ಇನ್ನು ಧರ್ಮದ ಮೂರನೆಯ ಅವಿಚ್ಛಿನ್ನ ಅಂಗ, ವೈದಿಕ ಭಾಷೆಯಲ್ಲಿ ಇದನ್ನು ಉಪಾಸನಾ ಎನ್ನುತ್ತಾರೆ. ಭಕ್ತಿ, ಪೂಜೆ ಇದೆಲ್ಲಾ ಈಚೀಚೆಗೆ ಉದ್ಭವಿಸಿದ ಶಬ್ದಗಳು. ಜೀವಾತ್ಮನು ತನ್ನ ಚಿತ್ತವನ್ನು ಬಾಹ್ಯ ವಿಷಯಗಳಿಂದ ಸರ್ವಥಾ ಬೇರ್ಪಡಿಸಿ, ರೂಪ, ರಸ, ಗಂಧ, ಶಬ್ದ, ಸ್ಪರ್ಷ - ಈ ಐದು ಇಂದ್ರಿಯ ವಿಷಯಗಳಿಂದಲೂ ಅದನ್ನು ಒಳಕ್ಕೆಳೆದುಕೊಂಡು, ಏಕಾತ್ರಗೊಳಿಸಿ ಅದನ್ನು ಪರಮಾತ್ಮನಲ್ಲಿ ನಿಲ್ಲಿಸಿ, ಪ್ರಭುಸಾಮೀಪ್ಯವನ್ನು ಅನುಭವಿಸುವ ಕ್ರಿಯೆಯನ್ನೇ ಉಪಾಸನೆ ಎನ್ನುತ್ತಾರೆ. ವೈದಿಕ ಧರ್ಮದಲ್ಲಿ ಜೀವಂತ ಮೂರ್ತಿಗಳಾದ ತಾಯಿ-ತಂದೆ-ಆಚಾರ್ಯ-ಗುರು-ಹಿರಿಯರು ಇವರ ಪೂಜೆಗೆ, ಅಂದರೆ ಅವರ ಸತ್ಕಾರಕ್ಕೆ ಅವಕಾಶವಿದೆಯೇ ಹೊರತು, ಜಡಧಾತುಗಳ, ಕಲ್ಲು-ಮರಗಳ ವಿಗ್ರಹಗಳನ್ನು ದೇವರೆಂದು ತಿಳಿದು, ಧೂಪ-ದೀಪ-ನೈವೇದ್ಯಾದಿಗಳಿಂದ ಅರ್ಚಿಸುವ ಪದ್ಧತಿಗೆ ಅವಕಾಶವೇ ಇಲ್ಲ. ಪರಮಾತ್ಮನು ಸರ್ವವ್ಯಾಪಕ. ಅದೇ ಕಾರಣದಿಂದ ಸರ್ವಥಾ ನಿರಾಕಾರ. ಅವನು ಅವತಾರವನ್ನು ಎತ್ತುವ ಸಂಭವವಿಲ್ಲ ಎಂದು ಪಾಠಕರು ಮೊದಲೇ ಅರಿತಿದ್ದಾರೆ. ನಿರಾಕಾರನ ಮೂರ್ತಿ ರಚನೆ ಸರ್ವಥಾ ಅಸಂಭವ. ಚಿತ್ತದ ಏಕಾಗ್ರತೆಯ ಸಾಧನೆಗಾಗಿ ಮೂರ್ತಿಪೂಜೆ ಎಂದರೆ, ವ್ಯಾಪ್ಯದಲ್ಲಿ ಮನಸ್ಸನ್ನು ನಿಲ್ಲಿಸಲು ಕಲಿತರೂ, ವ್ಯಾಪಕನ ಧ್ಯಾನಕ್ಕೆ ಅದು ನೆರವಾಗಲಾರದು. ಅಲ್ಲದೆ ಉಪಾಸನೆ ಮಾಡುವುದು ಬೇರೆ ಎಲ್ಲಿಯೂ ಸಿಗದ ಆನಂದವನ್ನು ತುಂಬಿಕೊಳ್ಳುವುದಕ್ಕಾಗಿ. ಹೀಗಿರುವಾಗ, ಸಚ್ಚಿದಾನಂದ ಸ್ವರೂಪನಾದ ಪ್ರಭುವಿಗೆ ಬದಲು ನಿರಾನಂದನಾದ ಪ್ರಕೃತಿಯಲ್ಲಿ, ಪ್ರಾಕೃತ ವಿಗ್ರಹಗಳಲ್ಲಿ ಚಿತ್ತ ನಿಲ್ಲಿಸಲು ಕಲಿತು ಸಾಧಿಸುವುದಾದರೂ ಏನಿದೆ? ಸಚ್ಚಿತ್ಸ್ವರೂಪನಾದ ಜೀವ, ಸತ್ವರೂಪಿಣಿಯಾದ ಪ್ರಕೃತಿಗಿಂತ ಶ್ರೇಷ್ಠನಾಗಿರುವುದರಿಂದ, ವಿಗ್ರಹಗಳ ಮುಂದೆ ತಲೆ ಬಾಗುವುದರಲ್ಲಿ ಆತ್ಮಾಪಮಾನ ಒಂದನ್ನು ಬಿಟ್ಟು ಬೇರಾವ ಮಹತ್ವವಿದೆ?
ವೇದಗಳಲ್ಲಿ ಮೂರ್ತಿಪೂಜಾ ವಿಧಾನವಿಲ್ಲ. ಅದಕ್ಕೆ ವಿರುದ್ಧವಾಗಿ, ಈ ಕೆಳಗಿನ ಮಂತ್ರದಂತಹ ವಿಚಾರ ಪ್ರಚೋದಕವಾದ ಮಂತ್ರಗಳು ಸಿಕ್ಕುತ್ತವೆ.
ಪ್ರ ತುವಿದ್ಯುಮ್ನಸ್ಯ ಸ್ಥವಿರಸ್ಯ ಘೃಷ್ವೇರ್ದಿವೋ ರರಪ್ಶೇ ಮಹಿಮಾ ಪೃಥಿವ್ಯಾಃ |
ನಾಸ್ಯ ಶತ್ರುರ್ನ ಪ್ರತಿಮಾನಮಸ್ತಿ ನ ಪ್ತತಿಷ್ಠಿಃ ಪುರುಮಾಯಸ್ಯ ಸಹ್ಯೋಃ || (ಋಕ್. ೬.೧೮.೧೨.)
[ಪ್ರ ತುವಿದ್ಯುಮ್ನಸ್ಯ] ಮಹಾವೇಗಯುಕ್ತ ಶಕ್ತಿಸಂಪನ್ನನೂ [ಸ್ಥವಿರಸ್ಯ] ಅನಾದಿಯೂ, {ಘೃಷ್ವೇಃ] ಪರಮಾಣುಗಳಲ್ಲಿ ಚಲನೆ ನೀಡುವವನೂ ಆದ ಪರಮಾತ್ಮನ, [ಮಹಿಮಾ] ಮಹಿಮೆಯು, [ದಿವಃ ಪೃಥಿವ್ಯಾಃ ರರಪ್ಯೇ] ದ್ಯುಲೋಕ, ಪೃಥಿವೀ ಲೋಕಗಳನ್ನು ಮೀರಿಸಿದೆ. [ಅಸ್ಯ ಪುರುಮಾಯ ಸಹ್ಯೋಃ] ಈ ಮಹಾಪ್ರಜ್ಞನೂ, ಸಹನಶೀಲನೂ ಆದ ಪ್ರಭುವಿನ, [ಶತ್ರುಃ] ಶತ್ರುವು, [ನ] ಯಾವನೂ ಇಲ್ಲ. [ಪ್ರತಿಮಾನಂ ನ ಅಸ್ತಿ] ಪ್ರತಿಮಾನವೂ ಇಲ್ಲ. [ಪ್ರತಿಷ್ಠಿಃ ನ] ಆಧಾರವೂ ಇಲ್ಲ.
ಇಷ್ಟು ಸ್ಪಷ್ಟವಾಗಿ ಪ್ರತಿಮಾರ್ಚನದ ನಿರಾಕರಣ ವೇದಗಳಲ್ಲಿ ಕಂಡುಬರುತ್ತದೆ. ಅಲ್ಲದೆ, ಯ ಏಕ ಇತ್ ತಮುಷ್ನುಹಿ (ಋಕ್.೬.೪೫.೧೬.) - ಯಾವನು ಕೇವಲ ಒಬ್ಬನೇ ಒಬ್ಬನಿದ್ದಾನೋ, ಅವನನ್ನು ಮಾತ್ರ ಸ್ತುತಿಸು
ಮಾ ಚಿದನ್ಯದ್ ವಿ ಶಂಸತ ಸಖಾಯೋ ಮಾ ರಿಷಣ್ಯತ |
ಇಂದ್ರಮಿತ್ ಸ್ರೋತಾ ವೃಷಣಂ ಸಚಾ ಸುತೇ ಮುಹುರುಕ್ಥಾ ಚ ಶಂಸತ || (ಋಕ್. ೮.೧.೧.)
[ಅನ್ಯತ್ ಚಿತ್] ಬೇರಾವುದನ್ನೂ [ಮಾ ವಿಶಂಸತಾ] ಪ್ರಶಂಸಿಸಬೇಡಿ. [ಸಖಾಯಃ] ಮಿತ್ರರೇ, [ಮಾ ರಿಷಣ್ಯತಾ] ನಾಶ ಹೊಂದಬೇಡಿ. [ಸುತೇ ಸಜಾ] ಈ ಸೃಷ್ಟಿಯಲ್ಲಿ ಒಟ್ಟಾಗಿ [ವೃಷಣಂ ಇಂದ್ರಂ ಇತ್] ಸುಖವರ್ಷಕನಾದ ಇಂದ್ರನನ್ನು, ಸರ್ವಶಕ್ತಿಮಾನ್ ಪ್ರಭುವನ್ನು ಮಾತ್ರ [ಶಂಸತ] ಸ್ತುತಿಸಿರಿ. [ಮುಹುರುಕ್ಥಾ ಚ] ಮತ್ತು ಬಾರಿ ಬಾರಿ ಸ್ತುತಿಪರರಾಗಿ [ಶಂಸತ] ಸ್ತುತಿಸಿರಿ.
ಈ ರೀತಿ ಕೇವಲ ಒಬ್ಬನೇ ಪ್ರಭುವನ್ನು ಮಾತ್ರ ಸ್ತುತಿಸಿರಿ ಎಂದು ವೇದಗಳು ಸ್ಪಷ್ಟ ಆದೇಶ ನೀಡುತ್ತವೆ.
ಹೀಗೆ ಜಡಾರ್ಚನೆ ಪರಿತ್ಯಾಜ್ಯ. ಚೇತನೋಪಾಸನೆಯೇ ವೇದೋಕ್ತ ಕ್ರಿಯೆ. ಉಪಾಸನಾ - ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ.
*****************
ಪಂ. ಸುಧಾಕರ ಚತುರ್ವೇದಿ.
Deepa Narashimhappa
ಪ್ರತ್ಯುತ್ತರಅಳಿಸಿNamaskara sir e rithi kai gala mudrike gala information sikidare namage kaluhisi.
Bhimasen Purohit
ಎಂದಿನಂತೆ ಉತ್ತಮ ಲೇಖನ..
ಆದರೂ ನನ್ನ ಮಂದಬುದ್ಧಿಯು ಒಪ್ಪದ ಮೂರ್ತಿಪೂಜೆಯ ನಿರಾಕರಣೆ..!!
ಹಿಂದೊಮ್ಮೆ ನಿಮ್ಮ ಲೇಖನನಕ್ಕೆ ಪ್ರತಿಕ್ರಿಯಿಸುವಾಗ ನಾನು ಹೇಳಿದ್ದೆ.
ಖಂಡಿತ ಮೂರ್ತಿಪೂಜೆಯೇ ಸರ್ವಶ್ರೇಷ್ಠವಲ್ಲ. ಚೇತನರಾದ ಗುರುಹಿರಿಯರ ಪೂಜೆಗಿಂತ ಜಡ ಮೂರ್ತಿಗಳ ಪೂಜೆ ಹೆಚ್ಚಲ್ಲ. ಯಾವ ಪುರಾಣಗಳಿಂದ ಮೂರ್ತಿಪೂಜೆಯ ಪ್ರಕ್ರಿಯೆ ಆರಂಭವಾಯಿತು ಎನ್ನಲಾಗುತ್ತದೋ, ಅದೇ ಪುರಾಣಗಳಲ್ಲಿಯೇ ಈ ವಿಷಯ ಸ್ಪಷ್ಟವಾಗಿದೆ..
"ಮೂರ್ತಿಪೂಜೆ ಎನ್ನುವುದು ಧ್ಯಾನದ ಅತೀ ಪ್ರಾರಂಭದ ಹಂತ. ಮೂರ್ತಿಯನ್ನೇ ನಂಬಿಕೊಂಡವನು ಉತ್ತಮ ಸ್ಥಿತಿ ಹೊಂದಲಾರ. ಯಾರು ಸರ್ವವಸ್ತುಗಳಲ್ಲಿಯೂ ಪರಮಾತ್ಮನ ಚಿಂತನೆ ಮಾಡುತ್ತಾರೋ ಅವನೇ ಉತ್ತಮ ಭಕ್ತ" - ಇದು ಭಾಗವತದಲ್ಲಿ ಹೇಳಿರುವ ಸ್ಪಷ್ಟೋಕ್ತಿ. ನಿಮ್ಮ ಲೇಖನದ ಒಟ್ಟು ಸಾರಾಂಶ ಈ ಭಾವನೆಗೆ ಪೂರಕವಾಗಿದೆ ಮತ್ತು ಅದು ಪಾಲನೀಯವೂ ಆಗಿದೆ..
Bhimasen Purohit
ಆದರೆ, ಪ್ರತಿಮಾಪೂಜೆಯು ಸರ್ವಥಾ ನಿಷಿದ್ಧ, ಅದು ವೇದವಿರುದ್ಧವೆಂದು ಹೇಳಿರುವ ಮಾತಿಗೆ ನನ್ನ ಆಕ್ಷೇಪವಿದೆ..
"ಪ್ರತಿಮಾನಂ ನ ಅಸ್ತಿ" ಅನ್ನೋ ವಾಕ್ಯದಿಂದ ಭಗವಂತನಿಗೆ ಪ್ರತಿಮೆಗಳೇ ಇಲ್ಲ ಎಂದಿದ್ದೀರಿ. ಇಲ್ಲಿ 'ಪ್ರತಿಮಾನಂ' ಅಂದರೆ 'ಸಮಾನಂ' ಎಂದರ್ಥವಿದೆ. [ "ಪ್ರಖ್ಯಃ ಪ್ರಕಾಶಃ ಪ್ರತಿಮಃ ಪ್ರಕಾರಃ ತುಲ್ಯಃ ಸಮಃ" ಎಂದು ಹಲಾಯುಧ ಕೋಶದಲ್ಲಿ ಪ್ರತಿಮ ಅಂದರೆ ಸಮ ಎಂಬರ್ಥ ಸ್ಪಷ್ಟವಾಗಿದೆ.] ಅಂದರೆ, ಇಲ್ಲಿ "ಪ್ರತಿಮಾನಂ ನ ಅಸ್ತಿ" ಅಂದರೆ, ಭಗವಂತನ 'ಸಮಾನ'ರಾರೂ ಇಲ್ಲ ಎಂಬರ್ಥವೆ ಹೊರತು ನಾವು ಹೇಳುವ ಪ್ರತಿಮೆಗಳಿಲ್ಲ ಅಂದಲ್ಲ..
Bhimasen Purohit
'ಪ್ರತಿಮಾ' ಅನ್ನೋ ಪದದ ವಾಚ್ಯಾರ್ಥವೇನು ಎನ್ನುವುದನ್ನು ತಿಳಿಯುವುದಾದರೆ,
"ಯಂ ಪ್ರತಿ ಮಾಂ (ಜ್ಞಾನಂ) ಜನಯತಿ ಸಾ ಪ್ರತಿಮಾ"-ಇದು ಪಾರಿಭಾಷಿಕ ಪರಿಷ್ಕಾರ. ಅಲ್ಲದೆ ವ್ಯಾಕರಣಯೋಗದಿಂದಲೂ ಈ ಅರ್ಥ ಸಮಂಜಸ.
ಅಂದರೆ, ಯಾವ ವಸ್ತು ಒಬ್ಬರ ಬಗೆಗಿನ ಜ್ಞಾನವನ್ನು ಕಲ್ಪನೆಯನ್ನು ತಂದುಕೊಡುವುದೋ ಅದೇ "ಪ್ರತಿಮಾ".. ಭಗವಂತನ ಬಗೆಗಿನ ಜ್ಞಾನವನ್ನು ಯಾವುದು ತಂದುಕೊಡುತ್ತದೆಯೋ ಅದು ಭಗವಂತನ ಪ್ರತಿಮಾ ಅಷ್ಟೇ.
ಅದು ಜಡಮೂರ್ತಿಯೂ ಆಗಿರಬಹುದು, ತಂದೆ ತಾಯಿಯರೂ ಆಗಿರಬಹುದು, ವೇದಗಳೂ ಕೂಡ ಪ್ರತಿಮಾ ಗಳೇ, ಏಕೆಂದರೆ ವೇದಗಳೇ ಭಗವಂತನ ಜ್ಞಾನವನ್ನು ಹೇಳುವಂಥಾದ್ದು..!!
ಒಂದು ವೇಳೆ, ನೀವು ಹೇಳಿದ ವಾಕ್ಯದಲ್ಲಿ "ಪ್ರತಿಮೆಗಳು ಇಲ್ಲ", ಪ್ರತಿಮೆಗಳು ಪರಿತ್ಯಾಜ್ಯ ಅನ್ನೋ ಅರ್ಥ ಬರೋದಾದ್ರೆ, ಅಲ್ಲಿಗೆ ವೇದಗಳೂ ಪರಿತ್ಯಾಜ್ಯವಾಗಬೇಕು.. ಯಾಕಂದ್ರೆ ಅವೂ ಜಡವಾದ ಪ್ರತಿಮೆಗಳೇ ಅಲ್ಲವೇ.!!
ವೇದಗಳ ಮಾತಿನಲ್ಲಿ comparitive statement ಇದೆ. ಅಂದರೆ ಜಡವಾದ ಪ್ರತಿಮೆಗಳಿಗಿಂತ, ಚೇತನ ಪ್ರತಿಮೆಗಳು ಶ್ರೇಷ್ಠ ಎಂಬರ್ಥವಿದೆಯೇ ಹೊರತು, ಜಡ ಪ್ರತಿಮೆಗಳ ಪೂಜೆ ನಿಷಿದ್ಧ ಎಂಬುದು ಇಲ್ಲ..
Kavi Nagaraj
ದೀಪಾರವರೇ. ನಮಸ್ಕಾರ. ಕೈಗಳ ಿಂತಹ ಮುದ್ರಿಕೆಗಳು ಹುಡುಕಿದರೆ ಅಮತರ್ಜಾಲ ತಾಣದಲ್ಲಿ ಬಹಳಷ್ಟು ಸಿಗುತ್ತವೆ.
19 minutes ago · Like
Kavi Nagaraj
ಭೀಮಸೇನ ಪುರೋಹಿತರಿಗೆ ನಮಸ್ಕಾರ. ಮೂರ್ತಿಪೂಜೆ ಧ್ಯಾನದ ಆರಂಭಿಕೆ ಹಂತವೆಂಬ ನಿಮ್ಮ ಅನಿಸಿಕೆಗೆ ಸಹಮತವಿದೆ. ನೀವೇ ಹೇಳಿರುವಂತೆ ಮೂರ್ತಿ ಪೂಜೆಯ ಆರಂಭ ಯಾವುದೋ ಸುದೀರ್ಘ ಹಿಂದಿನ ಕಾಲಘಟ್ಟದಲ್ಲಿ ಆಗಿರಬಹುದು, ಅದಕ್ಕೆ ಹಲವಾರು ಕಾರಣಗಳೂ ಇರಬಹುದು. ಅದೇನೇ ಇರಲಿ, ಲೇಖನದ ಸಾರ ಗ್ರಹಿಸಿದ ನಿಮಗೆ ಧನ್ಯವಾದಗಳು. ದೇವರು ಸರ್ವಾಂತರ್ಯಾಮಿ, ಸರ್ವ ವ್ಯಾಪಕ, ಸರ್ವ ಶಕ್ತ ಎಂಬ ಕಲ್ಪನೆಗೆ ಮೂರ್ತಿರೂಪದಲ್ಲಿ ಅವನನ್ನು ಕಾಣುವುದು ಸೂಕ್ತವಾಗಲಾರದು. ದಾರಿಗಳು ಹಲವಿದ್ದರೂ ಗುರಿಯೊಂದೇ ಆಗಿರುವಾಗ, ಮೂರ್ತಿಪೂಜೆ ಸರಿಯೋ ತಪ್ಪೋ ಎಂಬ ನಿತ್ಯ ನಿರಂತರವಾದ ಚರ್ಚೆಯಲ್ಲಿ ಶಕ್ತಿವ್ಯಯ ಮಾಡಿಕೊಳ್ಳದೆ, ನಮನಮಗೆ ಸರಿಯೆನಿಸಿದ ದಾರಿಯಲ್ಲಿ ಮುನ್ನಡೆದು ಸತ್ಯಾನ್ವೇಷಣೆಯ ಕಾರ್ಯ ಮುಂದುವರೆಸುವುದು ಸೂಕ್ತವೆಂಬುದು ನನ್ನ ವೈಯಕ್ತಿಕ ಅನಿಸಿಕೆ. ಹಾಗೆಂದು ಜಿಜ್ಞಾಸೆ, ಚರ್ಚೆಗಳಿಂದ ವಿಮುಖನೂ ಆಗಲಾರೆ. ಕಾಲಕಾಲಕ್ಕೆ ನಮ್ಮ, ನಿಮ್ಮ ಅಭಿಪ್ರಾಯಗಳ ವಿನಿಮಯ ಆಗುತ್ತಿರಲಿ, ತಿಳಿಯುತ್ತಾ ಮುಂದುವರೆಯೋಣ. ವ್ಯಕ್ತಿಗಳಲ್ಲಿ ದೇವರ ರೂಪಅಂಶವನ್ನು ಕಾಣಬಹುದು, ಆದರೆ ಅವರೇ ದೇವರಾಗಲಾರರು. ಕೊನೆಗೆ ಚರ್ಚೆ ಮೂಲಕ್ಕೇ ಬರುತ್ತದೆ, ದೇವರು ಅಂದರೆ ಯಾರು ಎಂಬಲ್ಲಿಗೆ! ಪ್ರತಿಯೊಂದು ಧರ್ಮ, ಪಂಥ, ವೈಚಾರಿಕತೆಗಳೂ ಸುತ್ತುವುದು ಜಗತ್ತು, ಜೀವ ಮತ್ತು ದೇವರ ಕುರಿತೇ ಆಗಿವೆ. ನಿಮ್ಮ ಪ್ರಬುದ್ಧ ಪ್ರತಿಕ್ರಿಯೆಗೆ ವಂದನೆಗಳು.
Vishwanatha Sharma
ಅಳಿಸಿಈ ರೀತಿಯ ಆರೋಗ್ಯಕರ ಚರ್ಚೆಗಳು ನಡೆಯುತ್ತಾ ಬಂದಿದ್ದರಿಂದಲೇ ಧರ್ಮವು ಉಳಿದಿರುವುದು. ಇಂತಹ ಚರ್ಚೆಗಳು ಭಾರತದಲ್ಲಿ ಮಾತ್ರ ಸಾಧ್ಯ.
Vasudevarao Rao
ಭಗವಂತನಿಗೆ ಮೂರ್ತಿಯಿಲ್ಲವೆಂದ ಮೇಲೆ ಅವನನ್ನು ಮೂರ್ತಿಯ ಮೂಲಕ ತಿಳಿಯುವ ಪ್ರಶ್ನೆಯೇ ಇಲ್ಲ. ಪರಮಾತ್ಮನನ್ನು ತರ್ಕ, ತಿಳುವಳಿಕೆ, ಸ್ವಾಧ್ಯಾಯ ಮುಂತಾದುವರ ಮೂಲಕ ತಿಳಿಯಲು ಸಾಧ್ಯ. ಕವಿ ನಾಗರಾಜರು ಮೂರ್ತಿ ಪೂಜೆ ಧ್ಯಾನದ ಆರಂಭಿಕ ಹಂತ ಎಂಬುದನ್ನು ಒಪ್ಪಿದರೂ, ಶೇ 99% ರಷ್ಟು ಜನ ಪ್ರಾಥಮಿಕ ಹಂತದಲ್ಲಿಯೇ ಇರುತ್ತಾರೆ. ಇದೊಂದು ವಿಪರ್ಯಾಸ
Bhimasen Purohit
ಖಂಡಿತ.. ನಿಮ್ಮ ಲೇಖನದ ಆಶಯ ಸರ್ವಪ್ರಮಾಣಸಮ್ಮತವೇ ಆಗಿದೆ.. ಅದರಲ್ಲಿ ದೂಸ್ರಾ ಮಾತಿಲ್ಲ..
Integration, Differentiation ಅಂತಹ ಉನ್ನತ ಗಣಿತ ಓದುವವನಿಗೆ ಮಗ್ಗಿಗಳನ್ನು ಬಾಯಿಪಾಠ ಮಾಡುವ ಅವಶ್ಯಕತೆ ಇರೋದಿಲ್ಲ. ಹಾಗಂತ ಅವನು ಬಾಲ್ಯದಲ್ಲಿದ್ದಾಗ ಮಾಡಿದ ಮಗ್ಗಿಗಳ ಬಾಯಿಪಾಠ ವ್ಯರ್ಥ ಅಂತ ಹೇಳಲೂ ಬರೋದಿಲ್ಲ.
ಇಲ್ಲೂ ಅಷ್ಟೇ, ಉನ್ನತ ಮಟ್ಟದ ಉಪಾಸಕನಿಗೆ ಮೂರ್ತಿಯ ಅವಶ್ಯಕತೆ ಇರೋದಿಲ್ಲ., ಹಾಗಂತ ಸಾಮಾನ್ಯ ಜನರು ಮಾಡುವ ಮೂರ್ತಿಪೂಜೆಯೂ ವ್ಯರ್ಥ-ನಿಷಿದ್ಧ ಅನ್ನಲು ಬರುವುದಿಲ್ಲ.. ಅಲ್ಲದೆ ವೇದವಾಕ್ಯವು ಮೂರ್ತಿಪೂಜೆಯನ್ನು ನಿಷೇಧಿಸಿದ ಪ್ರಮಾಣಗಳಿಲ್ಲ. [ ನೀವು ತೋರಿಸಿದ ವೇದವಾಕ್ಯವು ಅರ್ಥಾನ್ತರವನ್ನೂ ಹೊಂದಿರುವುದರಿಂದ, ಅದು ಈ ವಿಷಯಕ್ಕೆ ಪ್ರಮಾಣ ಅಲ್ಲ.]
ಒಟ್ಟಿನಲ್ಲಿ, ಉಪಾಸನೆಯಂತೂ ಕರ್ತವ್ಯವೇ ಆಗಿದೆ..
ಈಗ ಮೂರ್ತಿಪೂಜೆ ಮಾಡುವವರು, ಆ ಮಟ್ಟಿನ ಸಾಧನೆ ಮಾಡಿದ ಮೇಲೆ ಖಂಡಿತವಾಗಿ ಮೂರ್ತಿಪೂಜೆಯನ್ನು ಬಿಡುತ್ತಾರೆ, ಮತ್ತು ಅಂತಿಮವಾಗಿ ಮೂರ್ತಿಪೂಜೆಯ ಅವಶ್ಯಕತೆಯಿಲ್ಲದೆ ಬಿಟ್ಟೆ ಬಿಡುತ್ತಾರೆ..! ವಂದನೆಗಳು..
[ ಸದಾ, ಹೀಗೆ ಆಕ್ಷೇಪ ಎತ್ತಿ, ನಿಮ್ಮ ತಲೆನೋವಿಗೆ ಕಾರನನಾಗಿದ್ದರೆ, ಖಂಡಿತ ಕ್ಷಮೆಯಿರಲಿ.. ]
Kavi Nagaraj
ಶ್ರೀಯುತ ವಿಶ್ವನಾಥ ಶರ್ಮ, ವಾಸುದೇವರಾವ್ ಮತ್ತು ಭೀಮಸೇನ ಪುರೋಹಿತರ ಮೌಲ್ಯಯುತ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಮಿತ್ರ ಭೀಮಸೇನ ಪುರೋಹಿತರೇ, ನಿಮ್ಮ ಆಕ್ಷೇಪಗಳು, ಅನಿಸಿಕೆಗಳಿಗೆ ಹೃತ್ಪೂರ್ವಕ ಸ್ವಾಗತವಿದೆ. ವಿಚಾರಗಳನ್ನು ಒರೆಗೆ ಹಚ್ಚುವುದರಿಂದಲೇ ಅದರ ಪ್ರಖರತೆ ಹೆಚ್ಚುವುದು.