಾಸ್ಯಾಸ್ಪದ ವಿಚಾರ ಅಲ್ಲ. ವಿಚಾರ ಮಾಡಿ, ನಿಮಗೇ ತಿಳಿದೀತು!
-ಕ.ವೆಂ.ನಾಗರಾಜ್.
**************
ಅಡಕ ಫೋಟೋ: 
ಪಂಡಿತಜಿಯವರ 113ನೆಯ ಜನ್ಮದಿನದ ಸಂದರ್ಭದಲ್ಲಿ ಕೇಕು ಕತ್ತರಿಸಲು ಅಂದಿನ ಲೋಕಾಯುಕ್ತ ಜಸ್ಟಿಸ್ ಸಂತೋಷ ಹೆಗ್ಡೆಯವರು ಪಂಡಿತರಿಗೆ ಸಹಕರಿಸುತ್ತಿರುವುದು.
**************
ದಿನಾಂಕ 01.07.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಜುಲೈ 10, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -10: ಯಾರು ಕಳ್ಳರು?


     ಪಂಡಿತ ಸುಧಾಕರ ಚತುರ್‍ವೇದಿಯವರು ಪ್ರತಿನಿತ್ಯ ಬೆಳಿಗ್ಗೆ 3.00-3.30ರ ಸಮಯಕ್ಕೆ ಎದ್ದುಬಿಡುತ್ತಾರೆ ಮತ್ತು ಸಂಜೆ 7.00ರ ಸಮಯಕ್ಕೆ ಮಲಗುತ್ತಾರೆ. ಪ್ರತಿನಿತ್ಯ ಚಟುವಟಿಕೆಯಲ್ಲಿ ತೊಡಗಿರುವ ಇವರು ವೇದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಆಸಕ್ತರಿಗೆ ಅವರ ಸಂದೇಹಗಳನ್ನು ಪರಿಹರಿಸುವುದು ಮುಂತಾದುವುಗಳಲ್ಲಿ ತೊಡಗಿಕೊಳ್ಳುತ್ತಾರೆ. ಇತ್ತೀಚೆಗಷ್ಟೆ ಇವರ ಪ್ರಧಾನ ಸಂಪಾದಕತ್ವದಲ್ಲಿ ಮಹರ್ಷಿ ದಯಾನಂದ ಸರಸ್ವತಿ ವಿರಚಿತ ವೇದಭಾಷ್ಯದ ಕನ್ನಡ ಅವತರಣಿಕೆಯ 20ನೆಯ ಸಂಪುಟ ಬಿಡುಗಡೆಯಾಗಿ ವೇದಲೋಕಕ್ಕೆ ಅಮೂಲ್ಯ ಸಂಪತ್ತು ದೊರಕಿದಂತಾಗಿದೆ. ಮಹಾತ್ಮ ಗಾಂಧಿಯವರ ಒಡನಾಡಿಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಇವರು 31ಕ್ಕೂ ಹೆಚ್ಚು ಸಲ ಬಂಧಿಸಲ್ಪಟ್ಟು, ಸುಮಾರು 13 ವರ್ಷಗಳಿಗೂ ಹೆಚ್ಚು ಕಾಲ ಭಾರತದ ವಿವಿಧ ಕಾರಾಗೃಹಗಳಲ್ಲಿ ಕಳೆದಿದ್ದಾರೆ. ಈಗ ಅಪರಾಧಗಳು ಮತ್ತು  ಭ್ರಷ್ಠಾಚಾರ ಮಿತಿ ಮೀರಿ ಹೆಚ್ಚಾಗಿರುವ ಬಗ್ಗೆ ಖೇದ ವ್ಯಕ್ತಪಡಿಸುವ ಅವರು, "ಇದಕ್ಕಾಗಿಯೇ ನಾವು ಹೋರಾಡಿದೆವಾ?" ಎಂದು ಉದ್ಗರಿಸುತ್ತಾರೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಬೇಕೆಂದು, ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರಶಸ್ತಿ ದೊರಕುವುದೆಂಬ ಕೆಲವರ ಸಲಹೆಯನ್ನು ಮೊಳಕೆಯಲ್ಲೇ ಚಿವುಟಿದ್ದ ಅವರು, "ಮಾಡುವ ತ್ಯಾಗವೇ ದೊಡ್ಡ ಬಹುಮಾನ" ಎಂದಿದ್ದರು! ಇವರ ವಿಚಾರಧಾರೆಯ 10ನೆಯ ಕಂತು ಇಲ್ಲಿದೆ.
***********
     ಒಂದು ವಾಕ್ಯವಿದೆ: "ಕಳ್ಳತನಕ್ಕೆ ಸಮನಾದ ಪಾಪ ಯಾವುದೂ ಇಲ್ಲ". ಅಹಿಂಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯ ಈ ಎಲ್ಲದರ ಬುಡವನ್ನೂ ಸ್ತೇಯ (ಕಳ್ಳತನ)  ಕತ್ತರಿಸುತ್ತದೆ. ಈ ಕಳ್ಳತನದ ಭಾವನೆ - 'ಯಾರದ್ದೋ .ಐಶ್ವರ್ಯ, ಮನಸ್ಸಿನಲ್ಲಿ ಕದ್ದುಬಿಟ್ಟೆ, ಯಾರಿಗೆ ಗೊತ್ತಾಗುತ್ತೆ? ದೇವರಿಗೆ ಗೊತ್ತಾಗುತ್ತೆ, ಪರವಾಗಿಲ್ಲ, ಅವನೇನು ಹೇಳ್ತಾನಾ? ಆಗಲಿ, ಆ ಸ್ತೇಯದಿಂದ ನನಗೆ ಲಾಭ ಆಗೋದಿದ್ದರೆ ಆಗಲಿ' - ಈ ತರಹದ ಸ್ತೇಯ ಭಾವನೆ ಇದೆಯಲ್ಲಾ ಇದು ಸರಿಯಲ್ಲ. ಒಂದು ವೇದ ಮಂತ್ರದ ಅರ್ಥ ಹೀಗಿದೆ: "ನಾನು ಕಳ್ಳನಾಗಿದ್ದ ಪಕ್ಷದಲ್ಲಿ ಇವತ್ತೇ ನನಗೆ ಸಾವು ಬರಲಿ, ಕಳ್ಳತನದಿಂದ ಕದ್ದು ಬೇರೆಯವರ ಸಂಪತ್ತನ್ನು ಅನುಭವಿಸುವುದಕ್ಕಿಂತ ಬದಲು ಸಾಯುವುದೇ ಮೇಲು. ಉಪವಾಸ ಮಾಡುವುದೇ ಮೇಲು". ಈ ಭಾವನೆಯನ್ನೆಲ್ಲಾ ಯಾರೂ ಅರ್ಥ ಮಾಡಿಕೊಳ್ಳುವುದಕ್ಕೆ ಹೋಗುವುದಿಲ್ಲ.
     ಒಬ್ಬರು ದೊಡ್ಡ ಪಂಡಿತರು ಇದ್ದರು. ಅವರು ನನ್ನ ಹಾಗೇನೇ, ಎಲ್ಲಾ ವೇದಗಳನ್ನೂ ಬಾಯಿಪಾಠ ಮಾಡಿಕೊಂಡಿದ್ದರು. ಅವರಿಗೆ ಈ ಮೇಲೆ ಹೇಳಿದ ಮಂತ್ರ ಕೊಟ್ಟು, 'ಸ್ವಾಮಿ, ಸ್ವಲ್ಪ ಅರ್ಥ ಹೇಳ್ತೀರಾ?' ಅಂದೆ. 'ಅರ್ಥ ಅದರೊಳಗೇ ಇದೆಯಲ್ಲಾ ಸ್ವಾಮಿ' ಅಂದರು. 'ಅರ್ಥ ಇದೆ, ಅದರೊಳಗೇ ಇದೆ. ನಿಮ್ಮಂತಹವರಿಗೆ ಗೊತ್ತಾಗುತ್ತೆ, ನನ್ನಂತಹ ಪೆದ್ದರಿಗೆ ಗೊತ್ತಾಗಲ್ಲ, ಸ್ವಲ್ಪ ಬಿಡಿಸಿ ಹೇಳಿ' ಅಂದರೆ ಅವರು 'ಅಯ್ಯೋ ಪಂಡಿತಜಿ, ಮುಚ್ಚುಮರೆ ಏನು, ನಾನು ಗಿಣಿಪಾಠ ಮಾಡಿದೋನು, ಅರ್ಥ ಹೇಳೋಕೆ ಕಷ್ಟ' ಅಂದರು. ಗಿಣಿ ಏನು ಹೇಳಿಕೊಡ್ತಾರೋ ಅದನ್ನು ಹೇಳುತ್ತೆ, ರಾಮ ಅಂದರೆ ರಾಮ ಅನ್ನುತ್ತೆ, ಕೃಷ್ಣ ಅಂದರೆ ಕೃಷ್ಣ ಅನ್ನುತ್ತೆ. ಅದಕ್ಕೆ ರಾಮನೂ ಗೊತ್ತಿಲ್ಲ, ಕೃಷ್ಣನೂ ಗೊತ್ತಿಲ್ಲ. ಅದರ ತಲೆಯೊಳಗೆ ಏನೂ ಇಲ್ಲ. ಅಂತಹ ಗಿಣಿಪಾಠದಿಂದ ಪ್ರಯೋಜನ ಇಲ್ಲ. ಅವರು ಒಪ್ಪಿಕೊಂಡುಬಿಟ್ಟರು. ಅವರು ಮಾಡಿರೋದು ಗಿಣಿಪಾಠ ಅಷ್ಟೆ, ಅಂತ. ಅವರೂ ನಾಲ್ಕು ಹುಡುಗರಿಗೆ ಪಾಠ ಹೇಳಿಕೊಟ್ಟಿದ್ದಾರೆ. ಪಾಠ ಮಾಡಿದ ಗುರುಗಳಿಗೆ ಶಿಷ್ಯರು ಅರ್ಥ ಕೇಳಿದರೆ 'ಅದರಲ್ಲೆ ಇದೆಯಲ್ಲಾ' ಅಂತ ಹೇಳುವುದು ಬಹಳ ಸುಲಭ ಅಲ್ವಾ, ಹಾಗೆ ಹೇಳೋರು.
ಜ್ಞಾನವನ್ನು ಮುಚ್ಚಿಡುವುದೂ ಸ್ತೇಯ
     ಜ್ಞಾನವನ್ನು ಮುಚ್ಚಿಡುವುದೂ ಸಹ ಸ್ತೇಯವೇ. ನಮ್ಮ ಆಯುರ್ವೇದ ಶಾಸ್ತ್ರವನ್ನು ನೋಡಿದರೆ, ಆ ಶ್ಲೋಕಗಳನ್ನು ಓದಿದರೆ ವಾಗ್ಭಟ, ಗರ್ಗ, ಭಾನುಪ್ರಕಾಶ, ಚರಕ, ಸುಶ್ರುತ, . .ದೊಡ್ಡ ದೊಡ್ಡ ಜ್ಞಾನಿಗಳೇ ಇದ್ದರು. ಆದರೂ ಯಾಕೆ ಆಯುರ್ವೇದ ಹಾಳಾಗಿ ಹೋಯ್ತು? ಇದೇ ಬಂದದ್ದು ರೋಗ -  'ಸರಿಯಾದ ಶಿಷ್ಯ ಸಿಗಲಿಲ್ಲ. ಸರಿಯಾದ ಶಿಷ್ಯ ಸಿಕ್ಕರೆ ಅವನಿಗೆ ಮಾತ್ರಾ ಹೇಳ್ತೀನಿ' ಅನ್ನುವ ಮನೋಭಾವ. ಸರಿಯಾದ ಶಿಷ್ಯ ಸಿಗಲಿಲ್ಲ, ಅವರು ಹೇಳಿಕೊಡಲಿಲ್ಲ, ಎಷ್ಟೋ ವಿದ್ಯೆ ನಾಶವಾಗಿ ಹೋಯಿತು. ಒಂದು ವಿದ್ಯೆ ಇತ್ತು, ಅಲ್ಯುಮಿನಿಯಮ್ ಅನ್ನು ಚಿನ್ನ ಮಾಡೋದು, (ರಸವಿದ್ಯೆ). ಆಶ್ಚರ್ಯವಾಗುತ್ತೆ, ಇದು ಸಾಧ್ಯವೇ? ಚಿನ್ನ ಎಲ್ಲಿ, ಅಲ್ಯುಮಿನಿಯಮ್ ಎಲ್ಲಿ? ಅದೂ ಭೂಮಿಯ ತಳದಿಂದಲೇ ಬರುವುದು, ಇದೂ ಭೂಮಿ ತಳದಿಂದಲೇ ಬರುವುದು. ಈ ವಿದ್ಯೆ ಈಗೆಲ್ಲಿ?
     ಇದೆಲ್ಲಾ ಏಕೆ ಹೇಳ್ತಾ ಇದೀನಿ ಅಂದರೆ, ಸುಳ್ಳು ಹೇಳಬಾರದು ಎಂಬುದಕ್ಕೆ ಒತ್ತು ಕೊಡುವುದಕ್ಕೆ. ಒಂದು ಮಂತ್ರ 'ಪ್ರತಿ ನಿಂದಕನನ್ನು ಉದ್ಧಾರ ಮಾಡು' ಎಂದು ಉಪದೇಶಿಸುತ್ತದೆ, ನಾಶ ಮಾಡು ಅಂತ ಅಲ್ಲ, ಅವನು ನನ್ನನ್ನು ಬೈದ, ಆದ್ದರಿಂದ ಅವನನ್ನು ನಾಶ ಮಾಡು, ಎನ್ನುವುದಲ್ಲ.  ಭಗವಂತನ ಮಹಿಮೆ ನಮಗೆ ಗೊತ್ತಾಗಬೇಕಾದರೆ, ಅವನು ಪಾಪಿಗಳನ್ನು ಕೂಡಾ ಉದ್ಧಾರ ಮಾಡ್ತಾನೆ, ಅನ್ನೋದು ನಮಗೆ ಗೊತ್ತಾಗಬೇಕು, ಪರಮಾತ್ಮ, ಪ್ರತಿಯೊಬ್ಬ ನಿಂದಕನನ್ನೂ ಉದ್ಧಾರ ಮಾಡು ಎಂದು ಕೇಳುವ ಈ ಉದಾರ ಭಾವನೆ ನಮಗೆ ಬರಬೇಕು. ಬರಬೇಕಾದರೆ, ಆ ಸ್ತೇಯ ಭಾವನೆ ಹೋಗಬೇಕು. ಕದಿಯಬೇಕು ಅನ್ನುವ ಭಾವನೆ ಇದೆಯಲ್ಲಾ, ಅದು ಹೋಗಬೇಕು, ನಾನು  ಆಗಲೇ ಹೇಳಿದೀನಿ, ಬರೀ ಕಳ್ಳತನ ಮಾಡೋದು, ದುಡ್ಡು ಕಾಸು ಕದಿಯೋದು, ಅದೇ ಕಳ್ಳತನವಲ್ಲ, ಮಾನಸಿಕ ಕಳ್ಳತನವೂ ಕಳ್ಳತನವೇ. ಅಲ್ಲೇ ಎಲ್ಲಾ ಹುಟ್ಟೋದು, ಪುಣ್ಯ ಹುಟ್ಟೋದೂ ಅಲ್ಲೇ, ಪಾಪ ಹುಟ್ಟೋದೂ ಅಲ್ಲೇ. ಪಾಪ, ನನಗೊಬ್ಬರು ಈ ವಿಷಯ ಹೇಳಿದರು. ಒಬ್ಬ ಗುರುಗಳ ಹತ್ತಿರ ಹೋಗಿ, 'ಸ್ವಾಮಿ, ನಾನು ಸುಳ್ಳು ಹೇಳೋ ಅಭ್ಯಾಸ ಇಟ್ಟುಕೊಂಡಿದೀನಿ, ಅದು ಬಂದುಬಿಟ್ಟಿದೆ, ನಾನು ಕಳ್ಳನ ಮಗ, ನಾನು ಅಪ್ಪನಿಗೆ ತಕ್ಕ ಮಗ, ಬಂದು ಬಿಟ್ಟಿದೆ. ನನ್ನ ಉದ್ಧಾರ ಆಗಬೇಕು' ಅಂತ ಕೇಳಿದ. ಅವರು ಹೇಳಿದರು, 'ನಿನ್ನ ಉದ್ಧಾರ ನಿನ್ನ ಕೈಲೇ ಇದೆಯಪ್ಪಾ, ನಿನ್ನ ತಲೇನಾ ಸರಿಯಾಗಿ ಇಟ್ಟುಕೋ, ನೀನೇ ಉದ್ಧಾರವಾಗುತ್ತೀಯಾ. ನಿನ್ನ ತಲೆಯಲ್ಲಿ ಕೆಟ್ಟ ಯೋಚನೆ ಬರುವುದು ಬಿಟ್ಟರೆ, ಕೆಟ್ಟ ಯೋಚನೆಗೆ ಕ್ರಿಯಾ ರೂಪ ಕೊಡ್ತೀಯಾ, ಪಾಪಿಯಾಗುತ್ತೀಯ'.
     ಇಂಥಾ ಪಾಪ ಮಾಡುವುದಕ್ಕಿಂತ ಸಾವು ಬರಲಿ, ಅಂತ ಹೇಳೋದೇ ಶ್ರೇಷ್ಠ, ಕಳ್ಳ ಅಲ್ಲದವನನ್ನು ಕಳ್ಳ ಅಂತ ಕರೆಯೋದೂ ಪಾಪ, ಸ್ವತಃ ಕಳ್ಳನಾಗುವುದೂ ಪಾಪ, ಆ ಕಳ್ಳತನ ಅನ್ನುವ ದೊಡ್ಡ ಪಾಪ ಇದೆಯಲ್ಲಾ, ಅದನ್ನು ವಶದಲ್ಲಿ ಇಟ್ಟುಕೊಳ್ಳಬೇಕು, ಅಹಿಂಸಕ ನಾನು, ಬ್ರಹ್ಮಚಾರಿ ನಾನು, ಅಪರಿಗ್ರಹಿ ನಾನು, ಇತ್ಯಾದಿ ಹೇಳಿಕೊಂಡರೆ ಆಗುವುದಿಲ್ಲ, ಎಲ್ಲದರ ಬುಡದಲ್ಲಿ ಈ ಅಸ್ತೇಯವಿದೆ. ಮಾನಸಿಕವಾಗಿ ಕದ್ದರಾಯ್ತು. ಪಂಚಮಹಾವ್ರತಗಳು-ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ - ಈ ಐದರಲ್ಲಿ ಒಂದು ಕೆಟ್ಟರೂ ಕೂಡಾ ಹೋಯಿತು, ಐದೂ ಶುದ್ಧವಾಗಿರಬೇಕು. ಒಂದು ಪಾತ್ರೆಯಲ್ಲಿ ಒಂದು ಕಡೆ ತೂತು ಆಗಿದ್ದರೂ ಅದರಲ್ಲಿ ಇರುವ ಎಲ್ಲಾ ನೀರೂ ಸೋರಿಹೋಗುತ್ತೆ. ಹಾಗೇನೇ ಅಹಿಂಸೆ, ಬ್ರಹ್ಮಚರ್ಯ, ಅಪರಿಗ್ರಹ, ಆಸ್ತೇಯ, ಸತ್ಯ ಎಲ್ಲಾ ಕೊಚ್ಚಿಹೋಗುತ್ತೆ. ಯಾವುದನ್ನೂ ಕೂಡಾ ಸ್ತೇಯ ಅನ್ನೋ ಜಿಜ್ಞಾಸೆ ಇಟ್ಟುಕೊಂಡು (ಜಾಗೃತವಾಗಿರಬೇಕು). ಕಳ್ಳತನ ಯಾವುದು? ನನ್ನದಲ್ಲದ ವಸ್ತುವನ್ನು ನನ್ನದು ಅಂತ ಭಾವಿಸೋದು ಕಳ್ಳತನ. ಅರ್ಥವಾಯಿತಲ್ಲಾ? ನನ್ನದಲ್ಲ ಅದು, ಆದರೂ ಅದು ನನ್ನದು ಅಂದುಕೊಳ್ಳೋದು ಮಾನಸಿಕ ಕಳ್ಳತನ ಆಯಿತು, ಕದ್ದೇಬಿಟ್ಟರೆ ಕ್ರಿಯಾತ್ಮಕ ಆಗಿಹೋಯಿತು.
ಗುರುವೇ ಸರಿಯಿರದಿದ್ದರೆ . . . .!
     ಕಳ್ಳತನ, ಮಾಡುವುದಕ್ಕಿಂತ ಸಾಯುವುದೇ ವಾಸಿ. ನನಗೆ ಯಾರೂ ಮೋಸ ಮಾಡಬಾರದು ಅಂತಿದ್ದರೆ ನಾನು ಬೇರೆ ಯಾರಿಗೂ ಮೋಸ ಮಾಡಬಾರದು. ಆ ಭಾವನೆ ಬರುವುದೇ ಇಲ್ಲ, ನಾನು ಬೇಕಾದ್ದು ಮಾಡಿಕೊಳ್ತೇನೆ, ನನ್ನ ಶಿಷ್ಯರು, ಭಕ್ತರು ಸತ್ಯವಂತರಾಗಿರಬೇಕು ಅನ್ನೋದು. ಅವರಿಗೆಲ್ಲಿ ಬರುತ್ತೆ ಆ ಬುದ್ದಿ? ಗುರು ಅನ್ನಿಸಿಕೊಂಡೋನೆ ಬುರುಡೆ ಹೊಡೆಯುತ್ತಿದ್ದರೆ ಆ ಶಿಷ್ಯರ ತಲೆಯಲ್ಲಿ ಸತ್ಯ ಅನ್ನುವುದು ಬರುತ್ತಾ? ಯಾವತ್ತೂ ಸಾಧ್ಯವಿಲ್ಲ. ಯಾವನು ಸತ್ಯವಾದಿಯೋ ಅವನೇ ಸತ್ಯ ಪ್ರಚಾರಕನಾಗಬೇಕು. ಸುಳ್ಳು ಹೇಳೋದಾಗಿದ್ದರೆ, ಹರಿಕಥಾದಾಸರು, ಕೀರ್ತನೆಕಾರರು  ಬುರುಡೆ ಹೊಡೆಯುವುದಾಗಿದ್ದರೆ ಅವರಿಗೆ ಹಾಗೆ ಮಾಡಲು ಏನೂ ಅಧಿಕಾರವೇ ಇಲ್ಲ, ಮಾಡಿದರೂ ಪ್ರಯೋಜನವೂ ಇಲ್ಲ. ಧಾರವಾಡದ ಕಡೆಯವರು ಒಬ್ಬರು ಮಹಾರಾಷ್ಟ್ರದ ಕೆಂಪು ಟೋಪಿ ಹಾಕಿಕೊಂಡು ಕನ್ನಡದಲ್ಲಿ ಹರಿಕಥೆ ಮಾಡೋರು. ಅವರು ಹರಿಕಥೆ ಮಾಡ್ತಾ ಇದ್ದರು, ಸತ್ಯದ ಮೇಲೆ ಚೆನ್ನಾಗಿ ಲೆಕ್ಚರ್ ಕೊಡುತ್ತಿದ್ದರು. ನಾನು ಕೇಳಿದೆ ; "ನೀವು ಸತ್ಯದ ಮೇಲೆ ಇಷ್ಟೊಂದು ಚೆನ್ನಾಗಿ ಮಾತಾಡ್ತೀರಲ್ಲಾ, ನೀವು ಸತ್ಯ ಹೇಳ್ತೀರಾ?" ಅವರು ಉತ್ತರಿಸಿದ್ದು ಹೀಗೆ: "ನಾನು ಹರಿಕಥೆ ಮಾಡೋದೇ ಬುರುಡೆ, ಸತ್ಯ ನನಗೆ ಗೊತ್ತಿಲ್ಲದಂತೆ ಬಂದು ಬಿಟ್ಟಿದ್ದರೆ ನಾನು ಜವಾಬ್ದಾರನಲ್ಲ. ನಾನು ಹರಿಕಥೆ ಮಾಡೋನು, ಕಾಲಕ್ಷೇಪ ಮಾಡೋನು, ಅಷ್ಟೆ ನನ್ನ ಕೆಲಸ." ಇಂಥವರ ಉಪದೇಶದಿಂದ ಯಾರಿಗೆ ಲಾಭ? ಬೇರೆಯವರಿಗೆ ಕೂಡಾ ಕಷ್ಟ ಕೊಡಬಾರದು. ನನಗೆ ಯಾರೂ ಕಷ್ಟ ಕೊಡದೇ ಇರಲಿ ಎಂದು ಬಯಸುವುದಾದರೆ ಬೇರೆಯವರಿಗೆ ಕಷ್ಟ ಕೊಡಲು ನನಗೇನು ಹಕ್ಕಿದೆ? ಇದನ್ನು ಯಾರೂ ಯೋಚನೆ ಮಾಡುವುದಿಲ್ಲ. ಬೇರೆಯವರಿಗೆ ಬೇಕಾದಷ್ಟು ಕಷ್ಟ ಕೊಡಲಿ, ತನಗೆ ಮಾತ್ರ ಯಾರೂ ಕಷ್ಟ ಕೊಡಬಾರದು. ಈ ಭಾವನೇನೇ ಸರಿಯಿಲ್ಲ. ಇದೂ ಸ್ತೇಯವೇ.
ಪ್ರಾಣ ಬಿಟ್ಟಾರು, ಸುಳ್ಳು ಹೇಳರು
     'ನಾನು ಕಳ್ಳನಾಗಿದ್ದ ಪಕ್ಷದಲ್ಲಿ ನನಗೆ ಇವತ್ತೇ ಸಾವು ಬರಲಿ' -ಬಹಳ ದೊಡ್ಡ ಮಾತು. ಸಾಯುವುದಕ್ಕೆ ತಯಾರು, ಸುಳ್ಳು ಹೇಳಲು ತಯಾರಿಲ್ಲ, ಕಳ್ಳತನ ಮಾಡುವುದಕ್ಕೆ ತಯಾರಿಲ್ಲ, ಇಂತಹವರು ಎಷ್ಟು ಜನ ಸಿಕ್ತಾರೆ? ಸುಳ್ಳು ಅನ್ನೋ ಮಾತನ್ನು ನಾವು ಕೇಳ್ತೀವಿ, ಅದರ ಸ್ವರೂಪ ಅನ್ನುವುದು ನಮಗೆ ಗೊತ್ತಿಲ್ಲ, ಕಾರಣ ಏನು? ಒಂದೊಂದು ಸಮಯದಲ್ಲಿ ಸುಳ್ಳು ಹೇಳಬೇಕಾಗಿ ಬರುತ್ತೆ, ಉದಾಹರಣೆಗೆ,  ಒಬ್ಬರು ನೋಡಿರುತ್ತಾರೆ, ಒಂದು ಜಿಂಕೆ ಅಲ್ಲಿ ಹೋಗಿದೆ, ಅದನ್ನು ಕೊಲ್ಲುವುದಕ್ಕೆ ಹಿಂಬಾಲಿಸಿ ಒಬ್ಬ ಶಿಕಾರಿ ಬರುತ್ತಾನೆ. ಬಂದವನು ಅಲ್ಲಿ ಕೂತಿರ್ತಾರಲ್ಲ ಅವರನ್ನು ಕೇಳ್ತಾನೆ, 'ಜಿಂಕೆ ಯಾವ ಕಡೆಗೆ ಹೋಯಿತು?' ಅವನು ಹೇಳಿದರೆ ಹಿಂಬಾಲಿಸಿ ಹೋಗಿ ಜಿಂಕೆಯನ್ನು ಕೊಲ್ತಾನೆ. ಇವನು ಉತ್ತರ ಕೊಡದೆ ಮೌನವಾಗಿ ಕೂತಿದ್ದ. ಶಿಕಾರಿ ಅವನಿಗೇ ಗುಂಡು ಹಾಕಿದ. 'ಕಳ್ಳ, ಗೊತ್ತಿದ್ದರೂ ಹೇಳ್ತಾ ಇಲ್ಲ' ಅಂತ. ಪ್ರಾಣ ಬಿಡೋದಕ್ಕೆ ತಯಾರು, ಆತ 'ನನಗೆ ಗೊತ್ತಿಲ್ಲ' ಎಂದು ಸುಳ್ಳು ಹೇಳೋದಕ್ಕೆ ತಯಾರಿರಲಿಲ್ಲ.
ಯಾರು ಕಳ್ಳರು?
     ನಾವು ಯಾವನು ಕಳ್ಳತನ ಮಾಡ್ತಾನೋ ಬೀಗ ಒಡೆದು, ಬಾಗಿಲು ಮುರಿದು, ಪೆಟ್ಟಿಗೆ ಕೊಚ್ಚಿಹಾಕಿ, ಕಳ್ಳತನ ಮಾಡ್ತಾನೋ ಅವನನ್ನು ಮಾತ್ರ ಕಳ್ಳ ಅಂತ ತಿಳ್ಕೊಳ್ತೀವಿ. ನಾವು ಮನಸ್ಸಿನಲ್ಲಿ ಅಂದುಕೊಳ್ತಾ ಇರ್ತೀವಿ, ಅಯ್ಯೋ, ಅವನ ಹತ್ತಿರ ಅಷ್ಟೊಂದು ದುಡ್ಡಿದೆ, ಅದರಲ್ಲಿ ಸ್ವಲ್ಪ ಭಾಗವಾದರೂ ನನ್ನದಾಗಬಾರದಾ?' ಕದ್ದುಬಿಟ್ಟೆವಲ್ಲಾ! ಸ್ವತಃ ಕದಿಯುವುದಕ್ಕೆ ಬರುವುದಿಲ್ಲ, ಮನಸ್ಸಿನಿಂದ ಕದ್ದಿವಿ, ಎಲ್ಲಕ್ಕಿಂತಲೂ ದೊಡ್ಡ ಪಾಪ, ಮನಸ್ಸಿನಲ್ಲಿ ಪಾಪ ಮಾಡುವುದಿದೆಯಲ್ಲಾ, ಅದು ದೊಡ್ಡ ಪಾಪ. ವ್ಯಭಿಚಾರವನ್ನೇ ಮಾಡಬೇಕೆಂದಿಲ್ಲ, ಮನಸ್ಸಿನಲ್ಲಿ ಅಂದುಕೊಂಡರೂ ಸಾಕು, ಸುಳ್ಳೇ ಹೇಳಬೇಕೆಂದಿಲ್ಲ, ಹೇಳಿದರೆ ಚೆನ್ನಾಗಿತ್ತಲ್ಲಾ ಅಂತ ಮನಸ್ಸಿನಲ್ಲಿ ಬಂದರೂ ಕೂಡ ಸಾಕು. ಸುಳ್ಳು ಹೇಳಿದ ಹಾಗೇನೆ ಆಯಿತು. ಇದು ಬಹಳ ಸೂಕ್ಷ್ಮವಾದ ವಿಷಯ.
-ಕ.ವೆಂ.ನಾಗರಾಜ್.
******************
ದಿನಾಂಕ ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಜುಲೈ 8, 2015

ವೇದಸುಧೆ: ವೇದಭಾರತೀ ಸತ್ಸಂಗದಲ್ಲಿ ನಡೆಯುತ್ತಿರುವ ವೇದಪಾಠದ ಒಂದು ಕ್ಲಿಪ್







ಹಾಸನದ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗವು ಹಲವರನ್ನು ಹತ್ತಿರ ತಂದಿದೆ. ಅಂತವರಲ್ಲಿ ನಿನ್ನೆ ಬಂದು ತಮ್ಮ ಮೆಚ್ಚುಗೆ ವ್ಯಕ್ತಪಟಿಸಿದ ನಿವೃತ್ತ  ಅಧೀಕ್ಷಕ ಇಂಜಿನಿಯರ್ [KUWSS] ಶ್ರೀ ರಂಗಸ್ವಾಮಿಯವರು. ಅವರು ಬೆಳಗಾಮ್ ನಿಂದ ತಮ್ಮ ತಂಗಿಮನೆಗೆ ಬಂದಿದ್ದರು. ನಮ್ಮ ಚಟುವಟಿಗೆ ಅವರಿಗೆ ಎಷ್ಟು ಇಷ್ಟವಾಯಿತೆಂದರೆ ನಮ್ಮನ್ನು ಬೆಳಗಾಮ್ ಗೆ ಆಹ್ವಾನಿಸಿದ್ದಾರೆ. ಅಲ್ಲೊಂದು ಅಗ್ನಿಹೋತ್ರ ಶಿಬಿರ ನಡೆಯಲಿದೆ. ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅವರ ಮಿತ್ರರಾದ ಕೆ.ಆರ್.ನಗರದ ಡಾ|| ಶಿವಲಿಂಗಪ್ಪನವರಿಗೆ ಕರೆಮಾಡಿ ಅವರನ್ನು ಪರಿಚಯ ಮಾಡಿಸಿ ಕೆ.ಆರ್.ನಗರದಲ್ಲಿ ಅವರು ನಡೆಸುವ ಯೋಗ ತರಬೇತಿ ಶಿರದಲ್ಲಿ ಅಗ್ನಿಹೋತ್ರ ನಡೆಸಿಕೊಡಲು ಆಹ್ವಾನಿಸಿದ್ದಾರೆ. ಇಂದು ಅವರ ತಂಗಿಯಮನೆಯಲ್ಲೇ ಅಗ್ನಿಹೋತ್ರ ಏರ್ಪಡಿಸಿ ಸ್ವತಃ ಮಾಡಿ ಸಂತೋಷಪಟ್ಟರು.

ಹೌದು, ನಮ್ಮ ಸತ್ಸಂಗ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ನಮ್ಮ ಕೈಲಾದಷ್ಟು ಸ್ಥಳಗಳಿಗೆ ಈ ವಿಚಾರವನ್ನು ತಲುಪಿಸಿಸುವ ಕೆಲಸವನ್ನು ಮಾಡಲು ನಾವೂ ಕಟಿಬದ್ಧರಾಗಿದ್ದೇವೆ.

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -9: ವಿಶ್ವಚೇತನ


     ಭಗವಂತ ಸರ್ವಶಕ್ತ, ಸರ್ವವ್ಯಾಪಕ, ನಿರಾಕಾರ. ಈ ಮಂತ್ರ ಹೀಗಿದೆ:
ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ| ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ|| (ಯಜು.೪೦.೫.) 
     ಅದು ವಿಶ್ವಕ್ಕೆ ಗತಿ ನೀಡುತ್ತದೆ. ಅದು ಸ್ವತಃ ಚಲಿಸುವುದಿಲ್ಲ. ಅದು ದೂರದಲ್ಲಿದೆ.  ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ. ಅದೇ ಇದೆಲ್ಲದರ ಹೊರಗೂ ಇದೆ.  ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂತಿರುವ, ಎಲ್ಲಾಕಡೆ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ನಿಜವಾಗಿ ಅದು ಇರುವುದು ಹಾಗೆಯೇ. ಋಗ್ವೇದದ ಈ ಮಂತ್ರ ಹೇಳುತ್ತದೆ:
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್| ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ||  (ಋಕ್.೧೦.೮೧.೩.)
     ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಸರ್ವದ್ರಷ್ಟನಾದ ಮತ್ತು ಎಲ್ಲೆಡೆಯಲ್ಲಿಯೂ ಮುಖವನ್ನುಳ್ಳ, ಎಲ್ಲೆಡೆಯೂ ತಿರುಗುವ, ಎಲ್ಲೆಡೆಯಲ್ಲೂ ಬಾಹುಗಳನ್ನುಳ್ಳ, ಸರ್ವಕರ್ತೃವಾದ, ಅದೇ ರೀತಿ ಎಲ್ಲೆಡೆಯಲ್ಲೂ ಪಾದಗಳನ್ನುಳ್ಳ, ಸರ್ವಗತನಾದ, ಒಬ್ಬ ದೇವನು ದ್ಯುಲೋಕ, ಪೃಥಿವಿ ಲೋಕಗಳನ್ನು ರಚಿಸುತ್ತಾ ತನ್ನ ಸೃಜನ, ಪೋಷಣ ಸಾಮರ್ಥ್ಯಗಳಿಂದಲೂ ಗತಿಶೀಲ ಚೇತನರಾದ ಜೀವಾತ್ಮರುಗಳ ಮೂಲಕವೂ ಪ್ರಾಣವನ್ನು ಊದುತ್ತಿದ್ದಾನೆ ಎಂದು ಈ ಮಂತ್ರದ ಅರ್ಥ. ಕಣ್ಣು, ಮುಖ, ಬಾಹು, ಪಾದ ಮೊದಲಾದ ಶಬ್ದಗಳನ್ನು ಕಂಡು ಭಗವಂತ ಸಾಕಾರನೋ ಎಂಬ ಭ್ರಾಂತಿಗೆ ಬಲಿಬೀಳುವುದು ಬೇಡ. ಭಗವಂತ ಸರ್ವವ್ಯಾಪಕನಾದ ಕಾರಣ, ಸರ್ವಥಾ ನಿರಾಕಾರ. ಕಣ್ಣು, ಮುಖ, ಕೈಕಾಲು ಇಲ್ಲದಿದ್ದರೂ, ಭಗವಂತ ಅಂಗೋಪಾಂಗಗಳು ಮಾಡಬಹುದಾದ ಕೆಲಸವನ್ನೆಲ್ಲಾ ಅಶರೀರನಾಗಿಯೇ ಮಾಡುತ್ತಿದ್ದಾನೆ ಎನ್ನುವುದೇ ಈ ಮಂತ್ರದ ಭಾವನೆ. ಶಬ್ದಾರ್ಥವನ್ನೇ ಹಿಡಿದು ಹೊರಟರೆ ಎಲ್ಲೆಡೆಯೂ ಕಣ್ಣು, ಎಲ್ಲೆಡೆಯೂ ಮುಖ, ಎಲ್ಲೆಡೆಯೂ ಕೈ, ಎಲ್ಲೆಡೆಯೂ ಕಾಲು ಇರುವ ಎದೆ, ಬೆನ್ನು, ಹೊಟ್ಟೆ ಹಾಗೂ ಕಿವಿಯೇ ಇಲ್ಲದ, ಜಗತ್ತಿನ ಯಾವ ದೇವಸ್ಥಾನದಲ್ಲಿಯೂ, ಯಾವ ಕಲಾಮಂದಿರದಲಿಯೂ ಕಾಣಿಸದ ವಿಚಿತ್ರ ಮೂರ್ತಿಯೊಂದನ್ನು ಊಹಿಸಿಕೊಳ್ಳಬೇಕಾದೀತು. ಆದರೆ ವೇದಗಳ ಭಾಷಾಶೈಲಿಯನ್ನು ಬಲ್ಲ ಯಾರೂ ಮೋಸ ಹೋಗಲಾರರು. ಸರ್ವತ್ರ ವ್ಯಾಪಕನಾದ, ಸರ್ವಕರ್ತೃ, ಸರ್ವಪಾತ್ರವಾದ ಭಗವಂತನಿರುವುದು ಒಬ್ಬನೇ. ಈ ಮಂತ್ರದಲ್ಲಿಯೂ "ಏಕ ದೇವಃ" ಎಂಬುದನ್ನು ಗಮನಿಸಿ.
ಒಳ್ಳೆಯ ದಾರಿ
      ಪರಮಾತ್ಮ ಎಂದೂ ಸಾಕಾರ ರೂಪಿ ಅಲ್ಲವೇ ಅಲ್ಲ, ಸಾಕಾರನೆಂದಾಕ್ಷಣ ಸರ್ವಶಕ್ತ, ಸರ್ವವ್ಯಾಪಕ ಭಗವಂತನನ್ನು ಮಿತಿಗೊಳಿಸಿದಂತೆ! ಆತ ಅನುಭವಗಮ್ಯನೇ ಹೊರತು ಕಣ್ಣಿನಿಂದ ಕಾಣಲಾಗುವುದಿಲ್ಲ. ಹೃದಯದಲ್ಲಿ ಕಾಣಬೇಕು, ಅನುಭವಿಸಬೇಕು! ಸ್ವರ್ಗ, ನರಕ ಅನ್ನುವುದು ಬೇರೆ ಇಲ್ಲ. ಇಲ್ಲೇ ಇದೆ. ಸ್ವರ್ಗ ಅಂದರೆ ಮೇಲೇರುವುದು, ನರಕ ಅಂದರೆ ಕೆಳಕ್ಕೆ ಇಳಿಯುವುದು. ನಮ್ಮ ನಡವಳಿಕೆಗಳು ಸರಿಯಿದ್ದರೆ, ಸತ್ಕರ್ಮ ಮಾಡಿದರೆ ನಾವು ಸ್ವರ್ಗ ಕಾಣುತ್ತೇವೆ, ಇಲ್ಲದಿದ್ದರೆ ಕೆಳಗೆ ಬೀಳುತ್ತೇವೆ. ನನ್ನನ್ನು ನಾಸ್ತಿಕನೆಂದು ದೂರುವವರೂ ಇದ್ದಾರೆ. ಆಸ್ತಿಕರೆಂದರೆ ಯಾರು? ನಾಸ್ತಿಕರು ಯಾರು? ಅರ್ಥರಹಿತ ಸಂಪ್ರದಾಯಗಳು, ಆಚರಣೆಗಳನ್ನು ಪೋಷಿಸುವ ಆಸ್ತಿಕರೆನಿಸಿಕೊಳ್ಳುವವರಿಗಿಂತ ನಾಸ್ತಿಕರೇ ಮೇಲು! ಜ್ಞಾನಿಗಳಾದವರು ವಿಚಾರ ತಿಳಿದವರಾಗಿದ್ದು ಯಾರು ಏನೇ ಹೇಳಿದರೂ ತಪ್ಪುದಾರಿಗೆ ಎಳೆಯಲ್ಪಡುವುದಿಲ್ಲ. ಆದರೆ ತಿಳುವಳಿಕೆ ಕಡಿಮೆಯಿದ್ದವರನ್ನು ದಾರಿ ತಪ್ಪಿಸುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಕ್ಷಮಿಸಬೇಕು, ನಾನು ಆಡಿದ ಮಾತುಗಳು ಕಟುವಾಗಿ ಕಾಣಬಹುದು, ಆದರೆ ಸತ್ಯ ಸತ್ಯವೇ. ನಾನು ಯಾರನ್ನೂ ನೋಯಿಸಲು ಉದ್ದೇಶಿಸಿಲ್ಲ, ಕೆಟ್ಟ ಭಾವನೆಯಿಂದ ಮಾತನಾಡಿಲ್ಲ, ಪಂಡಿತನೆಂದು ಭಾವಿಸಿ ಆಡಿಲ್ಲ. ಒಳ್ಳೆಯ ವಿಚಾರ ಮಾಡೋಣ, ವಿಮರ್ಶೆ ಮಾಡೋಣ, ಒಳ್ಳೆಯ ದಾರಿಯಲ್ಲಿ ನಡೆಯೋಣ.
ಬ್ರಹ್ಮಾಂಡದ ಸೃಷ್ಟಿ
     ದಿಕ್ಕುಗಳು ಎನ್ನುವುದು ಸ್ಥಳ ಗುರುತಿಸುವುದು, ದಿಸೆ ತೋರಿಸುವ ಸಲುವಾಗಿ ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದೇ ಹೊರತು ಮತ್ತೇನಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಒಂದು ಅರ್ಥದಲ್ಲಿ ಸರಿಯಿರಬಹುದು. ಆ ಸೂರ್ಯನೂ ಸಹ ತನ್ನ ಚಲನೆಯ ಪಥವನ್ನು ಬದಲಿಸುತ್ತಾನೆ. ಬಳಕೆಯಲ್ಲಿ ನಾವು ಪೂರ್ವ, ಪಶ್ಚಿಮ, ಇತ್ಯಾದಿ ಎಂಟು ದಿಕ್ಕುಗಳನ್ನು ಬಳಸುತ್ತೇವೆ. ನಮಗೆ ಪೂರ್ವವೆನಿಸುವ ಒಂದು ಸ್ಥಳ ಇನ್ನೊಬ್ಬರಿಗೆ ಪಶ್ಚಿಮವಾಗಬಹುದು. ವಾಸ್ತವವಾಗಿ ನಮ್ಮ ಸುತ್ತಲೂ ಇರುವ 360 ಡಿಗ್ರಿ ಪ್ರದೇಶದ ಒಂದೊಂದು ಡಿಗ್ರಿಯೂ ಒಂದೊಂದು ದಿಕ್ಕು. ಈಗ ಹೇಳಲಾಗುತ್ತಿರುವ ಜ್ಯೋತಿಷ್ಯ ಎಂಬುದಕ್ಕೆ ಅರ್ಥವಿಲ್ಲ. ಬ್ರಹ್ಮಾಂಡದ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಜನರನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಅವುಗಳೇ ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯಿ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಅವನೇ ಭಗವಂತ. ಈ ವಿಶಾಲ ಬ್ರಹ್ಮಾಂಡವನ್ನು ಆ ಪರಮಾತ್ಮ ಇದ್ದಲ್ಲೇ ಇದ್ದು ನಿಯಂತ್ರಿಸುತ್ತಿದ್ದಾನೆ. ಇದನ್ನು ಅರಿಯದಿದ್ದರೆ ಅವನಿಗೆ ನಷ್ಟವೇನೂ ಇಲ್ಲ. ನಾನು ಎಷ್ಟೋ ವಿದ್ವಾಂಸರನ್ನು 'ನಕ್ಷತ್ರಗಳು ಎಷ್ಟಿವೆ ಎಂಬುದು ಗೊತ್ತೇ?' ಎಂದು ಪ್ರಶ್ನಿಸಿದ್ದೇನೆ. ಯಾರಿಗೂ ಉತ್ತರಿಸಲು ಆಗಿಲ್ಲ. ಸರ್ ಸಿ.ವಿ. ರಾಮನ್‌ರವರನ್ನೂ ಕೇಳಿದ್ದೆ. ಅವರು "ನಾನು ಸಣ್ಣವನು, ಇಷ್ಟು ದೊಡ್ಡ ಬ್ರಹ್ಮಾಂಡವನ್ನು ಅರಿಯುವ, ಅಳೆಯುವ ಶಕ್ತಿ ನನ್ನಂತಹವರಿಗೆ ಎಲ್ಲಿ ಬರಬೇಕು" ಎಂದು ಹೇಳಿದ್ದರು.
ಬ್ರಹ್ಮಚರ್ಯ
     ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವವರು ಎಂದು ಅರ್ಥವಲ್ಲ. ಬ್ರಹ್ಮನಲ್ಲಿ ಸಂಚಾರ ಮಾಡುವ ಶಕ್ತಿಯಿರುವವನು ಎಂದು ಅರ್ಥ. ಈ ಮನುಷ್ಯ ಜನ್ಮ ದೊಡ್ಡದು. ಅದನ್ನು ಭೌತಿಕ ಸುಖಭೋಗಕ್ಕಾಗಿ ಮಾತ್ರ ಎಳಸದೆ ಈ ಜನ್ಮದ ಅರ್ಥ ತಿಳಿದು ಸತ್ಕರ್ಮಕ್ಕಾಗಿ ಬಳಸಬೇಕು. ಮನುಷ್ಯಜನ್ಮ ಎಷ್ಟೋ ಜನ್ಮಗಳನ್ನು ದಾಟಿಬಂದ ನಂತರ ಸಿಕ್ಕಿದೆ. ಇದನ್ನು ಸಾರ್ಥಕಪಡಿಸಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಗಳಾಗಬೇಕಾದುದು ಮನುಷ್ಯಜನ್ಮದ ಉದ್ದೇಶ. ಯಾರೋ ಹೇಳುತ್ತಿದ್ದರು, ಲಕ್ಷಾಂತರ ಜನ್ಮಗಳ ನಂತರ ಮನುಷ್ಯನಾಗಿ ಹುಟ್ಟಿದ್ದೇವೆ, ಪುನಃ ಕೆಳಗೆ ಹೋಗುತ್ತೇವೆಯೇ? ಮೇಲೆ ಹತ್ತಿ ಬಂದಿದ್ದೇವೆ, ಕೆಳಗೆ ಇಳಿಯುತ್ತೇವೆಯೇ? ಸರಿಯಾಗಿ ಮನುಷ್ಯನಂತೆ ನಡೆಯದಿದ್ದರೆ ಮನುಷ್ಯರಾಗೇ ಹುಟ್ಟುತ್ತೇವೆಂದು ಹೇಳಲಾಗುವುದಿಲ್ಲ. ನಾವು ಮಾಡಿದ ಕರ್ಮವನ್ನು ನಾವು ಭೋಗಿಸಲೇಬೇಕು. ಇದು ಭಗವಂತನ ನಿಯಮ. ನಾನು ಬಹಳಷ್ಟು ಸನ್ಯಾಸಿಗಳನ್ನು ನೋಡಿದ್ದೇನೆ - ಕಾವಿ ಬಟ್ಟೆ ಸನ್ಯಾಸಿಗಳು, ಬಿಳಿ ಬಟ್ಟೆ ಸನ್ಯಾಸಿಗಳು, ಹಳದಿ ಬಟ್ಟೆ ಸನ್ಯಾಸಿಗಳು, ಕಪ್ಪು ಬಟ್ಟೆ ಸನ್ಯಾಸಿಗಳು, ಹೀಗೆ. ಸನ್ಯಾಸಿಗಳು ಎಂದರೆ ಎಲ್ಲವನ್ನೂ ಬಿಟ್ಟವರು, ಅವರೇನು ಬಿಟ್ಟಿದ್ದಾರೆ?  ಹಸಿವಾದಾಗ 'ಭವತಿ ಭಿಕ್ಷಾಂದೇಹಿ' ಅನ್ನುತ್ತಾರೆ, ಛಳಿಯಾದಾಗ ಬೆಚ್ಚಗೆ ಹೊದ್ದುಕೊಳ್ಳುತ್ತಾರೆ! ಸನ್ಯಾಸಿಗಳೆಂದರೆ ಭೌತಿಕ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಪರಮಾತ್ಮನ ಕುರಿತು ಧ್ಯಾನದಲ್ಲಿ ತೊಡಗಿಕೊಂಡವರು ಎನ್ನುತ್ತಾರೆ. ಅಂತಹ ನಿಜವಾದ ಸನ್ಯಾಸಿಗಳು ಎಷ್ಟು ಜನ ಇದ್ದಾರೆ?
     ಸಾಮಾನ್ಯತಃ ಮಾನವನ ಆಯಸ್ಸು ನೂರು ವರ್ಷಗಳ ಪರಿಮಿತಿಯುಳ್ಳದ್ದು. ಶತಂ ಜೀವ ಶರದೋ ವರ್ಧಮಾನಃ || (ಋಕ್.10.161.4.) - ಅಭಿವೃದ್ಧಿ ಹೊಂದುತ್ತಾ ನೂರು ವರ್ಷಗಳ ಕಾಲ ಜೀವಿಸು - ಎಂಬುದು ವೇದದ ಆದೇಶ. ಸಾಫಲ್ಯವನ್ನು ಗಳಿಸುವ ಸಲುವಾಗಿ, ವೇದಗಳು ಈ ನೂರು ವರ್ಷಗಳನ್ನು ನಾಲ್ಕು ಸಮಭಾಗಗಳಾಗಿ ಭಾವಿಸಿ, ಒಂದೊಂದು ಭಾಗಕ್ಕೂ "ಆಶ್ರಮ" ಎಂಬ ಹೆಸರನ್ನು ಕೊಡುತ್ತವೆ. ಎಲ್ಲ ಬಗೆಯ ಶಕ್ತಿಗಳನ್ನೂ ವರ್ಧಿಸಿಕೊಳ್ಳುವ ಸಲುವಾಗಿ ಬ್ರಹ್ಮಚರ್ಯ, ವರ್ಧಿತ ಶಕ್ತಿಗಳನ್ನು ತನ್ನ ಮತ್ತು ಸಮಾಜದ ಹಿತಕ್ಕೆ ಉಪಯೋಗಿಸುವ ಸಲುವಾಗಿ ಗಾರ್ಹಸ್ಥ್ಯ, ಆಧ್ಯಾತ್ಮಿಕ ಸಾಧನೆಯೊಂದಿಗೆ, ರಾಷ್ಟ್ರದ ಮಕ್ಕಳಿಗೆ ಶಿಕ್ಷಣದಾನಕ್ಕಾಗಿ ವಾನಪ್ರಸ್ಥ ಹಾಗೂ ಸಾಂಸಾರಿಕ ಮೋಹದ ಪೂರ್ಣತ್ಯಾಗ ಮಾಡಿ, ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಜಗದುಪಕಾರಾರ್ಥವಾಗಿ ಸದ್ಧರ್ಮ ಪ್ರಚಾರ ಮಾಡುವುದಕ್ಕಾಗಿ ಸಂನ್ಯಾಸ, ಹೀಗೆ ವೈದಿಕ ಧರ್ಮ ನಾಲ್ಕು ಆಶ್ರಮಗಳನ್ನು ವಿಧಿಸುತ್ತದೆ.
     ಜನ್ಮದಿಂದಾರಂಭಿಸಿ, 25 ವರ್ಷ ಪೂರ್ತಿಯಾಗುವವರೆಗೆ, ಮಾನವನು ಬ್ರಹ್ಮಚರ್ಯಾಶ್ರಮವನ್ನು ಪಾಲಿಸಬೇಕು. ಬ್ರಹ್ಮಚರ್ಯ ಎಂಬ ಶಬ್ದದ ಆರ್ಥ, ಪರಮಾತ್ಮನಲ್ಲಿ ಮತ್ತು ವೇದಗಳಲ್ಲಿ ವಿಹಾರ, ವಿಹರಿಸುವುದು ಎಂದಾಗುತ್ತದೆ. ಈ ಮಹೋಚ್ಚವಾದ ಗುರಿಯನ್ನು ಮುಟ್ಟಬೇಕಾದರೆ, ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯು ಪೂರ್ಣತಃ ಜಿತೇಂದ್ರಿಯರಾಗಬೇಕಾದುದು ಅನಿವಾರ್ಯ. ಇದೇ ಕಾರಣದಿಂದ, ಬ್ರಹ್ಮಚರ್ಯ ಎಂಬ ಶಬ್ದಕ್ಕೆ ಸಾಧಾರಣತಃ ಇಂದ್ರಿಯ ನಿಗ್ರಹ ಎಂಬರ್ಥ ಕೊಡಲ್ಪಡುತ್ತದೆ.
     ಬಾಲಕ ಮತ್ತು ಬಾಲಿಕೆಯು ಎಂಟು ವರ್ಷ ಪ್ರಾಯದವರಾದಾಗ, ಅವರ ಉಪನಯನ ಸಂಸ್ಕಾರವಾಗಿ, ವೇದಾರಂಭವೂ ನಡೆದು ಅವರು ಗುರುಕುಲವನ್ನು ಸೇರುತ್ತಾರೆ. ಪ್ರಾಪಂಚಿಕ ಹವ್ಯಾಸಗಳಿಂದ ಮತ್ತು ಪ್ರಲೋಭನಕಾರೀ ವಾತಾವರಣದಿಂದ ದೂರವಿದ್ದು, ಆಧ್ಯಾತ್ಮಿಕವಾದ ಸಾತ್ವಿಕ ವಾಯುಮಂಡಲದಲ್ಲಿ ಸ್ವತಃ ಶ್ರಮಸಹಿಷ್ಣುಗಳಾಗಿ, ತಮ್ಮ ಬೌದ್ಧಿಕ ಹಾಗೂ ಮಾನಸಿಕ ಶಕ್ತಿಗಳನ್ನು ಏಕೀಕರಿಸಿ, ವೇದವಿದ್ಯೆ ಹಾಗೂ ಲೌಕಿಕವಿದ್ಯೆಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಸರಳ ಜೀವನ, ಉದಾತ್ತ ವಿಚಾರ - ಎಂಬ ಕಥನಕ್ಕೆ ತಥ್ಯದ ರೂಪ ನೀಡುತ್ತಾರೆ. ಸದಾಚಾರಿಗಳೂ, ಬ್ರಹ್ಮನಿಷ್ಠರೂ, ಶ್ರೋತ್ರೀಯರೂ ಆದ ಆಚಾರ್ಯರ ಅಧೀನದಲ್ಲಿದ್ದು ಸ್ವತಃ ಸಚ್ಚರಿತ್ರರೂ, ಶರೀರಾತ್ಮ-ಬುದ್ಧಿ-ಮನೋಬಲಯುಕ್ತರೂ, ಗಂಭೀರ ವಿದ್ವಾಂಸರೂ, ಆಜೀವಿಕಾ ಸಂಪಾದನ ಸಮರ್ಥರೂ ಆಗುತ್ತಾರೆ. ಸಂಯಮಿಗಳಾಗಿ ಸರ್ವವಿಧ ಶಕ್ತಿಗಳ ಸಂಚಯವನ್ನೂ ಮಾಡಿಕೊಳ್ಳುತ್ತಾರೆ. ಅಥರ್ವವೇದದ ಮಾತುಗಳಲ್ಲಿ ಅವರ ಸ್ವರೂಪ ಹೀಗಿರುತ್ತದೆ:
ಬ್ರಹ್ಮಚಾರೀ ಬ್ರಹ್ಮ ಭ್ರಾಜದ್ಭಿಭರ್ತಿ ತಸ್ಮಿನ್ದೇವಾ ಅಧಿ ವಿಶ್ವೇ ಸಮೋತಾಃ |
ಪ್ರಾಣಾಪಾನೌ ಜನಯನ್ನಾದ್ವ್ಯಾನಂ ವಾಚಂ ಮನೋ ಹೃದಯಂ ಬ್ರಹ್ಮ ಮೇಧಾಮ್ || (ಅಥರ್ವ.11.5.24.)
     ಬ್ರಹ್ಮಚಾರಿಯು ಪ್ರಾಣ, ಅಪಾನ ಮತ್ತು ವ್ಯಾನ, ಈ ಮೂರು ಪ್ರಾಣ ಶಕ್ತಿಗಳನ್ನೂ, ವಾಣಿಯನ್ನೂ, ಮನಸ್ಸನ್ನೂ, ಹೃದಯವನ್ನೂ, ವೇದಜ್ಞಾನವನ್ನೂ, ಬುದ್ಧಿಯನ್ನೂ, ಸರ್ವರೀತಿಯಲ್ಲಿಯೂ ವರ್ಧಿಸಿಕೊಳ್ಳುತ್ತಾ, ಪ್ರಕಾಶಮಾನವಾದ ಬ್ರಹ್ಮತತ್ವವನ್ನು ಧರಿಸುತ್ತಾನೆ. ಅವನಲ್ಲಿ ಸಮಸ್ತ ಇಂದ್ರಿಯ ಶಕ್ತಿಗಳೂ, ದಿವ್ಯ ಗುಣಗಳೂ, ಹಾಸು ಹೊಕ್ಕಾಗಿ ಹೆಣೆದು ಬರುತ್ತವೆ ಎಂದು ಇದು ಸಾರುತ್ತದೆ. ನಿಜವಾಗಿ ಬ್ರಹ್ಮಚಾರಿ-ಬ್ರಹ್ಮಚಾರಿಣಿಯರು ಬಲಿಷ್ಠವಾದ ಮನಸ್ಸು, ಪರಿಪುಷ್ಟವಾದ ವಾಣಿ, ಧೃಢವಾದ ಶರೀರ, ವಿಶಾಲವಾದ ಹೃದಯ, ಪೂರ್ಣ ವಿಕಸಿತವಾದ ಬುದ್ಧಿ, ಅದ್ಭುತ ವೇದಜ್ಞಾನ, ಪ್ರಾಣಶಕ್ತಿ - ಎಲ್ಲವನ್ನೂ ಪಡೆದುಕೊಂಡು, ಮೈವೆತ್ತ ದಿವ್ಯಶಕ್ತಿಗಳಂತೆ ವಿರಾಜಿಸುತ್ತಾರೆ. ಸತತವೂ ಸಾಧಿಸಿಕೊಂಡು ಬಂದ ಸಂಯಮದ ಮಧುರ ಮಹಿಮೆಯ ಪರಿಣಾಮದಿಂದ ಆದರ್ಶ ಮಾನವರಾಗಿ ಗುರುಕುಲದಿಂದ ಮರಳಿ ಪಿತೃಗೃಹಕ್ಕೆ ಪ್ರವೇಶಿಸುತ್ತಾರೆ. ಸಚ್ಚರಿತ್ರೆಯ ಸ್ಫುಟ ಸತ್ಯದ ಪ್ರಭಾವದಿಂದ ಸರ್ವರ ಸ್ತುತಿಗೂ ಪಾತ್ರರಾಗುತ್ತಾರೆ. ನಿಜವಾದ ಬ್ರಹ್ಮಚರ್ಯದ ಬಣ್ಣಿಸಲಾಗದ ಬಲ್ಮೆಯಿದು.
     ಕನ್ಯೆಯರ ಕಾಯ, ಪ್ರಕೃತಿ ನಿಯಮಾನುಸಾರ ಪುರುಷ ಶರೀರಕ್ಕಿಂತ ಬೇಗನೇ ಯೌವನದಲ್ಲಿ ಪ್ರವೇಶ ಮಾಡುವ ಕಾರಣ, ಅವರ ಬ್ರಹ್ಮಚರ್ಯದ ಕನಿಷ್ಠ ಮಿತಿ 16 ವರ್ಷಗಳದ್ದಾಗಿದೆ. ಆದರೆ, ಕನ್ಯೆಯರೇ ಆಗಲಿ, ಬ್ರಹ್ಮಚರ್ಯದ ಕನಿಷ್ಠ ಮಿತಿ ತೀರಿದೊಡನೆ, ವಿವಾಹಿತರಾಗಲೇಬೇಕೆಂಬ ಬಲವದ್ಬಂಧನವೇನೂ ಇಲ್ಲ. ಆ ಮನೋಭಾವ, ಮನೋನಿಗ್ರಹ ಸಾಮರ್ಥ್ಯ, ಯಾವುದಾದರೊಂದು ಉನ್ನತ ಧ್ಯೇಯಕ್ಕಾಗಿ ಜೀವನವನ್ನು ಮೀಸಲಿಡುವ ಧೃಢವಾದ ಭಾವನೆಯಿದ್ದಲ್ಲಿ, ತಮಗೆ ಸೂಕ್ತವೆಂದು ತೋರುವಷ್ಟು ಕಾಲ ಅಥವಾ ಜೀವನ ಪೂರ್ತ ಬ್ರಹ್ಮಚರ್ಯಾಶ್ರಮದಲ್ಲೇ ಇರಬಹುದು. ಆದರೆ ಇದು ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ.
-ಕ.ವೆಂ.ನಾಗರಾಜ್.
*****************
ದಿನಾಂಕ 17.06.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜುಲೈ 2, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -8: ಸಮಾಧಿ, ಸುಷುಪ್ತಿ, ಮೋಕ್ಷ


     ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಸಾಧಿಸುವುದೇ ವೈದಿಕ ಧರ್ಮದ ದೃಷ್ಟಿಯಲ್ಲಿ ಮಾನವಜೀವನದ ಉದ್ದೇಶವಾಗಿದೆ. ಆತ್ಮ ಮತ್ತು ಪರಮಾತ್ಮಜ್ಞಾನವನ್ನು ಸತ್ಕರ್ಮಗಳು, ಸತ್ಯನುಷ್ಠಾನಗಳು, ಸಚ್ಚಿಂತನೆಗಳಿಂದ ಸಂಪಾದಿಸಬಹುದಾಗಿದೆ. ಸಮಾಧಿ, ಸುಷುಪ್ತಿ ಮತ್ತು ಮೋಕ್ಷಗಳು ಜೀವಾತ್ಮನ ಸ್ಥಿತಿಗಳಾಗಿದ್ದು, ಜ್ಞಾನ-ಕರ್ಮ-ಉಪಾಸನೆಗಳು ಈ ಸ್ಥಿತಿಗಳನ್ನು ಹೊಂದಲು ಸಹಕಾರಿಯಾಗಿವೆ. ಇವುಗಳ ಕುರಿತು ಪಂಡಿತರು ಸತ್ಸಂಗದಲ್ಲಿ ವಿವರಿಸಿದ್ದನ್ನು ಈ ಕಂತಿನಲ್ಲಿ ಮಂಡಿಸಿದೆ.
*************
ಸಮಾಧಿ
     'ಸಮಾಧಿ, ಸುಷುಪ್ತಿ, ಮೋಕ್ಷೇಶು ಬ್ರಹ್ಮರೂಪಪ' - ಸಾಂಖ್ಯ ದರ್ಶನದಲ್ಲಿ ಕಪಿಲಾಚಾರ್ಯರು ಹೀಗೆ ಹೇಳುತ್ತಾರೆ. ಕಪಿಲಾಚಾರ್ಯರನ್ನು ಅನೇಕರು ನಾಸ್ತಿಕರು ಎನ್ನುತ್ತಾರೆ. ಅವರು ನಾಸ್ತಿಕರಲ್ಲ, ಅವರನ್ನು ನಾಸ್ತಿಕರು ಅನ್ನುವವರೇ ನಾಸ್ತಿಕರು. ಪರಮಾತ್ಮ ಸರ್ವಜ್ಞ, ಎಲ್ಲವನ್ನೂ ಮಾಡುವವನು, ಅವನನ್ನು ನಾವು ಈಶ್ವರ ಅಂತ ಭಾವಿಸುತ್ತೇವೆ. ಭಗವಂತ ಈ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಪ್ರಕೃತಿ ಇಲ್ಲದಿದ್ದರೆ ಭಗವಂತ ಏನೂ ಮಾಡಲಾಗುತ್ತಿರಲಿಲ್ಲ. ಒಳ್ಳೆಯ ನಿಪುಣ ಟೈಲರ್ ಹತ್ತಿರ ಹೋಗಿ ಬಟ್ಟೆಯನ್ನು ಕೊಡದೆ 'ನನಗೊಂದು ಅಂಗಿ ಹೊಲೆದುಕೊಡು' ಅಂದರೆ ಅವನು ಹೇಗೆ ಹೊಲಿಯುತ್ತಾನೆ? ಹೊಲೆಯಲು ಅವನಿಗೆ ಬಟ್ಟೆ ಕೊಡಬೇಕು. ಹಾಗೆಯೇ ಈ ಪ್ರಕೃತಿ ಇಲ್ಲದಿದ್ದರೆ, ಈ ಜಡ ಪ್ರಕೃತಿ ಇಲ್ಲದಿರುತ್ತಿದ್ದರೆ, ಭಗವಂತನಿಗೆ ಈ ಜಗತ್ತನ್ನು ಸ್ಥಾಪನೆ ಮಾಡಲು, ಸೃಷ್ಟಿ ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಇದನ್ನು ಅರಿತುಕೊಂಡು ನಾವು ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಯಾವಾಗ ನಾವು ಕೆಳಕ್ಕೆ ಬೀಳುತ್ತೇವೆ, ಅಂದರೆ ಆ ಪ್ರಕೃತಿಗೆ ವಶವಾದಂತೆ, ನಾವು ಪರಮಾತ್ಮನನ್ನು ಮರೆತುಬಿಡ್ತೇವೆ, ಪ್ರಕೃತಿಗೆ ವಾಲುತ್ತೇವೆ, ಪರಮಾತ್ಮ ಇಲ್ಲದಿದ್ದರೆ ಪ್ರಕೃತಿ ತನ್ನಿಂದ ತಾನೇ ಏನೂ ಮಾಡುವಂತಿಲ್ಲ. ವಾಯು ಬೀಸುತ್ತದೆ, ತನ್ನಷ್ಟಕ್ಕೆ ತಾನೇ ಬೀಸುತ್ತದೇನು? ಸಾಧ್ಯವಿಲ್ಲ. ಆ ಬೀಸುವ ಹಾಗೆ ಮಾಡುವವನು ಪರಮಾತ್ಮ.  ಬೆಂಕಿ ಸುಡುತ್ತೆ, ಅದಕ್ಕೆ ಸುಡುವ ಶಕ್ತಿ ಕೊಟ್ಟವರಾರು? ಪಂಚಭೂತಗಳೂ ಅಷ್ಟೆ. ಹೀಗೆ ಯೋಚನೆ ಮಾಡುತ್ತಾ ಹೋಗಿ. ಎಲ್ಲಕ್ಕೂ ಮೂಲಶಕ್ತಿ ಆ ಭಗವಂತನೇ. ಜಡ ಪ್ರಕೃತಿ ತನ್ನಷ್ಟಕ್ಕೆ ತಾನೇ ಏನೂ ಮಾಡಲಾರದು. ಇದನ್ನೇ ಕಪಿಲ ಮಹರ್ಷಿಗಳೂ ಹೇಳುತ್ತಾರೆ, ಅವರನ್ನು ನಾಸ್ತಿಕರು ಅಂತ ಹೇಗೆ ಹೇಳುವುದು? ಅವರು ಹೇಳುತ್ತಾರೆ: ಸಮಾಧಿ, ಸುಷುಪ್ತಿ, ಮೋಕ್ಷ - ಈ ಮೂರು ಸ್ಥಿತಿಯಲ್ಲಿ ಜೀವಾತ್ಮನಿಗೆ ಬ್ರಹ್ಮ ರೂಪ ಬರುತ್ತೆ ಅಂತ. ಸಮಾಧಿ ಅಂದರೆ ಎಲ್ಲವನ್ನೂ ಮರೆತು ಮನಸ್ಸು ಸ್ಥಿರವಾಗಿ ನಿಂತು ಪರಮಾತ್ಮನನ್ನು ಧ್ಯಾನಿಸಿದಾಗ, ಜೀವಾತ್ಮ ಇದ್ದೂ ಕೂಡ ಇಲ್ಲದ ಹಾಗೆ ಆದಾಗ, ಜೀವಾತ್ಮ ತನ್ನ ಇರವನ್ನು ತಾನೇ ಮರೆತು ಭಗವಂತನಲ್ಲಿ ಮನಸ್ಸನ್ನು ಸ್ಥಿರಗೊಳಿಸಿದಾಗ ಭಗವಂತ ಬಿಟ್ಟು ಬೇರೇನೂ ಕಾಣದಿದ್ದಾಗ ಉಂಟಾಗುವ ಸ್ಥಿತಿ ಇದೆಯಲ್ಲಾ ಅದನ್ನು ಸಮಾಧಿ ಅನ್ನುತ್ತಾರೆ. ಈಗ ಹೇಳುತ್ತಾರಲ್ಲಾ, ಸತ್ತ ಮೇಲೆ ಹೂಳಿದ ನಂತರ ಅಥವ ಸುಟ್ಟ ನಂತರ ಕಟ್ಟುವ ಕಟ್ಟೆ ಇದೆಯಲ್ಲಾ, ಅದು ಸಮಾಧಿ ಅಲ್ಲ. ಒಳ್ಳೆಯ ವಿಚಾರದಲ್ಲಿ ಎಲ್ಲಿ ಮನಸ್ಸು ಮತ್ತು ಆತ್ಮ ಸ್ಥಿರವಾಗಿ ನಿಲ್ಲುತ್ತೋ ಅದು ಸಮಾಧಿ. ಅದು ಒಂದು ಅವಸ್ಥೆ. ಈ ಸ್ಥಿತಿಯಲ್ಲಿ ಜೀವಾತ್ಮ ತಾನು ಅಲ್ಪಜ್ಞ, ಅಲ್ಪಶಕ್ತ  ಎಂಬ ಎಲ್ಲಾ ಭಾವನೆಯನ್ನೂ ಮರೆತುಬಿಡುತ್ತಾನೆ, ಪರಮಾತ್ಮನಲ್ಲಿ ನೆಲೆ ನಿಲ್ಲುತ್ತಾನೆ.
ಸುಷುಪ್ತಿ
     ಸುಷುಪ್ತಿ - ನಿದ್ದೆ, ಒಳ್ಳೆಯ ನಿದ್ದೆ! ಶ್ರೀಮಂತನೂ ನಿದ್ದೆ ಮಾಡ್ತಾನೆ, ಬಡವನೂ ನಿದ್ದೆ ಮಾಡ್ತಾನೆ. ಶ್ರೀಮಂತನ ನಿದ್ದೆ ಚಂಚಲವಾಗಬಹುದು, ಎಲ್ಲಿ ತನ್ನ ಶ್ರೀಮಂತಿಕೆಯನ್ನು ಯಾರು ಕೊಳ್ಳೆ ಹೊಡೀತಾರೋ ಅಂತ ಯೋಚನೆಯಲ್ಲಿ ಹಣದ ಮೇಲೆ ಮನಸ್ಸು ನಿಂತಿರುತ್ತದೆ. ಬಡವನಿಗೆ ಹಾಗಲ್ಲ, ಚಾಪೆ ಇದ್ದರೆ ಚಾಪೆ, ನೆಲ ಇದ್ದರೆ ನೆಲ, ಮಲಗುತ್ತಾನೆ, ಚೆನ್ನಾಗಿ ನಿದ್ದೆ ಹೋಗುತ್ತಾನೆ. ಕಾರಣವೇನೆಂದರೆ ಕಳೆದುಕೊಳ್ಳುವುದಕ್ಕೆ ಅವನ ಹತ್ತಿರ ಜಾಸ್ತಿ ಇಲ್ಲ. ಯಾವನ ಹತ್ತಿರ ಕಳೆದುಕೊಳ್ಳುವುದಕ್ಕೆ ಬಹಳ ಕಡಿಮೆ ಇರುತ್ತೋ ಅವನೇ ಸುಖಿ. ನನ್ನ ಹತ್ತಿರ ಒಂದು ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಕಳೆದುಹೋಯಿತು. ಪರವಾಗಿಲ್ಲ, ಮತ್ತೆ ಗಳಿಸಬಹುದು. ಅದೇ ಒಂದು ಕೋಟಿ ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಅದು ಕಳೆದುಹೋಯಿತು ಅಂದರೆ ಅಷ್ಟು ಸುಲಭವಾಗಿ ಸಹಿಸಿಕೊಳ್ಳಲು ಆಗುವುದಿಲ್ಲ. ಈ ಮಾತನ್ನು ಒತ್ತಿ ಒತ್ತಿ ಶಂಕರಾಚಾರ್ಯರೂ ಹೇಳ್ತಾರೆ, ಮಧ್ವಾಚಾರ್ಯರೂ ಹೇಳ್ತಾರೆ, ರಾಮಾನುಜಾಚಾರ್ಯರೂ ಹೇಳ್ತಾರೆ, ಭಾಷೆ/ರೀತಿ ಬೇರೆ ಅಷ್ಟೆ. ಶಂಕರಾಚಾರ್ಯರು 'ಜ್ಞಾನವಿಲ್ಲದೆ ಮುಕ್ತಿಯಿಲ್ಲ' ಅಂತ ಹೇಳ್ತಾರೆ, ರಾಮಾನುಜರು 'ಭಗವಂತನಲ್ಲಿ ಸಂಪೂರ್ಣ ಆತ್ಮಸಮರ್ಪಣೆ ಮಾಡಿಕೊಂಡರೆ ಮುಕ್ತಿ ಸಿಗುತ್ತೆ' ಅಂತಾರೆ, ಮಧ್ವಾಚಾರ್ಯರೂ  'ನಿನ್ನನ್ನು ನೀನು ಮರೆ' ಅಂತ ಹೇಳ್ತಾರೆ. ಪರಮಾತ್ಮನನ್ನು ನಾರಾಯಣ ಅಂತ ಕರೀತಾರೆ. ಅವನನ್ನು ಶಂಕರ ಅಂತಲಾದರೂ ಕರೆಯಿರಿ, ಶಿವ ಅಂತಲಾದರೂ  ಕರೆಯಿರಿ, ಯಾವ ಹೆಸರಿನಿಂದಾದರೂ ಕರೆಯಿರಿ, ಏನೂ ಬಾಧಕವಿಲ್ಲ. ನಾವು ಅರ್ಥ ಮಾಡಿಕೊಳ್ಳುವದಕ್ಕೆ ಹೋಗುವುದಿಲ್ಲ. ಪದಗಳನ್ನು ತೆಗೆದುಕೊಂಡು ಬಿಡುತ್ತೇವೆ! ಅವನಿಗೊಂದು ಜಾಗ ಕಲ್ಪಿಸಬೇಕಲ್ಲಾ, ಸರಿ ವೈಕುಂಠ ಆಯ್ತು.  ನಾವು ದೇವರಿಗೆ ಬೇರೆ ಬೇರೆ ಲೋಕ ಕಟ್ಟಿಸಿಕೊಟ್ಟುಬಿಡುತ್ತೇವೆ. ವೈಕುಂಠದಲ್ಲಿ ನಾರಾಯಣ ಇರುತ್ತಾನೆ, ಕೈಲಾಸದಲ್ಲಿ ಶಿವ ಇರುತ್ತಾನೆ, ಹೀಗೆ.  ಇದೆಲ್ಲಾ ನಮ್ಮ ಕಲ್ಪನೆ. ಪೌರಾಣಿಕರ ಪ್ರಕಾರ ದೇವರು ಈ ಲೋಕಕ್ಕೆ ಸಂಬಂಧಿಸಿದವನಲ್ಲ. ಬೇರೆ ಲೋಕದಲ್ಲಿರೋ ಭಗವಂತನಾದರೋ ನಮಗೇಕೆ ಬೇಕು? ಸುಷುಪ್ತಿ - ಅಂದರೆ ಒಳ್ಳೆಯ ಸ್ವಾಭಾವಿಕವಾದ ನಿದ್ದೆ. ಆ ಸ್ಥಿತಿಯಲ್ಲಿ ಕೂಡ ನಾವು ಆನಂದ ಪಡೆಯುತ್ತೇವೆ. ಅಲ್ಲಿ ಬಾಹ್ಯ ಪ್ರಪಂಚ ಇರುವುದಿಲ್ಲ.
ಮೋಕ್ಷ
     ಮೋಕ್ಷ ಇದ್ದೇ ಇದೆ. ಅಲ್ಲಿ ಪ್ರಕೃತಿಯ ಬಂಧನವೇ ಇಲ್ಲ, ಆ ಭಗವಂತನ ಸಾನ್ನಿಧ್ಯದಲ್ಲಿ ಆನಂದವನ್ನು ನೇರವಾಗೇ ಪಡೆಯುತ್ತೇವೆ. 'ಬ್ರಹ್ಮರೂಪಪ' ಅಂತ ಹೇಳ್ತಾರೆ, ಜ್ಞಾಪಕವಿಟ್ಟುಕೊಳ್ಳಿ. ಮೋಕ್ಷದಲ್ಲಿ ಇವನೇ ಬ್ರಹ್ಮ ಆಗಿಬಿಡ್ತಾನೆ ಅಂತ ಅಲ್ಲ. ಜೀವಾತ್ಮ ಯಾವಾಗಲೂ ಜೀವಾತ್ಮನೇ, ಹಿಂದೆಯೂ ಜೀವಾತ್ಮ, ಮುಂದೆಯೂ ಜೀವಾತ್ಮನೇ, ಅನಂತಕಾಲದವರೆಗೂ ಜೀವಾತ್ಮನೇ. ಅದು ಎಂದೂ ಪರಮಾತ್ಮ ಆಗುವುದಿಲ್ಲ. ನಮ್ಮಲ್ಲಿ ಒಂದು ಕಲ್ಪನೆ ಇದೆ, ಸತ್ತ ಮೇಲೆ ಭಗವಂತನಲ್ಲಿ ಸೇರಿ ಹೋಗಿಬಿಡ್ತಾರೆ ಅಂತ. ಹಾಗೆ ಸೇರುತ್ತಾ ಹೋದರೆ ಪರಮಾತ್ಮ ಬೆಳೆಯುತ್ತಾ ಹೋಗಬೇಕಲ್ಲಾ! ಎಲ್ಲರೂ ಸತ್ತು ಸತ್ತು ಸೇರುತ್ತಾ ಹೋದರೆ ದೊಡ್ಡ ಪರಮಾತ್ಮ ಆಗಬೇಕಲ್ಲಾ! ಇದು ಪರಮಾತ್ಮನ ಭಕ್ತರು ಆಡುವ ಮಾತೇ ಇದು? ಪರಮಾತ್ಮನನ್ನು ಹಾಸ್ಯ ಮಾಡಿದಂತೆ.
     ಮೋಕ್ಷ ಅನ್ನುವುದು ಯಾವ ನಿಶ್ಚ್ಚಿತವಾದ ಸ್ಥಳ ಅಥವ ಲೋಕವಲ್ಲ. ಅದು ಜೀವಾತ್ಮನ ಒಂದು ಸ್ಥಿತಿ ಮಾತ್ರ. ಆ ಸ್ಥಿತಿಯಲ್ಲಿ ಅವನ ಇಂದ್ರಿಯಗಳು, ಮನಸ್ಸು, ಬುದ್ಧಿಗಳ ಹಿಡಿತದಿಂದ, ದೇಹಬಂಧನದಿಂದ ಬಿಡುಗಡೆ ಹೊಂದಿ ಅಶರೀರನಾಗಿರುತ್ತಾನೆ. ಆಧಿದೈವಿಕ, ಆಧಿಭೌತಿಕ ಮತ್ತು ಆಧ್ಯಾತ್ಮಿಕ ಎಂದರೆ, ಪ್ರಾಕೃತಿಕ ಪ್ರಕೋಪಗಳಿಂದ, ಬೇರೆ ಪ್ರಾಣಿಗಳಿಂದ ಮತ್ತು ತನ್ನ ಸ್ವಂತ ಅಜ್ಞಾನದಿಂದ ಉಂಟಾಗುವ ತಾಪಗಳಿಂದ ಬಿಡುಗಡೆ ಹೊಂದಿ, ಕೇವಲ ಬ್ರಹ್ಮಾನಂದವನ್ನು ಅನುಭವಿಸುತ್ತಾ ಇರುತ್ತಾನೆ. ಈ ಸ್ಥಿತಿಯಲ್ಲಿ ಎಲ್ಲಿ ಬೇಕಾದರೂ ಹೋಗಬಲ್ಲವನಾದ ಅವನಿಗೆ ಭೌತಿಕಜಗತ್ತಿನ ಸಂಪರ್ಕ ಮಾತ್ರ ಇರುವುದಿಲ್ಲ. ಈ ಸ್ಥಿತಿ ಮುಟ್ಟಬೇಕಾದರೆ ಜ್ಞಾನ-ಕರ್ಮ-ಉಪಾಸನಾಯುಕ್ತವಾದ ಧಾರ್ಮಿಕಜೀವನವನ್ನು ಪೂರ್ಣತಃ ಪಾಲಿಸಬೇಕು. ಕೊನೆಗೆ ಆಧ್ಯಾತ್ಮಿಕ ಸಾಧನಾಪಥದಲ್ಲಿ ನಡೆದು ಪರಮಾತ್ಮನ ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬೇಕು. ನಾವು ಮಾಡುವ ಸತ್ಕರ್ಮಗಳು ಮತ್ತು ಉಪಾಸನೆ ಪರಮಾತ್ಮನ ಜ್ಞಾನದಲ್ಲಿ ಸಮಾಪ್ತವಾದಾಗಲೇ ಮೋಕ್ಷ.
ವೇದಾಹಮೇತಂ ಪುರುಷಂ ಮಹಾಂತಮಾದಿತ್ಯವರ್ಣಂ ತಮಸಃ ಪರಸ್ತಾತ್ | ತ್ವಮೇವ ವಿದಿತ್ಯಾತಿ ಮೃತ್ಯುಮೇವ ನಾನ್ಯಃ ಪಂಥಾ ವಿದ್ಯತೇಯನಾಯ || (ಯಜು.೩೧.೧೮.)
     'ನಾನು ಅಜ್ಞಾನಾಂಧಕಾರದಿಂದ ಮೇಲೆದ್ದು, ಅಖಂಡ ತೇಜಸ್ವಿಯಾದ ಬ್ರಹ್ಮಾಂಡವೆಂಬ ಪುರದಲ್ಲಿ ವ್ಯಾಪಕನಾಗಿರುವ ಪರಮಾತ್ಮನನ್ನು ತಿಳಿದಿದ್ದೇನೆ. ಅವನನ್ನೇ ಅರಿತು, ಮಾನವನು ಸಾವನ್ನು ಅಥವ ಮರ್ತ್ಯಲೋಕವನ್ನು ದಾಟಿ ಹೋಗುತ್ತಾನೆ. ಆತ್ಮನ ಸದ್ಗತಿಗೆ ಬೇರೆ ಮಾರ್ಗ ಇರುವುದೇ ಇಲ್ಲ' ಎಂಬುದು ಇದರ ಅರ್ಥ.
     ಈ ಮೋಕ್ಷ ಅನ್ನುವುದು ಅನಂತ ಸ್ಥಿತಿಯಲ್ಲ. ಸಾಂತ ಸಾಧನೆಯಿಂದ ಅನಂತ ಮೋಕ್ಷವೆಲ್ಲಿ ಸಿಕ್ಕೀತು? ಜೀವಾತ್ಮ ಅನಂತವಾಗಿದ್ದು ಸಾಯುವಂತಿಲ್ಲ, ಹೊಸ ಜೀವಾತ್ಮ ಹುಟ್ಟುವಂತೆಯೂ ಇಲ್ಲ. ಇರುವ ಜೀವಾತ್ಮವೇ ಅನಾದಿ, ಅನಂತವಾಗಿರುವುದರಿಂದ ಅತಿ ಸುದೀರ್ಘ ಕಾಲಾನಂತರದಲ್ಲಿ ಎಲ್ಲಾ ಜೀವಾತ್ಮರೂ ಮೋಕ್ಷ ಪಡೆಯುತ್ತಾರೆ ಮತ್ತು ಕಲ್ಷನೆಗೂ ಮೀರಿದ ಅವಧಿಯ ಅತಿ ದೀರ್ಘವಾದ ಮೋಕ್ಷಾವಸ್ಥೆ ಕಳೆದ ನಂತರ ಪುನಃ ಜೀವಿಗಳಾಗಿ ಜನಿಸುತ್ತಾರೆ. ಇಲ್ಲದಿದ್ದರೆ ಪರಮಾತ್ಮನ ಸೃಷ್ಟಿ-ಸ್ಥಿತಿ-ಲಯಗಳಿಗೆ ಅರ್ಥ ಉಳಿಯುವುದಿಲ್ಲ. ಮೋಕ್ಷಾವಸ್ಥೆ ಎಷ್ಟು ದೀರ್ಘವಾದುದೆಂದರೆ ಜನನ-ಮರಣಗಳಿಂದ ದೂರವಾದ ಸ್ಥಿತಿ ಎನ್ನಬಹುದಾದಷ್ಟು ದೀರ್ಘ ಅವಧಿಯದಾಗಿರುತ್ತದೆ.
ಪರಮಾತ್ಮನನ್ನು ಕಾಣುವುದು!
     ಸತ್ತ್ವಗುಣ ಹೆಚ್ಚಾಗಿ, ರಜೋಗುಣ ಕಡಿಮೆಯಾಗಿ, ತಮೋಗುಣ ಶೂನ್ಯವಾದಾಗ ನಮಗೆ ಸ್ವಲ್ಪ ಸ್ವಲ್ಪ ಪರಮಾತ್ಮನ ಅನುಭವವಾಗುವುದಕ್ಕೆ ಪ್ರಾರಂಭವಾಗುತ್ತದೆ. ಇದನ್ನು ಅನುಭವಿಸಿ ತಿಳಿಯಬೇಕೇ ಹೊರತು ಪದಗಳಲ್ಲಿ ವಿವರಿಸುವುದು ಕಷ್ಟ. ಜೀವಾತ್ಮ - ಪರಮಾತ್ಮ ಒಟ್ಟು ಸೇರಿದಾಗ ಆಗುವ ಅನುಭೂತಿ, ಆನಂದ ವರ್ಣಿಸಲಸದಳ. ಸಕ್ಕರೆಯ ರುಚಿಯೇ ಗೊತ್ತಿಲ್ಲದೆ ಇರುವವರಿಗೆ ಸಕ್ಕರೆ ಸಿಹಿ ಎಂದು ಇಪ್ಪತ್ತೈದು ಸಲ ಒತ್ತಿ ಒತ್ತಿ ಹೇಳಿದರೂ ಅರ್ಥವಾಗದೆ ಹೋಗಬಹುದು. ಆದರೆ ಸಕ್ಕರೆಯನ್ನು ಆತ ನಾಲಗೆಯ ಮೇಲಿರಿಸಿಕೊಂಡಾಗ ಅವನಿಗೆ ಅದರ ಸಿಹಿ ಅನುಭವಕ್ಕೆ ಬರುತ್ತದೆ. ಹಾಗೆಯೇ ಪರಮಾತ್ಮನನ್ನು ಅನುಭವಿಸಿಯೇ ತಿಳಿಯಬೇಕು. ಸಾಕ್ಷಾತ್ಕಾರ ಅನ್ನುವುದು ಸುಳ್ಳು. ಪರಮಾತ್ಮನನ್ನು ಕಾಣಲು ಬೇಕಾಗಿರುವುದು ಜ್ಞಾನದ ಕಣ್ಣು, ಒಳಗಣ್ಣು, ಅಂತಃಚಕ್ಷು, ಆ ಕಣ್ಣುಗಳಿಂದ ನಾವು ಭಗವಂತನನ್ನು ಕಾಣಬಹುದು.
     ಸೂರದಾಸರು ಹುಟ್ಟುಕುರುಡರು. ಅವರು ಕೃಷ್ಣನನ್ನು ವರ್ಣಿಸಿದ ರೀತಿ ನೋಡಿದರೆ ಕೃಷ್ಣ, ದೇವಕಿ, ಯಶೋದೆ, ಎಲ್ಲಾ ಎದುರಿಗೆ ಬಂದಂತೆ ಭಾಸವಾಗುತ್ತದೆ. ಹೇಗೆ ಸಾಧ್ಯವಾಯಿತು ಇದು? ಜನ್ಮಾಂತರದ ಸಂಸ್ಕಾರ, ಅಂತಃಚಕ್ಷುವಿನಿಂದ ನೋಡಿದರು. ಈಗಲೂ ಪರೀಕ್ಷೆ ಮಾಡಿ ನೋಡಿ, ದೇವರಿಗೆ ಆಕಾರ ಇಲ್ಲ, ಕಲ್ಪಿಸಿಕೊಳ್ಳಿ, ಯಾವ ಆಕಾರ ಬೇಕಾದರೂ ಕಲ್ಪಿಸಿಕೊಳ್ಳಿ. ನಾರಾಯಣ - ಶಂಖ, ಚಕ್ರ, ಗದಾಪದ್ಮಧಾರಿ, ಕಿರೀಟ ಹಾಕಿಕೊಂಡಿದ್ದಾನೆ, ತುಳಸಿಮಾಲೆ, ಪೀತಾಂಬರ ವಸ್ತ್ರ, ಏನೇನೋ ಕಲ್ಪಿಸಿಕೊಳ್ಳಿ, ಕಾಣಿ, ಆ ಚಿತ್ರ ಮನಸ್ಸಿಗೆ ಬರುತ್ತೆ, ನಿಜವಾಗಿಯೂ ಹಾಗೆ ಇದೆಯಾ? ನಿಜವಾಗಿ ಹಾಗಿಲ್ಲ. ನಿಮ್ಮ ಕಲ್ಪನೆಯಂತೆ ನಿಮಗೆ ಕಾಣುತ್ತೆ, ಅಷ್ಟೆ. ಹಾಗೆಯೇ ಶಿವ! ಪರಮಾತ್ಮನ ವಿಷಯ ಮಾತನಾಡುವಾಗ ಬಹಳ ಗಂಭೀರವಾಗಿ ಆಲೋಚಿಸಬೇಕು. ಪರಮಾತ್ಮ ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಅವನಿಲ್ಲದ ಜಾಗವೇ ಇಲ್ಲ. ಅಗ್ನಿಹೋತ್ರ ಮಾಡುವಾಗ, ಸಂಧ್ಯಾವಂದನೆ ಮಾಡುವಾಗ ಈ ಮಂತ್ರ ಹೇಳ್ತೇವೆ: ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ | ನಮಃ ಶಿವಾಯ ಚ ಶಿವತರಾಯ ಚ || (ಯಜು.೧೬.೪೧.) ಇದರ ಅರ್ಥ ಶಾಂತಿಸ್ವರೂಪನಿಗೆ ನಮಸ್ಕಾರ ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ ಎಂದು.
-ಕ.ವೆಂ.ನಾಗರಾಜ್.
***************
ದಿನಾಂಕ 10.06.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಜುಲೈ 1, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -7: ದೇವರೆಲ್ಲಿದ್ದಾನೆ?


     ಪರಮಾತ್ಮ ಸಾಕಾರನೋ, ನಿರಾಕಾರನೋ ಎಂಬ ಚರ್ಚೆ, ವಾದ-ವಿವಾದಗಳು ಇಂದಿನದಲ್ಲ. ಇದು ನಿಲ್ಲುವಂತಹದೂ ಅಲ್ಲ. ಪಂಡಿತರು 'ವೇದೋಕ್ತ ಜೀವನಪಥ' ಪುಸ್ತಕದಲ್ಲಿನ 'ಪರಮಾತ್ಮ ಸ್ವರೂಪ' ಎಂಬ ಅಧ್ಯಾಯದಲ್ಲಿ ಸಾಧಾರವಾಗಿ ಪರಮಾತ್ಮ ನಿರಾಕಾರಿ ಎಂಬ ಕುರಿತು ಸವಿಸ್ತಾರವಾಗಿ ವೇದಮಂತ್ರಗಳ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ. ಅವರು ತಮ್ಮ ವಾದವನ್ನೇ ಎಲ್ಲರೂ ಒಪ್ಪಬೇಕೆಂಬ ಅಭಿಪ್ರಾಯದವರಲ್ಲ. ವಿಚಾರ ಮಾಡಿ, ವಿಮರ್ಶಿಸಿ, ಚರ್ಚಿಸಿ, ನಿಮ್ಮದೇ ಆದ ನಿರ್ಧಾರಕ್ಕೆ ಬನ್ನಿ ಎಂದು ಒತ್ತಿ ಹೇಳುತ್ತಾರೆ. ಸತ್ಸಂಗವೊಂದರಲ್ಲಿ ಚುಟಕಾಗಿ ಈ ವಿಷಯದಲ್ಲಿ ಹೇಳಿದುದನ್ನು ಈ ಕಂತಿನಲ್ಲಿ ದಾಖಲಿಸಿದೆ. ಸತ್ಯ ಕಹಿಯಾಗಿರುತ್ತದೆ, ಸತ್ಯದ ಹಾದಿ ಎಂದೂ ಸುಲಭವಾಗಿರುವುದಿಲ್ಲ. ಜನರ ವೈಚಾರಿಕ ಶಕ್ತಿ ಜಾಗೃತವಾಗಲಿ ಎಂಬುದೇ ಅವರ ಉದ್ದೇಶ.
****************
ಕರ್ತವ್ಯ ಮತ್ತು ಮಾನಾಪಮಾನ
     ಪರಮಾತ್ಮ ಕಂಬದಂತೆ ಈ ಪ್ರಪಂಚ ಮತ್ತು ಆಕಾಶದಾಚೆರುವ ಪ್ರಪಂಚಗಳನ್ನೆಲ್ಲಾ ಆಧರಿಸಿದ್ದಾನೆ. ನಾವು ಸರ್ವಾಧಾರ ಪರಮಾತ್ಮನನ್ನು ಮರೆತುಬಿಡುತ್ತೇವೆ. ನಮಗೆ ಕಷ್ಟ ಬಂದಾಗ 'ಇನ್ನೇನಪ್ಪಾ ಗತಿ, ನಮ್ಮನ್ಯಾರು ಕಾಪಾಡುತ್ತಾರೆ' ಅಂತ ಗೋಳಿಡುತ್ತೇವೆ. ಸರ್ವರಕ್ಷಕ ಅವನಿರುವಾಗ ಹೆದರುವುದು ಏಕೆ? ಹಿಂದೊಮ್ಮೆ ವಿಗ್ರಹಾರಾಧನೆ ವಿಷಯದಲ್ಲಿ ಚರ್ಚೆ ಏರ್ಪಾಡಾಯಿತು. ದಯಾನಂದ ಸರಸ್ವತಿಯವರು ಒಂದು ಕಡೆ, ಕಾಶಿ ಪಂಡಿತರೆಲ್ಲಾ ಒಂದು ಕಡೆ. ಅಲ್ಲಿ ವಿಗ್ರಹಾರಾಧನೆ ವಿಷಯ ಬರಲೇ ಇಲ್ಲ. ವ್ಯಾಕರಣದ ಬಗ್ಗೆ ಕಿತ್ತಾಡಿದರು, ಆ ಸೂತ್ರ ಸರಿಯೋ ಈ ಸೂತ್ರ ಸರಿಯೋ ಅಂತ. ಎಲ್ಲಾ ಛಲ, ಕಪಟ. 'ಪ್ರತಿಮೆ ಇಲ್ಲದಿದ್ದರೆ ಮನಸ್ಸು ನಿಲ್ಲುವುದಿಲ್ಲ. ಪ್ರತಿಮಾರಾಧನೆ ಸಮರ್ಥಿಸುವ ವೇದಮಂತ್ರ ಇದು' ಎಂದು ಕೈಯಲ್ಲಿ ಬರೆದಿದ್ದ ಯಾವುದೋ ಕಾಗದವನ್ನು ಒಬ್ಬರು ದಯಾನಂದರಿಗೆ ಕೊಟ್ಟರು. ಅವರು ಅದು ಯಾವ ವೇದದ ಮಂತ್ರ ಎಂದು ನೋಡುತ್ತಿರುವಾಗ ಕಾಶಿ ಪಂಡಿತರೆಲ್ಲಾ ದಯಾನಂದರಿಗೆ ಉತ್ತರ ಕೊಡಲಾಗಲಿಲ್ಲ ಎಂದು ಎದ್ದುಬಿಟ್ಟರು. ಸಭೆಯಲ್ಲಿ ಗಲಾಟೆಯಾಯಿತು. ಪುಂಡರೂ ಅಲ್ಲಿ ಸೇರಿದ್ದು ದಯಾನಂದರ ಮೇಲೆ ಕಲ್ಲು, ಇಟ್ಟಿಗೆ ಚೂರುಗಳಿಂದ ಪ್ರಹಾರ ಮಾಡಿದರು. ಆ ಮಹಾತ್ಮ ಸಹಿಸಿಕೊಂಡು ಸ್ವಲ್ಪವೂ ಅಲುಗಾಡದೆ ಶಾಂತವಾಗಿದ್ದರು. ಶಾಸ್ತ್ರಾರ್ಥದ ಗತಿ ಹೀಗಾಯಿತು. ಸುಳ್ಳು ಗೆದ್ದಿತು. ಸತ್ಯ ಗೆಲ್ಲಲಿಲ್ಲ. ವಿಷಯ ತಿಳಿದ ಸಂತ ಈಶ್ವರ ಸಿಂಹ ಎಂಬ ಸಿಖ್ಖರ ಗುರು ಒಬ್ಬರು ದಯಾನಂದರನ್ನು ಕಾಣಲು ಬಂದರು. ದಯಾನಂದರ ಹತ್ತಿರ ಗಂಟೆಗಟ್ಟಲೇ ಮಾತನಾಡಿದರೂ ದಯಾನಂದರು ಗಲಾಟೆಯ ವಿಷಯ ಎತ್ತಲೇ ಇಲ್ಲ. ದಯಾನಂದರು ಹೊದ್ದಿದ್ದ ಶಾಲು ಜಾರಿದಾಗ ಅವರ ಎದೆಯ ಮೇಲೆ ಕಲ್ಲಿನ ಹೊಡೆತದಿಂದಾಗಿದ್ದ ಗಾಯ ಕಂಡಿತು. ಸಿಖ್ ಗುರು ಮರುಗಿ, 'ಬಹಳ ಗಲಾಟೆಯಾಗಿದೆ. ಇಂದು ರಾತ್ರಿ ಕಳೆಯುವವವರೆಗಾದರೂ ಎಲ್ಲಾದರೂ ಅಡಗಿಕೊಂಡಿರುವುದು ಒಳ್ಳೆಯದು' ಎಂದು ಸಲಹೆ ಕೊಟ್ಟರು. ದಯಾನಂದರು ಹೇಳಿದರು: 'ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಮಾನ, ಅವಮಾನಗಳಿಗೆ, ಕಷ್ಟ, ನಷ್ಟಗಳಿಗೆ ಅಂಜಿದರೆ ಸನ್ಯಾಸಿಗಳಿಗೆ ಸೇವೆ ಮಾಡಲಾಗುವುದಿಲ್ಲ. ಇಂದು ಕಲ್ಲು, ಇಟ್ಟಿಗೆಗಳಿಂದ ಹೊಡೆದಿದ್ದಾರೆ. ನಾಳೆ ಪುಷ್ಪವೃಷ್ಟಿ ಮಾಡುತ್ತಾರೆ. ಸುಖ-ದುಃಖಗಳೆರಡೂ ಕೂಡ ಆ ಭಗವಂತ ಕೊಟ್ಟ ವರದಾನ. ನಿಷ್ಠೆಯಿಂದ ಸತ್ಯ ಬಿಡದಿರುವುದೇ ನಮ್ಮ ಧರ್ಮ. ಪ್ರಪಂಚವೆಲ್ಲಾ ಎದುರಾಗಲಿ, ರಕ್ಷಿಸುವ ಪರಮಾತ್ಮ ರಕ್ಷಣೆ ಕೊಟ್ಟೇ ಕೊಡುತ್ತಾನೆ'. ಜ್ಞಾಪಕ ಇಟ್ಟುಕೊಳ್ಳಿ, ಸತ್ಯದ ದಾರಿ ಯಾವತ್ತೂ ಸುಲಭವಲ್ಲ.
ದೇವರೆಲ್ಲಿದ್ದಾನೆ?
     ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ, ನನ್ನ ದೇವರು ರಾಮೇಶ್ವರದಲ್ಲಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ, ಆ ವಿಗ್ರಹದಲ್ಲಿದ್ದಾನೆ, ಈ ವಿಗ್ರಹದಲ್ಲಿದ್ದಾನೆ ಎನ್ನುವುದು ಎಷ್ಟು ಸರಿ? ಸೋಮೇಶ್ವರ ದೇವಸ್ಥಾನದ ಮೇಲೆ ಘಜನಿ ಮಹಮದ್ ಬಾರಿ ಬಾರಿ ದಾಳಿ ಮಾಡಿದ. ದೇವಸ್ಥಾನ ಧ್ವಂಸ ಮಾಡಿದ. ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಘಜನಿ ಮಹಮದ್ ಗೆದ್ದ, ಸೋಮೇಶ್ವರ ಸೋತ! ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ. ನಾನು ಹೇಳುತ್ತಾ ಇರುತ್ತೇನೆ, ನನಗೆ ಭಗವಂತನ ಭಯ ಇಲ್ಲ, ಅವನ ಭಕ್ತರ ಭಯ! ನಾನು ಹೀಗೆ ಹೇಳಿದರೆ ಅವರಿಗೆ ಕೋಪ ಬರುತ್ತೆ. ನನ್ನನ್ನು ನಾಸ್ತಿಕ ಎನ್ನುತ್ತಾರೆ. ಗೊಂಬೆಯನ್ನು ದೇವರು ಎಂದು ನಂಬದಿದ್ದರೆ ನಾಸ್ತಿಕ ಎನ್ನುವುದಾದರೆ ನಾನು ನಾಸ್ತಿಕನೇ. ದೇವರಿಲ್ಲದಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ. ಆ ಪರಮಾತ್ಮ ಕರ್ತ-ಧರ್ತ-ಸಂಹರ್ತ. ಪ್ರಪಂಚ ಸೃಷ್ಟಿ ಮಾಡುವವನು, ರಕ್ಷಿಸುವವನು ಮತ್ತು ನಾಶ ಮಾಡುವವನು ಅವನೇ. ಆ ದೇವರು ಕಾಣುವುದಿಲ್ಲ, ಅದಕ್ಕೇ ನಂಬುವುದಿಲ್ಲ ಅಂದರೆ ಬಹಳ ಕಷ್ಟ. ಕಣ್ಣಿಗೆ ಕಾಣುವುದಕ್ಕಿಂತ ಕಾಣಿಸದಿರುವುದೇ ಹೆಚ್ಚು. ವಾಯು ಇದೆ, ಕಣ್ಣಿಗೆ ಕಾಣುತ್ತಾ? ಆಕಾಶ ಇದೆ, ಅದನ್ನು ಕಾಣಲು ಎಷ್ಟು ಮೇಲಕ್ಕೆ ಹೋದರೆ ಅದು ಅಷ್ಟೂ ಮೇಲಕ್ಕೆ ಹೋಗುತ್ತೆ. ಏಕೆಂದರೆ ಅಲ್ಲಿ ಏನೂ ಇಲ್ಲ, ಶೂನ್ಯ. ಆ ಶೂನ್ಯಕ್ಕೆ ಬೇಲಿ ಕಟ್ಟಲು ಸಾಧ್ಯವೇ? ಇಷ್ಟೇ ಉದ್ದ, ಇಷ್ಟೇ ಅಗಲ, ಇಷ್ಟೇ ಎತ್ತರ ಎಂದು ನಿಗದಿ ಪಡಿಸಲು ಸಾಧ್ಯವೇ? ಆ ಪರಮಾತ್ಮ ಇದ್ದಾನೆ, ಅವನು ಶೂನ್ಯ ಅಲ್ಲ. ಅವನಿರುವುದರಿಂದಲೇ ಈ ಸೂರ್ಯ, ಚಂದ್ರ, ಭೂಮಿ, ಬ್ರಹ್ಮಾಂಡ ಎಲ್ಲಾ! ಆ ಭಗವಂತ ಎಷ್ಟು ಪ್ರಕಾಶಮಯವೆಂದರೆ ಅವನೆದುರಿಗೆ ಈ ಸೂರ್ಯ ಯಾವ ಲೆಕ್ಕಕ್ಕೂ ಇಲ್ಲ. ಆ ಸೂರ್ಯನೇ ಲೆಕ್ಕಕ್ಕಿಲ್ಲವೆಂದರೆ ಚಂದ್ರನ ಪಾಡೇನು? ನಕ್ಷತ್ರಗಳೂ ಅಷ್ಟೆ. ಆ ಪರಮಾತ್ಮನ ಜ್ಯೋತಿಯಿಂದಲೇ ಇವೆಲ್ಲಾ ಬೆಳಗುತ್ತಿವೆ. ಅಂತಹ ಜ್ಯೋತಿರ್ಮಯನಾದ ಪರಮಾತ್ಮನನ್ನು ಬಿಟ್ಟು ಯಾವತ್ತು ಕಲ್ಲು, ಮಣ್ಣು, ಮರಗಳಿಂದ ಮಾಡಿದ ಗೊಂಬೆಗಳನ್ನು ಪೂಜಿಸಲು ಪ್ರಾರಂಭಿಸಿದೆವೋ ಅವತ್ತಿನಿಂದಲೇ ನಮ್ಮ ಪತನ ಆರಂಭವಾಯಿತು. 
ನಾವೇನು ಮಾಡಬೇಕು?
     ದೇವರಿಗೆ 45 ಕೋಟಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿಕೊಡುತ್ತಾರೆ. ವಿಗ್ರಹಕ್ಕೆ ಏನು ಗೊತ್ತಾಗುತ್ತೆ? ವಜ್ರದ ಕಿರೀಟ ಇಡಿ, ತೆಗೆದು ಹಾಕಿ, ಮುಳ್ಳಿನ ಕಂತೆ ಇಡಿ, ಏನು ಮಾಡಿದರೂ ಸುಮ್ಮನಿರುತ್ತೆ. ಪೂರ್ಣ ತೃಪ್ತನಿಗೆ ನಾವು ಏನಾದರೂ ಕೊಟ್ಟು ತೃಪ್ತಿ ಕೊಡಲು ಸಾಧ್ಯವೇ? ದೇವರಿಗೆ ನೈವೇದ್ಯ ಅಂತ ಇಡ್ತೀವಿ. ಯಾವುದು ಆ ನೈವೇದ್ಯ? ಎಲ್ಲಿಂದ ಬಂತು? ತೆಂಗಿನಕಾಯಿಯಾಗಲಿ, ಹಣ್ಣು ಹಂಪಲಾಗಲೀ ಎಲ್ಲಿಂದ ಬಂತು? ನಾವು ಮಾಡಿದ್ದಾ? ಅದೂ ಭಗವಂತನದೇ. ಅವನದ್ದನ್ನೇ ಅವನಿಗೆ ಕೊಟ್ಟಂತೆ ಮಾಡಿ, ನಾವು ಹೇಳುತ್ತೇವೆ, ನಾನು ಭಗವದ್ಭಕ್ತ, ಅವನಿಗಾಗಿ ಇಷ್ಟೊಂದು ಖರ್ಚು ಮಾಡಿದ್ದೇನೆ, ಅಂತ. ನಾವು ಹಸಿವಿರುವವರಿಗೆ ಅನ್ನ ಹಾಕುವುದಿಲ್ಲ. ಹೊಟ್ಟೆ ತುಂಬಿದವರಿಗಾಗಿ ಮತ್ತು ಅಗತ್ಯವಿಲ್ಲದವುಗಳಿಗಾಗಿ ಖರ್ಚು ಮಾಡುತ್ತೇವೆ. ಬಡವರನ್ನು ಸಂತಯಿಸಿ, ಹಸಿದವರಿಗೆ ಅನ್ನವಿಡಿ, ದೀನರ ಸೇವೆ ಮಾಡಿ. ಇದು ನಿಜವಾದ ದೇವರ ಸೇವೆ, ಇದು ನಿಜವಾಗಿ ಪರಮಾತ್ಮನ ಮೇಲಿನ ಭಕ್ತಿ. ಪರಮಾತ್ಮನ ಮಕ್ಕಳಿಗೆ ಸಂತೋಷವಾದರೆ ಪರಮಾತ್ಮನಿಗೆ ಸಂತೋಷವಾಗದೆ ಇರುತ್ತದೆಯೇ?
ದೇವರು ಮೆಚ್ಚುವ ಕೆಲಸ ಮಾಡೋಣ
     ದುಡಿಯಬೇಕು, ತಿನ್ನಬೇಕು, ಅದು ನಿಜವಾದ ಊಟ. ತಿನ್ನುವವರೇ ತುಂಬಾ ಇದ್ದು, ದುಡಿಯುವವರು ಇಲ್ಲದಿದ್ದರೆ ಅನ್ನ ಎಲ್ಲಿಂದ ಬರಬೇಕು? ತುಂಬಾ ಕಷ್ಟ. ಸರ್ವಾಧಾರ ಪರಮಾತ್ಮ ಎಲ್ಲರಿಗೂ ಆಧಾರ ಹೌದು, ಆದರೆ ಸೋಮಾರಿಗಳ ಬಂಧು ಅಲ್ಲ. ಪರಮಾತ್ಮ ಎಲ್ಲರಿಗೂ ಕೊಡುತ್ತಾನೆ, ಯಾರಿಗೆ ಕೊಡುತ್ತಾನೆ? ದುಡಿಯುವವರಿಗೆ ಕೊಡುತ್ತಾನೆ. ವೇದ ಹೇಳುತ್ತೆ, ಕಷ್ಟ ಪಡು, ದುಡಿ, ಬೇರೆಯವರ ಶ್ರಮದ ಊಟ ನಮಗೆ ಬೇಡ, ನಮ್ಮ ಅನ್ನವನ್ನು ನಾವು ಸಂಪಾದಿಸೋಣ, ವೇದ ಹೀಗೆ ಹೇಳಿದರೆ ಇಂದು ನಾವು ನೋಡುತ್ತಿರುವುದೇನು? ಮನೆಯಲ್ಲಿ ಸಮಾರಂಭ, ಪೂಜೆ ಮಾಡಿ ಹೊಟ್ಟೆ ತುಂಬಿದವರಿಗೇ ಊಟ ಹಾಕುತ್ತೇವೆ, ಹಸಿದ ಭಿಕ್ಷುಕ ಹೊರಗೆ ಬೇಡಿ ಬಂದರೆ 'ಹೋಗಲೇ' ಅಂತ ಗದರಿಸಿ ಕಳಿಸಿಬಿಡುತ್ತೇವೆ. ಇದು ದಾನ ಮಾಡುವ ರೀತಿಯಾ? ಹಸಿದವರಿಗೆ ಅನ್ನ ಹಾಕಿ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡಿ, ಮನೆಯಿಲ್ಲದವರಿಗೆ ಮನೆ ಕಟ್ಟಿಸಿಕೊಡಿ,  ಇದು ಪುಣ್ಯದ ಕೆಲಸ. ಇದು ನಿಮ್ಮ ಕರ್ತವ್ಯ. ಇದು ಬಿಟ್ಟು ಸ್ವಾರ್ಥಿಗಳಾಗಿ ನಿಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡರೆ ಅದು ದೇವರು ಮೆಚ್ಚುವ ಕೆಲಸವಲ್ಲ. ಯಾವತ್ತೂ ಕೂಡ ಸ್ವಾರ್ಥಿಗೆ ತಾನು ಮಾಡುವುದು ತಪ್ಪು ಅಂತ ಅನ್ನಿಸುವುದೇ ಇಲ್ಲ. ನನ್ನ ಅನ್ನ ಸಂಪಾದಿಸಿ ತಿನ್ನುತ್ತೇನೆ, ಆ ಸಂಪಾದನೆ ಹೇಗಾದರೂ ಸರಿ, ಹತ್ತು ಜನರ ತಲೆ ಒಡೆದಾದರೂ ಸರಿ, ಅನ್ನುವುದು ಅವರ ಮಾತು. ಬೇರೆಯವರ ಶ್ರಮದ ಫಲವನ್ನು ಕಿತ್ತುಕೊಂಡು ಅನ್ಯಾಯವಾಗಿ ಹಣ ಸಂಗ್ರಹಿಸುವವರನ್ನು ಇಂದು ಕಾಣುತ್ತಿದ್ದೇವೆ. 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ಈ ಮಂತ್ರದ ಅರ್ಥ, ನೂರು ಕೈಗಳಿಂದ ದುಡಿ, ಸಾವಿರ ಕೈಗಳಿಂದ ದಾನ ಮಾಡು ಅಂತ. ಇದರ ಅರ್ಥ ನಿಮಗಾಗಿ ಮಾತ್ರ, ನಿಮ್ಮ ಕುಟುಂಬಕ್ಕಾಗಿ ಮಾತ್ರ ನೀವು ದುಡಿಯಬಾರದು. ಸಮಾಜದ ಹಿತವನ್ನೂ ಪರಿಗಣಿಸಬೇಕು ಎಂದು. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ, ಬ್ರಹ್ಮಚಾರಿ, ಗೃಹಸ್ಥ, ಸನ್ಯಾಸಿ, ಎಲ್ಲರಿಗೂ ಅನ್ವಯಿಸುತ್ತೆ. ಎಲ್ಲರ ಸುಖದಲ್ಲಿ ನಮ್ಮ ಸುಖ ಇದೆ. 'ಸರ್ವೇಜನಾಃ ಸುಖಿನೋ ಭವಂತು'. ಎಲ್ಲರೂ ಅನ್ನುವಲ್ಲಿ ನಾವೂ ಸೇರುತ್ತೇವೆ. ಎಲ್ಲರಿಗೂ ಸಿಕ್ಕಿದರೆ ನಮಗೂ ಸಿಗುತ್ತೆ, ಯಾರಿಗೂ ಸಿಗದಿದ್ದರೆ ನಮಗೂ ಇಲ್ಲ ಅಷ್ಟೆ. ಇದು ಈ ವೇದ ಮಂತ್ರದ ಅರ್ಥ. ಅರ್ಥ ಮಾಡಿಕೊಂಡು ಅನುಸರಿಸಿದರೆ ನಮ್ಮದು ಶ್ರೇಷ್ಠ ಜೀವನವಾಗುತ್ತದೆ. 
ನೋಯಿಸದಿರೋಣ
     ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ. ಪಿಪ್ಪಲಾದ ಎಂಬ ಋಷಿಗೆ ಆ ಹೆಸರು ಬಂದದ್ದು ಆತ ಕೆಳಗೆ ಬಿದ್ದಿದ್ದ ಫಲವನ್ನು ಮಾತ್ರ ತಿನ್ನುತ್ತಿದ್ದರಿಂದ. ಗೌತಮನಿಗೆ 'ಅಕ್ಷಪಾದ' -ಅಂದರೆ ಕಾಲಿನಲ್ಲಿ ಕಣ್ಣಿದ್ದವನು- ಎಂಬ ಹೆಸರೂ ಇತ್ತು. ಆತ ನಡೆದಾಡುವಾಗ ಯಾವುದೇ ಕ್ರಿಮಿ, ಕೀಟಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಅವರುಗಳು ಅಷ್ಟರಮಟ್ಟಿಗೆ ಇತರರನ್ನು ನೋಯಿಸಬಾರದೆಂಬ ಮನೋಭಾವ ಹೊಂದಿದ್ದರು. ಮಾತು ಅನ್ನುವುದು ಬಾಣವಿದ್ದಂತೆ. ಆಡಿದ ಮೇಲೆ ಮುಗಿಯಿತು. ಬಾಣ ತನ್ನ ಗುರಿಯನ್ನು ಛೇದಿಸುವಂತೆ ಪಾಪವನ್ನು ದೂರ ಮಾಡುವಂತಿರಬೇಕು, ಇತರರನ್ನು ಚುಚ್ಚುವಂತಿರಬಾರದು. ಮನಸ್ಸಿಗೆ ಹಿತ, ಸಂತೋಷ ತರಬೇಕು. ನಮಗೆ ಕೆಟ್ಟದಾದಾಗ, ತೊಂದರೆಯಾದಾಗ ಪರಮಾತ್ಮನನ್ನು ದೂಷಿಸುವುದು ಸರಿಯಲ್ಲ. ನಮಗೆ ಕೆಟ್ಟದಾಗಲು ಕಾರಣ ನಮ್ಮ ತಪ್ಪೇ ಹೊರತು ಪರಮಾತ್ಮನದಲ್ಲ ಎಂಬುದನ್ನು ಅರಿಯಬೇಕು. ನಮಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕೇ ಹೊರತು ಅವನನ್ನು ಬಯ್ಯಬಾರದು. ನಾವು ಹೊಗಳಿದರೂ ಅಷ್ಟೆ, ತೆಗಳಿದರೂ ಅಷ್ಟೆ, ಪರಮಾತ್ಮ ಪರಮಾತ್ಮನೇ. ಅವನು ನಿರ್ಲಿಪ್ತ. ಹೊಗಳುತ್ತಾರೆಂದು ಒಳ್ಳೆಯದು ಮಾಡುತ್ತಾನೆ, ತೆಗಳುತ್ತಾರೆಂದು ಕೆಟ್ಟದು ಮಾಡುತ್ತಾನೆ ಎಂದು ಭಾವಿಸುವುದು ಮೂರ್ಖತನ. ಎಲ್ಲಿ ನ್ಯಾಯ, ಸತ್ಯ, ಧರ್ಮ ಇರುತ್ತದೋ ಅಲ್ಲಿ ಭಗವಂತನಿರುತ್ತಾನೆ. ಇದರ ಅರಿವಾದರೆ ಪಾಪ ಮಾಡಲು ಧೈರ್ಯ ಬರುವುದಿಲ್ಲ. 
-ಕ.ವೆಂ.ನಾಗರಾಜ್.
*****************
ದಿನಾಂಕ ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: