ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜನವರಿ 23, 2013

ವೇದೋಕ್ತ ಜೀವನ ಪಥ: ದೈನಂದಿನ ಪಂಚಮಹಾಯಜ್ಞಗಳು - ೧.ಬ್ರಹ್ಮಯಜ್ಞ


     ಮೊದಲನೆಯದು ಬ್ರಹ್ಮಯಜ್ಞ. ಇದನ್ನು ಜ್ಞಾನಯಜ್ಞ ಎಂದೂ ಕರೆಯಬಹುದು. ವೇದಗಳ ಅಧ್ಯಯನ ಮತ್ತು ಸಂಧ್ಯಾವಂದನೆ, ಪ್ರತಿದಿನ ಪ್ರಾತಃಕಾಲ ಮತ್ತು ಸಾಯಂಕಾಲ ಮಾಡಬೇಕಾದ ಮೊದಲನೆಯ ಯಜ್ಞ. ಸಂಧ್ಯಾ - ಎಂದರೆ ಸಮ್ಯಗ್ಧ್ಯಾನ. ಈ ಸಂಧ್ಯಾಕ್ರಿಯೆಯಲ್ಲಿ ಶರೀರದ ಅಂಗೋಪಾಂಗಗಳನ್ನು ಬಲಿಷ್ಠವಾಗಿಯೂ, ಪವಿತ್ರವಾಗಿಯೂ ಮಾಡಿಕೊಳ್ಳಬೇಕೆಂಬ ಸಂಕಲ್ಪವಿದೆ. ಮೂರು ಅನಾದಿ ತತ್ವಗಳ ಸತ್ಯಜ್ಞಾನ ಮಾಡಿಕೊಳ್ಳಬೇಕೆಂಬ ಆದರ್ಶವಿದೆ. ಮನಸ್ಸನ್ನು ವಿಶಾಲಗೊಳಿಸಿ ಎಲ್ಲೆಡೆಯೂ ಪರಮಾತ್ಮನ ಅಸ್ತಿತ್ವದ ಅನುಭೂತಿಯನ್ನು ಪಡೆದುಕೊಳ್ಳಬೇಕೆಂಬ ಕಾಮನೆಯಿದೆ. ಕೊನೆಯದಾಗಿ ಜೀವನವನ್ನು ವೇದಾದೇಶಕ್ಕನುಸಾರವಾಗಿ ನಡೆಸಬೇಕೆಂಬ ಹಂಬಲವಿದೆ. ಕೇಳಿರಿ:-
ತಚ್ಛಕ್ಷುರ್ದೇವಹಿತಂ ಪುರಸ್ತಾಚ್ಛುಕ್ರಮುಚ್ಚರತ್ | ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ ಮ್ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಮದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ || (ಯಜು.೩೬.೨೪)
     [ಶುಕ್ರಮ್] ಜ್ಯೋತಿಸ್ವರೂಪನೂ, ಶಕ್ತಿಶಾಲಿಯೂ, [ತತ್ ದೇವಹಿತಂ ಚಕ್ಷುಃ] ವಿದ್ವಜ್ಜನರಿಗೆ, ಮಹಾತ್ಮರಿಗೆ ಪ್ರಿಯನೂ ಆದ ಆ ವಿಶ್ವದ್ರಷ್ಟಾ ಪ್ರಭುವು, [ಪುರಸ್ತಾತ್ ಉಚ್ಚರತ್] ಮನಸ್ಸಿನ ಮುಂದೆ ವಿರಾಜಿಸುತ್ತಿದ್ದಾನೆ. [ಶರದಃ ಶತಮ್] ನೂರು ವರ್ಷಗಳವರೆಗೆ [ಪಶ್ಶೇಮ] ನೋಡುತ್ತಿರೋಣ. [ಶರದಃ ಶತಮ್] ನೂರು ವರ್ಷಗಳವರೆಗೆ, [ಜೀವೇಮ] ಜೀವಿಸೋಣ. [ಶರದಃ ಶತಮ್] ನೂರು ವರ್ಷಗಳವರೆಗೆ [ಶೃಣುಯಾಮ] ಆಲಿಸುತ್ತಿರೋಣ. [ಶರದಃ ಶತಮ್] ನೂರು ವರ್ಷಗಳ ಕಾಲ [ಪ್ರಬ್ರವಾಮ] ಉತ್ತಮ ರೀತಿಯಲ್ಲಿ ಮಾತನಾಡುತ್ತಿರೋಣ. [ಶರದಃ ಶತಮ್] ನೂರು ವರ್ಷಗಳ ಕಾಲ [ಅದೀನಾಃ ಸ್ಯಾಮ] ಅದೀನರಾಗಿ, ಧೀರ-ವೀರರಾಗಿ ಜೀವಿಸಿರೋಣ. [ಶರದಃ ಶತಾತ್] ನೂರು ವರ್ಷಕ್ಕಿಂತ, [ಚ ಭೂಯಃ] ಹೆಚ್ಚು ಕಾಲ ಕೂಡ ಜೀವಿಸೋಣ.
     ಇಂತಹ ಆದರ್ಶಜೀವನ, ಆಸ್ತಿಕಜೀವನ ನಮ್ಮದಾದರೆ, ಸುಖ-ಶಾಂತಿಗಳು ಬಾಳಿಗಿಳಿದು ಬರುವುದರಲ್ಲಿ ಸಂದೇಹವಿಲ್ಲ. ಪರಮಾತ್ಮನನ್ನು ಮರೆಯದೆ, ಜೀವಾತ್ಮನನ್ನು ತೊರೆಯದೆ, ಭೌತಿಕ ಜೀವನವನ್ನು ಪರಿಶುದ್ಧಿಯ ಉನ್ನತಸ್ತರಕ್ಕೇರಿಸಿ, ಶಾಂತಿಯನ್ನನುಭವಿಸುವ ಚೈತನ್ಯವನ್ನು ತುಂಬಿಕೊಡುವ ಕ್ರಿಯೆ ಈ ಸಂಧ್ಯಾ. ಇದರೊಂದಿಗೆ ಶಕ್ತ್ಯಾನುಸಾರ ವೇದಾಧ್ಯಯನ, ವೇದಾಧ್ಯಾಪನ ಮಾಡುತ್ತಾ ಹೋಗುವುದರಿಂದ ಬೌದ್ಧಿಕ-ಮಾನಸಿಕ-ಆತ್ಮಿಕಶಕ್ತಿಗಳು ಅರಳುತ್ತಾ ಹೋಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಬ್ರಹ್ಮಯಜ್ಞ, ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸೀ ನಾಲ್ವರಿಗೂ ಅನಿವಾರ್ಯ.
-ಪಂ.ಸುಧಾಕರ ಚತುರ್ವೇದಿ.
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2013/01/blog-post.html

2 ಕಾಮೆಂಟ್‌ಗಳು:

  1. ಈಚೆಗೆ ಶ್ರೀ ಡಿ.ವಿ.ಜಿ. ಸಂಪಾದಿಸಿದ ಈಷೋಪನಿಷತ್ತು ಓದುವಾಗ ಈ ಶ್ಲೋಕವನ್ನು ಓದಿದ್ದೇನೆ. ಈ ಪುಸ್ತಕದಲ್ಲಿ ಶ್ಲೋಕವು ಸ್ವಲ್ಪ ಭಿನ್ನವಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಕೊಡುವಿರಾ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಮಸ್ತೆ. ಇದು ಯಜುರ್ವೇದದ ಮಂತ್ರ. ಈ ವೇದಮಂತ್ರ ಆಧರಿಸಿ ನೀವು ಉಲ್ಲೇಖಿಸಿದ ಉಪನಿಷತ್ತಿನ ಮಂತ್ರದ ಉತ್ಪತ್ಯಿಯಾಗಿರಬಹುದು.

      ಅಳಿಸಿ