ದೇವರು ಏನು ಬೇಕಾದರೂ ಮಾಡಬಲ್ಲ, ಶೂನ್ಯದಿಂದ ಏನನ್ನಾದರೂ ಸೃಷ್ಟಿಸಬಲ್ಲ. ಜೀವಿಗಳನ್ನು ಸೃಷ್ಟಿಸಿದ್ದೂ ಹೀಗೆಯೇ ಅನ್ನುವವರಿದ್ದಾರೆ. ವಾದದ ಸಲುವಾಗಿ ಇದನ್ನು ಒಪ್ಪಿಕೊಂಡರೂ, ಹೀಗೆ ವಾದಿಸುವವರನ್ನು ನಾವು ಪ್ರಶ್ನಿಸಲು ಅವಕಾಶವಿದೆ. ದೇವರು ಶೂನ್ಯದಿಂದ ಏನನ್ನಾದರೂ ಸೃಷ್ಟಿಸಬಲ್ಲನಾದರೆ ಇನ್ನೊಬ್ಬ ದೇವರನ್ನು, ತನಗಿಂತ ಬಲಶಾಲಿಯಾದ ಇನ್ನೊಬ್ಬ ದೇವರನ್ನು ಸೃಷ್ಟಿಸಲು ಅವನಿಗೆ ಸಾಧ್ಯವಿದೆಯೇ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಸರಿ. ಆಗ ಸರ್ವಶಕ್ತನಿಗಿಂತ ಸರ್ವಶಕ್ತ ಸೃಷ್ಟಿಯಾಗುವುದರಿಂದ ದೇವರನ್ನು ಸರ್ವಶಕ್ತ ಎನ್ನಲು ಕಷ್ಟವಾಗುತ್ತದೆ. ಶೂನ್ಯದಿಂದ ಸೃಷ್ಟಿ ಸಾಧ್ಯ ಅನ್ನುವುದು ವೈಜ್ಞಾನಿಕವಾಗಿ ವಿಚಾರ ಮಾಡಿದರೂ ನಿಲ್ಲುವಂತಹ ವಾದವಾಗುವುದಿಲ್ಲ.
ಹಾಗಾದರೆ ಜೀವಿಗಳನ್ನು ದೇವರು ಜಡಪ್ರಕೃತಿಯಿಂದ ಸೃಷ್ಟಿಸಿದನೇ? ಇದೂ ಸಹ ಒಪ್ಪಲು ಕಷ್ಟವೆನಿಸುತ್ತದೆ. ಜಡ ವಸ್ತುಗಳಿಂದ ಮತ್ತೊಂದು ಜಡವಸ್ತುವನ್ನು ನಿರ್ಮಿಸಬಹುದೇ ಹೊರತು ಜೀವಚೈತನ್ಯ ಒಡಗೂಡಿದ ಜೀವಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಜಡವಸ್ತುಗಳಿಗೆ ಜೀವಚೈತನ್ಯದಿಂದ ಅರ್ಥ ಬಂದೀತೇ ಹೊರತು, ಜಡವಸ್ತುಗಳಿಂದ ಚೈತನ್ಯಶೀಲ ವಸ್ತುವಿನ ಸೃಷ್ಟಿಯನ್ನು ಕಲ್ಪಿಸಿಕೊಳ್ಳುವುದೂ ಆಗದು. ಹಾಗಾದರೆ ಜೀವಿಯ ಸೃಷ್ಟಿ ಹೇಗೆ ಆಗಿರಬಹುದು?
ಲೋಕದ ಜೀವಿಗಳೆಲ್ಲಾ ಪರಮಾತ್ಮನ ಅಂಶದಿಂದ ಸೃಷ್ಟಿಯಾಗಿದೆ ಎಂಬ ವಾದವೂ ಇದೆ. ಈ ವಿಚಾರದಲ್ಲಿ ತರ್ಕಿಸೋಣ. ಸುಮಾರು 84 ಲಕ್ಷ ಬಗೆಯ ಜೀವಜಂತುಗಳಿವೆ ಎನ್ನುತ್ತಾರೆ. ಇದರಲ್ಲಿ ಮಾನವ ಜೀವಿಯೂ ಒಂದು ಜೀವಿಯಾಗಿದೆ. ಅದೆಷ್ಟು ಜೀವಿಗಳಿವೆಯೋ ಆ ದೇವರಿಗೇ ಗೊತ್ತು. ಈ ಜೀವಿಗಳನ್ನೆಲ್ಲಾ ದೇವರು ತನ್ನ ಅಂಶದಿಂದಲೇ ಸೃಷ್ಟಿಸಿದ ಎಂದರೆ ಆತನ ಎಷ್ಟು ಅಂಶ ಈ ಜೀವಿಗಳಲ್ಲಿ ಹಂಚಿಹೋಗಿರಬೇಕು! ಇಷ್ಟವಾಗದ ಪ್ರಶ್ನೆ ಇಲ್ಲಿ ಹುಟ್ಟುತ್ತದೆ, ಇಷ್ಟೆಲ್ಲಾ ಅಂಶವನ್ನು ಜೀವಿಗಳಲ್ಲಿ ಹಂಚಿದ ಮೇಲೂ ದೇವರು ಪರಿಪೂರ್ಣ ಎನ್ನಬಹುದೇ? ಪರಿಪೂರ್ಣನಲ್ಲವೆಂದರೆ ಆತನು ದೇವರಾಗಲಾರ ಅಲ್ಲವೇ? ಇಲ್ಲಿ ಇಂತಹ ಅನೇಕ ಉಪಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಇವುಗಳಿಗೆ ಸಮಂಜಸ ಉತ್ತರ ಕಲ್ಪಿಸಿಕೊಳ್ಳುವುದು ಕಷ್ಟ.
'ಗೊಂಬೆಯಾಟವಯ್ಯಾ, ಈ ಬ್ರಹ್ಮಾಂಡವೇ ಆ ದೇವನಾಡುವ ಗೊಂಬೆಯಾಟವಯ್ಯಾ'- ಲೋಕದ ಎಲ್ಲಾ ಸಂಗತಿಗಳಿಗೂ ದೇವರೇ ಕಾರಣ, ಆತನ ಇಚ್ಛೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡದು ಎಂಬ ಅರ್ಥದ ಮಾತುಗಳನ್ನು ಕೇಳುತ್ತೇವೆ. 'ನಮ್ಮ ಕೈಯಲ್ಲೇನಿದೆ, ಎಲ್ಲಾ ಅವನು ಹೇಳಿದಂತೆ ನಡೆಯುತ್ತದೆ' ಎಂದು ಹೇಳುತ್ತೇವೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ದೇವರೇ ಕಾರಣವೆಂದರೆ ನಮ್ಮ ತಪ್ಪು ಏನಿರುತ್ತದೆ? ಯಾರನ್ನಾದರೂ ಕೊಲೆ ಮಾಡಿದರೆ ಅದಕ್ಕೂ ದೇವರೇ ಕಾರಣ ಎನ್ನಬಹುದಲ್ಲವೇ? ದೇವರು ಮಾಡಿಸಿದ ಕೆಲಸಕ್ಕೆ ಶಿಕ್ಷೆ ದೇವರಿಗೆ ಕೊಡಬೇಕೇ ಹೊರತು ನಿಮಿತ್ತ ಮಾತ್ರವಾಗಿ ಕೊಲೆ ಮಾಡಿದವರಿಗೆ ಶಿಕ್ಷೆ ಏಕೆ ಕೊಡಬೇಕು? ಹೀಗಿರುವಾಗ ಧರ್ಮ, ಅಧರ್ಮ, ಸತ್ಯ, ಅಸತ್ಯ, ಪಾಪ, ಪುಣ್ಯ, ಮೋಕ್ಷ, ಸ್ವರ್ಗ, ನರಕ ಮುಂತಾದುವುಗಳಿಗೆ ಅರ್ಥವಾದರೂ ಎಲ್ಲಿ ಬರುತ್ತದೆ?
ಜೀವಿಗಳಲ್ಲಿ ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ, ಕೆಲವರು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಠರಾಗಿರುತ್ತಾರೆ. ಕೆಲವರು ದುಃಖಿಗಳಾಗಿರುತ್ತಾರೆ, ಕಷ್ಟಪಡುತ್ತಾರೆ, ಕೆಲವರು ಸುಖ-ಸಂತೋಷಗಳಲ್ಲಿ ಮುಳುಗಿರುತ್ತಾರೆ. ಕಂಡ ಕೂಡಲೇ ಹೊಡೆದು ಸಾಯಿಸಲ್ಪಡುವ ಸೊಳ್ಳೆಗಳಿರುತ್ತವೆ, ಬೆಕ್ಕಿನ ಭಯದ ಇಲಿ, ನಾಯಿಯ ಭಯದ ಬೆಕ್ಕುಗಳು ಜನ್ಮ ತಾಳುತ್ತವೆ. ಇಂತಹ ಜೀವಿಗಳನ್ನು ದೇವರೇ ಸೃಷ್ಟಿಸಿದ ಎಂದರೆ ಅವನನ್ನು ಪಕ್ಷಪಾತಿ, ಅನ್ಯಾಯಿ, ನಿಷ್ಕರುಣಿ ಅನ್ನದಿರಲು ಸಾಧ್ಯವಿದೆಯೇ? ದೇವರನ್ನು ಪಕ್ಷಪಾತಿ ಎಂದು ಹೇಳಲು ಮನಸ್ಸು, ಅದರಲ್ಲೂ ಆಸ್ತಿಕ ಮನಸ್ಸು, ಸುತರಾಂ ಒಪ್ಪುವುದಿಲ್ಲ. ಹಾಗಾದರೆ ಈ ರೀತಿಯ ಜೀವಿಗಳು ಸೃಷ್ಟಿಯಾಗಲು ಮತ್ತೇನೋ ಕಾರಣವಿರಲೇಬೇಕು. ಪುನರ್ಜನ್ಮವಿಲ್ಲವೆನ್ನುವ, ಇರುವುದೊಂದೇ ಜನ್ಮವೆನ್ನುವ ವಾದಗಳಿಗೆ ಇಂತಹ ನ್ಯೂನತೆಯಿಂದ ಒಡಗೂಡಿದ ಜೀವಜಂತುಗಳ ಸೃಷ್ಟಿಗಳಿಗೆ ಸ್ಪಷ್ಟನೆ ಕೊಡಲಾಗುವುದಿಲ್ಲ.
ಇನ್ನೊಂದು ವಾದವಿದೆ. ಅದೆಂದರೆ 'ಜೀವಚೈತನ್ಯ ಅನ್ನುವುದು ಶರೀರಕ್ಕೆ ಸಂಬಂಧಿಸಿದುದೇ ಆಗಿದೆ., ಶರೀರದೊಂದಿಗೇ ಹುಟ್ಟುತ್ತದೆ ಮತ್ತು ಶರೀರದೊಂದಿಗೇ ಸಾಯುತ್ತದೆ' ಎಂಬುದೇ ಆಗಿದೆ. ಇಲ್ಲೂ ಸಂದೇಹಗಳು ಬರುತ್ತವೆ. ಈ ಪ್ರಾಣಚೈತನ್ಯ ಶರೀರದೊಂದಿಗೇ ಹುಟ್ಟುವುದಾಗಿದ್ದರೆ, ಶರೀರದೊಂದಿಗೇ ನಷ್ಟವಾಗಬೇಕು. ಅಂದರೆ, ಜೀವಿ ಸತ್ತಾಗ ಶರೀರ ಇರುತ್ತದೆ. ಚೈತನ್ಯವೂ ಇರಬೇಕಿತ್ತಲ್ಲವೇ? ಇದೆಂತಹ ಚೋದ್ಯ! ಈ ಚೈತನ್ಯ ಅನ್ನುವುದು ಶರೀರದ ಗುಣವೇ ಅಥವ ಹೊರಗಿನ ಮತ್ತಾವುದೋ ಸಂಗತಿಯೋ? ಶರೀರ ಜಡವಸ್ತುವಾಗಿದೆ. ಆದರೆ ಈ ಚೈತನ್ಯ ಜಡವಸ್ತುವಲ್ಲ. ಜಡವಸ್ತುವಿನಿಂದ ಚೈತನ್ಯಮಯಿ ವಸ್ತು ಜನಿಸುವುದಾದರೂ ಹೇಗೆ? ಅದು ಶರೀರದಿಂದ ಹೊರತಾದ ಸಂಗತಿಯಾಗಿದ್ದು ಶರೀರದೊಂದಿಗೆ ಸಂಯೋಜಿಸಲ್ಪಟ್ಟಿದೆಯೆಂದರೆ ಶರೀರಕ್ಕೂ ಅದಕ್ಕೂ ಸಂಬಂಧ ಹೇಗೆ? ಶರೀರಕ್ಕಾದರೋ ವಿವೇಚನಾಶಕ್ತಿಯಿಲ್ಲ, ಆದರೆ ಈ ಪ್ರಾಣಚೈತನ್ಯ ವಿವೇಚಿಸಬಲ್ಲದುದಾಗಿದೆ. ಹೇಗೆ ತರ್ಕಿಸಿದರೂ ಶರೀರದ ಭಾಗವಾಗಿ ಈ ಜೀವಾತ್ಮ ಹುಟ್ಟುತ್ತದೆ, ಶರೀರದೊಂದಿಗೇ ಸಾಯುತ್ತದೆ ಎಂಬುದು ನಿಲ್ಲುವಂತಹ ವಾದವಾಗದು.
ಅರಿವಿರದ ನರನಿರುವನೆ ದುರಿತದಿಂ ದೂರ
ಎಡವಿ ಜಾರುವನು ಕವಿಯೆ ಗೂಢಾಂಧಕಾರ |
ಬೆಳಗೀತು ಬಾಳು ಪಸರಿಸಲರಿವ ಬೆಳಕು
ವಿಕಸಿಸುವ ಹಾದಿ ತೋರೀತು ಮೂಢ ||
ಈ ಜೀವಾತ್ಮ ಅನ್ನುವುದು ದೇವರಿಂದ ಹೊಸದಾಗಿ ಸೃಷ್ಟಿಸಿದುದಲ್ಲ, ಶೂನ್ಯದಿಂದ ಸೃಷ್ಟಿಯಾದುದಲ್ಲ, ಜಡ ಪ್ರಕೃತಿಯ ನಿರ್ಮಿತವಲ್ಲ, ಪರಮಾತ್ಮನ ಅಂಶವಲ್ಲ, ಜೀವಿಗಳ ಎಲ್ಲಾ ಚಟುವಟಿಕೆಗಳಿಗೂ ದೇವರೇ ಹೊಣೆಯಲ್ಲ, ಹುಟ್ಟಿನ ರೀತಿಗೆ ದೇವರು ಕಾರಣನಲ್ಲ, ಶರೀರದ ಹುಟ್ಟಿನೊಂದಿಗೇ ಬರುವುದಲ್ಲವೆಂದರೆ ಅದರ ಅಸ್ತಿತ್ವಕ್ಕೆ ವಿವರಣೆ ಕೊಡುವುದಾದರೂ ಹೇಗೆ? ಒಂದು ಸಮಂಜಸವೆನ್ನಿಸುವ ವಾದವಿದೆ. ಜೀವಾತ್ಮ ಅನ್ನುವುದು ಪರಮಾತ್ಮ ತತ್ತ್ವದಂತೆ ಅನಾದಿ ಮತ್ತು ಅನಂತವಾದುದು ಎಂಬ ಈ ವಾದಕ್ಕೆ ಮೇಲಿನ ತರ್ಕಗಳು ಪುಷ್ಟಿ ನೀಡುತ್ತವೆ. ವಿಭಿನ್ನ ರೀತಿಯ ಹುಟ್ಟು, ಸ್ಥಿತಿ-ಗತಿಗಳಿಗೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಸಮಂಜಸವೆನ್ನುವಂತಹ ವಿವರಣೆ ಕೊಡುತ್ತವೆ. ಜೀವಾತ್ಮನ ಕುರಿತು ಮತ್ತಷ್ಟು ವಿಷಯಗಳ ಬಗ್ಗೆ ಹಾಗೂ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳ ಕುರಿತು ಮುಂದೆ ಚರ್ಚಿಸೋಣ.
ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು |
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||
ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು
ಚಿರಂಜೀವ ನಿತ್ಯ ಶಾಶ್ವತವು ಮೂಢ ||
ಜೀವಾತ್ಮದ ಸ್ವರೂಪದ ಕುರಿತ ಹಲವಾರು ವಾದಗಳ ಬಗ್ಗೆ ಚರ್ಚಿಸಿದೆವು. ತರ್ಕದ ಎದುರಿಗೆ ಜೀವಾತ್ಮ ಅನ್ನುವುದು ದೇವರ ಹೊಸ ಸೃಷ್ಟಿ, ಶೂನ್ಯದಿಂದ ಆದ ಸೃಷ್ಟಿ, ಪ್ರಕೃತಿಯ ಕೊಡುಗೆ, ಪರಮಾತ್ಮನ ಅಂಶ, ಶರೀರದ ಹುಟ್ಟಿನೊಂದಿಗೆ ಉದಯಿಸುವಂತಹದು, ಇತ್ಯಾದಿ ವಾದಗಳು ನಿಲ್ಲುವುದಿಲ್ಲವೆಂದು ಕಂಡುಕೊಂಡೆವು. ಇದಲ್ಲ, ಇದಲ್ಲ ಎಂದು ಒಂದೊಂದಾಗಿ ಹಲವು ವಾದಗಳನ್ನು ಒರೆಗೆ ಹಚ್ಚಿ ನೋಡಿ ತಿಳಿದ ನಂತರದಲ್ಲಿ ಉಳಿಯುವುದು ಒಂದೇ ವಾದ, ಅದೆಂದರೆ ಈ ಜೀವಾತ್ಮ ಅನ್ನುವುದು ಪರಮಾತ್ಮ ತತ್ತ್ವದಂತೆ ಅನಾದಿಯಾದುದು ಮತ್ತು ಅನಂತವಾದುದು ಎಂಬ ವಾದ. ಇದಕ್ಕೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಪುಷ್ಟಿ ನೀಡುವುದು ವಿಶೇಷವಾಗಿದೆ.
ಜೀವಾತ್ಮ ಅಥವ ಪ್ರಾಣಚೈತನ್ಯ ಅನಾದಿ ಮತ್ತು ಅನಂತವಾದುದು ಎಂಬ ವಾದಕ್ಕೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಹೇಗೆ ಪೂರಕವಾಗಿವೆ ಎಂಬುದನ್ನು ನೋಡೋಣ. ಈ ಲೋಕದಲ್ಲಿ ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ. ಕೆಲವರು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಟರಾಗಿರುತ್ತಾರೆ. ಕೆಲವರು ದಡ್ಡರಾಗಿರುತ್ತಾರೆ, ಕೆಲವರು ಬುದ್ಧಿವಂತರಾಗಿರುತ್ತಾರೆ, ಕೆಲವರು ಸುಂದರರಾಗಿದ್ದರೆ, ಕೆಲವರು ಕುರೂಪಿಗಳಾಗಿರುತ್ತಾರೆ. ಏಕೆ? ನಾವು ಹುಟ್ಟಿದ್ದೇವೆ, ಇದ್ದೇವೆ ಎಂಬ ಸತ್ಯ ನಮಗೆ ಅರ್ಥವಾಗುತ್ತದೆ. ಆದರೆ ನಮ್ಮ ತಂದೆ-ತಾಗಳು ಇಂಥವರೇ ಆಗಿರಬೇಕು ಎಂಬ ಆಯ್ಕೆ ನಮ್ಮ ಕೈಯಲ್ಲಿದೆಯೇ? ನಾವು ಹೀಗೆಯೇ ಹುಟ್ಟಬೇಕು, ಇಂತಹ ಜಾತಿಯಲ್ಲೇ ಹುಟ್ಟಬೇಕು ಎಂದು ಬಯಸಲು ಸಾಧ್ಯವಿದೆಯೇ? ಇಲ್ಲ. ಏಕೆ? ನಮ್ಮ ಯಾವುದೇ ತಪ್ಪಿಲ್ಲದೆ ಹೀನ, ದೀನ ಸ್ಥಿತಿಯಲ್ಲಿ ಹುಟ್ಟುವುದಾದರೆ ಅದನ್ನು ದೇವರು ಮಾಡಿದ ಪಕ್ಷಪಾತ ಎನ್ನಲೇಬೇಕಾಗುತ್ತದೆ. ದೇವರು ಪಕ್ಷಪಾತ ಮಾಡುತ್ತಾನೆ ಎಂದರೆ ಯಾರು ನಂಬುತ್ತಾರೆ? ದೇವರು ಪಕ್ಷಪಾತಿಯಲ್ಲ ಅನ್ನುವುದಾದರೆ ಈ ರೀತಿ ಹುಟ್ಟುವುದಕ್ಕೆ ಬೇರೆ ಏನೋ ಕಾರಣವಿರಲೇಬೇಕು. ಅದು ಏನು?
ಪುನರ್ಜನ್ಮವನ್ನು ನಂಬುವುದಾದರೆ ಶರೀರ ಬೇರೆ ಮತ್ತು ಶರೀರದ ಚೈತನ್ಯಕ್ಕೆ ಕಾರಣವೆನಿಸಿದ ಜೀವಾತ್ಮ ಬೇರೆ ಅನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಸತ್ತ ನಂತರ ಶರೀರ ಅಂತ್ಯ ಸಂಸ್ಕಾರದ ಮೂಲಕ ಪಂಚಭೂತಗಳಲ್ಲಿ ವಿಲೀನವಾಗುತ್ತದೆ. ಜೀವಾತ್ಮ ಜೀರ್ಣವಾದ ಬಟ್ಟೆಯನ್ನು ಎಸೆದು ಹೊಸ ಬಟ್ಟೆಯನ್ನು ತೊಡುವಂತೆ ಹೊಸ ಶರೀರದಲ್ಲಿ ಚೈತನ್ಯಶಾಲಿಯಾಗುತ್ತದೆ. ಇದನ್ನು ಒಪ್ಪುವುದಿಲ್ಲವೆಂದರೆ ಅಂತ್ಯ ಸಂಸ್ಕಾರದ ಜೊತೆಗೆ ಆತ್ಮವೂ ನಾಶವಾಗುತ್ತದೆ ಎನ್ನಬೇಕಾಗುತ್ತದೆ. ಯಾವುದು ಸರಿಯಿರಬಹುದು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ