ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜನವರಿ 6, 2016

ಸಾಧನಾ ಸೋಪಾನ - 17: ಪ್ರಾಣ ಅರ್ಥಾತ್ ಜೀವ


ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತನ್ನಿಚ್ಛೆಯಂತೆ ಕೈಕಾಲು ಆಡುವುವೆ? |
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ ||      
     ಜೀವ ಎಂದರೇನೆಂದು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಪ್ರಾಣ ಎಂದು ಕರೆಯಲ್ಪಡುವ ಜೀವ ಎಂಬ ಪದವನ್ನು ಬಹಳ ಸಲ ಪ್ರಯೋಗಿಸುತ್ತೇವೆ, ಆದರೆ ಅದು ಏನು ಎಂಬುವುದನ್ನು ನಮಗೆ ವಿವರಿಸಲಾಗುವುದಿಲ್ಲ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಜೀವ ಎಂದ ಗುರುತಿಸುವುದು ನಮ್ಮ ತಪ್ಪು ಗ್ರಹಿಕೆ. ಈ ಜೀವ ನಿಗೂಢವಾದುದು. ಜೀವ ಅಥವ ಪ್ರಾಣ ಅನ್ನುವುದು ನಿಜವಾದ ನಾವು! ಅದು ಉಸಿರಾಡುವ ಕ್ರಿಯೆಯಲ್ಲ, ಆದರೆ ಜೀವತತ್ತ್ವವೇ ಆಗಿದ್ದು ಅದಿಲ್ಲದಿದ್ದರೆ ಸ್ವಪ್ರಜ್ಞೆಯಾಗಲೀ, ಯಾವುದೇ ಚಟುವಟಿಕೆಯಾಗಲೀ ಸಾಧ್ಯವೇ ಇಲ್ಲ. ಈ ನಮ್ಮ ಜೀವ ಅನ್ನುವುದು ಅನಂತದ ಮತ್ತು ಅಂತ್ಯದ ಗಡಿರೇಖೆ ಎಂದುಕೊಂಡರೆ ನಮ್ಮ ವ್ಯಕ್ತಿತ್ವದ ಅಸ್ತಿತ್ವಕ್ಕೆ ಕಾರಣವಾದ ಜೀವ ಅನಂತವನ್ನು ಅಂತದೊಂದಿಗೆ ಸಂಕುಚಿಸಿದಂತೆ ಅಥವ ಅಂತವು ಅನಂತದೆಡೆಗೆ ಧಾವಿಸುವ ಪ್ರಾರಂಭಿಕ ರೀತಿಯಂತೆ ಭಾವಿಸಿದರೆ ಉಂಟಾಗುವ ಭಾವನೆ ಅನಿರ್ವಚನೀಯ. ಈ ಕೂಡುವ ಸ್ಥಳ ಇದೆಯಲ್ಲಾ, ಅದೇ ಜೀವ! ಅದು ಅಂತವನ್ನೂ ಪ್ರತಿನಿಧಿಸುತ್ತದೆ, ಅನಂತವನ್ನೂ ಪ್ರತಿನಿಧಿಸುತ್ತದೆ. ಹಾಗಾಗಿ ಈ ಜೀವವನ್ನು ನಿಗೂಢ ಎಂದಿರುವುದು! ಅದು ವ್ಯಕ್ತಿಗತವೂ ಅಲ್ಲ, ಇಡೀ ವಿಶ್ವದ್ದೂ ಅಲ್ಲ. ಅದೇನೆಂದು ನಮಗೆ ಗೊತ್ತಿಲ್ಲ, ಅದನ್ನು ವಿವರಿಸಲೂ ನಮಗೆ ಆಗದು. ಆದರೂ ಅದೇನೇ ಇರಲಿ, ಈ ಜೀವ ಅಥವ ಪ್ರಾಣ ಅನ್ನುವುದು ಇತರ ಎಲ್ಲಕ್ಕಿಂತಲೂ ಹಿರಿದಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನೇ ಜೀವದ ಮಹತ್ವ ಎನ್ನುವುದು. ಈ ಜೀವ ಅನ್ನುವುದು ಕೇವಲ ಜೈವಿಕ ಚಟುವಟಿಕೆಯಲ್ಲ, ಜೈವಿಕ ಕೆಲಸವಲ್ಲ, ವೈಯಕ್ತಿಕ ಅಥವ ಸಾಮಾಜಿಕ ಜೀವನವಲ್ಲ, ಆದರೆ ಅದಕ್ಕೂ ಮೀರಿದ್ದಾಗಿದೆ.
     'ಅವರು ನಮ್ಮ ತಂದೆ', 'ಇವರು ನಮ್ಮ ತಾಯಿ', 'ಇವನು ನನ್ನ ಅಣ್ಣ/ತಮ್ಮ' 'ಇವಳು ನನ್ನ ಅಕ್ಕ/ತಂಗಿ' ಎಂದೆಲ್ಲಾ ಹೇಳುತ್ತೇವಲ್ಲಾ ಹೀಗಂದರೆ ಏನು? ಅವರುಗಳ ಶರೀರವನ್ನು ನಾವು ತಂದೆ, ತಾಯಿ, ಅಣ್ಣ, ತಮ್ಮ, ಇತ್ಯಾದಿ ಭಾವಿಸುತ್ತೇವೆಯೇ? ಅವರುಗಳಲ್ಲಿ ಇರುವ ಏನೋ ಒಂದನ್ನು ನಾವು ತಂದೆ, ತಾಯಿ, ಇತ್ಯಾದಿಯಾಗಿ ಕಾಣುತ್ತೇವೆ. ನಾವು ಯಾರು ಎಂಬುದನ್ನು ನಮಗೇ ಹೇಳುವುದು ಕಷ್ಟ, ಇನ್ನು ಇತರರ ಮಾತೇನು? ಹಾಗಾಗಿ ಉಪನಿಷತ್ತು ಹೇಳುತ್ತದೆ: 'ಪ್ರಾಣವೇ ತಂದೆ, ಪ್ರಾಣವೇ ತಾಯಿ, ಪ್ರಾಣವೇ ಸೋದರ, ಪ್ರಾಣವೇ ಉಸಿರು, ಪ್ರಾಣವೇ ಗುರು, ಪ್ರಾಣವೇ ಬ್ರಹ್ಮ!' ಒಂದು ಚಕ್ರದ ಕೀಲುಗಳು ಹೇಗೆ ಅದರ ಮಧ್ಯಭಾಗದಲ್ಲಿ ಜೋಡಿಸಲ್ಪಟ್ಟಿವೆಯೋ, ಹಾಗೆ ಪ್ರತಿಯೊಂದು ಸಂಗತಿಯೂ ಸಹ ಜೀವತತ್ತ್ವಕ್ಕೆ ಪೋಣಿಸಲ್ಪಟ್ಟಿವೆ. ಈ ಪ್ರಪಂಚದಲ್ಲಿ ಯಾವುದೇ ಮೌಲ್ಯವಿರುವ, ಅರ್ಥವಿರುವ ಸಂಗತಿ ಅನ್ನುವುದು ಏನಾದರೂ ಇದ್ದರೆ ಅದು ಪ್ರಾಣ ಹೊರತುಪಡಿಸಿ ಮತ್ತಾವುದೂ ಅಲ್ಲ. ಪ್ರಾಣವಿರದಿದ್ದರೆ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ನಮ್ಮ ಪ್ರಾಮುಖ್ಯತೆ ನಾವು ಬದುಕಿರುವವರೆಗೆ ಮಾತ್ರ. ಬದುಕಿರುವವರೆಗೆ ಮಾತ್ರ ನಮಗೆ ಬೆಲೆ. ನಮ್ಮಲ್ಲಿ ಪ್ರಾಣವಿರದಾಗ ನಾವು ಯಾರು? ನಾವು ಏನೂ ಅಲ್ಲ. ನಾವು ಬದುಕಿದ್ದಾಗ ನಾವು ನಮ್ಮ ಶರೀರವನ್ನು 'ನಾವು' ಎಂದು ಅಂದುಕೊಂಡಿರುತ್ತೇವಲ್ಲಾ ಅದು ವಾಸ್ತವವಾಗಿ 'ನಾವು' ಆಗಿರುವುದಿಲ್ಲ. ಆ 'ನಾವು' ಅನ್ನುವುದು ವಾಸ್ತವವಾಗಿ 'ಪ್ರಾಣ'ವೇ ಆಗಿದೆ.
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ||
     ಯಾರಾದರೂ ತನ್ನ ತಂದೆ ಅಥವ ತಾಯಿಗೆ ಕೆಟ್ಟದಾಗಿ ಮಾತನಾಡಿದರೆ, "ಎಂತಹ ಕೃತಘ್ನ ಅವನು! ತನ್ನ ತಂದೆಗೇ/ತಾಯಿಗೇ ಅಸಂಬದ್ಧವಾಗಿ ಮಾತನಾಡುತ್ತಾನೆ" ಎಂದೆನ್ನುತ್ತಾರೆ. ತಂದೆ-ತಾಯಿಗಳಿಗೆ, ಹಿರಿಯರಿಗೆ, ವಿದ್ವಜ್ಜನರಿಗೆ ಗೌರವ ಕೊಡುವುದು ನಮ್ಮ ಸಂಪ್ರದಾಯದಲ್ಲೇ ಬಂದಿದೆ. ಅಂತಹವರನ್ನು ಅಗೌರವಿಸಿ ಮಾತನಾಡಿದರೆ ತಿಳಿದವರು ಹಾಗೆ ಮಾಡದಿರಲು ಎಚ್ಚರಿಸುತ್ತಾರೆ. ಈ ಪ್ರಪಂಚದಲ್ಲಿ ನಾವು ಮಾನವತೆಗೆ, ಸಾಮಾಜಿಕ ಜೀವನಕ್ಕೆ ಬೆಲೆ ಕೊಡುತ್ತೇವೆ. ಇದಕ್ಕೆ ವಿರುದ್ಧವಾಗಿ ಹೋಗುವವರನ್ನು, ಹಿರಿಯರನ್ನು ಧಿಕ್ಕರಿಸುವವರನ್ನು ನಾವು ಶಪಿಸುತ್ತೇವಲ್ಲವೇ? 'ನೋಡು, ಜನರನ್ನು ನೋಯಿಸಬೇಡ' ಎಂದು ಉಪದೇಶಿಸುತ್ತೇವೆ. ಈ 'ಜನರು' ಅಂದರೆ ಯಾರು? 'ನೋಯಿಸುವುದು' ಅಂದರೆ ಏನು? ಜನರು ಅಂದರೆ ಖಂಡಿತ ಶರೀರಗಳಂತೂ ಅಲ್ಲ! ಅಸಭ್ಯ ವ್ಯಕ್ತಿಯಿಂದ ಯಾರಿಗಾದರೂ ನೋವಾಗುತ್ತದೆ ಎಂದರೆ ಅವನ ಪ್ರಾಣತತ್ತ್ವಕ್ಕೆ ಘಾಸಿಯಾಗಿದೆ ಎಂದರ್ಥ. ಬಿಡಿಸಿ ಹೇಳಬೇಕೆಂದರೆ ವ್ಯಕ್ತಿಯೆಂದರೆ ಆತನು ಹೊಂದಿರುವ ಸುಂದರ ಶರೀರವಲ್ಲ, ಅವನಲ್ಲಿರುವ 'ಪ್ರಾಣ'ವೇ ಹೊರತು ಬೇರೆ ಅಲ್ಲ. ಯಾರಾದರೂ ಮನಸ್ಸಿಗೆ ಘಾಸಿಯಾಗುವಂತೆ ಮಾತನಾಡಿದರೆ, 'ಅಯ್ಯೋ, ಸುಮ್ಮನಿರು, ನನ್ನ ಪ್ರಾಣ ಹಿಂಡಬೇಡ' ಎನ್ನುತ್ತೇವೆ. ತಂದೆ, ತಾಯಿ, ಹಿರಿಯರನ್ನು ಅಗೌರವಿಸಿದರೆ ಅವರುಗಳು ಹೊಂದಿರುವ ಶರೀರವನ್ನು ಅಗೌರವಿಸಿದಂತೆ ಅಲ್ಲ, ಅವರಲ್ಲಿರುವ ಪ್ರಾಣತತ್ತ್ವವನ್ನು ಅಗೌರವಿಸಿದಂತೆ! ಅವರುಗಳ ಶರೀರಗಳಲ್ಲಿರುವ ಆ ಪ್ರಾಣತತ್ವ ಹೊರಟುಹೋದಾಗ ಏನಾಗುತ್ತದೆ? ಎಲ್ಲವೂ ಬದಲಾಗಿಬಿಡುತ್ತದೆ. ತಂದೆ ಎಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಸತ್ತರೆ ಅವನ ಮಗ ತಂದೆಯ ದೇಹವನ್ನು ಚಿತೆಯಲ್ಲಿರಿಸಿ ಸುಡುತ್ತಾನೆ ಅಥವ ತನ್ನ ಸಂಪ್ರದಾಯದಂತೆ ಹೂಳುವುದೋ ಮತ್ತೇನನ್ನೋ ಮಾಡುತ್ತಾನೆ. ಆಗ ಯಾರಾದರೂ, 'ಅವನು ತಂದೆಯನ್ನೇ ಸುಡುತ್ತಿದ್ದಾನೆ/ಹೂಳುತ್ತಿದ್ದಾನೆ' ಎಂದು ಆಕ್ಷೇಪಿಸುತ್ತಾರೇನು? ಕೆಲವೇ ಘಂಟೆಗಳ ಹಿಂದೆ ಬದುಕಿದ್ದಾಗ ಇದ್ದ ಮಹತ್ವ ಸತ್ತ ಕೂಡಲೇ ಇಲ್ಲವಾಗುತ್ತದೆ. ಅದು ನಮ್ಮ ಪ್ರೀತಿಪಾತ್ರರಾದ ಯಾರೇ ಆಗಬಹುದು, ಗುರು ಆಗಬಹುದು, ಸಾಮಾಜಿಕ ನಾಯಕನಾಗಿರಬಹುದು, ಚಕ್ರವರ್ತಿಯೇ ಇರಬಹುದು. ಅದರಲ್ಲಿ ಏನೂ ವ್ಯತ್ಯಾಸವಾಗದು. ಅವರನ್ನು ಸುಡುವುದೋ, ಹೂಳುವುದೋ, ಮತ್ತೊಂದೇನನ್ನೋ ಮಾಡುತ್ತೇವೆ. ಜನ ಏನೆನ್ನುತ್ತಾರೆ? "ಉತ್ತಮ ರೀತಿಯಲ್ಲಿ ಸಂಸ್ಕಾರ ಮಾಡಿ ಒಳ್ಳೆಯ ಕೆಲಸ ಮಾಡಿದೆ" ಅನ್ನುತ್ತಾರೆ! ಬದುಕಿದ್ದಾಗ ಹೀಗೆ ಮಾಡಿದರೆ? ಕೊಲೆ ಅನ್ನುತ್ತಾರೆ, ಹೀನಕೃತ್ಯ ಅನ್ನುತ್ತಾರೆ! ವ್ಯತ್ಯಾಸ ಗೊತ್ತಾಯಿತಲ್ಲವೇ? ನಾವು ಗೌರವಿಸುವುದು, ಗೌರವಿಸಬೇಕಿರುವುದು ಶರೀರಗಳನ್ನಲ್ಲ, ಶರೀರದೊಳಗಿನ ಪ್ರಾಣತತ್ವಗಳನ್ನು! 'ಅಯ್ಯೋ, ನಮ್ಮ ತಂದೆ ಹೋಗಿಬಿಟ್ಟರು' ಎಂದು ಶೋಕಿಸುತ್ತೇವೆ. ಎಲ್ಲಿಗೆ ಹೋದರು? ತಂದೆ ಅನ್ನುವುದು ಅವರು ಹೊಂದಿದ್ದ ಶರೀರವಲ್ಲ, ಆ ಶರೀರದೊಳಗಿನ ಪ್ರಾಣತತ್ವ ಎಂಬ ಅರಿವು ಮೂಡಿದಾಗ, ಆ ಪ್ರಾಣತತ್ವಕ್ಕೆ ಸಾವಿಲ್ಲ ಎಂದುಕೊಂಡಾಗ ನಮ್ಮ ಚಿಂತನಾಧಾಟಿಯೇ, ಜೀವನವನ್ನು ನೋಡುವ ರೀತಿಯೇ ಬದಲಾಗಿಬಿಡುತ್ತದೆ. ಮನಸ್ಸು ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತದೆ.
ಕಾಣದದು ನಯನ  ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? ||
     ಇಡೀ ಜೀವನವೆನ್ನುವುದು ಈ ರಹಸ್ಯಮಯ ಪ್ರಾಣವೇ ಆಗಿದ್ದು, ಅದು ಹಲವು ಹೆಸರುಗಳಲ್ಲಿ, ಹಲವು ಪ್ರಾಕಾರಗಳಲ್ಲಿ ಗೋಚರವಾಗುತ್ತದೆ. ನಾವು ಈ ಹಲವು ವಿಧಗಳನ್ನು ನಮ್ಮ ಕಣ್ಣುಗಳು ಕಾಣುವ ರೀತಿಯಲ್ಲೇ ಭಾವಿಸಿ ಮೋಸ ಹೋಗುತ್ತೇವೆ. ಜೀವಚೈತನ್ಯವಿರುವ ಎಲ್ಲದರಲ್ಲೂ ಈ ಶ್ರೇಷ್ಠ ಪ್ರಾಣತತ್ವವನ್ನು ಕಾಣಬಹುದು. ಸಸ್ಯಗಳಲ್ಲಿ ಕೆಲವು ಪ್ರಮಾಣದಲ್ಲಿ, ಪ್ರಾಣಿಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಮತ್ತು ಮನುಷ್ಯರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಾಣತತ್ವ ಕಂಡುಬರುತ್ತದೆ. ಈ ಹೆಚ್ಚಿನದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದು ಇನ್ನೂ ಮೇಲ್ಪಟ್ಟವರಲ್ಲಿ ಕಂಡುಬರಲೇಬೇಕು. ನಾವು ನಿಜವಾಗಿಯೂ ಎಲ್ಲಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದ ಹಂತದಲ್ಲಿ ಬಂದು ನಿಂತಿದ್ದೇವೆ. ನಾವು ಯಾವುದರ ಬಗ್ಗೆ ಚರ್ಚಿಸುತ್ತಿದ್ದೇವೆಯೋ ಅದರ ಬಗ್ಗೆ ಸಹ ನಮಗೆ ಪೂರ್ಣ ಜ್ಞಾನವಿಲ್ಲ. ಈ ಪ್ರಾಣತತ್ವದ ಬಗ್ಗೆ ಯಾರಿಗೆ ಅರಿವಿದೆಯೋ, ಯಾರು ಈ ರಹಸ್ಯಾತ್ಮಕ ಪ್ರಾಣತತ್ವವು ಎಲ್ಲಕ್ಕಿಂತಲೂ ಹಿರಿದೆಂಬ ವಿಚಾರದಲ್ಲಿ ಹೆಚ್ಚು ತಿಳುವಳಿಕೆ ಹೊಂದಿರುತ್ತಾರೋ ಅವರನ್ನು ಜ್ಞಾನದ ಒಡೆಯರೆನ್ನಬಹುದು. ಅಂತಹವರ ಉದ್ಗಾರಗಳು ಸಾಮಾನ್ಯವಾಗಿ ಸತ್ಯವಾದುದಾಗಿರುತ್ತವೆ.
     ಜೀವದ ಬಗ್ಗೆ, ಜೀವತತ್ವದ ಬಗ್ಗೆ ಜ್ಞಾನ ಹೊಂದಿರುವವರು ನಿಜಕ್ಕೂ ಶ್ರೇಷ್ಠ ಜ್ಞಾನಿಗಳಾಗಿರುತ್ತಾರೆ. ಏಕೆಂದರೆ ಈ ಜ್ಞಾನ ನಮ್ಮಂತಹ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗಲಾರದು. ಅಂತಹ ಜ್ಞಾನ ನಿಜಕ್ಕೂ ಅತೀಂದ್ರಿಯದ್ದಾಗಿರುತ್ತದೆ. ಅಂತಹವರು ಆಡುವ ಮಾತುಗಳು ಸತ್ಯದಿಂದ ತುಂಬಿ ತುಳುಕುತ್ತಿರುತ್ತವೆ. ಅವರು ಹೇಳುವ ಮಾತುಗಳು ಸತ್ಯವಾಗುತ್ತವೆ, ಹೇಳಿದಂತೆ ನಡೆಯುತ್ತವೆ, ಏಕೆಂದರೆ ಅವರು ಹೊಂದಿರುವ ಜ್ಞಾನ ಅಂತಹುದಾಗಿರುತ್ತದೆ. ಅವಧೂತರುಗಳು, ಮಹಾಮಹಿಮರ ವಿಚಾರದಲ್ಲಿ ಇಂತಹ ಅನುಭವ ಕಂಡಿರುವ ನೂರಾರು ನಿದರ್ಶನಗಳಿವೆ. ಅವರು ಆಡುವ ಕೆಲವು ಮಾತುಗಳು ಸಾಮಾನ್ಯರಿಗೆ ಅರ್ಥವಾಗದಾದಾಗ, "ಸ್ವಾಮಿ, ನಿಮ್ಮ ಮಾತು ನಮಗೆ ಅರ್ಥವಾಗಲಿಲ್ಲ" ಎಂದರೆ ಅವರಿಂದ ಬರಬಹುದಾದ ಉತ್ತರ, "ಅರ್ಥ ಕಟ್ಟಿಕೊಂಡು ನಿನಗೇನಾಗಬೇಕು? ಇದು ನಿನಗೆ ಅರ್ಥವಾಗಲೂಬಾರದು". ನಿಜ, ಇಂತಹ ಸಂಗತಿಗಳು ನಾವೇ ಅರ್ಥ ಮಾಡಿಕೊಳ್ಳುವ ಹಂತಕ್ಕೆ ನಾವು ಏರಿದಾಗ ಮಾತ್ರ ನಮಗೆ ಅರ್ಥವಾಗಬಹುದು. ನಾವು ಅಂತರಂಗದಲ್ಲಿ ಬೆಳೆಯುತ್ತಾ ಹೋದಂತೆ ಸತ್ಯದ ಹತ್ತಿರ ಹತ್ತಿರಕ್ಕೆ ತಲುಪುತ್ತಾ ಹೋಗುತ್ತೇವೆ.
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


3 ಕಾಮೆಂಟ್‌ಗಳು:


  1. Ravi Kumar
    ಪ್ರಾಣಕ್ಕೆ ಎಷ್ಟೊಂದು ಪ್ರಾಮುಖ್ಯತೆ .. ಎಷ್ಟೊಂದು ಮಹತ್ವ..

    ಪ್ರತ್ಯುತ್ತರಅಳಿಸಿ

  2. Subraya Kamath K
    Nagaraj, Very true. But the irony is that with so many inventions and so called advance in science we can not see Prana?

    Kavi Nagaraj
    ಪ್ರತಿಕ್ರಿಯೆಗೆ ವಂದನೆಗಳು, ಸರ್. ಸಂಶೋಧನೆಗಳು ಹೊರಮುಖವಾಗಿದ್ದಲ್ಲಿ ಫಲಿತಾಂಶ ಸಿಗಲಾರದು. ಒಳಮುಖವಾದ ಸಂಶೋಧನೆಗಳು ಫಲ ನೀಡಿಯಾವು!

    ಪ್ರತ್ಯುತ್ತರಅಳಿಸಿ

  3. T K Venkatarama Bharathy
    Na mruthyur na shanka na me jathibhedhaha..pitha naiva me naiva maths na janma..//na bandhur na mithrar gururnaiva shishyah schidananda Roopa sshiboaham shivpaham..//...SRI SRI SRI ADIDHANKARA..

    ಪ್ರತ್ಯುತ್ತರಅಳಿಸಿ