ಪಂ. ಸುಧಾಕರ ಚತುರ್ವೇದಿಯವರು ಯಜ್ಞಗಳ ಕುರಿತು ಹೇಳಿರುವ ಈ ವಿಚಾರಯೋಗ್ಯ ಸಂಗತಿಗಳು ತಪ್ಪು ಕಲ್ಪನೆಗಳನ್ನು ದೂರ ಮಾಡದೇ ಇರಲಾರವು:
ವೇದಗಳಲ್ಲಿ 'ಯಜ್ಞ' ಎಂಬ ಶಬ್ದಕ್ಕೆ ಕೊಟ್ಟಿರುವಷ್ಟು ಪ್ರಾಧಾನ್ಯವನ್ನು ಪ್ರಾಯಶಃ ಬೇರಾವ ಶಬ್ದಕ್ಕೂ ಕೊಟ್ಟಿಲ್ಲ. ಯಜ್ಞ ಸಂಸ್ಥೆ ಅತಿವಿಶಾಲ. ಧರ್ಮದ ತತ್ವಗಳು ವಿಚಾರವಾದರೆ, ಅದರ ಆಚಾರ, ಅಂದರೆ ಕ್ರಿಯಾತ್ಮಕ ರೂಪ ಯಜ್ಞ. ಯಜ್ಞ ಒಂದು ಬಗೆಯಲ್ಲ, ಒಂದು ರೂಪವಲ್ಲ, ಮಾನವನ ಸಂಪೂರ್ಣ ಜೀವನವೇ ಯಜ್ಞರೂಪವಾಗಿರಬೇಕೆಂದು ವೇದಾದೇಶವಿದೆ. ಯಜ್ಞದ ಮಹಿಮೆ ಕುರಿತು ವೇದ ಹೇಳುತ್ತದೆ:-
ಊರ್ಜೋ ಭಾಗೋ ನಿಹಿತೋ ಯಃ ಪುರಾ ವ ಋಪ್ರಶಿಷ್ಟಾಪ ಆ ಭರೈತಾ ||
ಅಯಂ ಯಜ್ಞೋ ಗಾತುವಿನ್ನಾಥವಿತ್ಪ್ರಜಾವಿದುಗ್ರಃ ಪಶುವಿದ್ವೀರವಿದ್ವೋ ಅಸ್ತು || (ಅಥರ್ವ.೧೧.೧.೧೫.)
ಮಾನವರೇ, [ಪುರಾ ವಃ] ನಿಮ್ಮ ಮುಂದೆ, [ಯಃ ಊರ್ಜಃ ಭಾಗಃ ನಿಹಿತಃ] ಯಾವ ಶಕ್ತಿಯ ಹಾಗೂ ಭೋಗ್ಯಪದಾರ್ಥದ ಭಾಗ ಅಥವಾ ಭಾಗ್ಯವು ಮಂಡಿಸಲ್ಪಟ್ಟಿದೆಯೋ, [ಏತಾಃ ಋಪ್ರತಿಷ್ಠಾ ಅಪಃ] ಅಂತಹ ಈ ತತ್ವದ್ರಷ್ಟ್ರಗಳಿಂದ ಆದೇಶಿಸಲ್ಪಟ್ಟ ಶುಭಕರ್ಮಗಳನ್ನು, [ಭರ] ನಿರ್ವಹಿಸಿರಿ. [ಅಯಂ ಯಜ್ಞಃ] ಈ ಯಜ್ಞವು, [ವಃ] ನಿಮಗೆ [ಗಾತುವಿತ್] ಪಥಪ್ರದರ್ಶಕವೂ, [ನಾಥವಿತ್] ವಿಶ್ವನಾಥನಾದ ಪ್ರಭುವನ್ನೂ, ಐಶ್ವರ್ಯವನ್ನೂ ಸಾಧಿಸಿಕೊಡುವಂತಹುದೂ, [ಪ್ರಜಾವಿತ್] ಉತ್ತಮ ಸಂತತಿದಾಯಕವೂ [ಪಶುವಿತ್] ಪಶುಸಂಪದ್ದಾಯಕವೂ, [ವೀರವತ್] ಪ್ರಾಣಶಕ್ತಿದಾಯಕವೂ, [ಉಗ್ರಃ] ಪ್ರಚಂಡಶಕ್ತಿಯೂ, [ಅಸ್ತು] ಆಗಿ ಪರಿಣಮಿಸಲಿ.
ನಿಜವಾಗಿ ಯಜ್ಞದಿಂದ ಲಭಿಸದ ಭಾಗ್ಯವಿಲ್ಲ. ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ || (ಯಜು.೧.೧.) [ಸವಿತಾ ದೇವಃ] ಪ್ರೇರಕನಾದ ಜ್ಯೋತಿಸ್ವರೂಪ ಪ್ರಭುವು, [ವಃ] ನಿಮ್ಮನ್ನು, [ಶ್ರೇಷ್ಠತಮಾಯ ಕರ್ಮಣೇ] ಶ್ರೇಷ್ಠತಮ ಕರ್ಮಕ್ಕೆ, [ಪ್ರಾರ್ಪಯತು] ಪ್ರೇರೇಪಿಸಲಿ. ಯಜ್ಞಃ ಶ್ರೇಷ್ಠತಮಂ ಕರ್ಮ || - ಯಜ್ಞವೇ ಶ್ರೇಷ್ಠತಮ ಕರ್ಮ ಎಂಬ ಉಕ್ತಿಯ ಬೆಳಕಿನಲ್ಲಿ, ಈ ವಾಕ್ಯ ಚೆನ್ನಾಗಿ ಅರ್ಥವಾಗುತ್ತದೆ. ಸಮಸ್ತ ಶ್ರೇಷ್ಠತಮ ಕರ್ಮಗಳೂ ಯಜ್ಞವೇ ಎಂದ ಮೇಲೆ, ಯಜ್ಞ, ಧರ್ಮದ ಕ್ರಿಯಾತ್ಮಕ ರೂಪ ಎನ್ನುವುದು ಸ್ಪಷ್ಟ. ಸತ್ಯ ಎನ್ನುವುದು ಧರ್ಮವಾದರೆ, ಸತ್ಯಮಯ ವ್ಯವಹಾರ ಯಜ್ಞ. ಅಹಿಂಸೆ ಎನ್ನುವುದು ಧರ್ಮವಾದರೆ, ಅಹಿಂಸಾಮಯ ವ್ಯವಹಾರ ಯಜ್ಞ, ಹೀಗೆ, ಎಲ್ಲ ಧರ್ಮತತ್ತ್ವಗಳ ಅನುಷ್ಠಾನವೂ ಯಜ್ಞವೇ.
ಆದರೆ, ದುರ್ಭಾಗ್ಯದಿಂದ, ಯಜ್ಞವೆಂಬ ಪವಿತ್ರ ಸಂಸ್ಥೆ, ಮಧ್ಯಯುಗದಲ್ಲಿ ಪ್ರಾಣಿಬಲಿಯಂತಹ ಕ್ರೂರ ಕರ್ಮದೊಂದಿಗೆ ಜೋಡಿಸಲ್ಪಟ್ಟು, ಅಶ್ವಮೇಧ, ಗೋಮೇಧ, ಮೊದಲಾದ ಹೆಸರುಗಳಿಂದ ಆಚರಿಸಲ್ಪಡಲಾರಂಭವಾಯಿತು. ವೇದಧರ್ಮ, ಪರಮ ಅಹಿಂಸಾಧರ್ಮ. ಯಜ್ಞ ಎಂಬ ಶಬ್ದದ ಪರ್ಯಾಯವಾಚಕವಾದ "ಅಧ್ವರ" ಎಂಬ ವೈದಿಕ ಶಬ್ದಕ್ಕೆ "ಅಹಿಂಸಾಮಯ" ಎಂಬ ಪರ್ಯಾಯ ಅರ್ಥವೇ ಇದೆ. ಋಗ್ವೇದದಲ್ಲಿ,
ಅಗ್ನೇ ಯಂ ಯಜ್ಞಮದ್ವರಂ ವಿಶ್ವತಃ ಪರಿಭೂರಸಿ | ಸ ಇದ್ ದೇವೇಷು ಗಚ್ಛತಿ || (ಋಕ್.೧.೧.೪)
[ಅಗ್ನೇ] ಓ ಜ್ಯೋತಿರ್ಮಯ, [ಯಂ ಅಧ್ವರಂ ಯಜ್ಞಮ್] ಯಾವ ಹಿಂಸಾರಹಿತವಾದ ಯಜ್ಞವನ್ನು, [ತ್ವಂ ವಿಸ್ವತಃ ಪರಿಭೂಃ ಅಸಿ] ನೀನು ಎಲ್ಲೆಡೆಯಿಂದ ಅಧ್ಯಕ್ಷನಾಗಿ ಆವರಿಸುತ್ತಿಯೋ, [ಸ ಇತ್] ಅದೇ, [ದೇವೇಷು ಗಚ್ಛತಿ] ದಿವ್ಯತತ್ತ್ವಗಳನ್ನು ಸೇರುತ್ತದೆ ಅಥವಾ ವಿದ್ವಜ್ಜನರ ನಡುವೆ ಆದರಕ್ಕೆ ಪಾತ್ರವಾಗುತ್ತದೆ. ಯಜುರ್ವೇದದಲ್ಲಿ, ಯಜಮಾನಸ್ಯ ಪಶೂನ್ವಾಹಿ || (ಯಜು.೧.೧.)- ಯಜ್ಞಕರ್ತನ ಪಶುಗಳನ್ನು ಪಾಲಿಸು; ಅಶ್ವಂ ಮಾ ಹಿಂಸೀಃ || (ಯಜು.೧೩.೪೨.) -ಕುದುರೆಯನ್ನು ಹಿಂಸಿಸಬೇಡ; ಗಾಂ ಮಾ ಹಿಂಸೀಃ|| - ಹಸುವನ್ನು ಹಿಂಸಿಸಬೇಡ; ಅವಿಂ ಮಾ ಹಿಂಸೀಃ|| (ಯಜು.೧೩.೪೪.) - ಮೇಕೆಯನ್ನು ಹಿಂಸಿಸಬೇಡ; ಇಮಂ ಮಾ ಹಿಂಸೀರ್ದ್ವಿಪಾದಂ ಪಶುಮ್|| (ಯಜು.೧೩.೪೭.) ದ್ವಿಪಾದ ಪಶುವನ್ನು ಹಿಂಸಿಸಬೇಡ; ಇಮಂ ಮಾ ಹಿಂಸೀರೇಕ ಶಘಂ ಪಶುಮ್|| (ಯಜು.೧೩.೪೮.) - ಈ ಸೀಳಿಲ್ಲದ ಗೊರಸಿನ ಪಶುವನ್ನು ಕೊಲ್ಲಬೇಡ; ಉತ್ಸಂ ಮಾ ಹಿಂಸೀ|| (ಯಜು.೧೩.೪೯.) ಎತ್ತನ್ನು ಹಿಂಸಿಸಬೇಡ; ಊರ್ಣಾಯುಂ ಮಾ ಹಿಂಸೀ|| (ಯಜು.೧೩.೫೦.) - ಕುರಿಯನ್ನು ಹಿಂಸಿಸಬೇಡ - ಹೀಗೆ ಯಜುರ್ವೇದದಲ್ಲಿ ಅತಿ ಸ್ಪಷ್ಟವಾದ ಆದೇಶಗಳಿವೆ. ಯಾವುದೇ ಪ್ರಾಣಿಯನ್ನು ಕೊಲ್ಲುವುದೂ ತಪ್ಪೇ. ಅನಾಗೋ ಹತ್ಯಾ ವೈ ಭೀಮಾ|| (ಅಥರ್ವ.೧೦.೧.೨೯.) - ನಿಷ್ಪಾಪವಾದ ಪ್ರಾಣಿಯನ್ನು ಕೊಲ್ಲುವುದು ಭಯಂಕರ ಪಾಪ ಎನ್ನುತ್ತಿದೆ ಅಥರ್ವ. ಹೀಗಿರುವಾಗ, ಯಜ್ಞದಂತಹ ಪವಿತ್ರಕರ್ಮದಲ್ಲಿ ರಕ್ತ ಹರಿಸುವುದು ಎಂತಹ ಘೋರಪಾತಕ?!
ಪ್ರಾಣಿಬಲಿ ವೈದಿಕ ಧರ್ಮದ ತತ್ವವೇ ಅಲ್ಲ. ಗ್ರೀಕರು, ರೋಮನರು, ಮೊದಲಾದವರ ಸಂಪರ್ಕದಿಂದ ಭಾರತಕ್ಕೆ ಬಂದ ಅಭಿಶಾಪವದು. ವೈದಿಕ ಶಬ್ದಗಳ ಹಾಗೂ ಪಾರಿಭಾಕ ಜ್ಞಾನವಿಲ್ಲದೆ, ಅರ್ಥಕ್ಕೆ ಅನರ್ಥ ಮಾಡಿ, ಬ್ರಾಹ್ಮಣಗ್ರಂಥಗಳ ಕಾಲಕ್ಕೆ ರಕ್ತಪ್ರವಾಹ ಯಜ್ಞದ ಅಭಿನ್ನ ಅಂಗ ಎಂಬ ಪರಿಸ್ಥಿತಿಯನ್ನು ತಂದಿಟ್ಟರು ವಾಮಪಂಥದ ವಿದ್ವಾಂಸರು. ಅಶ್ವಮೇಧ, ಗೋಮೇಧ, ಅಜಮೇಧಾದಿ ಯಜ್ಞಗಳು ರಾಷ್ಟ್ರವರ್ಧನ, ಇಂದ್ರಿಯವರ್ಧನ, ಆತ್ಮವರ್ಧನ - ಮೊದಲಾದ ಉದ್ದೇಶಗಳಿಗಾಗಿ ಮಾಡಲ್ಪಡುವ ಹಿಂಸಾರಹಿತ ಕರ್ಮಗಳು, ಯಜ್ಞಗಳೇ ಹೊರತು, ನಿರೀಹ, ಮೂಕಪಶುಗಳ ನಿರ್ದಯ ರಕ್ತಪಾತದ ರಾಕ್ಷಸಕೃತ್ಯಗಳಲ್ಲ.
ಯಜ್ಞ, ಹಿಂಸಾರಹಿತ ಸತ್ಕರ್ಮ. ವಿಶೇಷಯಜ್ಞಗಳು ಬೇಕಾದಷ್ಟಿವೆ.. ಆದರೆ ಪ್ರತಿದಿನವೂ ಆಚರಿಸಬೇಕಾದ ಐದು ಮಹಾಯಜ್ಞಗಳಿವೆ. ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞ, ಅತಿಥಿಯಜ್ಞ, ಬಲಿವೈಶ್ವದೇವಯಜ್ಞ - ಇವೇ ಆ ಐದು ಮಹಾಯಜ್ಞಗಳಾಗಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ