ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 28, 2017

ಸುಲಭ ಸಂಪತ್ತಿನ ಮೋಹ


     ಏನನ್ನೂ ಕೊಡದೇ ಎಲ್ಲವೂ ಬೇಕೆನ್ನುವ ಮನುಷ್ಯನ ಸ್ವಭಾವವನ್ನು ಲೋಭವೆನ್ನೋಣವೇ, ದುರಾಸೆಯೆನ್ನೋಣವೇ? ಕೋಟ್ಯಾಧೀಶ್ವರರಾಗುವುದು ಹೇಗೆ? ಎಂಬ ಪುಸ್ತಕ ಬಿಡುಗಡೆಯಾದರೆ ಬೇಗನೇ ಮಾರಾಟವಾಗಿ ಮರುಮುದ್ರಣ ಕಾಣುತ್ತದೆ. ಪ್ರಕಾಶಕರು ಹಣ ಮಾಡಿಕೊಳ್ಳುತ್ತಾರೆ. ಲಾಟರಿ, ಕುದುರೆ ರೇಸು, ಬೆಟ್ಟಿಂಗ್, ಕಾಳಸಂತೆ, ಕಲಬೆರಕೆ, ಮಾದಕ ದ್ರವ್ಯಗಳು/ವಸ್ತುಗಳ ದಂಧೆ, ದರೋಡೆ, ಕಳ್ಳತನ, ವೇಶ್ಯಾವಾಟಿಕೆ, ದೇಶದ್ರೋಹ, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಇತ್ಯಾದಿಗಳಲ್ಲಿ ಹಲವರು ಆಸಕ್ತಿ ತಾಳುವುದೂ ಧಿಡೀರ್ ಶ್ರೀಮಂತಿಕೆಯ ಕನಸಿನಿಂದಲೇ. ಇವುಗಳಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿಯಾದರೂ ಶ್ರಮ ಪಡದೆ ಸಂಪತ್ತಿಗೆ ಒಡೆಯರಾಗಬಯಸುವವರೇ ಎಲ್ಲರೂ! ಈ ದುರಾಸೆ ವ್ಯಕ್ತಿಯನ್ನಲ್ಲದೆ ಸಮಾಜವನ್ನೂ ಅಧಃಪತನಕ್ಕೆ ತಳ್ಳುತ್ತದೆ. ಎಲ್ಲಿ ಅಕ್ರಮವಿರುವುದೋ ಅಲ್ಲಿ ಅನ್ಯಾಯವಿರುತ್ತದೆ, ಶೋಷಿತರಿರುತ್ತಾರೆ, ನೋವಿರುತ್ತದೆ, ಕ್ಷೋಭೆಯಿರುತ್ತದೆ.
     ಮನುಷ್ಯನ ಈ ಗುಣವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿರುವ ಖದೀಮರು ಎಲ್ಲೆಲ್ಲೂ ಕಾಣಸಿಗುತ್ತಾರೆ. ಮನಿ ಸರ‍್ಕ್ಯುಲೇಟಿಂಗ್ ಸ್ಕೀಮ್, ಹಣ ದ್ವಿಗುಣಗೊಳಿಸುವ ಪ್ರಲೋಭನೆ, ಚಿಟ್‌ಫಂಡ್ ಸಂಸ್ಥೆಗಳು, ಖೋಟಾನೋಟು ಚಲಾವಣೆ, ಹೀಗೆ ಹಲವಾರು ಬಗೆಯಲ್ಲಿ ಮಕ್ಮಲ್ ಟೋಪಿ ಹಾಕುತ್ತಾರೆ. ಮೊಬೈಲುಗಳಲ್ಲಿ ಲಾಟರಿ ಬಂದಿದೆಯೆಂತಲೋ, ಮತ್ತೇನೋ ಇದೇ ರೀತಿಯ ಸಂದೇಶಗಳನ್ನು ಕಂಡು ಮೋಸ ಹೋಗಿ ಹಣ ಕಳೆದುಕೊಳ್ಳುವವರಿದ್ದಾರೆ. ಜೀವಮಾನವೆಲ್ಲಾ ದುಡಿದು ಕಷ್ಟಪಟ್ಟು ಕೂಡಿಟ್ಟ ಹಣವನ್ನು, ಮಕ್ಕಳ ಮದುವೆ, ವಿದ್ಯಾಭ್ಯಾಸ, ಮುಂತಾದುವಕ್ಕೆ ತೆಗೆದಿಟ್ಟ ಹಣ, ಆಭರಣಗಳನ್ನು ಕಳವು/ದರೋಡೆ ಮಾಡುವವರಿದ್ದಾರೆ. ಎಟಿಎಮ್ಮುಗಳಲ್ಲಿ ಹಣ ಬಿಡಿಸಿಕೊಳ್ಳಲು ಹೋದವರನ್ನೇ ಹೆದರಿಸಿ ಹಣ ಕಿತ್ತು ಪ್ರಾಣಾಂತಿಕ ಹಲ್ಲೆ ಮಾಡಿರುವವರನ್ನೂ ಕಂಡಿದ್ದೇವೆ. ಸರ್ಕಾರದ ಖಜಾನೆಗೇ ಕನ್ನ ಹಾಕುವ ಅಧಿಕಾರಿಗಳು, ರಾಜಕಾರಣಿಗಳು ಇದ್ದಾರೆ. ಎಲ್ಲರದೂ ಒಂದೇ ಗುರಿ, ಕಡಿಮೆ ಶ್ರಮದಲ್ಲಿ ಹೆಚ್ಚು ಸಂಪಾದನೆ!
     ಶ್ರಮರಹಿತ ಸಂಪತ್ತು ಪಾಪದ ಗಳಿಕೆಯೆಂಬುದನ್ನು ಒಂದೆಡೆ ಇಟ್ಟುಬಿಡೋಣ. ಕೆಲವರು ಬಡವರ ಮನೆಯಲ್ಲಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ. ಹಿಂದಿನ ತಲೆಮಾರಿನವರು ಸಂಪತ್ತು ಕೂಡಿಟ್ಟಿದ್ದನ್ನು ಅವರ ಮಕ್ಕಳು ಶ್ರಮವಿಲ್ಲದೆ ಅನುಭವಿಸುವ ಸ್ಥಿತಿಯಲ್ಲಿರುತ್ತಾರೆ. ಬಡವರಾದರೋ ತುತ್ತಿಗಾಗಿ ಶ್ರಮ ಪಡಲೇಬೇಕು. ಕಷ್ಟಪಟ್ಟು ಗಳಿಸಿದ ಶ್ರೀಮಂತರಿಗೆ ಬಡತನದ ಅರಿವಿರುತ್ತದೆ. ಆದರೆ ಪಿತ್ರಾರ್ಜಿತವಾಗಿ ಬಂದ ಶ್ರೀಮಂತಿಕೆಗೆ ಬಡತನದ ಕಷ್ಟ, ನೋವುಗಳು ಅರ್ಥವಾಗಲಾರವು. ಮೇಲು-ಕೀಳುಗಳ ಅಂತಸ್ತಿನ ತಾರತಮ್ಯ ಉದ್ಭವವಾಗುವುದು ಇಲ್ಲಿಯೇ. ಅಂತಹವರು ಶ್ರಮಜೀವಿಗಳನ್ನು ಕೀಳಾಗಿ ನೋಡುತ್ತಾರೆ. ಹೊಟ್ಟೆಪಾಡಿಗೆ ಮನೆಗೆಲಸ ಮಾಡುವವರು, ಕೂಲಿಗಳು ಮುಂತಾದವರೊಂದಿಗೆ ಅವರು ವರ್ತಿಸುವ ರೀತಿಯಲ್ಲೇ ವ್ಯತ್ಯಾಸ ಗುರುತಿಸಬಹುದು. ಹಣದ ಮೋಹವೇ ಎಲ್ಲಾ ಕೆಡಕುಗಳ ಮೂಲ ಎಂದು ಬೈಬಲ್ ಹೇಳುತ್ತದೆ. ಗಮನಿಸಿ, ಹಣ ಕೆಡುಕಿನ ಮೂಲವಲ್ಲ, ಹಣದ ಮೋಹ ಕೆಡುಕುಗಳಿಗೆ ಕಾರಣ!
     ಸಂಪತ್ತು ಎಂದರೆ ಹಣ ಮಾತ್ರವಲ್ಲ, ಯಾವುದೇ ಆಗಲಿ ಹೇರಳವಾಗಿದ್ದರೆ ಅದನ್ನು ಸಂಪತ್ತು ಎನ್ನಬಹುದು. ಅದು ಅನುಭವ ಆಗಬಹುದು, ಜ್ಞಾನ ಆಗಬಹುದು. ಇಂತಹ ಸಂಪತ್ತು ಹೆಚ್ಚಾದಷ್ಟೂ ಒಳ್ಳೆಯದೇ. ಏಕೆಂದರೆ ಅನುಭವಗಳಾಗಲೀ, ಜ್ಞಾನವಾಗಲೀ ಶ್ರಮಪಡದೇ ಸಿಗುವಂತಹುದಲ್ಲ. ಇಂದು ಶ್ರಮಪಡದೇ ಡಿಗ್ರಿ/ಡಾಕ್ಟರೇಟ್ ಗಳಿಸುವುದು, ಪ್ರಶಸ್ತಿ, ಸಮ್ಮಾನಗಳನ್ನು ಪಡೆಯುವುದು ಸಾಧ್ಯವಿದೆಯೆಂಬುದು ಪರಿಸ್ಥಿತಿಯ ವ್ಯಂಗ್ಯವಾಗಿದೆ. ನೈಜ ಜ್ಞಾನಿಗಳಿಗೂ, ನಕಲಿ ಜ್ಞಾನಿಗಳಿಗೂ ಇರುವ ವ್ಯತ್ಯಾಸ ಅಸಲಿ ಬಂಗಾರ ಮತ್ತು ಕಾಗೆ ಬಂಗಾರಕ್ಕೆ ಇರುವಷ್ಟೇ ಆಗಿರುತ್ತದೆ. ಹುಳುಕು ಒಂದಲ್ಲಾ ಒಂದು ರೀತಿಯಲ್ಲಿ ಗೊತ್ತಾಗಿಬಿಡುತ್ತದೆ. ಕಷ್ಟಪಡದೆ ಶ್ರೀಮಂತಿಕೆಯಲ್ಲಿ ತೇಲಾಡುವ ಯುವಕ, ಯುವತಿಯರು ಹೇಗೆ ವರ್ತಿಸುತ್ತಿದ್ದಾರೆ, ಹೇಗೆ ಸಮಾಜದ ಕಾನೂನು-ಕಟ್ಟಳೆಗಳನ್ನು ಮೀರಿ ನಡೆಯುತ್ತಿದ್ದಾರೆ, ಸಮಾಜಕ್ಕೆ ಶತ್ರುಗಳಾಗಿದ್ದಾರೆ ಎಂಬುದು ದಿನಬೆಳಗಾದರೆ ನೋಡುವ, ಕೇಳುವ ಸುದ್ದಿಗಳೇ ಹೇಳುತ್ತವೆ. ಅಪರಾಧಗಳನ್ನು ಮಾಡಿಯೂ ಸಮರ್ಥಿಸಿಕೊಳ್ಳುವ ಅವರ ನಿರ್ಲಜ್ಜತೆ ಹೇವರಿಕೆ ತರಿಸುತ್ತವೆ.
     ಸಾಮಾನ್ಯವಾಗಿ ಶ್ರಮವಿರದ ಸಂಪತ್ತು ಅಕ್ರಮ ಸಂಪತ್ತೇ ಆಗಿದ್ದು,. ಅದರ ತಾಳಿಕೆ, ಬಾಳಿಕೆ ಕಡಿಮೆ. ಇದಕ್ಕೆ ಬಹಳ ಉದಾಹರಣೆಗಳು ಸಿಗುತ್ತವೆ. ಅದು ನೆಮ್ಮದಿಯನ್ನು ಹಾಳುಗೆಡವಿಬಿಡುತ್ತದೆ. ಅಕ್ರಮ ಸಂಪತ್ತು ಉಳಿಸಿಕೊಳ್ಳುವ ಯತ್ನದಲ್ಲಿಯೇ ಶೀಘ್ರವಾಗಿ ಕರಗಿಹೋಗುತ್ತದೆ ಮತ್ತು ಕೆಟ್ಟ ಕಾರ್ಯಗಳಿಗಾಗಿಯೇ ವಿನಿಯೋಗವಾಗುತ್ತದೆ. ಕಷ್ಟಪಟ್ಟು ಮಾಡುವ ಸಂಪಾದನೆ ಬೆಳೆಯುತ್ತಾ ಹೋಗುತ್ತದೆ ಮತ್ತು ಉತ್ತಮ ಮೌಲ್ಯ ಬಿಂಬಿಸುತ್ತದೆ. ಭೋಗವಾದ ಅಥವ ಕೊಳ್ಳುಬಾಕತನ ಶ್ರೀಮಂತರಾಗಿರುವ ಅನಿವಾರ್ಯತೆ ಸೃಷ್ಟಿಸಿ ಶ್ರಮವಿರದ ಸಂಪತ್ತನ್ನು ಗಳಿಸಲು ಪ್ರೇರಿಸುತ್ತದೆ. ಧರ್ಮಮಾರ್ಗದಲ್ಲಿ ಸಂಪಾದಿಸಬೇಕು, ಸುಲಭವಾಗಿ ಹಣ ರಾಶಿಹಾಕುವ ಪ್ರಲೋಭನಕ್ಕೆ ಸಿಕ್ಕಿಕೊಳ್ಳಬಾರದು ಎಂದು ಬೋಧಿಸುವ ವೇದಮಂತ್ರಗಳಿವು:
ಅಕ್ಷೈರ್ಮಾ ದೀವ್ಯಃ ಕೃಷಿಮಿತ್ ಕೃಷಸ್ಯ ವಿತ್ತೇ ರಮಸ್ವ ಬಹು ಮನ್ಯಮಾನಃ|
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿ ಚಷ್ಟೇ ಸವಿತಾಯಮರ್ಯಃ|| (ಋಕ್.10.34.13.)
     ದಾಳಗಳಿಂದ ಜೂಜಾಡಬೇಡ. ಕೃಷಿಯನ್ನೇ ಮಾಡು, ಕಷ್ಟಪಟ್ಟು ದುಡಿ. ನಿಜವಾದ ದುಡಿಮೆಯಿಂದ ಲಭಿಸುವುದೇ ಸಾಕು ಎಂದು ಸಂತುಷ್ಟನಾಗಿರು. ಕಷ್ಟದ ದುಡಿಮೆಯಲ್ಲೇ ಗೋಸಂಪತ್ತಿದೆ. ದಾಂಪತ್ಯಸುಖವೂ ಇದೆಯೆಂಬುದು ಅರ್ಥ. ದಾಳ ಎಂಬುದು ಸಾಂಕೇತಿಕವಾಗಿದ್ದು ಕುದುರೆ ಜೂಜು, ಲಾಟರಿ, ಮುಂತಾದವು ಸಹ ಈ ಗುಂಪಿಗೇ ಸೇರಿದ ಪಾಪವೃತ್ತಿಗಳು.
ಪರಿ ಚಿನ್ಮರ್ತೋ ದ್ರವಿಣಂ ಮಮನ್ಯಾದೃತಸ್ಯ ಪಥಾ ನಮಸಾ ವಿವಾಸೇತ್|
ಉತ ಸ್ವೇನ ಕ್ರತುನಾ ಸಂ ವದೇಶ ಶ್ರೇಯಾಂಸಂ ದಕ್ಷಂ ಮನಸಾ ಜಗೃಬ್ಯಾತ್|| (ಋಕ್.10.31.2.)
     ಹಣವು ಎಲ್ಲೆಡೆಯೂ ಇದೆ, ನ್ಯಾಯ ಹಾಗೂ ಸತ್ಯದ ಮಾರ್ಗದಿಂದ ನಮ್ರತೆಯಿಂದ ನಡೆದು, ಸದ್ವಿಚಾರ, ಸದಾಚಾರಗಳಿಂದ ಮಾತನಾಡಬೇಕು. ಶ್ರೇಯಸ್ಕರವಾದ ಶಕ್ತಿಯನ್ನು ಗ್ರಹಿಸಬೇಕು. ಈ ಮಾರ್ಗದಲ್ಲಿ ಸಂಪತ್ತು ಗಳಿಸುವುದೇ ಶ್ರೇಯಸ್ಕರವೆನ್ನುವ ಈ ಮಂತ್ರ ಸ್ವಚ್ಛ ಸಮಾಜಕ್ಕೆ ಆದರ್ಶವಾಗುತ್ತದೆ. ದೈನಂದಿನ ಅಗತ್ಯತೆಗಳಿಗೆ, ನೆಮ್ಮದಿಯ ಜೀವನಕ್ಕೆ ಮತ್ತು ಇತರರ ಸಲುವಾಗಿ ಸಹ ಹಣಗಳಿಕೆ  ಅನಿವಾರ್ಯವಾಗಿದೆ. ನಾವು ಸಂಪತ್ತಿನ ಒಡೆಯರಾಗಬೇಕೇ ಹೊರತು ಸಂಪತ್ತು ನಮ್ಮ ಒಡೆಯರಾಗಬಾರದು.
    ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||  (ಅಥರ್ವ.3.24.5.)
     ನೂರು ಕೈಗಳಿಂದ ಸಂಪಾದಿಸಿ, ಸಾವಿರ ಕೈಗಳಿಂದ ಹಂಚು. ಈ ಲೋಕದಲ್ಲಿ ನಿನ್ನ ಕಾರ್ಯವಿಸ್ತಾರವನ್ನು ಹೀಗೆ ಸಾಧಿಸಿಕೋ ಎಂಬುದು ಇದರ ಅರ್ಥ. ಸಂಪತ್ತಿನ ಸಂಚಯ ಒಳಿತಲ್ಲವಾದರೂ, ಸಂಪಾದಿಸುವುದೇ ಬೇಡವೆನ್ನಲಾಗದು. ಕಷ್ಟಪಟ್ಟು  ನೂರು ರೀತಿಯಲ್ಲಿ ಸಂಪಾದಿಸಿ, ಸ್ವಂತಕ್ಕೆ ಮಾತ್ರವಲ್ಲದೆ,  ದೀನ-ದುಃಖಿಗಳಿಗೆ, ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಾವಿರ ರೀತಿಗಳಲ್ಲಿ ವಿನಿಯೋಗಿಸಬೇಕೆಂಬ ಈ ಮಾತು ಮನನೀಯ. ನಮ್ಮ ಉಳಿವಿಗೆ ಸಮಾಜ ಬೇಕು, ಆದರೆ ಸಮಾಜಕ್ಕೆ ನಮ್ಮಿಂದ ಏನೂ ಇಲ್ಲವೆಂದಾದರೆ ಅದು ಕೃತಘ್ನತೆಯಾಗುತ್ತದೆ. ಯಾವುದೇ ವ್ಯಕ್ತಿ ತಾನು ಏನು ಹೊಂದಿದ್ದಾನೆಯೋ ಅದೆಲ್ಲವನ್ನೂ ಹೊರಗಿನಿಂದ ಪಡೆದದ್ದೇ ಹೊರತು ತಾನು ತಂದಿದ್ದಲ್ಲ ಮತ್ತು ಅವನು ಅವೆಲ್ಲಕ್ಕೆ ಒಡೆಯನೂ ಅಲ್ಲ. ಈ ಪರಿಜ್ಞಾನ ಬಂದಾಗ ಇರುವುದರಲ್ಲಿ ತೃಪ್ತಿ ಹೊಂದಿ ಸಂತೋಷದಿಂದಿರುವ ಮನೋಭಾವ ನಮ್ಮದಾಗುತ್ತದೆ.
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನನ್ನು?|
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ||
-ಕ.ವೆಂ.ನಾಗರಾಜ್.


ಗುರುವಾರ, ಜುಲೈ 27, 2017

ಸತ್ಯವೆಂದರೆ . . .


ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ ||
     ಸತ್ಯ ಎಂದರೆ ಏನು? ಸಾಮಾನ್ಯ ಅರ್ಥವೆಂದರೆ ವಾಸ್ತವಕ್ಕೆ ಅನುಗುಣವಾಗಿರುವುದು, ಒಂದು ಆದರ್ಶ ಅಥವ ಮಾನದಂಡ ಅಥವ ಮೂಲವಿಚಾರಕ್ಕೆ ಅನುರೂಪವಾಗಿರುವುದು ಎನ್ನಬಹುದು. ಇದಕ್ಕೆ ವಿರುದ್ಧವಾದುದು ಸುಳ್ಳು. ಸತ್ಯದ ನಡಿಗೆ ನಿಧಾನ. ಸತ್ಯ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ, ಸುಳ್ಳು ಪ್ರಪಂಚವನ್ನು ಒಂದು ಸುತ್ತು ಸುತ್ತಿ ಬಂದುಬಿಡಬಹುದು. ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಗೊಬೆಲ್ಸ್ ಸಿದ್ಧಾಂತ. ಆದರೆ, ಸುಳ್ಳನ್ನು ಸತ್ಯವೆಂದು ನಂಬಿಸಬಹುದಷ್ಟೆ ಹೊರತು, ನಿಜವಾದ ಸತ್ಯ ಸತ್ಯವಾಗಿಯೇ ಉಳಿದಿರುತ್ತದೆ ಎಂಬುದೇ ಸತ್ಯ!
     ಸತ್ಯವನ್ನು ವಿವಿಧ ಹಿನ್ನೆಲೆಗಳಲ್ಲಿ ಚರ್ಚಿಸಲಾಗುತ್ತಿದೆ, ವಿಮರ್ಶಿಸಲಾಗುತ್ತಿದೆ. ಅದು ತತ್ವದರ್ಶನವಾಗಬಹುದು, ಧಾರ್ಮಿಕವಾಗಬಹುದು, ವೈಜ್ಞಾನಿಕವಾಗಿ ಆಗಬಹುದು ಅಥವ ಜೀವನದ ಅನುಭವಗಳಾಗಬಹುದು. ಸತ್ಯದ ವಿವಿಧ ಮಗ್ಗಲುಗಳು ವಿದ್ವಾಂಸರ, ದಾರ್ಶನಿಕರ, ಧಾರ್ಮಿಕ ಪಂಡಿತರ ಚರ್ಚೆಯ ವಿಷಯವಾಗಿದೆ. ಸತ್ಯ ಯಾವುದು, ಅದನ್ನು ಕಾಣುವುದು ಹೇಗೆ ಎಂಬ ಬಗ್ಗೆ ತಿಳಿದವರು ಉಪದೇಶಿಸುತ್ತಿರುತ್ತಾರೆ. ಜೀವನದ ಉದ್ದೇಶವೇ ಸತ್ಯದ ಹುಡುಕಾಟ ಎನ್ನುವುದನ್ನೂ ಕೇಳಿದ್ದೇವೆ. ಒಟ್ಟಾರೆಯಾಗಿ ಈ ಸತ್ಯ ಪರೀಕ್ಷೆಗೆ ಒಳಪಟ್ಟಷ್ಟು ಇತರ ಸಂಗತಿಗಳು ಒಳಪಟ್ಟಿರಲಾರವು. ಸತ್ಯವನ್ನು ಸುಳ್ಳಾಗಿ ಅರ್ಥೈಸಿದರೂ ಅರ್ಥೈಸಿದವರಿಗೆ ಅದರ ಲಾಭ/ನಷ್ಟಗಳೇ ಹೊರತು ಸತ್ಯಕ್ಕೆ ಬಾಧಕವಿಲ್ಲ. ಉದಾಹರಣೆಗೆ, ಬೆಂಕಿ ಸುಡುತ್ತದೆ, ಏಕೆಂದರೆ ಸುಡುವುದೇ ಅದರ ಗುಣ. ಒಂದು ದೇಶದಲ್ಲಿ ಮಾತ್ರ ಸುಡುತ್ತದೆ, ಇನ್ನೊಂದರಲ್ಲಿ ಸುಡುವುದಿಲ್ಲ ಎಂದಿಲ್ಲ. ಬೆಂಕಿ ಸುಡುವುದಿಲ್ಲ, ಸುಡಬಾರದು ಎಂದು ಎಷ್ಟೇ ಪ್ರಖರವಾಗಿ ವಾದಿಸಿದರೂ ಸುಡುವ ಗುಣ ಬದಲಾಗದು. ಬೆಂಕಿ ಇನ್ನು ಮುಂದೆ ನಮ್ಮ ದೇಶದಲ್ಲಿ ಸುಡಬಾರದು ಎಂದು ಜನರೆಲ್ಲರೂ ನಿರ್ಧರಿಸಿದರೂ, ಸರ್ಕಾರ ಆದೇಶ ಮಾಡಿದರೂ ಬೆಂಕಿ ಸುಡದೇ ಇರುತ್ತದೆಯೇ? ಹೀಗಾಗಿ ಬೆಂಕಿ ಸುಡುತ್ತದೆ ಎಂಬುದು ಪ್ರತ್ಯಕ್ಷವಾಗಿ, ಪ್ರಮಾಣವಾಗಿ, ಅನುಭವಕ್ಕೆ ಸಿಗುವ, ಬದಲಾಗದ ಸತ್ಯ. ಬೆಂಕಿಯ ವಿಷಯದಲ್ಲಿ ಹೇಳಿದಂತೆ ಇದೇ ಸತ್ಯ ಎಂದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೇಳಲಾಗದಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ.
     ಸತ್ಯ ಏನೆಂಬುದನ್ನು ನಿರ್ಧರಿಸಲು ಯಾವುದಾದರೂ ಮಾನದಂಡವಿರಬೇಕು. ಅಂತಹ ಮಾನದಂಡ ಯಾವುದು? ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪದಿರಬಹುದು. ಮಾನವನಿರ್ಮಿತ ಮಾನದಂಡಗಳು ಸದಾಕಾಲಕ್ಕೆ ನಿಲ್ಲಲಾರವು ಅಥವ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತವೆ. ಈ ವಿಶಾಲ ಬ್ರಹ್ಮಾಂಡ, ಜೀವವೈವಿಧ್ಯ ಮತ್ತು ದೇವರುಗಳಿಗೆ ಕುರಿತಂತೆ ಇದೇ ಸತ್ಯವೆಂದು ನಿಖರವಾಗಿ ಹೇಳುವುದು ಕಷ್ಟವೇ ಸರಿ. ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ತಾರ್ಕಿಕವಾಗಿ ಪುಟ್ಟ ಮೆದುಳಿನ ಮನುಷ್ಯ ಇವುಗಳ ಕುರಿತು ತಿಳಿಯಲು ಪ್ರಯತ್ನಿಸುತ್ತಲೇ ಇದ್ದಾನೆ. ಪೂರ್ಣ ಸತ್ಯವೆನ್ನುವುದು ಇನ್ನೂ ಗೊತ್ತಾಗಬೇಕಿದೆ. ಹೀಗಿರಬಹುದು ಎಂಬ ಕಲ್ಪನೆ ಮಾತ್ರ ಮಾಡಬಹುದು. ಧಾರ್ಮಿಕವಾಗಿ ಸಹ ಜಗತ್ತು, ಜೀವ, ದೇವರನ್ನು ಸಂಪೂರ್ಣ ಸ್ಪಷ್ಟವಾಗಿ ಅರಿಯಲಾಗಿಲ್ಲವೆಂದೇ ಹೇಳಬೇಕು. ವಿವಿಧ ಧರ್ಮಗಳು, ಪಂಥಗಳು, ಪಂಗಡಗಳು ವಿವಿಧ ರೀತಿಗಳಲ್ಲಿ ಇವುಗಳನ್ನು ವಿಶ್ಲೇಷಿಸುತ್ತಿರುವುದೇ ಇದಕ್ಕೆ ಉದಾಹರಣೆ.
     ಎಲ್ಲಿ ವೈಚಾರಿಕ ಸ್ವಾತಂತ್ರ್ಯಕ್ಕೆ ಅವಕಾಶವಿರುವುದಿಲ್ಲವೋ ಅಲ್ಲಿ ಸತ್ಯಾನ್ವೇಷಣೆ ಕಷ್ಟ. ಸತ್ಯವನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುವುದಾದರೆ, ಧಾರ್ಮಿಕ ವಿಚಾರಗಳು ಜಗತ್ತು, ಜೀವ ಮತ್ತು ದೇವರ ಬಗ್ಗೆ ಕೆಲವು ಸಿದ್ಧಾಂತಗಳನ್ನು ಹೊಂದಿದ್ದು ಮಾನವನ ಧರ್ಮ ಎಂದರೆ ಏನು, ಅವನ ದೈನಂದಿನ ನಡವಳಿಕೆಗಳು ಹೇಗಿರಬೇಕು, ಯಾವ ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ಹೇಳುತ್ತವೆ. ಈ ವಿಚಾರಗಳು ಮತ್ತು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳ ಪೈಕಿ ಕೆಲವು ಅರ್ಥಹೀನ, ಅಸಂಬದ್ಧವೆನಿಸಿದರೂ ಪಾಲಿಸಿಕೊಂಡು ಬರುವವರೇ ಜಾಸ್ತಿ. ಇದೇನೇ ಇರಲಿ, ಇದು ನಿಜವಾದ ಧರ್ಮ, ನಾವು ನಂಬಿರುವ ದೇವರೇ ನಿಜವಾದ ದೇವರು. ಇದನ್ನು ಎಲ್ಲರೂ ಒಪ್ಪಲೇಬೇಕು, ಪಾಲಿಸಲೇಬೇಕು ಎನ್ನುವವರ ವಾದ ಭಿನ್ನಾಭಿಪ್ರಾಯ, ಸಮಸ್ಯೆ, ಸಂಘರ್ಷ, ಕ್ರಾಂತಿಗಳಿಗೆ ಕಾರಣಗಳಾಗಿವೆ. ವೈಚಾರಿಕತೆಗೆ ಅಡ್ಡಿಯಾದಾಗ ಸತ್ಯ ಕಾಣದಾಗುತ್ತದೆ. ಮಾನವನಿಗಿರುವ ಇತಿಮಿತಿಗಳಲ್ಲಿ ಎಲ್ಲವನ್ನೂ ಒರೆಗೆ ಹಚ್ಚಲಾಗುವುದಿಲ್ಲ. ಆದರೆ ಇದುವರೆವಿಗೆ ಹಿಂದಿನವರು ಹೇಳಿದ, ಒಪ್ಪಿದ ಸಂಗತಿಗಳನ್ನು ಅನುಭವದೊಂದಿಗೆ ಸೇರಿಸಿಕೊಂಡು ಆತ್ಮ ಒಪ್ಪಿದ ರೀತಿಯಲ್ಲಿ ನಡೆಯುವುದು ಸರಿಯಾದ ಮಾರ್ಗ. ಆತ್ಮ ಒಪ್ಪುವ ರೀತಿಯಲ್ಲಿ ನಡೆಯುವುದಕ್ಕೂ ಒಂದು ಮಾನದಂಡವಿರಲೇಬೇಕು, ಅದೇ ಸತ್ಯ. ಆತ್ಮ ಒಪ್ಪುವ ರೀತಿ ಯಾವುದೆಂದು ತಿಳಿಯಲು ಮಾಡುವ ಪ್ರಯತ್ನವೇ ಸತ್ಯಾನ್ವೇಷಣೆ. ಶ್ರವಣ, ಮನನ, ಮಥನಗಳೊಂದಿಗೆ ಅನುಭವ ಸೇರಿದರೆ ಸತ್ಯಕ್ಕೆ ಹತ್ತಿರವಾದ ಸಂಗತಿ ಗೋಚರವಾದೀತು.
     ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ (ಸತ್ಯವನ್ನೇ ಹೇಳು, ಪ್ರಿಯವಾದದ್ದನ್ನು ಹೇಳು, ಅಪ್ರಿಯವಾದ ಸತ್ಯ ಹೇಳಬೇಡ) ಎನ್ನುತ್ತಾರೆ.  ಇದು ಸಮಯ, ಸಂದರ್ಭಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕಾದ ಸತ್ಯ. ಇಲ್ಲಿ ಸಾಮಾನ್ಯ ಹಿತ ಪ್ರಧಾನವಾಗುತ್ತದೆ.      ಮೌಲ್ಯಗಳು ಇರುವಲ್ಲಿ ಸತ್ಯಕ್ಕೆ ಬೆಲೆ ಇರುತ್ತದೆ, ಇಲ್ಲದಲ್ಲಿ ಅದು ಅನಾಥವಾಗುತ್ತದೆ. ಮೌಲ್ಯಯುತ ಸಮಾಜ ಬೇಡವೆಂದರೆ ಸತ್ಯವನ್ನು ದೂರವಿಟ್ಟರಾಯಿತು. ಪ್ರತಿಯೊಬ್ಬರೂ ಸಮಾಜ ಒಳ್ಳೆಯ ರೀತಿಯಲ್ಲಿ ಇರಬೇಕು, ಅನ್ಯಾಯ, ಮೋಸ ಆಗಬಾರದು ಎಂದು ಬಯಸುತ್ತಾರೆ. ಅವರು ಅಂಥವರು, ಇವರು ಇಂಥವರು ಎಂದು ದೂರುತ್ತಾರೆ. ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ? ಎಂದರೆ ಸಿಗಬಹುದಾದ ಉತ್ತರ, ನ್ಯಾಯ, ನೀತಿ, ಧರ್ಮ ಎಂದರೆ ಬದುಕಲು ಸಾಧ್ಯವೇ? ಅವರದಾದರೋ ದೊಡ್ಡ ತಪ್ಪುಗಳು. ನಮ್ಮದಾದರೋ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು ಎಂಬುದೇ! ಈ ಸಣ್ಣ ಪುಟ್ಟ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯವಾಗುತ್ತವೆ, ಇವೇ ಮುಂದೆ ಸಾಮಾಜಿಕ ನ್ಯಾಯ, ಮೌಲ್ಯ, ಸತ್ಯ, ಮುಂತಾದ ಬಗ್ಗೆ ಮಾತನಾಡದಂತೆ ಕಟ್ಟಿಹಾಕುತ್ತವೆ.
     'ಸತ್ಯಂ ವದ ಧರ್ಮಂ ಚರ' (ಸತ್ಯವನ್ನೇ ಹೇಳು, ಧರ್ಮದಲ್ಲಿ ನಡೆ) ಎಂಬುದು ಸನಾತನವಾಣಿ. ಸತ್ಯ ಹೇಳುವುದಕ್ಕೆ ಆತ್ಮವಿಶ್ವಾಸ ಇದ್ದರೆ ಸಾಕು. ಆದರೆ ಸುಳ್ಳು ಹೇಳಲು ನೆನಪಿನ ಶಕ್ತಿಯ ಜೊತೆಗೆ ಸಮರ್ಥಿಸಿಕೊಳ್ಳುವ ಚಾಕಚಕ್ಯತೆಯೂ ಇರಬೇಕು. ಇಲ್ಲದಿದ್ದರೆ ಹೇಳಿದ ಸುಳ್ಳನ್ನು ಅರಗಿಸಿಕೊಳ್ಳುವುದು ಕಷ್ಟ. ಸತ್ಯಕ್ಕೆ ಗೌರವ, ಬೆಲೆ ಕೊಡದವರನ್ನು ಯಾರೂ ನಂಬಲಾರರು. ಆತ್ಮ, ಹೃದಯಗಳು ಸಾಥ್ ನೀಡುವ ಕೆಲಸಗಳು ಸತ್ಯ, ಸತ್ವ ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತವೆ ಮತ್ತು ಇದರ ಪ್ರತಿಫಲವೇ ದೊರಕುವ ಸಂತೋಷ! ನಿರಾಯುಧವಾದ ಸತ್ಯ ಮತ್ತು ಷರತ್ತಿಲ್ಲದ ಪ್ರೀತಿಗಳ ಮಾತುಗಳದೇ ವಾಸ್ತವದಲ್ಲಿ ಕೊನೆಯ ಮಾತಾಗಿರುತ್ತದೆ. ಸತ್ಯಕ್ಕೆ ತಾತ್ಕಾಲಿಕವಾದ ಸೋಲುಂಟಾದರೂ, ಗೆಲುವಿನಿಂದ ಬೀಗಬಹುದಾದ ಸುಳ್ಳಿಗಿಂತಲೂ ಅದು ಹೆಚ್ಚು ಶಕ್ತಿಶಾಲಿ. ಸತ್ಯವನ್ನು ಬಗ್ಗಿಸಬಹುದು, ತಿರುಚಬಹುದು, ದುರುಪಯೋಗಪಡಿಸಿಕೊಳ್ಳಬಹುದು, ಆದರೆ ಬದಲಾಯಿಸಲು ಸಾಧ್ಯವಿಲ್ಲ.
-ಕ.ವೆಂ. ನಾಗರಾಜ್.

ಮಂಗಳವಾರ, ಜುಲೈ 25, 2017

ಸ್ತ್ರೀ ಸಹ ಅಂತ್ಯಸಂಸ್ಕಾರ ಮಾಡಲು ಅರ್ಹಳು!


     ಸುಮಾರು ಮೂರು ವರ್ಷಗಳ ಹಿಂದಿನ ಸಂಗತಿಯಿದು. ಬೆಂಗಳೂರಿನಲ್ಲಿ ವಾಸವಾಗಿದ್ದ ವಿಜಯಲಕ್ಷ್ಮಿ ಎಂಬ ವೃದ್ಧೆ ಕ್ಯಾನ್ಸರ್ ಪೀಡಿತರಾಗಿ ನರಳುತ್ತಿದ್ದರು. ವೈಶ್ಯ ಸಮುದಾಯಕ್ಕೆ ಸೇರಿದ ಅವರು ಮೂಲತಃ ಬೆಂಗಳೂರಿನವರಲ್ಲವಾದರೂ, ಮಕ್ಕಳೆಲ್ಲರೂ ಬೆಂಗಳೂರಿನಲ್ಲಿದ್ದುದರಿಂದ ಅಲ್ಲಿ ನೆಲೆಸಿದ್ದರು. ಅವರಿಗೆ ಇದ್ದವರು ನಾಲ್ವರೂ ಹೆಣ್ಣುಮಕ್ಕಳೇ. ನಾಲ್ವರಿಗೂ ವಿವಾಹವಾಗಿ ಅವರವರ ಕುಟುಂಬದೊಂದಿಗೆ ಸುಖವಾಗಿದ್ದರು. ಮರಣಶಯ್ಯೆಯಲ್ಲಿದ್ದ ವಿಜಯಲಕ್ಷ್ಮಿಯವರಿಗೆ ಒಂದು ಚಿಂತೆ ಹತ್ತಿತು. ತಾನು ಸತ್ತ ಮೇಲೆ ತನ್ನ ಅಂತ್ಯ ಸಂಸ್ಕಾರ ಹೇಗೆ,  ತನಗೆ ಮುಕ್ತಿ ದೊರೆಯುವುದೇ ಎಂಬುದೇ ಆ ಚಿಂತೆಯಾಗಿತ್ತು. ಚಂದನ ಟಿವಿಯಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರ ಹೊಸಬೆಳಕು ಕಾರ್ಯಕ್ರಮ ವೀಕ್ಷಿಸಿ, ವೇದಗಳಲ್ಲಿ ಎಂದೂ ಸ್ತ್ರೀ-ಪುರುಷ ತಾರತಮ್ಯದ ಅಂಶಗಳಿಲ್ಲವೆಂಬುದನ್ನು ಶರ್ಮರು ವಿವರಿಸಿದ್ದುದನ್ನು ಕೇಳಿದ್ದ ಅವರು, ಶರ್ಮರವರೊಂದಿಗೆ ಮಾತನಾಡಬಯಸಿದರು. ತಾಯಿಯ ಬಲವಂತದಿಂದಾಗಿ ಮಕ್ಕಳು ಶರ್ಮರವರನ್ನು ಮನೆಗೆ ಕರೆಸಿದರು. ಪಕ್ಕದಲ್ಲಿ ಕುಳಿತಿದ್ದ ಶರ್ಮರವರೊಂದಿಗೆ ಅತಿ ಕ್ಷೀಣದನಿಯಲ್ಲಿ ಮಾತನಾಡುತ್ತಿದ್ದ ವಿಜಯಲಕ್ಷ್ಮಿಯವರು ತಮ್ಮ ಸಂದೇಹಗಳು ಮತ್ತು ಅದಕ್ಕಿರುವ ಪರಿಹಾರದ ಬಗ್ಗೆ ವಿಚಾರಿಸಿದರು. ಜನನ - ಮರಣಗಳು ಸಹಜಕ್ರಿಯೆಗಳು, ಅನಾದಿ-ಅನಂತವಾದ ಜೀವಾತ್ಮ ಜೀವಿತಕಾಲದಲ್ಲಿ ಮಾಡಿದ ಕರ್ಮಗಳಿಗನುಸಾರವಾಗಿ ಮತ್ತೊಂದು ದೇಹದಲ್ಲಿ ಪ್ರಕಟಗೊಳ್ಳುತ್ತದೆ, ಅಂತ್ಯ ಸಂಸ್ಕಾರವನ್ನು ಗಂಡು ಮಕ್ಕಳು ಮಾತ್ರ ಮಾಡಬೇಕೆಂದಿಲ್ಲ, ಹೆಣ್ಣು ಮಕ್ಕಳೂ ಮಾಡಬಹುದೆಂಬುದನ್ನು ಸ್ವತಃ ಶರ್ಮರವರಿಂದ ಕೇಳಿದ ಅವರು, ತಾವು ಸತ್ತ ಮೇಲೆ ಶರ್ಮರವರೇ ಮುಂದೆ ನಿಂತು ತಮ್ಮ ಮಕ್ಕಳ ಮೂಲಕ ಅಂತ್ಯ ಸಂಸ್ಕಾರ ಮಾಡಿಸಬೇಕೆಂದು ಕೋರಿಕೆಯಿಟ್ಟಿದ್ದರು. ಆ ರೀತಿ ಮಾತನಾಡಿದ್ದ ಮೂರು ದಿನಗಳಲ್ಲೇ ಅವರು ನಿಧನರಾಗಿದ್ದರು. ಮಾತು ಕೊಟ್ಟಿದ್ದಂತೆ ಶರ್ಮರವರು ಮುಂದೆ ನಿಂತು ಅವರ ಹೆಣ್ಣುಮಕ್ಕಳಿಂದಲೇ ಅಂತ್ಯಸಂಸ್ಕಾರದ ಕ್ರಿಯೆಗಳನ್ನು ನೆರವೇರಿಸಿದ್ದರು.
     ವಿಜಯಲಕ್ಷ್ಮಿಯವರು ಕೆಲವು ಅನಿಷ್ಟ ಸಂಪ್ರದಾಯಗಳ ಕುರಿತು ದಿಟ್ಟ ನಿಲುವು ಹೊಂದಿದವರಾಗಿದ್ದರು. ಅವರ ಸಂಬಂಧಿಯೊಬ್ಬರು ನಿಧನರಾಗಿದ್ದಾಗಿನ ಸಂದರ್ಭವನ್ನು ಅವರ ಮಕ್ಕಳು ನೆನೆಸಿಕೊಳ್ಳುತ್ತಾರೆ. ಗಂಡ ಸತ್ತಾಗ ಪತ್ನಿಗೆ ಅರಿಶಿನ, ಕುಂಕುಮ ಹಚ್ಚಿ, ತಲೆ ತುಂಬಾ ಹೂವು ಮುಡಿಸಿ, ಕೈಬಳೆಗಳನ್ನು ತೊಡಿಸಿ ಅವನ್ನು ತೆಗೆದುಹಾಕುವ ಸಂಪ್ರದಾಯವನ್ನು ಹಲವರು ಈಗಲೂ ಮಾಡುತ್ತಾರೆ. ಇದೇ ಕೊನೆಯ ಸಲ, ಮತ್ತೆಂದೂ ಇವನ್ನು ಧರಿಸಬಾರದೆಂಬ ಸೂಚನೆಯೂ ಅದರಲ್ಲಿರುತ್ತದೆ. ಮೊದಲೇ ದುಃಖದಿಂದ ಮುದುಡಿದವರನ್ನು ಮತ್ತಷ್ಟು ದುಃಖಕ್ಕೆ ಈಡು ಮಾಡುವ ಕ್ರಿಯೆಯಿದು.  ವಿಜಯಲಕ್ಷ್ಮಿಯವರು ಅಂತಹ ಸಂಪ್ರದಾಯ ಮಾಡಿಸಲು ಬಂದಿದ್ದವರನ್ನು ಬಾಗಿಲಿಗೆ ಅಡ್ಡನಿಂತು ವಾಪಸು ಕಳುಹಿಸಿದ್ದರು. ಇಂತಹ ಮನೋಭಾವ ಮೆಚ್ಚುವಂತಹುದಾಗಿದೆ. ಸ್ತ್ರೀ-ಪುರುಷ ತಾರತಮ್ಯ ಬೋಧಿಸದ ವೇದಗಳ ಆಶಯಕ್ಕೆ ವಿರುದ್ಧವಾಗಿ ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀಯರನ್ನು ಕೆಲವು ಸಂಸ್ಕಾರಗಳು, ಆಚರಣೆಗಳಿಂದ ದೂರವಿರಿಸಿರುವುದರ ಕುರಿತು ಸ್ತ್ರೀಯರೇ ಪ್ರಶ್ನಿಸಬೇಕಿದೆ. 
    ಅಂತ್ಯ ಸಂಸ್ಕಾರ ಮಾನವ ಜೀವನದ ಅಂತಿಮ ಸಂಸ್ಕಾರವಾಗಿದೆ. ಸ್ತ್ರೀಯರು ಈ ಕಾರ್ಯ ಮಾಡಬಾರದೆಂಬುದು ಪ್ರಚಲಿತ ನಂಬಿಕೆ. ಸ್ತ್ರೀಯರ ಕುರಿತ ಕೆಲವು ಕಟ್ಟುಪಾಡುಗಳು, ಸಂಪ್ರದಾಯಗಳು ಅವರನ್ನು ಹಲವು ರಂಗಗಳಲ್ಲಿ ಹಿಂದುಳಿಯುವಂತೆ ಮಾಡಿವೆ. ಹಿಂದೂ ಧರ್ಮದಲ್ಲಿ ಅನೇಕ ರೀತಿಯ ಸಂಪ್ರದಾಯಗಳಿದ್ದು ಸಮಾಜವು ಕಾಲಕಾಲಕ್ಕೆ ತಕ್ಕಂತೆ ಹಲವು ಸಂಪ್ರದಾಯಗಳನ್ನು ಕೈಬಿಟ್ಟಿದೆ, ಕೆಲವು ಹೊಸ ಸಂಪ್ರದಾಯಗಳನ್ನು ರೂಢಿಸಿಕೊಳ್ಳುತ್ತಿದೆ. ಸಂಪ್ರದಾಯವಾದಿಗಳು, ಸುಧಾರಣಾವಾದಿಗಳು, ವಿರೋಧಿಗಳು, ನಾಸ್ತಿಕರು, ಹೀಗೆ ಹಲವು ವಿಚಾರಗಳನ್ನು ಹೊಂದಿದವರು ಇದ್ದು ಎಲ್ಲರನ್ನೂ ಹೊಂದಿಕೊಂಡು, ಒಪ್ಪಿಕೊಂಡು (ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ) ಸಾಗುತ್ತಿರುವ ಧರ್ಮ ಬಹುಷಃ ಇದೊಂದೇ! ಮುಕ್ತ ವಿಮರ್ಶೆಗೆ ತೆರೆದುಕೊಂಡಿರುವ ಇದು ಮನನ, ಮಥನಗಳಿಂದ ಬದಲಾಗುತ್ತಾ ಹೋಗುತ್ತಿರುವ ಜೀವಂತಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀಯರಿಗೆ ಕಟ್ಟುಪಾಡುಗಳ ಹೆಸರಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ನಿರ್ಬಂಧಿಸದಿರುವುದು ಇಂದಿನ ಅಗತ್ಯವಾಗಿದೆ. ಇಂದು ಬಹುತೇಕರಿಗೆ ಒಬ್ಬನೇ ಮಗ ಅಥವ ಮಗಳು ಇರುವುದು ಸಾಮಾನ್ಯ. ಮೃತರಿಗೆ ಅಣ್ಣ-ತಮ್ಮಂದಿರು, ಪುರುಷ ಸಂಬಂಧಿಗಳು ಇದ್ದು, ಅವರೂ ವೈಮನಸ್ಯದಿಂದ ಸಹಕರಿಸದಿದ್ದರೆ ಏನು ಮಾಡಬೇಕು?
     ತಂದೆ/ತಾಯಿಯ ಮೇಲಿನ ಪ್ರೀತಿಯ ಕಾರಣದಿಂದ ಸಮಾಜ ವಿರೋಧಿಸಿದರೂ ಅವರ ಅಂತ್ಯಕ್ರಿಯೆ ನಡೆಸಿದ ಧೀಮಂತ ಹೆಣ್ಣು ಮಕ್ಕಳೂ ಇದ್ದಾರೆ. ಕೆಲವು ಸಂದರ್ಭಗಳಲ್ಲಿ ಅವರಿಗೆ ಸಂಪೂರ್ಣ ಸಹಕಾರ ನೀಡಿರುವ ನಿದರ್ಶನಗಳು ಇರುವಂತೆ ವಿರೋಧಿಸಿರುವ ಪ್ರಸಂಗಗಳೂ ಇವೆ. ಸ್ತ್ರೀಯರು ಅಂತ್ಯ ಸಂಸ್ಕಾರ ಮಾಡಬಾರದೆಂಬ ವಾದದ ಹಿನ್ನೆಲೆ ಏನಿರಬಹುದು? ಕೆಲವು ನಿರ್ಬಂಧಗಳಲ್ಲಿ ಅರ್ಥವಿರಲೂಬಹುದು ಮತ್ತು ಕೆಲವುದರಲ್ಲಿ ಮಹಿಳೆಯರನ್ನು ಹಿಂದೆ ಸರಿಸುವ ಉದ್ದೇಶವೂ ಇರಬಹುದು. ದಂಪತಿಗಳಿಗೆ ಹೆಣ್ಣು ಮಗು ಮಾತ್ರ ಇದ್ದ ಸಂದರ್ಭದಲ್ಲಿ ಕುಟುಂಬದ ಹತ್ತಿರದ ಗಂಡು ಸಂಬಂಧಿ ಅಂತ್ಯ ಸಂಸ್ಕಾರ ಮಾಡಬೇಕೆನ್ನುತ್ತಾರೆ. ಇದು ಹೆಣ್ಣು ಮಕ್ಕಳಿಗೆ ಹಿಂದೆ ಪಿತ್ರಾರ್ಜಿತ ಸ್ವತ್ತಿನಿಂದ ವಂಚಿತರಾಗಲು ಕಾರಣವಾಗುತ್ತಿತ್ತು. ಅಂತ್ಯ ಸಂಸ್ಕಾರ ನಡೆಸಿದ ಕಾರಣದಿಂದ ಆಸ್ತಿ ಹಕ್ಕು ಸ್ಥಾಪಿಸುವುದು ಹಿಂದಿನಿಂದಲೂ ಇರುವುದೇ ಆಗಿದೆ. ಈಗ ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಕೊಡುವ ಕಾನೂನು ಬಂದಿರುವುದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಹೆಣ್ಣು ಮಕ್ಕಳು ಮೃದು ಹೃದಯಿಗಳು, ಧಿಡೀರ್ ಸ್ಪಂದನಶೀಲರು, ದುಃಖಾವೇಶದಿಂದ ಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಷ್ಟವೆಂಬ ಭಾವನಾತ್ಮಕ ಕಾರಣ, ಗರ್ಭಿಣಿಯಾಗಿರುವುದು, ಮಾಸಿಕ ಋತುಚಕ್ರಕ್ಕೊಳಪಡುವುದು ಅಂತ್ಯ ಸಂಸ್ಕಾರ ಕ್ರಿಯೆಗೆ ಅಡ್ಡಿಯಾಗುವ ಕಾರಣಗಳೆನ್ನುತ್ತಾರೆ. ಆರೋಗ್ಯದ ಕಾರಣ ಹೊರತುಪಡಿಸಿ ಉಳಿದ ಕಾರಣಗಳು ಸಮರ್ಥನೀಯವೆಂದು ಹೇಳಲಾಗದು. ಸ್ತ್ರೀ ವಿವಾಹದ ನಂತರ ಗಂಡನ ಕುಟುಂಬಕ್ಕೆ ಸೇರಿದವಳಾಗುತ್ತಾಳೆ ಎಂಬ ಕಾರಣವನ್ನೂ ಕೊಡುತ್ತಾರೆ. ಮದುವೆಯಾಗದ ಹೆಣ್ಣು ಮಗಳು ಕ್ರಿಯೆಗಳನ್ನು ನಡೆಸಲು ಅಡ್ಡಿಯಿಲ್ಲವೆಂಬ ವಾದವೂ ಇದೆ. 
     ಗರುಡ ಪುರಾಣದ 11ನೆಯ ಅಧ್ಯಾಯದ 12-17ರ ಶ್ಲೋಕಗಳಲ್ಲಿ ಮೃತನ ಅಂತ್ಯ ಸಂಸ್ಕಾರವನ್ನು ಮಗ ಮಾಡಬೇಕು, ಮಗ ಇಲ್ಲದಿದ್ದಲ್ಲಿ ಹೆಂಡತಿ, ಹೆಂಡತಿ ಇಲ್ಲದಿದ್ದಲ್ಲಿ ಸೋದರ ಅಥವ ಒಬ್ಬ ಬ್ರಾಹ್ಮಣ ಅಥವ ಅರ್ಹ ಸಂಬಂಧಿ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದೆ. ಮಗಳ ಕುರಿತು ಇಲ್ಲಿ ಉಲ್ಲೇಖಿಸಿಲ್ಲ. ೧೮ನೆಯ ಶ್ಲೋಕದಲ್ಲಿ ಒಬ್ಬ ಪುರುಷ ಅಥವ ಸ್ತ್ರೀ ಅಂತ್ಯ ಸಂಸ್ಕಾರ ನಡೆಸಿದರೆ ಸಿಗುವ ಫಲದ ಬಗ್ಗೆ ಹೇಳಿದೆ. ಇದರ ಅರ್ಥ ಸ್ಪಷ್ಟ -ಸ್ತ್ರೀ ಸಹ ಅಂತ್ಯ ಸಂಸ್ಕಾರ ಮಾಡಲು ಅರ್ಹಳು!
     ಹಿಂದೂಗಳಿಗೆ ವೇದಗಳೇ ಪರಮ ಪ್ರಮಾಣ. ವೇದಗಳಲ್ಲಿ ಸಂಪ್ರದಾಯಗಳ ಬಗ್ಗೆ ಏನೂ ಹೇಳಿಲ್ಲ. ಸಂಪ್ರದಾಯಗಳನ್ನು ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಸಮಾಜದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದು, ತುರ್ತು ಸನ್ನಿವೇಶಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಕೆಲವು ವಿನಾಯಿತಿಗಳಿಗೂ ಅವಕಾಶವಿತ್ತು. ಆದರೆ ಸಂದಿಗ್ಧ ಸಂದರ್ಭಗಳಲ್ಲಿ ನಿರ್ಧಾರಗಳನ್ನು ವೇದಗಳನ್ನು ಆಧರಿಸಿಯೇ ಮಾಡಬೇಕು. ವೇದಗಳ ಉದಾತ್ತತೆ ಎಷ್ಟೆಂದರೆ ಅವು ಎಲ್ಲಿಯೂ ಹೀಗೆ ಮಾಡು, ಹಾಗೆ ಮಾಡಬೇಡ ಎಂದು ಹೇಳುವುದಿಲ್ಲ. ಅವು ಸರಿಯಾದ ಮಾರ್ಗವನ್ನು ಮಾತ್ರ ತೋರಿಸುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುವುದನ್ನು ನಮಗೇ ಬಿಡುತ್ತದೆ. ವೇದವು ಭಸ್ಮಾಂತಂ ಶರೀರಮ್(ಯಜು.40.15) ಎಂದು ಹೇಳುತ್ತದೆ. ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ, ಮೃತರಾದ ನಂತರ ಶರೀರವನ್ನು ಅಗ್ನಿಗೆ ಅರ್ಪಿಸಬೇಕು ಎಂದು ಇದರ ಅರ್ಥ. ನಂತರದ ಕ್ರಿಯೆಗಳ ಬಗ್ಗೆ ವೇದಮಂತ್ರಗಳಲ್ಲಿ ಯಾವುದೇ ಉಲ್ಲೇಖಗಳಿಲ್ಲ. ರೂಢಿಗತವಾದ ಸಂಪ್ರದಾಯಗಳು ಸಮಾಜದ ಹಿತದ ಸಲುವಾಗಿ ಹೊರತು ಮತ್ತೇನಲ್ಲ. ಹೀಗಾಗಿ ಕುರುಡಾಗಿ ಅನುಸರಿಸುವುದಕ್ಕಿಂತ ಒಟ್ಟು ಹಿತ ಮತ್ತು ಅಗತ್ಯ ಅನುಸರಿಸಿ, ಕಾಲಕ್ಕೆ ಅನುಗುಣವಾದ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಬಹುದು. ಹಿಂದೆ ಸಾಂದರ್ಭಿಕವಾಗಿ ಅಗತ್ಯವೆಂದು ಕಂಡು ಅನುಸರಿಸಲಾಗುತ್ತಿದ್ದ ಬಾಲ್ಯವಿವಾಹ, ಸತಿಪದ್ಧತಿ, ವಿಧವೆಯರ ಕೇಶಮುಂಡನ, ದೇವದಾಸಿ ಪದ್ಧತಿ ಮುಂತಾದುವುಗಳು ಇಂದು ಮರೆಯಾಗಿವೆ. ಅಂತ್ಯಸಂಸ್ಕಾರದ ವಿಷಯದಲ್ಲೂ ಇಂದಿಗೆ ಅಗತ್ಯವಾದ ಕ್ರಮ ಅನುಸರಿಸಿದರೆ ತಪ್ಪೇನಿಲ್ಲ.
     ಅಂತ್ಯಸಂಸ್ಕಾರ ಮಾಡುವುದು ಕರ್ತವ್ಯವೇ ಹೊರತು ಸವಲತ್ತು ಅಲ್ಲ. ವೇದವು ಯಾವುದೇ ರೀತಿಯ ಅಸಮಾನತೆಗೆ ವಿರೋಧವಾಗಿದೆ. ಯಾವುದೇ ಕ್ರಿಯೆಯ ಅರ್ಥ ತಿಳಿದು ಮಾಡುವುದರಿಂದ ಮಾನಸಿಕ ತೃಪ್ತಿ, ಸಾರ್ಥಕತೆ ಇರುತ್ತದೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರನ್ನು ಕೆಲವು ಕ್ರಿಯೆಗಳಿಂದ ದೂರವಿಡುವ ವಿಚಾರದಲ್ಲಿ ಮಹಿಳೆಯರ ಪಾಲೂ ಇದೆ. ಏಕೆಂದರೆ ಸಂಪ್ರದಾಯಗಳ ಪಾಲನೆ, ಬೆಳವಣಿಗೆಗಳಲ್ಲಿ ಅವರ ಪಾತ್ರವೇ ಮಹತ್ವದ್ದಾಗಿದೆ. ವೈಚಾರಿಕತೆ ಬೆಳೆಸಿಕೊಳ್ಳೋಣವೆಂಬ ವೇದದ ಈ ಕರೆ ನಮಗೆ ಕೇಳಿಸಲಿ: ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷಃ|| (ಋಕ್.1.86.9) ಅರ್ಥ: ಸತ್ಯವನ್ನೇ ಶಕ್ತಿಯಾಗಿ ಹೊಂದಿರುವವರೇ, ಸ್ವಂತ ವಿವೇಚನೆಯಿಂದಲೇ ಸತ್ಯವನ್ನು ಆವಿಷ್ಕರಿಸಿರಿ, ತಿಳಿಯಿರಿ. ಕೆಟ್ಟ ವಿಚಾರಗಳನ್ನು ಜ್ಞಾನಜ್ಯೋತಿಯಿಂದ ಸೀಳಿಹಾಕಿರಿ (ಕಿತ್ತೆಸೆಯಿರಿ). ವೈಚಾರಿಕತೆಗೆ ಇಷ್ಟು ಮುಕ್ತ ಅವಕಾಶ ಕೊಟ್ಟಿರುವ ವೇದಗಳು ನಮ್ಮ ಹಲವಾರು ಸಂದಿಗ್ಧತೆಗಳ ನಿವಾರಣೆಗೆ ಮಾರ್ಗದರ್ಶಿಯಾಗಿವೆ. ದಾರಿ ಹೀಗಿದೆ, ಹೇಗೆ ಸಾಗಬೇಕು ಅನ್ನುವುದು ಸಾಗುವವರಿಗೆ ಬಿಟ್ಟದ್ದು.
-ಕ.ವೆಂ.ನಾಗರಾಜ್.

ಭಾನುವಾರ, ಜುಲೈ 23, 2017

ಸಾಯದಿರೋಣ!


ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ ||
     ಒಮ್ಮೆ ಪ್ರಾಸಂಗಿಕವಾಗಿ ಲೇಖನವೊಂದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದ ಸಂದಿಗ್ಧ ಸಂದರ್ಭದಲ್ಲಿ ಧ್ಯಾನದ ಮೊರೆ ಹೋಗಿ ಸಾಂತ್ವನ ಕಂಡುಕೊಂಡ ಬಗ್ಗೆ ಬರೆದಿದ್ದೆ. ಅದಕ್ಕೆ ಮಿತ್ರರೊಬ್ಬರು ಧ್ಯಾನದ ಅಗತ್ಯವೇ ಇಲ್ಲ, ಬೇರೆ ವಿಷಯದಲ್ಲಿ ಆಸಕ್ತರಾದಾಗ ಆತ್ಮಹತ್ಯೆ ಯೋಚನೆ ತಾನೇ ದೂರವಾಗುತ್ತದೆ ಎಂದಿದ್ದರು. ಆ ಪ್ರತಿಕ್ರಿಯೆ ಈ ಲೇಖನಕ್ಕೆ ಪ್ರೇರಣೆಯಾಗಿದೆ. ನೀರಿನಲ್ಲಿ ಮುಳುಗುತ್ತಿರುವ ಈಜು ಬಾರದ ವ್ಯಕ್ತಿಯೊಬ್ಬ ಬದುಕಿ ಉಳಿಯಲು ಕೈಲಾದ ಎಲ್ಲಾ ಪ್ರಯತ್ನ ಮಾಡುತ್ತಾನೆ, ಕೈಗೆ ಸಿಕ್ಕುವ ಎಂತಹದನ್ನಾದರೂ ಹಿಡಿದು ಮೇಲೆ ಬರಲು ಪ್ರಯತ್ನಿಸುತ್ತಾನೆ. ಸಹಾಯಕ್ಕಾಗಿ ಆರ್ತನಾದ ಮಾಡುತ್ತಾನೆ. ಯಾವುದೇ ಸಹಾಯ ಸಿಗದಿದ್ದಾಗ ಅನಿವಾರ್ಯವಾಗಿ ಸಾವಿಗೆ ಶರಣಾಗುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳುವವನ ಸ್ಥಿತಿ ಸಹ ಒಂದು ರೀತಿಯಲ್ಲಿ ಹಾಗೆಯೇ ಇರುತ್ತದೆ. ಸಮಸ್ಯೆಯ ಸುಳಿಯಿಂದ ಪಾರಾಗಲು ಇನ್ನಿಲ್ಲದ ಪ್ರಯತ್ನ ಮಾಡುವ ಅವನಿಗೆ ಸಹಾಯದ ಎಲ್ಲಾ ದಾರಿಗಳೂ ಮುಚ್ಚಲ್ಪಟ್ಟಾಗ ಉಳಿಯುವುದು ದೇವರ ಮೊರೆ ಹೋಗುವುದು ಅರ್ಥಾತ್ ಧ್ಯಾನಿಸುವುದು ಮತ್ತು ಅವ್ಯಕ್ತ ಸಹಾಯಕ್ಕಾಗಿ ಹಂಬಲಿಸುವುದು ಮಾತ್ರ. ಅಲ್ಲೂ ಅವನಿಗೆ ನಿರಾಶೆಯಾದರೆ . . . .? ಆಗ ಮನಸ್ಸು ಬೇರೆ ವಿಚಾರಗಳ ಕುರಿತು ಯೋಚಿಸುವ ವ್ಯವಧಾನ ಕಳೆದುಕೊಂಡಿರುತ್ತದೆ. ಪರಿಸ್ಥಿತಿಯ ಅರಿವಿರುವ ಸ್ನೇಹಿತರು, ಬಂಧುಗಳು ದೇವರ ರೂಪದಲ್ಲಿ ಅವನಿಗೆ ಸಹಾಯಕ್ಕೆ ಒದಗಿದರೆ ಮಾತ್ರ ಅವನನ್ನು ಉಳಿಸಬಹುದು.
     ಆತ್ಮಹತ್ಯೆ ಹತಾಶೆಯ ನಡವಳಿಕೆ. ಖಿನ್ನತೆ, ಮಾನಸಿಕ ಕಾಯಿಲೆಗಳು, ದೈಹಿಕ ಅನಾರೋಗ್ಯ, ಮಾದಕ ದ್ರವ್ಯಗಳ ಸೇವನೆ, ಒತ್ತಡಗಳು, ಆರ್ಥಿಕ ಹಿನ್ನಡೆ, ಧಾರ್ಮಿಕ/ಸಾಮಾಜಿಕ ಸಂಗತಿಗಳು, ವಿಫಲತೆ, ಅವಮಾನ ಮುಂತಾದವು ಆತ್ಮಹತ್ಯೆಯನ್ನು ಪ್ರೇರಿಸುವಂತಹವು. ನೇಣು ಹಾಕಿಕೊಳ್ಳುವುದು, ವಿಷ ಸೇವನೆ, ನೀರಿನಲ್ಲಿ ಮುಳುಗುವುದು, ಇತ್ಯಾದಿಗಳು ಆತ್ಮಹತ್ಯೆ ಮಾಡಿಕೊಳ್ಳುವವರು ಆರಿಸಿಕೊಳ್ಳುವ ರೀತಿಗಳು. ಆತ್ಮಹತ್ಯೆ ಮಾಡಕೊಳ್ಳುವವರಲ್ಲಿ ಹೆಚ್ಚಿನವರು ಮಧ್ಯ ವಯಸ್ಕರು ಮತ್ತು ವೃದ್ಧರು ಎಂದು ಅಂಕಿ-ಅಂಶಗಳು ಹೇಳುತ್ತವೆ. ಅವರುಗಳಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಅಧಿಕವಾಗಿರುವುದು ಕುತೂಹಲಕಾರಿಯಾಗಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರು ಚೀನೀಯರು. ವರ್ಷದಲ್ಲಿ ಸುಮಾರು 2.5 ಲಕ್ಷದಿಂದ 3 ಲಕ್ಷ ಜನರು ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ.  ಸಿಗ್ಮಂಡ್ ಫ್ರಾಯ್ಡ್, ಕ್ಲಿಯೋಪಾತ್ರ, ಮಾರ್ಕ್ ಅಂಟೊನಿ, ಬ್ರೂಟಸ್, ಅಡಾಲ್ಫ್ ಹಿಟ್ಲರ್, ಅರ್ನೆಸ್ಟ್ ಹೆಮಿಂಗ್ ವೇ, ಸೋಕ್ರೆಟಿಸ್, ಮರ್ಲಿನ್ ಮನ್ರೋ, ಮುಂತಾದ ಖ್ಯಾತನಾಮರು ಜೀವನ ಕೊನೆಗೊಳಿಸಿಕೊಂಡದ್ದು ಆತ್ಮಹತ್ಯೆಯಿಂದಲೇ. ಕನ್ನಡದ ಚಲನಚಿತ್ರ ನಟಿಯರಾದ ಕಲ್ಪನಾ, ಮಂಜುಳಾರವರ ಅಂತ್ಯವೂ ಆತ್ಮಹತ್ಯೆಯಿಂದಲೇ ಆದದ್ದು. ಹಿಂದೆ ಶತ್ರುಗಳಿಂದ ಬಂಧನಕ್ಕೊಳಗಾಗಿ ಚಿತ್ರಹಿಂಸೆ ಅನುಭವಿಸುವುದಕ್ಕಿಂತ ಸಾಯುವುದೆ ಮೇಲು ಎಂದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದವರೂ ಇದ್ದರು. ಮುಸ್ಲಿಮ್ ದಾಳಿಕೋರರಿಂದ ಅವಮಾನಿತರಾಗುವುದನ್ನು ತಪ್ಪಿಸಿಕೊಳ್ಳಲು ರಜಪೂತ ಸ್ತ್ರೀಯರು ಸ್ವತಃ ಚಿತೆಗೆ ಹಾರಿ (ಜೌಹರ್) ಪ್ರಾಣ ಬಿಟ್ಟ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲೆಗಳಿವೆ. ಸಮೂಹ ಸನ್ನಿಯಂತೆ ಮೆಚ್ಚಿನ ನಾಯಕರು ನಿಧನರಾದಾಗ ಶೋಕ ತಡೆಯಲಾರದೆ ಹಲವಾರು ಜನ ಪ್ರಾಣ ಕಳೆದುಕೊಂಡದ್ದೂ ಇದೆ.
     ಆತ್ಮಹತ್ಯೆ ಬಯಸಿ ಮಾಡಿಕೊಳ್ಳುವ ಸಂಗತಿಯಾಗಿರದೆ ಎಲ್ಲಾ ಮಾರ್ಗಗಳೂ ವಿಫಲವಾಗಿ ನೋವು ಅಸಹನೀಯವೆನಿಸಿದಾಗ ನಡೆಯುವ ಸಂಗತಿ. ಇದನ್ನು ತಡೆಯುವುದು ಹೇಗೆ? ಎರಡು ಅವಕಾಶಗಳಿವೆ: ಒಂದು- ನೋವನ್ನು ಕಡಿಮೆ ಮಾಡಿಕೊಳ್ಳಲು ದಾರಿ ಹುಡುಕುವುದು; ಎರಡು: ಹೊಸ ಮಾರ್ಗೋಪಾಯಗಳನ್ನು ಅರಸುವುದು. ನಿಜವಾಗಿ ಯಾರೂ ಸಾಯಬಯಸುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡವರಿಗೆ ಮರಳಿ ಜೀವ ಬರಿಸಿ, ಅವರು ಸಾಯಬಯಸುತ್ತಾರೋ ಅಥವ ಬದುಕಬಯಸುತ್ತಾರೋ ಎಂದು ಕೇಳಿದರೆ ಅವರುಗಳು ಬದುಕುವುದನ್ನೇ ಆರಿಸಿಕೊಳ್ಳುತ್ತಾರೆ. ಏಕೆಂದರೆ ದುಡುಕಿನ ವಿಷಘಳಿಗೆ ಅದಾಗಲೇ ಕಳೆದುಹೋಗಿರುತ್ತದೆ. ಉತ್ಕಟ ಸನ್ನಿವೇಶದಲ್ಲಿ ದುಡುಕಿ ಕೈಗೊಳ್ಳುವ ಆತ್ಮಹತ್ಯೆಯತ್ನದಲ್ಲಿ ತಕ್ಷಣಕ್ಕೆ ಸಾವು ಸಂಭವಿಸದೇ ಇದ್ದಾಗ ಜೀವ ಮರಳಿ ಬದುಕಲು ಚಡಪಡಿಸುತ್ತಿರುತ್ತದೆ. ಕೆಲವು ಪ್ರಸಂಗಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿ ಸಾಯದೇ ಬದುಕುಳಿದವರು ಜೀವಚ್ಛವಗಳಂತೆ ಆಗಿ ಇನ್ನೊಬ್ಬರ ಆಶ್ರಯದಲ್ಲಿ ಇರಬೇಕಾಗಿ ಬಂದುದನ್ನೂ ಕಂಡಿದ್ದೇವೆ. ಕೆಲವು ದಶಕಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದ ಕತೆಗಾರ್ತಿಯೊಬ್ಬರು ಅದೃಷ್ಟವಶಾತ್ ಮನೆಯವರ ಸಕಾಲಿಕ ಕ್ರಮ ಮತ್ತು ಚಿಕಿತ್ಸೆಯಿಂದ ಬದುಕಿ ಉಳಿದರು. ನಂತರದಲ್ಲಿ ಆಕೆ ಇತರರಿಗೆ ಆತ್ಮಹತ್ಯೆ ಮಾಡಿಕೊಳ್ಳದಿರಲು ಪ್ರೇರಣೆ ಕೊಡುವ ಲೇಖನ ಬರೆದಿದ್ದರು. ತಾಲ್ಲೂಕು ದಂಡಾಧಿಕಾರಿಯಾಗಿದ್ದಾಗ ನೂರಾರು ಶವಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆ. ಸಂಬಂಧಿಕರ ವಿಚಾರಣೆ, ಹೇಳಿಕೆಗಳನ್ನೂ ದಾಖಲಿಸಿದ್ದೆ. ಬಹುತೇಕ ಸಂದರ್ಭಗಳಲ್ಲಿ ಕಂಡುಬಂದಿದ್ದೇನೆಂದರೆ ಸಂಬಂಧಿಕರು ಸಕಾಲದಲ್ಲಿ ಮೃತರ ಸಹಾಯಕ್ಕೆ ಒದಗಿದ್ದಿದ್ದರೆ ಅವರುಗಳು ಬದುಕಿ ಉಳಿಯುವ ಅವಕಾಶಗಳಿದ್ದವು ಎಂಬುದು!
     ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ತಾನಾಗಿ ಬಂದಾಗ ಸಂತೋಷದಿಂದ ಮಿತ್ರನಂತೆ ಬರಮಾಡಿಕೊಳ್ಳೋಣ. ವಿರಳವಾದ ಮಾನವಜನ್ಮ ಹೊಂದುವುದು ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮಕ್ಕೆ ಹುಟ್ಟು-ಸಾವುಗಳಿಲ್ಲ, ಆದಿ-ಅಂತ್ಯಗಳಿಲ್ಲ. ಆದರೆ, ಒಂದು ವಿಶೇಷವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ.
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.12.3.48.)
     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶವಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಬೇಕೆ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನ ಉದಾಹರಣೆಯಾಗಿದ್ದಾನೆ. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ, ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಕೊನೆಯವರೆಗೂ ಇತ್ತು. ಆಶಾವಾದವೇ ಜೀವನ, ನಿರಾಶಾವಾದವೇ ಮರಣ. ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ.
     ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಗೆ ತಲುಪಿದವರಲ್ಲಿ ಹಲವರು ಕೊನೆಯ ಬಾರಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಬಯಸುತ್ತಾರೆ, ಸುಖವಾಗಿರಲೆಂದು ಹಾರೈಸುತ್ತಾರೆ. ಆ ಹತ್ತಿರದವರು ಸೂಕ್ಷ್ಮಮತಿಗಳಾಗಿದ್ದರೆ ನೆರವಿಗೆ ಬರುತ್ತಾರೆ ಮತ್ತು ಜೀವ ಉಳಿಯುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ತಿಳಿದರೆ ಅವರನ್ನು ಒಲಿಸಿ, ಓಲೈಸಿ ಮನ ಪರಿವರ್ತನೆ ಮಾಡಲು ಕೆಲವು ಸಮಾಜಸೇವಾಸಕ್ತ ಸಂಸ್ಥೆಗಳು ನಗರಗಳಲ್ಲಿ ಕಾರ್ಯಪ್ರವೃತ್ತವಾಗಿರುತ್ತವೆ. ಆದರೆ, ತುರ್ತು ಮತ್ತು ಸಕಾಲಿಕ ನೆರವು ಒದಗಿಸುವವರು ಕುಟುಂಬದ ಸದಸ್ಯರೇ ಆದರೆ ಪರಿಣಾಮಕಾರಿ. ಸೂಕ್ಷ್ಮ ಮನಸ್ಸಿನವರು ಒಂದು ವಿಷಯ ಮನದಟ್ಟು ಮಾಡಿಕೊಳ್ಳಬೇಕು. ಅದೆಂದರೆ, ಆಗಿಹೋಗಿರುವ ಸಂಗತಿಗಳನ್ನು ಅಳಿಸಿ ಬೇರೆಯದನ್ನು ಬರೆಯಲು ಅವಕಾಶವಿಲ್ಲ. ಆದರೆ, ಶೇಷ ಜೀವನವನ್ನು ಸೂಕ್ತ ರೀತಿಯಲ್ಲಿ ಮಾರ್ಪಡಿಸಿ ಬಾಳಲು ಅವಕಾಶವಿದೆ. ಈ ಜಗತ್ತಿನಲ್ಲಿ ಬಲಿಷ್ಠರಿಗೆ ಅವಕಾಶವಿದೆ. ಆದ್ದರಿಂದ ಮಾನಸಿಕವಾಗಿ ಗಟ್ಟಿಗೊಳ್ಳುವುದು ಅತಿ ಅವಶ್ಯಕವಾಗಿದೆ. ನಾವು ಒಂಟಿ, ಏನೂ ಮಾಡಲಾಗುವುದಿಲ್ಲವೆಂದು ಅಸಹಾಯಕತೆಯಿಂದ ಕುಗ್ಗಿದರೆ ಹಾನಿ ನಿಶ್ಚಿತ. ಏನೇ ಬರಲಿ, ಒಂದು ಕೈ ನೋಡೇಬಿಡೋಣ ಎಂದು ಮುನ್ನಡೆದರೆ ಯಶಸ್ಸಿನ ಬಾಗಿಲು ತೆರೆದುಕೊಳ್ಳುತ್ತದೆ. ಪರಿಹಾರವಿಲ್ಲದ ಸಮಸ್ಯೆಗಳಿಲ್ಲ ಎಂಬುದನ್ನು ಮನಗಂಡು ಮುನ್ನಡೆದರೆ ವಿಹ್ವಲಗೊಳ್ಳುವ ಸಂಭವ ಕಡಿಮೆ. ಬದುಕೋಣ, ಸಾಯುವವರೆಗೂ ಬದುಕೋಣ, ಸಾಯದಿರೋಣ, ಬದುಕಿ ಸಾಯೋಣ.
-ಕ.ವೆಂ.ನಾಗರಾಜ್.


ಶುಕ್ರವಾರ, ಜುಲೈ 21, 2017

ವಿಧಿ ಲಿಖಿತವೋ, ಸ್ವಯಂಕೃತವೋ?


     'ಎಲ್ಲಾ ವಿಧಿಲಿಖಿತ, ನಾವೇನು ಮಾಡೋಕಾಗುತ್ತೆ?', 'ಹಣೆ ಬರಹಕ್ಕೆ ಹೊಣೆ ಯಾರು? ಬಂದದ್ದನ್ನು ಅನುಭವಿಸಲೇಬೇಕು' - ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಯಾವುದೇ ವ್ಯಕ್ತಿ ಅನಿವಾರ್ಯವಾಗಿ ಎದುರಿಸಲೇಬೇಕು, ಅನುಭವಿಸಲೇಬೇಕು ಎನ್ನುವ ಸಂಗತಿಗಳು ನಮ್ಮ ಜೀವನವನ್ನು ನಿರ್ದೇಶಿಸುತ್ತವೆ. ನಾವು ಹೇಗೆ ಜೀವಿಸಬೇಕೆಂಬುದನ್ನು ನಿರ್ಧರಿಸಬಲ್ಲೆವು, ಆದರೆ ಎಂದು ಹುಟ್ಟಬೇಕು, ಎಲ್ಲಿ ಹುಟ್ಟಬೇಕು ಎಂಬುದನ್ನು ನಿರ್ಧರಿಸಲಾರೆವು. ಅಪ್ಪ-ಅಮ್ಮ ಯಾರಾಗಬೇಕು ಎಂಬುದೂ ನಮ್ಮ ಕೈಯಲ್ಲಿಲ್ಲ. ಕುಟುಂಬದವರನ್ನು ನಾವು ಪ್ರೀತಿಸಬಹುದು ಅಥವ ದ್ವೇಷಿಸಬಹುದು, ಆದರೆ ನಮ್ಮ ಕುಟುಂಬವನ್ನು ಆರಿಸಿಕೊಳ್ಳಲಾರೆವು. ಎಂತಹ ವಿಚಿತ್ರ! ಎಂತಹ ಚಿಕಿತ್ಸೆ ಬೇಕೆಂದು ಆರಿಸಿಕೊಳ್ಳಬಹುದು, ಎಂತಹ ಕಾಯಿಲೆ ಬೇಕೆಂದು ಆರಿಸಿಕೊಳ್ಳಬಹುದೇ? ಎಲ್ಲಾ ಗೊಂದಲವೇ! ಎಂದೂ ಸಾಯಬಾರದು ಎಂದುಕೊಂಡರೆ ಸಾಧ್ಯವೇ? ಅದೃಷ್ಟವಂತ ಒಂದೇ ಪ್ರಯತ್ನದಲ್ಲಿ ಅಸಾಧ್ಯವಾದುದನ್ನು ಸಾಧಿಸಿಬಿಡಬಹುದು; ಆದರೆ ದುರದೃಷ್ಟವಂತ ಅದೇ ಕೆಲಸವನ್ನು ನೂರು ಸಲ ನೂರು ವಿಧದಲ್ಲಿ ಮಾಡಲು ಪ್ರಯತ್ನಿಸಿ ವಿಫಲನಾಗಿಬಿಡಬಹುದು. ಇದನ್ನು ಹಣೆಬರಹವೆನ್ನಬಹುದೇ? ಇಂತಹ ನೂರಾರು ಸಂದಿಗ್ಧಗಳು, ಸನ್ನಿವೇಶಗಳು ಗೊಂದಲಕ್ಕೆ ಈಡು ಮಾಡುತ್ತವೆ.
     ಹಣೆಬರಹ, ವಿಧಿಲಿಖಿತ ಮುಂತಾದುವಕ್ಕೆ ಅರ್ಥ ಬರಬೇಕೆಂದರೆ ಸನಾತನ ಧರ್ಮೀಯರು ನಂಬುವಂತೆ ಪುನರ್ಜನ್ಮ ಮತ್ತು ಕರ್ಮಫಲವಿರಬೇಕು ಅನ್ನಿಸುತ್ತದೆ. ಇಲ್ಲದಿದ್ದರೆ ಯಾವುದೇ ಒಂದು ಜೀವಿ ಬಡತನದ ಮನೆಯಲ್ಲಿ ಏಕೆ ಜನಿಸಬೇಕು, ಹದ್ದು, ಗೂಬೆಯಾಗಿ ಏಕೆ ಹುಟ್ಟಬೇಕು, ತನ್ನ ಯಾವುದೇ ತಪ್ಪಿಲ್ಲದೆ ಅಂಗವಿಕಲವಾಗಿ ಹುಟ್ಟಬೇಕು ಅಥವ ಶ್ರೀಮಂತರ ಮನೆಯಲ್ಲಿ ಬಾಳುವಂತಾಗಬೇಕು? ಕ್ರೈಸ್ತರು, ಮಹಮದೀಯರು ಪುನರ್ಜನ್ಮ ನಂಬುವುದಿಲ್ಲ. ಹಾಗಾದರೆ ಹುಟ್ಟುವಾಗಲೇ ಬರುವ ಇಂತಹ ವೈಪರೀತ್ಯಗಳಿಗೆ ಏನು ಕಾರಣ ಕೊಡಬೇಕು? ಸತ್ತ ಮೇಲೆ ತನ್ನ ಪಾಪ/ಪುಣ್ಯಗಳಿಗೆ ತಕ್ಕಂತೆ ಫಲ ಅನುಭವಿಸುವುದಾದರೆ, ಪುನರ್ಜನ್ಮವಿಲ್ಲವೆಂದಾದರೆ, ಹುಟ್ಟುತ್ತಲೇ ಈ ರೀತಿಯ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿಗೆ ವಿವರಣೆ ಕೊಡುವುದು ಕಷ್ಟವಾಗುತ್ತದೆ. ಯಾವುದೇ ಕಾರಣವಿಲ್ಲದೆ, ತಮ್ಮ ಯಾವುದೇ ತಪ್ಪಿಲ್ಲದೆ ಕೆಲವರನ್ನು ಸುಖಿಗಳನ್ನಾಗಿ, ಕೆಲವರನ್ನು ದುಃಖಿಗಳನ್ನಾಗಿ ಹುಟ್ಟಿಸಿದರೆ ದೇವರು ನಿಷ್ಕರುಣಿ ಅಥವ ಪಕ್ಷಪಾತಿ ಎನ್ನಬೇಕಾಗುತ್ತದೆ. ಅಲ್ಲದೆ ಅಂತಹ ಸಂದರ್ಭದಲ್ಲಿ ಜೀವಿಗಳು ಮಾಡುವ ಕೆಟ್ಟ ಮತ್ತು ಒಳ್ಳೆಯ ಕೆಲಸಗಳಿಗೆ ದೇವರೇ ಹೊಣೆಗಾರನಾಗಬೇಕಾಗುತ್ತದೆ. ಹಾಗೆ ಇರಲಾರದು! ಅಲ್ಲದಿದ್ದರೆ ಈ ಸ್ಥಿತಿಗೆ ಕೊಡಬಹುದಾದ ಮತ್ತು ಒಪ್ಪಬಹುದಾದ ವಿವರಣೆಯೆಂದರೆ ಜೀವಿಯು ಮಾಡಿದ ಕರ್ಮಫಲವಾಗಿ ಹೀಗೆ ಆಗುತ್ತದೆಂಬುದು! ಒಬ್ಬರೇ ತಂದೆ-ತಾಯಿಗಳಿಗೆ ಹುಟ್ಟಿದ ಮಕ್ಕಳೆಲ್ಲರೂ ಒಂದೇ ಗುಣ, ಸ್ವಭಾವದವರು, ಸಾಮರ್ಥ್ಯ, ಅಭಿರುಚಿಯುಳ್ಳವರಾಗಿರುವುದಿಲ್ಲ.  ಹಿಂದಿನ ಸಂಸ್ಕಾರಗಳ ಫಲವಿರುವುದಿಲ್ಲ, ಪುನರ್ಜನ್ಮವಿಲ್ಲ ಎಂದಾಗಿದ್ದರೆ ಎಲ್ಲರೂ ಸಮಾನ ವ್ಯಕ್ತಿತ್ವದವರಾಗಿರುತ್ತಿದ್ದರು. ಪ್ರತಿ ಜೀವಿಯೂ ಹಿಂದೆ ಮಾಡಿದ ಒಳ್ಳೆಯ, ಕೆಟ್ಟ ಕೆಲಸಗಳಿಗನುಗುಣವಾಗಿ ಕಟ್ಟಿಕೊಂಡು ಬಂದ ಬುತ್ತಿಯ ಗಂಟನ್ನು ಹೊತ್ತುಕೊಂಡೇ ಬರುತಾನೆ ಎಂಬುದನ್ನು ಒಪ್ಪಿಕೊಂಡರೆ ಮಾತ್ರ ದೇವರು ಕ್ರೂರಿಯಲ್ಲ, ಪಕ್ಷಪಾತಿಯಲ್ಲ್ಲ ಎನ್ನಬಹುದು. ಅಥರ್ವವೇದದ ಒಂದು ಮಂತ್ರ ಹೀಗೆ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.12.3.48)
     ಈ ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ, ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಸಹಕಾರಿಗಳ ಸಹಾಯದಿಂದ ಮೋಕ್ಷಕ್ಕೆ ಸೇರುತ್ತೇನೆಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ/ಕರ್ಮಫಲವಿಪಾಕ ಪಾಕ ಮಾಡಿದವನನ್ನು ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಈ ಮಂತ್ರದ ಅರ್ಥ. 'ಮಾಡಿದ್ದುಣ್ಣೋ ಮಹರಾಯ!' ತಾನು ಮಾಡಿದ ಪಾಪವನ್ನು ಇತರರ ಹೆಗಲಿಗೆ ಹೊರಿಸಿ ಪಾರಾಗಬಹುದೆಂದಾಗಲೀ, ಯಾವುದೇ ಪೂಜಾರಿ, ಪಾದ್ರಿ, ಮೌಲ್ವಿಗಳ ಮಧ್ಯಸ್ತಿಕೆಯಿಂದ ಪುಣ್ಯ ಗಳಿಸಬಹುದೆಂದಾಗಲೀ, ಮುಕ್ತಿ ಹೊಂದಬಹುದೆಂಬುದಾಗಲೀ, ತಪ್ಪುಕಾಣಿಕೆ ಒಪ್ಪಿಸಿ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಬಹುದೆಂದಾಗಲೀ ಇಲ್ಲವೇ ಇಲ್ಲ. ಮಾಡಿದ್ದನ್ನು ಅನುಭವಿಸಲೇಬೇಕು. ನಮ್ಮ ಹಣೆಬರಹಕ್ಕೆ ಹೊಣೆಗಾರರು ನಾವೇ!
     ಭಗವದ್ಗೀತೆಯ ಒಂದು ಅಧ್ಯಾಯವೇ ಕರ್ಮಯೋಗಕ್ಕೆ ಮೀಸಲಾಗಿದೆ. ಯಾರೂ ಕರ್ಮ ಮಾಡದೇ ಇರಲಾರರು, ಸದ್ವಿಚಾರಗಳಿಂದ ಒಡಗೂಡಿದ ಕರ್ಮವೇ ಮೋಕ್ಷಕ್ಕೊಯ್ಯಬಲ್ಲದು ಎಂಬುದು ಇದರ ಸಾರ. ಒಳ್ಳೆಯ ಕೆಲಸಗಳಿಂದ ಒಳ್ಳೆಯದಾಗುತ್ತದೆ ಎಂಬುದು ಇದರ ನೀತಿ. ನಾವು ಬದುಕಬೇಕೆಂದರೆ ಅದಕ್ಕಾಗಿ ಪ್ರತಿ ಕ್ಷಣವೂ ಸಾಯಬೇಕು. ನಾವು ಬಿಡುವ ಪ್ರತಿ ಉಸಿರೂ ನಮ್ಮನ್ನು ಸಾವಿನ ಸಮೀಪಕ್ಕೆ ಒಯ್ಯುತ್ತಿರುತ್ತದೆ. ಬದುಕು ಮತ್ತು ಸಾವು ಎನ್ನುವುದು ಒಂದೇ ವಸ್ತುವಿನ ಬೇರೆ ಬೇರೆ ಮುಖಗಳಷ್ಟೆ. ಸಮುದ್ರದ ಅಲೆಗಳಂತೆ ಒಮ್ಮೆ ಮೇಲೆ ಏಳುತ್ತದೆ, ಒಮ್ಮೆ ಕೆಳಗೆ ಬೀಳುತ್ತದೆ. ಬದುಕು ಮತ್ತು ಸಾವು ಎರಡೂ ಸೇರಿದರೆ ಮಾತ್ರ ಒಂದು ಪೂರ್ಣವಾದ ಸಂಗತಿ, ಇಲ್ಲದಿದ್ದರೆ ಅದು ಅಪೂರ್ಣ.
ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ ||
     ನಾವು ಈಗ ಏನಾಗಿದ್ದೇವೋ ಅದಕ್ಕೆ ನಾವೇ ಕಾರಣರು ಎಂದಾದಾಗ ದೇವರನ್ನಾಗಲೀ, ಇತರರನ್ನಾಗಲೀ ಏಕೆ ದೂಷಿಸಬೇಕು? ಸಾವಧಾನದಿಂದ, ಪೂರ್ವಾಗ್ರಹ ಪೀಡಿತರಾಗದೆ ಯೋಚಿಸಿದರೆ ಈ ಸತ್ಯದ ಅರಿವಾಗುತ್ತದೆ. ನಮ್ಮ ತಪ್ಪುಗಳಿಗೆ ಹೊಣೆಗಾರರು ನಾವೇ ಎಂಬುದು ಕಲಿಯಬೇಕಾದ ಮೊದಲ ಪಾಠ. ಯಾರನ್ನೂ ಹೊಗಳುವಂತಿಲ್ಲ, ತೆಗಳುವಂತಿಲ್ಲ. ಕೆಲವೊಮ್ಮೆ ನಮ್ಮ ದುರದೃಷ್ಟ ಮತ್ತು ಸೋಲುಗಳೇ ನಾವು ಉನ್ನತವಾದುದನ್ನು ಸಾಧಿಸಬೇಕೆಂಬ ಛಲ ಮೂಡಿಸುತ್ತದೆ. ಹಿಂದೆ ಮಾಡಿದ ಕೆಲಸಗಳ ಫಲವೇ ಇಂದು ನಾವು ಏನಾಗಿದ್ದೇವೆಯೋ ಅದು ಎನ್ನುವುದಾದರೆ, ಮುಂದೆ ನಾವು ಏನಾಗಬೇಕು ಎಂದು ನಿರ್ಧರಿಸಿ ಅದರಂತೆ ನಮ್ಮ ಈಗಿನ ಕೆಲಸಗಳಿಂದ ಸಾಧಿಸಬಹುದು ಎಂಬುದನ್ನೂ ಒಪ್ಪಬೇಕು. ಮಾಡಬೇಕಿರುವುದೆಂದರೆ ಅದನ್ನು ಹೇಗೆ ಸಾಧಿಸಬೇಕು ಎಂಬುದನ್ನು ಅರಿತು ಮುಂದುವರೆಯುವುದಷ್ಟೆ. ನಮ್ಮ ಭವಿಷ್ಯದ ಶಿಲ್ಪಿಗಳು ನಾವೇ ಆಗಿದ್ದು, ಯಶಸ್ಸಿಗೆ ಬೇಕಾದ ಎಲ್ಲಾ ಸಲಕರಣೆಗಳೂ ನಮ್ಮೊಳಗೇ ಇವೆ. ಇದು ನನ್ನ ಹಣೆಯ ಬರಹ ಎಂದು ಹೇಳುವವನು ಹೇಡಿ ಮತ್ತು ಮೂರ್ಖ ಎಂಬುದು ಸಂಸ್ಕೃತದ ಒಂದು ಗಾದೆ. ಬಲಶಾಲಿ ವ್ಯಕ್ತಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುತ್ತಾನೆ. ಸಾಮಾನ್ಯವಾಗಿ ದುರ್ಬಲ ಮನಸ್ಕರು, ಅಶಕ್ತರು ಮಾತ್ರ ತಮ್ಮ ಹಣೆಯಬರಹದ ಬಗ್ಗೆ ಚಿಂತಿಸಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಅಂತಹವರು ತಮ್ಮ ಹಣೆಬರಹವನ್ನು ಇತರರಿಂದ ಬರೆಸಿಕೊಳ್ಳುವ ಬಲಿಪಶುಗಳೆಂದರೆ ತಪ್ಪಲ್ಲ. ಹಣೆಬರಹವೆಂಬುದು ಪ್ರತಿಯೊಂದು ಸಂಗತಿಯ ಜರುಗುವಿಕೆಗೆ ತಾವೇ ಕಾರಣರೆಂಬುದನ್ನು ಅರಗಿಸಿಕೊಳ್ಳಲಾಗದವರ ಮಾತು! ಏನನ್ನು ಬಿತ್ತುತ್ತೇವೋ ಅದನ್ನೇ ಬೆಳೆಯುತ್ತೇವೆ, ಇದೇ ಸತ್ಯ. ಇದನ್ನು ಅರಿತಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತೇವೆ. ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾರಣವಿರುತ್ತದೆ. ಅದರಲ್ಲಿನ ಸತ್ಯ, ವಾಸ್ತವತೆ ಅರಿತು ತಪ್ಪು ತಿದ್ದಿಕೊಂಡು ಮುನ್ನಡೆದರೆ ಹಣೆಬರಹವನ್ನು ಬದಲಾಯಿಸಬಹುದು. ತಮಾಷೆಯೆಂದರೆ ಗೆದ್ದವರು ಗೆಲುವಿಗೆ ಹಣೆಬರಹ ಕಾರಣವೆನ್ನುವುದಿಲ್ಲ, ಸೋತವರು ಮಾತ್ರ ಸೋಲಿಗೆ ನೆಪವಾಗಿ ಹಣೆಬರಹವೆಂದುಬಿಡುತ್ತಾರೆ. ಬಲಶಾಲಿಗಳನ್ನು ಹಣೆಬರಹ ಇಷ್ಟಪಡುತ್ತದೆ.
-ಕ.ವೆಂ.ನಾಗರಾಜ್.

ಭಾನುವಾರ, ಜುಲೈ 9, 2017

ಭಾಷೆ - ಉನ್ನತಿಯ ಸಾಧನವಾಗಬಲ್ಲದು!


    120 ವರ್ಷಗಳ ಪಂ. ಸುಧಾಕರ ಚತುರ್ವೇದಿಯವರು ಅನುಪಮ ಸಾಧಕರು, ಜ್ಞಾನಿಗಳು. ಪ್ರತಿ ಶನಿವಾರ ಅವರ ಮನೆಯಲ್ಲಿ ನಡೆಯುವ ಸತ್ಸಂಗದಲ್ಲಿ ಒಂದು ವೇದಮಂತ್ರದ ಅರ್ಥವಿಸ್ತಾರವನ್ನು ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ತಿಳಿಸುತ್ತಿದ್ದರೆ ಆಸಕ್ತಿಯಿರುವವರಿಗೆ ಸತ್ಯದರ್ಶನವಾಗುತ್ತಿರುತ್ತದೆ. ಕಳೆದ ವಾರದ ಸತ್ಸಂಗದಲ್ಲಿ ಅವರು ಆರಿಸಿಕೊಂಡಿದ್ದ ಮಂತ್ರವಿದು:
    ಉತ್ಕ್ರಾಮಾತಃ ಪುರುಷ ಮಾವ ಪತ್ಥಾಃ ಮೃತ್ಯೋಃ ಪಡ್ವೀಶಮವಮುಂಚಮಾನಃ| ಮಾ ಚ್ಛಿತ್ಥಾ ಅಸ್ಮಾಲ್ಲೋಕಾದಗ್ನೇಃ ಸೂರ್ಯಸ್ಯ ಸಂದೃಶಃ|| (ಅಥರ್ವ.8.14.)
ಅರ್ಥ:  ಹೇ ಶರೀರವಾಸೀ ಜೀವ! ಸಾವಿನ ಬಂಧವನ್ನು ಕೆಳಕ್ಕೆ ಸರಿಸಿ ಹಾಕುತ್ತಾ, ಇಲ್ಲಿಂದ ಮೇಲಕ್ಕೆದ್ದು ನಡೆ. ಕೆಳಗೆ ಬೀಳಬೇಡ. ಈ ಲೋಕದಿಂದ, ಕಡಿದು ಹೋಗಬೇಡ. ರಾತ್ರಿಯಲ್ಲಿ ಅಗ್ನಿಯ, ಹಗಲಿನಲ್ಲಿ ಸೂರ್ಯನ ಸಮಾನವಾಗಿ ಪ್ರಕಾಶಿಸು. ಸಾವಿನ ಭಯವನ್ನು ದೂರ ಸರಿಸಿ, ಮೇಲಕ್ಕೇರಬೇಕು, ಕೆಳಕ್ಕೆ ಬೀಳಬಾರದು. ಆಧ್ಯಾತ್ಮಿಕ ಜೀವನದ ಗುಂಗಿನಲ್ಲಿ ಈ ಲೋಕದಿಂದ, ಲೌಕಿಕ ಕರ್ತವ್ಯಗಳಿಂದ ದೂರ ಓಡಬಾರದು, ಜೀವನದ ರಾತ್ರಿಯಲ್ಲಿ ಅಂದರೆ ದುಃಖಮಯ ಸ್ಥಿತಿಯಲ್ಲಿ, ಬೆಂಕಿಯಂತೆ ಉರಿದು ದುಃಖವನ್ನು ದಹಿಸಬೇಕು. ಜೀವನದ ಹಗಲಿನಲ್ಲಿ, ಅಂದರೆ ಸುಖಮಯ ಸ್ಥಿತಿಯಲ್ಲಿ ಸೂರ್ಯನಂತೆ ಬೆಳಗಿ, ಎಲ್ಲರಿಗೂ ಆ ಸುಖವನ್ನು ಹಂಚಿಕೊಡಬೇಕು ಎಂಬ ಆಕರ್ಷಕವಾದ ಆಶಯ ಇಲ್ಲಿದೆ.
     ಅಂದು ಉತ್ತರ ಭಾರತದ ಹಲವರು ಸತ್ಸಂಗದಲ್ಲಿ ಭಾಗವಹಿಸಿದ್ದು ಅವರುಗಳಿಗೆ ಕನ್ನಡ ಬರುತ್ತಿರಲಿಲ್ಲ. ಬಂದಿದ್ದ ಇತರರಲ್ಲಿ ಸಹ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಿತ್ತು. ಹಿಂದಿಯಲ್ಲಿ ಮಾತನಾಡಬೇಕೆಂಬ ಕೋರಿಕೆ ಬಂದಾಗ ನಗುತ್ತಲೇ ಅವರು ಹಿಂದಿಯಲ್ಲಿ ಮಾತನಾಡಿದ್ದಲ್ಲದೆ, ಅವರು ಮಾತನಾಡಿದ ವಿಷಯ ಭಾಷೆಯನ್ನೇ ಕುರಿತದ್ದಾಗಿತ್ತು. ಭಾಷೆಯ ಮಹತ್ವವನ್ನು ಮೇಲಿನ ಮಂತ್ರದೊಂದಿಗೆ ಸಮೀಕರಿಸಿ ವಿವರಿಸಿದ್ದು, ಅವರ ಸಾಮಯಿಕ ಪ್ರಜ್ಞೆ ಮತ್ತು ಪ್ರತಿಯೊಂದರಲ್ಲೂ ಉನ್ನತಿಯ ಹಾದಿಯನ್ನು ತೋರಿಸಬಲ್ಲ ಸಾಧಕತ್ವಕ್ಕೆ ಸಾಕ್ಷಿಯಾಯಿತು. ಯಾವಾಗಲೂ ಕನ್ನಡದಲ್ಲಿಯೇ ಮಾತನಾಡುವ ಅವರಿಗೆ ಅಂದಿನ ದಿನವಾದರೂ ಹಿಂದಿಯಲ್ಲಿ ಮಾತನಾಡುವ ಅವಕಾಶ ಸಿಕ್ಕಿತೆಂದು ತಮಾಷೆ ಮಾಡಿ ಮಾತನಾಡಿದ ಅವರು ಹೇಳಿದ ಕೆಲವು ಅಂಶಗಳನ್ನು ನಾನು ಅರ್ಥೈಸಿಕೊಂಡಂತೆ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.
     ನನ್ನ ಮಾತೃಭಾಷೆ ಕನ್ನಡ. ಕನ್ನಡಕ್ಕೇ ನನ್ನ ಮೊದಲ ಆದ್ಯತೆ. ನಂತರದ ಆದ್ಯತೆ ಹಿಂದಿಗೆ. ಅದರ ನಂತರದ ಆದ್ಯತೆ ಸಂಸ್ಕೃತಕ್ಕೆ. ಹಿಂದಿ ಭಾರತಮಾತೆಯ ಪುತ್ರಿ, ಇತರ ಹಲವು ಭಾಷೆಗಳಂತೆ. ಅದನ್ನು ರಾಷ್ಟ್ರಭಾಷೆ ಅನ್ನಿ, ಸಂಪರ್ಕ ಭಾಷೆ ಅನ್ನಿ, ಏನಾದರೂ ಅನ್ನಿರಿ. ಹಿಂದಿಯಲ್ಲೂ ಎರಡು ವಿಧ - ಉರ್ದು ಮಿಶ್ರಿತ, ಸಂಸ್ಕೃತ ಮಿಶ್ರಿತ. ಉರ್ದು, ಪಾರ್ಸಿ, ಬಿಹಾರಿ, ಇತ್ಯಾದಿ ಹಲವು ಭಾಷೆಗಳ ಕಲಸು ಮೇಲೋಗರದ ಹಿಂದಿ ಭಾಷೆಯೂ ಚಾಲ್ತಿಯಲ್ಲಿದೆ. ಅದನ್ನು ಹಿಂದೂಸ್ಥಾನೀ ಅನ್ನುತ್ತಾರೆ. ನಾನು ದಕ್ಷಿಣ ಭಾರತೀಯ, ಕನ್ನಡಿಗ, ನಾನು ಆಡುವ ಹಿಂದಿಯಲ್ಲಿ ಕನ್ನಡದ ಪ್ರಭಾವವೂ ಇರುತ್ತದೆ. ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಜಾಸ್ತಿ ಇದೆ. ಹಿಂದಿಯಲ್ಲಿ ಮಾತನಾಡುವುದು ಕನ್ನಡಕ್ಕೆ ಮಾಡುವ ಅಪಮಾನವಲ್ಲ. ಭಾಷೆಯ ಕೆಲಸವಾದರೂ ಏನು? ನಮ್ಮ ಭಾವನೆಗಳನ್ನು ಇತರರಿಗೆ ತಲುಪಿಸುವ, ಪ್ರಸರಿಸುವ ಸಾಧನ. ಭಾಷೆಯ ಹೆಸರಿನಲ್ಲಿ ಗುದ್ದಾಡುವುದು ಹಾಸ್ಯಾಸ್ಪದ.  
     ಆನೋ ಭದ್ರಾಃ ಕ್ರತವೋ ಯಂತು ವಿಶ್ವತೋ ದಬ್ಧಾಸೋ ಅಪರೀತಾಸ ಉದ್ಭಿದಃ| ದೇವಾ ನೋ ಯದಾ ಸದಮಿದ್ ವೃಧೇ ಅಸನ್ನಪ್ರಾಯುವೋ ರಕ್ಷತಾರೋ ದಿವೇ ದಿವೇ|| (ಯಜು.25.14.) ಒಳ್ಳೆಯ ಭಾವನೆಗಳು, ಮಂಗಳಕರ ವಿಚಾರಗಳು ಸದಾಕಾಲ ಎಲ್ಲೆಡೆಯಿಂದಲೂ ಲಭಿಸಲಿ, ಜ್ಞಾನಿಗಳು ನಮ್ಮೆಲ್ಲರ ಒಳಿತಿಗಾಗಿ ಒದಗಿಬರಲಿ ಎಂಬ ಮಂತ್ರ ಹೇಳುವುದೂ ಇದನ್ನೇ. ಮಂಗಳಕರ ವಿಚಾರಗಳನ್ನು ಎಲ್ಲೆಡೆಗೆ ಪಸರಿಸಲು ಭಾಷೆಯೇ ಸಾಧನ. ನನ್ನ ಭಾಷೆ ಕನ್ನಡ. ನನ್ನ ಮಾತೃಭಾಷೆಯನ್ನು ಗೌರವಿಸುತ್ತೇನೆ. ಹಿಂದಿ ಸಹ ಅದನ್ನು ಮಾತನಾಡುವವರ ಮಾತೃಭಾಷೆ ಎಂದು ತಿಳಿಯಿರಿ. (ಹಾಗೆಯೇ ತಮಿಳು, ತೆಲುಗು ಇತ್ಯಾದಿಗಳು ಆಯಾ ಭಾಷಿಕರ ಮಾತೃಭಾಷೆ). ಇನ್ನೊಬ್ಬರ ಮಾತೃಭಾಷೆಯನ್ನು ಅಪಮಾನಿಸುವುದು ನನ್ನ ಮಾತೃಭಾಷೆಯನ್ನೂ ಅಪಮಾನಿಸಿದಂತೆ. (ಇನ್ನೊಬ್ಬರ ತಾಯಿಯನ್ನು ಅಗೌರವಿಸುವುದು ನಮ್ಮ ಸಂಸ್ಕೃತಿಗೆ ತರವಲ್ಲ.) ಇಡೀ ಪ್ರಪಂಚದ ಉದ್ಧಾರದ ದಿನ ಎಂದು ಬರುತ್ತದೆ? ನೀನು ಯಾರು? ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಬರುವ ಉತ್ತರ, ನಾನು ಕನ್ನಡಿಗ, ನಾನು ಆಂಧ್ರದವನು, ನಾನು ತಮಿಳಿಗ ಇತ್ಯಾದಿ. ಇಂತಹ ಉತ್ತರಗಳ ಬದಲಿಗೆ ನಾನು ಮಾನವ ಎಂದು ಉತ್ತರ ಬಂದ ದಿನ ಪ್ರಪಂಚದ ಉದ್ಧಾರವಾಗುತ್ತದೆ. ಆಗ ನಮ್ಮ ದೇಶವೂ ಉದ್ಧಾರವಾಗುತ್ತದೆ, ನಮ್ಮ ಉದ್ಧಾರವೂ ಆಗುತ್ತದೆ. 
     ಉತ್ಕ್ರಾಮಾತಃ ಪುರುಷಃ ಮಾ ಅವಪತ್ಥಾ -ಹೇ, ಶರೀರವಾಸಿ ಪುರುಷ (ಜೀವಾತ್ಮ), ನೀನು ಯಾವ ಸ್ಥಿತಿಯಲ್ಲಿದೆಯೋ ಅಲ್ಲಿಂದ ಮೇಲಕ್ಕೇರು, ಬೀಳಬೇಡ. ಜಾರುವುದು, ಬೀಳುವುದು   ಸುಲಭ, ಏರುವುದು ಕಷ್ಟ. ಒಳ್ಳೆಯ ಭಾವನೆಗಳನ್ನು ಎಲ್ಲೆಲ್ಲೂ ಪ್ರಸರಿಸಿರಿ. ನಗಬಲ್ಲವನು ಮನುಷ್ಯ, ಅಳಬಲ್ಲವನು ಪಶು; ಪಶುಗಳಾಗಬೇಡಿ, ಮನುಷ್ಯರಾಗಿ. ಆತ್ಮದ ಭಾಷೆ ಯಾವುದು? ಆತ್ಮಕ್ಕೇ ಗೊತ್ತು! ನಮ್ಮ ಎಲ್ಲಾ ಶಾಸ್ತ್ರಗಳು ಸಂಸ್ಕೃತದಲ್ಲಿವೆ, ಅದಕ್ಕೇ ಅದನ್ನು ದೇವಭಾಷೆ ಎನ್ನುತ್ತಾರೆ. ಸಂಸ್ಕೃತವನ್ನು ಆದರಿಸುತ್ತೇನೆ, ಲೋಕಭಾಷೆಯಲ್ಲಿ ಮಾತನಾಡುತ್ತೇನೆ, ಏಕೆಂದರೆ ನನ್ನ ಭಾವನೆಗಳನ್ನು ಜನರಿಗೆ ತಲುಪಿಸಬೇಕು, ಅದು ಮುಖ್ಯ. ಭಾಷೆಯ ವಿಷಯದಲ್ಲಿ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದವರಿಂದ ಹಿಂದೆ ನನಗೆ ತೊಂದರೆಯೂ ಆಗಿದೆ. ನಾವು ಯಾವ ಪ್ರಾಂತದಲ್ಲಿ ಹುಟ್ಟುತ್ತೇವೆ, ಅಲ್ಲಿನ ಅನ್ನ ತಿನ್ನುತ್ತೇವೆ, ನೀರು ಕುಡಿಯುತ್ತೇವೆ, ಅಲ್ಲಿನ ಭಾಷೆ ಆಡುತ್ತೇವೆ. ನನಗೆ ತೆಲುಗು, ತಮಿಳು ಭಾಷೆಯ ಬಗ್ಗೆ ದ್ವೇಷವಿಲ್ಲ, ಅದು ನನ್ನ ಭಾಷೆಯಲ್ಲದಿರಬಹುದು, ಆದರೆ ಅವೂ ನಮ್ಮವೇ! ಆ ಭಾಷೆಗಳು ನನ್ನ ಸಹೋದರ, ಸಹೋದರಿಯರ ಭಾಷೆಗಳು! ಭಾಷೆಯ ಹೆಸರಿನಲ್ಲಿ ಗುದ್ದಾಡಬಾರದು. ಭಾಷೆ ಒಂದು ಸಾಧನ ಮಾತ್ರ.  ಕನ್ನಡದಲ್ಲಿ ಮಾತನಾಡುವುದು ನಮ್ಮ ಕರ್ತವ್ಯವಾಗುತ್ತದೆ. ಯಾವ ಭಾಷೆ ತಿಳಿದಿದೆಯೋ ಅದರಲ್ಲಿ ಜನರು ಮಾತನಾಡುತ್ತಾರೆ. ಆ ವಿಷಯದಲ್ಲಿ  ದುರಾಗ್ರಹ ಸಲ್ಲದು.  ನನಗೆ ನಾಲ್ಕು-ಐದು ಭಾಷೆಗಳು ಬರುತ್ತವೆ. ನನ್ನ ಪ್ರಥಮ ಆದ್ಯತೆ ಮಾತ್ರ ಕನ್ನಡಕ್ಕೆ. ಎಲ್ಲಾ ಭಾಷೆಗಳನ್ನು ಆದರದಿಂದ ಕಾಣಬೇಕು. ನಮ್ಮ ಮಾತೃಭಾಷೆಯ ಮೇಲೆ ಸ್ವಾಭಾವಿಕ ಪ್ರೇಮ ಇದ್ದೇ ಇರುತ್ತದೆ, ಇರಬೇಕು, ಅದು ತಪ್ಪಲ್ಲ. ಮಾತೃಭಾಷೆಯಿರಲಿ, ರಾಷ್ಟ್ರಭಾಷೆಯಿರಲಿ, ಗೌರವಿಸಬೇಕು.  ಮೂಕರಿಗೆ ಯಾವ ಭಾಷೆ? ಭಾಷೆಯ ಕಾರಣದಿಂದ ಗುದ್ದಾಡುವ ಬದಲು ಮೂಗರಾಗುವುದು ಒಳ್ಳೆಯದು. 
     ಮಾತಾಡುವುದಾದರೆ ಸತ್ಯವನ್ನೇ ಆಡು, ಆಡುವುದಾದರೆ ಪ್ರೇಮ ಹೆಚ್ಚಿಸುವ ಮಾತನಾಡು, ದ್ವೇಷ ಉಂಟುಮಾಡುವ ಕಹಿ ಮಾತುಗಳನ್ನು ಆಡಬಾರದು. ಯಾವ ಪವಿತ್ರ ನಾಲಿಗೆಯನ್ನು ಪರಮಾತ್ಮ ಕೊಟ್ಟಿದ್ದಾನೋ ಅದನ್ನು ಕೊಳಕು ಮಾತನಾಡಿ ಅಪವಿತ್ರಗೊಳಿಸಬಾರದು. ಒಳ್ಳೆಯದನ್ನು ಆಡು, ಸುಂದರವಾಗಿ ಆಡು. ಭಾಷೆ ಆತ್ಮವನ್ನು ಆತ್ಮದೊಂದಿಗೆ ಜೋಡಿಸಬೇಕು, ಆತ್ಮದೊಂದಿಗೆ ಆತ್ಮವನ್ನು ಎಚ್ಚರಿಸಬೇಕು. ಭಾಷೆಯೂ ನಮ್ಮನ್ನು ಉನ್ನತಿಗೇರಿಸುವ, ಮೇಲಕ್ಕೇರುವ ಸಾಧನವಾಗಬಲ್ಲದು.  ಯಾರು ಎಲ್ಲಿ ಹುಟ್ಟುತ್ತಾರೆ ಎಂದು ಯಾರಿಗೆ ಗೊತ್ತು? ಸದಾ ಹಿತ, ಮಿತ, ಸತ್ಯದ ಮಾತುಗಳಾಡಬೇಕು. ಸಾಂದರ್ಭಿಕವಾಗಿಯೂ ಇರಬೇಕು. ಸತ್ಯದ ಮಾತು ಎಂದು ಕುರುಡನೊಬ್ಬನನ್ನು, ಏಯ್ ಕುರುಡಾ, ಬಾ ಇಲ್ಲಿ ಎಂದು ಕರೆದರೆ ಅದು ಹಿತವಾದ ಮಾತಾಗುವುದಿಲ್ಲ. ಇಂತಹ ಸೂಕ್ಷ್ಮವನ್ನು ತಿಳಿಯಬೇಕು. ಯಾವಾಗ ಮೌನವಾಗಿರಬೇಕು, ಯಾವಾಗ ಮೌನವಾಗಿರಬಾರದು ಎಂಬ ಅರಿವು ಇರಬೇಕು. ಅನ್ಯಾಯ ಕಂಡಾಗ ಸುಮ್ಮನಿರಬಾರದು. ಹಾಗೆಯೇ ಯಾರದಾದರೂ ಸಾವು ಸಂಭವಿಸಿದ ಸಂದರ್ಭದಲ್ಲಿ ಅನುಚಿತವಾದ ಮಾತನಾಡದೆ, ಸಂಬಂದಿಗಳ ಬೆನ್ನು ತಟ್ಟಿ ಮೌನವಾಗಿ ಸಂತೈಸಲೂ ಸಾಧ್ಯವಿದೆ. ಕೆಲವೊಮ್ಮೆ ಕಟುವಾಗಿಯೂ ಮಾತಾಡಬೇಕಾಗುತ್ತದೆ. ತಂದೆ, ತಾಯಿ ಮಕ್ಕಳನ್ನು, ಶಿಕ್ಷಕ ವಿದ್ಯಾರ್ಥಿಯನ್ನು ಕೆಲವೊಮ್ಮೆ ಬಯ್ಯಬೇಕಾಗುತ್ತದೆ. ಅದರ ಉದ್ದೇಶ ಅವರನ್ನು ಸುಧಾರಿಸಿ ಉತ್ತಮವಾಗಿಸಬೇಕೆಂಬುದಾಗಿರುತ್ತದೆ. ಬಯ್ಯುವುದು ನಮ್ಮ  ಹಕ್ಕು ಎಂಬಂತೆ ಅವರು ಹಾಗೆ ಮಾಡಲಾಗುವುದೇ? ಅದೂ ಸರಿಯಲ್ಲ. ನೀನು ಯಾರು? ನಾನು ಮಾನವ. ನಿನ್ನ ಕರ್ತವ್ಯ ಏನು? ಇರುವಷ್ಟು ದಿನ ನಗುವುದು, ನಗಿಸುವುದು! ಎಲ್ಲರ ಹಿತವನ್ನೇ ಬಯಸುವುದು! ನೀನೂ ನಗು, ಎಲ್ಲರನ್ನೂ ನಗಿಸು! ಇದೇ ಉನ್ನತಿಗೇರುವ ಸಾಧನ! ಮೇಲಕ್ಕೇರುವ ದಾರಿಯಲ್ಲಿ ಸಾಗಿ, ಕೆಳಕ್ಕೆ ಬೀಳಬೇಡಿ! 
-ಕ.ವೆಂ.ನಾಗರಾಜ್.