ಪಂಡಿತರು ಸಂನ್ಯಾಸಾಶ್ರಮದ ಕುರಿತು ಹೇಳುವುದು ಹೀಗೆ:
ಈ ರೀತಿ ವಾನಪ್ರಸ್ಥವನ್ನು ನಿರ್ವಹಿಸಿ, ಮಾನವನು 75 ವರ್ಷದವನಾದಾಗ, ನಾಲ್ಕನೆಯದೂ, ಕೊನೆಯದೂ ಆದ ಸಂನ್ಯಾಸಾಶ್ರಮದಲ್ಲಿ ಪ್ರವೇಶ ಮಾಡಬೇಕು. 25 ವರ್ಷಗಳ ಕಠೋರ ಸಾಧನೆಯಿಂದ ಜಗತ್ತಿನ ಸರ್ವವಿಧ ಮಮತಾಮೋಹಗಳನ್ನೂ ಸರ್ವಥಾ ತ್ಯಾಗ ಮಾಡಿ, ಪರಿವ್ರಾಜಕ ವೃತ್ತಿಯನ್ನವಲಂಬಿಸಿ, ಭಿಕ್ಷಾಮಾತ್ರೋಪಜೀವಿಯಾಗಿ, ಕಾಷಾಯ ವಸ್ತ್ರದಿಂದ ಭೂಷಿತನಾಗಿ, ಯೋಗಸಾಧನೆಯನ್ನೂ ಮಾಡುತ್ತಾ, ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥರಿಗೆ ಜ್ಞಾನದಾನ ಮಾಡುತ್ತಾ ತಿರುಗಾಡಬೇಕು. ಮಾನವನು ಮುಟ್ಟಬಹುದಾದ ಸರ್ವೋನ್ನತ ಆದರ್ಶ ಈ ಸಂನ್ಯಾಸ. ಯಾವ ದೇಶಕ್ಕೂ, ಯಾವ ಭಾಷೆಗೂ, ಯಾವ ಜನಾಂಗಕ್ಕೂ ಸೇರದವನಾಗಿ, ಪೂರ್ಣ ನಿರ್ಮೋಹನೂ, ಪೂರ್ಣ ನಿರ್ಲೇಪನೂ, ಪೂರ್ಣ ಅಸಂಗನೂ ಆಗಿ, ಎಲ್ಲರಿಗೂ ಅಭಯದಾನ ಮಾಡುತ್ತಾ, ಗ್ರಾಮದಿಂದ ಗ್ರಾಮಕ್ಕೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ತಿರುಗಾಡುತ್ತಾ, ಮಾನವಮಾತ್ರರಿಗೆ, ಪರಮಶಾಂತಿಯಿಂದ, ಯಾವ ಕಾರಣದಿಂದಲೂ ಉದ್ರಿಕ್ತನಾಗದೆ, ಸತ್ಯಜ್ಞಾನ, ಸತ್ಯಕರ್ಮ, ಸತ್ಯೋಪಾಸನೆಗಳನ್ನು ಬೋಧಿಸಬೇಕು. ಋಗ್ವೇದ ಸಂನ್ಯಾಸಿಗೆ ನೀಡುವ ಉದ್ಬೋಧನವಿದು:-
ಋತಂ ವದನೃತದ್ಯುಮ್ನ ಸತ್ಯಂ ವದನ್ ಸತ್ಯಕರ್ಮನ್ | ಶ್ರದ್ಧಾಂ ವದನ್ ತ್ಸೋಮ ರಾಜನ್ ಧಾತ್ರಾ ಸೋಮ ಪರಿಷ್ಕೃತ ಇಂದ್ರಾಯೇಂದೋ ಪರಿ ಸ್ರವ || (ಋಕ್.9.113.4.)
[ಋತದ್ಯುಮ್ನ] ವೇದಗಳನ್ನೇ, ಧರ್ಮವನ್ನೇ ಶಕ್ತಿಯಾಗಿ ಉಳ್ಳವನೇ, [ಸತ್ಯಕರ್ಮನ್] ಸತ್ಯಾನುಕೂಲ ಕರ್ಮಗಳನ್ನೇ ಆಚರಿಸುವವನೇ, [ಸೋಮರಾಜನ್] ಭಗವದಾನಂದದಿಂದ ಪ್ರಕಾಶಿಸುವವನೇ, [ಸೋಮ] ಪ್ರಶಾಂತನೇ, [ಇಂದೋ] ಜನಜೀವನವನ್ನು ಸರಸಗೊಳಿಸುವವನೇ, [ಧಾತ್ರಾ] ಜಗದಾಧಾರನಿಂದ [ಪರಿಷ್ಕೃತಃ] ಶುದ್ಧೀಕೃತನಾಗಿ, [ಋತಮ್] ವೇದಗಳನ್ನೂ, ಧರ್ಮವನ್ನೂ [ವದನ್] ಬೋಧಿಸುತ್ತಾ, [ಸತ್ಯಂ ವದನ್] ಸತ್ಯವನ್ನು ಉಪದೇಶಿಸುತ್ತಾ, [ಶ್ರದ್ಧಾಂ ವದನ್] ಶ್ರದ್ಧೆಯನ್ನು ಪಸರಿಸುತ್ತಾ, [ಇಂದ್ರಾಯ] ಜೀವಾತ್ಮನ ಹಿತಕ್ಕಾಗಿ, ಪರಮೈಶ್ವರ್ಯವಾನ್ ಪ್ರಭುವಿನ ಪ್ರಾಪ್ತಿಗಾಗಿ [ಪರಿ ಸ್ರವ] ಪರ್ಯಟನ ಮಾಡು, ಕರುಣೆಯನ್ನು ಸುರಿಸು.
ಈ ಒಂದು ಮಂತ್ರದಲ್ಲಿ ಸಂನ್ಯಾಸಿಯ ಸಮಸ್ತ ಲಕ್ಷಣಗಳನ್ನೂ ಹೇಳಿದೆ. ವೇದ, ಧರ್ಮ, ಸತ್ಯ, ಶ್ರದ್ಧೆ ಇವನ್ನು ಪ್ರಸರಿಸುತ್ತಾ ಕೇವಲ ಮಾತಿನಿಂದಲ್ಲ, ತನ್ನ ಸ್ವಂತ ಜೀವನದಿಂದ ಪರಿವ್ರಜನ ಮಾಡುವುದು, ಸುತ್ತಾಡುವುದು ಸಂನ್ಯಾಸಿಯ ಧರ್ಮ. "ಪರಿವ್ರಾಟ್" ಎಂದರೆ ಸುತ್ತಾಡುವವನು ಎಂದೇ ಸಂನ್ಯಾಸಿಯ ಹೆಸರು. ಮಠ, ಆಶ್ರಮಗಳನ್ನು ಕಟ್ಟಿಕೊಂಡು ರಾಜವೈಭವದಿಂದ, ಕಿರೀಟಧಾರಣೆ ಮಾಡಿ, ಆನೆಯ ಮೇಲೋ, ಪಲ್ಲಕ್ಕಿಯಲ್ಲಿಯೋ ಕುಳಿತು ಮೆರವಣಿಗೆ ಹೊರಡುವುದು, ದೊಡ್ಡ ದೊಡ್ಡ ದೇವಾಲಯಗಳನ್ನು ನಿರ್ಮಿಸಿ ಜಡಾರಾಧನೆಯಿಂದ ಮೊದಲೇ ಜಡವಾಗಿ ಕುಳಿತ ಜನಮಾನಸವನ್ನು ಮತ್ತೂ ಜಡವಾಗಿಸುವುದು, ಗೃಹಸ್ಥರಿಗೂ ಕೂಡ ಉಪಲಬ್ಧವಾಗದ ಷಡ್ರಸೋಪೇತವಾದ ಭೋಜನವನ್ನು ಸವಿಯುವುದು, ಜಗತ್ತನ್ನು ತ್ಯಜಿಸಿದ್ದೇವೆಂದು ಹೇಳಿಕೊಂಡರೂ ಜಗತ್ತಿನ ವೈಭವಗಳಿಗೇ ಅಂಟಿಕೊಂಡಿರುವುದು, ಇದಾವುದೂ ವೈದಿಕ ಸಂನ್ಯಾಸಿಯ ಲಕ್ಷಣವಲ್ಲ.
ಹಿಂದೆಯೇ ಹೇಳಿರುವಂತೆ, ಸಂನ್ಯಾಸ ಮಾನವೋತ್ಕರ್ಷದ ಪರಮಾವಧಿ. ಶಾಸ್ತ್ರಜ್ಞಾನರಹಿತನಾದವನು, ಬ್ರಹ್ಮಾನುಭೂತಿಯಿಲ್ಲದವನು, ಸಂಪೂರ್ಣ ನಿರ್ಲಿಪ್ತ ಹಾಗೂ ತ್ಯಾಗಭಾವನೆಯಿಲ್ಲದವನು, ಆರೋಗ್ಯ-ಧೃಢಕಾಯವಿಲ್ಲದವನು, ಸಂನ್ಯಾಸದ ಈ ಮಹೋಚ್ಛ ಪದವಿಯನ್ನು ಪಡೆಯಲಾರನು. ಈ ರೀತಿ ಜಗದುಪಕಾರ ಹಾಗೂ ಆಧ್ಯಾತ್ಮಿಕ ಸುಧಾರಣೆ ಮಾಡಿಕೊಳ್ಳುತ್ತಾ ಸಂನ್ಯಾಸಿಯು ಸಾವು ಬರುವವರೆಗೂ ನಿಃಸ್ಪೃಹನಾಗಿ, ಚಲಿಸುವ ಜ್ಞಾನಜ್ಯೋತಿಸ್ತಂಭರಂತೆ ಓಡಾಡುತ್ತಿರಬೇಕು.
ಈ ಚತುರಾಶ್ರಮಗಳ ವಿಷಯದಲ್ಲಿ ಸರ್ವರೂ ನೆನಪಿನಲ್ಲಿಡಬೇಕಾದ ಅಂಶ ಒಂದಿದೆ. ಪ್ರಥಮಾಶ್ರಮವಾದ ಬ್ರಹ್ಮಚರ್ಯವೊಂದು ಮಾತ್ರ ಸರ್ವರಿಗೂ ಅನಿವಾರ್ಯ. ಉಳಿದ ಮೂರೂ ಯೋಗ್ಯತೆಯನ್ನವಲಂಬಿಸಿ ಸ್ವೀಕರಿಸಬೇಕಾದ ಆಶ್ರಮಗಳಾಗಿವೆ. ಜನ್ಮಾರಭ್ಯ ವೈದಿಕ ಸಂಸ್ಕಾರಗಳನ್ನೇ ಹೊತ್ತುಬಂದು ಅದೇ ವಾತಾವರಣದಲ್ಲಿ ಜೀವಿಸುವ ಮಾನವರಿಗೆ ಈ ನಾಲ್ಕೂ ಆಶ್ರಮಗಳನ್ನೂ ವಿಧಿವತ್ತಾಗಿ ಪಾಲಿಸುವ ಯೋಗ್ಯತೆ ಬಂದೇ ಬರುತ್ತದೆ. ಪುರುಷನಿಗೆಂತೋ, ಸ್ತ್ರೀಗೂ ಅಂತೆಯೇ ಈ ನಿಯಮಗಳು ಅನ್ವಯಿಸುತ್ತವೆ. ವಯಃಪ್ರಮಾಣದಲ್ಲಿ ಮಾತ್ರ, ಸಾಧಾರಣ ಸ್ಥಿತಿಯಲ್ಲಿ ನಾರಿಗೆ 16-18 ವರ್ಷಗಳವರೆಗೆ ಬ್ರಹ್ಮಚರ್ಯ, 41-45ರವರೆಗೆ ಗಾರ್ಹಸ್ಥ್ಯ, 46-70ರವರೆಗೆ ವಾನಪ್ರಸ್ಥ ಹಾಗೂ ಜೀವನಾಂತ ಪರ್ಯಂತ ಸಂನ್ಯಾಸ, ಈ ರೀತಿ ಮನು ಮೊದಲಾದ ಸ್ಮೃತಿಕಾರರ ಅಭಿಪ್ರಾಯವಿರುತ್ತದೆ. ಸ್ವತಃ ಪ್ರಮಾಣಗಳಾದ ವೇದಗಳಲ್ಲಿ ಕೇವಲ ಪ್ರಾಪ್ತಯೌವನಳಾದ ಅಂದರೆ, ಸದೃಢವಾದ ಸಂತಾನ ನಿರ್ಮಾಣಕ್ಕೆ ಶಕ್ತಳಾದ ನಾರಿಯ ವಿವಾಹವಿಧಿ ಮಾತ್ರ ಕಂಡುಬರುತ್ತದೆ. ಉದಾಹರಣೆಗೆ, ಬ್ರಹ್ಮಚರ್ಯೇಣ ಕನ್ಯಾಃ ಯುವಾನಂ ವಿಂದತೇ ಪತಿಮ್ || (ಅಥರ್ವ.11.15.18.)- ಇಂದ್ರಿಯನಿಗ್ರಹ, ವಿದ್ಯಾದಿ ಸಮಸ್ತ ಗುಣವಿಶಿಷ್ಟತೆಯಿಂದ ಕೂಡಿದ ಕನ್ಯೆ, ತನಗೆ ಅನುರೂಪನಾದ ಯುವಕನಾದ ಪುರುಷನನ್ನು ಪತಿಯಾಗಿ ಪಡೆಯುತ್ತಾಳೆ- ಎಂಬ ಮೌಲಿಕ ತಥ್ಯ (Fundamental Principle) ಮಾತ್ರ ಕಂಡುಬರುತ್ತದೆ. ದೇಶ, ಕಾಲ, ದೈಹಿಕಸ್ಥಿತಿ ಮೊದಲಾದುವನ್ನು ದೃಷ್ಟಿಪಥದಲ್ಲಿಟ್ಟು ನಿರ್ಧರಿಸಬೇಕಾದ ವಿಷಯವಿದು.
ಹಿಂದಿನ ಲೇಖನಕ್ಕೆ ಲಿಂಕ್:ವಾನಪ್ರಸ್ಥಾಶ್ರಮ
ಹಿಂದಿನ ಲೇಖನಕ್ಕೆ ಲಿಂಕ್:ವಾನಪ್ರಸ್ಥಾಶ್ರಮ
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಲೌಕಿಕರು ತಮ್ಮ ವಾನಪ್ರಸ್ತಾಶ್ರಮದ ನಂತರ ಸಂನ್ಯಾಸ ಸ್ವೀಕರಿಸಿದಾಗ ಇಲ್ಲಿ ತಿಳಿಸಿರುವಂತೆಯೇ ನಡೆದುಕೊಂಡಾರು. ಬ್ರಹ್ಮಚರ್ಯಾಶ್ರಮದಿಂದ ನೇರವಾಗಿ ಸಂನ್ಯಾಸ ಸ್ವೀಕರಿಸಿ ಬಿಡಿ ಸಂನ್ಯಾಸಿಯಾಗಿ ಪರಿವ್ರಾಜಕರಾಗಿರುವವರೂ ಕೂಡ ಸಂನ್ಯಾಸಾಶ್ರಮದ ವಿಧಿಯಂತೆ ನಡೆದುಕೊಂಡಾರು.ಆದರೆ ಬಹುಷ: ಮಠಾಧಿಪತಿಗಳಿಗೆ,ಪೀಠಾಧಿಪತಿಗಳಿಗೆ ಬೇರೆಯೇ ಕರ್ತವ್ಯ,ಪದ್ಧತಿ ಇರಬಹುದೇನೋ.ವೇದಕಾಲದಲ್ಲಿ ಮಠಾಧಿಪತಿ,ಪೀಠಾಧಿಪತಿಗಳ ಶಬ್ಧ ಪ್ರಯೋಗವೂ ಇರಲಾರದು. ಈ ವ್ಯವಸ್ಥೆಗಳೆಲ್ಲಾ ಯಾವಾಗ ಬಂತು? ಇವರಿಗೇಕೆ ಸಂನ್ಯಾಸಧರ್ಮ ಅನ್ವಯವಾಗುದಿಲ್ಲವೆಂಬ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಶಂಕರ, ಮಧ್ವ, ರಾಮಾನುಜ ಪೀಠದ ಜೊತೆಗೇ ಇನ್ನೂ ಹಲವು ಪೀಠಗಳಿವೆ.ರಾಮಕೃಷ್ಣಾಶ್ರಮದಲ್ಲಂತೂ ಮಹಾರಾಜ್, ಎಂದೇ ಹೇಳುತ್ತಾರೆ. ಈ ಬಗ್ಗೆ ಸರಿಯಾದ ಮಾಹಿತಿ ದೊರೆಯಬೇಕು. ಧರ್ಮ ಬಾಹಿರವಾಗಿ ಮಠಾಧಿಪತಿಗಳು, ಪೀಠಾಧಿಪತಿಗಳು ಇದ್ದಾರೆಂದು ನನಗನಿಸುವುದಿಲ್ಲ.ಧರ್ಮದ ರಕ್ಷಣೆಗಾಗಿಯೇ ಇರುವ ಪೀಠಾಧಿಪತಿಗಳು ವೇದ ವಿರೋಧವಾಗಿ ನಡೆಯಲಾರರು.
ಪ್ರತ್ಯುತ್ತರಅಳಿಸಿಆತ್ಮೀಯ ಶ್ರೀಧರ್, ನೀವು ಬಳಸಿರುವ ಮಠಾಧಿಪತಿ, ಪೀಠಾಧಿಪತಿ ಶಬ್ದಗಳಲ್ಲೇ ಉತ್ತರ ಅಡಗಿರಬಹುದು. ಸಂನ್ಯಾಸಾಶ್ರಮದ ಧರ್ಮ ಪಾಲನೆ ಮಾಡುವವರು ಲೌಕಿಕ ಬಂಧನಗಳಿಂದ ಹೊರಬರಬೇಕು. ಜನರನ್ನು ಧರ್ಮದ ಹಾದಿಯಲ್ಲಿ ಮುನ್ನಡೆಸಲು ಅನೇಕ ಮಠಾಧಿಪತಿಗಳು, ಪೀಠಾಧಿಪತಿಗಳು ಉತ್ತಮ ಕಾರ್ಯ ಮಾಡುತ್ತಿರುವುದು ಸತ್ಯ. ಹಾಗೆಯೇ ಜನರನ್ನು ದಾರಿ ತಪ್ಪಿಸುವವರ ಸಂಖ್ಯೆಯೂ ಗಣನೀಯವಾಗಿರುವುದು ಸುಳ್ಳಲ್ಲ.
ಅಳಿಸಿನನ್ನ ಪ್ರಶ್ನೆ ಇರುವುದು ಪೀಠ-ಮಠ ವ್ಯವಸ್ಥೆಗಳು ಯಾವಾಗ ಬಂತು? ಅದಕ್ಕೇನಾದರೂ ನಮ್ಮ ಧರ್ಮದಲ್ಲಿ ಬೇರೆ ವಿವರಣೆ ಇದೆಯೇ? ಎಂಬುದನ್ನು ಹುಡುಕಬೇಕು.ಶೃಂಗೇರಿ ಶಾರದಾ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರಭಾರತಿಗಳಂತಹ ಮಹಾತ್ಮರನ್ನು ಕಣ್ಮುಂದೆ ತಂದುಕೊಂಡು ಈ ಪ್ರಶ್ನೆ ನನ್ನಲ್ಲಿ ಮೂಡಿದೆ. ಸಮಾಜವು ಕೆಲವರ ಬಗ್ಗೆ ಬಹಳ ಭಕ್ತಿಯನ್ನು ಇಟ್ಟುಕೊಂಡಿದೆ.ನಾವು ಅವರ ಮನಸ್ಸಿಗೆ ಘಾಸಿಮಾಡುವಂತಿಲ್ಲ.ಪೀಠಾಧಿಪತಿಗಳಿಗೇ ಪ್ರತ್ಯೇಕ ನೀತಿ ನಿಯಮಗಳಿರಬಹುದು.ಅಧ್ಯಯನ ಮಾಡಬೇಕಾದ ವಿಶಯವಿದು.
ಪ್ರತ್ಯುತ್ತರಅಳಿಸಿಪ್ರಿಯ ಶ್ರೀಧರ್, ನಿಮ್ಮ ಪ್ರಶ್ನೆ ಸಮುಚಿತವಾಗಿದೆ. ಮಠ/ಪೀಠಗಳಲ್ಲೇ ಈ ಬಗ್ಗೆ ವಿಚಾರಿಸಬೇಕು.
ಪ್ರತ್ಯುತ್ತರಅಳಿಸಿ