ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಮೇ 30, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -1



     ಮಾನವನು ಮಾನವೇತರ ಜೀವರಿಗಿಂತ ಒಂದು ವಿಷಯದಲ್ಲಿ ಭಿನ್ನನಾಗಿದ್ದಾನೆ. ಮಾನವೇತರ ಜೀವರಾದ ಪಶು-ಪಕ್ಷಿ-ಕ್ರಿಮಿ-ಕೀಟಗಳಲ್ಲಿಯೂ ಚೇತನನಾದ ಆತ್ಮವಿರುವುದರಿಂದ ಅವುಗಳಲ್ಲಿಯೂ ಜ್ಞಾನವಿದೆ. ಅದರೆ, ಅದು ಸ್ವಾಭಾವಿಕ ಜ್ಞಾನ. ಶರೀರಧಾರಿಗಳಾದ ಚೇತನಮಾತ್ರರಿಗೆ ಹಸಿವಾದಾಗ ತಿನ್ನಬೇಕು, ಬಾಯಾರಿದಾಗ ಕುಡಿಯಬೇಕು, ತನಗೆ ಸಂಭವಿಸಬಹುದಾದ ಅಪಾಯಕ್ಕೆ ಹೆದರಬೇಕು,ಆತ್ಮರಕ್ಷಣೆಗಾಗಿ ಹೆಣಗಬೇಕು; ವಂಶ ಪರಮಪರೆಯ ರಕ್ಷಣೆಗಾಗಿ ತನ್ನ ಜಾತಿಯ ಭಿನ್ನ ಲಿಂಗದ ಪ್ರಾಣಿಯೊಂದಿಗೆ ದೈಹಿಕ ಸಂಬಂಧ ಹೊಂದಬೇಕು - ಈ ಮೊದಲಾದ ಅರಿವು ಸ್ವಾಭಾವಿಕವಾಗಿಯೇ ಇರುತ್ತವೆ. ಚೇತನಮಾತ್ರರಲ್ಲಿ ಮಾನವನ ಗಣನೆಯೂ ಆಗುವುದರಿಂದ, ಮಾನವನಲ್ಲಿಯೂ ಈ ಸ್ವಾಭಾವಿಕ ಜ್ಞಾನವಿದ್ದೇ ಇರುತ್ತದೆ. ಆದರೆ ಈ ಸ್ವಾಭಾವಿಕ ಜ್ಞಾನದಿಂದಲೇ ಮಾನವನು ತೃಪ್ತನಾಗಲಾರನು. ಏಕೆಂದರೆ "ಏಕೆ? ಹೇಗೆ?" ಎಂಬ ಪ್ರಶ್ನೆಗಳನ್ನು ಕೇಳಬಲ್ಲ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ ಮಾನವನ ಮನಸ್ಸು. ಪ್ರಶ್ನೆ ಕೇಳುವ ಭಾಗ್ಯ ಮತ್ತು ಅದಕ್ಕೆ ಉತ್ತರ ಹುಡುಕುವ ಅಭಿಲಾಷೆ ಕೇವಲ ಮನುಷ್ಯನಿಗೆ ಸಿಕ್ಕಿರುವ ಸಂಪತ್ತು. ಈ ಜಿಜ್ಞಾಸೆಯಿಂದಾಗಿ ಮಾನವನು ಅನ್ಯ ಜೀವರಿಗಿಂತ ಉನ್ನತ ಸ್ತರದಲ್ಲಿದ್ದಾನೆ.ಈ ಜಿಜ್ಞಾಸೆಯ ಪರಿಣಾಮವಾಗಿ, ಮಾನವನು ನೈಮಿತ್ತಿಕಜ್ಞಾನವನ್ನು ಪಡೆದುಕೊಳ್ಳಲು ಸಮರ್ಥನಾಗಿದ್ದಾನೆ. ನೈಮಿತ್ತಿಕ ಜ್ಞಾನಕ್ಕೆ ಆಶಿಸದೆ, ಕೇವಲ ಸ್ವಾಭಾವಿಕಜ್ಞಾನವೇ ಸಾಕೆಂಬ ತೃಪ್ತ ಮನೋಭಾವವನ್ನು ಸೂಚಿಸುವ ಮಾನವನ ಬೆಳವಣಿಗೆ ಅಲ್ಲಿಗೇ ನಿಂತು ಹೋಗಿ, ಅವನು ಶರೀರದ ಆಕಾರದಿಂದ ಮಾನವನಂತೆಯೇ ಕಂಡುಬಂದರೂ, ಆಂತರಿಕ ವಿಕಾಸದ ದೃಷ್ಟಿಯಿಂದ ಪಶುಪಕ್ಷಿ-ಕ್ರಿಮಿಕೀಟಗಳ ಮಟ್ಟದಲ್ಲಿಯೇ ಉಳಿದು ಹೋಗುತ್ತಾನೆ.ಮಾನವನ ನಿಜವಾದ ಸರ್ವಾಂಗೀಣ ವಿಕಾಸಕ್ಕೆ ಅನಿವಾರ್ಯವಾದ ಸಾಧನ ನೈಮಿತ್ತಿಕಜ್ಞಾನವೇ. ಬೇರೆ ನಿಮಿತ್ತಗಳಿಂದ, ಕಾರಣಗಳಿಂದ ಲಭಿಸುವ ಜ್ಞಾನವೇ ನೈಮಿತ್ತಿಕ ಜ್ಞಾನ.ಸ್ವಾಭಾವಿಕ ಜ್ಞಾನ, "ಹುಟ್ಟಿದ; ಇದ್ದ;ಸತ್ತ"- ಎಂದು ಮಾನವನ ಜೀವನವನ್ನು ಚಿತ್ರಿಸಬೇಕಾದರೆ ಸಾಕು."ಮಾನವ ಕೇವಲ ಹುಟ್ಟಿ, ಇದ್ದು ಸಾಯಲಿಲ್ಲ. ಏನೋ ಆಗಿ, ತಾನೂ ಬೆಳಗಿ, ಬೇರೆಯವರನ್ನೂ ಬೆಳಗಿಸಿ,ಶರೀರತ್ಯಾಗ ಮಾಡಿ ಅಮರನಾಗಿ ಹೋದ"- ಎಂದು ಮಾನವಚರಿತ್ರೆಯನ್ನು ಬರೆಯಬೇಕಾದರೆ, ನೈಮಿತ್ತಕ ಜ್ಞಾನ ಅವನ ಬಾಳಿಗೆ ಹೊಸೆದುಕೊಂಡು ಬರಲೇಬೇಕು; "ಹೇಗೆ? ಏಕೆ?" ಗಳಿಗೆ ಉತ್ತರ ಹುಡುಕಲು ಅವನು ನೈಮಿತ್ತಿಕ ಜ್ಞಾನಕ್ಕೆ ಶರಣಾಗಲೇಬೇಕು.

.......

ಗುರುವಾರ, ಮೇ 27, 2010

ಮನೆಯಲ್ಲೇ ಸ್ವರ್ಗ !!







ಮನೆಯಲ್ಲೇ ಸ್ವರ್ಗ !!

ಯತ್ರಾ ಸುಹಾರ್ದಃ ಸುಕೃತೋ ಮದಂತಿ
ವಿಹಾಯ ರೋಗಂ ತನ್ವಃ ಸ್ವಾಯಾಃ |
ಅಶ್ಲೋಣಾ ಅಮಗೈರಹ್ರುತಾಃ
ಸ್ವರ್ಗೇ ತತ್ರ ಪಶ್ಯೇಮ ಪಿತರೌ ಚ ಪುತ್ರಾನ್ ||

(ಅಥರ್ವ.6.120.3.)

"ಎಲ್ಲಿ ಉತ್ತಮ ಹೃದಯಉಳ್ಳವರೂ, ಉತ್ತಮ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರೂ, ತಮ್ಮ ಶರೀರಗಳನ್ನು ರೋಗರಹಿತವನ್ನಾಗಿ ಇಟ್ಟುಕೊಂಡಿರುವವರೂ ಇರುತ್ತಾರೋ ಅಲ್ಲಿ ಅವರು ಆನಂದವನ್ನು ಅನುಭವಿಸುತ್ತಾರೆ. ಅವರು ಅಂಗವಿಕಲತೆಗಳಿಲ್ಲದವರಾಗಿ, ತಂದೆ-ತಾಯಿ ಹಾಗೂ ಮಕ್ಕಳು-ಮರಿಗಳೊಂದಿಗೆ ಸ್ವರ್ಗಸಮಾನ ಮನೆಯಲ್ಲಿರುವುದನ್ನು ನೋಡೋಣ."

ಮಂಗಳವಾರ, ಮೇ 25, 2010

ಹತ್ತು ಸತ್ಯ ನಿಯಮಗಳು


ಹತ್ತು ಸತ್ಯ ನಿಯಮಗಳು
1. ಎಲ್ಲ ಸತ್ಯ ವಿದ್ಯೆಗಳಿಗೂ ಮತ್ತು ಪದಾರ್ಥ ವಿದ್ಯೆಯಿಂದ ತಿಳಿಯಲ್ಪಡುವ ಸೆರ್ವಕ್ಕೂ ಪರಮಾತ್ಮನೇ ಆದಿಮೂಲನು.
2. ಪರಮಾತ್ಮನು ಸಚ್ಚಿದಾನಂದ ಸ್ವರೂಪನೂ, ನಿರಾಕಾರನೂ, ಸರ್ವಶಕ್ತನೂ, ನ್ಯಾಯಕಾರಿಯೂ,ದಯಾಳುವೂ, ಅಜನ್ಮನೂ, ಅನಂತನೂ, ನಿರ್ವಿಕಾರನೂ,ಅನಾದಿಯೂ, ಅನುಪಮನೂ, ಸರ್ವಾಧಾರನೂ, ಸರ್ವೇಶ್ವರನೂ, ಅಜರನೂ, ಸರ್ವಾಂತರ್ಯಾಮಿಯೂ, ಅಮರನೂ, ಅಭಯನೂ, ನಿತ್ಯನೂ, ಪವಿತ್ರನೂ, ಸೃಷ್ಟಿಕರ್ತನೂ ಆಗಿದ್ದಾನೆ.ಕೇವಲ ಅವನ ಉಪಾಸನೆಯನ್ನು ಮಾಡುವುದು ಯೋಗ್ಯ.
3. ವೇದವು ಸಮಸ್ತ ಸತ್ಯವಿದ್ಯೆಗಳ ಪುಸ್ತಕವು. ಅವುಗಳನ್ನು ಓದುವುದೂ, ಓದಿಸುವುದೂ, ಕೇಳುವುದೂ, ಹೇಳುವುದೂ ಆರ್ಯರೆಲ್ಲರ ಪರಮಧರ್ಮ.
4. ಸತ್ಯವನ್ನು ಗ್ರಹಿಸುವುದಕ್ಕೂ, ಅಸತ್ಯವನ್ನು ತ್ಯಜಿಸುವುದಕ್ಕೂ ಸದಾ ಸಿದ್ಧರಾಗಿರಬೇಕು.
5. ಎಲ್ಲ ಕಾರ್ಯಗಳನ್ನು ಧರ್ಮಾನುಸಾರವಾಗಿ, ಎಂದರೆ ಸತ್ಯಾಸತ್ಯ ವಿವೇಚನೆ ಮಾಡಿ ಆಚರಿಸಬೇಕು.
6. ಜಗತ್ತಿನ ಉಪಕಾರವನ್ನು, ಅಂದರೆ ಸರ್ವರ ಶಾರೀರಿಕ, ಆತ್ಮಿಕ ಮತ್ತು ಸಾಮಾಜಿಕ ಉನ್ನತಿಯನ್ನು ಸಾಧಿಸುವುದೇ ಮುಖ್ಯ ಉದ್ದೇಶ.
7. ಎಲ್ಲರೊಂದಿಗೆ ಪ್ರೀತಿಪೂರ್ವಕವಾಗಿ, ಧರ್ಮಾನುಸಾರವಾಗಿ ಅವರವರ ಯೋಗ್ಯತೆಗೆ ತಕ್ಕಂತೆ ವರ್ತಿಸಬೇಕು.
8. ಅವಿದ್ಯೆಯ ನಾಶವನ್ನೂ, ವಿದ್ಯೆಯ ಅಭಿವೃದ್ಧಿಯನ್ನೂ ಸಾಧಿಸಬೇಕು.
9. ಕೇವಲ ತನ್ನ ಉನ್ನತಿಯಿಂದ ಯಾವನೂ ಸಂತುಷ್ಟನಾಗಬಾರದು. ಅದರೆ, ಸರ್ವರ ಉನ್ನತಿಯಲ್ಲಿಯೇ ತನ್ನ ಉನ್ನತಿಯು ಸನ್ನಿಹಿತವಾಗಿದೆಯೆಂದು ತಿಳಿಯಬೇಕು.
10.ಸಾಮಾಜಿಕ ಸರ್ವಹಿತಕಾರಿ ನಿಯಮಗಳ ಪಾಲನೆಯಲ್ಲಿ ಮಾನವರೆಲ್ಲರೂ ಪರತಂತ್ರರಾಗಿರಬೇಕು ಮತ್ತು ವೈಯಕ್ತಿಕ ಹಿತಕಾರಿ ನಿಯಮದ ವಿಷಯದಲ್ಲಿ ಸರ್ವರೂ ಸ್ವತಂತ್ರರಾಗಿರಬೇಕು.

ವೇದೋಕ್ತ ಜೀವನ ಪಥ

ಓಂ

ತಸ್ಮಾದ್ಯಜ್ಞಾತ್ ಸರ್ವಹುತ
ಋಚಃ ಸಾಮಾನಿ ಜಜ್ಞಿರೇ|
ಧಂದಾಂಸಿ ಜಜ್ಞಿರೇ
ತಸ್ಮಾ ದ್ಯಜುಸ್ತಸ್ಮಾದಜಾಯತ||
(ಯಜು.31.7)


[ತಸ್ಮಾತ್ ಸರ್ವಹುತಃ ಯಜ್ಞಾತ್] ಆ ಸರ್ವದಾತೃವೂ, ಉಪಾಸನೀಯವೂ ಆದ ಭಗವಂತನಿಂದ, [ಋಚಃ ಸಾಮಾನಿ ಜಜ್ಞಿರೇ] ಋಗ್ವೇದ, ಸಾಮವೇದಗಳು ಪ್ರಕಟವಾದವು. [ತಸ್ಮಾತ್ ಛಂದಾಂಸಿ ಜಜ್ಞೀರೇ] ಅವನಿಂದ ಅಥರ್ವ ಮಂತ್ರಗಳು ಪ್ರಕಟವಾದವು. [ತಸ್ಮಾತ್ ಯಜುಃ ಅಜಾಯತ] ಅವನಿಂದ ಯಜುರ್ವೇದವು ಪ್ರಕಾಶಿತವಾಯಿತು.

ಸೋಮವಾರ, ಮೇ 24, 2010

ಮೊದಲ ತೊದಲು

ವೇದಗಳು ಜಗತ್ತಿಗೆ ಭಾರತವು ನೀಡಿದ ಅತ್ಯಮೂಲ್ಯ ಕೊಡುಗೆ.ವಿವಿದತೆಯಲ್ಲಿ ಸಮರಸತೆಯನ್ನು ಕಾಣುವ ದಿವ್ಯ ಸಂಸ್ಕೃತಿಗೆ ವೇದಗಳೇ ಮೂಲವೆಂಬುದು ಸರಿಯಾದ ಮಾತು.ವೇದಗಳ ಕುರಿತು ಜನಸಾಮಾನ್ಯರಿಗೆ ತಿಳಿಸುವ ಕುರಿತು ಅನೇಕ ಸಹೃದಯರು ಪ್ರಯತ್ನಶೀಲರಾಗಿದ್ದಾರೆ. ಅವರುಗಳ ಪ್ರಯತ್ನಕ್ಕೆ ಮೂರಕವಾಗಿ ವೇದಗಳ ಬಗ್ಗೆ ಪ್ರಾಜ್ಞರು ಹೇಳಿರುವ ವಿಚಾರಗಳನ್ನು ತಮ್ಮ ಮುಂದಿಡುವ ಸಲುವಾಗಿ ಮತ್ತು ಆ ಮೂಲಕ ಅಳಿಲು ಸೇವೆ ಸಲ್ಲಿಸುವ ಸಲುವಾಗಿ ಈ ತಾಣ ಮೀಸಲಿದೆ.ತಮ್ಮ ಸಲಹೆ, ಸೂಚನೆ, ಟೀಕೆಗಳಿಗೆ ಮುಕ್ತ ಸ್ವಾಗತ!

ಪ್ರಾರಂಭಿಕವಾಗಿ 'ವೇದೋಕ್ತ ಜೀವನ ಫಥ'ದ ಬಗ್ಗೆ ಪಂ. ಸುಧಾಕರ ಚತುರ್ವೇದಿಯವರು ಹೇಳಿರುವ ಸಂಗತಿಗಳನ್ನು ತಮ್ಮ ಮುಂದಿಡಲಾಗುತ್ತಿದೆ.ಪಂ. ಸುಧಾಕರ ಚತುರ್ವೇದಿಯವರು ನಾಲ್ಕು ವೇದಗಳನ್ನು ಸತತ ಇಪ್ಪತ್ತೈದು ವರ್ಷಗಳ ಕಾಲ ಸತತ ಅಭ್ಯಾಸ ಮಾಡಿದವರು.ಉತ್ತಮ ವಾಗ್ಮಿಗಳು, ಬ್ರಹ್ಮಚರ್ಯ ವ್ತತ ಪಾಲಕರು. ತಮ್ಮ ಸಾಧನೆಗಾಗಿ ಸಾರ್ವದೇಶಿಕ ಆರ್ಯ ಪ್ರತಿನಿಧಿ ಸಭೆಯಿಂದ 'ಚತರ್ವೇದೀ' ಎಂಬ ಉಪಾಧಿ ಪಡೆದವರು.ವೇದಗಳ ಬಗ್ಗೆ ಸಾಧಾರವಾಗಿ ಮತ್ತು ಧೃಢವಾಗಿ ವಿಷಯ ಮಂಡನೆ ಮಾಡಬಲ್ಲವರು ಮತ್ತು ಸಂದೇಹಗಳನ್ನು ಸಮರ್ಥವಾಗಿ ವಿವರಣೆ ಕೊಟ್ಟು ಪರಿಹರಿಸಬಲ್ಲವರು.ಬನ್ನಿ, ವೇದ ಹೇಳಿದ ಜೀವನದ ಬಗ್ಗೆ ಅವರೇನು ಹೇಳಿದ್ದಾರೆ, ಹಂತ ಹಂತವಾಗಿ ನೋಡೋಣ!