ಬೇಲೂರಿನ ಶ್ರೀ ವಿಶ್ವನಾಥ ಶರ್ಮರು ಕಳೆದ ವಾರ ದೂರವಾಣಿ ಮೂಲಕ ೩೧-೦೭-೨೦೧೧ ರ ಭಾನುವಾರದಂದು ಚನ್ನರಾಯಪಟ್ಟಣದಲ್ಲಿ ಹಲವಾರು ಆಸಕ್ತರು ವೇದಾಭ್ಯಾಸ ಮಾಡುತ್ತಿದ್ದು, ಕಲಿಯಲು ಪ್ರಾರಂಭಿಸಿ ಒಂದು ವರ್ಷ ಪೂರ್ಣಗೊಂಡ ನಿಮಿತ್ತ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದು ಆ ಕಾರ್ಯಕ್ರಮಕ್ಕೆ ಬರುವಂತೆ ಕೋರಿದ್ದರು. ಚನ್ನರಾಯಪಟ್ಟಣದ ಚೈತನ್ಯ ವಿದ್ಯಾಸಂಸ್ಥೆಯ ಮುಖ್ಯಸ್ಥರು ಶ್ರೀ ರಮೇಶ್‌ರವರೂ ಸಹ ದೂರವಾಣಿ ಮುಖೇನ ಆಹ್ವಾನಿಸಿದ್ದಲ್ಲದೆ ಆಹ್ವಾನ ಪತ್ರಿಕೆ ಸಹ ಕಳಿಸಿದ್ದರು. ನನಗೂ ಸಹ ವಿಷಯ ಆಸಕ್ತಿದಾಯಕವಾದುದಾದ್ದರಿಂದ ಅಂದು ಬೆಳಿಗ್ಗೆ ೭-೧೫ರ ಬಸ್ಸಿಗೆ ಹೊರಟು ೮-೧೫ಕ್ಕೆ ಸ್ಥಳದಲ್ಲಿದ್ದೆ. ಕಾರ್ಯಕ್ರಮ ಬೆ. ೮-೩೦ಕ್ಕೆ ಆರಂಭವಾಗುತ್ತಿದ್ದರಿಂದ ಪೂರ್ಣ ಕಾರ್ಯಕ್ರಮ ವೀಕ್ಷಿಸುವ ಉದ್ದೇಶ ನನಗಿದ್ದರಿಂದ ಸಕಾಲದಲ್ಲಿ ಅಲ್ಲಿದ್ದೆ. ಯಶಸ್ವಿಯಾಗಿ ನಡೆದ ಕಾರ್ಯಕ್ರಮ ಅಲ್ಲಿ ಬಂದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳುವೆ.
ವೈದಿಕ ಅಗ್ನಿಹೋತ್ರದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಾಲ್ಕು ದಂಪತಿಗಳು ಭಾಗವಹಿಸಿದ್ದ ಅಗ್ನಿಹೋತ್ರದ ಮಹತ್ವವನ್ನು ವೇದತರಂಗ ಮಾಸಪತ್ರಿಕೆಯ ಸಂಪಾದಕರಾದ ಬೆಂಗಳೂರಿನ ಶ್ರೀ ಶ್ರುತಿಪ್ರಿಯರವರು ವಿವರಿಸಿದ್ದಲ್ಲದೆ ಪ್ರತಿಮಂತ್ರದ ಅರ್ಥವನ್ನು ಮನಮುಟ್ಟುವಂತೆ ತಿಳಿಹೇಳಿದರು. ಸಮರ್ಪಣಾ ಮನೋಭಾವದಿಂದ ಮಾಡುವ ಅಗ್ನಿಹೋತ್ರದಿಂದ ಆಂತರಿಕ ಹಾಗೂ ಬಾಹ್ಯ ಶುದ್ಧಿಗೆ, ಪರಿಸರ ಶುದ್ಧಿಗೆ ಹೇಗೆ ಸಹಕಾರಿಯಾಗುವುದೆಂದು ವಿವರಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ರಮೇಶ್ ರವರು ವೇದಾಭ್ಯಾಸದ ಕಲಿಕೆ ಕಳೆದ ಒಂದು ವರ್ಷದಿಂದ ನಡೆದ ರೀತಿಯ ಬಗ್ಗೆ, ಅದು ಯಶಸ್ವಿಗೊಳ್ಳಲು ಕಾರಣರಾದವರ ಬಗ್ಗೆ ವಿಸ್ತೃತವಾಗಿ ತಿಳಿಸಿ ಸಂಬಂಧಿಸಿದವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಸುಮಾರು ೪೦ ವೇದಾಭ್ಯಾಸಿಗಳು ಕಳೆದ ಒಂದು ವರ್ಷದಿಂದ ಅಭ್ಯಾಸ ಮಾಡುತ್ತಿದ್ದು, ತಾವು ಕಲಿತ ಕೆಲವು ವೇದಮಂತ್ರಗಳನ್ನು ಸುಸ್ವರವಾಗಿ ಸಾಮೂಹಿಕವಾಗಿ ಹೇಳಿದ್ದು ಕಲಿಕೆಯ ಸಾರ್ಥಕತೆಯನ್ನು ತೋರಿಸಿತು.
ಮುಖ್ಯಭಾಷಣ ಮಾಡಿದ ಶ್ರೀ ಶ್ರುತಿಪ್ರಿಯರವರು ಚಿಕ್ಕ ವಯಸ್ಸಿನ ಬಾಲಕರೂ ಸೇರಿದಂತೆ ಎಲ್ಲಾ ವಯೋಮಾನದವರೂ ಕಲಿಕೆಯಲ್ಲಿ ತೊಡಗಿದ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿ ಇದು ಇತರರಿಗೆ ಪ್ರೇರಣೆ ನೀಡುವ ಸಂಗತಿಯೆಂದರು. ವೇದ ಯಾವುದೇ ಒಂದು ನಿರ್ದಿಷ್ಟ ಜಾತಿಗೆ ಸೇರಿದ್ದಾಗಿರದೆ ಇಡಿಯ ಮನುಕುಲಕ್ಕೆ ಸೇರಿದ್ದಾಗಿದ್ದು, ಎಲ್ಲಾ ಜಾತಿಯವರೂ, ಮಹಿಳೆಯರೂ ವೇದಾಭ್ಯಾಸಕ್ಕೆ ತೊಡಗಬೇಕೆಂದು ಆಶಿಸಿದರು. ಜಾತಿ ವ್ಯವಸ್ಥೆಯ ವಿಷಯವನ್ನು ಭಾಷಣದ ಪ್ರಮುಖ ವಿಷಯವಾಗಿ ಆರಿಸಿಕೊಂಡ ಅವರು ಪ್ರಾಚೀನ ಕಾಲದ ವರ್ಣವ್ಯವಸ್ಥೆಯನ್ನು ಜಾತಿಗಳಾಗಿಸಿ, ಜಾತಿಭೇದ ಹುಟ್ಟುಹಾಕಿ, ಮೇಲು-ಕೀಳು, ಸ್ಪೃಷ್ಯ-ಅಸ್ಪೃಷ್ಯ ಇತ್ಯಾದಿಗಳಿಗೆ ಸಿಲುಕಿಸಲು ಅಜ್ಞಾನ ಮತ್ತು ಸಂಕುಚಿತ ಮನೋಭಾವವೇ ಕಾರಣವೆಂದು ವಿಶ್ಲೇಷಿಸಿದರು. ಜಾತಿ ಹುಟ್ಟಿನಿಂದಲ್ಲ, ಆಚರಣೆಯಿಂದ ಬರುತ್ತದೆ. ತಾವು ಮಾಡುವ ಕರ್ಮಕ್ಕನುಸಾರವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬುದಾಗಿ ಪರಿಗಣಿಸಲಾಗುತ್ತಿದ್ದು, ನಂತರದಲ್ಲಿ ಹುಟ್ಟಿನಿಂದ ಜಾತಿ ಎಂಬುದು ರೂಢಿಗತವಾಗಿ ಬಳಸಲ್ಪಟ್ಟು ವೇದವನ್ನು ತಿಳಿಯದವರು ದೂಷಿಸುವಂತೆ ಆದ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ವೇದದಲ್ಲಿ ಎಲ್ಲೂ ಅಸಮಾನತೆಯ ಸೊಲ್ಲಿಲ್ಲ, ಮೇಲು-ಕೀಳುಗಳ ತಾರತಮ್ಯವಿಲ್ಲ, ನಿಜವಾಗಿ ವೇದೋಕ್ತ ರೀತಿಯಲ್ಲಿ ಜೀವನ ನಡೆಸಿದರೆ ಇಂತಹ ಕೀಳು ಆಚರಣೆಗಳು ನಶಿಸುವುದಾಗಿ ಅಭಿಪ್ರಾಯಪಟ್ಟರು. ಸ್ವತಃ ವೇದವ್ಯಾಸರು ಒಬ್ಬ ಬೆಸ್ತನ ಮಗ, ಕೌಂಡಿನ್ಯ ಋಷಿ ಮೂಲತಃ ಕ್ಷೌರಿಕ, ಮಹಾಪತಿವ್ರತೆಯಾಗಿದ್ದ ಅರುಂಧತಿ ಒಬ್ಬ ಅಂತ್ಯಜೆ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಕ್ಷತ್ರಿಯ, ಹೀಗೆ ಹಲವಾರು ವಾಸ್ತವ ವಿಚಾರಗಳನ್ನು ಮುಂದಿಟ್ಟ ಅವರು ಮಾನವ ಕುಲದ ಏಕತೆಗೆ ವೇದ ಇದೆಯೇ ಹೊರತು ಮತ್ತೇನಲ್ಲವೆಂದರು. ಪರಮಾತ್ಮ ಎಲ್ಲವನ್ನೂ ಕೊಟ್ಟಿದ್ದಾನೆ, ಅದನ್ನು ಪಡೆಯುವ ಬಳಸುವ ರೀತಿಯನ್ನು ನಾವು ಕಲಿತುಕೊಳ್ಳಬೇಕಷ್ಟೆ ಎಂದ ಅವರು ನಮ್ಮ ಸ್ಥಿತಿ ಇಂದು ಬಂಗಾರದ ಬೆಟ್ಟದ ಮೇಲೆ ಕುಳಿತ ಭಿಕ್ಷುಕನಂತಿದೆಯೆಂದು ವಿಷಾದಿಸಿದರು. ಸತ್ಯವನ್ನು ಅರಿಯುವಲ್ಲಿ ಶ್ರದ್ಧೆ, ಬುದ್ಧಿ ಮತ್ತು ತರ್ಕದ ಸಮನ್ವಯವಾದರೆ ಸಾಧ್ಯವೆಂದರು.
ಶ್ರೀ ವಿಶ್ವನಾಥ ಶರ್ಮರವರು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಆದೇಶದಂತೆ ತಾವು ಪ್ರತಿವಾರ ಚನ್ನರಾಯಪಟ್ಟಣಕ್ಕೆ ಬಂದು ವೇದಪಾಠ ಮಾಡುತ್ತಿದ್ದು, ಅನಿವಾರ್ಯವಾಗಿ ಬರಲಾಗದಿದ್ದ ಸಂದರ್ಭಗಳಲ್ಲಿ ಶ್ರೀ ನಾಗರಾಜಮೂರ್ತಿ, ಗೋಪಿನಾಥ ಶಾಸ್ತ್ರಿ, ವಿಶ್ವನಾಥ, ಮುಂತಾದವರು ಪಾಠ ಮತ್ತು ಅಭ್ಯಾಸ ನಿಲ್ಲದಂತೆ ನೋಡಿಕೊಂಡುದಕ್ಕೆ ಕೃತಜ್ಞತೆ ಹೇಳಿದರು. ತಾವು ಈ ಸ್ಥಿತಿಗೆ ಬರಲು ಕಾರಣೀಭೂತರಾದ ತಮ್ಮ ತಂದೆ-ತಾಯಿ ಮತ್ತು ಗುರುಗಳನ್ನು ಸ್ಮರಿಸಿಕೊಂಡರು. ಮನುರ್ಭವ - ಮಾನವನಾಗು ಎಂದು ವೇದ ಹೇಳುತ್ತದೆ. ತಾನು ಕಲಿತಿದ್ದನ್ನು ಇತರರಿಗೆ ತಿಳಿಸಿ ಜ್ಞಾನ ಪ್ರಸರಣ ಮಾಡುವುದು ಕರ್ತವ್ಯವಾಗಿದೆ, ಈ ಕರ್ತವ್ಯವನ್ನು ತಾನು ಮಾಡುತ್ತಿದ್ದೇನೆ ಎಂದ ಅವರು ಪಿತೃ ಋಣ, ಮಾತೃ ಋಣ, ಗುರು ಋಣದಂತೆ ಸಮಾಜ ಋಣ ಸಹ ಇದ್ದು ಜ್ಞಾನ ಪ್ರಸರಣ ಕಾರ್ಯ ಸಮಾಜದ ಋಣ ತೀರಿಸುವ ಕೆಲಸವೆಂದು ವಿನಮ್ರರಾಗಿ ಹೇಳಿದರು.
ಗೀತಗಾಯನ, ಧನ್ಯವಾದ ಸಮರ್ಪಣೆ, ಸಾಯಂಕಾಲದ ಅಗ್ನಿಹೋತ್ರ, ವೈದಿಕ ರಾಷ್ಟ್ರಗೀತೆ ಮತ್ತು ಶಾಂತಿ ಮಂತ್ರದೊಂದಿಗೆ ಹೀಗೊಂದು ಸಾರ್ಥಕ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆಲ್ಲಾ ಒಳ್ಳೆಯ ಭೋಜನದ ವ್ಯವಸ್ಥೆಯಾಗಿತ್ತು. ಈ ಕಾರ್ಯಕ್ರಮ ಆಯೋಜಿಸಿದ್ದ ಚೈತನ್ಯ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಶ್ರೀ ರಮೇಶ್ ಮತ್ತು ಸತ್ಸಂಗದ ಎಲ್ಲಾ ಸಹಕಾರಿಗಳು, ವೇದಾಭ್ಯಾಸಿಗಳು, ಗುರುಗಳು ಅಭಿನಂದನಾರ್ಹರಾಗಿದ್ದಾರೆ.
******************
-ಕ.ವೆಂ.ನಾಗರಾಜ್.
ಸಾರ್ಥಕವಾಯ್ತು. ನಾನು ಹಾಸನದಲ್ಲೇ ಅಂದು ಅನಿವಾರ್ಯವಾಗಿ ಇರಬೇಕಿದ್ದ ಪರಿಣಾಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದಿದ್ದರೂ ಈಗ ಪಾಲ್ಗೊಂಡಷ್ಟೇ ಸಂತಸವಾಯ್ತು. ಆಡಿಯೋ ಇದ್ದರೆ ಕೊಡಿ. ಅಪ್ಲೋಡ್ ಮಾಡುವೆ. ಶೃತಿಪ್ರಿಯರ ಮಾತುಗಳ ಪೂರ್ಣ ಪಾಠವನ್ನು ಕೊಡಲು ಸಾಧ್ಯವಿದ್ದರೆ ಕೊಡಿ.
ಪ್ರತ್ಯುತ್ತರಅಳಿಸಿಆಡಿಯೋ ರೆಕಾರ್ಡ್ ಮಾಡಿಲ್ಲ, ಶ್ರೀದರ್.
ಅಳಿಸಿಫೇಸ್ ಬುಕ್ಕಿನ ಪ್ರತಿಕ್ರಿಯೆಗಳು:
ಪ್ರತ್ಯುತ್ತರಅಳಿಸಿVasanth Kumar, Jayaprakash Sumana and 2 others like this.
Jayaprakash Sumana Thumba hrudaymgamavagide ! Dhanyavadagalu ! Ee janmakke
Labhyavishte ani sutte , mundina janmadalladeetheno belaku !
2 hours ago via mobile · Unlike · 1
Annette Anupama vedagalannu odidavaru yestu jana yi olle rithiyalli yochisuththare ? maththu thannanthe pararu yennuththare !
about an hour ago · Like
Kavi Nagaraj ಧನ್ಯವಾದ ಜಯಪ್ರಕಾಶರೇ. ಅನುಪಮಾರವರೇ, ನೈಜ ವೇದಾಧ್ಯಾಯಿಗಳು ಈರೀತಿ ಯೋಚಿಸುತ್ತಾರೆ. ವೇದದ ಹೆಸರಿನಲ್ಲಿ ಕಂದಾಚಾರಗಳನ್ನು ಪೋಷಿಸುವವರು ನಿಜವಾಗಿ ಅವೈದಿಕರೇ ಸರಿ.