ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಜನವರಿ 18, 2015

ಆತ್ಮಾವಲೋಕನ

     "ಛೇ! ಎಂತಹ ಕೆಲಸವಾಯಿತು! ನಾನು ಹೀಗೆ ಮಾಡಬಾರದಿತ್ತು" -ಈ ರೀತಿ ತಮಗೆ ತಾವೇ ಹೇಳಿಕೊಳ್ಳುವ ಘಟನೆಗಳು ಸಾಮಾನ್ಯವಾಗಿ ಎಲ್ಲರ ಬಾಳಿನಲ್ಲಿ ಘಟಿಸುತ್ತಿರುತ್ತವೆ. ಸ್ವಸ್ಥ ಮನಸ್ಥಿತಿಯಲ್ಲಿ ನಡೆದ ಘಟನೆಯನ್ನು/ಪರಿಸ್ಥಿತಿಯನ್ನು ಅವಲೋಕಿಸಿದಾಗ ಮೂಡುವ ಭಾವನೆಗಳಿವು. ಈ ಅವಲೋಕಿಸುವ, ವಿವೇಚಿಸುವ ಶಕ್ತಿ ಮಾನವಜೀವಿಗಳಿಗೆ ಮಾತ್ರ ಅನ್ನುವುದು ವಿಶೇಷ. ಮಾನವ ಪಶು-ಪಕ್ಷಿಗಳಿಗಿಂತ, ಕ್ರಿಮಿ-ಕೀಟಗಳಿಗಿಂತ ಭಿನ್ನವಾಗಿರುವುದು ಈ ವಿಷಯದಿಂದಲೇ. ಒಂದು ಹಸು ತನ್ನ ಹಸಿವು ಹಿಂಗಿಸಿಕೊಳ್ಳುವ ಮುನ್ನ ತಾನು ಸಸ್ಯಾಹಾರಿಯಾಗಿಯೇ ಇರಲೋ, ಮಾಂಸಾಹಾರಿಯಾಗಿರಲೋ ಎಂದು ಯೋಚಿಸುತ್ತಾ ಕೂರುವುದಿಲ್ಲ. ಹಾಗೆಯೇ ಒಂದು ಮಾಂಸಾಹಾರಿ ಪ್ರಾಣಿ ಇನ್ನೊಂದು ಪ್ರಾಣಿಯ ಪ್ರಾಣವನ್ನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ತೆಗೆಯುವುದು ನ್ಯಾಯವೇ ಎಂದು ಚಿಂತಿಸುತ್ತಾ ಕೂರುವುದಿಲ್ಲ. ಈ ಕೆಲಸ ಸರಿಯೋ, ತಪ್ಪೋ ಎಂದು ಯೋಚಿಸುವ, ಯಾವುದೇ ಸಂಗತಿಯನ್ನು ಅದು ಹಾಗೆ ಏಕೆ, ಹೀಗೆ ಏಕಿರಬಾರದು, ಇತ್ಯಾದಿ ತರ್ಕ ಮಾಡುವ ವಿಕಾಸದ ಸ್ಥಿತಿ ಮಾನವನಿಗೆ ಮಾತ್ರ ಲಭ್ಯವಾದ ವರವಾಗಿದೆ.
ಅದು ಏಕೆ ಹೇಗೆಂದು ಭೂತಕಾಲವ ಕೇಳಿ
ಸರಿಯಿಲ್ಲವೆಂದು ವರ್ತಮಾನವ ದೂರಿ |
ಭವಿಷ್ಯವನು ನೆನೆದು ಭಯಪಡುವ ಪರಿಯ
ನರರಿಗಿತ್ತಿಹನವನು ಹಿರಿದಚ್ಚರಿಯ ಮೂಢ || 
     ವಿವೇಚನೆ ಮಾಡಲು ಜಾಗೃತ ಮನಸ್ಸು ಇರಬೇಕು, ಯಾವುದು ಸರಿ ಎಂದು ತರ್ಕಿಸುವ ಶಕ್ತಿ ಇರಬೇಕು, ಮೇಲಾಗಿ ಅನುಭವಿಯಾಗಿರಬೇಕು, ಸೂಕ್ತ ನಿರ್ಣಯ ತೆಗೆದುಕೊಳ್ಳುವ ಇಚ್ಛೆಯಿರಬೇಕು. ಹೀಗಿದ್ದಲ್ಲಿ ಫಲಿತಾಂಶ ಒಳ್ಳೆಯದಾಗಿರುತ್ತದೆ. ಇಲ್ಲದಿದ್ದಲ್ಲಿ ಮತ್ತು ಮೇಲೆ ತಿಳಿಸಿದ ಯಾವುದೊಂದರಲ್ಲಿ ಕೊರತೆಯಿದ್ದಲ್ಲಿ ಅಷ್ಟರ ಮಟ್ಟಿಗೆ ಫಲಿತಾಂಶವೂ ಭಿನ್ನವಾಗಿರುತ್ತದೆ. ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಅದರ ಮುಂದಿನ ಸಾಧ್ಯಾಸಾಧ್ಯತೆ ಬಗ್ಗೆ ಯೋಚಿಸಿ ಪ್ರಾರಂಭಿಸಿದಲ್ಲಿ ಕೆಲಸದಲ್ಲಿ ಅನಿರೀಕ್ಷಿತ ತೊಡಕುಗಳು ಬಂದಲ್ಲಿ ನಿವಾರಿಸಿಕೊಳ್ಳಲು ಸುಲಭವಾಗುತ್ತದೆ. ಚಿಂತಿಸುವ ಕೆಲಸಕ್ಕೆ ಚಾಲನೆ ಕೊಡುವುದು ಹೃದಯ ಅನ್ನುವುದು ಎಷ್ಟು ಜನರಿಗೆ ತಿಳಿದಿದೆ? ಜ್ಞಾನ ಮತ್ತು ಬುದ್ಧಿ ಹೊರ ತೋರಿಕೆಯವು, ಮೇಲ್ಭಾಗ ಕೇವಲ ಹೊಳೆಯುತ್ತದೆ, ಅದರೆ ಎಲ್ಲಾ ಶಕ್ತಿಯ ಸ್ಥಾನ ಹೃದಯವೇ ಆಗಿದೆ. ಅರಿವು, ಶಕ್ತಿ ಮತ್ತು ಚಟುವಟಿಕೆಗಳನ್ನು ಹೊಂದಿರುವ ಆತ್ಮದ ನೆಲೆ ಇರುವುದು ಮೆದುಳಿನಲ್ಲಲ್ಲ, ಹೃದಯದಲ್ಲಿ. ಮೊದಲು ಹೃದಯ ಏನು ಮಾಡಬೇಕೆಂದು ನಿರ್ಧರಿಸುತ್ತದೆ ಮತ್ತು ನಂತರ ತಲೆಗೆ ಅ ಕೆಲಸ ಹೇಗೆ ಸರಿ ಎಂಬುದನ್ನು ಸಮರ್ಥಿಸಲು ಕಾರಣಗಳನ್ನು ಹುಡುಕಲು ಹೇಳುತ್ತದೆ! ಮಾನವನ ಒಂದು ಸ್ವಭಾವವೆಂದರೆ ತಾನು ಹೊಂದಿರುವ ನಂಬಿಕೆಗಳು, ಅನಿಸಿಕೆಗಳಿಗೆ ಪೂರಕವಾದ ವಿಚಾರಗಳು, ವಾದಗಳನ್ನು ಹುಡುಕುತ್ತಾ ಹೋಗುವುದು. ಈ ಕಾರಣಕ್ಕಾಗಿಯೇ ವಿವಿಧ ಮತಗಳು, ಧರ್ಮಗಳನ್ನು ಅನುಸರಿಸುವವರು ತಮ್ಮದೇ ಸರಿ ಹೇಗೆ ಎಂದು ಸಮರ್ಥಿಸಿಕೊಳ್ಳಲು ಹೆಣಗುತ್ತಲೇ ಇರುತ್ತಾರೆ. ಒಂದಂತೂ ಸತ್ಯ, ದೇವರು ಕೊಟ್ಟಿರುವ ವಿವೇಚನಾಶಕ್ತಿಯನ್ನು ಬಳಸಿಕೊಳ್ಳಲು ಅವಕಾಶವಿರುವ ಧರ್ಮವೇ ನಿಜವಾದ ಧರ್ಮ. ಸತ್ಯಾನ್ವೇಷಣೆಗೆ ಇರುವ ನಿಜವಾದ ತೊಡಕೆಂದರೆ ಚಿಂತಿಸುವ ಶಕ್ತಿಯಲ್ಲಿನ, ಗ್ರಹಿಸುವ ಶಕ್ತಿಯಲ್ಲಿನ ಕೊರತೆಯಲ್ಲ, ಕಾಣುವ ಸಂಗತಿಗಳ ವೈಪರೀತ್ಯವಲ್ಲ, ಬದಲಾಗಿ ಹೊಂದಿರುವ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳು! ಸತ್ಯಾನ್ವೇಷಣೆಗೆ ಸರಿಯಾದ ದಾರಿಯೆಂದರೆ ಶ್ರವಣ, ಮನನ, ಮಥನಗಳಿಂದ ಮತ್ತು  ಅನುಭವಗಳಿಂದ ಮನಸ್ಸು ಕಂಡುಕೊಳ್ಳುವ ತೀರ್ಮಾನವನ್ನು ಒಪ್ಪುವುದು.   
     ಏನು, ಏಕೆ, ಹೇಗೆ ಎಂಬ ಪ್ರಶ್ನೆಗಳು, ತರ್ಕಗಳಿಂದಲೇ ಇಂದು ವಿಜ್ಞಾನ ವಿಜೃಂಭಿಸಿರುವುದು. ಮಾನವನ ಅತಿ ಕನಿಷ್ಠ ಅಗತ್ಯತೆಯಿಂದ ಹಿಡಿದು ಗಗನಚುಂಬಿ ಕಟ್ಟಡಗಳವರೆಗೆ ಮತ್ತು ಅತ್ಯುನ್ನತ ಧಾರ್ಮಿಕ ನಂಬಿಕೆಗಳವರೆಗೆ, ನಾವು ಈಗ ಏನಾಗಿದ್ದೇವೋ, ಏನೆಲ್ಲಾ ಹೊಂದಿದ್ದೇವೋ ಇವೆಲ್ಲವೂ ಬಂದಿರುವುದು ಮಾನವನ ಸಣ್ಣ ಮೆದುಳಿನ ಚಿಂತನೆಯ, ಮಾನಸಿಕ ಅನ್ವೇಷಣೆಯ ಫಲಗಳು. ನಮ್ಮ ಅದ್ಭುತ ಚಿಂತನೆ ಕೊನೆಗೆ ಎಲ್ಲಿಗೆ ತಲುಪುತ್ತದೆಂದರೆ, ಈ ಬೃಹತ್ ಬ್ರಹ್ಮಾಂಡದಲ್ಲಿ ಮಾನವ ಎಷ್ಟು ಸಣ್ಣವನು ಎಂಬುದರ ಅರಿವಿನಲ್ಲಿ! 
     ವಿವೇಕರಹಿತ ವ್ಯಕ್ತಿ ತಾನು ನಾಶ ಹೊಂದುವುದಲ್ಲದೆ ಇತರರಿಗೂ ಹಾನಿಯುಂಟುಮಾಡುತ್ತಾನೆ. ಇದೇ ತತ್ವ ಒಂದು ಸಮಾಜಕ್ಕೂ, ದೇಶಕ್ಕೂ ಅನ್ವಯವಾಗುತ್ತದೆ. ತಾನು ಹೊಂದಿರುವ ನಂಬಿಕೆಯನ್ನೇ ಇತರರು ಹೊಂದಬೇಕು ಎಂದು ಬಯಸುವ ವ್ಯಕ್ತಿಗಳು, ಧರ್ಮ/ಮತಾವಲಂಬಿಗಳು, ದೇಶಗಳು ವೈಚಾರಿಕತೆಗೆ ಕಂಟಕರಾಗುತ್ತಾರೆ. ಇದು ಸಂಘರ್ಷ, ರಕ್ತಪಾತಗಳಿಗೆ ಎಡೆ ಮಾಡುತ್ತವೆ. ಜೀವಿಮಾತ್ರರಲ್ಲಿ ಯಾರಿಗೂ ಇಲ್ಲದ ವಿಚಾರ ಮಾಡುವ ಶಕ್ತಿಯನ್ನು ಹೊಂದಿರುವ ಏಕೈಕ ಜೀವಿಯಾದ ಮಾನವನ ವೈಚಾರಿಕತೆಗೆ ಅಂಕುಶ ಹಾಕುವ ಯಾವುದೇ ವ್ಯಕ್ತಿಯ, ಸಮಾಜದ, ಧರ್ಮದ, ದೇಶದ ಪ್ರಯತ್ನಗಳು ಮಾನವಕುಲಕ್ಕೆ ಹಾನಿ ಮಾಡುವಂತಹವು ಎಂಬುದು ಪೂರ್ವಾಗ್ರಹ ಪೀಡಿತರಾಗದೆ ವಿವೇಚಿಸುವ ಎಲ್ಲರಿಗೂ ಅರ್ಥವಾಗುವ ಸಂಗತಿ.
     ಸಿಂಹಾವಲೋಕನ ಎಂಬ ಪದವನ್ನು ನಾವು ಕೇಳಿರುತ್ತೇವೆ. ಸಿಂಹ ಸ್ವಲ್ಪ ದೂರ ಸಾಗಿದ ಮೇಲೆ ಹಿಂತಿರುಗಿ ತಾನು ಬಂದ ದಾರಿಯನ್ನು ಒಮ್ಮೆ ವೀಕ್ಷಿಸಿ ಮತ್ತೆ ಗಂಭೀರವಾಗಿ ಮುಂದೆ ಸಾಗುತ್ತದೆ. ಮುಂದೆ ಸಾಗುವ ಮುನ್ನ ಹಿಂದಿನ ದಾರಿಯನ್ನು ಅವಲೋಕಿಸಿ ಮುಂದಿನ ದಾರಿಯನ್ನು ನಿರ್ಧರಿಸಬೇಕು ಎಂಬುದು ಇದರ ಸಾರ. ನಾವು ಸಾಗಿದ ದಾರಿಯನ್ನು ಅವಲೋಕಿಸುವುದಕ್ಕೆ ಆತ್ಮಾವಲೋಕನ ಎನ್ನುತ್ತೇವೆ. ಈ ಆತ್ಮಾವಲೋಕನ ನಮ್ಮ ತಪ್ಪು ನಡೆಗಳನ್ನು ತಿದ್ದಿಕೊಳ್ಳುವುದಕ್ಕೆ, ಮುಂದೆ ತಪ್ಪಾಗದಂತೆ ನೋಡಿಕೊಳ್ಳುವುದಕ್ಕೆ ಅತ್ಯಾವಶ್ಯಕ. ಹರೆಯದ ಹುಮ್ಮಸ್ಸಿನಲ್ಲಿ ಈ ವಿವೇಚನಾಶಕ್ತಿ ಕಡಿಮೆಯಿರುತ್ತದೆ ಅಥವ ಇದ್ದರೂ ಅದಕ್ಕೆ ಕೊಡುವ ಮಹತ್ವ ಕಡಿಮೆ. ಮಧ್ಯವಯಸ್ಸಿನಲ್ಲಿ ಮತ್ತು ಇಳಿ ವಯಸ್ಸಿನಲ್ಲಿ ಈ ಶಕ್ತಿ ಪ್ರಬುದ್ಧಮಾನ ಸ್ಥಿತಿಯಲ್ಲಿರುತ್ತದೆ. ಮಧ್ಯ ವಯಸ್ಸಿನಲ್ಲಿದ್ದಾಗಲೂ ವಿವೇಚನಾಶಕ್ತಿಗೆ ಕೆಲಸ ಕೊಡದಿದ್ದರೆ, ಇಳಿವಯಸ್ಸಿನಲ್ಲಿ ಶೋಕ ಕಟ್ಟಿಟ್ಟ ಬುತ್ತಿಯೇ ಸರಿ. 
ಸಾಲ ಪಡೆದೆವು ನಾವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ಈ ಸಮಾಜದಲ್ಲಿ ಬದುಕುವ ಪ್ರತಿ ಜೀವಿಯೂ ಮೂರು ಋಣಗಳನ್ನು ತೀರಿಸಲೇಬೇಕಿರುತ್ತದೆ - ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ದೇವಋಣವೆಂದರೆ ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಪೂಜೆ ಮಾಡಿ ಕಾಣಿಕೆ ಅರ್ಪಿಸುವುದಲ್ಲ. ಪಂಚಭೂತಗಳಿಂದ ಆದ ಈ ಶರೀರದಲ್ಲಿರುವ ಆತ್ಮದ ಸಹಾಯದಿಂದ ಜೀವನ ನಡೆಸಿರುವ ನಾವು ಈ ಪಂಚಭೂತಗಳು -ಭೂಮಿ, ಆಕಾಶ, ನೀರು, ಅಗ್ನಿ, ವಾಯು- ಇವುಗಳನ್ನು ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯ. ಇದು ದೇವ ಋಣವನ್ನು ತೀರಿಸುವ ರೀತಿ. ಅದೇ ರೀತಿ ನಮ್ಮನ್ನು ಪೋಷಿಸಿ ಸಲಹಿದ ಮಾತಾ-ಪಿತೃಗಳು, ಹಿರಿಯರುಗಳ ಸೇವೆ ಮಾಡುವುದು ಪಿತೃಋಣ ತೀರಿಸುವ ಪರಿಯಾದರೆ, ನಮಗೆ ಜ್ಞಾನ ನೀಡಿ ದಾರಿ ತೋರಿದ ಗುರುಗಳು ಹಾಕಿಕೊಟ್ಟ ದಾರಿಯಲ್ಲಿ ಸಾಗಿ, ತಿಳಿದ ಜ್ಞಾನವನ್ನು ಇತರರಿಗೆ ಹಂಚುವುದು ಗುರುಋಣ ತೀರಿಸಲು ಸಹಕಾರಿ. ಈ ವೇದಮಂತ್ರ ಗಮನಿಸೋಣ:
ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ || (ಅಥರ್ವ. ೬.೧೧೭.೩.)
    ಋಣರಹಿತರಾಗಿ ಬ್ರಹ್ಮಚರ್ಯದಲ್ಲಿರೋಣ. ಗಾರ್ಹಸ್ಥ್ಯದಲ್ಲಿಯೂ, ಋಣರಹಿತರಾಗಿರೋಣ. ಮೂರನೆಯದಾದ ವಾನಪ್ರಸ್ಥದಲ್ಲಿಯೂ, ಋಣರಹಿತರಾಗಿರೋಣ. ಯಾವ ಆಧ್ಯಾತ್ಮಿಕ ಗತಿಯ ಮತ್ತು ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, ಆ ಎಲ್ಲಾ ಮಾರ್ಗಗಳನ್ನೂ ಋಣರಹಿತರಾಗಿ ಸಂಕ್ರಮಿಸೋಣ. ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ ಎಂಬುದು ಇದರ ಕರೆ. ಈ ಕೆಲಸವನ್ನು ನಾವು ಮಾಡುತ್ತಿದ್ದೇವೆಯೇ ಎಂಬುದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. 
     ಅವಲೋಕನದಿಂದ ಸುತ್ತಮುತ್ತಲಿನ ಆಗುಹೋಗುಗಳ ಓರೆಕೋರೆಗಳು ಗೋಚರವಾಗುತ್ತವೆ; ಆತ್ಮಾವಲೋಕನದಿಂದ ಆ ಓರೆಕೋರೆಗಳ ಮೂಲ ನಾವೇ ಆಗಿರುವುದು ತಿಳಿಯುತ್ತದೆ. ಅದು ಹಾಗಿರಬೇಕು, ಅವರು ಹಾಗಿರಬೇಕು, ಇವರು ಹೀಗಿರಬೇಕು ಎಂದು ಇತರರಲ್ಲಿ ಬಯಸುವ ಗುಣಗಳು ಮೊದಲು ನಮ್ಮಲ್ಲಿ ಇವೆಯೇ ಎಂಬುದನ್ನು ನೋಡಿಕೊಳ್ಳಬೇಕು. ನಾವು ಮಾತ್ರ ಬೇರೆ ರೀತಿಯಲ್ಲಿ ಇದ್ದು, ಇತರರು ಮಾತ್ರ ಸರಿಯಾಗಿರಬೇಕು ಎಂದು ಬಯಸುವುದರಲ್ಲಿಯೇ ಲೋಪವಿದೆಯೆಂದು ನಮಗೆ ಅರಿವಾಗುವುದು ಆತ್ಮಾವಲೋಕನದಿಂದ ಮಾತ್ರ. ಸಮಾಜದಲ್ಲಿ ಏನಾದರೂ ಬದಲಾವಣೆಯಾಗಬೇಕೆಂದು ಬಯಸುವುದು ತರವಲ್ಲ. ಬದಲಾಗಬೇಕಾದವರು ನಾವು ಮಾತ್ರ. ನಾವು ಕೇಳಬೇಕಾಗಿರುವುದು ಇತರರ ಮಾತುಗಳನ್ನಲ್ಲ, ನಮ್ಮ ಹೃದಯದ ಮಾತುಗಳನ್ನು! ನಾವು ಬದಲಾದರೆ ಸಮಾಜವನ್ನು ನಾವು ನೋಡುವ ದೃಷ್ಟಿಯೂ ಬದಲಾಗುತ್ತದೆ. ಸಮಾಜದಲ್ಲಿ ಒಳಿತೂ ಇರುತ್ತದೆ, ಕೆಡಕೂ ಇರುತ್ತದೆ. ಒಳಿತಾಗಬೇಕೆಂದು ನಾವು ಬಯಸುವುದಾದರೆ ನಾವು ಒಳ್ಳೆಯ ಸಂಗತಿಗಳನ್ನು ಮಾತ್ರ ಗಮನಿಸಬೇಕು, ಅದಕ್ಕೆ ಮಾತ್ರ ಮಹತ್ವ ಕೊಡಬೇಕು. ವಿವೇಕಾನಂದರ ಈ ಮಾತನ್ನು ನೆನಪಿನಲ್ಲಿಡಬೇಕು: "ಪ್ರಪಂಚ ನಮಗೆ ಏನಾಗಿ ತೋರುವುದೋ ಅದಕ್ಕೆ ಕಾರಣ ನಮ್ಮದೇ ಆದ ನಮ್ಮ ಮನಸ್ಸಿನ ಸ್ಥಿತಿ. ನಮ್ಮ ಯೋಚನೆಗಳು ಸಂಗತಿಗಳನ್ನು ಸುಂದರಗೊಳಿಸುತ್ತವೆ; ನಮ್ಮ ಯೋಚನೆಗಳೇ ಸಂಗತಿಗಳನ್ನು ಕುರೂಪಿಯನ್ನಾಗಿಸುತ್ತವೆ. ಇಡೀ ಪ್ರಪಂಚ ನಮ್ಮ ಮನಸ್ಸುಗಳಲ್ಲೇ ಇದೆ." ಆತ್ಮಾವಲೋಕನ ಮಾಡಿಕೊಳ್ಳೋಣ.
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ನೀನೆ ಮೊದಲಾಗು |
ಬದಲಾಗು ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಇಲ್ಲಿಹುದು ಮೂಢ ||
-ಕ.ವೆಂ.ನಾಗರಾಜ್.
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು]
******************************
14.01.2015ರ ಜನಹಿತದ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:



3 ಕಾಮೆಂಟ್‌ಗಳು:

  1. Jayashree Bhat
    ನನಗ೦ತೂ ಅನೇಕ ಬಾರಿ ಹೀಗೆ ಆಗಿದೆ ಈ ಹಿ೦ದೆ.. ಹಾಗಾಗಿ ಬದುಕಲು ಕಲಿತೆ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Sunitha
      KS ಒಳ್ಳೆಯ ಬರಹ ಸರ್..

      Roopa Satish
      Kavi Nagaraj Sir... chennaagide, sooktha baraha. Vasthu vishayagala bagge, itharara manasthithiyannu ariya balla sookshma manasullavaru tammannu taavu avalOkisaballaru. Tappaagihoytu antha pechaadaballaru, innu ondu hejje mundhogi, "nanninda tappaagibidthu, kshamisi" antha keLaballaru. Nammalladagiruva bhagavanthanemba "Conscience athava aatmasaakshi" idakke kaarana. Ishtavaaythu nimma baraha.

      Kavi Nagaraj
      ಧನ್ಯವಾದಗಳು, ಸುನಿತಾ ಮತ್ತು ರೂಪಾ ಸತೀಶರೇ.

      ಅಳಿಸಿ
    2. Nirmala Krishnamurthy
      chennagide.

      Varada Hegde
      super sir. manassige hattiravaagide.

      ಅಳಿಸಿ