ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಡಿಸೆಂಬರ್ 6, 2012

ವೇದೋಕ್ತ ಜೀವನ ಪಥ: ಬ್ರಹ್ಮಚರ್ಯಾದಿ ಚತುರಾಶ್ರಮಗಳು -೩: ವಾನಪ್ರಸ್ಥಾಶ್ರಮ


ಪಂಡಿತರು ವಾನಪ್ರಸ್ಥಾಶ್ರಮದ ಕುರಿತು ಹೇಳುತ್ತಾರೆ:
     ಪುರುಷನು ೫೦ ವರ್ಷದವನಾಗುವವರೆಗೆ ಗೃಹಸ್ಥಾಶ್ರಮದ ಮೂಲಕ ಜೀವಕೋಟಿಗೆ ಸೇವೆ ಸಲ್ಲಿಸುತ್ತಾ ಇದ್ದು, ಅನಂತರ ವಾನಪ್ರಸ್ಥಾಶ್ರಮದಲ್ಲಿ ಕಾಲಿಡಬೇಕು. ತನ್ನ ಪತ್ನಿ ಜೊತೆಗೆ ಬರುವುದಾದರೆ ಅವಳನ್ನೂ ಕರೆದುಕೊಂಡು, ಬಾರದ ಪಕ್ಷದಲ್ಲಿ ಅವಳನ್ನು ಪುತ್ರನ ವಶಕ್ಕೊಪ್ಪಿಸಿ, ಆಧ್ಯಾತ್ಮಿಕ ಸಾಧನೆಗಳು, ತತ್ತ್ವಧ್ಯಾನ, ಶಾಸ್ತ್ರಾಧ್ಯಯನಾದಿಗಳಿಂದ ತನ್ನನ್ನು ಸಂನ್ಯಾಸಾಶ್ರಮಕ್ಕೆ ಅರ್ಹನನ್ನಾಗಿ ಮಾಡಲು ಮತ್ತು ರಾಷ್ಟ್ರದ ಮಕ್ಕಳಿಗೆ ಸಮುಚಿತ ಶಿಕ್ಷಣವನ್ನು ನೀಡಲು ಪ್ರಶಾಂತ ಸ್ಥಳದಲ್ಲಿ ನೆಲೆಮಾಡಿಕೊಳ್ಳಬೇಕು. ಇದರಿಂದ ಆತ್ಮಿಕಶಕ್ತಿ ಬೆಳೆಯುವುದಲ್ಲದೇ, ದೇಶದ ಮುಂದಿನ ಪ್ರಜೆಗಳಾದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವೂ ಸಿಕ್ಕುವುದು. ಏಕೆಂದರೆ, ಅರಗಿಸಿಕೊಂಡ, ಪರಿಪಕ್ವವಾದ ಜ್ಞಾನ, ಕ್ರಿಯಾತ್ಮಕ ಜೀವನದಿಂದ ಲಭಿಸಿದ ಸ್ವಾನುಭವಗಳು ಹಾಗೂ ತೀರಿಹೋದ ಸಾಂಸಾರಿಕ ಮಮತಾಮೋಹಗಳು, ಈ ಕಾರಣಗಳಿಂದ ಗುರುಕುಲಗಳಲ್ಲಿ ಅಧ್ಯಾಪನ ಮಾಡಲು ವಾನಪ್ರಸ್ಥಿಗಳೇ ಸರಿಯಾದ ಅಧಿಕಾರಿಗಳು. ಪತ್ನಿ ಜೊತೆಯಲ್ಲಿ ಬಂದ ಪಕ್ಷದಲ್ಲಿ ಅವಳು ಪತ್ನಿಯಾಗಿ ಅಲ್ಲ, ಸೋದರಿಯಂತೆ ಅಥವಾ ಸಹಕರ್ಮಚಾರಿಣಿಯಂತೆ ಜೊತೆಗಿದ್ದು, ತಾನೂ ಕೈಲಾದ ಸೇವೆ ಸಲ್ಲಿಸುವಳು, ತಾನೂ ಸಾಧನೆ ಮಾಡುವಳು.
ಆ ನಯೈತಮಾ ರಭಸ್ಯ ಸುಕೃತಾಂ ಲೋಕಮಪಿ ಗಚ್ಛತು ಪ್ರಜಾನನ್ |
ತೀರ್ತ್ವಾ ತಮಾಂಸಿ ಬಹುಧಾ ಮಹಾಂತ್ಯಜೋ ನಾಕಮಾ ಕ್ರಮತಾಂ ತೃತೀಯಮ್ || (ಅಥರ್ವ.೯.೫.೧.)
     ಓ ಗೃಹಸ್ಥ! [ಏತಂ ಆ ನಯ] ಈ ನಿನ್ನ ಆತ್ಮನನ್ನು ಮುನ್ನಡೆಸು. [ಆ ರಭಸ್ಯ] ಸಾಧನೆಯನ್ನಾರಂಭಿಸು. ನಿನ್ನ ಆತ್ಮನು, [ಪ್ರಜಾನನ್] ಚೆನ್ನಾಗಿ ಜ್ಞಾನ ಗಳಿಸಿ, [ಸುಕೃತಾಂ ಲೋಕಮಪಿ] ಪುಣ್ಯವಂತರ ಸ್ಥಿತಿಯನ್ನೂ, [ಗಚ್ಛತು] ಮುಟ್ಟಲಿ. [ಅಜಃ] ಆಜನ್ಮನಾದ, ನಿತ್ಯನಾದ ನಿನ್ನ ಅತ್ಮನು, [ಬಹುಧಾ] ಅನ್ಯ ಸಾಧನೆಗಳಿಂದ, [ಮಹಾಂತಿ ತಮಾಂಸಿ ತೀರ್ತ್ವಾ] ಮಹಾ ಅಂಧಕಾರಗಳನ್ನು ದಾಟಿ, [ತೃತೀಯಂ ನಾಕಂ ಆ ಕ್ರಮತಾಮ್] ಮೂರನೆಯದಾದ ವಾನಪ್ರಸ್ಥದ ಸುಖಮಯ ಆಶ್ರಮವನ್ನು ಆಕ್ರಮಿಸಲಿ.
     ನಾವು ಮೇಲೆ ಹೇಳಿರುವ ಲಾಭಗಳೇ ಅಲ್ಲದೇ ವೃದ್ಧರು ನಿವೃತ್ತರಾಗುವುದರಿಂದ, ಯುವಕರಿಗೆ ಆಜೀವಿಕಾ ಸಾಧನಗಳು ಸಹಜವಾಗಿಯೇ ಲಭಿಸುತ್ತವೆ.
ಹಿಂದಿನ ಲೇಖನಕ್ಕೆ ಲಿಂಕ್:ಗೃಹಸ್ಥಾಶ್ರಮ

2 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜರೆ,
    ವಾನಪ್ರಸ್ತ ನಿಜಕ್ಕೂ ಸರಿಯೇ ! ಆದರೆ ಇಂದಿನ ಈ ಕಾಲದಲ್ಲಿ ಇದನ್ನು ಸಾಧ್ಯ ಮಾಡಿಕೊಳ್ಳುವ ಬಗೆ ಹೇಗೆ? ಈ ಬಗ್ಗೆ ನನಗೂ ಹಲವಾರು ಸಾರಿ ಯೋಚನೆ ಬಂದಿದೆ, ದಾರಿ ಕಾಣುತ್ತಿಲ್ಲ. ನಿಮ್ಮ ಹತ್ತಿರ ಏನಾದರು ಯೋಚನೆ/ಯೋಜನೆಗಳು ಇವೆಯೇ? ಇದ್ದರೆ ಹಂಚಿಕೊಳ್ಳಿ.
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. ಆತ್ಮೀಯ ಪ್ರಕಾಶರೇ, ನನ್ನ ಕಲ್ಪನೆಯ ವಾನಪ್ರಸ್ಥದ ಬಗ್ಗೆ ಲೇಖನ ಬರೆದಿರುವೆ. ಓದಿ ಅಭಿಪ್ರಾಯ ತಿಳಿಸುವಿರಾ?

    ಪ್ರತ್ಯುತ್ತರಅಳಿಸಿ