ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಏಪ್ರಿಲ್ 18, 2012

ಸಾರಗ್ರಾಹಿಯ ರಸೋದ್ಗಾರಗಳು -3

      ೧೧೬ ವರ್ಷಗಳ ಪಂ. ಸುಧಾಕರ ಚತುರ್ವೇದಿಯವರು ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ.  ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 

-ಕ.ವೆಂ.ನಾಗರಾಜ್.
****************

ಯಾಂತ್ರಿಕ ಪೂಜೆಯ ಫಲ
     ಭಗವಂತನ ಪ್ರಾರ್ಥನೆ, ಪೂಜೆಯನ್ನು ಯಾಂತ್ರಿಕವಾಗಿ ಮಾಡಿದರೆ ಫಲವಿಲ್ಲ. ನಮ್ಮ ಪ್ರಾರ್ಥನೆ ಮಾಡುವ ಮಂತ್ರದ ಅರ್ಥದ ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಮಾತ್ರ ಅದರಲ್ಲಿ ಅರ್ಥವಿರುತ್ತದೆ. ಇಲ್ಲದಿದ್ದರೆ ಅದು ಕೇವಲ ನಾಲಿಗೆಗೆ ವ್ಯಾಯಾಮ ಅಷ್ಟೆ. ನಾವು ಈಗ ಅಗ್ನಿಹೋತ್ರ ಮಾಡುವಾಗ ಮೂರು ಸಲ ಗಾಯತ್ರಿ ಮಂತ್ರದ ಉಚ್ಛಾರ ಮಾಡಿದೆವು ಅದರ ಅರ್ಥ ನಮ್ಮ ಅರಿವಿಗೆ ಬಂತೇ, ನಮ್ಮ ಮನಸ್ಸನ್ನು ತಟ್ಟಿತೇ ಎಂಬುದನ್ನು ಅರಿಯೋಣ. ಇಲ್ಲದಿದ್ದರೆ ಸಾವಿರ ಸಲ ಗಾಯತ್ರಿ ಮಂತ್ರ ಹೇಳಿದರೂ ಫಲ ಮಾತ್ರ ಶೂನ್ಯ. ಸ್ನಾನ ಮಾಡಿದರೆ ದೇಹದ ಕೊಳಕು ಹೋಗುತ್ತದೆ. ಆತ್ಮಕ್ಕೆ ಅಂಟಿದ ಕೊಳಕು ಹೋಗಬೇಕೆಂದರೆ ಸತ್ಕರ್ಮದಿಂದ ಮಾತ್ರ ಸಾಧ್ಯ.
ಸಂಸ್ಕಾರ
     ನಾನು ಒಂದು ಉಪನಯನ ಸಮಾರಂಭಕ್ಕೆ ಹೋಗಿದ್ದೆ. ನೆಂಟರು, ಇಷ್ಟರನ್ನೆಲ್ಲಾ ಕರೆದಿದ್ದರು. ದೊಡ್ಡ ಗುಂಪೇ ಸೇರಿತ್ತು. ಪುರೋಹಿತರು ಅವರ ಪಾಡಿಗೆ ಅವರು ಮಂತ್ರ ಹೇಳ್ತಾ ಇದ್ದರು. ಬಂದವರೆಲ್ಲಾ ಸಬ್ ಕಮಿಟಿಗಳನ್ನು ಮಾಡಿಕೊಂಡು ಕಾಡುಹರಟೆ ಹೊಡೆಯುತ್ತಾ ಕೂತಿದ್ದರು. ಉಪನಯನ ಮಾಡಿದವರಿಗಾಗಲೀ, ಮಾಡಿಸಿಕೊಂಡವರಿಗಾಗಲೀ, ಮಂತ್ರ ಹೇಳುತ್ತಿದ್ದವರಿಗಾಗಲೀ ಅದರ ಅರ್ಥ ಗೊತ್ತಿತ್ತೋ ಇಲ್ಲವೋ! ಇಂತಹ ಆಚರಣೆಗಳನ್ನಾದರೂ ಮಾಡಿದರೂ ಒಂದೇ, ಮಾಡದಿದ್ದರೂ ಒಂದೇ! ಅರ್ಥ ತಿಳಿದು, ಎಲ್ಲರೂ ಮನಃಪೂರ್ವಕ ಭಾಗವಹಿಸಿದರೆ ಅದರಲ್ಲಿ ಸಾರ್ಥಕ್ಯವಿದೆ.
Thinking by proxy
     ಮಾನವ ಜನ್ಮ ಎತ್ತಿರುವ ನಾವು ಆಲೋಚನೆ ಮಾಡುವ ಶಕ್ತಿ ಉಪಯೋಗಿಸಿಕೊಳ್ಳಬೇಕು, ತಿಳಿದವರು, ವಿದ್ವಾಂಸರು ಎನ್ನಿಸಿಕೊಂಡವರೇ ವಿವೇಚನೆ ಮಾಡದೆ ಹಿಂದಿನವರು ಮಾಡುತ್ತಿದ್ದರು, ನಾವೂ ಮಾಡೋಣ, ಎಂಬಂತೆ ವರ್ತಿಸಿದರೆ, ಇನ್ನು ಮೂಢರು ಇನ್ನೇನು ಮಾಡ್ತಾರೆ? ಅವರನ್ನೇ ಅನುಸರಿಸುತ್ತಾರೆ. ಬೇರೆಯವರು ಏನು ಮಾಡ್ತಾರೋ ಅದನ್ನು ನೋಡಿಕೊಂಡು ಮಾಡ್ತಾ ಹೋಗೋದು, ಅಷ್ಟೆ. ಯಾವುದಕ್ಕೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೇಳಿದರೆ 'ನಮ್ಮ ಗುರುಗಳು ಯೋಚನೆ ಮಾಡಿದ್ದಾರೆ, ಅವರಿಗೆ ಎಲ್ಲಾ ತಿಳಿದಿದೆ, ಅವರು ಹೇಳಿದ ಮೇಲೆ ಆಯಿತು' ಅನ್ನುತ್ತಾರೆ - Thinking by proxy- ಇದು ಸರಿಯೇ? ನಮಗಾಗಿ ನಾವು ಯೋಚನೆ ಮಾಡಬೇಕೇ ಹೊರತು, ನಮಗಾಗಿ ಬೇರೆಯವರು ಯೋಚಿಸುವುದಲ್ಲ.
ಅರಿತು ಆಚರಿಸುವುದೇ ಜ್ಞಾನದ ತಳಹದಿ 
     ಯಾಸ್ಕರು ಕೇವಲ ವ್ಯಾಕರಣ ಅಲ್ಲ, ಇತಿಹಾಸವನ್ನೂ ತಿಳಿದುಕೊಂಡು ಆಲೋಚನೆ ಮಾಡಿ ಒಂದು ಮಾತು ಹೇಳುತ್ತಾರೆ- ಯಾವನು ತಪಸ್ವಿಯಲ್ಲವೋ, ಇಂದ್ರಿಯ ನಿಗ್ರಹ ಮಾಡುವುದಿಲ್ಲವೋ ಕೇವಲ ವೇದಪಾಠ ಮಾಡುತ್ತಾ ಹೋಗುತ್ತಾನೋ ಅದರಿಂದ ಏನೂ ಪ್ರಯೋಜನವಿಲ್ಲ. ಪ್ರತ್ಯಕ್ಷ ಅರ್ಥ ಆಗಬೇಕು. ತಪಸ್ವಿ ಆಗಬೇಕು, ಬ್ರಹ್ಮಚಾರಿ ಆಗಬೇಕು, ಆಮೇಲೆ ಇಂದ್ರಿಯ ನಿಗ್ರಹ ಮಾಡಬೇಕು, ಆನಂತರವೇ ನಮಗೆ ಅರ್ಥವಾಗುವುದು. ಮಾಡಬಾರದ್ದನ್ನು ಮಾಡಿಕೊಂಡು, ತಿನ್ನಬಾರದ್ದನ್ನು ತಿಂದುಕೊಂಡು, ಆಡಬಾರದ್ದನ್ನು ಆಡಿಕೊಂಡು 'ಓಹೋ, ನಾನು ಅಗ್ನಿಹೋತ್ರ ಮಾಡಿಬಿಟ್ಟೆ' ಅಂದರೆ ಏನೂ ಪ್ರಯೋಜನ ಇಲ್ಲ. ಹಾಗೆಯೇ ವಾಯುಶುದ್ಧಿ ಆಗಬೇಕು ಅಂದುಕೊಂಡು ಈ ಮಂತ್ರ ಎಲ್ಲಾ ಹೇಳಿಕೊಂಡು ಅಗ್ನಿಹೋತ್ರ ಮಾಡೋದು ಏಕೆ? ಮಂತ್ರ ಹೇಳದೇ ಮಾಡಬಹುದಲ್ಲಾ! ಆಗಲೂ ವಾಯುಶುದ್ಧಿ ಆಗುತ್ತಲ್ಲಾ! ಹಾಗಲ್ಲ, ಈ ಮಂತ್ರದಲ್ಲಿ ಆಧ್ಯಾತ್ಮ ತುಂಬಿಕೊಂಡಿದೆ. ಅನೇಕ ಸಾರಿ ನಾನು ಹೇಳಿದ್ದೇನೆ 'ಅಯಂತ ಇದ್ಮ ಆತ್ಮ ಜಾತ ವೇದ' ಅಂತ ಮೊದಲು ಒಂದು ಸಲ ಹೇಳ್ತೀವಿ, ಆಮೇಲೆ ೫ ಸಲ ಹೇಳ್ತೀವಿ, ಯಾತಕ್ಕೆ? ಮೊದಲು ಒಂದು ಸಲ ಹೇಳುವಾಗ 'ಭಗವಂತ ನನ್ನ ಜೀವನ, ಈ ಆತ್ಮ ನಿನಗೆ ಕಾಷ್ಠ, ಸಮಿತ್ತು ಇದ್ದ ಹಾಗೆ'  ಎಂದು ಇದರ ಅರ್ಥ. ಭಗವಂತ ಬ್ರಹ್ಮಾಂಡ, ದೊಡ್ಡ ಅಗ್ನಿ, ಆ ಅಗ್ನಿಯಲ್ಲಿ ನಮ್ಮ ಆತ್ಮವನ್ನು ಹಾಕಿದರೆ, ನಮ್ಮ ಆತ್ಮ ಇಲ್ಲದಂತಹ ಅದ್ಭುತ ಜ್ಞಾನ ನಮಗೆ ಬರುತ್ತದೆ. ನೀವು ಸುಳ್ಳು ಅಂತ ತಿಳಿದುಕೊಳ್ಳಬೇಡಿ, ಈಗಲಾದರೋ ನೀವು ವಿಮಾನ ನೋಡುತ್ತೀರಿ, ಸ್ಪೇಸ್ ಶಿಪ್ಪುಗಳನ್ನು ನೋಡ್ತೀರಿ. ಅವು ಯಾವುವೂ ಗೊತ್ತಿಲ್ಲದೇ ಇರುವಾಗ ಜ್ಯೋತಿಷಿಗಳು ೧೦೦ ವರ್ಷ ಆದಮೇಲೆ ಯಾವ ದೇಶದಲ್ಲಿ ಯಾವಾಗ ಸೂರ್ಯಗ್ರಹಣ ಆಗುತ್ತೆ, ಚಂದ್ರ ಗ್ರಹಣ ಆಗುತ್ತೆ, ಎಷ್ಟು ಕಾಲ ಇರುತ್ತೆ, ಇದನ್ನೆಲ್ಲಾ ಹೇಳಿಬಿಡುತ್ತಿದ್ದರಲ್ಲಾ, ಹೇಗೆ? ಅವರೇನು ಪ್ರಾಪಂಚಿಕ ವಿಷಯದಲ್ಲಿ ಯಾವುದೇ ಬಿ.ಎ., ಎಂ.ಎ. ಪಾಸು ಮಾಡಿದವರಲ್ಲ. ನಮ್ಮ ಋಷಿಗಳೂ ಅಷ್ಟೆ, ವಸಿಷ್ಠ ಋಷಿ, ವಸಿಷ್ಠ, ಬಿ.ಎ., ಎಂ.ಎ. ಅಂತ ಹೆಸರಿನ ಮುಂದೆ ಹಾಕಿಕೊಂಡಿದ್ದರಾ? ಏನೂ ಇಲ್ಲ, ಡಿಗ್ರಿಗಳು ಬೇಕೇ ಇಲ್ಲ. ನನ್ನ ಗುರು ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದರು: 'ನಿಮಗೆ ನಾವು ಡಿಗ್ರಿ ಕೊಡುತ್ತೇವೆ, ವಿದ್ಯಾಲಂಕಾರ, ವೇದಾಲಂಕಾರ, ವಿದ್ಯಾವಾಚಸ್ಪತಿ, ಡಿಗ್ರಿ ಕೊಡುತ್ತೇವೆ. ಅದರಿಂದ ನೀವು ಉದ್ಧಾರವಾಗುವುದಿಲ್ಲ. ಅದು ತಳಹದಿ. ಅದರ ಮೇಲೆ ನೀವು ಕಟ್ಟಡ ಕಟ್ಟಬೇಕು. ಹೊಟ್ಟೆಪಾಡಿಗಲ್ಲ, ಹೊಟ್ಟೇಪಾಡೂ ಬೇಕು, ಸಿಕ್ಕುತ್ತೆ.' ಸಂಸಾರಿಗಳು ಹೇಳೋರು, "ಸ್ವಾಮೀಜಿ, ನಿಮಗೇನೋ ಪರವಾಗಿಲ್ಲ, ಸಂಸಾರವಿಲ್ಲ, ಹೆಂಡರಿಲ್ಲ, ಮಕ್ಕಳಿಲ್ಲ, ಹ್ಯಾಗೋ ನಡೆದುಹೋಗುತ್ತೆ, ನಾವು ಗೃಹಸ್ಥರು, ಪೂಜೆ ಮಾಡೋದು ಬಿಟ್ಟುಬಿಟ್ರೆ, ನಮಗೆ ನೈವೇದ್ಯ ಕೊಡೋರು ಯಾರು? ದಕ್ಷಿಣೆ ಕೊಡೋರು ಯಾರು?ದಾನ ಕೊಡೋರು ಯಾರು? ನಮ್ಮ ಹೊಟ್ಟೆಪಾಡು?"  ದಯಾನಂದರು ಹೇಳೋರು: "ನಿಮ್ಮ ಪ್ರಾರಬ್ಧ ನಿಮ್ಮ ಜೊತೆಯಲ್ಲಿದೆ, ನಿಮಗೆ ಇದೊಂದೇ ಜನ್ಮ ಅಲ್ಲ, ಹಿಂದೆ ಯಾವ ಯಾವುದೋ ಜನ್ಮ ಎತ್ತಿದ್ದೀರಾ. ಅವುಗಳ ಫಲ ನಿಮ್ಮ ಜೊತೆಯಲ್ಲೇ ಇರುತ್ತೆ. ನಿಮಗೆ ಅನ್ನ ಸಿಕ್ಕೇ ಸಿಕ್ಕುತ್ತೆ. ಜನರಿಗೆ ಟೋಪಿ ಹಾಕಿ, ಸುಳ್ಳು ಹೇಳಿ ನೀವು ನಿಮ್ಮ ಅನ್ನ ದುಡಿಯಬೇಕಿಲ್ಲ."
. . . . .ಮುಂದುವರೆಯುವುದು.
*************
ಹಿಂದಿನ ಲೇಖನಕ್ಕೆ ಲಿಂಕ್:

3 ಕಾಮೆಂಟ್‌ಗಳು:

  1. ಏನಾಗಿದೆ, ಅಂದರೆ ಕೆಲವು ಮಂತ್ರಗಳ ಅರ್ಥವನ್ನು ಪಂಡಿತ್ ಜಿ ಮತ್ತು ಶ್ರೀ ಸುಧಾಕರಶರ್ಮರು ಹೇಳುತ್ತಾರೆ. ಸಂತೋಷವಾಗುತ್ತೆ. ಆದರೆ ರೂಢಿಯಲ್ಲಿರುವ ವೇದ ಮಂತ್ರಗಳಿವೆಯಲ್ಲಾ, ಅವುಗಳ ಅರ್ಥವನ್ನು ಹೇಳುವವರೇ ಇಲ್ಲ. ಅವು ತಪ್ಪೋ ಸರಿಯೋ ಹೇಳಬೇಕೋ ಬಿಡಬೇಕೋ ಯಾವುದೂ ಅರ್ಥವಾಗುವುದಿಲ್ಲ. ಉಧಾಹರಣೆಗೆ ರುದ್ರ,ಚಮೆ,ಸೂಕ್ತಗಳು...ಇವೆಲ್ಲಾ ಪಠಿಸುವುದಕ್ಕೆ ಚೆನ್ನಾಗಿರುತ್ತೆ, ಮನಸ್ಸಿಗೆ ಮುದವನ್ನು ನೀಡುತ್ತೆ. ಆದರೆ ಅರ್ಥ ಗೊತ್ತಿಲ್ಲ.ಪ್ರಯೋಜನ ಎಂದರೇನು? ಫಲ ಎಂದೇ? ನನಗಂತೂ ಯಾವ ಫಲಾಪೇಕ್ಷೆಯಿಂದ ಮಂತ್ರಗಳನ್ನು ಹೇಳಬೇಕೆನಿಸುವುದಿಲ್ಲ. ಆದರೆ ಪಠಿಸಿದರೆ ಅಂತೆಯೇ ಕೇಳಿದರೆ ಮನಸ್ಸಿಗೆ ಹಿತವಾಗುತ್ತೆ. ಅರ್ಥ ತಿಳಿದರಂತೂ ಇನ್ನೂ ಹೆಚ್ಚು ಸಂತೋಶವಾಗುತ್ತಿತ್ತ್ತು. ಆದರೆ ಬಲ್ಲವರು ಹೇಳಬೇಕು.ನಾನಂತೂ ನನ್ನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಈ ಬಗ್ಗೆ ವಿನಂತಿಸುತ್ತಲೇ ಇದ್ದೇನೆ. ಯಾವಾಗ ರೂಢಿಯಲ್ಲಿರುವ ವೇದಮಂತೆರಗಳಿಗೆ ಅರ್ಥ ವಿವರಿಸುವವರು ಲಭ್ಯವಾಗುತ್ತಾರೋ ಗೊತ್ತಿಲ್ಲ. ಒಮ್ಮೆ ಮಾತ್ರ ಶ್ರೀ ಶರ್ಮರು ಪುರುಷಸೂಕ್ತಕ್ಕೆ ಒಂದು ದಿನದ ಉಪನ್ಯಾಸವನ್ನು ಮಾಡಿದ್ದರು. ಉಳಿದ ಮಂತ್ರಗಳಿಗೆ ಇನ್ನೂ ಅರ್ಥವನ್ನು ತಿಳಿದುಕೊಳ್ಳಬೇಕಾಗಿದೆ. ನೋಡೋಣ......ಆ ದಿನವೂ ಬರಬಹುದು!

    ಪ್ರತ್ಯುತ್ತರಅಳಿಸಿ
  2. ಖಂಡಿತವಾಗಿ ಪ್ರಯತ್ನಮಾಡಿದರೆ ಎಲ್ಲಾ ಅರ್ಥಗಳು ಸಿಗುತ್ತವೆ

    ಪ್ರತ್ಯುತ್ತರಅಳಿಸಿ