ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಮಾರ್ಚ್ 7, 2015

'ದೇಶದ ಏಕತೆಗೆ ಸಂಸ್ಕೃತ ಅತ್ಯಗತ್ಯ' - ಹಾಸನದಲ್ಲಿ ಸಂಭ್ರಮದ ಜಿಲ್ಲಾ ಸಂಸ್ಕೃತ ಸಮ್ಮೇಳನ

     'ಸಂಸ್ಕೃತ ಕೇವಲ ಒಂದು ವರ್ಗಕ್ಕೆ ಅಥವ ಜನಾಂಗಕ್ಕೆ ಸೀಮಿತವಾದ ಭಾಷೆಯಲ್ಲ. ಭಾರತ ಜಾತ್ಯಾತೀತ ಎನ್ನಿಸಿಕೊಳ್ಳಬೇಕಾದರೆ, ಏಕತೆ ಬಯಸುವುದಾದರೆ ಸಂಸ್ಕೃತ ಬಳಕೆ ಆಗಲೇಬೇಕು'- ಇದು ವೇದಭಾರತೀ ಮತ್ತು ಸಂಸ್ಕೃತಭಾರತಿ ಆಶ್ರಯದಲ್ಲಿ ದಿನಾಂಕ ೨೪.೨.೨೦೧೫ರಂದು ಹಾಸನದ ಶ್ರೀ ಆದಿಚುಂಚನಗಿರಿ ಸಮುದಾಯಭವನದಲ್ಲಿ ನಡೆದ ಜಿಲ್ಲಾ ಸಂಸ್ಕೃತ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ, ನಟ ಹಾಗೂ ನಿರ್ಮಾಪಕರಾದ ಶ್ರೀ ಕೆ.ಎಸ್.ಎಲ್. ಸ್ವಾಮಿಯವರು ಉದ್ಘಾಟನಾ ಭಾಷಣದಲ್ಲಿ ಹೇಳಿದ ಮಾತು. ಮುಂದುವರೆದು ದೇಶದ ಜ್ಞಾನ ಭಂಡಾರ ಮತ್ತು ಸಕಲ ಶಾಸ್ತ್ರಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಸಂಸ್ಕೃತವನ್ನು ಕಲಿಯಲೇಬೇಕು ಮತ್ತು ಬಳಸಬೇಕು ಎಂದರು. ಶ್ರೀ ಶ್ರೀನಿವಾಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಯುತರಾದ ಪಿ.ವಿ. ಭಟ್, ಪಾಂಡುರಂಗ ಮತ್ತು ಮಂಜುನಾಥ್ ನಿರೂಪಣೆಯ ಕಾರ್ಯ ನಿರ್ವಹಿಸಿದರು.

ಶೋಭಾಯಾತ್ರೆ ಮತ್ತು ಪ್ರದರ್ಶಿನಿ:
     ಸಮಾರಂಭಕ್ಕೆ ಮುನ್ನ ನಗರದ ಹೇಮಾವತಿ ಪ್ರತಿಮೆಯ ಬಳಿಂದ ಸಮಾರಂಭದ ಸ್ಥಳದವರೆಗೆ ಘೋಷಣಾ ಫಲಕಗಳು, ಕೇಸರಿ ಧ್ವಜಗಳನ್ನು ಹಿಡಿದು ಕುಣಿದು ಕುಪ್ಪಳಿಸಿದ ಯುವ ಸಮೂಹ, ಮಾತೆಯರು, ಸಜ್ಜನರೊಂದಿಗೆ ನಡೆದ ಬೃಹತ್ ಶೋಭಾಯಾತ್ರೆ ಜನರ ಗಮನ ಸೆಳೆಯಿತು. ಸಂಸ್ಕೃತದ ಪರ ಘೋಷಣೆಗಳು, ಜೈಕಾರಗಳು ಮುಗಿಲು ಮುಟ್ಟಿದ್ದವು. ಬೆಳಿಗ್ಗೆ ೯.೦೦ ಘಂಟೆಗೆ ಶೋಭಾಯಾತ್ರೆಯೊಂದಿಗೆ ಆರಂಭವಾದ ಸಮ್ಮೇಳನ ವಿವಿಧ ಕಾರ್ಯಕ್ರಮಗಳೊಂದಿಗೆ ರಾತ್ರಿ ೯.೦೦ ಘಂಟೆಗೆ ಸಂಪನ್ನಗೊಂಡಿತ್ತು. ಕಿಕ್ಕಿರಿದು ತುಂಬಿದ್ದ ಸಭಾಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಭಾಗವಹಿಸಿದ್ದು ಸಂಸ್ಕೃತದ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಯಿತು. ಇದರ ನಂತರದಲ್ಲಿ ವಿಶೇಷವಾಗಿ ಏರ್ಪಡಿಸಿದ್ದ ಪ್ರದರ್ಶಿನಿಯನ್ನು ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಉದ್ಘಾಟಿಸಿದರು.



ಸಮ್ಮೇಳನದ ಉದ್ಘಾಟನೆ:
     ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಮತ್ತು ವೇದಘೋಷ ಆದನಂತರದಲ್ಲಿ ಸಮಾರಂಭದ ಉದ್ಘಾಟನೆಯನ್ನು ಶ್ರೀ ಕೆ.ಎಸ್.ಎಲ್. ಸ್ವಾಮಿಯವರು ಮಾಡಿದರು. ಈ ಸಂದರ್ಭದಲ್ಲಿ ಸಮ್ಮೇಳನದ ಗೌರವಾಧ್ಯಕ್ಷ ಶ್ರೀ ಸಿ.ಎಸ್. ಕೃಷ್ಣಸ್ವಾಮಿ, ಕಾರ್ಯಾಧ್ಯಕ್ಷ ಶ್ರೀ ಅಟ್ಟಾವರ ರಾಮದಾಸ್, ಶ್ರೀ ಗೋವಿಂದರಾಜ ಶ್ರೇಷ್ಠಿ,  ಸಮ್ಮೇಳನದ ಸಂಯೋಜಕ ಶ್ರೀ ಹರಿಹರಪರ ಶ್ರೀಧರ್, ವೇದಭಾರತಿಯ ಗೌರವಾಧ್ಯಕ್ಷ ಶ್ರೀ ಕವಿನಾಗರಾಜ್, ಅಧ್ಯಕ್ಷ ಶ್ರೀ ಅಶೋಕಕುಮಾರ್, ಸಂಸ್ಕೃತ ಭಾರತಿಯ ದಕ್ಷಿಣ ಕರ್ನಾಟಕ ಸಂಪರ್ಕ ಪ್ರಮುಖ ಶ್ರೀ ಶ್ರೀನಿವಾಸನ್ ಮುಂತಾದವರು ಹಾಜರಿದ್ದರು.


'ಜೀವನವೇದ' ಪುಸ್ತಕದ ಲೋಕಾರ್ಪಣೆ:
     ಶ್ರೀ ಹರಿಹರಪುರ ಶ್ರೀಧರ್ ವಿಕ್ರಮ ವಾರಪತ್ರಿಕೆ, ಹಾಸನದ ಜನಮಿತ್ರ ಮತ್ತು ಜನಹಿತ ಪತ್ರಿಕೆಗಳಲ್ಲಿ ಬರೆದಿದ್ದ ವೇದದ ಮಂತ್ರಗಳ ಸಾರವನ್ನು ಅವುಗಳ ಅರ್ಥದೊಂದಿಗೆ ಪ್ರಚಲಿತ ಘಟನೆಗಳು, ನಿತ್ಯ ಜೀವನದ ಪ್ರಸಂಗಗಳೊಂದಿಗೆ ತುಲನೆ ಮಾಡಿ ಸಮಾಜದ ಉನ್ನತಿಗೆ ವೇದಗಳ ಪ್ರಸ್ತುತತೆಯನ್ನು ಎತ್ತಿ ಹಿಡಿದ ೫೧ ಲೇಖನಗಳನ್ನು ಸಂಗ್ರಹಿಸಿ ಸಮೃದ್ಧ ಪ್ರಕಾಶನ  ಪ್ರಕಟಿಸಿದ 'ಜೀವನವೇದ' ಪುಸ್ತಕವನ್ನು ಹಾಜರಿದ್ದ ಗಣ್ಯರ ಸಮಕ್ಷಮದಲ್ಲಿ ಬೆಂಗಳೂರು ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ  ಶ್ರೀ ಮಲ್ಲೇಪುರಮ್ ವೆಂಕಟೇಶರು ಲೋಕಾರ್ಪಣೆ ಮಾಡಿದರು. ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ವೇದಮಂತ್ರದ ಸಾರವನ್ನು ಸರಳ ಮತ್ತು ಆಕರ್ಷಕವಾಗಿ ಬರೆದಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಕ್ರಮ ವಾರಪತ್ರಿಕೆಯ ಸಂಪಾದಕ ಶ್ರೀ ದು.ಗು. ಲಕ್ಷ್ಮಣ್‌ರವರು ಶ್ರೀಧರರ ಲೇಖನಗಳು ಓದುಗರ ಮನ್ನಣೆ ಮತ್ತು ಪ್ರಶಂಸೆ ಗಳಿಸಿದ್ದವೆಂದರು. ಯಾವುದೇ ಕೃತಿಯನ್ನು ಓದದೇ ಪೂರ್ವಾಗ್ರಹ ಪೀಡಿತರಾಗಿ ವಿಮರ್ಶಿಸುವ ವಿಚಾರವಾದಿಗಳು ಎಂದು ಕರೆದುಕೊಳ್ಳುವವರದು ಹುಚ್ಚುತನವೋ, ಮೂರ್ಖತನವೋ ತಿಳಿಯದು ಎಂದರು. 'ಭಗವದ್ಗೀತೆಯನ್ನು ಸುಡಲು ಹೊರಟಿರುವ ಮಹಾನುಭಾವರು ಅದನ್ನು ಓದಿರುವುದೇ ಇಲ್ಲ; ಒಂದು ವೇಳೆ ಓದಿ ಅರ್ಥ ಮಾಡಿಕೊಂಡಿದ್ದಲ್ಲಿ ಅದನ್ನು ಸುಡುವ ಮಾತೇ ಬರುತ್ತಿರಲಿಲ್ಲ' ಎಂದು ಪರೋಕ್ಷವಾಗಿ ಗೀತೆಯನ್ನು ಸುಡುತ್ತೇನೆಂದು ಹೇಳಿದ್ದವರ ಕುರಿತು ಆಕ್ರೋಷ ವ್ಯಕ್ತಪಡಿಸಿದರು.



ಸದ್ಭಾವನಾ ವಿಚಾರಗೋಷ್ಠಿ:
     ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದ ಕೃಷ್ಣರಾಜನಗರ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ಶಿವಾನಂದಪುರಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಶ್ರೀ ಶಂಕರಪ್ಪ ಮತ್ತು ವೇದಭಾರತಿಯ ಗೌರವಾಧ್ಯಕ್ಷ ಶ್ರೀ ಕವಿ ನಾಗರಾಜ್ ತಮ್ಮ ವಿಚಾರಗಳನ್ನು ಮಂಡಿಸಿದರು.



ವಿಶೇಷ ಗೋಷ್ಠಿಗಳು:
     'ಶುಲ್ಬಸೂತ್ರೇಷು ಗಣಿತಮ್' ಕುರಿತು ಡಾ. ಅನಿಲ್ ಕುಮಾರ್ ವಿವರಿಸಿದರು. ಸಂಸ್ಕೃತ ವಿಕಿಪೀಡಿಯ ಕುರಿತು ಡಾ. ಶುಭಾರವರು ವಿಶೇಷ ಮಾಹಿತಿಗಳನ್ನು ಸಭೆಗೆ ನೀಡಿದರು. ದೇಶೀ ನಾಯಕತ್ವಮ್ ಕುರಿತು ಬೆಂಗಳೂರಿನ ಸಂಸ್ಕೃತ ವಿ.ವಿ.ಯ ಕುಲಪತಿ ಡಾ. ಶ್ರೀನಿವಾಸ ವರಖೇಡಿಯವರು ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷ ಸಂವಾದ ನಡೆಸಿಕೊಟ್ಟುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 'ಸಂಸ್ಕೃತದ ಪ್ರಸ್ತುತತೆ' ಕುರಿತು ಡಾ. ಗುರುಮೂರ್ತಿಯವರು ಮಾತನಾಡಿದರು.





ಸಮಾರೋಪ:
     ಆಯರ್ವೇದ ಕಾಲೇಜಿನ ಪ್ರಾಂಶುಪಾಲರು ಮತ್ತು ಸಂಸ್ಕೃತ ಭಾರತಿಯ ಹಾಸನ ಜಿಲ್ಲಾಧ್ಯಕ್ಷರು ಆದ ಡಾ. ಪ್ರಸನ್ನ ಎನ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಯಶಸ್ಸಿಗೆ ಕಾರಣಕರ್ತರಾದ ಎಲ್ಲರನ್ನೂ ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಕೃತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಲವರು ಶಿಕ್ಷಕರು, ವಿದ್ವಾಂಸರನ್ನು ಸನ್ಮಾನಿಸಲಾಯಿತು.


ನಿರ್ಣಯಗಳು:
ಈ ಕೆಳಕಂಡ ನಿರ್ಣಯಗಳನ್ನು ಸಭೆ ಅಂಗೀಕರಿಸಿತು:
೧. ೧ರಿಂದ೧೨ನೆಯ ತರಗತಿವರೆಗೆ ವಿದ್ಯಾರ್ಥಿಗಳು ಒಂದು ಭಾಷೆಯಾಗಿ ಸಂಸ್ಕೃತವನ್ನು ಅಭ್ಯಸಿಸುವಂತಾಗಬೇಕು.
೨. ಆಯುರ್ವೇದ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಪ್ರತಿ ವಿದ್ಯಾನಿಲಯಗಳಲ್ಲಿ ಸಂಸ್ಕೃತ ಭಾಷೆಯಲ್ಲಿ ಸರ್ಕಾರವೇ ಒದಗಿಸಬೇಕು.
೩. ಬಿಎಡ್. ಎಮ್ ಎಡ್ ಸೇರಿದಂತೆ ಇತರ ವೃತ್ತಿಪರ ಕ್ಷೇತ್ರಗಳಲ್ಲಿ ಸಂಸ್ಕೃತ ಕಡ್ಡಾಯವಾಗಿ ಜಾರಿಗೆ ಬರಬೇಕು.
೪. ವೇದಗಳನ್ನು ಅಧ್ಯಯನ ಮಾಡುವ ಸಲುವಾಗಿ ಪಾಠಶಾಲೆಗಳನ್ನು ತೆರೆಯಬೇಕು.
ಸಾಂಸ್ಕೃತಿಕ ಕಾರ್ಯಕ್ರಮಗಳು:
     ಭರತನಾಟ್ಯಗಳು, ವೈಯಕ್ತಿಕ ಮತ್ತು ಸಮೂಹ ಗೀತೆಗಳು, ಸಂಸ್ಕೃತ ಕಿರುನಾಟಕಗಳು ಸಭಿಕರ ಮನ ರಂಜಿಸಿದವು. ಒಟ್ಟಾರೆಯಾಗಿ ಸಂಸ್ಕೃತದ ಕುರಿತು ಜಾಗೃತಿ ಮೂಡಿಸುವಲ್ಲಿ ಸಮ್ಮೇಳನ ಯಶಸ್ವಿಯಾಯಿತು.


-ಕ.ವೆಂ.ನಾಗರಾಜ್.
***************
ಹೆಚ್ಚಿನ ವಿವರಗಳು ಮತ್ತು ಫೋಟೋಗಳಿಗೆ ಇಲ್ಲಿ ಕ್ಲಿಕ್ಕಿಸಿ: ಸಂಸ್ಕೃತ ಸಂಭ್ರಮ  
5.03.2015ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ:

8.-05-2015ರ ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರಕಟಿತ:

3 ಕಾಮೆಂಟ್‌ಗಳು:

  1. nageshamysore
    'ವಿವಿಧತೆಯಲ್ಲಿ ಏಕತೆ' ಎಂಬ ಘೋಷದಡಿ ಅನೇಕತೆಗಳ ಸಫಲ ಸಂಗಮದ ಒಂದು ಚಿತ್ರ ಸಿಗುವುದಾದರೆ, ಅನೇಕ ವೇಳೆ ಆ ವೈವಿಧ್ಯ ಹುಟ್ಟು ಹಾಕುವ ಅನೇಕತೆಯೆ ಒಗ್ಗಟ್ಟಿನ ಸಮಷ್ಟಿತ ಫಲಿತಕ್ಕೆ ತೊಡಕಾಗುವುದು ವಿಪರ್ಯಾಸ. ಭಾಷೆ ಸಹ ಇಂತಹ ವೈವಿಧ್ಯ ಮತ್ತು ಸಂದಿಗ್ದದ ಮಿಶ್ರರೂಪಕ್ಕೆ ಒಂದು ಜ್ವಲಂತ ನಿದರ್ಶನ. ಒಂದೆಡೆ ಇಂಗ್ಲೀಷಿನಂತಹ ಒಂದು ಭಾಷೆ ಜಗದೆಲ್ಲೆಡೆಗು ಹರಡಿ ದಿಗ್ವಿಜಯಿಸಿದ ಉದಾಹರಣೆ ಕಂಡರೆ, ಮತ್ತೆ ಕೆಲವೆಡೆ (ಅದರಲ್ಲೂ ನಮ್ಮಂತಹ ಸಾಂಸ್ಕೃತಿಕ ವಾತಾವರಣದಲ್ಲಿ) ಭಾಷೆಗಳೆ ಪರಸ್ಪರ ತಿಕ್ಕಾಟದ ಮೂಲವಾಗಿ ಅಡ್ಡಾಗಾಲು ಹಾಕುವುದು ಕಾಣುತ್ತದೆ. ಒಟ್ಟಾರೆ ಸ್ಥಳೀಯ ಭಾಷೆಯ ಹೊರತಾಗಿ, ಸಂಸ್ಕೃತದಂತದಂತಹ ಭಾಷಾ ಜ್ಞಾನ ಸಾಮಾನ್ಯ ಸ್ತರದಲ್ಲೂ ಹರಡಿದ್ದರೆ, ಆ ಭಾಷೆಯಲ್ಲಿರುವ ವಿಪುಲ ಜ್ಞಾನದ ಕದ ಪ್ರತಿಯೊಬ್ಬರಿಗು ತಂತಾನೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ, ಜತೆಗೆ ಅದನ್ನು ಭಾಷಾಂತರಿಸಿ ಮತ್ತಷ್ಟು ಹುಲುಸಾಗಿಸುವ ಪ್ರಕ್ರಿಯೆಗೂ ಬಲ ಸಿಗುತ್ತದೆ.

    kavinagaraj
    ಧನ್ಯವಾದ ನಾಗೇಶರೇ. ಸಂಸ್ಕೃತಧ ಫಧಗಳು ಬಹುಷಃ ಎಲ್ಲಾ ಭಾಷೆಗಳಲ್ಲೂ ಬಳಕೆಯಲ್ಲಿವೆ. ಭಾಷಾ ಸಾಮರಸ್ಯಕ್ಕೆ ಇದು ಸಹಕಾರಿಯಾಗುತ್ತದೆ.

    abdul
    ನಾಗರಾಜ್ ರವರಿಗೆ ನಮಸ್ಕಾರಗಳು,
    'ದೇಶದ ಏಕತೆಗೆ ಸಂಸ್ಕೃತ ಅತ್ಯಗತ್ಯ' - "ಏಕತೆ" ಪದ ಓದಿದಾಗ ಎಲ್ಲೋ ಓದಿದ ಒಂದು ಘಟನೆ ನೆನಪಿಗೆ ಬಂತು. ಪ್ರೊ. ನಿಸಾರ್ ಅಹಮದ್ ರವರು ಪಾಲ್ಗೊಂಡಿದ್ದ ಒಂದು ಸಾಹಿತ್ಯಕ ಸಭೆಯಲ್ಲಿ, ಸಭಿಕರೊಬ್ಬರು ಪ್ರೊ. ಅಹಮದ್ ರವರಿಗೆ ಕೇಳಿದ ಪ್ರಶ್ನೆಯಲ್ಲಿ "ಏಕತೆ" ಎನ್ನುವ ಮಾತಿತ್ತು. ಪ್ರತಿಕ್ರಯಿಸಿದ ನಿಸಾರ್ ಅಹಮದ್, "ಏಕತೆ, ಇದ್ಯಾವ ಪದ? ಕನ್ನಡ ಬರದವರ ಪ್ರಶ್ನೆಗಳಿಗೆ ಉತ್ತರಿಸೋಲ್ಲ" ಎಂದು ಸಿಡುಕಿದ್ದರು . ಐಕ್ಯತೆ ಎನ್ನುವ ಪದಕ್ಕೆ ಏಕತೆ ಪರ್ಯಾಯವಾಗಿ ಹೇಗೆ ಬಂತೋ ಗೊತ್ತಿಲ್ಲ.

    ದೇಶದ ಐಕ್ಯತೆಗೆ ಸಂಸ್ಕೃತ ಅತ್ಯಗತ್ಯ ಎನ್ನುವ ಹೇಳಿಕೆಯ ಮೇಲೆ ದೊಡ್ಡ ಚರ್ಚೆ ನಡೆಯಬಹುದು. ವೈಯಕ್ತಿಕವಾಗಿ, ನಾನು ಸಂಸ್ಕೃತ ಪರ. ಪ್ರಾಚೀನ, ಶ್ರೀಮಂತ ಭಾಷೆಯೊಂದು ಅವಗಣನೆಗೆ ಈಡಾಗಿದ್ದು ದುಃಖಕರ. ಹಾಗೆಯೇ, ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸುವ ಜನ ಸಂಸ್ಕೃತವನ್ನು ಹೇಗೆ ಸ್ವಾಗತಿಸುವರು ಎನ್ನುವುದು ಕುತೂಹಲದ ವಿಚಾರ.

    kavinagaraj
    ನಮಸ್ತೆ, ಅಬ್ದುಲ್. ಏಕ ಅನ್ನುವುದು ಸಂಸ್ಕೃತ ಮೂಲದಿಂದ ಬಂದ ಪದವಾಗಿದೆ. ಏಕತೆ ಅನ್ನುವುದು ಒಂದೇ ರೀತಿಯ ಮನೋಭಾವ ಹೊಂದುವುದು ಎಂಬ ಅಭಿಪ್ರಾಯ ಮೂಡಿಸಿದರೆ, ಐಕ್ಯತೆ ಎಂಬ ಪದ ಒಂದಾಗುವುದು, ಸಮ್ಮಿಲಿತಗೊಳ್ಳುವುದು ಎಂಬ ಆಶಯ ಹೊಮ್ಮಿಸುತ್ತದೆ.
    ನಿಜ, ಈ ವಿಷಯ ಚರ್ಚೆಗೆ ಅರಹವಾದದ್ದೇ ಆಗಿದೆ. ನಮ್ಮತನದ ಅರಿವು ಮೂಡುವವರೆಗೂ ಬದಲಾವಣೆ ಸುಲಭವಲ್ಲ.

    keshavmysore
    ಕವಿ ನಾಗರಜ್ ರವರಿಗೆ ನಮಸ್ಕಾರಗಳು.
    ಸಮ್ಮೇಳನದ ಸಭೆಯು ಅಂಗೀಕರಿಸಿದ ೪ ನಿರ್ಣಯಗಳಲ್ಲಿ ೧ನೆಯ ಮತ್ತು ೩ನೆಯ ನಿರ್ಣಯಗಳು ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹವು. ದೇಶದ ಏಕತೆಯ ಹೆಸರಿನಲ್ಲಿ ಈ ರೀತಿಯ ಹೇರಿಕೆ ಆಕ್ಷೇಪಣಾರ್ಹ - ಏಕೆಂದರೆ ಉದಾತ್ತವಾದ ಗುರಿಯೊಂದರ ಸಾಧನೆಗೆ ದಬ್ಬಾಳಿಕೆಯ ಮಾರ್ಗ ಎಷ್ಟು ಸರಿ? ಉದಾಹರಣೆಗೆ, ನಾನು ಸಂಸ್ಕೃತವನ್ನು ಒಂದು "ಭಾಷೆಯಾಗಿ" ಪದವಿಯವರೆಗೆ ಆಯ್ದುಕೊಂಡಿದ್ದೆ. ಆದರೆ ನನ್ನ ಸಂಸ್ಕೃತದ ಈ ಮಟ್ಟದ ಅಧ್ಯಯನ ಸಂಸ್ಕೃತ ಸಾಹಿತ್ಯ ಜ್ಞಾನ ಭಂಡಾರವನ್ನು ತೆರೆಯುವ ಕೀಲಿಕೈ ಆಗಲು ಸಾಲದೇ ಇದ್ದದ್ದು. ಸಂಸ್ಕೃತ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಂಸ್ಕೃತವನ್ನು ಒಂದು "ಭಾಷೆಯಾಗಿ" ಅಲ್ಲ - ಒಂದು "ವಿಷಯವಾಗಿ" ಅಭ್ಯಸಿಸಬೇಕು. ಆಗ ಮಾತ್ರ ನೀವು ಇಚ್ಛಿಸಿದ ಗುರಿ ತಲುಪಲು ಸಾಧ್ಯ.
    ನೀವು ಹೇಳಿದ ಹಾಗೆ ಸಂಸ್ಕೃತ ಭಾಷೆಯಲ್ಲಿರುವ ಅಗಾಧವಾದ ಜ್ಞಾನವು ಜನಸಾಮಾನ್ಯರಿಗೆ ತಲುಪಬೇಕಾದರೆ ಸಂಸ್ಕೃತ ಭಾಷೆಯಿಂದ ಭಾರತದ ವಿವಿಧ ಭಾಷೆಗಳಿಗೆ ಅವುಗಳ ಅನುವಾದದ ಕೆಲಸವು ವವಸ್ಥಿತವಾದ ರೀತಿಯಲ್ಲಿ ಸರ್ಕಾರವು ಕೈಗೊಳ್ಳಬೇಕು. ಈಗ ಹರಿಹರಪುರ ಶ್ರೀಧರರು ಒಬ್ಬರೇ ಮಾಡುತ್ತಿರುವ ಸ್ತುತ್ಯರ್ಹವಾದ ಕೆಲಸವು ಸರ್ಕಾರದ ವತಿಯಿಂದ ನಡೆಯಬೇಕೆಂಬ ನಿರ್ಣಯವನ್ನು ತೆಗೆದುಕೊಂಡಿದ್ದರೆ ಅದು ನಿಜಕ್ಕೂ ಸ್ವಾಗತಾರ್ಹವಗುತ್ತಿತ್ತು.

    ಇದಕ್ಕೊಂದು ಸ್ವಾನುಭವದ ಉಲ್ಲೇಖ ಹೀಗಿದ ನೋಡಿ -
    ೫೦ರ ದಶಕದಲ್ಲಿ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಅಂದಿನ ಸೋವಿಯತ್ ಒಕ್ಕೂಟವು ಯೂರೋಪ್ ಮತ್ತು ಅಮೆರಿಕಗಳಿಗಿಂತ ಹೆಚ್ಚು ಪ್ರಗತಿ ಸಾಧಿಸಿತ್ತು. ಆದರೆ ಅದರ ಸಂಶೋಧನಾ ಪ್ರಬಂಧಗಳೆಲ್ಲವೂ ರಷಿಯನ್ ಭಾಷೆಯಲ್ಲಿಯೇ ಇದ್ದುದರಿಂದ ಸೋವಿಯತ್ ನ ಸಂಶೋಧನೆಗಳ ಪ್ರಗತಿಯ ಪ್ರಯೋಜನ ಹೊರ ಜಗತ್ತಿಗೆ ಅಲಭ್ಯವಾಗಿತ್ತು. ಸೋವಿಯತ್ ಒಕ್ಕೂಟ ಮತ್ತು ಅಮೆರಿಕ ಆ ಕಾಲದಲ್ಲಿ ಬದ್ಧ ವೈರಿಗಳಾಗಿದ್ದರೂ ಮತ್ತು ಹಲವು ಕ್ಷೇತ್ರಗಳಲ್ಲಿ ಕಡು ಸ್ಪರ್ಧಿಗಳಾಗಿದ್ದರೂ, ಸೋವಿಯತ್ ನ ಸಂಶೋಧನೆಗಳ ಜ್ಞಾನವನ್ನು ಹೊರ ಜಗತ್ತಿಗೆ ತಲುಪಿಸಲು ರಷಿಯನ್ ಭಾಷೆಯ ಎಲ್ಲ ವೈಜ್ಞಾನಿಕ ಸಂಶೋಧನಾ ಬರಹಗಳನ್ನೂ ಅವು ಪ್ರಕಟಗೊಂಡ ಒಂದು ತಿಂಗಳೊಳಗೆ ಇಂಗ್ಲಿಷ್ ಭಾಷೆಗೆ ಅನುವಾದಿಸಿ ಪ್ರಕಟಿಸಿ ಎಲ್ಲರಿಗೂ ಸಿಗುವಂತೆ ಮಾಡಲಾಯಿತು. ಉದಾಹರಣೆಗೆ, ರಷಿಯದ "ಜಿಯೋಖಿಮಿಯ" ಎಂಬ ಭೂರಸಾಯನಶಾಸ್ತ್ರದ ಮಾಸಿಕವು "ಜಿಯೋಕೆಮಿಸ್ತ್ರಿ ಇಂಟರ್ ನ್ಯಾಶನಲ್" ಎಂಬ ಹೆಸರಿನಲ್ಲಿ ಹೊರಜಗತ್ತಿಗೆ ಇಂಗ್ಲಿಷ್ ನಲ್ಲಿ ದೊರಕುತ್ತಿತ್ತು. ನನ್ನ ಸಂಶೋಧನೆಗಾಗಿ ನಾನೂ ಸಹ ಅದರಲ್ಲಿನ ಹಲವಾರು ಲೇಖನಗಳನ್ನು ಅಭ್ಯಸಿಸಿದ್ದೆ.
    ಈಗ ಹೇಳಿ - ಸೋವಿಯತ್ ಒಕ್ಕೂಟದ ವೈಜ್ಞಾನಿಕ ಪ್ರಗತಿಯನ್ನು ಸರಿಗಟ್ಟಲು ಯೂರೋಪ್ ಮತ್ತು ಅಮೆರಿಕದ ಎಲ್ಲ ವಿಜ್ಞಾನಿಗಳು ರಷಿಯನ್ ಕಲಿಯಬೇಕೆಂದು ಕಡ್ಡಾಯಪಡಿಸಿದ್ದರೆ ಪ್ರಗತಿ ಸಾಧ್ಯವಾಗುತ್ತಿತ್ತೇ?

    - ಕೇಶವಮೈಸೂರು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. kavinagaraj
      ವಿಸ್ತೃತ ಪ್ರತಿಕ್ರಿಯೆಗೆ ವಂದನೆಗಳು, ಕೇಶವರೇ.
      ಸಮ್ಮೇಳನದ ನಿರ್ಣಯಗಳು ಜಾರಿಗೆ ಬರಬೇಕೆಂದರೆ ಸರ್ಕಾರ ಆ ಕುರಿತು ಕಾಳಜಿ ಹೊಂದಿರಬೇಕು. ಇಂದಿನ ವ್ಯವಸ್ಥೆಯಲ್ಲಿ ಅದನ್ನು ನಿರೀಕ್ಷಿಸಲೇ ಆಗದು. ಆದರೆ, ಸಂಸ್ಕೃತ ಅಧ್ಯಯನ, ಅಭ್ಯಾಸಕ್ಕೆ ಉತ್ತೇಜನವಂತೂ ಸಿಗಬೇಕು.ಇಂಗ್ಲೆಂಡ್, ಅಮೆರಿಕಾಗಳಂತೆ ಸಂಸ್ಕೃತವನ್ನು ವ್ಯವಸ್ಥಿತವಾಗಿ ಅಭ್ಯಸಿಸುವ ವ್ಯವಸ್ಥೆ ಭಾರತದಲ್ಲೂ ಬರಬೇಕು. ವಿಪರ್ಯಾಸವೆಂದರೆ ನಾವೇ ಸಂಸ್ಕೃತವನ್ನು ಮೃತಭಾಷೆ ಮಾಡಹೊರಟಿದ್ದೇವೆ. 1982ರ ನಂತರದಲ್ಲಿ ಶಾಲೆಗಳಲ್ಲಿನ ಸಂಸ್ಕೃತ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿಯೇ ಇಲ್ಲ. ಹಿಂದಿ ಮತ್ತು ಉರ್ದು ಭಾಷೆಗಳ ಅಧ್ಯಾಪಕರ ಹುದ್ದೆಗಳನ್ನೂ ಈ ವರ್ಷವೂ ಸಹ ಭರ್ತಿ ಮಾಡಲು ಕ್ರಮ ಕೈಗೊಂಡಿದ್ದಾರೆ!
      ಹರಿಹರಪುರ ಶ್ರೀಧರರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರೊಡನೆ ಸಹಮನಸ್ಕರು ಕೈಜೋಡಿಸಿರುವುದರಿಂದ ಅವರಿಗೆ ಸುಲಭವಾಗಿದೆ. ಉತ್ತಮ ಕಾರ್ಯಕರ್ತರೂ ಜೊತೆಗಿದ್ದಾರೆ.
      ಸಂಸ್ಕೃತದಿಂದ ಮಾತ್ರ ಎಂಬುದಕ್ಕಿಂತ ಸಂಸ್ಕೃತದಿಂದ ಲಭಿಸಿದ ಜ್ಞಾನ ಎಂಬುದರಲ್ಲಿ 'ನಮ್ಮತನ'ದ ಹೆಮ್ಮೆಯೂ ಇರುತ್ತದೆ. ನಮ್ಮ ಹೆಮ್ಮೆಯಾದ ವೇದಗಳ ಅರಿವು, ತಿಳಿವಿಗಾಗಿಯೂ ಸಂಸ್ಕೃತ ಅಗತ್ಯವಾಗಿದೆ.

      ಅಳಿಸಿ
    2. Iynanda Prabhukumar
      ಶ್ರೀ ಕೇಶವ‌ ಮೈಸೂರು ಅವರು ಬರೆದಂತೆ ೧ನೇ ಮತ್ತು ೩ನೇ ನಿರ್ಣಯಗಳು ಹೇರಿಕೆಗಳಾದಾವು. ಬದಲಿಗೆ ಸಂಸ್ಕ್ಱತವನ್ನು ಸುಲಭವಾಗಿ ಕಲಿಸುವ‌ ಕೇಂದ್ರಗಳನ್ನು ತೆರೆದರೆ ಒಳ್ಳೆಯದಾದೀತು. ಬೆಂಗಳೂರಿನ ಗಿರಿನಗರದ‌ಲ್ಲಿರುವ‌ ಸಂಸ್ಕ್ಱತ‌ ಭಾರತಿ ಮತ್ತು ಅದರಂಥ‌ ಸಂಸ್ಥೆಗಳ‌ ಸಣ್ಣ‌ ಪ್ರಮಾಣದ‌ ಶಾಖೆಗಳು ಬೆಂಗಳೂರಿನಲ್ಲಿಯೂ, ಜಿಲ್ಲೆ / ತಾಲ್ಲೂಕು ಮಟ್ಟಗಳಲ್ಲಿಯೂ ತೆರೆಯಲ್ಪಟ್ಟು ಸಂಸ್ಕ್ಱತವನ್ನು ಐಚ್ಛಿಕವಾಗಿ ಕಲಿಸಬೇಕು.
      ವೇದಾಧ್ಯನದ‌ ಪಾಠಶಾಲೆಗಳು ನೀರಿಳಿಯದ‌ ಗಂಟಲಲ್ಲಿ ಕಡುಬನ್ನು ತುರುಕುವಂತಾದೀತು. ವೇದಗಳ‌ ಸಂಸ್ಕ್ಱತ‌ ಕಠಿಣ‌ ಮತ್ತು ಅವು ಗೂಢಾರ್ಥಗಳಿಂದ‌ ಕೂಡಿವೆ. ಅವುಗಳ‌ ಅಧ್ಯಯ‌ನ‌ ಜನಸಾಮಾನ್ಯರು ಮಾಡಲಾರರು. ಅವರು ಸುಲಭ‌ ‍ಸಾಮಾನ್ಯ‌ ಸಂಸ್ಕ್ಱತವನ್ನು ಕಲಿತು, “Hi, how are you? What news?” ಎಂದು ಕೇಳುವ‌ ಬದಲಿಗೆ, "ಕುಶಲಂ ವಾ? ಕಃ ವಿಶೇಷಃ?" ಎಂದು ಮಾತುಕತೆಯನ್ನಾರಂಭಿಸುವಂತಾಗಬೇಕು.
      Abacus, ಮೊದಲಾದ‌ ತರಗತಿಗಳಿಗೆ ಹೋಗಿ ಕಲಿಯುವಂತೆ ಸಂಸ್ಕ್ಱತ‌ ಕೇಂದ್ರಗಳಿಗೆ ಮಕ್ಕಳು ಪ್ರತಿವಾರಕ್ಕೆ ಒಮ್ಮಿಮ್ಮೆಯಾದರೂ ಹೋಗಿ ಕಲಿಯುವ‌ ಅನುಕೂಲತೆಯಿರಬೇಕು. ಶಾಲಾ ಕಾಲೆಜುಗಳಲ್ಲಿ ಈಗ‌ ಕಲಿಯುತ್ತಿರುವ‌ ಗಣಿತಕ್ಕೆ ಪೂರಕವಾಗುವಂತೆ ವೇದಗಣಿತವನ್ನು ಕಲಿಸಬೇಕು.
      ಶಾಲಾ ಕಾಲೆಜುಗಳಲ್ಲಿ ಸಂಸ್ಕ್ಱತವನ್ನು ಭಾಷೆಯನ್ನಾಗಿ ಪರೀಕ್ಷೆಗೆಂದು ಕಲಿಯುವವರು ಬಳಿಕ‌ ಆ ಭಾಷೆ ಕಿವಿಗಳಿಗೆ ಮತ್ತೆ ಬೀಳದೇ ಇರುವದರಿಂದ‌ ಬಳಸದೇ ಮರೆತುಬಿಡುವರು.
      ಹಿಂದಿ ಜನಪ್ರಿಯವಾದದು ಟಿವಿ ಮಾಧ್ಯಮದಿಂದ‌. ಸಂಸ್ಕ್ಱತದ‌ ಟಿವಿ ಚಾನಲ್ ಮತ್ತು ಬಾನುಲಿ ಕೇಂದ್ರಗಳು ಬರಬೇಕು. ಅವುಗಳಲ್ಲಿ ವಾರ್ತೆಗಳು, ವಿಜ್ಞಾನ, ದೇಶ‌ ವಿದೇಶಗಳ‌ ಸಂಸ್ಕ್ಱತಿ, ಇತಿಹಾಸ‌, ಇತ್ಯಾದಿಗಳಿಗೆ ಸಂಬಂಧಿಸಿದ‌ ಕಾರ್ಯಕ್ರಮಗಳು ಪ್ರಸಾರವಾಗಬೇಕು.
      ಈ ತೆರನ‌ ಯೋಜನೆಗಳು ಇನ್ನೊಂದು ವರ್ಷದೊಳಗೆ ಆರಂಭವಾದರೆ ೨೦೨೦ಕ್ಕೆ ಶೇಕಡಾ ೫೦ರಷ್ಟು ಜನರು ದಿನನಿತ್ಯ ಸಂಸ್ಕ್ಱತವನ್ನೇ ಬಳಸುವಂತಾಗುವದರಲ್ಲಿ ಸಂಶಯವಿಲ್ಲ‌.

      kavinagaraj
      ಉತ್ತಮ ರಚನಾತ್ಮಕ ಸಲಹೆಗಳಿರುವ ಪ್ರತಿಕ್ರಿಯೆಗಾಗಿ ವಂದನೆಗಳು, ಐನಂಡ ಪ್ರಭುಕುಮಾರರೇ. ಸಂಸ್ಕೃತಾಭಿಮಾನೆಗಳೇ ಈ ಕೆಲಸಗಳನ್ನು ಮಾಡಬೇಕಿದೆ. ಸರ್ಕಾರದಿಂದ ನಿರೀಕ್ಷಿತ ನೆರವು ಕಷ್ಟ.

      ಅಳಿಸಿ