ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.
ಬುಧವಾರ, ಮೇ 30, 2018
ಪಂ.ಸುಧಾಕರ ಚತುರ‍್ವೇದಿಯವರ ವಿಚಾರ - 26.08.2018
ಕಳೆದ ಶನಿವಾರ ಶತಾಯುಷಿ ಪಂ.ಸುಧಾಕರ ಚತುರ‍್ವೇದಿಯವರ ಸತ್ಸಂಗದಲ್ಲಿ ಪಾಲುಗೊಂಡಿದ್ದೆ. ಶರೀರ ಕೃಷವಾಗಿದ್ದರೂ ಅವರ ವಿಚಾರ ಎಂದಿನಂತೆ ಹರಿತವಾಗಿಯೇ ಇದೆ, ಸ್ಪಷ್ಟವಾಗಿಯೇ ಇದೆ. ಅವರು ಹೇಳಿದ ವಿಚಾರಗಳ ಕೆಲವು ಅಂಶಗಳನ್ನು ನಿಮ್ಮೊಡನೆ ಹಂಚಿಕೊಂಡಿರುವೆ:
"ಹರಿಯುವ ನೀರು ಶುಭ್ರವಾಗಿ ಇರುತ್ತದೆ. ಅದೇ ರೀತಿ ಮಾನವನೂ ನಿರಂತರವಾಗಿ ಮುನ್ನಡೆಯುತ್ತಿರಬೇಕು. ಚರೈವೇತಿ, ಚರೈವೇತಿ ಎಂಬುದು ಮಂತ್ರವಾಗಬೇಕು. ಮುನ್ನಡೆಯುವುದು ಎಂದರೆ ಯಾವ ಯಾವ ಕಾಲದಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾ ಧರ್ಮಿಷ್ಠರಾಗಿ ನಡೆಯಬೇಕು. ನಡೆಯುವಾಗ ಒಂದು ಗುರಿ ಇರಬೇಕು. ಗೊತ್ತು ಗುರಿ ಇಲ್ಲದೆ ನಡೆಯುವುದು ವ್ಯರ್ಥ. ಸತ್ಯಾನುಷ್ಠಾನ, ಸತ್ಯಾನ್ವೇಷಣೆ ನಮ್ಮ ಗುರಿಯಾಗಬೇಕು. ಧೈರ್ಯವಿರಬೇಕು."
"ನನಗೆ ಎಲ್ಲವೂ ಗೊತ್ತಿದೆ ಅನ್ನುವವನು ವಿದ್ವಾಂಸ ಅಲ್ಲ. ವಿದ್ವಾಂಸನಾದವನು ನಮ್ರನಾಗಿರುತ್ತಾನೆ. ಕೆಲವು ಮರಗಳು ಆಕಾಶದೆತ್ತರ ಬೆಳೆದಿರುತ್ತವೆ. ಅವುಗಳು ಅಲಂಕಾರಿಕ ಅಷ್ಟೆ, ಪ್ರಯೋಜನವಿಲ್ಲ. ಇನ್ನು ಕೆಲವು ಮರಗಳು ಹಣ್ಣು, ಹಂಪಲುಗಳನ್ನು ಬಿಟ್ಟಾಗ ಅವುಗಳ ಭಾರದಿಂದ ಬಗ್ಗಿರುತ್ತವೆ, ತಗ್ಗಿರುತ್ತವೆ. ಉಪದೇಶಗಳಿಂದ ಉದ್ಧಾರ ಆಗುವುದಿಲ್ಲ. ಆತ್ಮ ಪ್ರಶಂಸೆ ಸಲ್ಲದು. ಜ್ಞಾನ ಅನಂತವಾದುದು. ತಿಳಿದಷ್ಟೂ ತಿಳಿಯುವುದು ಇದ್ದೇ ಇರುತ್ತದೆ."
"ನಾನು ಆ ಜಾತಿ, ನಾನು ಈ ಜಾತಿ ಅನ್ನುವುದಕ್ಕಿಂತ ನಾನು ಮಾನವ ಜಾತಿ ಎಂದು ಕರೆದುಕೊಳ್ಳುವಂತೆ ಆಗಬೇಕು. ಮನುರ್ಭವ - ಮಾನವರಾಗಿ."
"ಬರುವಾಗಲೂ ಅಳುವುದು, ಹೋಗುವಾಗಲೂ ಅಳುವುದು! ಬರುವುದು, ಹೋಗುವುದು ಇದ್ದೇ ಇರುತ್ತದೆ. ನಗಬಲ್ಲವನು ಮನುಷ್ಯ. ನಗುತ್ತಾ, ನಗಿಸುತ್ತಾ ಬಾಳಬೇಕು."
-ಕ.ವೆಂ.ನಾ.
ಸೋಮವಾರ, ಏಪ್ರಿಲ್ 2, 2018
ಒಡೆಯುವುದು ಸುಲಭ! - [Easy to divide!]
'ಈಗ ಏನಾಗುತ್ತಿದೆ?' ಎಂದು ಎಲ್ಲರೂ ಕೇಳುವಂತಹ ಸ್ಥಿತಿ ಬಂದೊದಗಿದೆ. ಉತ್ತರಿಸಬೇಕಾದವರೇ ಪ್ರಶ್ನೆ ಕೇಳಲು ಕಾರಣರಾಗಿದ್ದಾರೆ. ಸಮಸ್ಯೆ ಪರಿಹರಿಸಬೇಕಾದವರೇ ಸಮಸ್ಯೆಗಳನ್ನು ಸೃಜಿಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕಧರ್ಮ, ಅದು ಹಿಂದೂಧರ್ಮಕ್ಕೆ ಹೊರತಾದುದು, ಅದಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡಬೇಕು ಎನ್ನುವ ವಿಚಾರದಲ್ಲಿ ಸರ್ಕಾರದ ನಿಲುವು ರಾಜ್ಯ ಚುನಾವಣೆಯ ಹೊಸ್ತಿಲಿನಲ್ಲಿ ಇರುವಾಗ ದೊಡ್ಡ ಸಂಘರ್ಷ ಉಂಟುಮಾಡಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತದೋ ಯಾರಿಗೆ ಗೊತ್ತು? ಆತುರ ಆತುರದಲ್ಲಿ ಒಂದು ಸಮಿತಿ ರಚಿಸಿ, ಆ ಸಮಿತಿಯಲ್ಲಿ ಧಾರ್ಮಿಕತಜ್ಞರಿಗೆ ಮಹತ್ವವಿರದೆ ಕಮ್ಯುನಿಸ್ಟ್ ವೈಚಾರಿಕತೆಯ ಒಲವಿರುವವರು, ಲಿಂಗಾಯತ-ವೀರಶೈವರಲ್ಲದವರು ಮತ್ತು ಪ್ರತ್ಯೇಕಧರ್ಮಘೋಷಣೆಯ ಪರವಿರುವವರಿಗೆ ಸ್ಥಾನ ನೀಡಿ, ಬೇಕಾದರೀತಿಯಲ್ಲಿ ವರದಿ ತರಿಸಿಕೊಂಡು ಸಂಪುಟ ಸಭೆಯಲ್ಲೂ ವರದಿ ಒಪ್ಪಿದ ಬಗ್ಗೆ ನಿರ್ಣಯವಾಗಿದೆ. ಇದು ಚುನಾವಣೆಯಲ್ಲಿ ಮತಗಳಿಕೆಯ ದೃಷ್ಟಿಯಿಂದ ಮಾಡಲಾದುದು ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ. ಸಮಿತಿಯ ಅಧ್ಯಕ್ಷ ಜಸ್ಟಿಸ್ ನಾಗಮೋಹನದಾಸ್ ಒಕ್ಕಲಿಗರು. ಮುಜಾಫರ್ ಅಸಾದಿ ಮುಸ್ಲಿಮ್, ರಾಮಕೃಷ್ಣ ಮರಾಠೆ ಪಕ್ಕಾ ಎಡಪಂಥೀಯರು. ಪುರುಷೋತ್ತಮ ಬಿಳಿಮಲೆ ಲಿಂಗಾಯತರಲ್ಲ. ಎಸ್.ಜಿ.ಸಿದ್ದರಾಮಯ್ಯ ಕುರುಬರು. ಪತ್ರಕರ್ತ ಸರಜೂ ಕಾಟ್ಕರ್ ಸಹ ಲಿಂಗಾಯತರಲ್ಲ. ವಿಶೇಷವೆಂದರೆ ಎಲ್ಲರೂ ಬಹುತೇಕ ಎಡವಿಚಾರದವರು ಮತ್ತು ಹಿಂದೂ ವಿರೋಧಿ ಮನೋಭಾವದವರು.
ಮಹತ್ವದ ಸಂಗತಿಯೆಂದರೆ ನಮ್ಮ ಸಂವಿಧಾನ ಹೊಸ ಧರ್ಮ ರಚನೆಯ ವಿಚಾರದಲ್ಲಿ ಏನನ್ನೂ ಹೇಳಿಲ್ಲ. ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಸಂತೋಷ ಹೆಗ್ಡೆಯವರ ಅಭಿಪ್ರಾಯದಂತೆ 'ಸಂವಿಧಾನದಲ್ಲಿ ಇರುವ ಧರ್ಮವನ್ನು ವಿಭಜಿಸಿ ಹೊಸ ಧರ್ಮ ರಚಿಸಲು ಅವಕಾಶವೇ ಇಲ್ಲ. ಧರ್ಮ ಅಥವ ಧರ್ಮದ ರಚನೆ ಕುರಿತು ಸಂವಿಧಾನದಲ್ಲಿ ಯಾವುದೇ ವಿವರಣೆಗಳನ್ನು ಕೊಟ್ಟಿಲ್ಲ'. ಹಿಂದಿನ ಅಡ್ವೋಕೇಟ್ ಜನರಲ್ ಮತ್ತು ಹಿರಿಯ ಕಾನೂನು ತಜ್ಞರಾದ ಬಿ.ವಿ. ಆಚಾರ್ಯರವರ ಪ್ರಕಾರ, 'ಇದೊಂದು ಅನಗತ್ಯವಾದ ಚರ್ಚೆಯ ವಿಚಾರ. ಒಂದು ಸಂಸ್ಥೆಯನ್ನೋ, ಸಂಘವನ್ನೋ ರಚಿಸಿದಂತೆ ರಾತ್ರೋರಾತ್ರಿ ಒಂದು ಹೊಸ ಧರ್ಮ ರಚಿಸಲು ಬರುವುದಿಲ್ಲ. ಐತಿಹಾಸಿಕವಾದ ಭಿನ್ನತೆಯೋ, ವಿವಾದವೋ ಇದ್ದರೆ ಅದನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬಹುದು. ಹೊಸ ಧರ್ಮ ಸ್ಥಾಪನೆಗೆ ರಾಜ್ಯ ಸರ್ಕಾರ ಶಿಫಾರಸು ಮಾಡಲು ಕಾನೂನಿನ ಸಮರ್ಥನೆಯಿಲ್ಲ. ಇದೊಂದು ರಾಜಕೀಯ ಗಿಮಿಕ್ ಅಷ್ಟೆ'. ಹಿಂದಿನ ಅಡ್ವ್ವೊಕೇಟ್ ಜನರಲ್ ಪ್ರೊ. ರವಿವರ್ಮಕುಮಾರರ ಪ್ರಕಾರ, 'ಹೊಸ ಧರ್ಮ ರಚನೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ 1992ರ ಅಲ್ಪ ಸಂಖ್ಯಾತ ಆಯೋಗದ ರಚನೆಗೆ ಸಂಬಂಧಿಸಿದ ಕಾಯದೆಯ ಸೆ. 2ರ ಪ್ರಕಾರ ಒಂದು ಸಮುದಾಯವನ್ನು ಅಲ್ಪ ಸಂಖ್ಯಾತ ಸಮುದಾಯವೆಂದು ಘೋಷಿಸಲು ಅವಕಾಶವಿದೆ'. ಇಂತಹ ವಿವಾದ ಹಿಂದೆ ಬಂದಿರದಿದ್ದ ಕಾರಣ ಸಂವಿಧಾನದಲ್ಲಿ ಪ್ರಸ್ತಾಪ ಇಲ್ಲ. ಇದು ಪ್ರಸ್ತಾಪಕ್ಕೆ ಬರಬಾರದೆಂದೇನೂ ಇಲ್ಲ. ಆದರೆ ಇಂತಹ ಧರ್ಮಸೂಕ್ಷ್ಮದ ವಿಚಾರಗಳನ್ನು ಒರಟೊರಟಾಗಿ ನಿಭಾಯಿಸದೆ ಸೂಕ್ತವಾದ ರೀತಿಯಲ್ಲಿ ಸಂಬಂಧಿಸಿದ ಧಾರ್ಮಿಕ ಮುಖಂಡರ ಮತ್ತು ತಜ್ಞರ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಮುಂದುವರೆಯುವುದು ಸೂಕ್ತವಾದ ವಿಧಾನ. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದಾಕ್ಷಣ ಇತ್ಯರ್ಥವಾಗಿಬಿಡುವುದಿಲ್ಲ. ಈಗ ಉದ್ಭವವಾಗಿರುವ ಪರ-ವಿರೋಧಗಳ ನಡುವೆ ಸಮಸ್ಯೆ ಬಗೆಹರಿಯಲು ಅನೇಕ ವರ್ಷಗಳೇ ಹಿಡಿಯುತ್ತವೆ ಎಂಬುದನ್ನು ಹೇಳಲು ತಜ್ಞರೇ ಆಗಬೇಕಿಲ್ಲ. ಆದರೆ ಕಾಂಗ್ರೆಸ್ ರಾಜ್ಯ ಸರ್ಕಾರಕ್ಕೆ ಬೇಕಾಗಿರುವುದೇನೆಂದರೆ ಈ ಎಳೆಯನ್ನು ಹಿಡಿದುಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದಷ್ಟೆ. ಹಿಂದೂಧರ್ಮದಿಂದ ಲಿಂಗಾಯತರನ್ನು ಪ್ರತ್ಯೇಕಿಸಿದರೆ ಅವರ ರಾಜಕೀಯ ಬೆಂಬಲ ತಮಗೆ ದೊರಕುವುದಲ್ಲದೆ, ಹಿಂದೂಗಳು ಮತ್ತಷ್ಟು ದುರ್ಬಲಗೊಳ್ಳುವುದರಿಂದ ಅವರನ್ನು ಒಡೆದು ಆಳುವುದು ಸುಲಭವೆಂಬುದು ಅವರ ಲೆಕ್ಕಾಚಾರವಿರುವಂತೆ ತೋರುತ್ತದೆ.
ಇನ್ನೊಂದು ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯನ್ನು 2013ರಲ್ಲಿ ಆಗಿನ ಕಾಂಗ್ರೆಸ್ ನಾಯಕತ್ವದ ಕೇಂದ್ರ ಸರ್ಕಾರವೇ ತಿರಸ್ಕರಿಸಿತ್ತು. ಅದಕ್ಕೆ ಅವರು ನೀಡಿದ್ದ ಕಾರಣವೆಂದರೆ, ಹಾಗೆ ಮಾಡುವುದರಿಂದ ವೀರಶೈವ-ಲಿಂಗಾಯತ ಧರ್ಮ ಅನುಸರಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳವರಿಗೆ ತೊಂದರೆಯಾಗುತ್ತದೆ ಎಂಬುದಾಗಿತ್ತು. 14.11.2013ರಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್‌ರವರು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವೀರಶೈವ-ಲಿಂಗಾಯತರು ಹಿಂದೂಗಳ ಒಂದು ಪಂಗಡವೆಂದು ತಿಳಿಸಿದ್ದರು.
ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಮೊದಲು ಕೇಳಿಬಂದಿದ್ದು 1940ರಲ್ಲಿ. ಇದರ ಹಿಂದಿದ್ದವರು ಚನ್ನಪ್ಪ ಉತ್ತಂಗಿ ಎಂಬ ಕ್ರಿಶ್ಚಿಯನ್ ಮತಾಂತರಿತ ಬುದ್ಧಿಜೀವಿ ಮತ್ತು ಬಾಸೆಲ್ ಮಿಷನ್. ಚನ್ನಪ್ಪ ಉತ್ತಂಗಿ ಬರೆದಿದ್ದ ಪುಸ್ತಕ 'ಬೆತ್ಕೆಹೆಮ್ಸ್ ಅಪೀಲ್ ಟು ಬನಾರಸ್'. ಬನಾರಸ್ ಹಿಂದೂಗಳು ಜೀಸಸ್ ಅನ್ನು ಏಕೆ ಒಪ್ಪಿಕೊಳ್ಳಬೇಕು ಮತ್ತು ಅದರ ಅನಿವಾರ್ಯತೆ ಬಗ್ಗೆ ಬರೆದಿದ್ದ ಅವನ ಮತ್ತು ಬಾಸೆಲ್ ಮಿಷನ್ನಿನ ನೇತೃತ್ವದಲ್ಲಿ ಆಗ ಹೋರಾಟ ನಡೆದಿತ್ತು. ಇವರ ಮೇಲ್ಪಂಕ್ತಿ ಅನುಸರಿಸಿಕೊಂಡು ಬಂದವರು ಹಿರೇಮಲ್ಲೂರು ಈಶ್ವರಣ್ಣ ಮತ್ತು ಹತ್ಯೆಯಾದ ಪ್ರೊ. ಎಂ.ಎಂ. ಕಲಬುರ್ಗಿ. ಇವರುಗಳು ಬಹಳ ಶ್ರಮಪಟ್ಟು ಪ್ರತ್ಯೇಕ ಧರ್ಮದ ಗೀಳನ್ನು ಇಂದಿನವರಿಗೂ ಹತ್ತಿಸಿದರು. ಪ್ರತ್ಯೇಕತೆಗಾಗಿ ಪ್ರಬಂಧಗಳ ಮಂಡನೆ ಮಾಡಿದ ಇಂತಹ ಇತರ ಹಲವು ಮಹನೀಯರುಗಳಿಗೂ ಚರ್ಚುಗಳಿಗೂ ಇರುವ ಸಂಬಂಧದ ಬಗ್ಗೆ ತನಿಖೆ ನಡೆದರೆ ಜನರಿಗೆ ಈ ಕೂಗಿನ ಹಿಂದಿರುವ ಕರಾಳ ಹಸ್ತದ ದರ್ಶನವಾಗುತ್ತದೆ. ಲಿಂಗಾಯತರನ್ನು ವೀರಶೈವರಿಂದ ಮತ್ತು ಹಿಂದೂಧರ್ಮದಿಂದ ಬೇರ್ಪಡಿಸುವ ಹುನ್ನಾರದ ಲಾಭವನ್ನು ಚುನಾವಣೆಯ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. "ನಾನೇನು ಸಮಾಜ ಒಡೆಯುತ್ತಿಲ್ಲ, ಅವರೇ ಕೇಳುತ್ತಿದ್ದಾರೆ, ಒಪ್ಪಿದ್ದೇನೆ ಅಷ್ಟೆ" ಎಂಬ ಮುಖ್ಯಮಂತ್ರಿಯವರ ಮಾತಿನಲ್ಲಿ ಸತ್ಯವೂ ಇದೆ, ಸುಳ್ಳೂ ಇದೆ. ಅಲ್ಪ ಸಂಖ್ಯಾತರೆಂಬ ಘೋಷಣೆಯ ಲಾಭ ಆ ಸಮುದಾಯದ ಸಾಮಾನ್ಯರಿಗೆ ತಲುಪುವ ಬಗ್ಗೆಯೂ ಅನುಮಾನವಿದೆ. ಲಿಂಗಾಯತ ಅಲ್ಪಸಂಖ್ಯಾತ ಸಮುದಾಯಕ್ಕೆ ಮುಸ್ಲಿಮ್ ಮತ್ತು ಕ್ರಿಶ್ಚಿಯನರಿಗೆ ಸಿಗುತ್ತಿರುವ ಸೌಲಭ್ಯಗಳು ಸಿಗಲಾರದೆಂಬ ಸುಳಿವನ್ನೂ ನೀಡಿದ್ದಾರೆ. ಲಿಂಗಾಯತ ಸ್ವಾಮೀಜಿಗಳ ಮತ್ತು ನಾಯಕರುಗಳ ಒಡೆತನದ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗಬಹುದು. ಅಂತಹ ಕೆಲವರ ಹಿತ ಮತ್ತು ಲಾಭದ ಸಲುವಾಗಿ ಇಡೀ ಸಮುದಾಯದ ಹಿತವನ್ನು ಕಡೆಗಣಿಸುವುದು ಸರಿಯಾಗಲಾರದು. ಲಿಂಗಾಯತರು ಅಲ್ಪಸಂಖ್ಯಾತರ ಹೆಸರಿನಲ್ಲಿ ಪ್ರತ್ಯೇಕರಾದರೆ ಅದರಿಂದ ಮುಂದಿನ ದಿನಗಳಲ್ಲಿ ಹೊಂಚು ಹಾಕುತ್ತಿರುವ ಕ್ರಿಶ್ಚಿಯನ್ ಮಿಷನರಿಗಳು ಮತ್ತು ಮುಸ್ಲಿಮ್ ಧುರೀಣರುಗಳಿಗೆ ಲಾಭವಾಗಲಿದೆ ಎಂಬ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ.
ಲಿಂಗಾಯತರು ಮತ್ತು ವೀರಶೈವರು ಇಬ್ಬರೂ ಒಂದೇ ಸಮುದಾಯ ಎಂಬ ಕೂಗೂ ಬಲವಾಗಿದೆ. ಲಿಂಗಾಯತರು ಮತ್ತು ವೀರಶೈವರ ನಡುವೆ ವೈವಾಹಿಕ ಸಂಬಂಧಗಳೂ ಆಗಿವೆ. ಲಿಂಗಾಯತ-ವೀರಶೈವೇತರರ ದೃಷ್ಟಿಯಲ್ಲಿ ಅವರನ್ನು ಬೇರೆ ಬೇರೆ ಎಂದು ಗುರುತಿಸುವವರ ಸಂಖ್ಯೆ ಬಹಳ ಕಡಿಮೆ. ಈಗ ವಿವಾದ ಪ್ರಾರಂಭವಾಗಿರುವುದರಿಂದ ಲಿಂಗಾಯತರು ಮತ್ತು ವೀರಶೈವರು ಹೇಗೆ ಬೇರೆ ಬೇರೆ ಎಂಬ ಬಗ್ಗೆ ವಾದಗಳನ್ನು ಮಂಡಿಸಲಾಗುತ್ತಿದೆ. ವೀರಶೈವ-ಲಿಂಗಾಯತರು ಬಹಳ ಹಿಂದಿನಿಂದಲೂ ಹಿಂದೂ ಧರ್ಮಕ್ಕೆ ಸೇರಿದವರೆಂದೇ ಗುರುತಿಸಲಾಗುತ್ತಿದೆ. ಅನೇಕ ಹಿಂದೂ ಸಂಘಟನೆಗಳಲ್ಲಿ ಈ ಸಮುದಾಯದ ಸಾವಿರಾರು ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ನಾಯಕರುಗಳಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಾನು ಹಿಂದೂ-ವೀರಶೈವ-ಲಿಂಗಾಯತ ಎಂದು ಘೋಷಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಗಣನೀಯವಾಗಿದೆ. ಸೀಮಿತ ಅಂಕಣ ಲೇಖನವಾದುದರಿಂದ ಮತ್ತು ಈ ವಿಷಯ ಇಲ್ಲಿಗೇ ನಿಲ್ಲುವಂತಹದಲ್ಲವಾದುದರಿಂದ ಪೂರಕವಾದ ಅನೇಕ ವಾದ-ವಿವಾದಗಳು ಮುಂದೆಯೂ ನಿರೀಕ್ಷಿತವಾದುದರಿಂದ ಇದನ್ನು ಸಮಾಪ್ತಗೊಳಿಸುವ ಮುನ್ನ ಒಂದು ಮಾತು: "ಬಸವಣ್ಣನವರು ಹೊಸ ಧರ್ಮವನ್ನು ಆರಂಭಿಸಿದವರಲ್ಲ. ಅವರೊಬ್ಬ ಸಮಾಜ ಸುಧಾರಕರು. ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತರವಲ್ಲ. ಎಲ್ಲರನ್ನೂ ಒಗ್ಗೂಡಿಸಲು ಶ್ರಮಿಸಿದ ಮಹನೀಯನ ಹೆಸರಿನಲ್ಲೇ ಸಮುದಾಯವನ್ನು ಸಂಕುಚಿತಗೊಳಿಸುವ ಪ್ರಯತ್ನ ಸಮಾಜದ ದೃಷ್ಟಿಯಿಂದ ಒಳಿತಾದುದಲ್ಲ. ಸಮಾಜವನ್ನು ಕಟ್ಟುವುದು ಕಷ್ಟ, ಒಡೆಯುವುದು ಸುಲಭ."
ಓಂ ನಮ: ಶಂಭವಾಯ ಚ ಮಯೋಭವಾಯ ಚ ನಮ: ಶಂಕರಾಯ ಚ ಮಯಸ್ಕರಾಯ ಚ |
ನಮ: ಶಿವಾಯ ಚ ಶಿವತರಾಯ ಚ ||
ನಮ: ಶಿವಾಯ ಚ ಶಿವತರಾಯ ಚ ||
[ಯಜು.೧೬.೪೧]
-ಕ.ವೆಂ.ನಾಗರಾಜ್.ಭಾನುವಾರ, ಮಾರ್ಚ್ 25, 2018
ಇಂದು ಪಂ. ಸುಧಾಕರ ಚತುರ್ವೇದಿಯವರ 121ನೆಯ ವರ್ಷದ ಜನ್ಮದಿನ
ಇಂದು ಪಂ. ಸುಧಾಕರ ಚತುರ್ವೇದಿಯವರ 121ನೆಯ ವರ್ಷದ ಜನ್ಮದಿನ. ರಾಮನವಮಿಯಂದೇ ಜನಿಸಿದ ಈ ಪ್ರಖರ ಸತ್ಯವಾದಿಯ ಮಾರ್ಗದರ್ಶನ ನಮಗೆ ಸದಾ ಮುಂದುವರೆಯತ್ತಿರಲಿ. ಅವರ ಕುರಿತ ಕೆಲವು ಮಾಹಿತಿಗಳ ಸ್ಮರಣೆ ಮಾಡೋಣ.
* 13ನೆಯ ವಯಸ್ಸಿನಲ್ಲಿಯೇ ಹರಿದ್ವಾರದ ಸಮೀಪದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು.
* ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾದವರು, ಸ್ವಾಮಿ ಶ್ರದ್ಧಾನಂದರ ಶಿಷ್ಯರು.
* ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಕೊಂಡು 15 ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸ ಕಂಡಿದ್ದವರು. ಮಹಾತ್ಮ ಗಾಂಧಿಯವರ ಒಡನಾಡಿ.
* ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದವರು. ಹತ್ಯೆಗೊಳಗಾದವರ ಸಾಮೂಹಿಕ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಗಾಂಧೀಜಿಯವರ ಸೂಚನೆಯಂತೆ ಕೈಜೋಡಿಸಿದವರು.
* ನಾಲ್ಕೂ ವೇದಗಳಲ್ಲಿ ಪಾರಂಗತರಾಗಿ ಚತುರ್ವೇದಿ ಎಂಬ ಹೆಸರು ಪಡೆದವರು.
* ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದ್ದವರು.
* ಸಾವಿರಾರು ಮತಾಂತರಿತರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಿದ್ದವರು.
* ನಾಲ್ಕೂ ವೇದಗಳಿಗೆ ಮಹರ್ಷಿ ದಯಾನಂದ ಸರಸ್ವತಿಯವರು ಬರೆದ ಭಾಷ್ಯವನ್ನು ಕನ್ನಡದಲ್ಲಿ 20 ಸಂಪುಟದಲ್ಲಿ ಹೊರತಂದ ಕಾರ್ಯದ ಪ್ರಧಾನ ಸಂಪಾದಕರು. ಇದು ಜ್ಞಾನ ಸಂಪತ್ತಿಗೆ ಅಮೂಲ್ಯ ಕಾಣಿಕೆಯಾಗಿದೆ.
* ಅನೇಕ ಪುಸ್ತಕಗಳ ಮೂಲಕ ವೇದದ ಮಹತ್ವವನ್ನು ಸಾರುವ ಕೆಲಸವನ್ನು ಅವಿರತವಾಗಿ ಮಾಡಿದವರು. ವೈಚಾರಿಕತೆಗೆ ಪ್ರಾಧಾನ್ಯ ನೀಡಲು ಉತ್ತೇಜಿಸಿದವರು.
* ಇಂದಿಗೂ ಸಂದೇಹಗಳಿಗೆ ಪರಿಹಾರ ಅರಸಿ ಬರುವವರಿಗೆ ಮಾರ್ಗದರ್ಶನ ನೀಡುತ್ತಿರುವವರು. ಸಾಪ್ತಾಹಿಕ ಸತ್ಸಂಗದಲ್ಲಿ ಅಮೂಲ್ಯ ಉಪದೇಶ ನೀಡುತ್ತಿರುವವರು.
ವಯಸ್ಸಿನ ಕುರಿತು ಅಧಿಕೃತ ದಾಖಲೆ ಇಲ್ಲವೆಂಬ ಕಾರಣಕ್ಕೆ ಈ ದೀರ್ಘಾಯಸ್ಸಿನ ಶತಾಯುಷಿ ದಾಖಲೆಗಳ ಕಡತಕ್ಕೆ ಸೇರಿಲ್ಲದಿರುವುದು ವಿಷಾದದ ಸಂಗತಿ. ಇವರಿಗೆ ಈ ಕುರಿತು ಆಸಕ್ತಿಯೂ ಇಲ್ಲ. ನನ್ನ ಪಾಲಿಗೆ ಇವರು ನನ್ನ ಮಾನಸಿಕ ಗುರುಗಳು. ಗುರುಗಳಿಗೆ ನಮಿಸುತ್ತಾ ಅವರು ನಮ್ಮೆಲ್ಲರಿಗೂ ಇದೇ ರೀತಿ ಮಾರ್ಗದರ್ಶನ ಮಾಡುತ್ತಾ ಚಿರಕಾಲ ಬಾಳಲಿ ಎಂದು ಪ್ರಾರ್ಥಿಸುವೆ.
-ಕ.ವೆಂ.ನಾಗರಾಜ್.
ಮಂಗಳವಾರ, ಮಾರ್ಚ್ 13, 2018
ಆತ್ಮೋನ್ನತಿ
'ನಾನು ಅಂದರೆ ನನ್ನ ಶರೀರವಲ್ಲ, ಶರೀರದೊಳಗೆ ಇರುವ ಪ್ರಾಣ ಅಥವ ಜೀವಾತ್ಮ' ಎಂಬ ವಿಚಾರದಲ್ಲಿ ಹಿಂದೆ ಚರ್ಚಿಸಿದ್ದೆವು. ಸನಾತನ ಧರ್ಮದ ಪ್ರಕಾರ ಜೀವಾತ್ಮಕ್ಕೆ ಸಾವಿಲ್ಲ, ಆದಿಯಿಲ್ಲ, ಅಂತ್ಯವೂ ಇಲ್ಲ. ಆದರೆ ಅಂತಹ ಅನಾದಿ, ಅನಂತವಾದ ಆತ್ಮ ಆದಿ ಮತ್ತು ಅಂತ್ಯವಿರುವ ಶರೀರದ ಆಶ್ರಯ ಏಕೆ ಪಡೆಯಬೇಕು? ಕರ್ಮ ಸಿದ್ಧಾಂತ, ಪುನರ್ಜನ್ಮ ಸಿದ್ಧಾಂತ, ಹುಟ್ಟು-ಸಾವುಗಳ ಚಕ್ರ, ವಿವಿಧ ಜೀವರಾಶಿಗಳು, ಇತ್ಯಾದಿಗಳ ಕುರಿತು ಸೀಮಿತ ಜ್ಞಾನಶಕ್ತಿಯ ಮನುಷ್ಯ ಹಲವಾರು ರೀತಿಯ ಚಿಂತನೆ, ಸಿದ್ಧಾಂತಗಳನ್ನು ಮುಂದಿಡುತ್ತಲೇ ಇದ್ದಾನೆ, ಚರ್ಚಿಸುತ್ತಲೇ ಇರುತ್ತಾನೆ. ಹಲವಾರು ಧರ್ಮಗ್ರಂಥಗಳು ಹಲವು ರೀತಿಯ ವಿಚಾರಗಳನ್ನು ಹೇಳುತ್ತವೆ. ಯಾವ ವಿಚಾರ ಸರಿ, ಯಾವುದು ತಪ್ಪು ಎಂಬುದನ್ನು ವಿಮರ್ಶೆ ಮಾಡುವವರು, ನಿರ್ಧರಿಸುವವರು ಯಾರು? ಅತ್ಯಂತ ಪ್ರಾಚೀನವಾದ ವೇದಮಂತ್ರಗಳು ಈ ಕುರಿತು ಏನು ಹೇಳಿವೆ? ಒಂದು ಮಂತ್ರ ಹೇಳುತ್ತದೆ:
ಅಯಂ ಹೋತಾ ಪ್ರಥಮಃ ಪಶ್ಯತೇಮಮಿದಂ ಜ್ಯೋತಿರಮೃತಂ ಮರ್ತ್ಯೇಷು|
ಅಯಂ ಸ ಜಜ್ಞೇ ಧ್ರುವ ಆ ನಿಷತ್ತೋ ಮರ್ತ್ಯಸ್ತನ್ವಾ ವರ್ಧಮಾನಃ|| (ಋಕ್. ೬.೯.೪)
ಅರ್ಥ: ಈ ಜೀವಾತ್ಮನು ಮೊದಲನೆಯ ಆದಾನ-ಪ್ರದಾನಕರ್ತನು. ಇವನನ್ನು ನೋಡಿರಿ. ಮೃತ್ಯುವಿಗೀಡಾಗುವ ಭೌತಿಕ ಶರೀರಗಳಲ್ಲಿ ಇದು ಅಮರ ಜ್ಯೋತಿಯಾಗಿದೆ. ಇವನು ಆ ಶಾಶ್ವತನಾದ ಆತ್ಮನು. ಅಮರನಾದ ಆ ಆತ್ಮನು ಜಗತ್ತಿನಲ್ಲಿ ಕುಳಿತು ದೇಹದಿಂದ ವೃದ್ಧಿ ಹೊಂದುತ್ತಾ ಪ್ರಕಟನಾಗುತ್ತಾನೆ.
ಈ ಮಂತ್ರದ ಪ್ರಕಾರ ನಾಶವಾಗುವ ಭೌತಿಕ ಶರೀರದ ಚಟುವಟಿಕೆಗಳಿಗೆ ಕಾರಣವಾದ ಜೀವಾತ್ಮ ಸ್ವತಃ ನಾಶ ಹೊಂದದೇ ಇರುವಂತಹುದಾಗಿದ್ದು, ಶರೀರದ ಬೆಳವಣಿಗೆಯೊಂದಿಗೆ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುತ್ತದೆ. ಇಲ್ಲಿ ಎರಡು ಅಂಶಗಳು ಧ್ವನಿಸುತ್ತವೆ. ಮೊದಲನೆಯದು, ಜೀವಾತ್ಮ ತನ್ನ ಇರುವನ್ನು ತನ್ನಷ್ಟಕ್ಕೆ ತಾನೇ ತೋರಿಸಿಕೊಳ್ಳಲು ಆಗದು. ಇನ್ನೊಂದು, ಅಸ್ತಿತ್ವವನ್ನು ತೋರಿಸಿಕೊಳ್ಳಲು ಶರೀರವೆಂಬ ಮಾಧ್ಯಮ ಅದಕ್ಕೆ ಅಗತ್ಯವಿದೆ. ಶರೀರದಲ್ಲಿ ಜೀವಾತ್ಮವಿಲ್ಲದಿದ್ದರೆ ಶರೀರಕ್ಕೆ ಅರ್ಥವೇ ಇಲ್ಲ, ಅದೊಂದು ಕೇವಲ ಜಡವಸ್ತುವಾಗುತ್ತದೆ. ಅದೇ ರೀತಿ ಶರೀರವಿರದಿದ್ದರೆ ಜೀವಾತ್ಮ ತನ್ನ ಇರುವನ್ನು ತೋರಿಸಿಕೊಳ್ಳಲಾಗುವುದಿಲ್ಲ, ಅರ್ಥಾತ್ ಚಟುವಟಿಕೆಗಳನ್ನು ಮಾಡಲು ಸಮರ್ಥವಿರುವುದಿಲ್ಲ. ಶರೀರವೆಂಬ ಮಾಧ್ಯಮದ ಮೂಲಕ ಮಾಡುವ ಚಟುವಟಿಕೆಗಳ ಮೂಲಕ ಮಾತ್ರ ಮೋಕ್ಷದೆಡೆಗೆ, ಆತ್ಮೋನ್ನತಿಯ ಕಡೆಗೆ ಹೋಗಬಲ್ಲದು.
ಕಮರಿ ಹೋಗುವ ತನುವ ಕಸುವು ತಾನಾಗಿಹನು
ಜೀವಜ್ಯೋತಿಯೆ ಅವನು ಅಮರ ಶಕ್ತಿಯೆ ಅವನು |
ದೇಹದೊಂದಿಗೆ ಬೆಳೆದು ತನ್ನಿರುವ ತೋರುವನು
ಅವನಿಲ್ಲದಿರುವಲ್ಲಿ ಬೆಳಕೆಲ್ಲಿ ಮೂಢ ||
ಶರೀರದ ಅಗತ್ಯವಿರುವ ಜೀವಾತ್ಮ ಶರೀರದಲ್ಲಿದ್ದುಕೊಂಡು ನಡೆಸುವ ಚಟುವಟಿಕೆಯಾದರೂ ಎಂತಹದು? ಈ ಮಂತ್ರ ಹೇಳುತ್ತದೆ:
ದಂಡಾ ಇವೇದ್ ಗೋ ಅಜನಾಸ ಆಸನ್ ಪರಿಚ್ಛಿನ್ನಾ ಭರತಾ ಅರ್ಭಕಾಸಃ|
ಅಭವಚ್ಛ ಪುರ ಏತಾ ವಸಿಷ್ಠ ಆದಿತ್ ತೃತ್ಸೂನಾಂ ವಿಶೋ ಅಪ್ರಥಂತ|| (ಋಕ್. ೭.೩೩.೬)
ಅರ್ಥ: ಪರಿಚ್ಛಿನ್ನ, ಶರೀರಧಾರಿಗಳೂ, ಅಣುಪ್ರಮಾಣರೂ ಆದ ಜೀವಾತ್ಮರು, ಗೋವುಗಳನ್ನು ಮುನ್ನಡೆಸುವ ದಂಡಗಳಂತೆ ಇಂದ್ರಿಯಗಳು ಮತ್ತು ವಾಣಿಯನ್ನು ಸಂಚಾಲನಗೊಳಿಸುವವರಾಗಿದ್ದಾರೆ. ಸರ್ವಶ್ರೇಷ್ಠ ಆಶ್ರಯದಾತೃವಾದ ಭಗವಂತ ಇವರ ನಾಯಕನಾಗಿದ್ದಾನೆ. ಅನಂತರವೇ ತೃಪ್ತಿಯನ್ನರಸುವ, ತೃಷಿತರಾದ ಜೀವಾತ್ಮರ ಮಕ್ಕಳು ವಿಕಸಿತರಾಗುತ್ತಾರೆ.
ಶರೀರವನ್ನು ಆಶ್ರಯಿಸಿರುವ ಜೀವಾತ್ಮ ಶರೀರದ ಇಂದ್ರಿಯಗಳನ್ನು ಮತ್ತು ಆಡುವ ಮಾತುಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಎಲ್ಲಾ ರೀತಿಯ ಚಟುವಟಿಕೆಗಳಿಗೆ ಆಶ್ರಯದಾತನಾದ ಪರಮಾತ್ಮ ಜೀವಾತ್ಮರಿಗೂ ನಾಯಕ. ಜೀವಿಗಳು ಜೀವಾತ್ಮರ ಕಾರಣದಿಂದ ಮುಂದೆ ಬರುತ್ತಾರೆ. ಇಲ್ಲಿ ಕೊಟ್ಟಿರುವ ಒಂದು ಉಪಮೆ, ಗೋವುಗಳನ್ನು ನಿಯಂತ್ರಿಸುವ ದಂಡದ ರೀತಿಯಲ್ಲಿ ಜೀವಾತ್ಮ ಇಂದ್ರಿಯಗಳು ಮತ್ತು ವಾಣಿಯನ್ನು (ಮಾತುಗಳು) ನಿಯಂತ್ರಿಸುತ್ತದೆ ಎಂಬುದನ್ನು ಗಮನಿಸಬೇಕು. ಕೆಲವು ತುಂಟ ದನಕರುಗಳು ದಂಡದ ಭಯವನ್ನೂ ಮೀರಿ ಅತ್ತಿತ್ತ ಹಾರುವಂತೆ, ಒಳಗಿನ ಕರೆಯನ್ನು ಮೀರಿ ಅಪಮಾರ್ಗದಲ್ಲಿ ಹೋಗುವವರೂ ಇರುತ್ತಾರೆ. ಮನಸ್ಸು ಆತ್ಮವನ್ನು ಪ್ರತಿಫಲಿಸುವ ಕನ್ನಡಿಯಂತೆ ಹೊರತು ಅದೇ ಆತ್ಮವಲ್ಲ ಎಂದು ತಿಳಿದವರು ಹೇಳುತ್ತಾರೆ. ಅದೇನೇ ಇರಲಿ, ಒಂದಂತೂ ನಮ್ಮ ಅನುಭವಕ್ಕೆ ಬಂದಿರಲು ಸಾಧ್ಯವಿದೆ. ಅದೇನೆಂದರೆ, ಯಾವುದಾದರೂ ಕೆಲಸ ಮಾಡುವಾಗ, ಅದು ಸರಿಯಲ್ಲ ಎಂದು ಒಳಮನಸ್ಸು ಹೇಳುತ್ತಿದ್ದರೆ, ಅಂತಹ ಕೆಲಸ ಮಾಡುವಾಗ ಯೋಚಿಸುವುದು ಒಳಿತು. ಸರಿಯಲ್ಲ ಎಂದು ಗೊತ್ತಿದ್ದರೂ, ಮಾಡು, ಪರವಾಗಿಲ್ಲ ಎಂದು ಪ್ರಚೋದಿಸುವುದೂ ಮನಸ್ಸೇ ಎಂಬುದು ವಿಚಿತ್ರ. ಮಾಡಿದ ಮೇಲೆ, ಮಾಡಬಾರದಿತ್ತು ಎಂದು ಚುಚ್ಚುವುದೂ ಅದೇ ಮನಸ್ಸೇ! ಎಂತಹ ಚಂಚಲತೆ! ಆತ್ಮೋನ್ನತಿ ಸಾಧಿಸಬೇಕೆಂದರೆ ಚಂಚಲ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಮಾರ್ಗ. ಹಾಗಾದರೆ, ಮನಸ್ಸನ್ನು ನಿಯಂತ್ರಿಸುವ ಆ ಶಕ್ತಿ ಯಾವುದು? ಅದೇ ಜೀವಾತ್ಮ. ಯಾರಾದರೂ ಏನಾದರೂ ಹೇಳಿದಾಗ, ಮಾಡಿದಾಗ ಅದು ಸರಿಯೇ ಎಂದು ಪ್ರಶ್ನಿಸುವಾಗ ಸಾಮಾನ್ಯವಾಗಿ ಬಳಸುವ ಮಾತೆಂದರೆ, ಇದಕ್ಕೆ ನಿನ್ನ ಅಂತರಾತ್ಮ ಒಪ್ಪುತ್ತಾ? ಅಥವ, ನಿನ್ನನ್ನು ನೀನೇ ಕೇಳಿಕೋ, ನೀನು ಮಾಡಿದ್ದು ಸರಿಯಾ? ಅಂತರಾತ್ಮದ ಕರೆಗೆ ಓಗೊಟ್ಟರೆ, ಆತ್ಮ ಉನ್ನತಿಯೆಡೆಗೆ ಸಾಗುತ್ತದೆ, ಇಲ್ಲದಿದ್ದರೆ ಕೆಳಗೆ ಜಾರುತ್ತದೆ, ಕ್ರಮಿಸಬೇಕಾದ ಹಾದಿ ಮತ್ತಷ್ಟು ದೂರವಾಗುತ್ತದೆ.
ಮನೋವಾಗಿಂದ್ರಿಯಗಳನಂಕಿಸುವುದೊಲವಿನಲಿ
ದನಕರುಗಳನಂಕಿಸುವ ದಂಡಗಳ ತೆರದಿ |
ದೇಹದಲಿ ನೆಲೆಸಿಹುದು ಅಣುರೂಪಿ ಚೇತನ
ಇಂತಪ್ಪ ಚೇತನರ ಒಡೆಯನಾರೋ ಮೂಢ ||
ಶರೀರ ಮಾಧ್ಯಮದ ಮೂಲಕ ಆತ್ಮೋನ್ನತಿ ಅಥವ ಮೋಕ್ಷದೆಡೆಗೆ ಸಾಗುವ ಜೀವಾತ್ಮ ಶರೀರದ ಮೂಲಕ ನಡೆಸುವ ಕರ್ಮಗಳ ಅನುಸಾರವಾಗಿ ಮುಂದಕ್ಕೋ ಅಥವ ಹಿಂದಕ್ಕೋ ಸಾಗುತ್ತಿರುತ್ತದೆ. ಸರ್ವರ ಹಿತ ಬಯಸುವ ಕರ್ಮಗಳು ಮುಂದಕ್ಕೆ ಕರೆದೊಯ್ಯುತ್ತವೆ. ಇತರರ ನೆಮ್ಮದಿ, ಶಾಂತಿ ಕದಡಿದರೆ ಕೆಳಕ್ಕೆ ಜಾರುತ್ತದೆ. ಜೀವಾತ್ಮ ಜೀರ್ಣವಾದ ಹಳೆಯ ಶರೀರ ತ್ಯಜಿಸುವ ಕ್ರಿಯೆ ಸಾವು ಮತ್ತು ಹೊಸ ಶರೀರ ಧರಿಸಿಬರುವ ಕ್ರಿಯೆ ಜನ್ಮ ಎನಿಸಿಕೊಳ್ಳುತ್ತದೆ. ಹುಟ್ಟು-ಸಾವು, ಪುನರ್ಜನ್ಮ, ಇತ್ಯಾದಿಗಳ ಬಗ್ಗೆ ಪ್ರಸ್ತಾಪಿಸಿದರೆ ಲೇಖನ ದೀರ್ಘವಾಗುವುದರಿಂದ, ಈ ವಿಷಯಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸೋಣ. ಜೀವಾತ್ಮ ಧರಿಸುವ ಹೊಸ ಶರೀರ ಹಿಂದಿನ ಶರೀರದಲ್ಲಿದ್ದಾಗ ನಡೆಸಿದ ಕರ್ಮಫಲಗಳ ಅನುಸಾರವಾಗಿ ಅದಕ್ಕೆ ತಕ್ಕಂತೆ ಇರುತ್ತದೆ ಎಂಬುದು ಸನಾತನ ಧರ್ಮದ ತಿರುಳು. ಜೀವಾತ್ಮದ ಪಯಣ ಹೇಗೆ ಸಾಗುತ್ತದೆ ಎಂದು ಈ ಮಂತ್ರ ವಿವರಿಸಿದೆ:
ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್|
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ|| (ಋಕ್. ೧.೧೬೪.೩೦.)
ಅರ್ಥ: ವೇಗಶಾಲಿಯೂ, ಧೃಢವೂ ಆದ ಪರಮಾತ್ಮ ತತ್ತ್ವ ಎಲ್ಲರಿಗೂ ಜೀವದಾನ ಮಾಡುತ್ತಿದೆ. ಅಂತಃಸ್ಥಿತವಾಗಿದ್ದು, ಜೀವಾತ್ಮನನ್ನು ಲೋಕ ಲೋಕಾಂತರಗಳ ನಡುವೆ ಪ್ರವೇಶಗೊಳಿಸುತ್ತದೆ. ಮೃತನಾದವನ ಜೀವಾತ್ಮವು ಸ್ವತಃ ಅಮರವಾಗಿದ್ದು ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ, ಸಂಚರಿಸುತ್ತದೆ.
ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬ ಪರಮಾತ್ಮನ ಪೂರ್ವನಿಶ್ಚಿತ ನ್ಯಾಯವಿಧಾನದ ಧೃಢತತ್ತ್ವಕ್ಕೆ ಅನುಗುಣವಾಗಿ ಜೀವಾತ್ಮನ ಹುಟ್ಟು-ಸಾವಿನ ಪಯಣ ಸಾಗುತ್ತಿರುತ್ತದೆ. ಹಿಂದಿನ ಕರ್ಮಫಲ ಸ್ವರೂಪವಾಗಿ ಅದಕ್ಕೆ ಅನುಗುಣವಾದ ಶರೀರದೊಂದಿಗೆ ಪಯಣ ಮುಂದುವರೆಯುತ್ತದೆ ಎಂದು ಸಾರುವ ಈ ಮಂತ್ರ ಕರ್ಮದ ಮಹತ್ವವನ್ನು ಸಾರುತ್ತಿದೆ. ವೇದಮಂತ್ರಗಳ ವಿಶೇಷವೆಂದರೆ ಅವು ಹೀಗೆಯೇ ಮಾಡಿ, ಹಾಗೆಯೇ ಮಾಡಿ ಎಂದು ಸೂಚಿಸುವುದಿಲ್ಲ. ಹೇಗಿರಬೇಕು, ಹೇಗೆ ನಡೆಯಬೇಕು ಎಂಬುದು ವಿವೇಚನಾಶಕ್ತಿ ಇರುವವರು ಸ್ವತಃ ನಿರ್ಧರಿಸಿಕೊಳ್ಳಬೇಕಾದುದು ಎಂಬ ಸಂದೇಶ ಸಾರುತ್ತಿವೆ.
ಸತ್ತವನ ಜೀವಕ್ಕೆ ಸಾವಿಲ್ಲ ನೋಡಾ
ಸಾಯಲಿಹ ಮತ್ತೊಂದು ದೇಹವನೆ ಸೇರುವುದು |
ಕರ್ಮವನೆ ಅನುಸರಿಸಿ ಅನ್ನ-ಜಲ ಕಾಣವುದು
ಜೀವದಾನಿಯ ಮರ್ಮವೆಂತಿಹುದೊ ಮೂಢ ||
-ಕ.ವೆಂ.ನಾಗರಾಜ್.
ಸೋಮವಾರ, ಮಾರ್ಚ್ 5, 2018
ನಿಗೂಢ ಜೀವ - (Mysterious Jeevatma)
ತಿಳಿದವರು ಹೇಳುತ್ತಲೇ ಇರುತ್ತಾರೆ, 'ಅಯ್ಯೋ ಮೂಢ, ನೀನು ಯಾರು ಎಂದು ನಿನಗೆ ಗೊತ್ತೆ? ನೀನು ಅಂದರೆ ನಿನ್ನ ಶರೀರ ಅಲ್ಲ'. ಅರ್ಥವಾಗದಿದ್ದರೂ ತಲೆಯಾಡಿಸಿ ನಾವುಗಳೂ ಕೇಳುತ್ತಲೇ ಇರುತ್ತೇವೆ. ಆದರೆ ನಾವು ಯಾರು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅದು ಸುಲಭವಾಗಿ ಅರ್ಥವಾಗುವ ವಿಷಯವೂ ಅಲ್ಲ. ಕೆಲವೊಮ್ಮೆ ಅರ್ಥವಾದರೂ ಅದಕ್ಕೆ ಮಹತ್ವ ಕೊಡುವುದೇ ಇಲ್ಲ. ಜೀವ ಎಷ್ಟು ನಿಗೂಢವೋ ಅಷ್ಟೇ ನಿಗೂಢ ನಾವೂ ಸಹ! ಜೀವ ಅಂದರೆ ಏನೆಂದು ಅರ್ಥ ಮಾಡಿಕೊಳ್ಳುವುದು, ವಿವರಿಸುವುದು ಕಷ್ಟ. ನಮ್ಮ ದೈನಂದಿನ ಚಟುವಟಿಕೆಗಳನ್ನು ಜೀವ ಎಂದರೆ ತಪ್ಪುಗ್ರಹಿಕೆಯಾಗುತ್ತದೆ. ಆದರೆ, ಆ ಜೀವವಿಲ್ಲದಿದ್ದರೆ ಯಾವುದೇ ಚಟುವಟಿಕೆ ಸಾಧ್ಯವಿಲ್ಲ. ನಮ್ಮ ಕಣ್ಣುಗಳು ನೋಡುತ್ತವೆ, ಆದರೆ ಏನು ನೋಡಬೇಕು ಎಂದು ನಿರ್ಧರಿಸುವುದು ಕಣ್ಣುಗಳಲ್ಲ. ಕೈಕಾಲುಗಳು ಓಡಾಡುತ್ತವೆ, ಕೆಲಸ ಮಾಡುತ್ತವೆ, ತಾವಾಗಿ ಮಾಡುತ್ತವೆಯೇ? ನಾವು ನಿದ್ದೆ ಮಾಡಿದ್ದಾಗಲೂ, ಪ್ರಜ್ಞೆ ಇಲ್ಲದಿದ್ದಾಗಲೂ ಉಸಿರಾಡುತ್ತಿರುತ್ತೇವೆ. ಹಾಗಾದರೆ ಉಸಿರಾಡಿಸುತ್ತಿರುವವರು ಯಾರು? ಅದೇ ಜೀವ ಅಥವ ಪ್ರಾಣ!
ನಮ್ಮ ಚಟುವಟಿಕೆಗಳನ್ನು ನಮ್ಮ ಮನಸ್ಸು ನಿಯಂತ್ರಿಸುತ್ತದೆ. 'ಹೀಗೆ ಮಾಡು, ಹಾಗೆ ಮಾಡು' ಎಂದೆಲ್ಲಾ ಹೇಳಿ ಮಾಡಿಸುವುದು ಮನಸ್ಸೇ ಆಗಿದೆ. ಹಾಗಾದರೆ, ನಾನು ಅಂದರೆ ನನ್ನ ಮನಸ್ಸೇ? ವ್ಯಾವಹಾರಿಕ ದೃಷ್ಟಿಯಿಂದ ನಾನು ಅಂದರೆ ನಮ್ಮ ಮನಸ್ಸೇ ಆಗಿರುತ್ತದೆ. ಈ ಪ್ರಪಂಚದಲ್ಲಿ ನಾವು ಏನು ಸಾಧಿಸುತ್ತೇವೆಯೋ ಅದೆಲ್ಲದಕ್ಕೂ ಮನಸ್ಸೇ ಕಾರಣವಾಗಿದೆ, ಏಕೆಂದರೆ ಪ್ರಪಂಚವೆಂದರೆ ನಮ್ಮ ಅನುಭವಕ್ಕೆ ಏನು ಬರುತ್ತದೆಯೋ ಅದೇ ಆಗಿದೆ. ನಮ್ಮ ಜೀವನದಲ್ಲಿ ಗಳಿಸುವ ಅನುಭವಗಳೆಲ್ಲವೂ ನಮ್ಮ ಕ್ರಿಯೆಗಳ ಕಾರಣಗಳಿಂದಲೇ ಬಂದಿದೆ ಮತ್ತು ಆ ಕ್ರಿಯೆಗಳ ಹಿಂದೆ ಅವನ್ನು ಮಾಡಿಸಿದ ಮನಸ್ಸು ಕೆಲಸ ಮಾಡಿದೆ. ಆದ್ದರಿಂದ ನಮ್ಮ ಅನುಭವಗಳು, ಎಲ್ಲಾ ಕಾರ್ಯಗಳು ನಿಯಂತ್ರಿಸಲ್ಪಟ್ಟಿರುವುದು ಮನಸ್ಸಿನಿಂದಲೇ ಆಗಿದೆ. ಆದರೆ ನಿಧಾನವಾಗಿ ತರ್ಕಿಸುತ್ತಾ ಹೋದರೆ ಮನಸ್ಸು ಎಂದರೆ ನಾನು ಅಲ್ಲ ಎಂದು ಅರ್ಥವಾಗುತ್ತಾ ಹೋಗುತ್ತದೆ. ಒಂದು ರೀತಿಯಲ್ಲಿ ಅದು ಕನ್ನಡಿಯಲ್ಲಿ ಪ್ರತಿಫಲಿಸುವ ಪ್ರತಿಬಿಂಬದಂತೆ ಆತ್ಮವನ್ನು ಪ್ರತಿಬಿಂಬಿಸುತ್ತಿದೆ ಎನ್ನಬಹುದು. ನಾನು ಅಂದರೆ ಮನಸ್ಸು ಎಂದು ಅಂದುಕೊಂಡರೆ ನಾವು ಮನಸ್ಸಿನ ಯಜಮಾನರಾಗಿರಬೇಕು. ಆದರೆ ಹಾಗೆ ಇದೆಯೇ? ಮನಸ್ಸು ವಿವಿಧ ದಿಕ್ಕುಗಳಲ್ಲಿ ಹೊಯ್ದಾಡುತ್ತಲೇ ಇರುತ್ತದೆ. ಮನಸೆಂಬ ಗಾಳಿ ಬೀಸಿದೆಡೆಗೆ ನಾವು ಹೋಗುತ್ತಿರುತ್ತೇವೆ. ಮನಸ್ಸು ನಮ್ಮ ಯಜಮಾನನಂತೆ ವರ್ತಿಸುತ್ತದೆ. ಆದ್ದರಿಂದ ಮನಸ್ಸು ಅನ್ನುವುದು ನಾನು ಹೇಳಿದಂತೆ ಕೇಳದಿದ್ದಾಗ, ಮನಸ್ಸು ಅನ್ನುವುದು ನಮ್ಮ ನಿಜವಾದ ನಾನು ಅಥವ ಆತ್ಮ ಆಗಲಾರದು. ನಿದ್ದೆ ಮಾಡುವಾಗ ಮನಸ್ಸು ಎಲ್ಲಿರುತ್ತದೆ? ಆದರೆ ಎಚ್ಚರವಿರುವಾಗ ಆಗಲೀ, ಇಲ್ಲದಾಗ ಆಗಲೀ ನಮ್ಮನ್ನು ನಿಯಂತ್ರಿಸುವ ಆ ಶಕ್ತಿಯೇ ಜೀವ!
'ಅವರು ನಮ್ಮ ತಂದೆ', 'ಇವರು ನಮ್ಮ ತಾಯಿ', 'ಇವನು ನನ್ನ ಅಣ್ಣ/ತಮ್ಮ'. 'ಇವಳು ನನ್ನ ಅಕ್ಕ/ತಂಗಿ' ಎಂದೆಲ್ಲಾ ಹೇಳುತ್ತೇವಲ್ಲಾ ಹೀಗಂದರೆ ಏನು? ಅವರುಗಳ ಶರೀರವನ್ನು ನಾವು ತಂದೆ, ತಾಯಿ, ಅಣ್ಣ, ತಮ್ಮ, ಇತ್ಯಾದಿ ಭಾವಿಸುತ್ತೇವೆಯೇ? ಅವರುಗಳಲ್ಲಿ ಇರುವ ಏನೋ ಒಂದನ್ನು ನಾವು ತಂದೆ, ತಾಯಿ, ಇತ್ಯಾದಿಯಾಗಿ ಕಾಣುತ್ತೇವೆ. ನಾವು ಯಾರು ಎಂಬುದನ್ನು ನಮಗೇ ಹೇಳುವುದು ಕಷ್ಟ, ಇನ್ನು ಇತರರ ಮಾತೇನು? ಹಾಗಾಗಿ ಉಪನಿಷತ್ತು ಹೇಳುತ್ತದೆ: 'ಪ್ರಾಣವೇ ತಂದೆ, ಪ್ರಾಣವೇ ತಾಯಿ, ಪ್ರಾಣವೇ ಸೋದರ, ಪ್ರಾಣವೇ ಉಸಿರು, ಪ್ರಾಣವೇ ಗುರು, ಪ್ರಾಣವೇ ಬ್ರಹ್ಮ'! ಒಂದು ಚಕ್ರದ ಕೀಲುಗಳು ಹೇಗೆ ಅದರ ಮಧ್ಯಭಾಗದಲ್ಲಿ ಜೋಡಿಸಲ್ಪಟ್ಟಿವೆಯೋ, ಹಾಗೆ ಪ್ರತಿಯೊಂದು ಸಂಗತಿಯೂ ಸಹ ಜೀವತತ್ತ್ವಕ್ಕೆ ಪೋಣಿಸಲ್ಪಟ್ಟಿವೆ. ಈ ಪ್ರಪಂಚದಲ್ಲಿ ಯಾವುದೇ ಮೌಲ್ಯವಿರುವ, ಅರ್ಥವಿರುವ ಸಂಗತಿ ಅನ್ನುವುದು ಏನಾದರೂ ಇದ್ದರೆ ಅದು ಪ್ರಾಣ ಹೊರತುಪಡಿಸಿ ಮತ್ತಾವುದೂ ಅಲ್ಲ. ಪ್ರಾಣವಿರದಿದ್ದರೆ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ನಮ್ಮ ಪ್ರಾಮುಖ್ಯತೆ ನಾವು ಬದುಕಿರುವವರೆಗೆ ಮಾತ್ರ. ಬದುಕಿರುವವರೆಗೆ ಮಾತ್ರ ನಮಗೆ ಬೆಲೆ. ನಮ್ಮಲ್ಲಿ ಪ್ರಾಣವಿರದಾಗ ನಾವು ಯಾರು? ನಾವು ಏನೂ ಅಲ್ಲ. ನಾವು ಬದುಕಿದ್ದಾಗ ನಾವು ನಮ್ಮ ಶರೀರವನ್ನು ನಾವು ಎಂದು ಅಂದುಕೊಂಡಿರುತ್ತೇವಲ್ಲಾ ಅದು ವಾಸ್ತವವಾಗಿ ನಾವು ಆಗಿರುವುದಿಲ್ಲ. ಆ ನಾವು ಅನ್ನುವುದು ವಾಸ್ತವವಾಗಿ ಪ್ರಾಣವೇ ಆಗಿದೆ.
ಹಿರಿಯರಿಗೇ ಆಗಲಿ, ಜ್ಞಾನಿಗಳಿಗೇ ಅಗಲಿ ನಾವು ಗೌರವ ಕೊಡುತ್ತೇವೆ ಅಲ್ಲವೇ? ನಾವು ಗೌರವ ಕೊಡುವುದು ಅವರ ಶರೀರಗಳಿಗೋ, ಅವರ ಶರೀರದಲ್ಲಿರುವ ಪ್ರಾಣತತ್ತ್ವಕ್ಕೋ? ಯಾರನ್ನೂ ನೋಯಿಸಬಾರದು ಎನ್ನುತ್ತೇವೆ. ಯಾರನ್ನೂ ಅಂದರೆ ಯಾರು? ನೋಯಿಸುವುದು ಎಂದರೆ ಏನು? ಯಾರನ್ನೂ ಅಂದರೆ ಆ ಯಾರೂ ದೇಹಗಳಂತೂ ಅಲ್ಲ. ನೋಯಿಸುವುದು ಎಂದರೆ ಶರೀರಗಳಿಗೆ ನೋವಾಗಿದೆ ಎಂದಲ್ಲ, ಶರೀರದಲ್ಲಿರುವ ಪ್ರಾಣತತ್ತ್ವಕ್ಕೆ ನೋವಾಗಿದೆ ಎಂದೇ ಅರ್ಥ. ನನಗೆ ಬೇಜಾರಾಗಿದೆ ಎನ್ನುತ್ತೇವೆ. ಬೇಜಾರಾಗಿರುವುದು ಶರೀರಕ್ಕಂತೂ ಅಲ್ಲ. ಇದೇ ಪ್ರಾಣ ಅಥವ ಜೀವದ ಮಹಿಮೆ. ಶರೀರಗಳಲ್ಲಿರುವ ಆ ಪ್ರಾಣತತ್ವ ಹೊರಟುಹೋದಾಗ ಏನಾಗುತ್ತದೆ? ಎಲ್ಲವೂ ಬದಲಾಗಿಬಿಡುತ್ತದೆ. ತಂದೆ ಎಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಸತ್ತರೆ ಅವನ ಮಗ ತಂದೆಯ ದೇಹವನ್ನು ಚಿತೆಯಲ್ಲಿರಿಸಿ ಸುಡುತ್ತಾನೆ ಅಥವ ತನ್ನ ಸಂಪ್ರದಾಯದಂತೆ ಹೂಳುವುದೋ ಮತ್ತೇನನ್ನೋ ಮಾಡುತ್ತಾನೆ. ಆಗ ಯಾರಾದರೂ, ಅವನು ತಂದೆಯನ್ನೇ ಸುಡುತ್ತಿದ್ದಾನೆ/ಹೂಳುತ್ತಿದ್ದಾನೆ ಎಂದು ಆಕ್ಷೇಪಿಸುತ್ತಾರೇನು? ಕೆಲವೇ ಘಂಟೆಗಳ ಹಿಂದೆ ಬದುಕಿದ್ದಾಗ ಇದ್ದ ಮಹತ್ವ ಸತ್ತ ಕೂಡಲೇ ಇಲ್ಲವಾಗುತ್ತದೆ. ಅದು ನಮ್ಮ ಪ್ರೀತಿಪಾತ್ರರಾದ ಯಾರೇ ಆಗಬಹುದು, ಗುರು ಆಗಬಹುದು, ಸಾಮಾಜಿಕ ನಾಯಕನಾಗಿರಬಹುದು, ಚಕ್ರವರ್ತಿಯೇ ಇರಬಹುದು. ಅದರಲ್ಲಿ ಏನೂ ವ್ಯತ್ಯಾಸವಾಗದು. ಅವರನ್ನು ಸುಡುವುದೋ, ಹೂಳುವುದೋ, ಮತ್ತೊಂದೇನನ್ನೋ ಮಾಡುತ್ತೇವೆ. ಜನ ಏನೆನ್ನುತ್ತಾರೆ? ಉತ್ತಮ ರೀತಿಯಲ್ಲಿ ಸಂಸ್ಕಾರ ಮಾಡಿ ಒಳ್ಳೆಯ ಕೆಲಸ ಮಾಡಿದೆ ಅನ್ನುತ್ತಾರೆ! ಬದುಕಿದ್ದಾಗ ಹೀಗೆ ಮಾಡಿದರೆ? ಕೊಲೆ ಅನ್ನುತ್ತಾರೆ, ಹೀನಕೃತ್ಯ ಅನ್ನುತ್ತಾರೆ! ವ್ಯತ್ಯಾಸ ಗೊತ್ತಾಯಿತಲ್ಲವೇ? ನಾವು ಗೌರವಿಸುವುದು, ಗೌರವಿಸಬೇಕಿರುವುದು ಶರೀರಗಳನ್ನಲ್ಲ, ಶರೀರದೊಳಗಿನ ಪ್ರಾಣತತ್ವಗಳನ್ನು!
ಇಡೀ ಜೀವನವೆನ್ನುವುದು ಈ ರಹಸ್ಯಮಯ ಪ್ರಾಣವೇ ಆಗಿದ್ದು, ಅದು ಹಲವು ಹೆಸರುಗಳಲ್ಲಿ, ಹಲವು ಪ್ರಾಕಾರಗಳಲ್ಲಿ ಗೋಚರವಾಗುತ್ತದೆ. ನಾವು ಈ ಹಲವು ವಿಧಗಳನ್ನು ನಮ್ಮ ಕಣ್ಣುಗಳು ಕಾಣುವ ರೀತಿಯಲ್ಲೇ ಭಾವಿಸಿ ಮೋಸ ಹೋಗುತ್ತೇವೆ. ಜೀವಚೈತನ್ಯವಿರುವ ಎಲ್ಲದರಲ್ಲೂ ಈ ಶ್ರೇಷ್ಠ ಪ್ರಾಣತತ್ವವನ್ನು ಕಾಣಬಹುದು. ಸಸ್ಯಗಳಲ್ಲಿ ಕೆಲವು ಪ್ರಮಾಣದಲ್ಲಿ, ಪ್ರಾಣಿಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಮತ್ತು ಮನುಷ್ಯರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಾಣತತ್ವ ಕಂಡುಬರುತ್ತದೆ. ಈ ಹೆಚ್ಚಿನದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದು ಇನ್ನೂ ಮೇಲ್ಪಟ್ಟವರಲ್ಲಿ ಕಂಡುಬರಲೇಬೇಕು. ಕಣ್ಣಿಗೆ ಕಾಣಿಸದ, ಕಿವಿಗೆ ಕೇಳಿಸದ, ಕೈ ಮುಟ್ಟಲಾಗದ, ಮನಸ್ಸಿಗೆ ಅರ್ಥವಾಗದ, ಬಣ್ಣಿಸಲಾಗದ, ಹೀಗೆಯೇ ಎಂದು ಹೇಳಲಾಗದ ಅವ್ಯಕ್ತ ಆತ್ಮದ ಅರಿವು ಸುಲಭವಂತೂ ಅಲ್ಲ. ಈ ವೇದಮಂತ್ರ ಹೇಳುತ್ತದೆ:
ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವಂತಂ ಯದನಸ್ಥಾ ಬಿಭರ್ತಿ| ಭೂಮ್ಯಾ ಅಸುರಸೃಗಾತ್ಮಾ ಕ್ವ ಸ್ವಿತ್ ಕೋ ವಿದ್ವಾಂಸಮುಪಗಾತ್ ಪ್ರಷ್ಟುಮೇತತ್|| (ಋಕ್. ೧.೧೬೪.೪).
ಅರ್ಥ: ಮೂಳೆಗಳಿಲ್ಲದ ಯಾವ ಚೇತನನು ಮೂಳೆಗಳಿಂದ ಕೂಡಿದ ದೇಹವನ್ನು ಧರಿಸುತ್ತಾನೋ, ಜನ್ಮವೆತ್ತುವ ಆ ಶ್ರೇಷ್ಠ ಅಸ್ತಿತ್ವವನ್ನು ಯಾವನು ನೋಡುತ್ತಾನೆ? ಭೌತಿಕ ಜಗತ್ತಿನಿಂದ ಪ್ರಾಣ-ರಕ್ತ-ಮಾಂಸಗಳೇನೋ ಹುಟ್ಟುತ್ತವೆ. ಆತ್ಮನು ಎಲ್ಲಿಂದ ಬರುತ್ತಾನೆ? ಇದನ್ನು ಕೇಳಲು ಯಾವನು ವಿದ್ವಾಂಸನ ಬಳಿಗೆ ಹೋಗುತ್ತಾನೆ?ಜೀವ ತಾ ಧರಿಸಿರಲು ಮೂಳೆ ಮಾಂಸದ ತಡಿಕೆ
ಬಗೆ ಬಗೆಯಲಾಡಿಹುದು ಪಂಚಭೂತದ ಗೊಂಬೆ |
ಕಾಣುವವನಾಟಕೆ ಕಾಣದವ ಕಾರಣನೆ
ಒಗಟಿಗುತ್ತರಿಪ ಗುರುವೆಲ್ಲಿಹನೊ ಮೂಢ ||
-ಕ.ವೆಂ.ನಾಗರಾಜ್.
ಮಂಗಳವಾರ, ಫೆಬ್ರವರಿ 27, 2018
ಜೀವರು ಮತ್ತು ದೇವರು [Jeevatma and Paramatma]
ಸ್ವಾರಸ್ಯಕರವಾದ ದೃಷ್ಯಕಾವ್ಯದ ರೀತಿಯಲ್ಲಿ ಈ ವೇದಮಂತ್ರ ಜೀವಿಗಳು ಮತ್ತು ದೇವರ ನಡುವಣ ಸಂಬಂಧವನ್ನು ಚಿತ್ರಿಸಿದೆ:
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ| ತಯೋರನ್ಯಃ ಪಿಪ್ಪಲಂ ಸ್ವಾದ್ವತ್ಯನಶ್ನನ್ನನ್ಯೋ ಅಭಿ ಚಾಕಶೀತಿ|| (ಋಕ್.೧.೧೬೪.೨೦)
ಯಾವಾಗಲೂ ಜೊತೆಯಾಗಿರುವ, ಸ್ನೇಹಿತರಾದ (ಅಥವಾ ಆತ್ಮ ಎಂಬ ಸಮಾನ ವ್ಯಾಖ್ಯೆಗೊಳಪಟ್ಟ) ಎರಡು ಸುಂದರವಾದ ರೆಕ್ಕೆಗಳನ್ನುಳ್ಳ ಹಕ್ಕಿಗಳು (ಅಥವಾ ಸೊಗಸಾದ ಗತಿಯನ್ನುಳ್ಳ ಇಬ್ಬರು ಆತ್ಮರು) ಒಂದೇ ಮರವನ್ನು (ಅಥವಾ ಪ್ರಾಕೃತಿಕ ಜಗತ್ತನ್ನು) ಆಶ್ರಯಿಸಿದ್ದಾರೆ. ಅವರಲ್ಲಿ ಒಬ್ಬನು (ಜೀವಾತ್ಮನು) ಮಧುರವಾದ ಫಲವನ್ನು ಸವಿಯುತ್ತಿದ್ದಾನೆ. ಮತ್ತೊಬ್ಬನು ಏನನ್ನೂ ಸೇವಿಸದೆ ಸಾಕ್ಷಿರೂಪನಾಗಿ ವಿರಾಜಿಸುತ್ತಿದ್ದಾನೆ. ಸರಳಗನ್ನಡದಲ್ಲಿ ಇದರ ಭಾವಾರ್ಥವನ್ನು ಹೀಗೆ ಹೇಳಬಹುದೇನೋ!
ಒಂದನೊಂದನಗಲಿರದ ಸೊಗದ ಹಕ್ಕಿಗಳೆರಡು
ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು |
ಫಲ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ
ಜೀವಾತ್ಮ ಪರಮಾತ್ಮರವರಲ್ತೆ ಮೂಢ ||
ಅನಾದಿ ಕಾಲದಿಂದಲೂ ಜಿಜ್ಞಾಸುಗಳನ್ನು ಬಹಳವಾಗಿ ಕಾಡಿರುವ, ಕಾಡುತ್ತಿರುವ ಮತ್ತು ಮುಂದೆಯೂ ಕಾಡಲಿರುವ ಮೂರು ಕುತೂಹಲದ ಸಂಗತಿಗಳೆಂದರೆ, ಜಗತ್ತು, ದೇವರು ಮತ್ತು ಜೀವರು! ಅನೇಕ ಧರ್ಮಗ್ರಂಥಗಳು, ಪುರಾಣಗಳು, ಪುಣ್ಯಕಥೆಗಳು ಈ ಮೂರರ ಸಂಗತಿಗಳ ಕುರಿತೇ ಸುತ್ತುತ್ತವೆ. ಮೇಲೆ ಹೇಳಿದ ವೇದಮಂತ್ರ ಜೀವರು ಮತ್ತು ದೇವರ ನಡುವಣ ಸಂಬಂಧ ಹೇಗಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದೆ. ಜೀವಿಗಳಿಗೂ, ದೇವರಿಗೂ ಅವಿನಾಭಾವ ಸಂಬಂಧವಿದೆ. ಒಂದನ್ನು ಮತ್ತೊಂದು ಸದಾ ಆಶ್ರಯಿಸಿರುತ್ತದೆ. ಜೀವಿಗಳು ಜಗತ್ತಿನ ಸುಖ, ಸೌಲಭ್ಯಗಳನ್ನು ಅನುಭವಿಸುತ್ತಾ ಇದ್ದರೆ ಪರಮಾತ್ಮ ಜೀವಿಗಳ ಕ್ರಿಯೆಗಳನ್ನು ಕೇವಲ ಸಾಕ್ಷಿರೂಪವಾಗಿ ನೋಡುತ್ತಿರುತ್ತಾನೆ ಎಂದು ಹೇಳುವ ಈ ಮಂತ್ರ ನಮ್ಮಲ್ಲಿ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ.
ಪರಮಾತ್ಮ ಸರ್ವಶಕ್ತ, ಸರ್ವತೃಪ್ತ, ಸರ್ವವ್ಯಾಪಕ, ನಿರ್ವಿಕಾರಿ, ನಿರಾಕಾರಿಯಾಗಿರುವುದರಿಂದ ಆತನಿಗೆ ಯಾವುದೇ ಸಂಗತಿಯ ಅವಶ್ಯಕತೆ ಇರುವುದಿಲ್ಲ. ಯಾವುದಾದರೂ ಸಂಗತಿ ಬೇಕು, ಯಾವುದಾದರೂ ಅಗತ್ಯ ಅವನಿಗೆ ಇದೆ ಎಂದರೆ ಆತ ಪರಮಾತ್ಮ ಹೇಗಾದಾನು? ಆಕಾರಿಯಾಗಿದ್ದರೆ, ಆತ ಸರ್ವವ್ಯಾಪಕನಾಗಿರಲಾರ, ಆದ್ದರಿಂದ ಆತ ನಿರಾಕಾರಿಯೇ ಸರಿ. ಆತನನ್ನು ಹೋಲಿಸಬಹುದಾದ ಯಾವುದಾದರೂ ಒಂದು ಸಂಗತಿ ಇದ್ದರೆ, ಅದು ಬಹುಷಃ ಎಲ್ಲೆಲ್ಲೂ ವ್ಯಾಪಿಸಿರುವ, ಅದು ಇಲ್ಲದ ಸ್ಥಳವೇ ಇರದ, ಜಗತ್ತನ್ನು ಸ್ಥಿತಿಯಲ್ಲಿ ಇರಿಸಲು ಸಹಾಯಕಾರಿಯಾಗಿರುವ, ಇದ್ದರೂ ತನ್ನ ಇರುವನ್ನು ತೋರಿಸಿಕೊಳ್ಳದ, ಯಾವುದಕ್ಕೂ ಅಡ್ಡಿಪಡಿಸದ, ಸುಡಲಾರದ, ಕತ್ತರಿಸಲಾಗದ, ತೋಯಿಸಲಾಗದ, ಆಕಾರವಿರದ, ಜಗದ ಯಾವುದೇ ಚಟುವಟಿಕೆಗಳಿಗೆ ಸಾಕ್ಷಿಯಾಗುವ, ನಿರ್ಲಿಪ್ತವಾಗಿರುವ ಆಕಾಶವೇ ಆಗಿದೆ.
ದೇವರು ಸರ್ವಶಕ್ತ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಅವನು ಜೀವಿಗಳ ಕಾರ್ಯಗಳನ್ನು ಕೇವಲ ಸಾಕ್ಷಿಯಾಗಿ ನೋಡುತ್ತಿರುತ್ತಾನೆ ಅಂದರೆ ಸರಿಯೇ? ಯಾರೋ ಇನ್ಯಾರನ್ನೋ ಕೊಲೆ ಮಾಡಿದರೂ ನೋಡಿಕೊಂಡು ಸುಮ್ಮನಿರುತ್ತಾನೆ ಎಂದರೆ, ಕೊಲೆಯಾದವನು ಯಾರಿಗೂ ತೊಂದರೆ ಕೊಡದ ಸಜ್ಜನನಾಗಿದ್ದರೂ ಅವನ ರಕ್ಷಣೆಗೆ ಬರುವುದಿಲ್ಲವೆಂದರೆ ಅವನು ಎಂತಹ ದೇವರು ಎಂದು ಅನ್ನಿಸುವುದಿಲ್ಲವೇ? ಏಕೆ ಹೀಗೆ? ಭಗವದ್ಗೀತೆಯಲ್ಲಿ ಹೇಳಿದಂತೆ ಧರ್ಮರಕ್ಷಣೆಗಾಗಿ, ದುಷ್ಟರ ಶಿಕ್ಷೆಗಾಗಿ, ಶಿಷ್ಟರ ರಕ್ಷಣೆಗಾಗಿ ಅವತರಿಸಿ ಬರುತ್ತೇನೆ ಎಂದು ಹೇಳಿದ ಮಾತು ಸುಳ್ಳಾಗುವುದಿಲ್ಲವೇ? ಈ ವಿಷಯದಲ್ಲಿ ಆಳವಾಗಿ ಜಿಜ್ಞಾಸೆ ಮಾಡಿದಲ್ಲದೆ ಇದರಲ್ಲಿನ ಹೊಳಹು ಗೋಚರವಾಗುವುದಿಲ್ಲ. ಕೆಲವರು ಹೇಳುತ್ತಾರೆ, ನಮ್ಮ ಕೈಯಲ್ಲಿ ಏನಿದೆ? ನಾವೆಲ್ಲಾ ಅವನು ಆಡಿಸಿದಂತೆ ಆಡುವ ಸೂತ್ರದ ಗೊಂಬೆಗಳು! ಇದನ್ನು ಒಪ್ಪುವುದಾದರೆ, ನಾವು ಯಾರದಾದರೂ ತಲೆಯನ್ನು ಒಡೆದರೆ ಅದು ದೇವರೇ ಮಾಡಿಸಿದ್ದು, ನಮ್ಮ ತಪ್ಪಲ್ಲ ಎಂದಾಗುವುದಿಲ್ಲವೇ? ಹಾಗಾದರೆ ತಲೆ ಒಡೆದ ತಪ್ಪಿಗೆ ಶಿಕ್ಷೆ ಯಾರಿಗೆ ಕೊಡಬೇಕು?
ಎಲ್ಲಾ ನಮ್ಮ ಹಣೆಬರಹ, ನಾವೇನು ಮಾಡಕ್ಕೆ ಆಗುತ್ತೆ? ಎಂಬ ಮಾತನ್ನು ಕೇಳುತ್ತಿರುತ್ತೇವೆ. 'ಮಾಡಿದ್ದುಣ್ಣೋ ಮಹರಾಯ' ಎಂಬ ಪ್ರಸಿದ್ಧ ನಾಣ್ನುಡಿಯೂ ಕಿವಿಗೆ ಬೀಳುತ್ತಿರುತ್ತದೆ. ಈ ಮಾತುಗಳಲ್ಲಿ ನಾವು ಏನು ಮಾಡಿದರೂ ದೇವರು ಏಕೆ ಸುಮ್ಮನಿರುತ್ತಾನೆ ಎಂಬುದಕ್ಕೆ ಸೂಕ್ಷ್ಮವಾಗಿ ಉತ್ತರ ಕಾಣುತ್ತದೆ. ಅದೆಂದರೆ, ಕರ್ಮಕ್ಕೆ ತಕ್ಕ ಫಲ ಅನಿವಾರ್ಯ ಎಂಬುದು! ದೇವರು ಒಂದು ಸರಳ ನಿಯಮವನ್ನು ಮಾಡಿಟ್ಟುಬಿಟ್ಟಿದ್ದಾನೆ. 'ನೀನು ಏನು ಮಾಡುತ್ತೀಯೋ ಅದಕ್ಕೆ ನೀನೇ ಹೊಣೆ. ತಪ್ಪು ಮಾಡಿದರೂ ಸರಿ, ಒಳ್ಳೆಯದು ಮಾಡಿದರೂ ಸರಿ. ಅದಕ್ಕೆ ತಕ್ಕಂತೆ ಫಲವನ್ನು ನೀನು ಅನುಭವಿಸಲೇಬೇಕು' ಎಂಬುದೇ ಆ ನಿಯಮ. 'ಈ ಮಾತಿನಲ್ಲಿ ಸತ್ಯವಿಲ್ಲ. ಅನ್ಯಾಯ ಮಾಡಿದವರು, ದರೋಡೆ ಮಾಡುವವರು ಸುಖವಾಗಿಲ್ಲವೇ? ನ್ಯಾಯ, ನೀತಿ, ಧರ್ಮ ಅನ್ನುವವರೇಕೆ ಕಷ್ಟಪಡುತ್ತಿದ್ದಾರೆ?' ಎಂಬ ಮಾತೂ ಬರುತ್ತದೆ. ಆದರೆ ಅನ್ಯಾಯ ಮಾಡಿದವರು ಎಷ್ಟು ಸುಖಿಗಳಾಗಿದ್ದಾರೆ ಎಂಬುದು ಅವರಿಗೇ ಗೊತ್ತು. ಅಲ್ಲದೆ, ಸುಖ ಮತ್ತು ದುಃಖಗಳು ಮಾನಸಿಕ ಸ್ಥಿತಿಗಳಷ್ಟೇ ಹೊರತು ಭೌತಿಕ ಸಂಪತ್ತು, ವಿಚಾರಗಳಲ್ಲಿ ಇಲ್ಲ. ವೇದಗಳು ಪುನರ್ಜನ್ಮವನ್ನು ಪ್ರತಿಪಾದಿಸುತ್ತಿದ್ದು, ಹಿಂದಿನ ಕರ್ಮಗಳಿಗನುಸಾರವಾಗಿ ಮುಂದೆ ಪಡೆಯುವ ಜನ್ಮ ಲಭ್ಯವಾಗುತ್ತದೆ ಎನ್ನುತ್ತದೆ. ಅನೇಕರು ಹುಟ್ಟುವಾಗಲೇ ಅಂಗವಿಕಲರಾಗಿ, ರೋಗಿಷ್ಟರಾಗಿ, ಬಡವರಾಗಿ, ಶ್ರೀಮಂತರಾಗಿ, ಬಲಶಾಲಿಗಳಾಗಿ, ಪ್ರಾಣಿ-ಪಕ್ಷಿಗಳಾಗಿ, ಕ್ರಿಮಿ-ಕೀಟಗಳಾಗಿ ಹೀಗೆ ವಿವಿಧ ರೀತಿಯಲ್ಲಿ ಹುಟ್ಟಲು ಈ ಕಾರಣವಲ್ಲದೆ ಬೇರೆ ಕಾರಣಗಳು ಇರಲಾರವು. ಬೇರೆ ಯಾವುದೇ ಕಾರಣವಿಲ್ಲದೆ ಹೀಗೆ ಹುಟ್ಟುವುದಾದರೆ ದೇವರು ಪಕ್ಷಪಾತಿ ಎನ್ನಿಸಿಕೊಳ್ಳುತ್ತಾನೆ. ಆಸ್ತಿಕ ಮನಸ್ಸುಗಳನ್ನು ದೇವರು ಪಕ್ಷಪಾತಿ ಎಂಬುದನ್ನು ಒಪ್ಪುವುದಿಲ್ಲ. ಈ ವಿಷಯ ಸಂಕ್ಷಿಪ್ತವಾಗಿ ಚರ್ಚಿಸಬಹುದಾದ ವಿಷಯವಲ್ಲವಾದುದರಿಂದ ಇಲ್ಲಿಗೇ ಮೊಟಕುಗೊಳಿಸಿ ಮೂಲ ವಿಷಯಕ್ಕೆ ಮತ್ತೆ ಬರೋಣ.
ಒಂದು ಲಘುವಾದರೂ ಅರ್ಥವತ್ತಾದ ಉದಾಹರಣೆ ನೋಡೋಣ. ಅವರಿಬ್ಬರೂ ನೆರೆಹೊರೆಯವರು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ, ಇಬ್ಬರೂ ಒಬ್ಬನೇ ದೇವರ ಭಕ್ತರು. ಒಬ್ಬ ಪ್ರಾರ್ಥಿಸುತ್ತಾನೆ, 'ದೇವರೇ, ಪಕ್ಕದ ಮನೆಯವನು ದುಷ್ಟ. ನನಗೆ ಬಹಳ ತೊಂದರೆ ಕೊಡುತ್ತಾನೆ. ಅವನ ಎರಡು ಕಣ್ಣುಗಳನ್ನೂ ಇಂಗಿಸಿಬಿಡು'. ಇನ್ನೊಬ್ಬನೂ ಕೋರುತ್ತಾನೆ, 'ದೇವರೇ, ಅವನ ಕಾಟ ಸಹಿಸಲಾಗುತ್ತಿಲ್ಲ. ಅವನಿಗೆ ಲಕ್ವ ಹೊಡೆಯಲಿ'. ದೇವರು ಯಾರ ಮಾತು ಕೇಳಬೇಕು? ಇಬ್ಬರೂ ಭಕ್ತರೇ, ಇಬ್ಬರೂ ದೇವರ ಮಕ್ಕಳೇ. ಇಬ್ಬರ ಬೇಡಿಕೆಯನ್ನೂ ಈಡೇರಿಸಿದರೂ ಅವನ ಭಕ್ತರಿಗೇ ತೊಂದರೆ. ಆಗ ಮತ್ತೆ ಪ್ರಾರ್ಥಿಸಿ ಸರಿಪಡಿಸುವಂತೆ ಗೋಳಾಡುತ್ತಾರೆ, ಸುಮ್ಮನಿರುವುದೇ ಲೇಸು ಎಂದು ಸುಮ್ಮನಾಗಿಬಿಡುತ್ತಾನೆ.
ಮಾನವನ ಬದುಕಿನಲ್ಲಿ ದೇವರ ಪಾತ್ರ ಹೇಗಿರುತ್ತದೆಂಬುದಕ್ಕೆ ಇನ್ನೊಂದು ಸಣ್ಣ ಉದಾಹರಣೆಯಾಗಿ ಚದುರಂಗದ ಆಟವನ್ನೇ ತೆಗೆದುಕೊಳ್ಳೋಣ. ಈ ಆಟಕ್ಕೆ ನಿಯಮವಿದೆ. ನಿಯಮಗಳ ಅನುಸಾರವಾಗಿ ಚದುರಂಗದ ಕಾಯಿಗಳನ್ನು ಆಟಗಾರ ನಡೆಸಬೇಕು. ನಿಯಮಗಳ ಅನುಸಾರವಾಗಿ ಆಟಗಾರ ಬುದ್ಧಿಮತ್ತೆಯನ್ನು ಉಪಯೋಗಿಸಿ ಕಾಯಿಗಳ ಚಲನೆ ಮಾಡಿದರೆ ಎದುರಾಳಿಯನ್ನು ಸೋಲಿಸಬಹುದು. ತಪ್ಪು ನಡೆಗಳನ್ನು ಮಾಡಿದರೆ ಸೋಲುತ್ತಾನೆ. ಈ ಆಟವನ್ನು ಗಮನಿಸಲು ಒಬ್ಬ ರೆಫರಿ ಇದ್ದು ಆತ ಪಂದ್ಯದ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಮಾತ್ರ ಗಮನಿಸುತ್ತಿರುತ್ತಾನೆ. ಕೊನೆಯಲ್ಲಿ ಫಲಿತಾಂಶ ನಿರ್ಧರಿಸುತ್ತಾನೆ. ಆತನ ಪಾತ್ರ ಅಷ್ಟಕ್ಕೇ ಸೀಮಿತ. ಆತ ಯಾವುದೇ ಆಟಗಾರನಿಗೆ ಹೀಗೆ ಆಡು, ಹಾಗೆ ಆಡು ಎಂದು ಹೇಳುವುದಿಲ್ಲ. ರೆಫರಿ/ಅಂಪೈರ್ ನನಗೆ ಸಹಾಯ ಮಾಡಲಿಲ್ಲ ಎಂದು ಯಾರಾದರೂ ದೂರುತ್ತಾರೆಯೇ? ಇಲ್ಲ. ದೇವರ ಕೆಲಸವೂ ಅಷ್ಟೇ. ಆತ ಕೇವಲ ಸಾಕ್ಷಿಯಾಗಿ ನಮ್ಮ ಚಟುವಟಿಕೆಗಳನ್ನು, ಕ್ರಿಯೆಗಳನ್ನು ನೋಡುತ್ತಿರುತ್ತಾನೆಯೇ ಹೊರತು, ಆತ ಸಹಾಯವನ್ನಾಗಲೀ, ಅಡ್ಡಿಯನ್ನಾಗಲೀ ಮಾಡುವುದಿಲ್ಲ. ಜೀವನವೆಂಬ ಆಟದಲ್ಲಿ ನಾವು ಪ್ರತಿಯೊಬ್ಬರೂ ಸ್ವತಂತ್ರ ಆಟಗಾರರೇ. ಮೊದಲೇ ಹೇಳಿದ್ದಂತೆ ಪ್ರತಿಯೊಂದೂ ನಿಯಮಾನುಸಾರವೇ ನಡೆಯುತ್ತದೆ. ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬುದು ನಿರ್ಧರವಾಗಿರುತ್ತದೆ. ನಮ್ಮ ಬದುಕು ಎಚ್ಚರಿಕೆಯಿಂದ ಸಾಗಿದರೆ, ವಿವೇಚನಾಶಕ್ತಿ ಬಳಸಿ ನಡೆದರೆ ನಮಗೆ ಯಶಸ್ಸು ಸಿಕ್ಕೇಸಿಗುತ್ತದೆ. ಇಲ್ಲದಿದ್ದರೆ ಇಲ್ಲ. ಬದುಕೆಂಬ ಆಟವನ್ನು ಸುಂದರವಾಗಿ, ಎಚ್ಚರಿಕೆಯಿಂದ, ಸಂತೋಷದಿಂದ ಅನುಭವಿಸುತ್ತಾ ಆಡೋಣ, ಗೆಲ್ಲೋಣ, ಮುಂದುವರೆಯೋಣ!
-ಕ.ವೆಂ.ನಾಗರಾಜ್.
ಶನಿವಾರ, ಫೆಬ್ರವರಿ 17, 2018
ಅಡಗೂರಿನಲ್ಲಿ ಅರ್ಥಪೂರ್ಣ ಶಿವರಾತ್ರಿಯ ಜಾಗರಣೆ
ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೇ ಶಿವರಾತ್ರಿ. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಕೇವಲ ನಿದ್ರೆ ಮಾಡದಿರುವುದಲ್ಲ, ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ಅರ್ಥ. ನಾವು ಜಾಗೃತರಾಗುವುದಲ್ಲದೆ, ಇತರರನ್ನೂ ಜಾಗೃತಗೊಳಿಸುವ ವಿಶೇಷ ಜಾಗರಣೆಯ ಕಾರ್ಯ 13-02-2018ರ ಶಿವರಾತ್ರಿಯಂದು ನಡೆದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಆಸಕ್ತರ ಅವಗಾಹನೆಗಾಗಿ ನೀಡುತ್ತಿರುವೆ.
ಹಾಸನದಿಂದ ಹಳೇಬೀಡಿಗೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿ.ಮೀ. ದೂರದಲ್ಲಿರುವ ಗ್ರಾಮ ಅಡಗೂರು. ಬೇಲೂರು ತಾಲ್ಲೂಕಿಗೆ ಸೇರಿದ ಅಡಗೂರಿನಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಕಾಶಿಪುರ ಎಂಬ ಜನವಸತಿ ಇರದ ಬೇಚರಾಕ್ ಗ್ರಾಮವಿದೆ. ಅಲ್ಲಿ ಒಂದು ಪುರಾತನವಾದ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದುದಲ್ಲದೆ ದೇವಸ್ಥಾನದ ಕಲ್ಲುಗಳನ್ನು ಅವರಿವರು ಸಾಗಿಸಿದ್ದು ಅಳಿದುಳಿದ ಭಾಗ ಮಾತ್ರ ಉಳಿದಿದೆ. ಈ ದೇವಸ್ಥಾನದ ಅಸ್ತಿತ್ವವೇ ಮರೆತು ಹೋದಂತಾಗಿದ್ದು, ಜನವಸತಿ ಇರದ ಗ್ರಾಮವಾಗಿದ್ದು, ಸುತ್ತಮುತ್ತಲೂ ಜಮೀನುಗಳು ಇರುವುದರಿಂದ ಹತ್ತಿರದ ಅಡಗೂರಿನವರಿಗೇ ಗೊತ್ತಿಲ್ಲವೇನೋ ಎಂಬಂತಾಗಿತ್ತು. ಅಲ್ಲಿ ಒಂದು ದೇವಸ್ಥಾನದ ಸಮುಚ್ಛಯವೇ ಇದ್ದುದು ಅವಶೇಷಗಳಿಂದ ತಿಳಿದುಬರುತ್ತದೆ. ಪ್ರವೇಶ ಮಂಟಪ, ಸುತ್ತಲೂ ಆವರಣ, ಒಳಭಾಗದಲ್ಲಿ ಮಂಟಪಗಳು, ಅಶ್ವಲಾಯ, ಗಜಲಾಯಗಳು, ಬಂದುಹೋಗುವವರಿಗೆ ಉಳಿದುಕೊಳ್ಳಬಹುದಾದ ಕೊಠಡಿಗಳು, ಶಿವ ಮತ್ತು ವಿಷ್ಣುವಿನ ದೇವಾಲಯಗಳಿದ್ದುದು ತಿಳಿದುಬರುತ್ತದೆ. ನಿಧಿಯ ಆಸೆಗಾಗಿ ಸುಮಾರು ಮೂರು ಅಡಿ ಎತ್ತರದ ಲಿಂಗವನ್ನು ನೆಲದಿಂದ ಕಿತ್ತು ಹೊರತೆಗೆದಿರುವುದು ಕಾಣುತ್ತದೆ. ಪಕ್ಕದಲ್ಲಿ ಜಯ ವಿಜಯರ ವಿಗ್ರಹವಿರುವ ದ್ವಾರವಿದ್ದು ವಿಷ್ಣುವಿನ ದೇವಸ್ಥಾನವೂ ಅಲ್ಲಿದ್ದುದು ತಿಳಿಯುತ್ತದೆ. ವಿಗ್ರಹ ಕಳುವಾಗಿದೆ ಅಥವ ಬೇರೆಲ್ಲೋ ಸಾಗಿಸಿರುವ ಸಾಧ್ಯತೆಯಿದೆ. ಈ ದೇವಸ್ಥಾನ ಸಮುಚ್ಛಯ ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿದ್ದು ಅಕ್ಕಪಕ್ಕದ ಆವರಣ ಒತ್ತುವರಿ ಆಗಿರುವ ಸಾಧ್ಯತೆಯಿದೆ. ದೇವಸ್ಥಾನ ಸಮುಚ್ಛಯವಿರುವ ಭಾಗವನ್ನು ಪುನರುಜ್ಜೀವನಗೊಳಿಸಿ ಉಳಿಸಿಕೊಳ್ಳಬೇಕಾದ ಅಗತ್ಯತೆಯಿದೆ. ಜಿಲ್ಲಾಡಳಿತ, ಕಂದಾಯ, ಮೋಜಣಿ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ, ಮುಜರಾಯಿ ಇಲಾಖೆಗಳು, ಜಿಲ್ಲಾ ಪಂಚಾಯಿತಿ, ಇತ್ಯಾದಿಗಳ ಗಮನ ಇತ್ತ ಕಡೆ ಹರಿಯಬೇಕಿದೆ.
ಕೆಲವು ತಿಂಗಳುಗಳ ಹಿಂದೆ ಮಿತ್ರ ಹರಿಹರಪುರ ಶ್ರೀಧರ ಕಾಶಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಾಲಿಡಲು ಅವಕಾಶವಿಲ್ಲದಂತೆ ಕುರುಚಲು ಗಿಡಗಳು, ಮುಳ್ಳುಕಂಟಿಗಳು ಬೆಳೆದಿದ್ದವು. ಹಿಂದೆ ಯಾವಾಗಲೋ ಇನ್ನೊಬ್ಬ ಮಿತ್ರ ದಿ. ದಾಸೇಗೌಡರು ಆವರನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋಗಿ ಇದರ ಪುನರುತ್ಥಾನಕ್ಕೆ ಏನಾದರೂ ಮಾಡಬೇಕಲ್ಲಾ ಎಂದು ಹೇಳಿದ್ದ ಮಾತು ನೆನಪಿನಲ್ಲಿ ಉಳಿದಿದ್ದುದೂ ಅವರ ಕಾಶಿಪುರ ಭೇಟಿಗೆ ಕಾರಣವಾಗಿತ್ತಂತೆ. ಆದರೆ ಅದಕ್ಕೆ ತಕ್ಕ ಮುಹೂರ್ತ ಬರಬೇಕಿತ್ತಷ್ಟೆ. ಮಿತ್ರ ಶ್ರೀಧರ್ ದೇವಸ್ಥಾನದ ಆಗಿನ ಸ್ಥಿತಿಯನ್ನು ಫೇಸ್ ಬುಕ್ಕಿನ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಸಹಿತ ಪ್ರಕಟಿಸಿದಾಗ ರಾಜ್ಯದಾದ್ಯಂತ ಮತ್ತು ಹಾಸನ ಜಿಲ್ಲೆಯವರ ಗಮನ ಸೆಳೆಯಿತು. ಪರಿಣಾಮವಾಗಿ ಹಾಸನದ ವೇದಭಾರತಿ, ಪತಂಜಲಿ ಯೋಗ ಸಮಿತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರುಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಹೀಗೆ ಹತ್ತು ಹಲವಾರು ಸಂಘಟನೆಗಳು ಕೈಜೋಡಿಸಿದವು. ಹಲವಾರು ದಿನಗಳವರೆಗೆ ಶ್ರಮದಾನ ನಡೆದು ದೇವಸ್ಥಾನದ ಆವರಣದಲ್ಲಿ ಓಡಾಡಲು ಸಾಧ್ಯವಾಗುವಂತಹ ಸ್ಥಿತಿ ಏರ್ಪಟ್ಟಿತು. ಸ್ಕೌಟ್ಸ್ ಮತ್ತು ಗೈಡ್ಸ್‌ನವರ ಕಾರ್ಯ ವಿಶೇಷ ಗಮನ ಸೆಳೆಯಿತು. ಬೆಂಗಳೂರಿನ ತರುಣರೂ ಈ ಕೆಲಸದಲ್ಲಿ ಆಸಕ್ತಿ ವಹಿಸಿದರು. ರಿಕ್ಲೈಮ್ ಟೆಂಪಲ್ಸ್ ಆಂದೋಲನದ ಕಾರ್ಯಕರ್ತರು ಶ್ರೀ ಗಿರೀಶ್ ಭಾರಧ್ವಾಜರ ನೇತೃತ್ವದಲ್ಲಿ ಸಹಕಾರ ನೀಡಲು ಮುಂದೆ ಬಂದರು. ಹರಿಹರಪುರ ಶ್ರೀಧರ್, ಕವಿ ನಾಗರಾಜ್ ನೇತೃತ್ವದಲ್ಲಿ ಎರಡು ಮೂರು ಸಲ ಗ್ರಾಮಸ್ಥರ ಸಭೆಗಳೂ ನಡೆದು ಗ್ರಾಮಸ್ಥರ ಸಹಕಾರವನ್ನೂ ಕೋರಲಾಯಿತು.
ಶಿವರಾತ್ರಿಯ ದಿನದಂದು ಹಾಸನದಿಂದ ಒಂದು ನೂರು ಕಾರ್ಯಕರ್ತರು ವಿಶೇಷ ಬಸ್ಸು ಮತ್ತು ಖಾಸಗಿ ವಾಹನಗಳ ಮೂಲಕ ಅಡಗೂರಿಗೆ ಬಂದಿಳಿದರು. ಅಡಗೂರಿನ ಗಣಪತಿ ದೇವಸ್ಥಾನದ ಮುಂಭಾಗದ ಬಯಲು ರಂಗಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳಿಗಾಗಿ ವೇದಿಕೆ ಸಿದ್ಧಪಡಿಸಲಾಯಿತು. ಊರಲ್ಲೆಲ್ಲಾ ಕೇಸರಿ ಧ್ವಜಗಳು ವಿಜೃಂಭಿಸಿದ್ದವು. ಕಾಶಿಪುರದಲ್ಲಿ, ಅಡಗೂರಿನಲ್ಲಿ ಭವ್ಯವಾದ ೨೦ ಮತ್ತು ೧೦ ಅಡಿಗಳ ಫ್ಲೆಕ್ಸ್‌ಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದವು. ಸಿದ್ಧಿ ಸಮಾಧಿ ಯೋಗದ ಭಜನಾ ತಂಡವೂ ಬಂದಿಳಿಯಿತು. ಮಧ್ಯಾಹ್ನ ನಾಲ್ಕು ಗಂಟೆಗೆ ಸರಿಯಾಗಿ ಅಡಗೂರಿನಿಂದ ಕಾಶಿಪುರದವರೆಗೆ ಪುಷ್ಪಗಿರಿ ಮಠದ ೧೧೦೮ನೇ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಭವ್ಯ ಶೋಭಾಯಾತ್ರೆ ಭಜನಾತಂಡಗಳಿಂದ ಭಜನೆ, ಘೋಷಣೆಗಳೊಂದಿಗೆ ನಡೆಯಿತು. ಅಡಗೂರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಉತ್ಸಾಹದಿಂದ ಪಾಲುಗೊಂಡಿದ್ದರು.
ಕಾಶಿಪುರದ ದೇವಸ್ಥಾನದ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಗ್ರಾಮಸ್ಥರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ವೇದಭಾರತೀ ಕಾರ್ಯಕರ್ತರು ಅಗ್ನಿಹೋತ್ರ, ಸಂಕಲ್ಪ ಯಜ್ಞ ಮಾಡುವುದರ ಮೂಲಕ ಶತಮಾನಗಳ ನಂತರದಲ್ಲಿ ಆ ಸ್ಥಳದಲ್ಲಿ ಮತ್ತೊಮ್ಮೆ ಧಾರ್ಮಿಕ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿತು. 'ಓಂ ರಾಷ್ಟ್ರಾಯ ಸ್ವಾಹಾ| ಇದಂ ರಾಷ್ಟ್ರಾಯ ಇದಂ ನ ಮಮ||' (ಈ ಸಮರ್ಪಣೆ ರಾಷ್ಟ್ರದ ಸಲುವಾಗಿ, ರಾಷ್ಟ್ರಕ್ಕೆ ಸಮರ್ಪಿತ, ಇದು ನಮ್ಮ ಸ್ವಾರ್ಥಕ್ಕಲ್ಲ} ಎಂಬ ಮಂತ್ರವನ್ನೂ ಪಠಿಸಿ ಸಮಿತ್ತು ಅರ್ಪಿಸಲಾಯಿತು. ಪುಷ್ಪಗಿರಿ ಸ್ವಾಮೀಜಿಯವರು, ಹಾಸನದಿಂದ ಬಂದು ಈ ಕಾರ್ಯ ಮಾಡುತ್ತಿರುವುದು ವಿಶೇಷವಾಗಿದೆ. ಈ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯ. ಹೊಸ ಹೊಸ ದೇವಸ್ಥಾನಗಳನ್ನು ಕಟ್ಟುತ್ತಿರುವ ಈ ಕಾಲದಲ್ಲಿ ಹಳೆಯ ದೇವಸ್ಥಾನವನ್ನು ಪುನರುದ್ಧಾರ ಮಾಡುವ ದಿಸೆಯಲ್ಲಿ ವೇದಭಾರತಿಯವರು ಮತ್ತು ಇತರರ ಕಾರ್ಯ ಮೆಚ್ಚುವಂತಹುದು. ಅಡಗೂರಿನ ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು. ಹರಿಹರಪುರ ಶ್ರೀಧರ್ ಮಾತನಾಡಿ, ಈ ಕಾರ್ಯದ ಮಹತ್ವವನ್ನು ಗ್ರಾಮಸ್ಥರಿಗೆ ಮನಗಾಣಿಸಿದ್ದಾಗಿದೆ. ಮುಂದಿನ ಕೆಲಸಗಳನ್ನು ಸ್ವಾಮೀಜಿಯವರೊಂದಿಗೆ ಊರಿನವರು ಸೇರಿಕೊಂಡು ಮುಂದುವರೆಸಬೇಕು ಎಂದರು. ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ತುಂಬಿಹೋಗಿದ್ದರು. ಎಲ್ಲರಲ್ಲೂ ಉತ್ಸಾಹ ಮತ್ತು ಕೈಜೋಡಿಸುವ ಮನಸ್ಸು ಇದ್ದುದು ಕಾಣುತ್ತಿತ್ತು.
ಪುನಃ ಅಡಗೂರಿನ ಬಯಲು ರಂಗಮಂದಿರದಲ್ಲಿ ಎಲ್ಲರೂ ಒಟ್ಟುಗೂಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿನಾಗರಾಜ್ ವಹಿಸಿದ್ದು ಅಡಗೂರಿನ ಆನಂದ್, ವಿಶ್ವನಾಥ್, ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಹರಿಹರಪುರ ಶ್ರೀಧರ್, ಅಶೋಕಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಎಲ್ಲರೂ ಕಾಶಿಪುರ ದೇವಸ್ಥಾನದ ಪುನರುಜ್ಜೀವನಕ್ಕೆ ಮುಂದಾಗುವಂತೆ ಕರೆ ನೀಡಿದರು. ಹಾಸನದ ಸಿದ್ಧಿ ಸಮಾಧಿಯೋಗದ ತಂಡದವರಿಂದ ಭಜನೆ, ಬೆಂಗಳೂರಿನ ಕು|| ಅಕ್ಷತಾ ರಾಮಕೃಷ್ಣ ಮತ್ತು ಹಾಸನದ ಕು|| ವೈಷ್ಣವಿ ಜಯರಾಮರಿಂದ ಭರತನಾಟ್ಯ, ಶ್ರೀಮತಿ ಪಲ್ಲವಿ ಗಿರೀಶ್, ಕು|| ಶ್ರದ್ಧಾ, ತನ್ಮಯಿ, ಯಶಸ್, ಶ್ರೀಮತಿ ಕಲವಾತಿ ಮಧುಸೂದನ್ ಮತ್ತು ಇತರರಿಂದ ಭಕ್ತಿಗೀತೆಗಳು, ಕು|| ಅನೀಶ್ ಮತ್ತು ತಂಡದವರಿಂದ ಕೊಳಲು ವಾದನ, ಪತಂಜಲಿ ಯೋಗಕೇಂದ್ರಗಳವರಿಂದ ಯೋಗ ನೃತ್ಯಗಳು, ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನೆರೆದಿದ್ದ ಜನರ ಮನರಂಜಿಸುವಲ್ಲಿ ಯಶಸ್ವಿಯಾಯಿತು. ಒಟ್ಟಾರೆಯಾಗಿ ಹೇಳಬೇಕೆಂದರೆ ಅಡಗೂರಿನಲ್ಲಿ ನಡೆದ ಕಾರ್ಯಕ್ರಮ ನಭೂತೋ ಎಂಬಂತಿತ್ತು. ಹರಿಹರಪುರ ಶ್ರೀಧರ ಮತ್ತು ಮಿತ್ರರೆಲ್ಲರ ಶ್ರಮ, ಸಹಕಾರ, ಪಾಲುಗೊಳ್ಳುವಿಕೆ ಫಲ ನೀಡಿತ್ತು.
ಕಾರ್ಯಕ್ರಮದ ಪೂರ್ಣ ವ್ಯವಸ್ಥೆಯನ್ನು ಹಾಸನದ ಕಾರ್ಯಕರ್ತರೇ ಮಾಡಿದ್ದುದಲ್ಲದೆ, ಪ್ರಸಾದದ ವ್ಯವಸ್ಥೆ ಸಹ ಹಾಸನದಿಂದಲೇ ಆಗಿದ್ದು ಗಮನಾರ್ಹ. ಮುಂದಿನ ವರ್ಷದ ಕಾಶಿಪುರ ಉತ್ಸವವನ್ನು ಅಡಗೂರಿನವರೇ ಮಾಡಲು ಮುಂದೆ ಬರುತ್ತಾರೆ, ಹಾಸನ ಮತ್ತು ಪರ ಊರಿನವರು ಕೈಜೋಡಿಸುತ್ತಾರೆ ಎಂಬ ಆಶಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನಿಜವಾದ ಅರ್ಥದಲ್ಲಿ ಜಾಗರಣೆ ಅಡಗೂರಿನಲ್ಲಿ ಉಂಟಾಗಿತ್ತು. ಅದು ನಿರಂತರ ಮುಂದುವರೆಯಲಿ, ಯೋಜಿತ ಕಾರ್ಯ ಸಾಧಿತವಾಗಲಿ.
ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ
ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)
ಅರ್ಥ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.
-ಕ.ವೆಂ. ನಾಗರಾಜ್.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)