ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಜನವರಿ 19, 2013

ದೇಶ ಮತ್ತು ಧರ್ಮರಕ್ಷಕ ವಿದ್ಯಾರಣ್ಯ     ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಪ್ರಿಯ ಶಿಷ್ಯ ಮಾಧವನಿಗೂ ಕೇಳಿದರು:
"ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?"
ಮಾಧವ ಉತ್ತರಿಸಿದ್ದ:
"ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ."
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, 
"ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ" ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದರು.
     ಆ ಮಾಧವನೇ ಮುಂದೆ ವಿದ್ಯಾರಣ್ಯರೆಂಬ ಹೆಸರಿನಿಂದ ಪ್ರಸಿದ್ಧನಾಗಿ ವಿಜಯನಗರ ಸಂಸ್ಥಾನದ ಸ್ಥಾಪಕನೆನಿಸಿದ್ದು ಈಗ ಇತಿಹಾಸ. ಮಾಧವನ ಈ ನಿರ್ಧಾರಕ್ಕೆ ದೇಶದ ಅಂದಿನ ಸ್ಥಿತಿ ಗತಿಗಳೇ ಪ್ರಮುಖ ಕಾರಣವಾಗಿದ್ದಿರಬಹುದು. ಪಂಪಾಕ್ಷೇತ್ರದಲ್ಲಿ (ಈಗಿನ ಹಂಪೆ) ಮಾಯನಾಚಾರ್ಯ ಮತ್ತು ಶ್ರೀಮತೀದೇವಿಯವರ ಪುತ್ರನಾಗಿ ಕ್ರಿ.ಶ. ೧೨೬೮ರ ಸುಮಾರಿಗೆ ಜನಿಸಿದ ಮಾಧವನಿಗೆ, ಸಾಯಣ, ಭೋಗನಾಥ ಎಂಬ ತಮ್ಮಂದಿರು ಮತ್ತು ಸಿಂಗಲಾ ಎಂಬ ತಂಗಿಯೂ ಇದ್ದರು. ತುಂಗಭದ್ರಾ ತೀರದಲ್ಲಿದ್ದ ಶಂಕರಾನಂದ ಎಂಬ ಗುರುಗಳಲ್ಲಿ ಹಲವು ವರ್ಷಗಳ ಕಾಲ ಮಾಧವ, ಸಾಯಣ ಮತ್ತು ಭೋಗನಾಥರು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರು. ಶಂಕರಾನಂದರು ನಂತರ ಅವರನ್ನು ಉದ್ದೇಶಿಸಿ, "ಮಕ್ಕಳೇ, ನಾನು ಕಲಿಸಿದ್ದ ಎಲ್ಲವನ್ನೂ ನೀವು ಶ್ರದ್ಧೆಯಿಂದ ಕಲಿತಿರುವಿರಿ. ಇನ್ನು ನೀವು ಕಾಂಚಿಯಲ್ಲಿರುವ ನನ್ನ ಗುರುಗಳಾದ ಶ್ರೀ ವಿದ್ಯಾತೀರ್ಥರಲ್ಲಿ ವಿದ್ಯಾಭ್ಯಾಸ ಮುಂದುವರೆಸಿರಿ" ಎಂದು ಹೇಳಿ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ಕೋರಿ ಗುರುಗಳಿಗೆ ಪತ್ರ ಬರೆದು ಕೊಟ್ಟರು. 
     ಆ ಸಮಯದಲ್ಲಿ ಪಲ್ಲವರ ರಾಜಧಾನಿಯಾಗಿದ್ದ ಕಾಂಚಿಯು ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ತತ್ವಗಳನ್ನು ಕಲಿಸುವ ಪ್ರಸಿದ್ಧ ಕ್ಷೇತ್ರವಾಗಿತ್ತು. ವಿದ್ಯಾತೀರ್ಥರ ವಿಶ್ವಾಸ ಗಳಿಸುವಲ್ಲಿ ಮತ್ತು ಅವರನ್ನು ಗುರುವಾಗಿ ಹೊಂದುವಲ್ಲಿ ಮಾಧವ ಅದೃಷ್ಟಶಾಲಿಯಾಗಿದ್ದ. ಶಂಕರಾನಂದ, ಭಾರತೀಕೃಷ್ಣ, ಶ್ರೀಕಂಠನಾಥ, ಮೊದಲಾದ ಗುರುಗಳಿಂದಲೂ ಪಡೆದ ಮಾರ್ಗದರ್ಶನ ಅವನ ಮುಂದಿನ ನಿರ್ಧಾರ ರೂಪಿಸುವಲ್ಲಿ ಪಾತ್ರವಹಿಸಿತ್ತು. ದೇಶಪ್ರೇಮ, ಧೃಢತೆ, ಸೇವಾಮನೋಭಾವ, ಪರಧರ್ಮ ಸಹಿಷ್ಣುತೆ, ಸಮಯೋಚಿತ ನಿರ್ಧಾರ ಕೈಗೊಳ್ಳುವ ಶಕ್ತಿ, ತಾಳ್ಮೆ, ಪ್ರಚಲಿತ ವಿದ್ಯಮಾನಗಳ ಅರಿವು, ಜಗತ್ತಿನ ಒಳಿತಿಗೆ ಕೆಲಸ ಮಾಡುವ ಮನಸ್ಸುಗಳು ಆ ವೇಳೆಗಾಗಲೇ ಮಾಧವನಲ್ಲಿ ರಕ್ತಗತವಾಗಿದ್ದವು. ಇತರರಂತೆ ಕೇವಲ ವಿದ್ಯಾಭ್ಯಾಸ, ಮದುವೆ, ಸಾಮಾನ್ಯ ಜೀವನ ಸಾಗಿಸುವುದಕ್ಕೆ ಮಾತ್ರ ತಾನು ಹುಟ್ಟಿಲ್ಲವೆಂದು, ತಾನು ಸಾಧಿಸಬೇಕಾದುದು ಇನ್ನೂ ಹೆಚ್ಚಿನದೆಂದು ಅವನ ಒಳ ಮನಸ್ಸು ಹೇಳುತ್ತಿತ್ತು. ವೇದ, ಉಪನಿಷತ್ತುಗಳು, ತತ್ವಕಲೆ, ಸಾಹಿತ್ಯಗಳಲ್ಲಿ ಪ್ರಾವೀಣ್ಯತೆ ಪಡೆದ ಮಾಧವನೊಡನೆ ಗುರು ವಿದ್ಯಾತೀರ್ಥರು ಕೇಳಿದ್ದ ಪ್ರಶ್ನೆಯೇ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿರುವ, "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?" ಎಂಬುದು! 'ಕನ್ನಡ ನೆಲದಲ್ಲಿ ತಾಯಿ ಭುವನೇಶ್ವರಿಯ ಕೃಪೆಯಿಂದ ಒಂದು ರಾಜ್ಯಸ್ಥಾಪನೆ ಮಾಡಿ ದಾಳಿಕೋರರನ್ನು ಓಡಿಸಬೇಕು, ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಇರುವ ಅಪಾಯಗಳನ್ನು ನಿಗ್ರಹಿಸಬೇಕು. ಅದಕ್ಕಾಗಿ ಭುವನೇಶ್ವರಿಯನ್ನು ಕುರಿತು ತಪಸ್ಸು ಮಾಡಬೇಕು' ಎಂದು ಮನದೊಳಗೆ ಹುದುಗಿದ್ದ ಭಾವನೆಯನ್ನು ಗುರುಗಳ ಮುಂದೆ ವ್ಯಕ್ತಪಡಿಸಿದಾಗ ಗುರುಗಳು, "ನೀನು ಸಾಮಾನ್ಯನಲ್ಲಪ್ಪ. ನೀನು ಹುಟ್ಟಿರುವುದೇ ಸಾಧನೆ ಮಾಡುವ ಸಲುವಾಗಿ. ನೀನು ಈ ದೇಶ ಮತ್ತು ಧರ್ಮವನ್ನು ರಕ್ಷಿಸುತ್ತೀಯೆ" ಎಂದು ಮನತುಂಬಿ ಹೇಳಿದರು. 
     ಕಾಂಚಿಗೆ ಹೊರಟಿದ್ದ ಸಮಯದಲ್ಲೇ ಮಾಧವನ ತಂದೆ ಮಾಯನಾಚಾರ್ಯ ಸ್ವರ್ಗವಾಸಿಯಾಗಿದ್ದರು, ವಿದ್ಯಾಭ್ಯಾಸದ ನಂತರ ಪಂಪಾಕ್ಷೇತ್ರಕ್ಕೆ ವಾಪಸು ಬಂದ ಮಾಧವ ತನ್ನ ತಾಯಿ ಮತ್ತು ತಂಗಿಯನ್ನು ಸಲಹುವ ಜವಾಬ್ದಾರಿ ವಹಿಸಿಕೊಂಡು, ಅದಕ್ಕಾಗಿ ಪೌರೋಹಿತ್ಯವನ್ನು ಆಶ್ರಯಿಸಿದ. ತಂಗಿಯ ಮದುವೆ ನೆರವೇರಿಸಿದ. ವೀತಿಹೋತ್ರಿಯ ಮಗಳು ವೈತಿಹೋತ್ರಿಯೊಡನೆ ಅವನ ವಿವಾಹವಾತು. ಈ ರೀತಿಯ ಜೀವನದಲ್ಲಿ ಅವನಿಗೆ ಸಮಾಧಾನವಿರಲಿಲ್ಲ. ಗುರುಗಳೊಡನೆ ತಾನು ಹೇಳಿದ್ದ ಮಾತುಗಳು ಅವನನ್ನು ಸದಾ ಎಚ್ಚರಿಸುತ್ತಿದ್ದವು. ಆ ಸಮಯದಲ್ಲಿ ಶ್ರೀರಂಗಮ್ ಮೇಲೆ ದಾಳಿ ಮಾಡಿದ ಡೆಲ್ಲಿ ಸುಲ್ತಾನನ ದಳಪತಿ ಮಲ್ಲಿಕ್ ಕಾಫರ್ ಅಲ್ಲಿ ನಡೆಸಿದ ಭೀಭತ್ಸ ಅತ್ಯಾಚಾರ, ಕೊಲೆಗಳು, ಲೂಟಿ, ದೇವರ ವಿಗ್ರಹಗಳ ಧ್ವಂಸ ಕಾರ್ಯ ಮಾಧವನ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಅಲ್ಲಿನ ಜನರು ಕೇವಲ ಕೆಲವು ದಿನ ಶಪಿಸಿ ಸುಮ್ಮನಾಗಿದ್ದಲ್ಲದೆ, ನಂತರದಲ್ಲಿ ಏನೂ ಆಗಿಲ್ಲವೆಂಬಂತೆ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಭಟಿಸಬೇಕೆಂಬ ಮನೋಭಾವವೇ ಅವರಲ್ಲಿ ಇರುತ್ತಿರಲಿಲ್ಲ. ಆಳುವವರೂ ಸಹ ಸ್ವಾರ್ಥಪ್ರೇರಿತರಾಗಿ, ಸ್ವಾಭಿಮಾನರಹಿತರಾಗಿದ್ದರು. ಜನರನ್ನು ಜಾಗೃತಿಗೊಳಿಸುವ ಕೆಲಸ ಅತ್ಯಂತ ಮಹತ್ವದ್ದೆಂದು ಮಾಧವನಿಗೆ ಅರಿವಾಯಿತು.  ಬಹುಷಃ ಅದೇ ಮನೋಭಾವ ಇಂದಿಗೂ ನಮ್ಮ ಜನರಲ್ಲಿ ಕಂಡು ಬರುತ್ತಿದೆ. ಉಗ್ರಗಾಮಿಗಳಿಂದ ಭಯೋತ್ಪಾದಕ ಚಟುವಟಿಕೆಗಳು ನಡೆದಾಗ ಕೆಲವು ಪ್ರತಿಭಟನಾತ್ಮಕ ಹೇಳಿಕೆಗಳನ್ನು ನೀಡಿ, ನಂತರದಲ್ಲಿ ಮರೆತೇ ಬಿಡುವ ಸ್ವಭಾವ ಕಂಡುಬರುತ್ತಿಲ್ಲವೇ?
     ದಕ್ಷಿಣ ಭಾರತದಲ್ಲಿ ಆಗ ಪರಿಸ್ಥಿತಿ ಕೆಟ್ಟದ್ದಾಗಿತ್ತು. ಜನರು ನರಸತ್ತವರಂತಿದ್ದರು. ದಾಳಿಕೋರರು ಎಗ್ಗಿಲ್ಲದೆ ಲೂಟಿ, ಆಕ್ರಮಣ, ಕೊಲೆ, ಅತ್ಯಾಚಾರ, ವಿಗ್ರಹಭಂಜನಗಳಲ್ಲಿ ತೊಡಗಿದ್ದರು. ಪ್ರತಿಭಟನೆ ಅತ್ಯಂತ ಕ್ಷೀಣ ಸ್ತರದಲ್ಲಿತ್ತು. ಬೆಂದ ಮನೆಯಲ್ಲಿ ಗಳ ಹಿರಿಯುವ ಮನೋಭಾವದವರಿಂದಾಗಿ ರಾಜಸತ್ತೆಗಳು ದುರ್ಬಲವಾಗಿದ್ದವು. ಇದ್ದಿದ್ದರಲ್ಲಿ ಕರ್ನಾಟಕದವರು ಪ್ರತಿರೋಧ ಒಡ್ಡಿದ್ದರು. ಒಂದು ಕಾಲದಲ್ಲಿ ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಕದಂಬರು, ಹೊಯ್ಸಳರು ತಮ್ಮ ರಾಜ್ಯವನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪಸರಿಸಿದ್ದರು. ಹೊಸ ರಾಜ್ಯ ಸ್ಥಾಪಿಸುವ ಮಾಧವನ ಕನಸಿಗೆ ಬೆಂಬಲಿಸುವ ಜನರ ಕೊರತೆ, ಸಂಪತ್ತಿನ ಕೊರತೆ ಇತ್ತು. ಸ್ಫೂರ್ತಿ ನೀಡುವ ಕೆಲಸಕ್ಕೆ ಜನರಿಂದ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಅವರು ಹೇಳುವುದನ್ನು ಕೇಳಿಸಿಕೊಂಡು, ಅದು ತಮ್ಮ ಕೆಲಸವಲ್ಲವೆಂಬಂತೆ ಸುಮ್ಮನಾಗುತ್ತಿದ್ದರಷ್ಟೆ. ಆದರೆ ಮಾಧವ ನಿರಾಶನಾಗಲಿಲ್ಲ. ಗುರಿ ಸಾಧನೆಗಾಗಿ ಬಲ ಕ್ರೋಢೀಕರಿಸಲು ತಪಸ್ಸು ಮಾಡಬೇಕೆಂದುಕೊಂಡು, ಸೂಕ್ತ ಸ್ಥಳದ ಆಯ್ಕೆಗಾಗಿ ದೇಶದ ಹಲವೆಡೆ ಸುತ್ತಿ ಕೊನೆಗೆ ಪಂಪಾಕ್ಷೇತ್ರಕ್ಕೇ ವಾಪಸು ಬಂದ. ಈ ವೇಳೆಗೆ ಪತ್ನಿ ವೈತಿಹೋತ್ರಿ ಸಹ ನಿಧನಳಾದದ್ದು, ವಿಧಿಯೇ ಅವನನ್ನು ಪ್ರಾಪಂಚಿಕ ಸಂಗತಿಗಳಿಂದ ದೂರ ಮಾಡಿದಂತಾಗಿತ್ತು. ಪಂಪಾಕ್ಷೇತ್ರದ ವಿರೂಪಾಕ್ಷ ದೇವರಿಗೆ ಪೂಜೆ ಸಲ್ಲಿಸಿ, ಹೇಮಕೂಟದಲ್ಲಿ ತಪಸ್ಸಿಗೆ ತೊಡಗಿದ. ಆಹಾರದ ಪರಿವೆಯಿಲ್ಲದಂತೆ ನಡೆಸಿದ ತಪಸ್ಸಿನ ಫಲವಾಗಿ ತಾಯಿ ಭುವನೇಶ್ವರಿಯ ಅಭಯ ಸಿಕ್ಕಿತು. ಅಂತರಂಗಕ್ಕೆ ದೊರೆತ ಆದೇಶದಂತೆ ಸಂನ್ಯಾಸಿಯಾಗಲು ನಿರ್ಧರಿಸಿದ ಮಾಧವ ಶೃಂಗೇರಿಯ ೧೧ನೆಯ ಗುರುಗಳಾದ ಶ್ರೀ ಭಾರತೀಕೃಷ್ಣ ತೀರ್ಥರಿಂದ ದೀಕ್ಷೆ ಪಡೆದು ವಿದ್ಯಾರಣ್ಯರೆಂಬ ಹೆಸರು ಪಡೆದು ಕಾಷಾಯ ವಸ್ತ್ರಧಾರಿಯಾದರು. ನಂತರದಲ್ಲಿ ಪಂಪಾಕ್ಷೇತ್ರದಲ್ಲಿ ಪ್ರತಿನಿತ್ಯ ವಿರೂಪಾಕ್ಷನನ್ನು ಆರಾಧಿಸುತ್ತಾ ತಮ್ಮ ಕನಸು ನನಸು ಮಾಡಬಲ್ಲ ವ್ಯಕ್ತಿಗಳಿಗೆ ನಿರೀಕ್ಷಿಸುತ್ತಾ ದಿನ ಕಳೆಯುತ್ತಿದ್ದರು. ಒಂದೊಂದು ದಿನ ಕಳೆದಾಗಲೂ, 'ಇಂದಿನ ದಿನ ವ್ಯರ್ಥವಾಯಿತಲ್ಲಾ' ಎಂದು ಕೊರಗುತ್ತಿದ್ದರು. 
   ಕೊನೆಗೊಮ್ಮೆ ನಿರೀಕ್ಷಿತ ಘಳಿಗೆ ಬಂದೇಬಿಟ್ಟಿತು. ಹರಿಹರ ಮತ್ತು ಬುಕ್ಕರೆಂಬ ಇಬ್ಬರು ಸೋದರರು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿಬಂದರು. ಕಮ್ಮಟದುರ್ಗದ ಅರಸ ಕಂಪಿಲರಾಯನ ಅಳಿಯನೂ, ಸಂಸ್ಥಾನದ ಕೋಶಾಧಿಕಾರಿಯೂ ಆಗಿದ್ದ ಸಂಗಮದೇವನ ಮಕ್ಕಳೇ ಆ ಹರಿಹರ ಮತ್ತು ಬುಕ್ಕರು. ಮಹಮದ್ ಬಿನ್ ತುಘಲಕ್ ರಾಜ್ಯವನ್ನು ಆಕ್ರಮಿಸಿ ಅಲ್ಲಿನ ನಿವಾಸಿಗಳನ್ನು ನಿರ್ದಯವಾಗಿ ಮತ್ತು ಬರ್ಬರವಾಗಿ ಹತ್ಯೆಗೈದು, ಅರಸೊತ್ತಿಗೆಯಲ್ಲಿ ಉಳಿದ ಹರಿಹರ, ಬುಕ್ಕರೂ ಸೇರಿದಂತೆ ಹನ್ನೊಂದು ಜನರನ್ನು ಸೆರೆ ಹಿಡಿದು ಡೆಲ್ಲಿಗೆ ಕರೆದೊಯ್ದು ಸೆರೆಮನೆಯಲ್ಲಿರಿಸಿದ್ದ. ತುಘಲಕನ ಹುಚ್ಚು ದರ್ಬಾರಿನಿಂದ ಅವನ ರಾಜ್ಯದಲ್ಲಿ ಅರಾಜಕತೆಯುಂಟಾದಾಗ ಸೆರೆಮನೆಯಲ್ಲಿದ್ದ ಯುವಕರನ್ನು ಬಿಡುಗಡೆಗೊಳಿಸಿ ತನ್ನ ಸೈನ್ಯಕ್ಕೆ ಸೇರಿಸಿಕೊಂಡು, ದಕ್ಷಿಣ ಭಾಗದಲ್ಲಿ ಮೂಡಿದ್ದ ಅಶಾಂತಿಯನ್ನು ಶಮನಗೊಳಿಸುವ ಪ್ರಯತ್ನವಾಗಿ ಸೈನ್ಯದೊಂದಿಗೆ ದಕ್ಷಿಣಕ್ಕೆ ಕಳಿಸಿದ ಸಂದರ್ಭವನ್ನು ಉಪಯೋಗಿಸಿಕೊಂಡು, ಹರಿಹರ ಮತ್ತು ಬುಕ್ಕರು ತಪ್ಪಿಸಿಕೊಂಡು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿ ಬಂದಿದ್ದರು. ಹರಿಹರ, ಬುಕ್ಕರನ್ನು ಇಸ್ಲಾಮ್ ಮತಕ್ಕೆ ಮತಾಂತರಿಸಲಾಗಿತ್ತಂದೂ, ವಿದ್ಯಾರಣ್ಯರು ಅವರನ್ನು ಮರಳಿ ಮಾತೃಧರ್ಮಕ್ಕೆ ಸೇರಿಸಿದರೆಂದೂ ಐತಿಹ್ಯವಿದೆ. ತುಘಲಕ್ ಆನೆಗೊಂದಿಯ ರಾಜ ಜಂಬುಕೇಶ್ವರರಾಯನನ್ನು ಸೋಲಿಸಿ, ಅವನನ್ನು ಅವನ ಅರಮನೆಯಲ್ಲೇ ಬಂದಿಯಾಗಿರಿಸಿ, ತನ್ನ ಪ್ರತಿನಿಧಿಯಾಗಿ ಮಲಿಕ್ ನಾಯಬ್ ಎನ್ನುವವನನ್ನು ನೇಮಿಸಿ ಅವನ ಮುಖಾಂತರ ಆನೆಗೊಂದಿಯ ರಾಜ್ಯಭಾರ ಮಾಡುತ್ತಿದ್ದನು. ವಿದ್ಯಾರಣ್ಯರ ಸೂಚನೆ ಅನುಸರಿಸಿ, ಹರಿಹರ, ಬುಕ್ಕರು ಕೆಲವು ದೇಶಪ್ರೇಮಿ ಯುವಕರನ್ನು ಜೊತೆ ಮಾಡಿಕೊಂಡು ಜಾಣತನದಿಂದ ಆನೆಗೊಂದಿಯ ಅರಮನೆ ಪ್ರವೇಶಿಸಿ ಮಲಿಕ್ ನಾಯಬ್ ಪಾನಮತ್ತನಾಗಿದ್ದ ಸಂದರ್ಭ ಉಪಯೋಗಿಸಿಕೊಂಡು, ಅವನನ್ನೇ ಸೆರೆಹಿಡಿದು ರಾಜ ಜಂಬುಕೇಶ್ವರರಾಯನನ್ನು ಬಂಧಮುಕ್ತಗೊಳಿಸಿದರು. ಯಾವುದೇ ರಕ್ತಪಾತವಿಲ್ಲದೆ ಆನೆಗೊಂದಿ ಸ್ವತಂತ್ರವಾಯಿತು. ಅರಮನೆಯ ಮೇಲೆ ಪುನಃ ವರಾಹಧ್ವಜ ಹಾರಾಡಿತು. 
ಚಿತ್ರಕೃಪೆ: ಶ್ರೀ ಹಂಪಿ ವಿರೂಪಾಕ್ಷೇಶ್ವರ ಮಹಾಸಂಸ್ಥಾನ
     ಈ ವಿಜಯದಿಂದ ಉತ್ತೇಜಿತರಾದ ವಿದ್ಯಾರಣ್ಯರು ಪಂಪಾಕ್ಷೇತ್ರದಲ್ಲಿ ಒಂದು ಸೂಕ್ತ ಸ್ಥಳವನ್ನು ಆರಿಸಿ ಕ್ರಿ.ಶ. ೧೩೩೬ರಲ್ಲಿ ಹೊಸ ನಗರದ ಸ್ಥಾಪನೆಗೆ ಭೂಮಿಪೂಜೆ ಮಾಡಿದರು. ೧೭ನೆಯ ಶತಮಾನದ ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'ದಲ್ಲಿ ಈ ಸ್ಥಳದ ಮಹಿಮೆ ಕುರಿತು ಹೀಗೆ ಹೇಳಲಾಗಿದೆ: 'ಪೂರ್ವದೊಳ್ ಸೂರ್ಯವಂಶಜನಾದ ತ್ರಿಶಂಕು ಮಹಾರಾಯಂ ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ಷಲಿಂಗಂ ಪ್ರಾದುರ್ಭವಲಿಂಗವೋ ಪ್ರತಿಷ್ಠಾಲಿಂಗವೋ ಯೆಂದು ಕೇಳಿದಲ್ಲಿ ಈ ಲಿಂಗಂ ಜ್ಯೋತಿರ್ಮಯವಾದ ಲಿಂಗಂ, ಈ ಲಿಂಗದ ಮಹಿಮೆಯಂ ಪೇಳ್ವುದಕ್ಕೆ ಬ್ರಹ್ಮದೇವರಿಗಾದರೂ ಅಸಾಧ್ಯಮೆಮ್ಮಪಾಡೇನೆನಲಾಗಿ ಆ ಮಾತಂ ಕೇಳ್ದು, ಆ ತ್ರಿಶಂಕು ಮಹಾರಾಯಂ ಪ್ರತಿಷ್ಠಾಲಿಂಗವೋ ಯೆಂದು ಕೇಳ್ದ ದೋಷನಿವೃತ್ತಿಗೋಸುಗಂ ಕೃಷ್ಣವೇಣೀ ನದೀತೀರಮಾರಭ್ಯ ಸೇತುಪರ್ಯಂತಂ ಮೂರುವರೆ ಕೋಟಿರಾಜ್ಯವನೀ ವಿರೂಪಾಕ್ಷದೇವರ್ಗೆ ಧಾರೆಯನೆರೆದನೆಂದು ಸ್ಥಳದವರ್ಪೇಳಲ್ ಆ ಮಾತಂ ಕೇಳ್ದಾ ವಿದ್ಯಾರಣ್ಯರ್ ಹರಿಹರಬುಕ್ಕರಂ ಕರೆದು ಈ ರಾಜ್ಯಕ್ಕೆಲ್ಲಂ ವಿರೂಪಾಕ್ಷಸ್ವಾಮಿಯೇ ಕರ್ತಂ, ನೀಂ ಆ ದೇವರ ಭಕ್ತರಾಗಿ ವರ್ತಿಸುತ್ತುಂ ಶ್ರೀ ವಿರೂಪಾಕ್ಷನೆಂದೊಪ್ಪವಂ ಹಾಕಿ ನಡೆಕೊಂಡು ಸದ್ಧರ್ಮದಿಂ ರಾಜ್ಯವನಾಳಿಕೊಂಡಿರ್ಪುದೆಂದು ಕಟ್ಟಳೆಯಂ ರಚಿಸಿ ಆ ಹರಿಹರಗೆ ಹರಿಹರರಾಯನೆಂದು ಪೆಸರಿಟ್ಟು ವಿದ್ಯಾನಗರಮೆಂಬ ಪಟ್ಟಣಮಂ ನಿರ್ಮಾಣಂ ಮಾಡಿಸುವ ಕಾಲದಲ್ಲಿ. . '  ಆ ಸಂದರ್ಭದಲ್ಲಿ ಭೂಗತ ನಿಧಿಯೂ ದೊರಕಿ ಕೆಲಸ ಸುಸೂತ್ರವಾಗಿ ಮುಂದುವರೆಯಲು ಅನುಕೂಲವಾಯಿತು. ಹರಿಹರ, ಬುಕ್ಕರು ಆ ನಗರಕ್ಕೆ ವಿದ್ಯಾನಗರ ಎಂದು ಹೆಸರಿಡಬಯಸಿದರೂ, ವಿದ್ಯಾರಣ್ಯರು ಅದಕ್ಕೆ ವಿಜಯನಗರವೆಂಬ ಹೆಸರು ಕೊಟ್ಟರು. ವಿಜಯನಗರ ಸಂಸ್ಥಾನ ಚಿಗುರೊಡೆಯಿತು. ಶ್ರೀ ವಿರೂಪಾಕ್ಷ ಎಂಬ ಅಂಕಿತವಿರುವ ಕ್ರಿ.ಶ. ೧೩೩೬ರ ತಾಮ್ರದ ದತ್ತಿಶಾಸನದಲ್ಲಿ ವಿದ್ಯಾರಣ್ಯರ ಸೂಚನೆಯಂತೆ ಹರಿಹರನನ್ನು ಸಿಂಹಾಸನದ ಮೇಲೆ ಕೂರಿಸಿದ ಉಲ್ಲೇಖವಿದೆ. ಹರಿಹರನಿಗೆ ಆತ್ಮವಿದ್ಯೆ ಬೋಧಿಸಿದ ವಿದ್ಯಾರಣ್ಯರು ಅವನಿಗೆ ಶ್ರೀಮದ್ ರಾಜಾಧಿರಾಜ ಪರಮೇಶ್ವರ, ಅಪರಿಮಿತ ಪ್ರತಾಪವೀರ ಮತ್ತು ನರಪತಿ ಎಂಬ ಬಿರುದುಗಳನ್ನಿತ್ತರೆನ್ನಲಾಗಿದೆ. ಆಗಿನಿಂದ ಶೃಂಗೇರಿಯ ಗುರುಗಳನ್ನು 'ಕರ್ಣಾಟಕ ಸಿಂಹಾಸನ ಪ್ರತಿಷ್ಟಾಪನಾಚಾರ್ಯ' ಎಂದೂ ಸಂಬೋಧಿಸಲಾಗುತ್ತಿದೆ. ಈ ವಿಜಯನಗರ ಮುಂದೆ ೬೪ ಚದರ ಮೈಲುಗಳವರೆಗೆ ಬೆಳೆದಿದ್ದೇ ಅಲ್ಲದೆ ಮುಂದೆ ೨೫೦ ವರ್ಷಗಳವರೆಗೆ ಕರ್ನಾಟಕದ ಹೆಮ್ಮೆಯ ರಾಜಧಾನಿಯಾಗಿ ಮೆರೆಯಿತು.
     ವಿದ್ಯಾರಣ್ಯರು ಪಂಚಾದಶಿ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶಿಕಾ, ಪರಾಶರ ಮಾಧವೀಯ, ಸಂಗೀತಸಾರ, ಮುಂತಾದ ಕೃತಿಗಳನ್ನು ರಚಿಸಿದರು. ಪಂಚಾದಶಿ ಮತ್ತು ಜೀವನ್ಮುಕ್ತಿ ವಿವೇಕ ಕೃತಿಗಳು ಸಾಧಕರಿಗೆ ಉಪಯುಕ್ತ ಮತ್ತು ಮಾರ್ಗದರ್ಶಿಯಾಗಿವೆ. ಶೃಂಗೇರಿ ಶಾರದಾಪೀಠದ ಗುರುಗಳಾದ ಶ್ರೀ ಭಾರತೀ ಕೃಷ್ಣತೀರ್ಥರ ನಿಧನಾನಂತರದಲ್ಲಿ ಕ್ರಿ.ಶ. ೧೩೮೦ರಲ್ಲಿ ೧೨ನೆಯ ಗುರುಗಳಾಗಿ ೧೩೮೬ರವರೆಗೆ ಶಾರದಾ ಪೀಠದ ಮತ್ತು ಶ್ರೀ ಹಂಪಿ ವಿರೂಪಾಕ್ಷೇಶ್ವರ ಮಹಾಸಂಸ್ಥಾನದ ಮುಖ್ಯಸ್ಥರಾಗಿದ್ದರು. ೧೧೮ನೆಯ ವಯಸ್ಸಿನಲ್ಲಿ ಇಹಯಾತ್ರೆ ಮುಗಿಸಿದ ಅವರು ಜೀವನವನ್ನು ಸಾರ್ಥಕರೀತಿಯಲ್ಲಿ ನಡೆಸಿದ, ಆಧ್ಯಾತ್ಮಿಕ, ನೈತಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದ, ಅಂದುಕೊಂಡದ್ದನ್ನು ಸಾಧಿಸಿದ ಧೀರ ಸಂನ್ಯಾಸಿ. 
ಅವಿದ್ಯಾರಣ್ಯಕಾಂತಾರೇ ಭ್ರಮತಾಮ್ ಪ್ರಾಣಿನಾಂ ಸದಾ |
ವಿದ್ಯಾಮಾರ್ಗೋಪದೇಶ್ಟಂ ವಿದ್ಯಾರಣ್ಯಗುರುಮ್ ಶ್ರಯೇ ||
     ಮೌಢ್ಯದ ದಟ್ಟಕಾಡಿನಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡುವ ಜೀವಾತ್ಮರಿಗೆ ಜ್ಞಾನದ ದಾರಿ ತೋರಿಸುವ ಗುರು ವಿದ್ಯಾರಣ್ಯರಿಗೆ ನಮನಗಳು.
     ಹಣಬಲ, ತೋಳ್ಬಲ, ಜಾತಿಬಲ, ಅಧಿಕಾರಬಲ, ಒಡೆದು ಆಳುವ ನೀತಿಯ ಬಲದಿಂದ ಅಧಿಕಾರಕ್ಕೇರಿದ, ಸ್ವಾರ್ಥವೇ ಪ್ರಧಾನವಾದ ರಾಜಕಾರಣಿಗಳಿಂದ, ನೈತಿಕ ಶಿಕ್ಷಣವನ್ನು ಇಲ್ಲವಾಗಿಸಿ ಮೌಲ್ಯಗಳನ್ನು ಗಾಳಿಗೆ ತೂರುವ ಕೇವಲ ಹಣಕೇಂದ್ರಿತ ಶಿಕ್ಷಣ ಪದ್ಧತಿಯಿಂದ, ಭ್ರಷ್ಟಾಚಾರದ ಕೂಪದಿಂದ, ಅನ್ಯಾಯ, ಅತ್ಯಾಚಾರಗಳಿಂದ ದೇಶವನ್ನು ರಕ್ಷಿಸಿ ಮೇಲೆತ್ತಬಲ್ಲ ವಿದ್ಯಾರಣ್ಯರಂತಹ ಧೀಮಂತ ಮಾರ್ಗದರ್ಶಕರ ಅಗತ್ಯ ದೇಶಕ್ಕೆ ಇಂದು ತುರ್ತಾಗಿ ಬೇಕಾಗಿದೆ. ನವಯುವಕ-ಯುವತಿಯರೇ, ನೀವೇ ಏಕೆ ಅಭಿನವ ವಿದ್ಯಾರಣ್ಯರುಗಳಾಗಬಾರದು? ವಿದ್ಯಾರಣ್ಯರು ವಿಜಯನಗರ ಸಂಸ್ಥಾನಕ್ಕೆ ನಾಂದಿ ಹಾಡಿದಂತೆ ನೀವೇ ಏಕೆ ನವಭಾರತ ನಿರ್ಮಾಣಕ್ಕೆ ಅಡಿಗಲ್ಲುಗಳಾಗಬಾರದು? 
-ಕ.ವೆಂ.ನಾಗರಾಜ್.
**********************
ಆಧಾರ ಮತ್ತು ಪೂರಕ ಮಾಹಿತಿಗಳ ಸಂಗ್ರಹ:
1. ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'
2. http://www.sringeri.net 
3.ಮೋಹಿನಿಪುರಾಣಿಕರ  http://narayankripa.blogspot.in/2012/04/swami-vidyaranya-inspiration-for-all.html 
4. http://www.freeindia.org/biographies/sages/vidyaranya/index.htm 
5. http://www.hampividyaranyamutt.org

5 ಕಾಮೆಂಟ್‌ಗಳು:

 1. ಉತ್ತಮ ಸಾಂದರ್ಭಿಕ ಲೇಖನ...ನಮ್ಮವರು ಈಗಲೂ ನರಸತ್ತಂತೆಯೇ ಇದ್ದಾರೆ!

  ಪ್ರತ್ಯುತ್ತರಅಳಿಸಿ
 2. ಉತ್ತಮವಾದ ಲೇಖನ ನಾಗರಾಜ್.[ನೀವೇ ಏಕೆ ಅಭಿನವ ವಿದ್ಯಾರಣ್ಯರುಗಳಾಗಬಾರದು?] ನಿಮ್ಮ ಪ್ರಶ್ನೆ ಸ್ಪೂರ್ಥಿದಾಯಕ. ಯುವಕರು ಓದುವಂತೆ ಮಾಡುವ ಹೊಣೆ ಮತ್ತೆ ನಮ್ಮದೇ! ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ಹಲವು ಉಪನ್ಯಾಸಗಳಲ್ಲಿ ನಾನು ವಿದ್ಯಾರ್ಥಿಗಳಿಗೆ ಇದೇ ಮಾತು ಹೇಳುತ್ತೇನೆ" ನೀವೇ ವಿವೇಕಾನಂದರಾಗಬೇಕು"

  ಪ್ರತ್ಯುತ್ತರಅಳಿಸಿ
 3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 4. ವಿದ್ಯಾರಣ್ಯರು ಯುವಕರಾಗಿದ್ದಾಗಿನ ಒಂದು ಘಟನೆಯನ್ನು ಕಥೆಗೆ ಸೇರಿಸಬಹುದು.ಮಾಯಣ ಎಂಬ ಬ್ರಾಹ್ಮನನಿಗೆ ಮೂವರು ಮಕ್ಕಳು. ಮಾಧವ, ಸಾಯಣ ಮತ್ತು ಭೋಗನಾಥ.ಒಂದು ದಿನ ಮಾಧವ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ.ಆಗ ಹತ್ತಿರವಿದ್ದ ರಾಜಮಾರ್ಗದಿಂದ ತರುಣಿಯೊಬ್ಬಳ ಆಕ್ರಂದನ ಮಾಧವನ ಕಿವಿಗೆ ಬಿತ್ತು.ಮಾಧವ ಕೂಡಲೇ ಧ್ವನಿಯು ಬಂದ ಕಡೆ ಧಾವಿಸಿದ.ರಾಜಮಾರ್ಗದಲ್ಲಿ ಒಬ್ಬ ತರುಣಿಯನ್ನು ಶಸ್ತ್ರಹೊಂದಿದ್ದ ಗೂಂಡಾಗಳು ಬಲಾತ್ಕರಿಸಿ ಎಳೆದಾಡುತ್ತಿದ್ದರು.ಆ ದೃಷ್ಯವನ್ನು ಕಂಡ ಮಾಧವ ಕೆಂಡಾಮಂಡಲವಾದ.ತಾನು ನಿರಾಯುಧನೆಂಬುದನ್ನೂ ಮರೆತ. ಒಬ್ಬ ದುರುಳನ ಕೈಗೊಂದು ಭಾರಿ ಪೆಟ್ಟನ್ನೇ ಕೊಟ್ಟ. ಉಳಿದ ಗೂಂಡಾಗಳು ಮಾಧವನ ಮೇಲೆ ಎರಗಿದರು. ಮಾಧವ ಅವರ ಕತ್ತಿಯನ್ನೇ ಕಿತ್ತುಕೊಂಡು ಇಬ್ಬರ ರುಂಡ ಚೆಲ್ಲಾಡಿದ.ಉಳಿದವರು ಹೆದರಿ ಓಡಿ ಹೋದರು.ಭಯಗ್ರಸ್ತಳಾಗಿದ್ದ ತರುಣಿಯನ್ನು ಕ್ಷೇಮವಾಗಿ ಅವಳ ಮನೆಗೆ ತಲುಪಿಸಿ ಮಾಧವ ಆಶ್ರಮಕ್ಕೆ ವಾಪಸಾದ.ಆಶ್ರಮದ ಕೆಲವು ಶಿಶ್ಯರು ಹೇಳಿದರು " ಒಬ್ಬ ಬ್ರಾಹ್ಮಣ ಹೀಗೆ ಕೊಲೆ ಮಾಡಬಹುದೇ?" ಮಾಧವನ ಗುರುಗಳೇ ಹೇಳಿದರು " ಒಬ್ಬ ಅಬಲೆಯನ್ನು ರಕ್ಷಿಸುವುದೇ ಧರ್ಮ. ಮಾಧವ ಸರಿಯಾದ ಕೆಲಸವನ್ನೇ ಮಾಡಿದ್ದಾನೆ".ಆ ಮಾಧವ ಯಾರು ಗೊತ್ತೇ? ಅವನೇ ಮುಂದೆ ಸನ್ಯಾಸ ಧೀಕ್ಶೆ ತೊಟ್ಟು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಶ್ರೀ ವಿದ್ಯಾರಣ್ಯ!

  ಪ್ರತ್ಯುತ್ತರಅಳಿಸಿ