ನಾನಾರು ಅವನಾರು ಜಗವೆಂದರೇನು
ಪ್ರಶ್ನತ್ರಯಗಳು ನರರ ಕಾಡದಿಹವೇನು |
ಹಿಂದಿದ್ದು ಈಗಿರುವ ಎಂದೆಂದು ಇಹವೀ
ಒಗಟಿಗುತ್ತರವ ತಿಳಿದಿಹೆಯ ಮೂಢ ||
ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
ನಾವು ಯಾರು? ಜಗತ್ತು ಅಂದರೆ ಏನು? ದೇವರು ಯಾರು? ಈ ಮೂರು ಪ್ರಶ್ನೆಗಳು ಅನಾದಿ ಕಾಲದಿಂದಲೂ ನರರನ್ನು ಕಾಡುತ್ತಲೇ ಇವೆ. ಮುಂದೂ ಕಾಡುತ್ತಲೇ ಇರುತ್ತವೆ. ದಾರ್ಶನಿಕರು, ಸಾಧು-ಸಂತರು, ಧಾರ್ಮಿಕ ಮುಖಂಡರು, ಸಮಾಜ ಸುಧಾರಕರು, ಧರ್ಮಗ್ರಂಥಗಳು, ಇತ್ಯಾದಿಗಳೆಲ್ಲವೂ ಮತ್ತು ಎಲ್ಲರೂ ವಿವರಿಸಲು ಪ್ರಯತ್ನಿಸಿರುವುದು ಮತ್ತು ವಿವರಿಸಿರುವುದು ಈ ಮೂರು ಅಂಶಗಳ ಕುರಿತೇ ಆಗಿದೆ. ಬೈಬಲ್ಲು, ಕುರಾನು, ವಿವಿಧ ಪುರಾಣ/ಪುಣ್ಯ ಕಥೆಗಳು ಈ ಜಗತ್ತು, ಜೀವಿಗಳೆಲ್ಲವನ್ನೂ ಸೃಷ್ಟಿಸಿದ್ದು ದೇವರೇ ಎಂದು ಹೇಳುತ್ತವೆ. ಏಕದೇವವಾದ, ಬಹುದೇವವಾದ, ನಿರೀಶ್ವರವಾದ, ದ್ವೈತ, ಅದ್ವೈತ, ತ್ರೈತವಾದ, ಒಂದೇ, ಎರಡೇ? ಅಸಂಖ್ಯವಾದ ವಿಚಾರಗಳು, ತರ್ಕಗಳು, ಜಿಜ್ಞಾಸೆಗಳು, ಚರ್ಚೆಗಳು ಎಂದಿನಿಂದಲೂ ನಡೆಯುತ್ತಲೇ ಇವೆ, ಮುಂದೂ ನಡೆಯುತ್ತಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಸತ್ಯ, ಮಿಕ್ಕಿದ್ದೆಲ್ಲವೂ ಸುಳ್ಳು ಎನ್ನುತ್ತಾರೆ. ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು? ನೂರೆಂಟು ತರ್ಕ-ವಿತರ್ಕಗಳ ಸಾಲಿನಲ್ಲಿ ಈ ಲೇಖನವೂ ಸೇರಿಕೊಂಡುಬಿಡಲಿ, ಏನಂತೀರಿ?
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ ||
ಹಿಂದಿನ ಲೇಖನವೊಂದರಲ್ಲಿ 'ನಾವು' ಎಂದು ಅಂದುಕೊಂಡಿರುವ ಶರೀರವಾಗಲೀ, ನಮ್ಮ ಮನಸ್ಸಾಗಲೀ ವಾಸ್ತವವಾಗಿ 'ನಾವು' ಆಗಿರದೆ ನಮ್ಮೊಳಗಿನ ಪ್ರಾಣವೇ ವಸ್ತುಶಃ ನಾವಾಗಿರುತ್ತೇವೆ ಎಂಬ ಬಗ್ಗೆ ಚರ್ಚಿಸಿದೆವು. ದೇಹದಲ್ಲಿ ಪ್ರಾಣಚೈತನ್ಯ ಇರುವವರೆಗೆ ಆ ದೇಹಕ್ಕೆ ಬೆಲೆ, ಪ್ರಾಣ ಹೋದ ನಂತರ ಅದಕ್ಕೆ ಮೊದಲಿನ ಪ್ರಾಮುಖ್ಯತೆ ಇರುವುದಿಲ್ಲ. ನಾವು ಅಂದರೆ ನಮ್ಮೊಳಗಿನ ಪ್ರಾಣಚೈತನ್ಯ ಅಥವ ಜೀವಾತ್ಮ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಈ ಜೀವಾತ್ಮ ಅನ್ನುವುದಾದರೂ ಏನು? ನಮ್ಮೊಳಗಿನ ಕೌತುಕವನ್ನು ನಾವೇ ಪೂರ್ಣವಾಗಿ ಅರಿಯಲಾಗದಿರುವುದು ಕೌತುಕವೇ ಆಗಿದೆ.
ಕಾಣದದು ನಯನ ಕೇಳಿಸದು ಕಿವಿಗೆ
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? ||
ಈ ಜೀವಾತ್ಮದ ಕುರಿತು ಹಲವಾರು ಧರ್ಮಗ್ರಂಥಗಳು ಹಲವು ರೀತಿ ತಿಳಿಸಿವೆ, ಹಲವರು ಹಲವು ರೀತಿಯಲ್ಲಿ ವಿವರಿಸುತ್ತಾರೆ. ಯಾವುದು ಸರಿ? ಈ ಕುರಿತು ವಿವಿಧ ವಿಚಾರಗಳ ಅಧ್ಯಯನ, ಮನನ, ಮಂಥನಗಳಿಂದ ನಮಗೊಪ್ಪುವ ವಿಚಾರವನ್ನು ನಾವು ಸತ್ಯಕ್ಕೆ ಹತ್ತಿರವೆಂದುಕೊಳ್ಳಬೇಕಾಗುತ್ತದೆ. ಏಕೆಂದರೆ 'ಇದು ಹೀಗೇನೇ' ಎಂದು ಖಚಿತವಾಗಿ ಸಾಧಿಸಿ ತೋರಿಸುವುದು ಮಾನವನ ಸೀಮಿತ ಬುದ್ಧಿಶಕ್ತಿಗೆ ಅಶಕ್ಯವಾಗಿದೆ. "ನಮ್ಮ ಗುರುಗಳು ದೊಡ್ಡ ಪಂಡಿತರು, ಅವರು ಹೀಗೆ ಹೇಳಿದ್ದಾರೆ ಎಂದ ಮೇಲೆ ಅದು ಸರಿಯಾಗಿಯೇ ಇರುತ್ತದೆ; ನಮ್ಮ ಧರ್ಮಶಾಸ್ತ್ರದಲ್ಲಿ ಹೀಗೆ ಹೇಳಿದೆ, ಅದನ್ನು ನಾವು ಒಪ್ಪಲೇಬೇಲ್ಲವೇ?" ಎಂಬಂತಹ ವಾದಗಳೂ ಕೇಳಿಬರುತ್ತವೆ. ತರ್ಕದಲ್ಲಿ ತೊಡಗುವ ಮನಸ್ಸೇ ಸತ್ಯ ಅನ್ವೇಷಿಸಲು ಸಾಧ್ಯ. ಪೂರ್ವಾಗ್ರಹ ಪೀಡಿತರಾಗದೆ, ನಾವು ನಂಬಿದ್ದೇ ಸತ್ಯವೆಂದು ವಾದಿಸಹೋಗದೆ ನಿಜಸತ್ಯವನ್ನು ತಿಳಿಯುವ ಕುತೂಹಲ, ಆಸಕ್ತಿ ಮತ್ತು ಅಧ್ಯಯನಗಳೇ ಸತ್ಯಾನ್ವೇಷಿಗಳಿಗೆ ಮಾರ್ಗದರ್ಶಿಯಾಗಿರುತ್ತವೆ. ಈ ವಿಷಯದಲ್ಲಿ ವೈಚಾರಿಕತೆಯನ್ನು ಎತ್ತಿ ಹಿಡಿಯುವ ಈ ವೇದಮಂತ್ರದ ಕರೆ ಆಪ್ಯಾಯಮಾನವೆನಿಸುತ್ತದೆ: ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಛ ಶಸ್ಯತೇ | ವಿಶ್ವಸ್ಯ ತಸ್ಯ ಭವತಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತಃ || (ಋಕ್.೫.೫೫.೮) 'ಯಾವುದು ಪ್ರಾಚೀನವೋ, ಯಾವುದು ನವೀನವೋ, ಯಾವುದು ನಿಮ್ಮ ಅಂತಃಕರಣದಿಂದ ಉದ್ಭವಿಸುತ್ತದೋ ಮತ್ತು ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ, ಆ ಎಲ್ಲದಕ್ಕೂ ಕಿವಿಗೊಡಿ. ಆದರೆ ಕಲ್ಯಾಣಮಾರ್ಗದಲ್ಲಿ ನಡೆಯುವವರ ಹಿಂದೆ ನಿಮ್ಮ ಜೀವನ ರಥ ಸಾಗಲಿ' ಎಂಬುದು ಇದರ ಅರ್ಥ. ಇತಿಹಾಸದಿಂದ ಪಾಠ ಕಲಿಯೋಣ; ವರ್ತಮಾನದ ಸಂಗತಿಗಳನ್ನೂ ಅವಲೋಕಿಸೋಣ; ಯಾವುದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆಯೋ ಅದನ್ನೂ ಆಲಿಸೋಣ. ನಮ್ಮ ಅಂತರಂಗದ ಧ್ವನಿಗೂ ಕಿವಿಗೊಟ್ಟು ಒಳ್ಳೆಯ ದಾರಿಯಲ್ಲಿ ನಡೆಯುವವರ ಮಾರ್ಗವನ್ನು ಅನುಸರಿಸೋಣ ಎಂಬುದರಲ್ಲಿ ನಮ್ಮ ವಿವೇಚನಾಶಕ್ತಿಯನ್ನು ಬಳಸಿಕೊಳ್ಳಬೇಕೆಂಬ ಕರೆಯಿದೆ. ಈ ಮಂತ್ರವೂ ಸಹ ಹೇಳುತ್ತದೆ: ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯) ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ ಸತ್ಯವನ್ನು ಕಂಡುಕೊಳ್ಳಿರಿ, ಅದನ್ನು ಹೊರಕ್ಕೆ ತನ್ನಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನದ ಶಕ್ತಿಯಿಂದ ತೊಡೆದುಹಾಕಿ ಎಂಬುದು ಇದರ ಅರ್ಥ. ಜಗತ್ತಿನಲ್ಲಿ ಇರುವ ಸುಮಾರು ೮೪ ಲಕ್ಷ ಜೀವಜಂತುಗಳ ಪೈಕಿ ಮಾನವನಿಗೆ ಮಾತ್ರ ವಿವೇಚನಾ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದನ್ನು ಬಳಸಿಕೊಂಡು ಸತ್ಯ ಯಾವದು, ಒಳ್ಳೆಯದು ಯಾವುದು ಎಂಬುದನ್ನು ಕಂಡುಕೊಂಡು ಕೆಟ್ಟದ್ದನ್ನು ದೂರ ಮಾಡಲು ನೀಡುವ ಕರೆ ಎಷ್ಟು ಸುಂದರ ಅಲ್ಲವೇ?
ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು |
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ ||
ವಿಚಾರ ಮಾಡೋಣ. ಜೀವಿಗಳು ದೇವರ ಸೃಷ್ಟಿ, ದೇವರು ಸೃಷ್ಟಿಸುವ ಮುನ್ನ ಜೀವಿಗಳು ಇರಲಿಲ್ಲ ಎಂದು ಒಂದು ವಾದವಿದೆ. ಇಲ್ಲಿ ಪ್ರಶ್ನೆಗಳು ಉದ್ಭವಿಸುತ್ತವೆ. ದೇವರು ಸೃಷ್ಟಿಸಿದ್ದಾದರೆ ಏಕೆ ಸೃಷ್ಟಿಸಿದ? ಸುಮ್ಮನೆ ಸೃಷ್ಟಿಸಿದನೆ? ತನಗೆ ಬೇಕಾಗಿತ್ತು, ಸೃಷ್ಟಿಸಿದ ಎಂದರೆ, 'ಬೇಕು/ಬೇಕಾಗಿತ್ತು' ಎಂಬ ಭಾವನೆ ಇದ್ದಲ್ಲಿ ಸೃಷ್ಟಿಕರ್ತನನ್ನು ದೇವರೆನ್ನಲಾಗುವುದಿಲ್ಲ. ಏಕೆಂದರೆ 'ಏನಾದರೂ ಬೇಕು' ಎಂದರೆ ಅವನಿಗೆ ಏನೋ ಕೊರತೆಯಿತ್ತು ಅನ್ನಿಸುವುದಿಲ್ಲವೇ? ಇದು ಸರ್ವತೃಪ್ತ ದೇವರಿಗೆ ವಿರುದ್ಧವಾದವಾಗುತ್ತದೆ.
Ganapathi Bhatta
ಪ್ರತ್ಯುತ್ತರಅಳಿಸಿನಾವು ಯಾರು ಅಂತ ಅಲ್ಲ . ನಾನು ಯಾರು? ಯಾಕೆಅಂದ್ರೆ ನನ್ನ ಬಿಟ್ರೆ ಇನ್ಯಾರು ಇಲ್ಲ.ಇರುವುದು ಒಂದೇ ಒಂದು ಅದು ನಾನು.ನಾನೊಬ್ಬನೇ ಯಾವಾಗಲೂ ಎಲ್ಲೇಲ್ಲಿಯು ಇದ್ದುಕೊಂಡು ನನಗೆರಡನೆಯದೇ ಇಲ್ಲದಿರುವ ಅದೈತ ಸ್ವರೂಪನು.
ಈ ನಾನು ವನ್ನು ಕಂಡುಕೊಳ್ಳುವುದೇ ಮಾನವ ಜೀವನದ ಗುರಿ ಎಂದು ವೇದಾಂತ ಹೇಳುತ್ತದೆ