ಸ್ವತಃ ದೇವರೂ ಸಹ ಬದಲಾಯಿಸಲಾಗದಂತಹ ಯಾವುದಾದರೂ ಸಂಗತಿ ಇದ್ದರೆ ಅದು 'ಸತ್ಯ' ಒಂದೇ! ಆ 'ಸತ್ಯ'ವೇ ದೇವರು!!
ಅಲೌಕಿಕ ಜ್ಞಾನಿಗಳ ಮಾತುಗಳು ಅಲೌಕಿಕವಾಗಿರುತ್ತವೆ. ಅಲೌಕಿಕ ಜ್ಞಾನ ಅಲೌಕಿಕ ಸತ್ಯಕ್ಕೆ ಸಮನಾದುದಾಗಿರುತ್ತದೆ. ಇದು ಅನುಭವದ ಶಿಖರ, ಜ್ಞಾನದ ಶಿಖರವಾಗಿರುತ್ತದೆ. ವಾಸ್ತವತೆಯನ್ನು ಆಧರಿಸಿ ನಮ್ಮ ಮಾತುಗಳಿದ್ದರೆ ಅದು ವಾಸ್ತವವಾಗಿ ಗೋಚರಿಸುತ್ತವೆ. ಸತ್ಯ ಮತ್ತು ಜ್ಞಾನಗಳು ಒಂದೇ ಆಗಿರುತ್ತವೆ. ಸತ್ಯದ ಜ್ಞಾನದ ಆಧಾರದಲ್ಲಿ ನಮ್ಮ ಮಾತುಗಳಿದ್ದರೆ ಅವು ನಿಜವಾಗುತ್ತವೆ. ವಾಸ್ತವತೆ ಅಥವ ಸತ್ಯ ಎಂದರೆ ಯಾವುದು? ಏನು? ಸತ್ಯ ಎಂದರೇನೆಂದು ತಿಳಿಯದೆ ನಮ್ಮ ಜ್ಞಾನವನ್ನು ಸತ್ಯದೊಂದಿಗೆ ಅಥವ ಸತ್ಯವನ್ನು ಜ್ಞಾನದೊಂದಿಗೆ ಗುರುತಿಸುವುದಾದರೂ, ತಿಳಿಯುವುದಾದರೂ ಹೇಗೆ? ಮತ್ತೆ ನಾವು ವಿಚಿತ್ರ ತರ್ಕದ ಸುಳಿಗೆ ಸಿಕ್ಕಿಬಿಟ್ಟೆವು. ಸತ್ಯ ಅನ್ನುವುದು ಹೇಗಿದೆಯೋ ಹಾಗೆ ಗೊತ್ತಾಗಬೇಕು, ಹೇಗೆ ಕಾಣಿಸುತ್ತದೆಯೋ ಹಾಗಲ್ಲ!
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
ನಮ್ಮ ಮುಂದೆ ವಿಧ-ವಿಧವಾದ ಸತ್ಯಗಳು ಕಂಡುಬರುತ್ತವೆ. ಒಬ್ಬರು ಹೇಳುತ್ತಾರೆ, "ಇದೇ ಸತ್ಯ". ಇನ್ನೊಬ್ಬರು, "ಅದು ಸತ್ಯ" ಎನ್ನುತ್ತಾರೆ. "ಎಲ್ಲವೂ ಸತ್ಯ" ಎಂದು ಮತ್ತೊಬ್ಬರು ಹೇಳುತ್ತಾರೆ. ಆದರೆ ಅಂತಿಮ ಸತ್ಯ ಯಾವುದು? ಅಂತಿಮ ಸತ್ಯ ಯಾವುದು ಎಂಬುದನ್ನು ಅರಿಯಲು ನಮಗೆ ಅಗತ್ಯವಾದ ಸ್ಪಷ್ಟವಾದ ಜ್ಞಾನ ಹೊಂದಿರಬೇಕಾಗುತ್ತದೆ. ಇಡೀ ಪ್ರಪಂಚವೇ ಮಾಯೆ, ಅದೇ ಅಂತಿಮ ಸತ್ಯವಲ್ಲ ಅನ್ನುತ್ತಾರೆ. ಹಾಗಾದರೆ ಈ ಪ್ರಪಂಚದಲ್ಲಿನ ಯಾವುದನ್ನೇ ಆಗಲಿ ಸತ್ಯವೆಂದು ಹೇಗೆ ಹೇಳುವುದು? ನಾವು ಏನು ಮಾತನಾಡುತ್ತೇವೋ ಅದೂ ಸತ್ಯವಾಗಲಾರದು! ಓಹ್! ಎಷ್ಟೊಂದು ಗೋಜಲಾಯಿತು, ಈ ಸಿಕ್ಕು ಬಿಡಿಸುವುದಾದರೂ ಹೇಗೆ? ಸತ್ಯವೆಂದರೇನು ಎಂಬ ಜ್ಞಾನ ಇಲ್ಲಿ ಅಗತ್ಯವಾಗುತ್ತದೆ. ನಮಗೆ ಜ್ಞಾನ ಬೇಕು, ಏಕೆಂದರೆ ಅದೇ ಸತ್ಯದೆಡೆಗೆ ನಮ್ಮನ್ನು ಕರೆದೊಯ್ಯುವುದು. ಯಾವುದು ಜ್ಞಾನ ಮತ್ತು ಯಾವುದು ಸತ್ಯ ಎಂಬ ಕ್ಲಿಷ್ಟ ವಿಷಯದೆಡೆಗೆ ನಾವೀಗ ಹೊರಳುತ್ತಿದ್ದೇವೆ.
ಗುಣಗಳ ತಾಯಿಯೆನ್ನಲಾಗುವ ಸತ್ಯವನ್ನು ವಿವಿಧ ಹಿನ್ನೆಲೆಗಳಲ್ಲಿ ಚರ್ಚಿಸಲಾಗುತ್ತಿದೆ, ವಿಮರ್ಶಿಸಲಾಗುತ್ತಿದೆ. ಅದು ತತ್ವದರ್ಶನವಾಗಬಹುದು, ಧಾರ್ಮಿಕವಾಗಬಹುದು, ವೈಜ್ಞಾನಿಕವಾಗಿ ಆಗಬಹುದು ಅಥವ ದಿನನಿತ್ಯದ ಜೀವನದ ಅನುಭವಗಳಾಗಬಹುದು. ಸತ್ಯದ ವಿವಿಧ ಮಗ್ಗಲುಗಳು ವಿದ್ವಾಂಸರ, ದಾರ್ಶನಿಕರ, ಧಾರ್ಮಿಕ ಪಂಡಿತರ ಚರ್ಚೆಯ ವಿಷಯವಾಗಿದೆ. ಸತ್ಯ ಯಾವುದು, ಅದನ್ನು ಕಾಣುವುದು ಹೇಗೆ ಎಂಬ ಬಗ್ಗೆ ಸಹ ತಿಳಿದವರು ಉಪದೇಶಿಸುವುದನ್ನು ಕಾಣುತ್ತೇವೆ. ಜೀವನದ ಉದ್ದೇಶವೇ ಸತ್ಯದ ಹುಡುಕಾಟ ಎನ್ನುವುದನ್ನೂ ಕೇಳಿದ್ದೇವೆ. ಒಟ್ಟಾರೆಯಾಗಿ ಈ ಸತ್ಯ ಅನ್ನುವುದು ಪರೀಕ್ಷೆಗೆ ಒಳಪಟ್ಟಷ್ಟು ಇತರ ಸಂಗತಿಗಳು ಒಳಪಟ್ಟಿರಲಾರವು. ವಿಚಿತ್ರವೆಂದರೆ, ನಿಜವಾದ ಸತ್ಯ ಸತ್ಯವಾಗಿಯೇ ಇರುತ್ತದೆ, ಅದನ್ನು ಸುಳ್ಳಾಗಿ ಅರ್ಥೈಸಿದರೂ ಅರ್ಥೈಸಿದವರಿಗೆ ಅದರ ಲಾಭ/ನಷ್ಟಗಳೇ ಹೊರತು ಸತ್ಯಕ್ಕೆ ಅದರಿಂದ ಏನೂ ಬಾಧಕವಿಲ್ಲ. ಎಂತಹ ವಿಚಿತ್ರ ಸತ್ಯವಿದು! ಒಂದು ಉದಾಹರಣೆ ನೋಡೋಣ. ಬೆಂಕಿ ಸುಡುತ್ತದೆ, ಏಕೆಂದರೆ ತನ್ನ ಸಂಪರ್ಕಕ್ಕೆ ಬಂದುದನ್ನು ಸುಡುವುದೇ ಅದರ ಗುಣ. ಒಂದು ದೇಶದಲ್ಲಿ ಮಾತ್ರ ಸುಡುತ್ತದೆ, ಇನ್ನೊಂದು ದೇಶದಲ್ಲಿ ಸುಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಎಲ್ಲೆಡೆಯಲ್ಲೂ ಅದೇ ಗುಣವಿರುತ್ತದೆ. 'ಇಲ್ಲ, ಬೆಂಕಿ ಸುಡುವುದಿಲ್ಲ, ಸುಡಬಾರದು' ಎಂದು ಎಷ್ಟೇ ಪ್ರಖರವಾಗಿ ವಾದ ಮಾಡಿದರೂ ಬೆಂಕಿಯ ಸುಡುವ ಗುಣ ಬದಲಾಗದು. 'ಬೆಂಕಿ ಇನ್ನು ಮುಂದೆ ನಮ್ಮ ದೇಶದಲ್ಲಿ ಸುಡಬಾರದು' ಎಂದು ಒಂದು ದೇಶದ ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ, ಸರ್ಕಾರ ಆದೇಶ ಮಾಡಿದರೂ ಬೆಂಕಿ ಸುಡದೇ ಇರುತ್ತದೆಯೇ? ಹೀಗಾಗಿ ಬೆಂಕಿ ಸುಡುತ್ತದೆ ಎಂಬುದು ಪ್ರತ್ಯಕ್ಷವಾಗಿ, ಪ್ರಮಾಣವಾಗಿ ಕಂಡು ಬರುವ, ಅನುಭವಕ್ಕೆ ಸಿಗುವ, ಯಾವುದೇ ಕಾರಣಕ್ಕೂ ಬದಲಾಗದ ಸತ್ಯ. ಬೆಂಕಿಯ ವಿಷಯದಲ್ಲಿ ಹೇಳಿದಂತೆ 'ಇದೇ ಸತ್ಯ' ಎಂದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೇಳಲಾಗದಿರುವುದು ಸಮಸ್ಯೆಗಳ ಉದ್ಭವಕ್ಕೆ ಕಾರಣ ಎಂಬುದೂ ಸಹ ಸತ್ಯವೇ!
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ ||
ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಯಾವುದಾದರೂ ಮಾನದಂಡವಿರಬೇಕು. ಅಂತಹ ಮಾನದಂಡ ಯಾವುದು? ಇನ್ನೊಂದು ಸಮಸ್ಯೆಯೂ ಇಲ್ಲಿ ಬರುತ್ತದೆ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪದಿರಬಹುದು. ಆಳವಾಗಿ ವಿಶ್ಲೇಷಿಸಿದರೆ ಇಂತಹ ಹಲವಾರು ಮಾನದಂಡಗಳು ಯಾವುದೋ ಒಬ್ಬ ಪ್ರಚಂಡ ಬುದ್ಧಿಮತ್ತೆಯುಳ್ಳ ವ್ಯಕ್ತಿಯ ಅಥವ ಸಮೂಹದ ಮಥನ-ಮಂಥನಗಳಿಂದ ಒಡಮೂಡಿದ್ದಾಗಿರುತ್ತದೆ ಎಂಬುದನ್ನು ಗುರುತಿಸುವುದು ಕಷ್ಟವಲ್ಲ. ಮಾನವನಿರ್ಮಿತ ಮಾನದಂಡಗಳು ಸದಾಕಾಲಕ್ಕೆ ನಿಲ್ಲಲಾರವು ಅಥವ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತವೆ. ಈ ವಿಶಾಲ ಬ್ರಹ್ಮಾಂಡ, ಜೀವವೈವಿಧ್ಯ ಮತ್ತು ದೇವರುಗಳಿಗೆ ಕುರಿತಂತೆ ಇದೇ ಸತ್ಯವೆಂದು ನಿಖರವಾಗಿ ಹೇಳುವುದು ಕಷ್ಟವೇ ಸರಿ. ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ತಾರ್ಕಿಕವಾಗಿ ಪುಟ್ಟ ಮೆದುಳಿನ ಮನುಷ್ಯ ಇವುಗಳ ಕುರಿತು ತಿಳಿಯಲು ಪ್ರಯತ್ನಿಸುತ್ತಲೇ ಇದ್ದಾನೆ. ಪೂರ್ಣ ಸತ್ಯವೆನ್ನುವುದು ಇನ್ನೂ ಗೊತ್ತಾಗಬೇಕಿದೆ. ವೈಜ್ಞಾನಿಕವಾಗಿಯೂ ಸಹ ಬೃಹತ್ ಬ್ರಹ್ಮಾಂಡದ ವಿಸ್ತಾರ, ವಿಸ್ಮಯಗಳನ್ನು ತಿಳಿಯಲಾಗಿಲ್ಲ. ಹೀಗಿರಬಹುದು ಎಂಬ ಕಲ್ಪನೆ ಮಾತ್ರ ಮಾಡಬಹುದು. ಧಾರ್ಮಿಕವಾಗಿ ಸಹ ಜಗತ್ತು, ಜೀವ, ದೇವರನ್ನು ಸಂಪೂರ್ಣ ಸ್ಪಷ್ಟವಾಗಿ ಅರಿಯಲಾಗಿಲ್ಲವೆಂದೇ ಹೇಳಬೇಕು. ವಿವಿಧ ಧರ್ಮಗಳು, ಪಂಥಗಳು, ಪಂಗಡಗಳು ವಿವಿಧ ರೀತಿಗಳಲ್ಲಿ ಇವುಗಳನ್ನು ವಿಶ್ಲೇಷಿಸುತ್ತಿರುವುದೇ ಇದಕ್ಕೆ ಉದಾಹರಣೆ.
-ಕ.ವೆಂ.ನಾಗರಾಜ್.
Mahadeva Thukaram Rao Jadhav
ಪ್ರತ್ಯುತ್ತರಅಳಿಸಿGOD knows the absolute truth...........