ಇಂದು ಬೆಳಗ್ಗೆ ಮೊಬೈಲಿನ ಅಲಾರಮ್ ಏಳು ಎಂದು ಎಚ್ಚರಿಸಿದ್ದರೂ ಏಳದೇ ಸುಮ್ಮನೇ ಹೊರಳಾಡುತ್ತಿದ್ದೆ. ಸ್ವಭಾವತಃ ಭಾವಜೀವಿಯಾದ ನನ್ನ ಮನಸ್ಸು ಎಂದಿನಂತೇ ಅನ್ಯಮನಸ್ಕ ಸ್ಥಿತಿಯಲ್ಲಿತ್ತು. ಬೆ. 5.42ರ ಸಮಯಕ್ಕೆ ಮೊಬೈಲಿಗೆ ಮಿತ್ರ ಹರಿಹರಪುರ ಶ್ರೀಧರರ ಸಂದೇಶವೊಂದು ಬಂದಿತು. ಮಲಗಿಕೊಂಡೇ ಸಂದೇಶ ಓದಿದವನು ಧಡಕ್ಕನೆ ಎದ್ದು ಕುಳಿತೆ. ಸಂದೇಶದಲ್ಲಿದ್ದದ್ದು:‘Sadhana Sangama Sri Pattabhi Ram Guruji passed
away yesterday night'! ನನಗಿಂತ 2-3 ವರ್ಷ ಕಿರಿಯನಾದ ಪಟ್ಟಾಭಿ ನಿಧನರಾದ ವಿಷಯ ಅರಗಿಸಿಕೊಳ್ಳಲು ಕಷ್ಟವಾಯಿತು.
ಪಟ್ಟಾಭಿರಾಮನ ಪರಿಚಯ ನನಗೆ ಆಗಿದ್ದು 1971-72ರ ಸಮಯದಲ್ಲಿ. ಆಗತಾನೇ ನಾನು ಪದವಿ ವಿದ್ಯಾಭ್ಯಾಸ ಮುಗಿಸಿ ನೌಕರಿಗೆ ಸೇರಿದ್ದ ಸಮಯ. ರಾ.ಸ್ವ.ಸಂಘದ ಕಾರ್ಯಕರ್ತನಾಗಿದ್ದ ನನಗೆ ಪಟ್ಟಾಭಿರಾಮ ಮತ್ತು ಹರಿಹರಪುರ ಶ್ರೀಧರರ ಪರಿಚಯವಾದದ್ದೂ ಆಗಲೇ. ನಾನು ಹಾಸನ ನಗರದ ಒಂದು ಭಾಗದ ಕಾರ್ಯವಾಹ ಮತ್ತು ನಂತರದಲ್ಲಿ ನಗರ ಸಹಕಾರ್ಯವಾಹ ಆಗಿದ್ದ ಸಂದರ್ಭದಲ್ಲಿ ಇವರಿಬ್ಬರೂ ಒಂದೊಂದು ಸಾಯಂ ಶಾಖೆಗಳ ಮುಖ್ಯ ಶಿಕ್ಷಕರುಗಳಾಗಿದ್ದರು. ನಾನು ಒಂದೊಂದು ದಿನ ಒಂದೊಂದು ಶಾಖೆಗೆ ಭೇಟಿ ಕೊಡುವ ಪರಿಪಾಠ ಇಟ್ಟುಕೊಂಡಿದ್ದು ಇವರುಗಳು ನಡೆಸುತ್ತಿದ್ದ ಶಾಖೆಗಳಿಗೂ ಹೋಗುತ್ತಿದ್ದೆ. ಇವರುಗಳು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಿದ್ದ ರೀತಿ ಅನನ್ಯವಾಗಿತ್ತು. ಮಕ್ಕಳೂ ಇವರನ್ನು ಹಚ್ಚಿಕೊಂಡಿದ್ದರಿಂದ ಶಾಖೆಗಳಲ್ಲಿ ಉತ್ತಮ ಉಪಸ್ಥಿತಿ ಇರುತ್ತಿತ್ತು. ಸಂಘದ ವಿಸ್ತಾರಕ್ಕೆ ಸಾಯಂ ಶಾಖೆಗಳ ಕೊಡುಗೆ ಅಪಾರವಾಗಿದೆ. ನನ್ನ ಅನುಭವದಂತೆ ಯಾರು ಎಳವೆಯಲ್ಲಿ ಸಂಘದ ಸಂಪರ್ಕಕ್ಕೆ ಬರುತ್ತಾರೋ ಅವರು ಕೊನೆಯ ತನಕ ಸಂಪರ್ಕದಲ್ಲಿ ಉಳಿದುಕೊಳ್ಳುತ್ತಾರೆ. ಪಟ್ಟಾಭಿರಾಮ ಇಂಜನಿಯರಿಂಗ್ ವಿದ್ಯಾರ್ಥಿಯಾಗಿದ್ದರೆ, ಶ್ರೀಧರ್ ಸಂಘದ ಕಾರ್ಯಾಲಯದಲ್ಲಿದ್ದುಕೊಂಡು ಐಟಿಐ ವಿದ್ಯಾರ್ಥಿಯಾಗಿದ್ದರು. ಮೊದಲ ಪರಿಚಯದ ಕುರಿತು ಇಷ್ಟು ಸಾಕೆನಿಸುತ್ತದೆ.
1975-77ರ ತುರ್ತು ಪರಿಸ್ಥಿತಿ ಸಂದರ್ಭವನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಸ್ವಂತದ ಅಧಿಕಾರದ ಉಳಿವಿಗಾಗಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ದೇಶವನ್ನೇ ಅಕ್ಷರಶಃ ಸರ್ವಾಧಿಕಾರಕ್ಕೆ ಒಳಪಡಿಸಿದ್ದ ಕಾಲವದು. ವಿರೋಧ ಪಕ್ಷಗಳ ನಾಯಕರುಗಳೆಲ್ಲಾ ಸೆರೆಮನೆ ಸೇರಿದ್ದರು. ರಾ.ಸ್ವ.ಸಂಘ ಸೇರಿ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಿ ಆ ಸಂಸ್ಥೆಗಳ ಕಾರ್ಯಕರ್ತರನ್ನೂ ರಾಷ್ಟ್ರದ್ರೋಹಿಗಳ ಹಣೆಪಟ್ಟಿ ಹಚ್ಚಿ ಬಂಧಿಸಿದ್ದರು. ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಹತ್ತಿಕ್ಕಲಾಗಿತ್ತು. ಕಾಂಗ್ರೆಸ್ ನಾಯಕರ ವಿರುದ್ಧ ಸೊಲ್ಲೆತ್ತಲೂ ಜನ ಹೆದರುತ್ತಿದ್ದರು. ಸಂಘದ ಕಾರ್ಯಕರ್ತನೆಂದು ನನ್ನನ್ನು ಜುಲೈ, 1975ರಲ್ಲಿ ಬಂಧಿಸಿದ್ದರು. ನನ್ನನ್ನು ಸರ್ಕಾರಿ ನೌಕರಿಯಿಂದಲೂ ಅಮಾನತ್ತು ಮಾಡಿದ್ದರು. ಶ್ರೀಧರ್ ಆ ಸಮಯದಲ್ಲಿ ಬೆಂಗಳೂರಿನಲ್ಲಿ ಭೂಗತರಾಗಿ ಕೆಲಸ ಮಾಡುತ್ತಿದ್ದರು. ನಾನು ಜಾಮೀನಿನ ಮೇಲೆ ಹೊರಬಂದರೂ ನಂತರದಲ್ಲಿ ಒಂದರ ಮೇಲೆ ಒಂದರಂತೆ 13 ಕ್ರಿಮಿನಲ್ ಕೇಸುಗಳನ್ನು ಭಾರತ ರಕ್ಷಣಾ ಕಾಯದೆಯನ್ವಯ ನನ್ನ ಮೇಲೆ ಹೂಡಿದ್ದರು. ವಿರೋಧ ಪಕ್ಷಗಳು ಅಕ್ಷರಶಃ ಮರಣಾವಸ್ಥೆಯಲ್ಲಿ ಇದ್ದವೆಂದರೂ ತಪ್ಪಿಲ್ಲ. ಆ ಸಂದರ್ಭದಲ್ಲಿ ರಾ.ಸ್ವ.ಸಂಘ ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಯಿತು. ನಂತರದ ಬೆಳವಣಿಗೆಗಳು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ್ದು ಈಗ ಇತಿಹಾಸ.
1975ರ ನವೆಂಬರ್ 14ರಿಂದ ಸತ್ಯಾಗ್ರಹ ನಡೆಸಿ ಜೈಲ್ ಭರೋ ಚಳುವಳಿ ನಡೆಸಲು ಲೋಕ ಸಂಘರ್ಷ ಸಮಿತಿ ನಿರ್ಧರಿಸಿದಂತೆ ಹಾಸನ ಜಿಲ್ಲೆಯಲ್ಲೂ ಚಳುವಳಿಯ ರೂಪುರೇಷೆ ಸಿದ್ಧಪಡಿಸಲು 9-11-1975ರಲ್ಲಿ ಗುಪ್ತವಾಗಿ ಒಂದು ಮನೆಯಲ್ಲಿ ನಾವುಗಳು ಸೇರಿದ್ದೆವು. ಹಾಗೆ ಸೇರಿದ್ದವರಲ್ಲಿ ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ (ತುರ್ತು ಪರಿಸ್ಥಿತಿಯಲ್ಲಿ ಅನುಭವಿಸಿದ ಹಿಂಸೆಯ ಕಾರಣದಿಂದ ನಂತರದ ಕೆಲವೇ ವರ್ಷಗಳಲ್ಲ್ಲಿ ಮತಿಭ್ರಮಣೆಗೆ ಒಳಗಾಗಿ ಮೃತರಾದರು), ಜನಾರ್ಧನ ಐಯಂಗಾರ್(ಟೈಲರ್,ಈಗ ಇವರಿಲ್ಲ), ಪಾರಸಮಲ್, ಸದಾಶಿವ, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ (ಇವರೆಲ್ಲಾ ವಿದ್ಯಾರ್ಥಿಗಳು), ನಾನು (ಆಗ ಫುಡ್ ಇನ್ಸ್‌ಪೆಕ್ಟರ್ ಆಗಿದ್ದೆ), ಚಂದ್ರಶೇಖರ್(ಇಂಜನಿಯರಿಂಗ್ ಕಾಲೇಜ್ ಡೆಮಾನಸ್ಟ್ರೇಟರ್), ಜಯಪ್ರಕಾಶ(ಕರ್ನಾಟಕ ಬ್ಯಾಂಕ್), ಕಛ್ ರಾಮಚಂದ್ರ(ವ್ಯಾಪಾರಿ, ಈಗ ಇವರಿಲ್ಲ) ಇವರುಗಳು ಸೇರಿದ್ದು 12ನೆಯವರಾಗಿ ನಮ್ಮೊಡನೆ ಇದ್ದ ನಮ್ಮ ಮಿತ್ರಶತ್ರುವೊಬ್ಬರು ಪೋಲಿಸರಿಗೆ ಮಾಹಿತಿ ನೀಡಿ ಬಂದಿದ್ದರು. ಮನೆಯನ್ನು ಸುತ್ತುವರೆದಿದ್ದ ಪೋಲಿಸರು ನಾವು 11 ಜನರನ್ನು ರಾಷ್ಟ್ರದ್ರೋಹದ ಆಪಾದನೆ ಮೇರೆಗೆ ಬಂಧಿಸಿ ಜೈಲಿಗಟ್ಟಿದ್ದರು. 12ನೆಯ ಮಹಾಶಯ ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ಸಾಕ್ಶ್ಯವನ್ನೂ ನುಡಿದಿದ್ದ. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗದಿದ್ದರಿಂದ ಮೂರು ತಿಂಗಳುಗಳ ಕಾಲ ಹಾಸನದ ಜೈಲಿನಲ್ಲಿಯೇ ಇರಬೇಕಾಯಿತು. ಚಳುವಳಿ ಪ್ರಾರಂಭದ ಮುನ್ನವೇ ಬಂಧಿತರಾದ ನಮ್ಮನ್ನು ಮಂಗಳಪಾಂಡೆ ತಂಡವೆಂದು ಜೊತೆಗಾರರು ಹಾಸ್ಯ ಮಾಡುತ್ತಿದ್ದರು. ಈ ಅವಧಿಯಲ್ಲಿ ಪಟ್ಟಾಭಿರಾಮ ಮತ್ತು ನಾನು ಸಾಮಾನ್ಯವಾಗಿ ಒಟ್ಟಿಗೇ ಇರುತ್ತಿದ್ದೆವು.
ಜೈಲಿನಲ್ಲಿ ಅಸಹನೀಯ ತುರ್ತುಪರಿಸ್ಥಿತಿಯನ್ನು ಎದುರಿಸುವ ಕುರಿತು ಗಂಭೀರವಾದ ಚರ್ಚೆಗಳಾಗುತ್ತಿದ್ದವು. ಕಾಂಗ್ರೆಸ್ಸಿಗರಿಂದ, ಪೋಲಿಸರಿಂದ, ಅಧಿಕಾರಿಗಳಿಂದ ನನಗೆ ಆದ ತೊಂದರೆಗಳು ನನ್ನನ್ನು ವ್ಯಗ್ರನನ್ನಾಗಿಸಿದ್ದವು. ಹಿಂಸಾತ್ಮಕವಾಗಿಯೇ ವಿರೋಧಿಸಬೇಕೆಂದು ಒಂದು ಬಣ ವಾದಿಸಿದರೆ ಇನ್ನೊಂದು ಬಣ ಅಹಿಂಸಾತ್ಮಕ ಹೋರಾಟವನ್ನು ಬೆಂಬಲಿಸುತ್ತಿತ್ತು. ಹಿಂಸಾತ್ಮಕವಾಗಿ ವಿರೋಧಿಸಬೇಕೆಂಬ ಬಣದಲ್ಲಿ ನಾನಿದ್ದು ನನ್ನ ವಾದವನ್ನು ಸಕಾರಣಗಳೊಂದಿಗೆ ಉಗ್ರವಾಗಿ ಉದ್ವೇಗದಿಂದ, ಆವೇಶದಿಂದ ಮುಂದಿಡುತ್ತಿದ್ದೆ. ಪಟ್ಟಾಭಿರಾಮ ನಿರ್ಲಿಪ್ತನಾಗಿ ಎಲ್ಲವನ್ನೂ ವೀಕ್ಷಿಸುತ್ತಿದ್ದನಷ್ಟೆ ಹೊರತು ಪ್ರತಿಕ್ರಿಯಿಸುತ್ತಿರಲಿಲ್ಲ. ಇದನ್ನು ಹೊರತುಪಡಿಸಿದರೆ ಉಳಿದ ಚಟುವಟಿಕಗಳಲ್ಲಿ ಉತ್ಸಾಹದಿಂದ ಪಾಲುಗೊಳ್ಳುತ್ತಿದ್ದ. ಭಜನೆ, ಹಾಡು, ಶಾಖೆ ಎಲ್ಲವೂ ಅಲ್ಲಿಯೇ. ಒಂದು ಸಂಘದ ಶಿಬಿರದಂತೆಯೇ ಜೈಲಿನ ವಾತಾವರಣವನ್ನು ಹೆಚ್ಚಿನ ಸಂಖ್ಯೆಯಲ್ಲಿದ್ದ ಸಂಘದ ತರುಣರು ಮಾರ್ಪಡಿಸಿಬಿಟ್ಟಿದ್ದರು.
ಜೈಲಿನಲ್ಲಿದ್ದಾಗ ವಿಚಾರಣೆ ಸಂದರ್ಭದಲ್ಲಿ ನಮ್ಮನ್ನು ಪೋಲಿಸ್ ವ್ಯಾನಿನಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದರು. ಆಗ ವ್ಯಾನಿನ ಒಳಗಿನಿಂದಲೇ ತುರ್ತುಪರಿಸ್ಥಿತಿಗೆ ಧಿಕ್ಕಾರ, ಇಂದಿರಾಗಾಂದಿಗೆ ಧಿಕ್ಕಾರ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ರಸ್ತೆ ಬದಿಯಲ್ಲಿ ಸಾಗುತ್ತಿದ್ದವರ ಗಮನ ಸೆಳೆಯುತ್ತಾ ಹೋಗುತ್ತಿದ್ದೆವು. ಪಟ್ಟಾಭಿರಾಮನಿಗೂ ನನಗೂ ಸೇರಿ ಕೈಕೋಳ ಹಾಕಿರುತ್ತಿದ್ದರು. ಒಂದು ಸ್ವಾರಸ್ಯಕರ ಸನ್ನಿವೇಶದ ಕುರಿತು ನನ್ನ ಆದರ್ಶದ ಬೆನ್ನು ಹತ್ತಿ . . ಪುಸ್ತಕದಲ್ಲಿ (ಪು.52) ದಾಖಲಿಸಿರುವುದನ್ನು ಯಥಾವತ್ ಇಲ್ಲಿ ಉಲ್ಲೇಖಿಸುವೆ:
"ಕೈಕೋಳದ ಕಥೆ!
. . . ಹೀಗೆಯೇ ಒಮ್ಮೆ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ನನ್ನ ಎಡಗೈ ಮತ್ತು ಅರಕಲಗೂಡಿನ ಪಟ್ಟಾಭಿರಾಮ ಎಂಬ ವಿದ್ಯಾರ್ಥಿಯ ಬಲಗೈ ಸೇರಿಸಿ ಬೇಡಿ ಹಾಕಿದ್ದರು. ಇಬ್ಬರೂ ಸಣಕಲರಾಗಿದ್ದು ನಮ್ಮ ಕೈಯಿಂದ ಬೀಗ ಹಾಕಿದ್ದ ಬೇಡಿಯನ್ನು ಹಾಗೆಯೇ ತೆಗೆಯಬಹುದಿತ್ತು. ವ್ಯಾನಿನಲ್ಲಿ ಬರುವಾಗ ನರಸಿಂಹರಾಜ ವೃತ್ತದ ಸಮೀಪವಿದ್ದ ದೊಡ್ಡ ತಗ್ಗು ಪ್ರದೇಶದ (ಈಗ ಅಲ್ಲಿ ಅಂಗಡಿಗಳಿವೆ) ಹತ್ತಿರ ಬಂದಾಗ ನಮ್ಮ ಕೈಕೋಳವನ್ನು ತೆಗೆದುಕೊಂಡು ಪೋಲಿಸರಿಗೆ ತೋರಿಸಿ ವ್ಯಾನಿನ ಕಿಂಡಿಯೊಳಗಿಂದ ತಗ್ಗಿನೊಳಗೆ ಎಸೆದುಬಿಟ್ಟೆವು. ಪೋಲಿಸರು ತಕ್ಷಣ ವ್ಯಾನು ನಿಲ್ಲಿಸಿ ನಮ್ಮನ್ನು ಬಯ್ಯುತ್ತಾ ಒಬ್ಬರು ಪೇದೆಯನ್ನು ಬೇಡಿ ಹುಡುಕಿ ತರಲು ಕಳಿಸಿದರು. ತಗ್ಗಿನಲ್ಲಿ ಕುರುಚಲು ಗಿಡಗಳು, ಹುಲ್ಲು, ಕೊಚ್ಚೆ ಇದ್ದುದರಿಂದ ಅದನ್ನು ಹುಡುಕುವುದು ಸುಲಭವಿರಲಿಲ್ಲ. ಆ ಸಂದರ್ಭ ಉಪಯೋಗಿಸಿಕೊಂಡು ನಾವುಗಳು ಅಲ್ಲಿ ಜೋರಾಗಿ ಇಂದಿರಾಗಾಂಧಿಗೆ ಧಿಕ್ಕಾರ, ತುರ್ತು ಪರಿಸ್ಥಿತಿಗೆ ಧಿಕ್ಕಾರ, ಇತ್ಯಾದಿ ಘೋಷಣೆಗಳನ್ನು ಹಾಕತೊಡಗಿದೆವು. ಸುತ್ತಮುತ್ತಲಿದ್ದ ಜನ ಗುಂಪುಕೂಡಿದರು. ನಮ್ಮ ಉತ್ಸಾಹ ಹೆಚ್ಚಾಗಿ ಇನ್ನೂ ಜೋರಾಗಿ ಘೋಷಣೆ ಹಾಕತೊಡಗಿದೆವು. ಪಕ್ಕದಲ್ಲೇ ಎಸ್.ಪಿ. ಕಛೇರಿಯಿದ್ದುದರಿಂದ ಅಲ್ಲಿಂದ ಹಿರಿಯ ಅಧಿಕಾರಿಯೊಬ್ಬರು ಬಂದು ವಿಷಯ ತಿಳಿದು ನಮ್ಮನ್ನು ಬೈದು ಬೇರೆ ಇಬ್ಬರು ಪೋಲಿಸರನ್ನು ನಿಯೋಜಿಸಿ ನಮ್ಮನ್ನು ಕೂಡಲೇ ನ್ಯಾಯಾಲಯಕ್ಕೆ ಕರೆದೊಯ್ಯುವಂತೆ ಮಾಡಿದರು. ಕೊನೆಗೂ ಎಸೆದಿದ್ದ ಬೇಡಿ ಸಿಕ್ಕಿತೋ ಇಲ್ಲವೋ ಗೊತ್ತಾಗಲಿಲ್ಲ. ಅವತ್ತಿನ ಮಟ್ಟಿಗೆ ನಮಗೆ ಜೈಲಿನಲ್ಲಿ ಇದು ಖುಷಿಯಾಗಿ ಚರ್ಚಿಸುವ ವಿಷಯವಾಯಿತು."
ನಮ್ಮ 11 ಜನರ ವಿಚಾರಣೆ ನ್ಯಾಯಾಲಯದಲ್ಲಿ ಸ್ವಾರಸ್ಯಕರವಾಗಿರುತ್ತಿತ್ತು. ಅಂತಿಮವಾಗಿ ನಾವು ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಮಾನಿಸಿ ಬಿಡುಗಡೆ ಮಾಡಿತು. ಸಂತೋಷದಿಂದ ನಾವು ನ್ಯಾಯಾಲಯದ ಹೊರಬರುತ್ತಿದ್ದ ಸಂದರ್ಭದಲ್ಲೇ ಪ್ರಭಾಕರ ಕೆರೆಕೈ, ಪಾರಸಮಲ್ ಮತ್ತು ಪಟ್ಟಾಭಿರಾಮರನ್ನು ೨ ವರ್ಷಗಳ ಕಾಲ ವಿಚಾರಣೆಯಿಲ್ಲದೆ ಬಂಧಿಸಿಡಬಹುದಾದ ಮೀಸಾ ಕಾಯದೆಯನ್ವಯ ಮತ್ತೆ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಿಬಿಟ್ಟರು. ಇನ್ನೂ ಸರಿಯಾಗಿ ಮೀಸೆಯೇ ಬಾರದಿದ್ದ ಹುಡುಗರನ್ನು ಮೀಸಾ ಕಾಯದೆಗೆ ಒಳಪಡಿಸಿದ್ದು ಇಂದಿರಾಗಾಂಧಿ ಹೇರಿದ್ದ ಸರ್ವಾಧಿಕಾರದ ಅಟ್ಟಹಾಸಕ್ಕೆ ಸಣ್ಣ ಉದಾಹರಣೆಯಷ್ಟೆ. ತುರ್ತು ಪರಿಸ್ಥಿತಿ ಹಿಂತೆಗೆದ ನಂತರದಲ್ಲಿ ಒಂದೆರಡು ಸಲ ನಮ್ಮಿಬ್ಬರ ಭೇಟಿಯಾಗಿತ್ತಷ್ಟೆ. ನಂತರದಲ್ಲಿ ನನಗೆ ಮರಳಿ ನೌಕರಿ ಸಿಕ್ಕಿತು, ವರ್ಗಾವಣೆ ಮೇರೆಗೆ ಊರೂರು ಸುತ್ತಿದೆ. ಪಟ್ಟಾಭಿರಾಮ ಯೋಗದಲ್ಲಿ ಆಸಕ್ತಿ ತಳೆದು ಅದರಲ್ಲೇ ಮುಂದುವರೆದ ಬಗ್ಗೆ ಸುದ್ದಿ ಬರುತ್ತಿತ್ತಷ್ಟೆ.
ನಂತರದ ಪಟ್ಟಾಭಿರಾಮ ಯೋಗ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ತಳೆದು ಆ ಕ್ಷೇತ್ರದಲ್ಲೇ ಬಹಳ ಹೆಸರು ಮಾಡಿದ ಕುರಿತು ತಿಳಿದದ್ದು ಹೊರತುಪಡಿಸಿ ವಿವರಗಳು ತಿಳಿಯದೇ ಇರುವುದರಿಂದ ಆ ಕುರಿತು ಹೆಚ್ಚು ಬರೆಯಲು ಹೋಗುವುದಿಲ್ಲ. ಹಿಮಾಲಯದ ಸ್ವಾಮಿ ರಾಮರ ಶಿಷ್ಯರಾಗಿ ಅವರ ಉಪದೇಶಗಳೇ ಮಾರ್ಗದರ್ಶಿಯಾಗಿ ಬೆಂಗಳೂರಿನಲ್ಲಿ ಸಾಧನಾ ಸಂಗಮ ಟ್ರಸ್ಟ್ ಸ್ಥಾಪಿಸಿ ಅದರ ಮುಖಾಂತರ ಯೋಗ, ಧ್ಯಾನ, ಶಿಕ್ಷಣ, ಲಲಿತಕಲೆಗಳು, ಸಂಸ್ಕೃತಿ, ಉಪನ್ಯಾಸಗಳು, ವಿಶೇಷ ಕಾರ್ಯಾಗಾರಗಳು ಮುಂತಾದ ವಿವಿಧ ಚಟುವಟಿಕೆಗಳಿಗೆ ಮೂಲಾಧಾರರಾಗಿ ವ್ಯಕ್ತಿಯ ಭೌತಿಕ, ಮಾನಸಿಕ, ಭಾವಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಅವಶ್ಯಕತೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆಂದು ಮಾತ್ರ ಹೇಳಬಯಸುವೆ. ಆಸಕ್ತರು http://himalayantradition.blogspot.in/ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ತಿಳಿಯಬಹುದಾಗಿದೆ. ವಿದೇಶಗಳಲ್ಲೂ ಹರಡಿರುವ ಅವರ ಚಟುವಟಿಕೆಗಳು, ಹೊಂದಿರುವ ಅಪಾರ ಶಿಷ್ಯ ಸಮೂಹ ಕಂಡು ಬೆರಗುಗೊಂಡಿರುವೆ.
ಪಟ್ಟಾಭಿರಾಮರ ಭೇಟಿ ಆಗಿದ್ದು 4 ದಶಕಗಳ ನಂತರ ಬೆಂಗಳೂರಿನಲ್ಲಿ ಕಳೆದ ವರ್ಷ ವೇದಭಾರತಿ ಆಶ್ರಯದಲ್ಲಿ ವಂದೇ ಮಾತರಮ್ ಹೋಟೆಲಿನ ಸಭಾಂಗಣದಲ್ಲಿ ನಡೆದ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು ನಡೆಸಿದ ಮುಕ್ತ ಸಂವಾದದ ಸಂದರ್ಭದಲ್ಲಿ. ಅಪರೂಪದ ಭೇಟಿಯಿಂದ ನಮಗೆ ಅತ್ಯಂತ ಆನಂದವಾಗಿತ್ತು. ಪಟ್ಟಾಭಿರಾಮರ ಶಿಷ್ಯರು, ಪರಿಚಿತರು ಗೌರವದಿಂದ ಅವರನ್ನು ಗುರೂಜೀ ಎಂದು ಸಂಬೋಧಿಸುತ್ತಿದ್ದರೂ ನಾನು ಅವರನ್ನು ಪಟ್ಟಾಭಿ ಎಂತಲೇ ಮಾತನಾಡಿಸುತ್ತಿದ್ದೆ. ತಪ್ಪು ತಿಳಿಯಬಾರದೆಂದೂ, ಹಾಗೆ ಕರೆದು ಮಾತನಾಡಿಸಿದರೆ ಮಾತ್ರ ಮನಸ್ಸಿಗೆ ತೃಪ್ತಿ ಸಿಗುತ್ತದೆಂದು ಮುಕ್ತವಾಗಿ ಅಭಿಪ್ರಾಯ ಹೇಳಿದ್ದಕ್ಕೆ ಅವರಿಂದ ಬಂದದ್ದು ಒಪ್ಪಿಗೆಯ ಮುಗುಳ್ನಗೆ. ದಿನವಿಡೀ ಒಟ್ಟಿಗೇ ಇದ್ದು ನಂತರ ನಾವು ಹಾಸನಕ್ಕೆ ಹಿಂತಿರುಗಿದೆವು. ಅವರ ಆಶ್ರಮಕ್ಕೂ ವೇದಭಾರತಿಯ ಎಲ್ಲಾ ಸದಸ್ಯರಿಗೂ ಬರಲು ಆಹ್ವಾನಿಸಿದ್ದರು. ನಾವುಗಳೂ ಒಮ್ಮೆ ಹೋಗಿಬರಬೇಕೆಂದು ಅಂದುಕೊಂಡದ್ದಷ್ಟೆ, ಹೋಗಲು ಅವಕಾಶ ಬರಲಿಲ್ಲ. ಕಳೆದ ವರ್ಷ ವೇದಭಾರತಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಟ್ಟಾಭಿರಾಮ ಗುರೂಜಿಯವರಿಂದ ಗಾಯತ್ರಿ ಮಹಾಮಂತ್ರ ಯಜ್ಞವನ್ನು ಐದು ದಿನಗಳ ಕಾಲ ಏರ್ಪಡಿಸಿ ಅವರಿಂದ ಗಾಯತ್ರಿ ಮಂತ್ರದ ಅರ್ಥ, ವಿಸ್ತಾರಗಳನ್ನು ತಿಳಿಯುವ ಕಾರ್ಯಕ್ರಮ ಆಯೋಜಿಸಿದ್ದೆವು. ಅದೇ ಸಮಯಕ್ಕೆ ಅವರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಸೇರಿದ್ದರಿಂದ ಬದಲಿಗೆ ಬೇರೆ ಕಾರ್ಯಕ್ರಮಗಳನ್ನು ನಡೆಸಿದ್ದೆವು. ನಂತರ ಪಟ್ಟಾಭಿಯ ಭೇಟಿ ಆಗಲೇ ಇಲ್ಲ. ಈಗ ಅವರ ಅಗಲಿಕೆಯ ಸುದ್ದಿ! ಪಟ್ಟಾಭಿರಾಮ, ನಿನ್ನ ಆತ್ಮಕ್ಕೆ ಶಾಂತಿ, ಸದ್ಗತಿ ಸಿಗಲಿ ಎಂದು ಮನದಾಳದಿಂದ ಪ್ರಾರ್ಥಿಸುವೆ.
-ಕ.ವೆಂ.ನಾಗರಾಜ್.
Srinath Bhalle
ಪ್ರತ್ಯುತ್ತರಅಳಿಸಿಮೃತರ ಆತ್ಮಕ್ಕೆ ಶಾಂತಿ ಸಿಗಲಿ ... A good friend of mine Mr. Ramesh Rao introduced me to him several years back.
Anand Surya
Rip..
Mahesha Prasad Neerkaje
great souls are aften short lived in kaliyuga, sad
ಹೊಳೆನರಸಿಪುರ ಮ೦ಜುನಾಥ Thimmayya
ಮೃತರ ಆತ್ಮಕ್ಕೆ ಶಾಂತಿ ಸಿಗಲಿ .
Chi Su Krishna Setty
So Sad, Can't Believe. He was in Bangalore Central Jail with me during 1975-77 Emergency
Days
Anantha Koppa
Dear Raju,
The person with whom you're sitting is Swami Sukbodananda Saraswathi - right? I had done 3 day training in his camp way back in 1999!
Good to see you with him!
Hope you, Amma and all are well.
Sincerely,
Anantha Koppa
Jayaprakash Jp
ಅಳಿಸಿhaleyadella nenapige banditu. nenapu 45 yarsha hindakke hoyitu.pattabi kanna munde bandu hoda. nagaraj
Vijay Pai
ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂಬ ಹೃದಯಪೂರ್ವಕ ಪ್ರಾರ್ಥನೆ.
Pavan L S Gowda
ಅಳಿಸಿom shanthi
Jayaprakash Jp
haleyadella nenapige banditu. nenapu 45 yarsha hindakke hoyitu.pattabi kanna munde bandu hoda. nagaraj
Vijay Pai
ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂಬ ಹೃದಯಪೂರ್ವಕ ಪ್ರಾರ್ಥನೆ
Prasanna K
ಇಸ್ಕಾನ್ ಪಕ್ಕದ ಹೋಟೆಲಿನಲ್ಲಿ ನಡೆದ ಸುಧಾಕರಶರ್ಮರ ಕಾರ್ಯಕ್ರಮದಲ್ಲಿ ಇವರ ಮುಖದ ತೇಜಸ್ಸು ಕಂಡು ಬೆರಗಾಗಿದ್ದೆ. ಭಗವಂತ ಸದ್ಗತಿ ದಯಪಾಲಿಸಲಿ.
Dayananda Ys
ಸ್ವಾಮಿ ರಾಮ ಅವರ "Art of Joyful Living", "Journey with Himalayan Sadhus" ಎಂಬ ಪುಸ್ತಕಗಳನ್ನು ಓದಿದ್ದೇನೆ. ಅವರ ಶಿಷ್ಯರೆಂದರೆ ಅಪರಿಮಿತ ಸಾಧಕರೇ ಇರಬೇಕು.
ಗುರೂಜಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ಅಂತೆಯೇ ಇಂದಿರಾ, ಮತ್ತವಳ ಪಳೆಯುಳಿಕೆ ನಾಶವಾಗುವವರೆಗೆ ಹೋರಾಟ ಮುಂದಿವರಿಯಲಿ ಎಂದು ಆಶಿಸುತ್ತೇನೆ
Charan K C
ಅಗಲಿದ ಹಿರಿಯರಿಗೆ ಶ್ರಧ್ಧಾಂಜಲಿಗಳು. ಓಂ ಶಾಂತಿಃ..
Gajendra Nelavagilu
Hari hi OM
Gowripura Chandru
ಸಾಧನ ಸಂಗಮದ ಪಟ್ಟಾಭಿರಾಮ ಗುರೂಜಿ ಅವರ ಆತ್ಮಕ್ಕೆ ಶಾಂತಿ ದೊರೆಯಲಿ.
nageshamysore
ಅಳಿಸಿನಿಜಕ್ಕೂ ದುಃಖಕರ ಸುದ್ದಿ ಕವಿಗಳೇ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ನಿಮಗೆ ಆತ್ಮೀಯ ಗೆಳೆಯನ ವಿದಾಯವನ್ನು ಭರಿಸುವ ಶಕ್ತಿ ಸಿಗಲಿ.
kavinagaraj
ವಂದನೆಗಳು, ನಾಗೇಶರೇ. ವೇದಭಾರತಿಯ ಸತ್ಸಂಗದಲ್ಲಿ ಇಂದು ಅವರ ಕುರಿತು ಮಾತನಾಡಿದೆ. ಶ್ರದ್ಧಾಂಜಲಿ ಅರ್ಪಿಸಿದೆವು.
santhosha shastry
ಕವಿವರ್ಯರಲ್ಲಿ ನಮನಗಳು. ಶ್ರೀಯುತ ಪಟ್ಟಾಭಿರಾಮರು ನಮ್ಮೂರಾದ ಅರಕಲಗೂಡಿನವರಾಗಿದ್ದರಿಂದ ಹಾಗೂ ನಾನವರ ಶಿಷ್ಯಸಮಾನನಾದ್ದರಿಂದ, ನನಗೂ ವಿಷಯ ತಿಳಿದು ಬೇಸರವಾಯಿತು. ನಿನ್ನೆ ಬೆಳಿಗ್ಗೆ ಹೋಗಿ ಅಂತಿಮ ದರ್ಶನ ಮಾಡಿಬಂದೆ. ತಮ್ಮ ಲೇಖನದಿಂದ ಮತ್ತೊಮ್ಮೆ ಅವರ ದರ್ಶನವಾದಂತಾಯ್ತು. ಧನ್ಯವಾದಗಳು.
kavinagaraj
ನಮಸ್ತೆ. ನನ್ನ ಪತ್ನಿ ಸಹ ಅರಕಲಗೂಡಿನವಳು. ನಾನು ಅರಕಲಗೂಡಿನಲ್ಲೂ ಒಂದು ವರ್ಷ ತಹಸೀಲ್ದಾರನಾಗಿ ಕೆಲಸ ಮಾಡಿದ್ದೆ. ಪ್ರತಿಕ್ರಿಯೆಗೆ ವಂದನೆಗಳು.
Palahalli Vishwanath
ಅಳಿಸಿಮೃತರ ಆತ್ಮಕ್ಕೆ ಶಾ೦ತಿ ಇರಲಿ
Nagaraj Bhadra
ಅವರ ಆತ್ಮಕ್ಕೆ ಶಾಂತಿಸಿಗಲಿ.