ವೇದಸುಧೆ ಅಂತರ್ಜಾಲ ತಾಣದ ಮೂಲಕ ಪರಿಚಿತರಾದ ಡಾ. ಜೆಸ್ಸಿ ಜೆ. ಮರ್ಸೆ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಢ್ ಟೆಕ್ನೊಲಜಿ ಯೂನಿವರ್ಸಿಟಿಯ ಚಾನ್ಸಲರ್. ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸಕರಾಗಿ, ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಿ, ವಿವಿಧ ಸಂಸ್ಥೆಗಳಿಗೆ ಸಲಹಾಕಾರರಾಗಿಯೂ ಹೆಸರು ಮಾಡಿದ್ದ ಅವರು ವಾಸ್ತುವ್ಯಾಸ ಡಾ. ಗಣಪತಿ ಸ್ಥಪತಿಯವರ ಶಿಷ್ಯೆಯಾಗಿ ವಾಸ್ತುಶಾಸ್ತ್ರದಲ್ಲಿ ಪರಿಣಿತಿ ಗಳಿಸಿದವರು. ಈ ವಿಷಯದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಧ್ಯಯನ ನಡೆಸಿ ಈಗ ಮೇಲೆ ತಿಳಿಸಿದ ಯೂನಿವರ್ಸಿಟಿಯ ಚಾನ್ಸಲರ್ ಆಗಿ ಪ್ರಪಂಚದಾದ್ಯಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಿತ್ರ ಹರಿಹರಪುರ ಶ್ರೀಧರರೊಂದಿಗೆ ಆಗಾಗ್ಗೆ ವಿಚಾರ-ವಿನಿಮಯ ಮಾಡಿಕೊಳ್ಳುತ್ತಿದ್ದರು. ಪಂ. ಸುಧಾಕರ ಚತುರ್ವೇದಿ ಮತ್ತು ವೇದಾಧ್ಯಾಯಿ ಸುಧಾಕರ ಶರ್ಮರವರೊಂದಿಗೆ ಭೇಟಿಗೂ ಶ್ರೀಧರ್ ಸ್ವತಃ ವ್ಯವಸ್ಥೆ ಮಾಡಿದ್ದರು. ಅವಕಾಶವಾದಾಗ ಹಾಸನಕ್ಕೂ ಬರಲು ಅವರು ಆಹ್ವಾನಿಸಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಆಗಮಿಸಿದ ಅವರು ೨.೧.೨೦೧೫ ರಂದು ಹಾಸನದ ವೇದಭಾರತಿಯ ಸತ್ಸಂಗಕ್ಕೂ ಬರುವುದಾಗಿ ತಿಳಿಸಿ ಅದರಂತೆ ಬಂದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಭೆಗಳು, ಸೆಮಿನಾರುಗಳಲ್ಲಿ ಭಾಗವಹಿಸಿ ವಿದ್ವತ್ ಪೂರ್ಣ ವಿಚಾರ ಮಂಡಿಸುವ ಅವರು ಹಾಸನದಲ್ಲಿ ನಡೆಯುವ ಸತ್ಸಂಗಕ್ಕೂ ಅದೇ ಮಹತ್ವ ನೀಡಿ ಬಂದದ್ದು ವಿಶೇಷವೇ ಸರಿ. ದೊಡ್ಡವರು ದೊಡ್ಡವರಾಗಿಯೇ ಇರುತ್ತಾರೆ, ಸಣ್ಣ ವಿಷಯಕ್ಕೂ ಮಹತ್ವ ನೀಡುವುದರಿಂದಲೇ ಅವರು ದೊಡ್ಡವರಾಗುತ್ತಾರೆ ಎಂಬುದು ಇಲ್ಲಿ ವೇದ್ಯವಾಯಿತು.
ತಮ್ಮ ಮೂವರು ವಿದ್ಯಾರ್ಥಿಗಳೊಂದಿಗೆ ಬಂದ ಅವರು ಸೀರೆ ಉಡಲು ಬಾರದಿದ್ದರೂ ಕಷ್ಟಪಟ್ಟು ಸೀರೆ ಧರಿಸಿ ಬಂದಿದ್ದರು. ಶ್ರೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕವಿನಾಗರಾಜರು ಡಾ. ಜೆಸ್ಸಿಯವರ ಪರಿಚಯವನ್ನು ಸತ್ಸಂಗದಲ್ಲಿ ಹಾಜರಿದ್ದ ವೇದಾಸಕ್ತರು ಮತ್ತು ವೇದಾಧ್ಯಾಯಿಗಳಿಗೆ ಮಾಡಿಕೊಟ್ಟದ್ದಲ್ಲದೆ, ಸತ್ಸಂಗದಲ್ಲಿ ಪ್ರತಿನಿತ್ಯ ಮಾಡಲಾಗುವ ಅಗ್ನಿಹೋತ್ರದ ವಿವರ, ಮಹತ್ವಗಳನ್ನು ಡಾ. ಜೆಸ್ಸಿ ಮತ್ತು ಅವರ ಸಂಗಡಿಗರಿಗೆ ವಿವರಿಸಿದರು. ಅಗ್ನಿಹೋತ್ರ ಮತ್ತು ಎರಡು ಭಜನೆಗಳ ನಂತರದಲ್ಲಿ ಡಾ. ಜೆಸ್ಸಿಯವರನ್ನು ಮಾತನಾಡಲು ಕೋರಲಾಯಿತು. ವಾಸ್ತು ಹಿಂದಿರುವ ವಿಜ್ಞಾನ ಎಂಬ ವಿಷಯದಲ್ಲಿ ಅವರು ಮಾತನಾಡಿದ್ದು, ಅವರು ಪ್ರಸ್ತಾಪಿಸಿದ ಸಂಗತಿಗಳಲ್ಲಿ ಕೆಲವು ಅಂಶಗಳನ್ನು ಮಾತ್ರ ತಿಳಿಸುವ ಪ್ರಯತ್ನ ಇಲ್ಲಿ ಮಾಡಿದೆ. (ಡಾ.ಜೆಸ್ಸಿಯವರ ಇಂಗ್ಲಿಷ್ ಉಚ್ಛಾರಣೆ ನಮ್ಮ ಇಂಗ್ಲಿಷಿನಂತೆ ಅಲ್ಲವಾದ್ದರಿಂದ ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ತಿಳಿಸಿರುವುದರಲ್ಲಿ ಏನಾದರೂ ತಪ್ಪಿದ್ದರೆ ಅದು ಡಾ. ಜೆಸ್ಸಿಯವರ ತಪ್ಪಲ್ಲ, ಈ ಲೇಖಕನದು.)
ವಾಸ್ತು ಹಿಂದಿರುವ ವಿಜ್ಞಾನ
ಋಗ್ವೇದದ ಮೊದಲನೆಯ ಮಂತ್ರ 'ಅಗ್ನಿಮೀಳೇ ಪುರೋಹಿತಮ್ . .' ಸಮರ್ಪಣಾ ಮನೋಭಾವವನ್ನು ಹೊಂದಲು ಹೇಳುತ್ತದೆ. ಈ ತ್ಯಾಗ ಮನೋಭಾವದಿಂದ ಮಾಡುವ ಕೆಲಸಗಳು ಸತ್ಪ್ರಭಾವ ಬೀರುತ್ತವೆ. ಈಗ ಅಗ್ನಿಹೋತ್ರ ಮಾಡಿದಿರಿ. ಅಗ್ನಿಹೋತ್ರದ ಜ್ವಾಲೆ, ಹರಡಿದ ಧೂಮದ ಪರಿಮಳ, ಹೇಳಿದ ಮಂತ್ರಗಳು ನಿಮ್ಮ ಮೇಲೆ ಪ್ರಭಾವ ಬೀರಿದವು ಅಲ್ಲವೇ? ಇದಕ್ಕೆ ಕಾರಣ ಇಲ್ಲಿ ಉಂಟಾದ ತರಂಗಗಳು (vibrations). ಈ ವಿಶ್ವದ ಸೃಷ್ಟಿ ಸಹ ತರಂಗಗಳಿಂದಲೇ ಆದದ್ದು.
ಸಾವಿರಾರು ವರ್ಷಗಳ ಹಿಂದೆ ಇದ್ದ ಮಹಾಮುನಿ ಮಾಯನ್ ವಾಸ್ತುಶಾಸ್ತ್ರದ ಪ್ರಥಮ ಕೃತಿಕಾರರಾಗಿದ್ದಾರೆ. ಖಾಲಿ ಇರುವ ಸ್ಥಳ ಶಕ್ತಿಯ ಕೇಂದ್ರೀಕೃತ ಕ್ಷೇತ್ರವಾಗಿದ್ದು, ಈ ಭೌತಿಕ ಪ್ರಪಂಚದಲ್ಲಿನ ವಸ್ತುಗಳು ಮತ್ತು ಎಲ್ಲಾ ರೀತಿಗಳ ಉಗಮಕ್ಕೆ ಮೂಲವಾಗಿರುತ್ತದೆ ಎಂಬುದು ಆ ಋಷಿವಾಣಿಯಾಗಿದೆ. ಈ ಖಾಲಿ ಸ್ಥಳದಲ್ಲಿ ಶಕ್ತಿ ತರಂಗಗಳಿದ್ದು ಅದು ಗಣಿತದ ಲೆಕ್ಕಾಚಾರಕ್ಕೆ ಒಳಪಟ್ಟಿರುತ್ತದೆ. ವಿವಿಧ ರೀತಿಯ ಜೀವಿಗಳು ಇದ್ದು ಇವುಗಳು ಪಂಚಭೂತಗಳಿಂದ -ಆಕಾಶ, ವಾಯು, ಅಗ್ನಿ, ನೆಲ, ಜಲ- ಆದದ್ದು. ವಿವಿಧ ಜೀವಿಗಳ ಗುಣ ಸ್ವಭಾವಗಳೂ ಬೇರೆ ಬೇರೆಯಾಗಿರುತ್ತವೆ. ಬೆಕ್ಕಿನ ಸ್ವಭಾವವೇ ಬೇರೆ, ನಾಯಿಯ ಸ್ವಭಾವವೇ ಬೇರೆ, ಮನುಷ್ಯನ ಸ್ವಭಾವವೇ ಬೇರೆ. ಮನುಷ್ಯರಲ್ಲೂ ವಿವಿಧ ಸ್ವಭಾವದವರನ್ನು ಕಾಣುತ್ತೇವೆ. ಈ ವ್ಯತ್ಯಾಸಗಳಿಗೂ ಕಾರಣ ತರಂಗಗಳೇ ಆಗಿವೆ. ‘Birds of same feather flock together’ ಎಂಬಂತೆ ನೀವುಗಳು ಇಲ್ಲಿ ಒಟ್ಟಿಗೇ ಸೇರುವುದಕ್ಕೂ ನಿಮ್ಮಲ್ಲಿನ ತರಂಗಗಳು ಹೊಂದಾಣಿಕೆಯಾಗಿರುವುದೇ ಕಾರಣ.
ವಾಸ್ತು (ವಾಸ್ತುಬ್ರಹ್ಮ ಅಥವ ವಾಸ್ತು ಪುರುಷ) ಅನ್ನುವುದು ಒಂದು ಶಕ್ತಿಯಾಗಿದ್ದು, ಇದರಿಂದಲೇ, ಇದರ ಮೂಲಕವೇ ಭೌತಿಕ ಸೃಷ್ಟಿ ಸಂಭವಿಸುತ್ತದೆ. ಇದನ್ನು ಧಾರ್ಮಿಕವಾಗಿ ದೇವರು ಅನ್ನುತ್ತಾರೆ, ಸೃಷ್ಟಿಕರ್ತ ಅನ್ನುತ್ತಾರೆ, ವೈಜ್ಞಾನಿಕವಾಗಿ ಕೇಂದ್ರೀಕೃತ ಶಕ್ತಿ ಕೇಂದ್ರ ಅನ್ನುತ್ತಾರೆ. ವಾಸ್ತು ಅನ್ನುವ ಪದದ ನಿಖರ ಅರ್ಥವೆಂದರೆ ಶಾಶ್ವತವಾಗಿ ಇರುವಂತಹದು.
ಭಾರತದಲ್ಲಿನ ದೇವಸ್ಥಾನಗಳು, ಈಜಿಪ್ಟಿನಲ್ಲಿನ ಪಿರಮಿಡ್ಡುಗಳು, ಮುಂತಾದವು ಗಣಿತದ ಲೆಕ್ಕಾಚಾರಗಳನ್ನು ಆಧರಿಸಿ ನಿರ್ಮಿಸಿದ್ದಾಗಿವೆ. ಆ ಸ್ಥಳಗಳಿಗೆ ಹೋದಾಗ ಆಗುವ ನಮ್ಮ ಅನುಭವಗಳಿಂದಲೇ ಇದನ್ನು ತಿಳಿಯಬಹುದು. ಅಲ್ಲಿನ ಕಟ್ಟಡ ರಚನೆಯ ರೀತಿಯ ಕಾರಣಗಳಿಂದ ಉಂಟಾಗುವ ತರಂಗಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿರುವ ಪ್ರಬಾವೀ ತರಂಗಗಳೇ ಬೇರೆ ರೀತಿಯಲ್ಲಿರುತ್ತವೆ. ವಾಸ್ತು ಪ್ರಕಾರ, ಗಣಿತದ ಲೆಕ್ಕಾಚಾರಗಳಿಗೆ ಅನುಗುಣವಾಗಿ ಕಟ್ಟಡಗಳನ್ನು ರಚಿಸಿದರೆ ಅದಕ್ಕೆ ತಕ್ಕಂತೆ ಮನುಷ್ಯನ ಸ್ವಭಾವಗಳ ಮೇಲೂ ಅದು ಪ್ರಭಾವ ಬೀರುತ್ತವೆ. ಅಪರಾಧಗಳ ಪ್ರಮಾಣವನ್ನೂ ಲೆಕ್ಕಾಚಾರದ ರಚನೆಗಳು ತಗ್ಗಿಸುತ್ತವೆ. ಇದನ್ನು ಪರಿಶೀಲಿಸಬಹುದಾಗಿದೆ. ಜೀವಿಗಳಿಗೆ ಆಯಸ್ಸಿನ ಮಿತಿ ಇರುಂತೆ ಕಟ್ಟಡದ ವಾಸ್ತುವಿಗೂ ಮಿತಿ ಇರುತ್ತದೆ.
ಸೀಮಿತ ಅವಧಿಯಲ್ಲಿ ಈ ವಿಷಯದ ಕುರಿತು ತಿಳಿಸುವುದು ಸುಲಭವಲ್ಲ. ಡಾ. ಗಣಪತಿ ಸ್ಥಪತಿಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನಾಲಜಿ ವಿದ್ಯಾಲಯದಲ್ಲಿ ವಾಸ್ತುಶಾಸ್ತ್ರವನ್ನು ವೈಜ್ಞಾನಿಕವಾಗಿ ಕಲಿಸುವ ಕೆಲಸ ನಡೆಯುತ್ತಿದೆ. ವಾಸ್ತುವಿಗೆ ಸಂಬಂಧಿಸಿದ ಸಂದೇಹ, ಸಲಹೆಗಳಿಗೆ ಮುಕ್ತವಾಗಿ ಸಂಪರ್ಕಿಸಿ ಪರಿಹಾರ ತಿಳಿದುಕೊಳ್ಳಬಹುದಾಗಿದೆ. ಪ್ರಪಂಚದ ಹಲವಾರು ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, ಆನ್ ಲೈನ್ ಮೂಲಕ ಶಿಕ್ಷಣ ಕೊಡಲಾಗುತ್ತಿದೆ ಮತ್ತು ಪ್ರತ್ಯಕ್ಷ ತರಗತಿಗಳಿಗೂ, ತರಬೇತಿಗೂ ಅವಕಾಶ ಮಾಡಲಾಗಿದೆ. ಆಸಕ್ತರು ಪ್ರಯೋಜನ ಹೊಂದಬಹುದು.
ಸೂರ್ಯ ಸಿದ್ಧಾಂತದಲ್ಲಿ ಹೇಳಿರುವಂತೆ ಖಾಲಿ ಸ್ಥಳದಲ್ಲಿನ ಪ್ರತಿಯೊಂದು ಕಣವೂ ಒಂದೊಂದು ಶಕ್ತಿಯ ಕಣಜವಾಗಿದ್ದು, ಶೃತಿಬದ್ಧವಾಗಿ ಚಲಿಸುತ್ತಿರುತ್ತದೆ/ಕುಣಿಯುತ್ತಿರುತ್ತದೆ. ಇಡೀ ವಿಶ್ವವು ಇಂತಹ ಕಣಗಳಿಂದ ತುಂಬಿದೆ. ವಾಸ್ತುಶಾಸ್ತ್ರ ಅನ್ನುವುದು ಇದನ್ನು ಭೌತಿಕ ಪ್ರಪಂಚಕ್ಕೆ ಕಲೆ, ಸಂಗೀತ, ನೃತ್ಯ, ಬರಹ, ಕಟ್ಟಡ ವಿನ್ಯಾಸ, ಮುಂತಾದುವುಗಳಿಂದ ಅಳವಡಿಸುವ ವಿಜ್ಞಾನವಾಗಿದೆ. ಜೀವಿಗಳ ಒಳಗೂ ಸಹ ಇಂತಹ ತರಂಗಗಳನ್ನು ಉಂಟುಮಾಡುವ ಕಣಗಳಿದ್ದು ಅವು ಶರೀರ ವೀಣೆಯ ತಂತಿಗಳಾಗಿ ಕೆಲಸ ಮಾಡುತ್ತವೆ. ಮಹಾಮುನಿ ಹೇಳುವಂತೆ ಮನುಷ್ಯನ ಶರೀರದ ತರಂಗಗಳು (ಜೀವಾತ್ಮನ ತರಂಗಗಳು) ಪರಮಾತ್ಮನ ತರಂಗಗಳೊಂದಿಗೆ ಹೊಂದಾಣಿಕೆಯಾದರೆ ಮೋಕ್ಷ ಸಾಧ್ಯ.
nageshamysore
ಪ್ರತ್ಯುತ್ತರಅಳಿಸಿಕವಿಗಳೆ ನಮಸ್ಕಾರ. ಕುತೂಹಲಕಾರಿ ವ್ಯಕ್ತಿ ಪರಿಚಯದ ಜತೆಗೆ ವಾಸ್ತುಶಾಸ್ತ್ರದ ತಾತ್ವಿಕ, ಸೈದ್ದಾಂತಿಕ ಮತ್ತು ವೈಜ್ಞಾನಿಕ ವಿಶ್ಲೇಷಣೆಯ ವಿವರ ಸೊಗಸಾಗಿದೆ. ಹೊರದೇಶದವರು ಜ್ಞಾನಕ್ಕೆ ನೀಡುವ ಬೆಲೆಯನ್ನು ಮಾದರಿಯಾಗಿರಿಸಿಕೊಂಡು ನಾವೂ ಅನುಕರಿಸಿದರೆ, ಎಷ್ಟೊ ವಿಷಯಗಳಲ್ಲಿ ನಮ್ಮ ತಿಳುವಳಿಕೆಯೂ ಹೆಚ್ಚುವುದು - ಹಿತ್ತಲ ಗಿಡ ಮದ್ದಲ್ಲ ಎನ್ನುವ ಮನೋಭಾವವನ್ನು ತೊರೆದರೆ !
kavinagaraj
ನಮಸ್ತೆ, ನಾಗೇಶರೇ. ಹೊರದೇಶದವರು ನಮ್ಮ ಜ್ಞಾನಸಂಪತ್ತಿನ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅವರ ಕಲಿಯುವ ಆಸಕ್ತಿಯನ್ನು ಕಪಟಿ ಕಾವಿಧಾರಿಗಳು, ಯೋಗಾಸನ ಕಲಿಸುವವರು, ಪೌರೋಹಿತ್ಯವನ್ನು ದುಡ್ಡು ಮಾಡಲು ಬಳಸುವವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನೈಜ ಜ್ಞಾನಿಗಳು ಅವರಿಗೆ ಲಭ್ಯವಾಗುವಂತಹ ಸ್ಥಿತಿ ಇಲ್ಲದಿರುವುದು ದುರಂತ.