ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಆಗಸ್ಟ್ 30, 2017

ಸತ್ಸಂಗದ ಮಹತ್ವ


     ಮೂರು ಮಂಗಗಳ ಕೆಟ್ಟದ್ದನ್ನು ನೋಡುವುದಿಲ್ಲ, ಕೆಟ್ಟದ್ದನ್ನು ಕೇಳುವುದಿಲ್ಲ ಮತ್ತು ಕೆಟ್ಟದ್ದನ್ನು ಆಡುವುದಿಲ್ಲ ಎಂಬ ಸಂದೇಶ ಸಾರುವ ಚಿತ್ರವನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ ಇಂದು ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು ನೋಡಿದರೆ, ಕೆಟ್ಟದ್ದನ್ನೇ ತೋರಿಸುತ್ತೇವೆ, ಕೆಟ್ಟದ್ದನ್ನೇ ಕೇಳಿಸುತ್ತೇವೆ ಮತ್ತು ಕೆಟ್ಟದ್ದನ್ನೇ ಪ್ರಸಾರ ಮಾಡುತ್ತೇವೆ ಎಂದು ಹಲವು ಚಾನೆಲ್ಲುಗಳವರು ಸ್ಪರ್ಧೆಗೆ ಇಳಿದಂತೆ ತೋರುತ್ತದೆ. ಪ್ರಸಾರವಾಗುವ ಯಾವುದೇ ಧಾರಾವಾಹಿಯಲ್ಲಿ ಸಂಸಾರ, ಸಮಾಜಗಳನ್ನು ಒಡೆಯುವ, ಹೀನಕೃತ್ಯಗಳನ್ನು ವೈಭವೀಕರಿಸುವ, ದುಷ್ಟ ಶಕ್ತಿಗಳದೇ ಮೇಲುಗೈ ಎಂಬಂತೆ ಬಿಂಬಿಸುವ ಕತೆಗಳೇ ನೂರಕ್ಕೆ ತೊಂಬತ್ತೊಂಬತ್ತರಷ್ಟು ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ಜನರಿಗೂ ಇವತ್ತಲ್ಲಾ ನಾಳೆ ದುಷ್ಟರಿಗೆ ಶಿಕ್ಷೆಯಾಗುತ್ತದೆ ಎಂಬ ನಿರೀಕ್ಷೆಯಲ್ಲೇ ದಿನವೂ ಆ ಧಾರಾವಾಹಿಗಳನ್ನು ನೋಡಿದ್ದೂ ನೋಡಿದ್ದೇ ಅವರಿಗೆ ಬಂದ ಲಾಭ. ಸತಾಯಿಸಿ ಸತಾಯಿಸಿ ನೋಡುಗರಿಗೆ ಹಿಂಸೆ ನೀಡಿ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ತವಕ ಟಿವಿ ಮಾಧ್ಯಮಗಳಿಗೆ! ಬೀದಿಯಲ್ಲಿ ಯಾರೋ ಯಾವಾಗಲೋ ಹಾದರ ಮಾಡಿದರೆ, ಇವರು ದಿನವಿಡೀ, ವಾರವಿಡೀ ಟಿವಿ ಪರದೆಯ ಮೇಲೆ ಹಾದರ ಮಾಡುತ್ತಿರುತ್ತಾರೆ. ಇತ್ತೀಚೆಗೆ ಒಬ್ಬ ಮಂತ್ರಿಯ ಚಪಲ ತೀರಿಕೆಯ ದೃಷ್ಯವನ್ನು ಹೇಸಿಗೆ ಬರುವಷ್ಟು ಕಾಲ, ಗಂಟೆಗಟ್ಟಲೆ, ದಿನಗಟ್ಟಲೆ, ವಾರಗಟ್ಟಲೆ ತೋರಿಸಿದ್ದು ಒಂದು ಸಣ್ಣ ಉದಾಹರಣೆಯಷ್ಟೆ. ಸಂಸಾರದ, ವೈಯಕ್ತಿಕ ವಿಷಯಗಳನ್ನು ಹಾದಿ ರಂಪ, ಬೀದಿ ರಂಪ ಆಗುವಂತೆ ಮಾಡುವ, ವ್ಯಕ್ತಿಗಳ ತೇಜೋವಧೆ ಮಾಡುವ, ನ್ಯಾಯಾಧೀಶರಂತೆಯೇ ವರ್ತಿಸುವ ಇವರ ನಡವಳಿಕೆಗಳಿಗೆ ಅಂಕುಶ ಬೀಳದಿದ್ದರೆ ಸಮಾಜಕ್ಕೆ ಮತ್ತು ದೇಶಕ್ಕೆ ದೊಡ್ಡ ಹಾನಿಯಾಗುವುದರಲ್ಲಿ ಅನುಮಾನವಿಲ್ಲ. ಯಾವುದೇ ಆಗಲಿ, ಅತಿರೇಕವಾದರೆ ಅನಿಷ್ಟ ತಪ್ಪಿದ್ದಲ್ಲ. ನಿಜ ಹೇಳಬೇಕೆಂದರೆ, ಸಮಾಜದಲ್ಲಿ ವಿಕೃತ್ಯಗಳು ಹೆಚ್ಚಲು, ಸಂಸಾರಗಳು ಮತ್ತೆ ಒಂದಾಗಲು ಸಾಧ್ಯವಾಗದಂತೆ ಒಡೆದುಹೋಗಲು ಇವುಗಳೂ ಕಾರಣವಾಗಿವೆ.
     ಮೇಲಿನ ಸಂಗತಿಯನ್ನು ಉಲ್ಲೇಖಿಸಿದ ಕಾರಣ ಕೆಟ್ಟ ಸಂಗತಿಗಳನ್ನು ನೋಡುವುದರಿಂದ, ಕೇಳುವುದರಿಂದ ಮತ್ತು ಆಡುವುದರಿಂದ ಋಣಾತ್ಮಕ ಶಕ್ತಿಗೆ ಪ್ರಚೋದನೆ ಸಿಗುತ್ತದೆ ಮತ್ತು ಇದರಿಂದ ಹಾನಿಯಾಗುವದೇ ಹೊರತು ಒಳಿತಾಗದು ಎಂಬುದನ್ನು ಒತ್ತಿ ಹೇಳುವ ಸಲುವಾಗಿ. ಇದರ ಪ್ರತಿಯಾಗಿ ಒಳ್ಳೆಯ ಸಂಗತಿಗಳನ್ನು ನೋಡುವುದರಿಂದ, ಕೇಳುವುದರಿಂದ ಮತ್ತು ಅಡುವುದರಿಂದ ಧನಾತ್ಮಕ ಶಕ್ತಿಗೆ ಪ್ರಚೋದನೆ ಸಿಗುತ್ತದೆ ಮತ್ತಿ ಇದರಿಂದ ವೈಯಕ್ತಿಕವಾಗಿ, ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಒಳ್ಳೆಯ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ. ಸತ್ಸಂಗಗಳು, ಒಳ್ಳೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ನಡವಳಿಕೆಗಳನ್ನು ಗಮನಿಸಿದರೆ ಅವರಿಗೂ, ಬೇರೆಯವರಿಗೂ ಇರುವ ವ್ಯತ್ಯಾಸ ಗುರುತಿಸುವುದು ಕಷ್ಟವಾಗದು. ಯಾವುದೇ ಕಾರಣದಿಂದ, ಟೈಮ್ ಪಾಸ್ ಮಾಡುವ ಉದ್ದೇಶದ ಕಾರಣವೂ ಸೇರಿದಂತೆ, ಸತ್ಸಂಗ ಅಥವ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ ಅದರಿಂದ ಲಾಭವಾಗಬಹುದೇ ಹೊರತು ಹಾನಿಯಾಗದು. ಸತ್ಸಂಗದ ಮಹತ್ವ ಇರುವುದು ಇಲ್ಲಿಯೇ!
     ಸತ್ಸಂಗ ಎಂಬದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಸತ್ಯದೊಡನೆ ಇರುವುದು, ಸತ್ಯಕ್ಕಾಗಿ ಒಗ್ಗೂಡುವುದು ಅರ್ಥಾತ್ ಸತ್ಯದ ಸಂಗ ಮಾಡುವುದು ಎಂದಾಗುತ್ತದೆ. ವ್ಯಾವಹಾರಿಕ ಬಳಕೆಯಲ್ಲಿ ಸದ್ವಿಚಾರಗಳನ್ನು ಪ್ರೇರಿಸುವ, ಪ್ರಸರಿಸುವ ಸಜ್ಜನರ ಕೂಟವೇ ಸತ್ಸಂಗ. ಅದು ಒಟ್ಟಿಗೆ ಭಜನೆ ಮಾಡುವುದಿರಬಹುದು, ಉಪನ್ಯಾಸಗಳನ್ನು ಕೇಳುವುದಿರಬಹುದು, ವಿಚಾರ ಕಮ್ಮಟವಿರಬಹುದು, ಧಾರ್ಮಿಕ/ಸಾಂಸ್ಕೃತಿಕ/ಸಾಹಿತ್ಯಿಕ ವಿಷಯಗಳ ಕಾರ್ಯಕ್ರಮಗಳಿರಬಹುದು, ಒಟ್ಟಾರೆಯಾಗಿ ಧನಾತ್ಮಕ ಅಂಶಗಳಿಗೆ ಒತ್ತು ಕೊಡುವ ಯಾವುದೇ ಚಟುವಟಿಕೆಗಳನ್ನು ಸತ್ಸಂಗದ ವ್ಯಾಪ್ತಿಯಲ್ಲಿ ತರಬಹುದು.
     ಸತ್ಸಂಗದ ಪೂರ್ಣ ಲಾಭ ಸಿಗಬೇಕೆಂದರೆ ಬಾಗಿಲ ಬಳಿಯಲ್ಲಿಯೇ ನಮ್ಮ ದಿನನಿತ್ಯದ ಚಿಂತೆಗಳು, ಮನದಲ್ಲಿ ಮೂಡುವ ವಿಚಾರಗಳು, ಹಳೆಯ ಎಲ್ಲಾ ಸಂಗತಿಗಳನ್ನು ಮರೆತು ಒಬ್ಬ ಹೊಸ ವಿದ್ಯಾರ್ಥಿಯಂತೆ, ಏನೂ ಗೊತ್ತಿಲ್ಲದವರಂತೆ, ಹೊಸದಾಗಿ ತಿಳಿಯಲು ಉತ್ಸುಕನಾಗಿ ಒಳಪ್ರವೇಶಿಸುವುದು ಉತ್ತಮ. ಯಾವಾಗಲೂ ಹೊಸಬರಂತೆ ಮತ್ತು ಹೊಸಬರಂತೆಯೇ ಇರಲು ಅಭ್ಯಾಸ ಮಾಡಿಕೊಂಡರೆ ಉತ್ತಮ ಅನುಭವ ನಮ್ಮದಾಗುವುದು. ಸತ್ಸಂಗದಲ್ಲಿ ಸಮಾನ ಮನಸ್ಕರು ಒಂದು ಸಮಾನ ಧನಾತ್ಮಕ ವಿಷಯದ ಸಲುವಾಗಿ ಒಟ್ಟುಗೂಡುತ್ತಾರೆ. ಈ ರೀತಿಯ ಒಟ್ಟುಗೂಡುವಿಕೆಯೇ ಪರಿಣಾಮಕಾರಿಯಾಗಿರುತ್ತದೆ. ಸುಮ್ಮನೆ ಸಮಯ ಕಳೆಯಲು ಬರುವವರಿಂದಲೂ ಉಪಯೋಗವಿದೆ. ಕನಿಷ್ಠ ಸತ್ಸಂಗ ನಡೆಯುವ ಒಂದು, ಒಂದೂವರೆ ಗಂಟೆಯವರೆಗಾದರೂ ಅವರು ಋಣಾತ್ಮಕ ವಿಷಯಗಳಿಂದ ದೂರವಿರುತ್ತಾರಲ್ಲಾ! ಅಲ್ಲಿ ನಡೆಯುವ ಪ್ರವಚನ, ಕಾರ್ಯಕ್ರಮ, ಭಜನೆ, ಇತ್ಯಾದಿಗಳಿಂದ ಒಂದು ಅಲೌಕಿಕ, ಸಂತಸಕರ, ಹಿತಕರ ತರಂಗಗಳು ಉಂಟಾಗುತ್ತವೆ. ಈ ತರಂಗಗಳು ಅಲ್ಲಿ ಸೇರಿದವರ ಮೇಲೆ ಒಳ್ಳೆಯ ಪ್ರಭಾವ ಬೀರಿ ಆನಂದವನ್ನುಂಟುಮಾಡುತ್ತವೆ. ಒಳ್ಳೆಯ ವಿಚಾರಗಳ ಕುರಿತು ಯೋಚಿಸುವಂತೆ, ಒಳ್ಳೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಅಲ್ಲಿ ಪ್ರೇರೇಪಣೆ ಸಿಗುತ್ತದೆ. ಸತ್ಸಂಗದ ಯಶಸ್ಸು ಇರುವುದು ಇಲ್ಲಿಯೇ!
     ಆದಿ ಶಂಕರಾಚಾರ್ಯರ ಭಜಗೋವಿಂದಮ್ ಸ್ತೋತ್ರದ ಒಂಬತ್ತನೆಯ ಶ್ಲೋಕ ಹೀಗಿದೆ:
ಸತ್ಸಂಗತ್ವೇ ನಿಸ್ಸಂಗತ್ವಮ್ ನಿಸ್ಸಂಗತ್ವೇ ನಿರ್ಮೋಹತ್ವಮ್
ನಿರ್ಮೋಹತ್ವೇ ನಿಶ್ಚಲತತ್ತ್ವಮ್ ನಿಶ್ಚಲತತ್ವೇ ಜೀವನ್ಮುಕ್ತಿಃ||
     ಉತ್ತಮರಾದ ವಿದ್ವಜ್ಜನರ ಸಹವಾಸದಿಂದ ಒಬ್ಬ ವ್ಯಕ್ತಿ ಎಲ್ಲಾ ರೀತಿಯ ಬಂಧನಗಳಿಂದ ಮುಕ್ತನಾಗುತ್ತಾನೆ, ಈ ರೀತಿಯಾಗಿ ಭ್ರಮೆಗಳಿಂದ ಹೊರಬಂದವನು ತಪ್ಪುದಾರಿಯಲ್ಲಿ ಹೋಗುವದಿಲ್ಲ, ಸರಿದಾರಿಯಲ್ಲೇ ನಡೆಯುತ್ತಾನೆ. ಈ ನಿರ್ಮೋಹತ್ವದಿಂದ ಮನಸ್ಸು ಚಂಚಲವಾಗುವುದಿಲ್ಲ, ಪ್ರಾಪಂಚಿಕ ಆಕರ್ಷಣೆಗಳಿಂದ ವಿಚಲಿತಗೊಳ್ಳುವುದಿಲ್ಲ. ಈ ಗುಣದಿಂದಾಗಿ ಮುಕ್ತಿಯನ್ನು ಸಾಧಿಸುತ್ತಾನೆ ಎಂಬುದು ಈ ಶ್ಲೋಕದ ಅರ್ಥ. ಸತ್ಸಂಗದ ಉದ್ದೇಶ ಅರ್ಥಪೂರ್ಣವಾಗಿ, ಸಮರ್ಥವಾಗಿ ಈ ಶ್ಲೋಕದಲ್ಲಿ ಚುಟುಕಾಗಿ ಬಿಂಬಿತಗೊಂಡಿದೆ.
     ಈ ವೇದಮ್ರಂತ್ರದ ಆಶಯವೂ ಇದೇ ಆಗಿದೆ: ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ಂ ಶೃಣುಯಾಮ ಶರದಃ ಶತಂ ಪ್ರಬ್ರವಾಮ ಶರದಃ ಶತಮದೀನಾಃ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್|| (ಯಜು.೩೬.೨೪.) ಅರ್ಥ: ಆ ಪರಮಾತ್ಮನ ಕೃಪೆಯಿಂದ ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ನೋಡುತ್ತಿರೋಣ, ನೂರು ವರ್ಷಗಳ ಕಾಲ (ಒಳ್ಳೆಯ ರೀತಿಯಲ್ಲಿ) ಜೀವಿಸೋಣ, ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ಕೇಳುತ್ತಿರೋಣ, ನೂರು ವರ್ಷಗಳ ಕಾಲ ದಾಸ್ಯತನಕ್ಕೆ ಒಳಪಡದೆ ಸ್ವತಂತ್ರರಾಗಿ, ಸ್ವಾಭಿಮಾನಿಗಳಾಗಿ ಬಾಳೋಣ ಮತ್ತು ಈ ರೀತಿಯಾಗಿ ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸೋಣ.
     ಮನುಷ್ಯ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳ ಮಿಶ್ರಣವಾಗಿದ್ದಾನೆ. ನಾವು ಸೇವಿಸುವ ಆಹಾರಕ್ಕೆ ತಕ್ಕಂತೆ ನಮ್ಮ ಸ್ವಬಾವ ರೂಪಿತವಾಗುತ್ತದೆ. ಇಲ್ಲಿ ಆಹಾರವೆಂದರೆ ಕೇವಲ ತಿನ್ನುವುದು ಮಾತ್ರವಲ್ಲ, ನೋಡುವುದು, ಕೇಳುವುದು, ಆಡುವುದು, ಸ್ಪರ್ಷಿಸುವುದು, ಇತ್ಯಾದಿಗಳೂ ಸೇರುತ್ತವೆ. ನಾವು ಒಳ್ಳೆಯವರಾಗುವುದು ಅಥವ ಕೆಟ್ಟವರಾಗುವುದು, ಅರ್ಥಾತ್ ಸಮಾಜಕ್ಕೆ ಕಂಟಕರಾಗುವುದು ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ ಮತ್ತು ಅದು ನಮ್ಮ ಕೈಯಲ್ಲೇ ಇದೆ. ವಿಚಾರ ಮಾಡೋಣ.
-ಕ.ವೆಂ.ನಾಗರಾಜ್.


ಶನಿವಾರ, ಆಗಸ್ಟ್ 26, 2017

ಮಾನಸಿಕ ಬಲ ನೀಡು, ಪ್ರಭುವೇ!


     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ನನ್ನ ದೃಷ್ಟಿಯಲ್ಲಿ ಇದು ಸರಿ. ಹೀಗೆ ಮಾಡುವುದರಿಂದ ನನಗೆ ಸಂತೋಷವಾಗುತ್ತದೆ, ಸುಖ ಕಾಣುತ್ತದೆ' ಎಂದು ತಮ್ಮ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳುವವರು ಹೇಳುವುದನ್ನು ಕೇಳಿರಬಹುದು. ಈ ಸುಖ ಅಂದರೆ ಏನು?  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕುಣಿದರೆ/ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ಈ ಮನಸ್ಸು ಅತಿ ವಿಚಿತ್ರ, ಅತಿ ಚಂಚಲ. 'ಕುಡಿಯಬೇಡ, ಒಳ್ಳೆಯದಲ್ಲ' ಎಂದು ಹೇಳುವ ಮನಸ್ಸು, 'ಎಷ್ಟು ದಿವಸ ಇರುತ್ತೀಯಾ? ಇರುವವರೆಗೆ ಕುಡಿದು, ಕುಣಿದು ಮಜಾ ಮಾಡು' ಎಂತಲೂ ಹೇಳುತ್ತದೆ. ಏನು ಮಾಡಬೇಕೆಂದು ತೋಚದಿದ್ದಾಗ, 'ಈ ಸಲ ಮಾಡಿಬಿಡು, ಮುಂದೆ ಮಾಡದಿದ್ದರೆ ಆಯಿತು' ಎಂದು ಮಧ್ಯಮ ಮಾರ್ಗ ತೋರಿಸುವುದೂ ಈ ಮನಸ್ಸೇ! ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ ನಾನು ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ ತಗಳೂ ಇಲ್ಲ. ವಿವಿಧ ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು ನಾನು ಏಳುತ್ತದೆ. ಆ ನಾನುಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ ಅವನು ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಬೇಕಾದ ಅಂತಹ ಕೆಲಸಗಳಿಗೆ ನಾಚಿಕೊಳ್ಳಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
     ಮನಸ್ಸಿನ ನಿಯಂತ್ರಣದ ಕುರಿತು ಎಲ್ಲರೂ ಮಾತನಾಡುತ್ತೇವೆ, ಅದರ ಅಗತ್ಯವನ್ನೂ ತಿಳಿದಿದ್ದೇವೆ. ಅದನ್ನು ಸಾಧಿಸುವುದಾದರೂ ಹೇಗೆ? ಸಹಾಯ ಮಾಡುವವರಾದರೂ ಯಾರು? ಈ ವಿಷಯದಲ್ಲಿ ಸಹಾಯಕ್ಕೆ ಬರುವವರೆಂದರೆ ಯಾರು ಸ್ವತಃ ತಮ್ಮ ಮನಸ್ಸನ್ನು ನಿಯಂತ್ರಿಸಿಕೊಂಡಿರುತ್ತಾರೋ ಅವರು ಮಾತ್ರ! ಮನಸ್ಸಿನ ನಿಯಂತ್ರಣ ಒಂದು ಅಂತರಂಗದ ಆಟ. ಈ ಅಟದಲ್ಲಿ ನಾವು ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ, ಕೆಲವೊಮ್ಮೆ ಎಡವುತ್ತೇವೆ. ಈ ಆಟ ಆಡಲು ಚತುರತೆ, ಎಚ್ಚರಿಕೆ, ಹೃದಯದ ಶ್ರೀಮಂತಿಕೆ, ಯೋಜಿಸುವ ಸಾಮರ್ಥ್ಯ, ತಾಳ್ಮೆ, ಸಹನೆ, ಇತ್ಯಾದಿಗಳೆಲ್ಲವೂ ಇರಬೇಕಾಗುತ್ತದೆ. ಗೆದ್ದಾಗ ಮೈಮರೆಯದೆ, ಸೋತಾಗ ಕುಗ್ಗದೆ ಇರುವ ಮನೋಭಾವವಿರಬೇಕಾಗುತ್ತದೆ.
     ಭಗವದ್ಗೀತೆಯಲ್ಲಿನ ಕರ್ಮಯೋಗದಲ್ಲಿನ ಅರ್ಜುನ ಶ್ರೀಕೃಷ್ಣನಿಗೆ ಕೇಳುವ ಈ ಪ್ರಶ್ನೆ ನಮ್ಮಂತಹ ಸಾಮಾನ್ಯರ ಪ್ರಶ್ನೆಯೂ ಆಗಿದೆ: "ಅಥಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ | ಅನಿಚ್ಛನ್ನಪಿ ವಾರ್ಷ್ಣೇಯ ಬಲಾರ್ದಿವ ನಿಯೋಜಿತಃ || "(೩.೩೬) - 'ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮಾಡಲ್ಪಡುವವನಂತೆ ಮನುಷ್ಯನು ಪಾಪವನ್ನು ಮಾಡಲು ಇರುವ ಪ್ರೇರಣೆಯಾದರೂ ಎಂತಹುದು?' ಎಂಬ ಅರ್ಜುನನ ಈ ಪ್ರಶ್ನೆ ಮಹತ್ವದ್ದಾಗಿದೆ. ಕುಡಿಯುವುದು ಕೆಟ್ಟದ್ದು ಎಂದು ಸ್ವತಃ ಕುಡುಕನಿಗೇ ಗೊತ್ತಿದ್ದರೂ ಆತ ಏಕೆ ಕುಡಿಯುತ್ತಾನೆ? ಎಂದು ಕೇಳಿದಂತೆ ಈ ಪ್ರಶ್ನೆ ಇದೆ. ಶ್ರೀಕೃಷ್ಣ ಈ ಪ್ರಶ್ನೆಗೆ ಕೊಟ್ಟ ಉತ್ತರ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಆತ ಹೇಳುತ್ತಾನೆ, "ಕಾಮ, ಕ್ರೋಧಗಳು ರಜೋಗುಣದಿಂದ ಹುಟ್ಟಿದ್ದು ಇವುಗಳನ್ನು ತೃಪ್ತಿಗೊಳಿಸಲಾಗದು. ಹೊಗೆಯಿಂದ ಬೆಂಕಿ, ಧೂಳಿನಿಂದ ಕನ್ನಡಿ ಮುಚ್ಚಿ ಹೋಗುವಂತೆ ಈ ಪ್ರಪಂಚ ಕಾಮ-ಕ್ರೋಧಗಳಿಂದ ಮುಚ್ಚಿಹೋಗಿದೆ. ಇಂದ್ರಿಯಗಳು, ಬುದ್ಧಿ, ಮನಸ್ಸು ಇವುಗಳು ಕಾಮದ ನೆಲೆವೀಡುಗಳು. ಆದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಿ, ಜ್ಞಾನ-ವಿಜ್ಞಾನಗಳನ್ನು ನಾಶ ಮಾಡುವ ಕಾಮವನ್ನು ಹತ್ತಿಕ್ಕಬೇಕು". ಮುಂದುವರೆದು ಹೇಳುತ್ತಾನೆ: "ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ | ಮನಸಸ್ತು ಪರಾ ಬುದ್ಧರ್ಯೋ ಬುದ್ಧೇಃ ಪರತಸ್ತು ಸಃ ||" (೩.೪೨) - "ವಿಷಯಗಳಿಗಿಂತ ಇಂದ್ರಿಯಗಳು ಹೆಚ್ಚಿನವು, ಇಂದ್ರಿಯಗಳಿಗಿಂತ ಮನಸ್ಸು ಹೆಚ್ಚಿನದು, ಬುದ್ಧಿಯು ಮನಸ್ಸಿಗಿಂತ ಹೆಚ್ಚಿನದು. ಈ ಬುದ್ಧಿಗಿಂತಲೂ ಆತ್ಮ ಶ್ರೇಷ್ಠವಾದುದು". ಆತ್ಮ ಜ್ಞಾನವನ್ನು ಅರಿಯುವ ಅಂತರಂಗದ ಆಟ ಆಡಲು ತೊಡಗಿದಾಗ, ಆ ಆಟದಲ್ಲಿ ತನ್ಮಯತೆಯಿಂದ ತೊಡಗಿಕೊಂಡಾಗ ಇದರ ಸತ್ಯಾಸತ್ಯತೆ ಅರಿವು ಗೊತ್ತಾಗುತ್ತಾ ಹೋಗುತ್ತದೆ. ಈ ಅಟದಲ್ಲಿ ಗೆಲ್ಲಬೇಕೆಂದರೆ ಮೊದಲು ಮನಸ್ಸನ್ನು ನಿಯಂತ್ರಿಸಬೇಕೆಂಬ ಧೃಡವಾದ ಸಂಕಲ್ಪ ಹೊಂದಬೇಕು, ಮನಸ್ಸಿನ ಸ್ವಭಾವವನ್ನು ಅರಿಯಬೇಕು ಮತ್ತು ಅದಕ್ಕಾಗಿ ನಮ್ಮದೇ ಆದ ತಂತ್ರಗಳು, ರೀತಿ-ನೀತಿಗಳನ್ನು ರೂಪಿಸಿಕೊಂಡು ಅವುಗಳನ್ನು ಬುದ್ದಿವಂತಿಕೆಯಿಂದ, ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. 'ಚಪಳೆ ಸೊಡರ ಕುಡಿಯಂ ಪೋಲ್ವಳ್' ಎಂದು ಲಕ್ಷ್ಮಿ(ಸಂಪತ್ತು)ಯನ್ನು ಕುರಿತು ಕವಿ ವರ್ಣಿಸುತ್ತಾನೆ. ಆದರೆ, ನಮ್ಮ ಮನಸ್ಸು ಅನ್ನುವುದಿದೆಯಲ್ಲಾ, ಅದರ ಚಂಚಲತೆಯನ್ನು ಮೀರಿಸುವ ಮತ್ತೊಂದು ಸಂಗತಿ ಜಗತ್ತಿನಲ್ಲಿ ಇದೆಯೇ? ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ.
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
-ಕ.ವೆಂ.ನಾಗರಾಜ್.

ಬುಧವಾರ, ಆಗಸ್ಟ್ 16, 2017

ನಮ್ಮ ದೇವಸ್ಥಾನ


     ದೇವಸ್ಥಾನ, ಮಠ, ಚರ್ಚು, ಮಸೀದಿ ಇತ್ಯಾದಿಗಳ ಮೂಲ ಉದ್ದೇಶವಾದರೂ ಏನಿರಬಹುದು? ದೇವಸ್ಥಾನವೆಂದರೆ ದೇವರು ಇರುವ ಸ್ಥಳ ಎಂಬ ಕಲ್ಪನೆಗೆ ಹೆಚ್ಚು ಒತ್ತು ಬಂದಿರುವುದು ಎಷ್ಟು ಸರಿ? ವೇದಕಾಲ ಎಂದು ಪರಿಗಣಿಸುವ ಸಮಯದ ಆರಂಭದಲ್ಲಿ ದೇವಸ್ಥಾನಗಳಿರಲಿಲ್ಲ. ಆಗ ದೇವರಿಗೆ ಯಜ್ಞ, ಹೋಮ, ಹವನಗಳನ್ನು ಮಾಡುತ್ತಾ ಅಗ್ನಿಯ ಮೂಲಕವಾಗಿ ಹವಿಸ್ಸು ಅರ್ಪಿಸುವುದು ಸಾಮಾನ್ಯವಾದ ಕ್ರಮವಾಗಿತ್ತು. ಈಗಲೂ ಈ ಕ್ರಿಯೆಗಳು ನಡೆಯುತ್ತಿವೆ. ಬೌದ್ಧಧರ್ಮದ ಉಗಮದ ಸಂದರ್ಭದಲ್ಲಿ ದೇವಸ್ಥಾನಗಳ ನಿರ್ಮಾಣ, ವಿಗ್ರಹಪೂಜೆಗಳಿಗೆ ಆದ್ಯತೆ ಸಿಕ್ಕಿತು. ಅದು ಈಗ ಉಚ್ಛ್ರಾಯ ಸ್ಥಿತಿಯಲ್ಲಿದೆ. ವಿಗ್ರಹಾರಾಧನೆಯನ್ನು ಒಪ್ಪದ ಮುಸ್ಲಿಮರೂ ಮಸೀದಿಗಳನ್ನು ಕಟ್ಟುತ್ತಾರೆ. ಏಕದೇವಾರಾಧನೆ ಮಾಡುವ ಕ್ರಿಶ್ಚಿಯನರೂ ಚರ್ಚುಗಳನ್ನು ನಿರ್ಮಿಸುತ್ತಾರೆ. ಬಹುದೈವಾರಾಧಕರಾದ ಹಿಂದೂಗಳೂ ಮಂದಿರಗಳ ನಿರ್ಮಾಣ ಮಾಡುತ್ತಾರೆ. ಅವರು ಬಹುದೇವಾರಾಧಕರಾದರೂ ದೇವರು ಒಬ್ಬನೇ, ಅವನನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ ಎಂಬುದನ್ನು ಒಪ್ಪುವುದು ವಿಶೇಷವಾಗಿದೆ. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನರು ನಿರ್ಮಿಸುವ ಮಂದಿರ, ಮಸೀದಿ, ಚರ್ಚುಗಳಲ್ಲಿ  ಒಂದು ಸಮಾನವಾದ ಅಂಶವಿದೆ. ಅದೆಂದರೆ ಇವೆಲ್ಲವೂ ದೇವರನ್ನು ಆರಾಧಿಸುವ ಸ್ಥಳಗಳಾಗಿರುವುದು.
     ದೇವಾಲಯಗಳೆಂದರೆ ದೇವರು ವಾಸಿಸುವ ಸ್ಥಳ ಎಂಬುದು ತಪ್ಪು ಗ್ರಹಿಕೆ. ದೇವರು ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತ ಎಂದಿರುವಾಗ ಅವನು ಒಂದು ಪುಟ್ಟ ಸ್ಥಳದಲ್ಲಿ ಮಾತ್ರ ಇರುತ್ತಾನೆ ಎಂಬುದು ಸರಿಯಲ್ಲ. ವಾಸ್ತವವಾಗಿ ದೇವಾಲಯಗಳು ಸರ್ವಶಕ್ತ ದೇವರನ್ನು ಕುರಿತು ಧ್ಯಾನಿಸುವ, ಪೂಜಿಸುವ, ಗೌರವಿಸುವ ಸ್ಥಳಗಳಷ್ಟೇ ಆಗಿವೆ. ಹಿಂದೂಗಳು ತಮ್ಮ ಮನೆಗಳಲ್ಲಿಯೂ ದೇವರನ್ನು ಆರಾಧಿಸಲು ಒಂದು ಸ್ಥಳವನ್ನು ನಿಗದಿಸಿ ಭಕ್ತಿಭಾವನೆಗಳಿಂದ ನಡೆದುಕೊಳ್ಳುತ್ತಾರೆ. ದೇವರ ವಿಗ್ರಹ, ಫೋಟೋಗಳನ್ನಿಟ್ಟು ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುತ್ತಾರೆ. ಪೂಜೆ ಮಾಡುತ್ತಾರೆ. ಮುಸ್ಲಿಮರು ಮತ್ತು ಕ್ರಿಶ್ಚಿಯನರು ನಿಗದಿತ ಅವಧಿ, ದಿನಗಳಲ್ಲಿ ಮಸೀದಿ, ಚರ್ಚುಗಳಿಗೆ ಭೇಟಿ ಕೊಡುವುದು ಕಡ್ಡಾಯವಾಗಿರುವಂತೆ, ಹಿಂದೂಗಳಿಗೆ ಅಂತಹ ಕಡ್ಡಾಯ ಸಂಪ್ರದಾಯಗಳಿಲ್ಲ. ಅವರು ಮನೆಯಲ್ಲೇ ಪೂಜೆ, ಪುನಸ್ಕಾರಗಳನ್ನು ಸಲ್ಲಿಸುತ್ತಾರೆ ಮತ್ತು ವಿಶೇಷ ಹಬ್ಬ, ಹರಿದಿನ, ಶುಭ ಸಂದರ್ಭಗಳಲ್ಲಿ ದೇವಸ್ಥಾನಗಳಿಗೆ ಹೋಗುತ್ತಾರೆ. ನಿಯಮಿತವಾಗಿ ದೇವಸ್ಥಾನಗಳಿಗೆ ಜನರು ಬರಲೆಂಬ ಕಾರಣದಿಂದ ದೇವಸ್ಥಾನಗಳಲ್ಲಿ ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ ಇತ್ಯಾದಿ ಏರ್ಪಡಿಸುವುದು ಈಗ ರೂಢಿಯಾಗಿ, ಸಂಪ್ರದಾಯವಾಗಿ ಬೆಳೆದುಬರುತ್ತಿದೆ.
     ದೇವಸ್ಥಾನಗಳು ಜನರು ಒಂದೆಡೆ ಸೇರುವ, ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳುವ ಕೇಂದ್ರಗಳಾಗಿ ರೂಪುಗೊಳ್ಳುತ್ತಾ ಹೋದವು. ಪ್ರಾರಂಭದಲ್ಲಿ ಸಾಮಾನ್ಯವಾಗಿ ಊರಿನ ಪ್ರಧಾನ ಸ್ಥಳಗಳಲ್ಲಿ, ವಿಶೇಷವಾಗಿ ನದಿತಟಗಳಲ್ಲಿ, ಬೆಟ್ಟ-ಗಡ್ಡಗಳ ಮೇಲ್ಭಾಗದಲ್ಲಿ, ಸಮುದ್ರದ ದಡದ ಹತ್ತಿರದಲ್ಲಿ ನಿರ್ಮಿಸಲ್ಪಟ್ಟಿರುವುದನ್ನು ಗಮನಿಸಬಹುದು. ಈಗಂತೂ ಎಲ್ಲೆಂದರೆ ಅಲ್ಲಿ ಮಂದಿರ, ಮಸೀದಿ, ಚರ್ಚುಗಳು ತಲೆಯೆತ್ತುತ್ತಿವೆ. ರಸ್ತೆ ಬದಿಗಳಲ್ಲಿ, ಗಿಡಮರಗಳ ಕೆಳಗೆ, ಹೊಸ ಬಡಾವಣೆಗಳಲ್ಲಿ, ಪ್ರತಿ ಬಡಾವಣೆ, ಮೊಹಲ್ಲಾಗಳಲ್ಲಿ ಈ ಕಟ್ಟಡಗಳಿವೆ. ಜನರಿಗೆ ದೇವರ ಮೇಲಿನ ಭಕ್ತಿ ಜಾಸ್ತಿಯಾಯಿತೋ ಎಂಬಂತೆ ಪೈಪೋಟಿಯಲ್ಲಿ ಮಂದಿರ, ಮಸೀದಿ, ಚರ್ಚುಗಳು ನಿರ್ಮಾಣವಾಗುತ್ತಿವೆ. ಹಲವು ಸಲ ಇವು ಶಾಂತಿ, ಸೌಹಾರ್ದಗಳ ಕದಡುವಿಕೆಗೂ ಕಾರಣವಾಗಿವೆ.
     ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಮುಖವಾಗಿ ೬ ಭಾಗಗಳನ್ನು ಗುರುತಿಸಬಹುದು. ಗೋಪುರ, ಗರ್ಭಗೃಹ, ಪ್ರಾಂಗಣ, ಮುಂಭಾಗ, ಪ್ರದಕ್ಷಿಣೆ ಬರುವ ಸ್ಥಳ ಮತ್ತು ಕಲ್ಯಾಣಿ - ಇವೇ ಆ ಆರು ಭಾಗಗಳು. ಗೋಪುರಗಳು ಸಾಮಾನ್ಯವಾಗಿ ದೇವಸ್ಥಾನದ ವಿಸ್ತೀರ್ಣವನ್ನು ಅವಲಂಬಿಸಿ ಕೆತ್ತನೆಯ ಶಿಲ್ಪಗಳನ್ನು ಒಳಗೊಂಡಂತೆ ಎತ್ತರವಾಗಿರುತ್ತವೆ. ಗರ್ಭಗೃಹಗಳಲ್ಲಿ ದೇವರ ವಿಗ್ರಹ, ಮೂರ್ತಿಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಇಲ್ಲಿಗೆ ಸಾಮಾನ್ಯವಾಗಿ ಅರ್ಚಕರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶವಿರುವುದಿಲ್ಲ. ಗರ್ಭಗೃಹದ ಮುಂದಿನ ಸಭಾಂಗಣದಲ್ಲಿ ಜನರು ದೇವರಿಗೆ ಸಲ್ಲುವ ಪೂಜೆ, ಇತ್ಯಾದಿಗಳನ್ನು ವೀಕ್ಷಿಸಬಹುದಾಗಿರುತ್ತದೆ. ಗರ್ಭಗುಡಿಯ ಸುತ್ತಲೂ ಮತ್ತು ದೇವಸ್ಥಾನದ ಹೊರಭಾಗದಲ್ಲೂ ಅವಕಾಶವಿದ್ದರೆ ಭಕ್ತರು ಪ್ರದಕ್ಷಿಣೆ ಮಾಡುವ ಮಾರ್ಗವಿರುತ್ತದೆ. ಸಮೀಪದಲ್ಲಿ ಒಂದು ನೀರಿನ ಕೊಳ(ಕಲ್ಯಾಣಿ) ಇರುತ್ತದೆ. ಅಲ್ಲಿಯ ನೀರನ್ನು ದೇವಸ್ಥಾನದಲ್ಲಿ ಪೂಜೆಗೆ ಮತ್ತು ಸ್ವಚ್ಛತೆಯ ಸಲುವಾಗಿ ಬಳಸಿಕೊಳ್ಳುತ್ತಾರೆ. ಈಗ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನಿರ್ಮಾಣವಾಗುತ್ತಿರುವ ಮಂದಿರಗಳಲ್ಲಿ ಇವೆಲ್ಲವೂ ಇರುತ್ತದೆ ಎನ್ನಲಾಗುವದಿಲ್ಲ.
     ಮಾನವನ ಉತ್ಕರ್ಷದಲ್ಲಿ ಜ್ಞಾನ, ಕರ್ಮ, ಉಪಾಸನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಉಪಾಸನೆ ಅರ್ಥಾತ್ ದೇವರ ಕುರಿತ ಅರಿವು, ಚಿಂತನೆ, ಧ್ಯಾನಗಳಿಗಾಗಿ ದೇವಸ್ಥಾನಗಳು ಆಶ್ರಯತಾಣಗಳಾಗಬೇಕು. ಏಕಾಂತದ ಸ್ಥಳಗಳು, ಪ್ರಶಾಂತವಾದ ಪರಿಸರ ಉಪಾಸನೆಗೆ ಸೂಕ್ತ. ಮನೆಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಇಂತಹ ವಾತಾವರಣ ಸಿಗಲಾರದಾಗಿದ್ದು ದೇವಸ್ಥಾನಗಳಲ್ಲಾದರೂ ಇದಕ್ಕೆ ಅವಕಾಶವಿರಬೇಕು. ಇಂದು ದೇವಸ್ಥಾನಗಳು ವ್ಯಾವಹಾರಿಕ ಕೇಂದ್ರಗಳಂತೆ ಆಗಿವೆ. ಪ್ರವೇಶಕ್ಕೆ ಹಣ, ಹಣ್ಣು-ಕಾಯಿ ನೈವೇದ್ಯಕ್ಕೆ ಹಣ, ವಿವಿಧ ರೀತಿಯ ಪೂಜೆಗಳಿಗೆ ವಿವಿಧ ರೀತಿಯ ಶುಲ್ಕಗಳನ್ನು ನಿಗದಿಸಿ ಫಲಕಗಳನ್ನು ಪ್ರದರ್ಶಿಸಿರುತ್ತಾರೆ. ದೇವಸ್ಥಾನಗಳ ನಿರ್ವಹಣೆಗೆ. ಅರ್ಚಕರ ಮತ್ತು ಇತರ ಪರಿಚಾರಕರ ಸಂಬಳ, ಇತ್ಯಾದಿಗಳಿಗಾಗಿ ಇದು ಅಗತ್ಯವಿರಬಹುದು. ಕೋಟಿಗಟ್ಟಲೆ ಆದಾಯವಿರುವ ಶ್ರೀಮಂತ ದೇವಸ್ಥಾನಗಳು ಇರುವಂತೆ, ದೇವರಿಗೆ ದೀಪ ಹಚ್ಚಲು ಎಣ್ಣೆಗೂ ಕಷ್ಟವಿರುವ ದೇವಸ್ಥಾನಗಳೂ ಇವೆ. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಜನರು ಶ್ರೀಮಂತ ದೇವಸ್ಥಾನಗಳನ್ನೇ ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ. ಅಲ್ಲಿ ಸೇರುವ ಜನರ ಗಿಜಿ ಗಿಜಿ, ನೂಕುನುಗ್ಗಲುಗಳನ್ನು ನೋಡಿದರೆ ವ್ಯವಧಾನದಿಂದ ದೇವರಿಗೆ ಕೈಮುಗಿಯುವುದೂ ಕಷ್ಟವಾಗಿರುತ್ತದೆ. ಆದರೂ ಜನರು ಅಂತಹ ದೇವಸ್ಥಾನಗಳಿಗೆ ಹೋಗಿ ಧನ್ಯರಾದೆವೆಂದುಕೊಳ್ಳುತ್ತಾರೆ.
     ಉಪಾಸನೆಗೆ ನೆರವಾಗಬೇಕಾದ ಹೆಚ್ಚಿನ ದೇವಾಲಯಗಳು ಜನರನ್ನು ಆಧ್ಯಾತ್ಮಿಕತೆಗೆ ಪ್ರೇರಿಸುವ ಬದಲಿಗೆ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದರೆ ಸಾಕು, ಒಳ್ಳೆಯದಾಗುತ್ತದೆ ಎಂಬುದಕ್ಕೆ ಒತ್ತು ಕೊಡುತ್ತಿವೆ. ಕರ್ಮ ಸಿದ್ಧಾಂತಕ್ಕೆ, ವೇದದ ಆಶಯಗಳಿಗೆ ಇದು ವಿರುದ್ಧವಾಗಿದೆ. 'ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ| ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ||'  (ಅಥರ್ವ.೧೨.೩.೪೮) ದೇವರ ನ್ಯಾಯವಿಧಾನದಲ್ಲಿ ಯಾವ ದೋಷವೂ ಇಲ್ಲ. ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ಒಡಕಿಲ್ಲದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ಮಾಡಿದ್ದುಣ್ಣೋ ಮಹರಾಯ! ನಮಗೆ ಒಳ್ಳೆಯದಾಗಬೇಕೆಂದರೆ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕಷ್ಟೆ! ಹಲವರ ತಲೆ ಒಡೆದು ಅನ್ಯಾಯ ಮಾರ್ಗದಲ್ಲಿ ಹಣ ಸಂಪಾದಿಸಿ ದೇವರ ವಿಗ್ರಹಕ್ಕೆ ಚಿನ್ನದ ಆಭರಣಗಳನ್ನು ಮಾಡಿಸಿಕೊಟ್ಟರೆ ಪಾಪ ಪರಿಹಾರವಾಗುವುದಾದರೆ ಎಲ್ಲರೂ ಈ ಮಾರ್ಗವನ್ನೇ ಆರಿಸಿಕೊಂಡಾರು!
     ಭಕ್ತಿ, ಪೂಜೆ ಇತ್ಯಾದಿ ಹೆಸರುಗಳಿರುವ ಉಪಾಸನೆಯ ಉದ್ದೇಶವೆಂದರೆ ಮಾನವ ತನ್ನ ಚಿತ್ತವನ್ನು ಬಾಹ್ಯ ವಿಷಯಗಳಿಂದ ಹೊರತಂದು, ಏಕಾಗ್ರಗೊಳಿಸಿ ದೇವರ ಸಾಮೀಪ್ಯವನ್ನು ಅನುಭವಿಸಿ ಸಿಗುವ ಆನಂದವನ್ನು ಪಡೆಯುವ ಕ್ರಿಯೆಯಾಗಿದೆ. ಇದಕ್ಕೆ ತಕ್ಕಂತೆ ದೇವಾಲಯಗಳಲ್ಲಿ ಧ್ಯಾನ ಮಾಡಲು ಅವಕಾಶವಿರುವ ಧ್ಯಾನಮಂದಿರಗಳು, ಕುಟೀರಗಳ ಅಗತ್ಯವಿರುತ್ತದೆ. ಗೌಜು, ಗದ್ದಲಗಳಿಗಿಂತ ಶಾಂತತೆ, ನಿಶ್ಶಬ್ದತೆಗಳಿಗೆ ಆದ್ಯತೆ ಇರಬೇಕು. ವೇದಮಂತ್ರಗಳು, ಧಾರ್ಮಿಕ ಗ್ರಂಥಗಳ ಅಧ್ಯಯನ, ಕಲಿಕೆ, ಚಿಂತನ, ಮಂಥನಗಳಿಗೆ ಅವಕಾಶ ಮಾಡಿಕೊಡಬೇಕಿರುತ್ತದೆ. ಈ ತತ್ವ ಚರ್ಚು, ಮಸೀದಿಗಳಿಗೂ ಅನ್ವಯವಾಗುತ್ತದೆ. ಬೈಬಲ್ಲು, ಕುರಾನುಗಳ ಅಧ್ಯಯನಕ್ಕೆ ಅಲ್ಲಿ ಆದ್ಯತೆ ಸಿಗಬೇಕಿರುತ್ತದೆ. ನಾವು ತಿರುಳನ್ನು ಅವಗಣಿಸಿ, ಸಿಪ್ಪೆಗೆ ಮಹತ್ವ ಕೊಡುತ್ತಿದ್ದೇವೆ. ತಿರುಳಿನ ರಕ್ಷಣೆಗೆ ಸಿಪ್ಪೆ ಇರಬೇಕು, ಆದರೆ ಸಿಪ್ಪೆಯೇ ಪ್ರಧಾನವಾಗಬಾರದು. ದೇವಾಲಯಗಳು ಸಾಧನಾಪಥದ ಮೆಟ್ಟಲುಗಳೇ ಹೊರತು ಅವೇ ಗಮ್ಯವಲ್ಲ. ಬಸವಣ್ಣನವರು ಹೇಳಿದಂತೆ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ ಎಂಬುದರ ಒಳಾರ್ಥವೂ ಇದೇ ಆಗಿದೆ. ಪರಮಾತ್ಮನ ನಿರ್ಮಿತಿಯಾದ ಜೀವಿಯ ಶರೀರವೆಂಬ ನವರಸಗಳ ದೇಗುಲವನ್ನು ಸ್ವಚ್ಛ, ಸುಂದರವಾಗಿರಿಸಿಕೊಂಡರೆ ಅಲ್ಲಿ ಸ್ವತಃ ಪರಮಾತ್ಮನೇ ಬಂದು ನೆಲೆಸುತ್ತಾನೆ. ಹೀಗಾದಾಗ ಹೊರಗಿನ ದೇವಾಲಯಗಳ ಅವಶ್ಯಕತೆ ಬರುವುದಿಲ್ಲ.
-ಕ.ವೆಂ.ನಾಗರಾಜ್.


ಭಾನುವಾರ, ಆಗಸ್ಟ್ 13, 2017

ಪ್ರಜ್ಞಾಚಕ್ಷು ವಿರಜಾನಂದರು


      ಮಹರ್ಷಿ ದಯಾನಂದ ಸರಸ್ವತಿಯವರನ್ನು ಜಗತ್ತಿಗೆ ಪರಿಚಯಿಸಿದ ವಿರಜಾನಂದರು ಹುಟ್ಟು ಕುರುಡರು. ಪಂಜಾಬಿನ ಕರ್ತಾರಪುರದಲ್ಲಿ ಕ್ರಿ.ಶ. 1778ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲೇ ತಂದೆ-ತಾಯಿಯವರನ್ನು ಕಳೆದುಕೊಂಡಿದ್ದರು. ಅವರ ಅತ್ತಿಗೆ, ಅಣ್ಣ ಈ ಕುರುಡನನ್ನು ಏಕೆ ಈ ಶನಿ ನಮಗೆ ಗಂಟು ಬಿದ್ದಿತೋ, ಎಲ್ಲಾದರೂ ತೊಲಗಿಹೋಗಬಾರದೇ ಎಂದು ಪ್ರತಿನಿತ್ಯ ಹಂಗಿಸುತ್ತಿದ್ದರು. ಇಂತಹ ಬಯ್ಗಳವನ್ನು ಸಹಿಸುವುದು ಕಷ್ಟವೆಂಬ ಸ್ಥಿತಿಗೆ ತಲುಪಿದ ಆ ಬಾಲಕ ಒಂದು ದಿನ ಮನೆಯಿಂದ ಹೊರಟೇಬಿಟ್ಟಾಗ ಅವನಿಗೆ ಕೇವಲ ಎಂಟು ವರ್ಷ. ಒಂದು ಕೈಯಲ್ಲಿ ಕೋಲು ಹಿಡಿದುಕೊಂಡು ನಡೆದೇ ನಡೆದ. ಈಗಿನಂತೆ ರಸ್ತೆಗಳಿಲ್ಲದ, ಕಾಡು-ಮೇಡುಗಳಿಂದ ಕೂಡಿದ ಪ್ರದೇಶಗಳಲ್ಲಿ ತಡವರಿಸಿ ನಡೆಯುತ್ತಾ ಸುಮಾರು 2000 ಮೈಲುಗಳಷ್ಟು ದೂರ ಕ್ರಮಿಸಿ ಆತ ತಲುಪಿದ್ದು ಹರಿದ್ವಾರ ಎಂದರೆ ಊಹಿಸುವುದೂ ಕಷ್ಟವಾಗುತ್ತದೆ.   ಕಣ್ಣಿರುವವರು, ಧೃಢಕಾಯರೂ ಆ ರೀತಿ ಕ್ರಮಿಸಲು ಹಿಂಜರಿಯುವ ಕಾಲವದು. ಅಂಧ ಬಾಲಕ ಅದನ್ನು ಮಾಡಿದ್ದೇ ಒಂದು ದೊಡ್ಡ ಕೆಲಸ. ಆತನ ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಆತನ ಬುದ್ಧಿ ಎಷ್ಟು ತೀಕ್ಷ್ಣವೆಂದರೆ, ಕೃಷ್ಣಶಾಸ್ತ್ರಿ ಅನ್ನುವವರು ಗಂಗಾನದಿಯಲ್ಲಿ ನಿಂತುಕೊಂಡು ಋಗ್ವೇದ ಹೇಳುತ್ತಿದ್ದುದನ್ನು ಕೇಳುತ್ತಾ ನಿಂತಿದ್ದ ಅವರು ಕೇಳಿದರು, ಶಾಸ್ತ್ರಿಗಳೇ, ಇನ್ನೊಂದು ಒಂದು ಸಲ ಹೇಳಿ. ಅವರು ಹೇಳಿದರು.  ಇವರು ಸ್ವಲ್ಪವೂ ಮರೆಯದೆ ಕಲಿತರು. ಅದ್ಭುತ ಗ್ರಹಣ ಶಕ್ತಿಯಿಂದಾಗಿ ಒಂದು ಸಲ ಕೇಳಿದರೆ ಸಾಕು, ಅದು ಅವರಿಗೆ ಮನದಟ್ಟಾಗಿಬಿಡುತ್ತಿತ್ತು. ನಂತರದಲ್ಲಿ ಹೆಸರಾಂತ ಸಂಸ್ಕೃತ ವಿದ್ವಾಂಸರಾಗಿದ್ದ ಸ್ವಾಮಿ ಪೂರ್ಣಾನಂದರ ಶಿಷ್ಯರಾಗಿ ಪುರಾತನ ಋಷಿ-ಮುನಿಗಳು ರಚಿಸಿದ ಸಾಹಿತ್ಯ, ಸಂಸ್ಕೃತ ವ್ಯಾಕರಣ, ನಿರುಕ್ತ, ಮುಂತಾದುವನ್ನು ಕಲಿತರು ಎಂದು ಹೇಳುತ್ತಾರೆ. ಹಿಂದೂ ತತ್ತ್ವದರ್ಶನಗಳ ಮೂಲವಿಚಾರಗಳನ್ನು ಮನನ ಮಾಡಿಕೊಂಡರು. ಗಾಯತ್ರಿ ಮಂತ್ರವನ್ನು ವರ್ಷಗಳ ಕಾಲ ಪಠಿಸುತ್ತಿದ್ದರಿಂದ ಪ್ರಾಪ್ತವಾದ ದಿವ್ಯದೃಷ್ಟಿಯಿಂದ ಅವರಿಗೆ ಆಧ್ಯಾತ್ಮಿಕ ಉನ್ನತಿ ಮತ್ತು ಮಂತ್ರಗಳಲ್ಲಿ ಸ್ವಾಮಿತ್ವ ದೊರಕಿತು ಎನ್ನಲಾಗಿದೆ. ಅದೇನೇ ಇರಲಿ, ಕುರುಡರಾಗಿದ್ದರೂ ಅವರು ನಾಲ್ಕೂ ವೇದಗಳಲ್ಲಿ ಪಾಂಡಿತ್ಯ ಹೊಂದಿದ್ದಂತೂ ನಿರ್ವಿವಾದದ ವಿಚಾರವಾಗಿತ್ತು.  ಕಣ್ಣಿರುವವರಿಗೂ ಕಷ್ಟವಾದ ಈ ಜ್ಞಾನ ವಿರಜಾನಂದರಿಗೆ ಲಭ್ಯವಾಗಿತ್ತು.
     ಮೋಕ್ಷ ಸಾಧನೆಗೆ ಮೂರ್ತಿಪೂಜೆಯ ಅಗತ್ಯವಿಲ್ಲವೆಂದು ಶಿಷ್ಯರಿಗೆ ಹೇಳುತ್ತಿದ್ದ ಅವರು ದೇವರನ್ನು ತಮ್ಮ ಸುತ್ತಮುತ್ತಲಿನಲ್ಲೇ ಎಲ್ಲಾ ಜೀವಿಗಳಲ್ಲಿ, ವಸ್ತುಗಳಲ್ಲಿ, ತಮ್ಮ ಹೃದಯಗಳಲ್ಲೇ ಕಾಣಬೇಕೆಂದು, ಕೇವಲ ದೇಗುಲಗಳಲ್ಲಿನ ವಿಗ್ರಹಗಳಲ್ಲಿ ಮಾತ್ರ ಕಾಣಲು ಪ್ರಯತ್ನಿಸಬಾರದೆಂದು ಒತ್ತಿ ಹೇಳುತ್ತಿದ್ದರು. ವಿನೋದ ಪ್ರವೃತ್ತಿಯವರಾದ ಅವರು ಒಮ್ಮೆ ಮಥುರಾ ನಗರದಲ್ಲಿ ನಡುಬೇಸಿಗೆಯ ಮಧ್ಯಾಹ್ನದಲ್ಲಿ ಕೋಲೂರಿಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ  ಒಂದು ಚಿಕ್ಕ ರಥದ ಮೇಲೆ ದೇವರ ಮೂರ್ತಿಯನ್ನು ಕೂರಿಸಿಕೊಂಡು ಭಕ್ತಾದಿಗಳು ಬರುತ್ತಿದ್ದರು. ಬಿಸಿಲು ಜೋರಾಗಿದ್ದರಿಂದ ರಥವನ್ನು ನಡುರಸ್ತೆಯಲ್ಲೇ ಬಿಟ್ಟು ಮರದ ನೆರಳಿನಲ್ಲಿ ಸುಧಾರಿಸಿಕೊಳ್ಳುತ್ತಿದ್ದರು. ಈ ಪುಣ್ಯಾತ್ಮ ಕೋಲೂರಿಕೊಂಡು ಹೋಗುತ್ತಾ ಆ ರಥದ ಮೇಲೇ ಬಿದ್ದುಬಿಟ್ಟರು. ಭಕ್ತರು ಕಿರುಚಿದರು, "ಏಯ್, ಕುರುಡಾ, ದೇವರು ಇರೋದು ಗೊತ್ತಾಗಲ್ವಾ?" ವಿರಜಾನಂದರು ನಗುತ್ತಲೇ ಹೇಳಿದ್ದರು, "ನಾನು ಕುರುಡ ಅನ್ನೋದು ಜಗತ್ತಿಗೇ ಗೊತ್ತು, ಆ ನಿಮ್ಮ ದೇವರೂ ಕುರುಡನೇ ಇರಬೇಕು, ಪಾಪ, ಮುದುಕ, ಕುರುಡ ಬರ್ತಾ ಇದಾನೆ ಅಂತ ಪಕ್ಕಕ್ಕೆ ಸರಿಯೋಕೆ ಆಗ್ತಾ ಇರಲಿಲ್ವಾ?"
     ಸಂನ್ಯಾಸಿ ದಯಾನಂದ ಸರಸ್ವತಿ ಗುರುವನ್ನು ಅರಸುತ್ತಾ ಸ್ವಾಮಿ ವಿರಜಾನಂದರ ಬಳಿಗೆ ಬಂದಾಗ ದಯಾನಂದರಿಗೆ 36 ವರ್ಷ ವಯಸ್ಸು. ಮಥುರಾದ ವಿರಜಾನಂದರ ಶಾಲೆಗೆ ಬಂದ ದಯಾನಂದರು ಬಾಗಿಲು ಬಡಿದಿದ್ದರು. ಒಳಗಿನಿಂದ ಗಂಭೀರ ಧ್ವನಿ ಕೇಳಿಬಂದಿತು, ಯಾರದು?
ದಯಾನಂದ: ಗುರುದೇವಾ, ನಾನು ನಿಮ್ಮ ಸೇವಕ. ನನ್ನನ್ನು ದಯಾನಂದ ಸರಸ್ವತಿ ಎನ್ನುತ್ತಾರೆ.
ವಿರಜಾನಂದ: ಏನು ಬೇಕು?
ದಯಾನಂದ: ಜ್ಞಾನದ ಬೆಳಕಿಗಾಗಿ ನಿಮ್ಮನ್ನು ಹುಡುಕಿಕೊಂಡು ಬಂದಿರುವೆ.
ವಿರಜಾನಂದ: ನಿನಗೆ ವ್ಯಾಕರಣ ಗೊತ್ತಿದೆಯೇ?
ದಯಾನಂದ: ನಾನು ಕೌಮುದಿ ಮತ್ತು ಸಾರಸ್ವತಗಳನ್ನು ಓದಿಕೊಂಡಿದ್ದೇನೆ.
ವಿರಜಾನಂದ: ಏನು? ಕೌಮುದಿ, ಸಾರಸ್ವತ? ಇಲ್ಲಿಂದ ಹೊರಟು ಹೋಗು. ಆ ಉಪಯೋಗವಿಲ್ಲದ ಪುಸ್ತಕಗಳನ್ನು ಯಮುನಾ ನದಿಯಲ್ಲಿ ಬಿಸಾಕು, ಆಮೇಲೆ ಬಾ.
     ಗುರುವಿನ ಆದೇಶದಂತೆ ದಯಾನಂದರು ನೇರವಾಗಿ ಯಮುನಾ ನದಿಯ ಬಳಿಗೆ ಹೋದರು. ನೂರಾರು ಮೈಲುಗಳು ದೂರ ಪ್ರಯಾಣ ಮಾಡುತ್ತಾ ಈ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ತಂದಿದ್ದ ಅವರು ಅವುಗಳ ಕುರಿತು ವ್ಯಾಮೋಹ ಇಟ್ಟುಕೊಳ್ಳದೆ ನದಿಗೆ ಎಸೆದುಬಿಟ್ಟರು ಮತ್ತು ಹಿಂತಿರುಗಿ ಬಂದು ಹೇಳಿದರು, "ಗುರುದೇವಾ, ನಿಮ್ಮ ಆದೇಶವನ್ನು ಪಾಲಿಸಿದ್ದೇನೆ". ಶಿಷ್ಯನಿಗಾಗಿ ಗುರುಗಳ ಶಾಲೆಯ ಬಾಗಿಲು ತೆರೆಯಲ್ಪಟ್ಟಿತು.
     ವಿರಜಾನಂದರು ಕೃಷ್ಣಾಜಿನದ ಮೇಲೆ ಕುಳಿತಿದ್ದರು. ಕೇವಲ ಚರ್ಮ ಮತ್ತು ಮೂಳೆಗಳು ಕಾಣುತ್ತಿದ್ದ ಕೃಷಕಾಯದ ವಿರಜಾನಂದರ ಮುಖ ತೇಜಸ್ಸಿನಿಂದ ಕೂಡಿತ್ತು. ಅವರಿಗೆ ನಮಿಸಿದ ದಯಾನಂದರ ತಲೆಯ ಮೇಲೆ ಪ್ರೀತಿಪೂರ್ವಕವಾಗಿ ಕೈಯಾಡಿಸಿದರು. ದಯಾನಂದರು ಅಂಧರಾಗಿದ್ದ ಗುರುಗಳ ಕಡೆಗೆ ಆಶ್ಚರ್ಯದಿಂದ ನೋಡಿದರು. ಕುರುಡರಾಗಿದ್ದ ಗುರುಗಳು ಒಂದು ಅಕ್ಷರವನ್ನೂ ಓದಲು ಸಾಧ್ಯವಿರಲಿಲ್ಲ. ಆದರೆ ಅವರು ಜ್ಞಾನಸಮೃದ್ಧತೆಯ ಜೀವಂತ ಪ್ರತಿರೂಪವಾಗಿದ್ದರು ಮತ್ತು ಶಿಷ್ಯರ ಎಲ್ಲಾ ಸಂದೇಹಗಳನ್ನು ವೇದಗಳ, ಎಲ್ಲಾ ಗ್ರಂಥಗಳ ಮಂತ್ರಗಳು, ಉದಾಹರಣೆಗಳೊಂದಿಗೆ ಸಾಧಾರವಾಗಿ ಪರಿಹರಿಸುತ್ತಿದ್ದರು. ಯೋಗ್ಯ ಗುರುಗಳಿಗಾಗಿ 15 ವರ್ಷಗಳಿಂದ ನಡೆಸಿದ್ದ ದಯಾನಂದರ ಹುಡುಕಾಟ ಕೊನೆಗೊಂಡಿತ್ತು. ದಯಾನಂದರ ಅರ್ಪಣಾ ಮನೋಭಾವ, ಕಲಿಯುವ ಆಸಕ್ತಿಗಳು ಅವರನ್ನು ಗುರುವಿನ ಮೆಚ್ಚಿನ ಶಿಷ್ಯರನ್ನಾಗಿಸಿದವು. ದಯಾನಂದರು ಪ್ರತಿದಿನ ಬೆಳಿಗ್ಗೆ ಚಳಿಯಿರಲಿ, ಬಿಸಿಲಿರಲಿ, ಮಳೆಯಿರಲಿ ಯಮುನಾ ನದಿಯಿಂದ ಗುರುಗಳ ಸ್ನಾನಕ್ಕೆ ಮತ್ತು ಇತರ ಉಪಯೋಗಗಳಿಗಾಗಿ ನೀರು ಹೊತ್ತು ತರುತ್ತಿದ್ದರು. ನೆಲವನ್ನು ಗುಡಿಸಿ, ಸಾರಿಸುವ ಕೆಲಸವೂ ಅವರದೇ ಆಗಿತ್ತು. ಯಾವುದೇ ಕೆಲಸವನ್ನೂ ಅಳುಕಿಲ್ಲದೆ, ಹಿಂಜರಿಯದೆ ಮಾಡುತ್ತಿದ್ದ ಅವರನ್ನು ಕಂಡರೆ ಗುರುವಿಗೆ ವಿಶೇಷ ಅಕ್ಕರೆಯಿತ್ತು.
     ಒಮ್ಮೆ ವಿರಜಾನಂದರಿಗೆ ಯಾವುದೋ ಕಾರಣಕ್ಕೆ ದಯಾನಂದರ ಮೇಲೆ ಸಿಟ್ಟು ಬಂದು ಅವರ ಬೆನ್ನಿನ ಮೇಲೆ ಬಲವಾಗಿ ಹೊಡೆದಿದ್ದರು. ಹಾಗೆ ಹೊಡೆದಿದ್ದರಿಂದ ಕೃಷದೇಹಿ ಗುರುವಿನ ಕೈಗೇ ನೋವಾಯಿತು. ದಯಾನಂದರು ವಿನೀತರಾಗಿ ಹೇಳಿದ್ದರು, "ಗುರುದೇವಾ, ನನ್ನ ದೇಹ ಕಲ್ಲಿನಂತಿದೆ. ನೀವು ಹೊಡೆದರೆ ಅದಕ್ಕೆ ನೋವಾಗುವುದಿಲ್ಲ. ನಿಮ್ಮ ಕೈಗಳಿಗೇ ನೋವಾಗುತ್ತದೆ. ಇನ್ನು ಮುಂದೆ ನನ್ನನ್ನು ಶಿಕ್ಷಿಸಬೇಕಾದಾಗ ಕೈಗಳ ಬದಲಾಗಿ ಕೋಲಿನಿಂದ ಹೊಡೆಯಿರಿ" ಎಂದು ಹೇಳಿ ಒಂದು ಕೋಲನ್ನು ತಂದುಕೊಟ್ಟಿದ್ದರು. ಅಂದಿನ ಗುರು-ಶಿಷ್ಯರ ಸಂಬಂಧವನ್ನು ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ದಯಾನಂದರ ಕೋರಿಕೆ ವ್ಯರ್ಥವಾಗಲಿಲ್ಲ. ಮುಂದೊಮ್ಮೆ ವಿರಜಾನಂದರು ಸಿಟ್ಟಿನಲ್ಲಿ ದಯಾನಂದರ ಭುಜದ ಮೇಲೆ ಬಲವಾಗಿ ಬಾರಿಸಿದ್ದರು. ಇದನ್ನು ಕಂಡ ಸಹವಿದ್ಯಾರ್ಥಿ ನಯನಸುಖ ಗುರುವಿಗೆ ಹೇಳಿದ್ದ, "ಗುರುದೇವಾ, ಇಂತಹ ದೊಡ್ಡ ಸಂನ್ಯಾಸಿಯನ್ನು ಈ ರೀತಿ ದಂಡಿಸುವುದು ತರವಲ್ಲ. ಅವರನ್ನು ಗೌರವದಿಂದ ಕಾಣಬೇಕು". ಪಾಠ ಮುಗಿದ ಮೇಲೆ ದಯಾನಂದರು ಮಿತ್ರನಿಗೆ ಆಕ್ಷೇಪಿಸಿದ್ದರು, "ಗುರುದೇವರು ದ್ವೇಷದಿಂದ ಹೊಡೆದರೆಂದು ಭಾವಿಸಿರುವೆಯಾ? ಕುಂಬಾರ ಮಣ್ಣನ್ನು ತುಳಿದು ಹದ ಮಾಡಿ ಸುಂದರ ಮಡಿಕೆಯನ್ನಾಗಿಸುವಂತೆ, ಗುರು ಶಿಷ್ಯರನ್ನು ಹೊಡೆದು, ತಿದ್ದಿ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಗುರುಗಳಿಗೆ ನೀನು ಆ ರೀತಿ ಮಾತನಾಡಬಾರದಿತ್ತು". ಮುಂದೆ ದಯಾನಂದರು ಮಹರ್ಷಿಯೆನಿಸಿ ಜನರಿಗೆ ಉಪದೇಶ ನೀಡುತ್ತಿದ್ದ ಸಂದರ್ಭದಲ್ಲಿ ತಮ್ಮ ಭುಜದ ಮೇಲೆ ಗುರುಗಳು ಹೊಡೆದಿದ್ದರಿಂದ ಆಗಿದ್ದ ಗುರುತನ್ನು ತೋರಿಸಿ ಹೇಳುತ್ತಿದ್ದರು, 'ಇದು ಗುರುವಿಗೆ ಯಾವಾಗಲೂ ಕೃತಜ್ಞನಾಗಿರಬೇಕೆಂದು ನೆನಪಿಸುತ್ತವೆ'.
     ಆರ್ಯಸಮಾಜ ಸ್ಥಾಪಕರಾಗಿ ವೇದದ ವಿಚಾರಗಳನ್ನು ಪ್ರಚಾರ ಮಾಡುವಲ್ಲಿ ಅಗ್ರಪಾತ್ರ ವಹಿಸಿದ, ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ತೊಡೆಯಲು ಸತತ ಪ್ರಯತ್ನ ಮಾಡುತ್ತಾ, ಸತ್ಯಾರ್ಥ ಪ್ರಕಾಶದಂತಹ ವೈಚಾರಿಕ ಕ್ರಾಂತಿ ಮೂಡಿಸುವ ಗ್ರಂಥ ರಚಿಸಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಬಲಿದಾನ ಮಾಡಿದ ಮಹರ್ಷಿ ದಯಾನಂದ ಸರಸ್ವತಿಯವರ ವೈಚಾರಿಕ ಪ್ರಖರತೆಯ ಮೂಲ ವಿರಜಾನಂದ ಸರಸ್ವತಿಯವರೇ ಆಗಿದ್ದರು. 1868ರಲ್ಲಿ 90 ವರ್ಷದವರಿದ್ದಾಗ ವಿರಜಾನಂದರ ದೇಹಾಂತ್ಯವಾಯಿತು. ಕಣ್ಣುಗಳಿದ್ದೂ ಕುರುಡರಾಗಿರವವರೇ ಹೆಚ್ಚಾಗಿರುವಾಗ, ಹುಟ್ಟು ಕುರುಡರಾಗಿದ್ದರೂ ಅಂತರಂಗದ ದೃಷ್ಟಿಯಿಂದ ಸಕಲವನ್ನೂ ಅರಿತಿದ್ದ ವಿರಜಾನಂದ ಸರಸ್ವತಿಯವರು ಸಾಧಕರಿಗೆ ಅನುಪಮ ಮಾರ್ಗದರ್ಶಿಯಾಗಿದ್ದಾರೆ.
-ಕ.ವೆಂ.ನಾಗರಾಜ್.


ಬುಧವಾರ, ಆಗಸ್ಟ್ 9, 2017

ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ


     ಶ್ರಾದ್ಧ ಎಂದರೆ ಸಾಮಾನ್ಯವಾಗಿ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ಕ್ರಿಯೆ ಎಂದು ಅರ್ಥೈಸುತ್ತಾರೆ. ಆದರೆ ಶ್ರಾದ್ಧವೆಂದರೆ ಶ್ರದ್ಧೆಯಿಂದ ಮಾಡುವ ಯಾವುದೇ ಕೆಲಸ ಎಂದಷ್ಟೇ ಅರ್ಥ. ಶಿಕ್ಷಕ, ನೌಕರ, ಅಧಿಕಾರಿ, ಕೃಷಿಕ, ವಿದ್ಯಾರ್ಥಿ, ವ್ಯಾಪಾರಿ, ಯಾರೇ ಆಗಿರಲಿ, ಜವಾಬ್ದಾರಿಗಳನ್ನು ಅರಿತು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದೇ ಶ್ರಾದ್ಧ. ಇರಲಿ ಬಿಡಿ, ಸಾಮಾನ್ಯ ಅರ್ಥದಲ್ಲಿ ಬಳಸುವ ಶ್ರಾದ್ಧದ ಬಗ್ಗೆ ಚಿಂತಿಸೋಣ. ಸನಾತನ ಧರ್ಮದಲ್ಲಿ ಹೇಳಿರುವ ಷೋಡಶ ಸಂಸ್ಕಾರಗಳಲ್ಲಿ ಅಂತ್ಯ ಸಂಸ್ಕಾರವೇ ಕೊನೆಯ ಸಂಸ್ಕಾರವಾಗಿದೆ. ಅಂತ್ಯ ಸಂಸ್ಕಾರವನ್ನು ಹಲವರು ಹಲವು ರೀತಿಯಲ್ಲಿ ಮಾಡುತ್ತಾರೆ. ಸಂಪ್ರದಾಯಕ್ಕೆ ತಕ್ಕಂತೆ ಕೆಲವರು ಹೂಳುತ್ತಾರೆ, ಕೆಲವರು ಸುಡುತ್ತಾರೆ, ಕೆಲವರು ಶವಪೆಟ್ಟಿಗೆಗಳಲ್ಲಿಡುತ್ತಾರೆ, ಕೆಲವರು ನದಿಯಲ್ಲಿ ತೇಲಿಬಿಡುತ್ತಾರೆ, ಕೆಲವರು ಹದ್ದುಗಳಿಗೆ ಆಹಾರವಾಗಿಸುತ್ತಾರೆ. ವೇದವು 'ಭಸ್ಮಾಂತಂ ಶರೀರಮ್||' [ಯಜು.೪೦.೧೫]-(ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ) ಎನ್ನುತ್ತದೆ. ಮೃತ ಶರೀರವನ್ನು ದಹನದ ಮೂಲಕ ಪಂಚಭೂತಗಳಲ್ಲಿ ಲೀನವಾಗಿಸುವುದು ವೈಜ್ಞಾನಿಕವಾಗಿ ಸೂಕ್ತವೆನಿಸುತ್ತದೆ. ಸತ್ತವರನ್ನೆಲ್ಲಾ ಹೂಳುತ್ತಾ ಹೋದರೆ ಸ್ಮಶಾನಗಳಿಗಾಗಿ ಹೆಚ್ಚು ಹೆಚ್ಚು ಭೂಮಿಯ ಅಗತ್ಯ ಬೀಳುತ್ತದೆ, ಪರಿಸರ ಮಾಲಿನ್ಯವಾಗುತ್ತದೆ. ನದಿಯಲ್ಲಿ ತೇಲಿಬಿಟ್ಟರೆ ಜಲಮಾಲಿನ್ಯ, ಪಕ್ಷಿಗಳಿಗೆ ಆಹಾರವಾಗಿಸಲು ಬಿಟ್ಟರೆ ವಾಯುಮಾಲಿನ್ಯವಾಗುತ್ತದೆ. ದಹನದ ಕಾಲದಲ್ಲಿ ಸೂಕ್ತ ಪ್ರಮಾಣದ ತುಪ್ಪ-ಸಾಮಗ್ರಿಗಳನ್ನು ಬಳಸಿದರೆ ದುರ್ಗಂಧದ ಹರಡುವಿಕೆ ಇಲ್ಲವಾಗುತ್ತದೆ. ಹಲವಾರು ಕಾರಣಗಳಿಗಾಗಿ ದಹನದ ಮೂಲಕ ಮಾಡುವ ಸಂಸ್ಕಾರವೇ ಸರಿಯೆಂಬ ವಾದ ಈಗ ವಿದೇಶಗಳಲ್ಲೂ ಕೇಳಿಬರುತ್ತಿದೆ.
     ಶ್ರಾದ್ಧ ಮಾಡುವುದು ಏಕೆ? ದೇಹದಲ್ಲಿ ಪ್ರಾಣವಿರುವವರೆಗೂ ವ್ಯಕ್ತಿಗೆ ಬೆಲೆ. ಪ್ರಾಣ ಹೋದ ತಕ್ಷಣದಲ್ಲಿ ಅದು ಹೆಣ. ಆತ್ಮವಿಲ್ಲದ ಶರೀರಕ್ಕೆ ಬೆಲೆಯಿಲ್ಲ. ಅದು ಕೇವಲ ಜಡವಸ್ತು. ಅದನ್ನು ಬೇಗ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ. ಇಡೀ ಜಗತ್ತನ್ನೇ ಆಳಿದವನ ಹೆಣವೆಂದು ಅದನ್ನು ಯಾರಾದರೂ ಇಟ್ಟುಕೊಳ್ಳುತ್ತಾರೆಯೇ? ಮೃತ ಶರೀರವನ್ನು ದಹನ ಮಾಡಿಯೋ, ಯಾವುದೋ ರೀತಿಯಲ್ಲಿ ವಿಲೇವಾರಿ ಮಾಡಿದ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳನ್ನು ಮಾಡಿದರೆ ಅದು ಶರೀರಕ್ಕಂತೂ ಅಲ್ಲ. ಇನ್ನು ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ಕರ್ಮಗಳೆನ್ನಬಹುದೆ? ಆತ್ಮ ಅವಿನಾಶಿ, ಆದಿ, ಅಂತ್ಯವಿಲ್ಲದುದು, ಕರ್ಮಫಲಕ್ಕನುಸಾರವಾಗಿ ಜನನ-ಮರಣಗಳ ಚಕ್ರದಲ್ಲಿ ಸುತ್ತುತ್ತಿರುತ್ತದೆ ಎಂಬುದು ತಿಳಿದವರ ನುಡಿ. ಯಾವುದೇ ಜನ್ಮದಲ್ಲಿ ಯಾವುದೇ ಜೀವಿ ಜೀವಿತಾವಧಿಯಲ್ಲಿ ಗಳಿಸಿದ್ದನ್ನು, ಮನೆ, ಸಂಪತ್ತು, ಮಡದಿ, ಇತ್ಯಾದಿಗಳಿರಲಿ, ಕನಿಷ್ಠ ಧರಿಸಿದ್ದ ಬಟ್ಟೆಯನ್ನು ಸಾಯುವಾಗ ಹೊತ್ತೊಯ್ದುದನ್ನು ಯಾರೂ ಕಂಡಿಲ್ಲ. 'ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ| ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ||'  (ಅಥರ್ವ.೧೨.೩.೪೮) ದೇವರ ನ್ಯಾಯವಿಧಾನದಲ್ಲಿ ಯಾವ ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಬಂಧುಗಳ ಸಹಾಯದಿಂದ ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಇಲ್ಲ. ಈ ಒಡಕಿಲ್ಲದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂದು ಇದರ ಅರ್ಥ. ಮಾಡಿದ್ದುಣ್ಣೋ ಮಹರಾಯ! ಬೇರೊಬ್ಬರು ಶ್ರಾದ್ಧಾದಿ ಕರ್ಮಗಳ ಮೂಲಕ ಅದನ್ನು ಬದಲಾಯಿಸಲು ಸಾಧ್ಯವೇ? ನನಗೆ ಕಾಯಿಲೆ ಬಂದರೆ ಔಷಧಿಯನ್ನು ನಾನೇ ಕುಡಿಯಬೇಕು. ಬೇರೆ ಯಾರೋ ಕುಡಿದರೆ ನನ್ನ ಕಾಯಿಲೆ ಹೇಗೆ ವಾಸಿಯಾದೀತು? ಬದುಕಿದ್ದಾಗ ಏನು ಬೇಕಾದರೂ ಮಾಡಬಹುದು, ಸತ್ತ ನಂತರ ಮಕ್ಕಳು ಶ್ರಾದ್ಧ ಮಾಡಿಬಿಟ್ಟರೆ ಎಲ್ಲಾ ಸರಿಹೋಗುತ್ತದೆ ಎಂಬದು ಭ್ರಮೆ. ಮೃತ ಶರೀರವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವ ಕ್ರಿಯೆಯೊಂದಿಗೆ ಅಂತ್ಯೇಷ್ಟಿಕರ್ಮ ಮುಗಿಯುತ್ತದೆ. ನಂತರದಲ್ಲಿ ಮಾಡುವ ಕ್ರಿಯೆಗಳು ಸಂಬಂಧಿಕರ ಮಾನಸಿಕ ಸಮಾಧಾನಕ್ಕಷ್ಟೇ ಸೀಮಿತವೆಂದರೆ ಕಠಿಣ ಮಾತಾಗುತ್ತದೆ.
     ತಲೆ ತಲಾಂತರಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿರುವ ಕ್ರಿಯೆಗಳಿಗೆ ಅರ್ಥವಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಶ್ರಾದ್ಧ ಮಾಡುವ ಮೂಲಕ ಹಿರಿಯರನ್ನು ನೆನೆಸಿಕೊಂಡು ಅವರು ಹಾಕಿಕೊಟ್ಟ ಉತ್ತಮ ರೀತಿಯ ಸಂಸ್ಕಾರಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಅವರ ನೆನಪನ್ನು ಸ್ಥಾಯಿಯಾಗಿ ಉಳಿಯುವಂತೆ ಮಾಡಬಹುದು, ಅವರ ಅಪೂರ್ಣ ಉತ್ತಮ ಕೆಲಸಗಳನ್ನು ಪೂರ್ಣಗೊಳಿಸಬಹುದು. ಮೃತರ ನೆನಪಿನಲ್ಲಿ ಸಮಾಜಕ್ಕೆ ಹಿತವಾಗುವ ಕೆಲಸಗಳನ್ನು ಮಾಡಬಹುದು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮಾಡುವ ಮಂತ್ರೋಚ್ಛಾರಗಳಿಂದ ಮೃತ ಶರೀರಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಅನುಕೂಲವಾಗುವುದೇನಾದರೂ ಇದ್ದರೆ ಅದು ಸಂಸ್ಕಾರ ಕಾರ್ಯ ನೆರವೇರಿಸುವವರಿಗೆ ಅಷ್ಟೆ. 'ಸಂ ಗಚ್ಛಸ್ವ ಪಿತೃಭಿಃ ಸಂ ಯಮೇನೇಷ್ಟಾಪೂರ್ತೇನ ಪರಮೇ ವ್ಯೋಮನ್| ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾಃ||' (ಋಕ್.೧೦.೧೪.೮.) ಓ ಜೀವ! ನಿನ್ನನ್ನು ಪಾಲಿಸುವವರೊಂದಿಗೆ, ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, ಪರಮರಕ್ಷಕ ಪ್ರಭುವಿನಲ್ಲಿ ಆಶ್ರಯ ಪಡೆದುಕೋ. ಕೆಟ್ಟದ್ದನ್ನು ಬಿಟ್ಟು, ಮತ್ತೆ ಮನೆಗೆ ಹೋಗು. ಸುವರ್ಚಸ್ವಿಯಾಗಿ ಮುಂದೆ ಸಾಗು ಎಂಬ ಅರ್ಥದ ಈ ಮಂತ್ರ ಸತ್ತವರಿಗೋ, ಬದುಕಿರುವವರಿಗೋ?
     ಅಂತ್ಯ ಸಂಸ್ಕಾರದಲ್ಲಿ ಜೀವನದ ನಶ್ವರತೆ ಗೋಚರವಾಗುತ್ತದೆ. ಇರುವುದು ಮೂರು ದಿನ, ಅಷ್ಟರಲ್ಲಿ ಚಿರಂಜೀವಿಗಳಂತೆ ವರ್ತಿಸಿ, ಮಾಡಬಾರದ್ದನ್ನೆಲ್ಲಾ ಮಾಡುತ್ತೇವಲ್ಲಾ ಎಂಬ ಅರಿವು ಮೂಡುತ್ತದೆ. ಅರ್ಥಪೂರ್ಣವಾಗಿ ಬಾಳೋಣವೆಂಬ ಭಾವನೆ ಬರಿಸುತ್ತದೆ. ಇದನ್ನು ಸ್ಮಶಾನ ವೈರಾಗ್ಯವೆನ್ನುತ್ತಾರೆ. ಇದು ಹೆಚ್ಚು ಕಾಲ ಇರುವುದಿಲ್ಲ. ನಾಯಿಬಾಲದ ಡೊಂಕಿನಂತೆ ಹಿಂದಿನ ಜೀವನದಲ್ಲಿ ತೊಡಗಿಕೊಳ್ಳುತ್ತೇವೆ.
     ಜನರಲ್ಲಿ ಮೋಕ್ಷದ ಬಗ್ಗೆ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ  ಒಂದು ಹೊಸ ಸೃಷ್ಟಿ, ಹೊಸ ನಗರ, ಹೊಸ ಸಮುದಾಯವೇ ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (Revelation chapter 21). ಕುರಾನಿನ ಪ್ರಕಾರ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಹೊರತು ಮತ್ತೇನೂ ಅಲ್ಲ.
     ಹಾಗಾದರೆ ಶ್ರಾದ್ಧ ಹೇಗೆ ಮಾಡಬೇಕು? ಹಿರಿಯರು ಬದುಕಿದ್ದಾಗ ಶ್ರದ್ಧೆಯಿಂದ, ಗೌರವದಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಜೀವಂತವಿದ್ದಾಗ ಕೀಳಾಗಿ ಕಂಡು, ಸರಿಯಾಗಿ ನೋಡಿಕೊಳ್ಳದೆ, ಸತ್ತಾಗ ವಿಜೃಂಭಣೆಯಿಂದ ತಿಥಿ ಮಾಡಿದರೆ ಪ್ರಯೋಜನವೇನು? ಭೂತ-ಪ್ರೇತವಾಗಿ ಕಾಡಿಯಾರೆಂಬ ಭಯದಿಂದ ಕ್ರಿಯೆಗಳನ್ನು ಮಾಡುವವರಿರುತ್ತಾರೆ. ನಂಬಿಕೆಯಿಲ್ಲದಿದ್ದವರೂ ಲೋಕಾಪವಾದದ ಭಯದಿಂದ ಮಾಡುವವರಿರುತ್ತಾರೆ. ಮಾಡಿದರೆ ಕಳೆದುಕೊಳ್ಳುವುದೇನೆಂದು ಮಾಡುವವರೂ ಸಿಗುತ್ತಾರೆ. ಪಿತೃಋಣವನ್ನು ತೀರಿಸುವುದೆಂದರೆ ನಮ್ಮ ಹುಟ್ಟಿಗೆ ಮಾಧ್ಯಮಗಳಾದವರಿಗೆ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಸತ್ತ ನಂತರ ಮಾಡುವ ಕ್ರಿಯಾಕರ್ಮಗಳಲ್ಲ, ಬದುಕಿದ್ದಾಗ ಸಲ್ಲಿಸಬೇಕಾದ ಸೇವೆಯಾಗಿದೆ. ನಿಜವಾದ ಶ್ರಾದ್ಧವೆಂದರೆ ಇದೇ! ತಲೆ ತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಕ್ರಿಯೆಗಳನ್ನು ಅರ್ಥಪೂರ್ಣವಾಗಿಸುವತ್ತ ಮುನ್ನಡೆಸುವುದು ಪ್ರಜ್ಞಾವಂತರ ಕರ್ತವ್ಯ. ವಿಚಾರ ಮಾಡೋಣ.
-ಕ.ವೆಂ.ನಾಗರಾಜ್.

ಶುಕ್ರವಾರ, ಆಗಸ್ಟ್ 4, 2017

ನೈಜ ಸನ್ಯಾಸಿಗಳು ಬೇಕಾಗಿದ್ದಾರೆ!


     ಕಾವಿ ತೊಟ್ಟವರೆಲ್ಲಾ ಸಂನ್ಯಾಸಿಗಳಾಗಲಾರರು. ಕಾವಿ ತೊಟ್ಟು ಮಾಡಬಾರದ ಕೆಲಸ ಮಾಡುವವರಿಂದ ನೈಜ ಸನ್ಯಾಸಿಗಳನ್ನೂ ಅನುಮಾನದಿಂದ ನೋಡುವಂತಾಗಿದೆ. ಜೀವನದ ನಾಲ್ಕು ಘಟ್ಟಗಳೆಂದರೆ, ಬಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಮನುಷ್ಯನ ಆಯುವನ್ನು ನೂರು ವರ್ಷಗಳು ಎಂದಿಟ್ಟುಕೊಂಡರೆ, ಪ್ರಥಮ 25 ವರ್ಷಗಳನ್ನು ಬ್ರಹ್ಮಚರ್ಯದಲ್ಲೂ, ನಂತರದ 25 ವರ್ಷಗಳನ್ನು ಗೃಹಸ್ಥಾಶ್ರಮದಲ್ಲೂ, ಮುಂದಿನ 25 ವರ್ಷಗಳಲ್ಲಿ ವಾನಪ್ರಸ್ಥಾಶ್ರಮವನ್ನೂ, ಕೊನೆಯ 25 ವರ್ಷಗಳನ್ನು ಸಂನ್ಯಾಸಾಶ್ರಮದಲ್ಲಿ ವಿನಿಯೋಗಿಸಬಹುದು. ಬ್ರಹ್ಮಚರ್ಯದ 25 ವರ್ಷಗಳು ಬೌದ್ಧಿಕ, ಮಾನಸಿಕ, ಶಾರೀರಕ ಶಕ್ತಿಗಳನ್ನು ಸಂಚಯಿಸುವ ಕಾಲ. ಸಮರ್ಪಕವಾಗಿ ಬಳಸಿಕೊಳ್ಳುವವರು ಉತ್ತಮ ನಾಗರಿಕರಾಗುತ್ತಾರೆ, ಯಶಸ್ವಿಗಳಾಗುತ್ತಾರೆ. ಉಪಯೋಗಿಸಿಕೊಳ್ಳಲಾಗದವರು ಸಹಜವಾಗಿ ಹಿಂದುಳಿಯುತ್ತಾರೆ. ಈ ಅವಧಿಯಲ್ಲಿ ಇಂದ್ರಿಯ ಕಾಮನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡವರು ಅಗ್ರಗಣ್ಯರಾಗುವರು. ಸ್ತ್ರೀಯರು ಬೇಗ ಯೌವನಸ್ಥರಾಗುವುದರಿಂದ ಅವರ ಬ್ರಹ್ಮಚರ್ಯಾವಧಿ ಕನಿಷ್ಠ 16 ವರ್ಷಗಳೆಂದು ಹೇಳುತ್ತಾರೆ. ಸ್ತ್ರೀಯರಾಗಲಿ, ಪುರುಷರಾಗಲಿ, ಬ್ರಹ್ಮಚರ್ಯದ ಅವಧಿ ಮುಗಿದ ಕೂಡಲೇ ವಿವಾಹಿತರಾಗಬೇಕೆಂದೇನಿಲ್ಲ. ಮನೋನಿಗ್ರಹಶಕ್ತಿ ಅನುಸರಿಸಿ, ಇಟ್ಟುಕೊಂಡ ಗುರಿ ಸಾಧನೆಗಾಗಿ ಸೂಕ್ತ ಕಾಲದವರೆಗೆ ಅಥವ ಜೀವನಪೂರ್ತಿ ಬ್ರಹ್ಮಚಾರಿಗಳಾಗಿಯೇ ಇರಬಹುದು. ಇದು ಎಲ್ಲರಿಗೂ ಸಾಧ್ಯವಿಲ್ಲ.
     ಗೃಹಸ್ಥಾಶ್ರಮವು ಇತರ ಮೂರು ಆಶ್ರಮಗಳವರಿಗೆ ಆಧಾರ ಮತ್ತು ಆಶ್ರಯಸ್ಥಾನವಾಗಿದೆ. ಸಮಾಜ ನಡೆಯುತ್ತಿರುವುದು ಗೃಹಸ್ಥರಿಂದಲೇ! ಉತ್ತಮ ಗೃಹಸ್ಥರು ಕುಟುಂಬದ ಬಗ್ಗೆ ಮಾತ್ರ ಚಿಂತಿಸದೆ ಸಮಾಜದ ಏಳಿಗೆಗೂ ಹೆಗಲು ಕೊಡುತ್ತಾರೆ. ಗೃಹಸ್ಥಾಶ್ರಮದಲ್ಲಿ ಕರ್ತವ್ಯಗಳನ್ನು ನಿರ್ವಹಿಸಿದ ನಂತರ ಆತ್ಮೋನ್ನತಿಗಾಗಿ ವಾನಪ್ರಸ್ಥಕ್ಕೆ ತೆರಳುವ ಕಾಲ ಬರುತ್ತದೆ. ಇಂದಿನ ಪರಿಸ್ಥಿತಿಗನುಗುಣವಾಗಿ ವಾನಪ್ರಸ್ಥದ ಪರಿಕಲ್ಪನೆಯನ್ನು ಸೂಕ್ತವಾಗಿ ಬದಲಾಯಿಸಿಕೊಳ್ಳಬಹುದು. ಪ್ರಾಪಂಚಿಕ ಆಕರ್ಷಣೆಗಳಿಂದ ಮುಕ್ತರಾಗಿ ಸರಳ ಜೀವನಪದ್ಧತಿ ಅಳವಡಿಸಿಕೊಂಡು, ಮನೆಯ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ, ಸದ್ವಿಚಾರಗಳ ಪ್ರಚಾರ, ಪ್ರಸಾರಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ತಮ್ಮ ವೃತ್ತಿಯ ನೈಪುಣ್ಯ, ಪ್ರವೃತ್ತಿ, ಹವ್ಯಾಸಗಳನ್ನು ಇತರರ ಉಪಕಾರಕ್ಕಾಗಿ ಹಣದ ಆಸೆಯಿಲ್ಲದೆ ಬಳಸಬಹುದಾಗಿದೆ. ಈರೀತಿ ನಿವೃತ್ತ ಜೀವನ ನಡೆಸುವುದರಿಂದ ಯುವಕ-ಯುವತಿಯರಿಗೆ ಸಹಜವಾಗಿ ಜವಾಬ್ದಾರಿ ಲಭಿಸುತ್ತದೆ.
      ಶಿಖರಪ್ರಾಯವಾದ ಸಂನ್ಯಾಸಾಶ್ರಮದ ಅವಧಿಯೇ ಇಂದು ವಿಚಾರ ಮಾಡತಕ್ಕದ್ದಾಗಿದೆ. ಜೀವನ ಶೈಲಿಯ ಬದಲಾವಣೆ, ಯೋಗ್ಯ ರೀತಿಯಲ್ಲಿ ಜೀವನ ನಡೆಸದಿರುವುದರಿಂದ 75 ವರ್ಷಗಳ ನಂತರದಲ್ಲಿ ಬದುಕಿರುವುದೇ ದುಸ್ಸಾಹಸವೆನಿಸಿದೆ. ಬದುಕಿದ್ದರೂ ನೂರೆಂಟು ರೀತಿಯ ಕಾಯಿಲೆ-ಕಸಾಲೆಗಳಿಂದ ಜರ್ಜರಿತಾಗಿ ಇನ್ನೊಬ್ಬರ ಮೇಲೆ ಅವಲಂಬಿತರಾಗಿರುವ ಪರಿಸ್ಥಿತಿಯಿದೆ. ಗುಣಕ್ಕೆ ಪ್ರಾಧಾನ್ಯವಿರದ, ಹಣಕ್ಕೆ ಮಾತ್ರ ಬೆಲೆಯಿರುವ ಶಿಕ್ಷಣ ಪದ್ಧತಿಯ ಕೊಡುಗೆಯಿದು. ಸಂನ್ಯಾಸಿಗಳಾಗಿ ತಮ್ಮ ಕಾರ್ಯಗಳ ಛಾಪು ಒತ್ತಿದವರು, ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ನೆರವಾದವ ಅನೇಕರು ಬ್ರಹ್ಮಚಾರಿಗಳಾಗಿದ್ದವರು. ಚಿಕ್ಕ ವಯಸ್ಸಿನಲ್ಲೇ ಪ್ರಾಪಂಚಿಕ ವಿಷಯಗಳ ಬಗ್ಗೆ ನಿರಾಸಕ್ತರಾಗಿ ಪರಿವ್ರಾಜಕರಾಗಿ ದೇಶ ಸುತ್ತಿ ಇಂದಿಗೂ ಜನಮಾನ್ಯರಾಗಿರುವ ವಿವೇಕಾನಂದ, ಶಂಕರಾಚಾರ್ಯ, ರಮಣಮಹರ್ಷಿ ಮುಂತಾದವರ ಸಾಲೇ ಕಣ್ಣೆದುರಿಗಿದೆ.
     ಸಂನ್ಯಾಸಿ ಹೇಗಿರಬೇಕು? 'ಋತಂ ವದನೃತದ್ಯುಮ್ನ ಸತ್ಯಂ ವದನ್ ಸತ್ಯಕರ್ಮನ್| ಶ್ರದ್ಧಾಂ ವದನ್ ತ್ಸೋಮ ರಾಜನ್ ಧಾತ್ರಾ ಸೋಮ ಪರಿಷ್ಕೃತ ಇಂದ್ರಾಯೇಂದೋ ಪರಿ ಸ್ರವ||' (ಋಕ್.9.113.4.) ಧರ್ಮವೇ ಶಕ್ತಿಯಾದವನೇ, ಸತ್ಯಕರ್ಮಿಯೇ, ಪ್ರಶಾಂತನೇ, ವೇದ, ಧರ್ಮಗಳನ್ನೂ ಬೋಧಿಸುತ್ತಾ, ಸತ್ಯವನ್ನು ಉಪದೇಶಿಸುತ್ತಾ, ಶ್ರದ್ಧೆ ಪಸರಿಸುತ್ತಾ, ಜೀವಾತ್ಮನ ಹಿತಕ್ಕಾಗಿ, ಮೋಕ್ಷಪ್ರಾಪ್ತಿಗಾಗಿ ಪರ್ಯಟನ ಮಾಡು ಎನ್ನುವ ಮಂತ್ರ ಸಂನ್ಯಾಸಿಯ ಕರ್ತವ್ಯದ ಬಗ್ಗೆ ಹೇಳುತ್ತದೆ. ಸಂನ್ಯಾಸಿಯಾದವನು ಜಾತಿ, ಭಾಷೆ, ದೇಶಗಳಿಗೆ ಸೀಮಿತನಾಗಿರದೆ ಸಕಲರಿಗೆ ಸೇರಿದವನಾಗಿರುತ್ತಾನೆ. ನಿರ್ಮೋಹಿಯಾಗಿ, ಪ್ರಾಪಂಚಿಕ ವಿಷಯಗಳಲ್ಲಿ ನಿರಾಸಕ್ತನಾಗಿ ಆತ್ಮಸಾಧನೆ ಮುಂದುವರೆಸುತ್ತಾ ಹಳ್ಳಿಯಿಂದ ಹಳ್ಳಿಗೆ, ನಗರಗಳಿಗೆ, ದೇಶಗಳಿಗೆ ಸಂಚರಿಸುತ್ತಾ ಮನುಕುಲಕ್ಕೆ ಅಗತ್ಯವಾದ ಸತ್ಯಜ್ಞಾನ, ಸತ್ಯಕರ್ಮ, ಸತ್ಯೋಪಾಸನೆಗಳ ಬಗ್ಗೆ ತಿಳುವಳಿಕೆ ಕೊಡುತ್ತಾ ಸಂಚರಿಸಬೇಕು. ಕೇವಲ ಮಾತಿನಿಂದಲ್ಲ, ಕೃತಿಯಿಂದಲೂ ಇದನ್ನು ಸಾಧಿಸುತ್ತಾ ಸಂಚರಿಸುವ ಪರಿವ್ರಾಜಕರೇ ನೈಜ ಸಂನ್ಯಾಸಿಗಳು. ಚಲಿಸುವ ದೇವರಂತೆ ಸಾವು ಬರುವವರೆಗೂ ಜಗತ್ತಿನ ಒಳಿತಿಗೆ, ಹಿತಕ್ಕೆ ಪೂರಕವಾದ ಜ್ಞಾನಪ್ರಸಾರ ಮಾಡುತ್ತಾ ಸುತ್ತಾಡುವವರವರು! ಸದಾ ಪರ್ಯಟನೆ ಮಾಡುತ್ತಿರಬೇಕಾದುದರಿಂದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಾಶ್ರಮಗಳಲ್ಲಿಯಂತೆ ನಿತ್ಯಕರ್ಮಾನಿಷ್ಠಾನಗಳು ಅವರಿಗೆ ಕಡ್ಡಾಯವಲ್ಲ. ಶಾಸ್ತ್ರಜ್ಞಾನವಿಲ್ಲದವರು, ಬ್ರಹ್ಮಜ್ಞಾನದ ಅರಿವಿಲ್ಲದವರು, ನಿರ್ಲಿಪ್ತರಲ್ಲದವರು, ವಿಷಯವಾಸನೆಯಿಂದ ಮುಕ್ತರಾಗದವರು, ಆರೋಗ್ಯವಿಲ್ಲದವರು, ಧೃಢಕಾಯರಲ್ಲದವರು ಸಂನ್ಯಾಸಿಗಳಾಗಲಾರರು.
     ಪರಿವ್ರಾಜಕನ ಕೆಲಸ ಮಾಡುತ್ತಿರುವ ಒಬ್ಬ ಸಾಧಕರ ಪರಿಚಯ ಮಾಡಬೇಕೆನಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸಾಲ್ಮರದ ಸೀತಾರಾಮಕೆದಿಲಾಯರೇ ಅವರು. ಚಿಕ್ಕಂದಿನಲ್ಲೇ ರಾಷ್ಟ್ರೀಯ ಸ್ವಯಂಸೇವಕಸಂಘದ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಬ್ರಹ್ಮಚಾರಿಯಾಗಿ ಉಳಿದು ಸಂಘದ ಪ್ರಚಾರಕರಾಗಿ ಗ್ರಾಮೋತ್ಥಾನ, ಗ್ರಾಮವಿಕಾಸ, ಗೋತಳಿ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಜನಜಾಗೃತಿ ಮಾಡಿದವರು. ಅಖಿಲಭಾರತ ಸೇವಾಪ್ರಮುಖರಾಗಿ ಕಾರ್ಯ ನಿರ್ವಹಿಸಿದವರು. 2009ರಲ್ಲಿ ಭಾರತದಾದ್ಯಂತ ನಡೆದ ವಿಶ್ವಮಂಗಳ ಗೋಯಾತ್ರೆಯ ಶಿಲ್ಪಿ ಅವರು. ವಾಮನಮೂರ್ತಿ, ಕೃಷದೇಹಿ ಕೆದಿಲಾಯರಿಗೆ ಈಗ 68 ವರ್ಷಗಳು. ಇವರು 2012ರ ಆಗಸ್ಟ್ 9ರಂದು ಭಾರತದ ಅಖಂಡತೆ ಮತ್ತು ಗ್ರಾಮಜೀವನದ ಪುನರುತ್ಥಾನದ ಸಲುವಾಗಿ ಇಡೀ ಭಾರತದ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಲುನಡಿಗೆಯಲ್ಲೇ ಪ್ರಾರಂಭಿಸಿದ್ದು, 5 ವರ್ಷಗಳ ಪಾದಯಾತ್ರೆಯನ್ನು 9.7.2017ರ ಗುರುಪೂರ್ಣಿಮೆಯಂದು ಮರಳಿ ಕನ್ಯಾಕುಮಾರಿಗೆ ಪ್ರವೇಶಿಸುವುದರೊಂದಿಗೆ ಮುಗಿಸಿದ್ದಾರೆ. ಈ ಅವಧಿಯಲ್ಲಿ ದೇಶದ 23 ರಾಜ್ಯಗಳ 2350 ಹಳ್ಳಿಗಳ 23100ಕಿ.ಮೀ.ಗೂ ಹೆಚ್ಚಿನ ಕಾಲುನಡಿಗೆ ಮಾಡಿದ್ದಾರೆ. ಬೆಳಗಿನ ಜಾವ ಮೂರು ಗಂಟೆಗೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಪ್ರಾರ್ಥನೆ, ಗೋಪೂಜೆ ಮಾಡಿ ಪಾದಯಾತ್ರೆ ಆರಂಭಿಸುತ್ತಾರೆ. ಸುಮಾರು 10-15 ಕಿ.ಮೀ. ನಡೆದು 12.30ಕ್ಕೆ ಭಿಕ್ಷಾನ್ನ ಸ್ವೀಕಾರ, ವಿಶ್ರಾಂತಿ. ಸಂಜೆ ಊರಿನ ಶಾಲೆಗೆ ಹೋಗಿ ಮಕ್ಕಳಿಂದ ವೃಕ್ಷಾರೋಪಣ, ಗ್ರಾಮದ ವಿವಿಧ ಮುಖಂಡರ ಭೇಟಿ, ದೇಗುಲ, ಚರ್ಚು, ಮಸೀದಿ, ಮಂದಿರಗಳಿಗೆ ಭೇಟಿ, ಜಾತಿ-ಮತಭೇದವಿಲ್ಲದೆ ಎಲ್ಲರೊಡನೆ ಮಾತುಕತೆ, ಮುಕ್ತ ಸಂವಾದ ನಡೆಸುತ್ತಾರೆ. ಒಂದು ರಾಜ್ಯದ ಪ್ರವಾಸ ಮುಗಿದ ನಂತರ ಆಯಾ ರಾಜ್ಯದ ಅಭಿವೃದ್ಧಿ, ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸೆಳೆಯುತ್ತಾರೆ. ಹೋದೆಡೆಯಲ್ಲೆಲ್ಲಾ ಅವರಿಗೆ ಅಪೂರ್ವ ಸ್ವಾಗತ ಸಿಕ್ಕಿದೆ. ಅವರ ಪರ್ಯಟನೆಯ ಉದ್ದೇಶ, ಒಂದು: ವಿದೇಶೀಯರು ಭಾರತ ಬಿಟ್ಟರೂ ಅವರ ಸಂಸ್ಕೃತಿ, ದಿರಿಸು, ಭಾಷೆ, ಇತ್ಯಾದಿ ನಮ್ಮನ್ನು ಬಿಟ್ಟಿಲ್ಲ. ಇದು ತಪ್ಪಿ ನಮ್ಮ ಭಾರತೀಯತೆಯ ಛಾಪು ಮೂಡಬೇಕು. ಎರಡು: ಹೆಚ್ಚುತ್ತಿರುವ ನಗರೀಕರಣದ ಬದಲಾಗಿ ಹಳ್ಳಿಜೀವನ ಪುನರುಜ್ಜೀವನಗೊಳ್ಳಬೇಕು. ಈ ಕೆಲಸ ಮಾಡುವುದರಿಂದ ಈ ವ್ಯಕ್ತಿಗೆ ಏನು ಲಾಭ? ಲಾಭದ ಅಪೇಕ್ಷೆಯಿಲ್ಲದೆ ಮಾಡುತ್ತಿರುವ ಈ ಕೆಲಸ ಒಬ್ಬ ಶ್ರೇಷ್ಠ ಪರಿವ್ರಾಜಕನದೇ ಅಲ್ಲವೇ? ಇದಲ್ಲವೇ ನೈಜ ಸಂನ್ಯಾಸ!
     ಮಠಗಳು, ಆಶ್ರಮಗಳನ್ನು ಸ್ಥಾಪಿಸಿಕೊಂಡು ವೈಭವೋಪೇತವಾಗಿ ಜೀವಿಸುವ, ರಾಜಕೀಯದಲ್ಲಿ ತೊಡಗುವ ಸಂತರುಗಳೂ ಇರುತ್ತಾರೆ. ಅವರನ್ನು ಮಠಾಧೀಶರು, ಪೀಠಾಧೀಶರು, ಮುಖ್ಯಸ್ಥರು, ಇತ್ಯಾದಿ ಅನ್ನಬಹುದೇ ಹೊರತು ಸಂನ್ಯಾಸಿಗಳು ಎನ್ನಲಾಗದು. ಜಾತಿಗೊಬ್ಬರು ಗುರು ಅನ್ನುವುದು ಸಂನ್ಯಾಸತ್ವದ ಮೂಲತತ್ತ್ವಕ್ಕೇ ವಿರುದ್ಧವಾದುದು. ಜಗತ್ತಿನ ವೈಭವಗಳು, ಅನುಕೂಲಗಳನ್ನು ತ್ಯಜಿಸಿದ್ದೇವೆಂದು ಹೇಳುತ್ತಾ ಅದಕ್ಕೇ ಅಂಟಿಕೊಂಡವರು ಸಂನ್ಯಾಸಿ ಹೇಗಾದಾರು? ಅವರು ಉತ್ತಮ ಕೆಲಸಗಳನ್ನು ಮಾಡುತ್ತಿರಬಹುದು, ಸಮಾಜಮುಖಿಯಾಗಿ ಜ್ಞಾನಪ್ರಸಾರ, ಆಧ್ಯಾತ್ಮಿಕ ವಿಚಾರಗಳ ಪ್ರಸಾರದಲ್ಲಿ ತೊಡಗಿರಬಹುದು. ಆದರೆ, ನೈಜ ಸಂನ್ಯಾಸಿ ಪ್ರಾಪಂಚಿಕ ಬಂಧನಗಳಿಂದ ಮುಕ್ತನಾಗಿ, ಯಾವುದೇ ಜನಾಂಗ, ಧರ್ಮ, ಜಾತಿ, ಪಂಥಗಳಲ್ಲಿ ಗುರುತಿಸಿಕೊಳ್ಳದೆ, ಯಾವುದೇ ದೇಶಕ್ಕೆ ಕಟ್ಟು ಬೀಳದೆ ಪರ್ಯಟನೆ ಮಾಡುತ್ತಾ ವಿಶ್ವಮಾನವ ಸಂದೇಶ ಸಾರುವವನಾಗಿರುತ್ತಾನೆ. ಇಂತಹ ಸಂನ್ಯಾಸಿಗಳ ಅಗತ್ಯತೆ ಇಂದು ದೇಶಕ್ಕಿದೆ. ಪುಣ್ಯಭೂಮಿ ಭಾರತದಲ್ಲಿ ಇಂತಹವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದೇ ಒಂದು ಆಶಾಕಿರಣ.
-ಕ.ವೆಂ.ನಾಗರಾಜ್.