ಡಾ. ಜೆಸ್ಸಿ ಜೆ.ಮರ್ಸೆ ಪ್ರಸ್ತುತ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನೋಲಜಿ ಲಿ. ಯೂನಿವರ್ಸಿಟಿಯ ಚಾನ್ಸಲರ್ ಆಗಿದ್ದಾರೆ. ಅವರ ಗುರುಗಳಾದ ವಾಸ್ತು ವ್ಯಾಸ ದಿ. ಡಾ. ಗಣಪತಿ ಸ್ಥಪತಿ ಇವರ ಸಹಯೋಗದಲ್ಲಿ ಸಿದ್ಧಪಡಿಸಿದ ಸಿಲಬಸ್ಸಿನಂತೆ ಈ ಸಂಸ್ಥೆಯಲ್ಲಿ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ, ವಾಸ್ತುಶಾಸ್ತ್ರ, ಸ್ಥಾಪತ್ಯವೇದದ ಅನುಸಾರ ಕಟ್ಟಡ ರಚನೆ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಈ ವಿಷಯಗಳ ಕುರಿತು ಡಾ. ಮರ್‍ಸೇಯವರು ಹಲವಾರು ಪಠ್ಯಪುಸ್ತಕಗಳು ಮತ್ತು ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ವೇದಿಕೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ. ಹಲವಾರು ವರ್ಷಗಳ ಕಾಲ ಡಾ. ಗಣಪತಿ ಸ್ಥಪತಿಯವರ ಮತ್ತು ಮಹಾಮುನಿ ಮಾಯನ್‌ರವರ ಬರಹಗಳನ್ನು ಆಳವಾಗಿ ಅಧ್ಯಯನ ನಡೆಸಿದ್ದಾರೆ. ಡಾ. ಗಣಪತಿ ಸ್ಥಪತಿ ಇವರನ್ನು ಮಹಾಮುನಿ ಮಾಯನ್ ನೆನಪಿನಲ್ಲಿ ಮಾಯಾ ಎಂದು ಕರೆಯುತ್ತಿದ್ದರು.
ಇವರು ಪ್ರಾಕೃತಿಕ ಚಿಕಿತ್ಸಾ ಮತ್ತು ವೈದ್ಯಪದ್ಧತಿಯಲ್ಲಿ ಸುಮಾರು ೨೫ ವರ್ಷಗಳ ಕಾಲ ಚಿಕಿತ್ಸಕರಾಗಿದ್ದರು. ಹಲವಾರು ಚಿಕಿತ್ಸಾ ಪದ್ಧತಿಗಳನ್ನು ಅಭಿವೃದ್ಧಿಪಡಿಸಿ ಕಾಯಿಲೆಗಳನ್ನು ಗುಣಪಡಿಸುವ ಇವರ ರೀತಿಗಳಿಗೆ ಇತರ ವೃತ್ತಿಪರರಿಂದಲೂ ಬೇಡಿಕೆಯಿತ್ತು. ಇದಕ್ಕೂ ಮುನ್ನ ಕಾಲೇಜಿನ ಪ್ರೊಫೆಸರ್ ಆಗಿ ಅಮೆರಿಕಾದ ಹಲವು ಯೂನಿವರ್‍ಸಿಟಿಗಳಲ್ಲಿ ರಚನಾತ್ಮಕತೆ, ಮಾಧ್ಯಮ, ಸಮಾಜಿಕತೆ ಮತ್ತು ದೃಷ್ಯ ಅಧ್ಯಯನಗಳ ಕುರಿತು ಬೋಧಿಸಿದ್ದರು. ಸುಮಾರು ೩೮ ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಮಾನಸಿಕ ಕೇಂದ್ರಿತ ವ್ಯಕ್ತಿತ್ವ ಗುಣವರ್ಧನಾ ವಿಷಯಗಳು, ಧ್ಯಾನ, ಯೋಗ, ಅತೀಂದ್ರಿಯ ವಿಷಯ ಮತ್ತು ಚಿಕಿತ್ಸಾ ವಿಷಯಗಳಲ್ಲಿ ಅಮೆರಿಕಾದ್ಯಂತ ಹಲವಾರು ಸೆಮಿನಾರುಗಳನ್ನು ನಡೆಸಿದ್ದಾರೆ. ೧೯೮೦ರ ದಶಕದಲ್ಲಿ ಡಾ. ಮರ್‍ಸೇಯವರು ಹಲವಾರು ಕಂಪೆನಿಗಳಿಗೆ ತಂಡದ ರಚನೆ ಮತ್ತು ವ್ಯಕ್ತಿಗತ ಅಭಿವೃದ್ಧಿಗಳ ಕುರಿತು ಸಲಹಾಕಾರರಾಗಿ ಕೆಲಸ ಮಾಡಿದ್ದಾರೆ. ೧೯೭೦ರ ಅಂತ್ಯದಲ್ಲಿ ಅವರು ಚಿತ್ರೀಕರಣ, ವಿಡಿಯೋ ಹಾಗೂ ವ್ಯವಹಾರ ಮತ್ತು ಶಿಕ್ಷಣದ ಸಲುವಾಗಿ ಬಹುವಿಧ ಮಾಧ್ಯಮವನ್ನು ಸ್ಥಾಪಿಸಿ ಕಾರ್ಯ ಮಾಡಿದ್ದರು.
ಡಾ.ಮರ್‍ಸೇಯವರು ಒಬ್ಬ ಸೈನ್ಯದ ಅಧಿಕಾರಿಯೂ ಆಗಿ ೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಹಲವು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಸೈನ್ಯದಲ್ಲಿ ಅವರು ಸಿಬ್ಬಂದಿ ವ್ಯವಸ್ಥೆ ಮತ್ತು ತರಬೇತಿಯ ಜವಾಬ್ದಾರಿ ಹೊಂದಿ ತರಬೇತಿ ಮತ್ತು ಪರೀಕ್ಷೆಗಳಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರು. ಸಿಬ್ಬಂದಿ ವ್ಯವಸ್ಥಾಪಕರಾಗಿ ಅವರು ೧೭೦೦೦ ಸಿಬ್ಬಂದಿ ನೇಮಕಾತಿಗೆ ಕಾರಣರಾಗಿದ್ದರು.
ಚಿಕ್ಕ ವಯಸ್ಸಿನಲ್ಲೇ ನ್ಯೂಯಾರ್ಕಿನ ತಮ್ಮ ತಂದೆಯ ಡೈರಿ ಫಾರ್ಮಿನಲ್ಲಿ ಕಟ್ಟಡಗಳನ್ನು ರಚಿಸಲು ಅವರು ಪ್ರಾರಂಭಿಸಿದ್ದರು. ಈ ಕಟ್ಟಡಗಳ ರಚನೆ, ಪುನರ್ನಿರ್ಮಾಣಗಳ ಪ್ರವೃತ್ತಿಯನ್ನು ಜೀವನಪೂರ್ತಿ ಮುಂದುವರೆಸಿಕೊಂಡು ಅವರು ೪೦ ವರ್ಷಗಳಿಗೂ ಹೆಚ್ಚುಕಾಲದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೧೯೯೦ರಲ್ಲಿ ಅವರು ಮನೆಗಳನ್ನು ಖರೀದಿಸಿ ಪುನರ್ವಿನ್ಯಾಸಗೊಳಿಸಿ ಮಾರುವ ಒಂದು ಕಂಪೆನಿಯನ್ನು ಪ್ರಾರಂಭಿಸಿದರು. ಕಾಲಾಂತರದಲ್ಲಿ ಡಾ. ಸ್ಥಪತಿಯವರೊಂದಿಗೆ ಅಧ್ಯಯನದ ನಂತರ ಅದು ವಾಸ್ತು ಪ್ರಕಾರ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ಅನುಸರಿಸಿ ಪುನರ್ವಿನ್ಯಾಸಗೊಳಿಸುವಲ್ಲಿ ಬದಲಾಯಿತು.
ಡಾ. ಮರ್‍ಸೇಯವರು ಸಮಾಜವಿಜ್ಞಾನ ಮತ್ತು ಸಾಮಾಜಿಕ ಕಾರ್ಯದ ವಿಷಯಗಳಲ್ಲಿ ಬಿ.ಎ. ಪದವಿ, ಸಂವಹನ ಮತ್ತು ಮಲ್ಟಿ ಮಿಡಿಯಾಗಳಲ್ಲಿ ಎಂ.ಎ. ಪದವಿ, ಪ್ರಾಕೃತಿಕ ವೈದ್ಯದಲ್ಲಿ ಡಾಕ್ಟೊರೇಟ್ ಮತ್ತು ಸೈಕಾಲಜಿಕಲ್ ಅಂಡ್ ಕ್ವಾಂಟಿಟೇಟಿವ್ ಫೌಂಡೇಶನ್ನುಗಳಲ್ಲಿ ಪಿ.ಹೆಚ್.ಡಿ. ಗಳಿಸಿದ್ದು, ದೃಶ್ಯ ಶಿಕ್ಷಣ ವಿಸುಯಲ್ ಆಂಥ್ರೊಪಾಲಜಿ (ಕ್ರಿಯಾತ್ಮಕತೆ ಮತ್ತು ಮಾನವ ಸಂವೇದನೆ) ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ ಸೂಚನಾತ್ಮಕ ವಿನ್ಯಾಸ ತಯಾರಿಕೆಗಳಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಅವರ ವಿಚಾರಗಳನ್ನು Visualizer –Verbalizer Cognitive Styles ಎಂಬ ರ್ಶೀಕೆಯಲ್ಲಿ ಪ್ರಕಟಿಸಿದ್ದಾರೆ. ಧ್ಯಾನ ಮತ್ತು ವೇದವಿಚಾರಗಳಲ್ಲಿ ೪೦ ವರ್ಷಗಳಿಗೂ ಮೇಲ್ಪಟ್ಟು ಅವಧಿಯ ವಿದ್ಯಾರ್ಥಿಯಾಗಿದ್ದಾರೆ. ಅವರಲ್ಲಿ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ಪೂರ್ಣಗೊಳಿಸಿದ ಮತ್ತು ಡಾಕ್ಟೊರೇಟ್ ಪಡೆದ ಪ್ರಮಾಣಪತ್ರಗಳಿವೆ. ಆಳವಾದ ಅಧ್ಯಯನ ಮಾಡಿರುವ ಅವರು ಈ ವಿಷಯಗಳ ಕುರಿತು (ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ, ವಾಸ್ತು ಶಾಸ್ತ್ರಗಳು, ಸ್ಥಾಪತ್ಯ ವೇದದ ಕಟ್ಟಡ ವಿನ್ಯಾಸ) Fabric of The Universe: The Origins, Implications, and Applications of
Vastu Science and Vaastu Science and technology ಎಂಬ ರ್ಶೀಕೆಯ ಪುಸ್ತಕದಲ್ಲಿ ಮಂಡಿಸಿದ ವಿಚಾರಕ್ಕೆ ಪ್ರೋತ್ಸಾಹಕರ ಪುಸ್ತಕ ವಿಮರ್ಶೆಗಳು ಬಂದಿವೆ.
ಇವರ ವ್ಯಾಪಕವಾದ ಜೀವನಾನುಭವ ಮತ್ತು ಶಿಕ್ಷಣ ಹಾಗೂ ವಾಸ್ತು ವ್ಯಾಸ ಡಾ. ವಿ. ಗಣಪತಿ ಸ್ಥಪತಿಯವರ ಮಾರ್ಗದರ್ಶನದಲ್ಲಿ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನೋಲಜಿ ಯೂನಿವರ್‍ಸಿಟಿ ಒಂದು ಉತ್ತಮವಾದ ಮತ್ತು ಘನವಾದ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ (ವಾಸ್ತುಶಾಸ್ತ್ರ ಮತ್ತು ಸ್ಥಾಪತ್ಯ ವೇದದ ಕಟ್ಟಡ ವಿನ್ಯಾಸ ನಿರ್ಮಾಣ) ಕಲಿಕೆಯ ಕೇಂದ್ರವಾಗಿದೆ. ಡಾ. ಮರ್‍ಸೇಯವರು ಶಾಸ್ತ್ರಗಳಿಂದ ಸಂಕೀರ್ಣವಾದ ಮತ್ತು ವಿವಿಧ ಮಾಹಿತಿಗಳನ್ನು ಕ್ರೋಢೀಕರಿಸಿ ಅದನ್ನು ಪಾಶ್ಚಿಮಾತ್ಯ ಮನಸ್ಸುಗಳಿಗೆ ದೊರೆಯುವಂತೆ ಮಾಡಿದ್ದಾರೆ. ಅವರ ಗುರಿ ಮಾಯೊನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ, ವಾಸ್ತು ವಿನ್ಯಾಸ, ಪಾರಂಪರಿಕ ಭಾರತೀಯ ವಿನ್ಯಾಸ ಮತ್ತು ಸ್ಥಾಪತ್ಯ ವೇದದ ಅನುಸಾರ ಕಟ್ಟಡ ವಿನ್ಯಾಸ ಕುರಿತು ಒಂದು ಅಧಿಕೃತವಾದ ಮಾದರಿ ಶಿಕ್ಷಣ ಮತ್ತು ಕಲಿಕೆಯನ್ನು ಅಭಿವೃದ್ಧಿಪಡಿಸಿ ಅದನ್ನು ಅಮೆರಿಕಾದಲ್ಲಿ ಪ್ರಚುರಿಸುವುದಾಗಿದೆ.
-ಕ.ವೆಂ.ನಾಗರಾಜ್.
***************
[ಡಾ. ಜೆಸ್ಸಿಯವರ ಶಿಷ್ಯ ಅಭಿಲಾಷ್ ನೀಡಿದ ವಿವರಗಳನ್ನು ಆಧರಿಸಿದೆ.]
H A Patil
ಪ್ರತ್ಯುತ್ತರಅಳಿಸಿಕವಿ ನಾಗರಾಜ ರವರಿಗೆ ವಂದನೆಗಳು
ಡಾ.ಜೆಸ್ಸಿ ಡೆ ಮರ್ಸಿ ಯವರ ಕುರಿತು ಬರೆದ ಬರಹ ಅವರ ವೃತ್ತಿ ಮತ್ತು ಬದುಕನ್ನು ಕುರಿತು ಒಂದು ಸ್ಥೂಲ ಮಾಹಿತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ನನಗೆ ಈ ವ್ಯಕ್ತಿಯ ಕುರಿತು ಗೊತ್ತೆ ಇರಲಿಲ್ಲ, ಹೊಸ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವಾದಂತಾಯಿತು, ಧನ್ಯವಾದಗಳು.
kavinagaraj
ವಂದನೆಗಳು, ಪಾಟೀಲರೇ.