ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಮಾರ್ಚ್ 3, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 6

ಸದ್ಭಾವನಾ ವಿಚಾರಗೋಷ್ಠಿ
"ಸಂಸ್ಕೃತ ಎಂದರೆ ಒಳ್ಳೆಯದು; ಸಂಸ್ಕೃತಿ ಎಂದರೆ ಒಳ್ಳೆಯ ಕೆಲಸ!"
     ಸಂಸ್ಕೃತ ಸಮ್ಮೇಳನದ ಅಂಗವಾಗಿ ಸದ್ಭಾವನಾಗೋಷ್ಠಿ ಏರ್ಪಡಿಸಲಾಗಿತ್ತು. ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠದ ಕೃಷ್ಣರಾಜನಗರ ಶಾಖಾಮಠದ ಮುಖ್ಯಸ್ಥರಾದ ಶ್ರೀ ಶ್ರೀ ಶಿವಾನಂದಪುರಿ ಮಹಾಸ್ವಾಮಿಯವರ ಉಪಸ್ಥಿತಿಯಲ್ಲಿ ನಡೆದ ಗೋಷ್ಠಿಯ ನಿರ್ವಹಣೆಯನ್ನು ಬೆಂಗಳೂರು ಸಂಸ್ಕೃತ ವಿ.ವಿ.ಯ ನಿವೃತ್ತ ಕುಲಪತಿ ಶ್ರೀ ಮಲ್ಲೇಪುರಂ ವೆಂಕಟೇಶರು ಮಾಡಿದರು. ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಶ್ರೀ ಶಂಕರಪ್ಪ ಮತ್ತು ವೇದಭಾರತಿಯ ಗೌರವಾಧ್ಯಕ್ಷ ಶ್ರಿ ಕವಿನಾಗರಾಜ್ ತಮ್ಮ ವಿಚಾರಗಳನ್ನು ಮಂಡಿಸಿದರು. ಶ್ರೀ ಶ್ರೀ ಶಿವಾನಂದಪುರಿ ಮಹಾಸ್ವಾಮಿಯವರು ಪೂರಕ ವಿಚಾರಗಳನ್ನು ಹಂಚಿಕೊಳ್ಳುವುದರ ಜೊತೆಗೆ ಆಶೀರ್ವಚನ ನೀಡಿದರು. ಶ್ರೀ ಜಿ.ಎಸ್. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
     ಶ್ರೀ ಮಲ್ಲೇಪುರಂ ವೆಂಕಟೇಶರು ಗೋಷ್ಠಿಯನ್ನು ಆರಂಭಿಸುತ್ತಾ, "ವೇದಗಳ ಕುರಿತು ಇದ್ದ ಅಪಪ್ರಚಾರಗಳನ್ನು ತೊಡೆಯುವಲ್ಲಿ ಮಹರ್ಷಿ ದಯಾನಂದ ಸರಸ್ವತಿಯವರು ಅನುಪಮ ಕೊಡುಗೆ ನೀಡಿದ್ದಾರೆ. ನಂತರದಲ್ಲೂ ಅನೇಕ ಮಹನೀಯರು ವೇದಗಳು ಸಾಮರಸ್ಯದ ಭಾವವನ್ನೇ ಭೋಧಿಸುತ್ತವೆ ಎಂಬುದನ್ನು ಪ್ರತಿಪಾದಿಸಿದ್ದಾರೆ. ಸಾಮರಸ್ಯ ಅನ್ನುವುದು ಸನಾತನ ಧರ್ಮದ ತಳಹದಿಯಾಗಿದೆ" ಎಂದರು.
     ಮೊದಲಿಗೆ ಮಾತನಾಡಿದ ಶ್ರೀ ಕವಿ ನಾಗರಾಜರು, "ನಾಲ್ಕೂ ವೇದಗಳ ಯಾವುದೇ ಮಂತ್ರದಲ್ಲಿ ಜಾತಿ ಹುಟ್ಟಿನಿಂದ ಬರುವುದೆಂಬ ಬಗ್ಗೆ ಉಲ್ಲೇಖವಿಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇತ್ಯಾದಿ ಪದಗಳನ್ನು ಮಂತ್ರಗಳನ್ನು ಬಳಸಲಾಗಿದ್ದರೂ ಅವು ಎಂದೂ ಜಾತಿಸೂಚಕವಾಗಿರಲಿಲ್ಲ. ಆದರೆ, ಸುದೀರ್ಘವಾದ ಯಾವುದೋ ಹಿಂದಿನ ಕಾಲಘಟ್ಟದಲ್ಲಿ ಹುಟ್ಟಿನಿಂದ ಜಾತಿಯನ್ನು ಬಳಸುವ ಸಂಪ್ರದಾಯ ಬೆಳೆದುಕೊಂಡು ಬಂದಿತು. 'ಶಾಸ್ತ್ರಾದ್ರೂಢಿರ್ಬಲೀಯಸೀ'- ಶಾಸ್ತ್ರಗಳಿಗಿಂತಲೂ ಸಂಪ್ರದಾಯಗಳೇ ಬಲಶಾಲಿ ಎಂಬ ನಾಣ್ಣುಡಿಯಂತೆ ಸಾಂಪ್ರದಾಯಿಕರು ಈ ವ್ಯವಸ್ಥೆಯನ್ನು ಬಲಗೊಳಿಸಿದರು. ಇಂದಿನ ರಾಜಕಾರಣಿಗಳೂ, ಸರ್ಕಾರಗಳೂ ಸಹ ಬಾಯಿಯಲ್ಲಿ ಜಾತ್ಯಾತೀತತೆಯ ಮಾತನಾಡುತ್ತಿದ್ದರೂ ಜಾತೀಯತೆಯನ್ನು ಬಲಗೊಳಿಸುತ್ತಲೇ ನಡೆದಿರುವುದು ಸಾಮರಸ್ಯ ಸಾಧನೆಗೆ ಅಡ್ಡಿಯಾಗಿದೆ. ಈಗ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿಗಣತಿಯ ಉದ್ದೇಶ ಸಹ ಹುಟ್ಟಿನ ಜಾತಿಯನ್ನು ಬಲಗೊಳಿಸುವುದೇ ಆಗಿದೆ. ಗಣತಿಯ ನಮೂನೆಯಲ್ಲಿ ತಮ್ಮ ಜಾತಿಯನ್ನು ಹೇಳಿಕೊಳ್ಳಲು ಇಚ್ಛಿಸದವರನ್ನು 'ಜಾತಿ ಇಲ್ಲ' ಎಂಬ ಕಲಮಿನಲ್ಲಿ ದಾಖಲಿಸಿಕೊಳ್ಳುತ್ತಾರೆ. ಆದರೆ ಅವರನ್ನು 'ಮನುಷ್ಯ ಜಾತಿ' ಎಂಬ ಕಲಮಿನಲ್ಲಿ ದಾಖಲಿಸಿಕೊಳ್ಳುವುದು ಸೂಕ್ತ. ವೇದಗಳಲ್ಲಿ ಸಾಮರಸ್ಯ ಮತ್ತು ಸಮಾನತೆಯ ಭಾವಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ವೇದಗಳ ಆಶಯವನ್ನು ಅನುಷ್ಠಾನಗೊಳಿಸುವಲ್ಲಿ ಹಾಸನದ ವೇದಭಾರತಿ ಪುಟ್ಟದಾದರೂ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಜಾತಿ, ಮತ, ಪಂಥ, ಲಿಂಗ ಬೇಧವಿಲ್ಲದೆ ಆಸಕ್ತರೆಲ್ಲರಿಗೂ ವೇದಮಂತ್ರಗಳನ್ನು ಕಲಿಯಲು, ಅರ್ಥ ತಿಳಿಯಲು, ಅಗ್ನಿಹೋತ್ರದಲ್ಲಿ ಪಾಲುಗೊಳ್ಳಲು ಅವಕಾಶ ಮಾಡಿಕೊಟ್ಟಿದೆ. ನೈಜ ಸಾಮರಸ್ಯ ಸಾಧಿಸಲು ಎಲ್ಲರೂ ಕೈ ಜೋಡಿಸೋಣ" ಎಂದರು.
     ಶ್ರೀ ಶಂಕರಪ್ಪನವರು ಮಾತನಾಡಿ, "ವೇದಭಾರತಿ ಉತ್ತಮ ಕೆಲಸ ಮಾಡುತ್ತಿದೆ. ವಿವಿಧ ಮಠಾಧೀಶರುಗಳು, ಸಾಧು-ಸಂತರು ತಮ್ಮ ಮಠಗಳಿಂದ ಹೊರಬಂದು ಸಾಮಾನ್ಯರೊಂದಿಗೆ ಬೆರೆಯಬೇಕಿದೆ. ಸಾಮರಸ್ಯ, ಸಮಾನತೆಗಳಿಂದ ಮೊದಲು ಅವರು ಮೇಲ್ಪಂಕ್ತಿ ಹಾಕಬೇಕು. ಈ ರೀತಿ ಮಾಡಿದ್ದೇ ಆದಲ್ಲಿ ಜಾತಿ ವೈಮನಸ್ಯಗಳು ದೂರವಾಗುತ್ತವೆ" ಎಂದು ಅಭಿಪ್ರಾಯಪಟ್ಟರು.
         ಶ್ರೀ ಶ್ರೀ ಶಿವಾನಂದಪುರಿ ಮಹಾಸ್ವಾಮಿಯವರು ಆಶೀರ್ವಚನ ಮಾಡುತ್ತಾ, "ಸಂಸ್ಕೃತವನ್ನು ಕಲಿಯಲು ಎಲ್ಲರೂ ಮನಸ್ಸು ಮಾಡಬೇಕು. ಸಂಸ್ಕೃತದ ಮಂತ್ರಗಳು, ಶ್ಲೋಕಗಳಲ್ಲಿ ಮಾನವ ಕಲ್ಯಾಣದ ಅಂಶಗಳೇ ಬಿಂಬಿತವಾಗಿವೆ. ಭಗವದ್ಗೀತೆಯ ಪಠಣ, ಅಧ್ಯಯನ ನಮ್ಮ ಹೃದಯಗಳನ್ನು ವಿಶಾಲಗೊಳಿಸುತ್ತದೆ, ನಮ್ಮ ಅರಿವನ್ನು ಹೆಚ್ಚಿಸುತ್ತದೆ" ಎಂದರು.



















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ